"ಕೆ ಸತ್ಯನಾರಾಯಣ ಅವರ ಹೊಸ ಕಾದಂಬರಿ "ನಮಗೊಂದು ಸೊಸೆ ಬೇಕು" (ಅಮೂಲ್ಯ ಪ್ರಕಾಶನ) ನೂರ ಐವತ್ತೆಂಟು ಪುಟಗಳ ಪುಟ್ಟ ಕಾದಂಬರಿ. ಅದನ್ನು ಓದಿ ಮುಗಿಸಿದ್ದೇ ಹುಟ್ಟಿದ ಕೆಲವು ಯೋಚನೆಗಳು ಇಲ್ಲಿವೆ," ಎನ್ನುತ್ತಾರೆ ನರೇಂದ್ರ ಪೈ. ಅವರು ಕೆ. ಸತ್ಯನಾರಾಯಣ ಅವರ ʻನಮಗೊಂದು ಸೊಸೆ ಬೇಕುʼ ಕೃತಿ ಕುರಿತು ಬರೆದ ವಿಮರ್ಶೆ.
ಮತ್ತೊಮ್ಮೆ ಕೆ ಸತ್ಯನಾರಾಯಣ ಅವರು ದಾಂಪತ್ಯ, ಗಂಡು ಹೆಣ್ಣು ನೆಲೆಯ ಮನುಷ್ಯ ಸಂಬಂಧಗಳು, ಸಹಜೀವನದ ದೈಹಿಕ ಮತ್ತು ಮಾನಸಿಕ ಆಸರೆಯ ನೆಲೆಗಳ ಕುರಿತ ಜಿಜ್ಞಾಸೆಗಳನ್ನು ಈ ಕಾದಂಬರಿಯ ಮೂಲಕ ಮಂಡಿಸಿದ್ದಾರೆ. ಹಿಂದಿನ "ಅಂಪೈರ್ ಮೇಡಮ್" ಮತ್ತು "ಚಿಕ್ಕಪುಟ್ಟಮ್ಮನವರ ಗೃಹನ್ಯಾಯ"ದ ಗುಂಗಿನಲ್ಲಿರುವವರಿಗೆ ಅಥವಾ ಇವನ್ನೆಲ್ಲ ಒಟ್ಟಿಗೇ ಓದುವವರಿಗೆ ತೀರ ವಿಭಿನ್ನವಾದ ಒಂದು ಲೋಕ ಇಲ್ಲಿ ತೆರೆದುಕೊಳ್ಳುತ್ತದೆ ಎನ್ನುವುದಿದ್ದರೆ ಅದು ಇಲ್ಲಿನ ಮೂರು ಪ್ರಮುಖ ಅಂಶಗಳಿಗಾಗಿ:
01. ಇದರ ಕೇಂದ್ರ ಪಾತ್ರ ಮಾಲಿನಿ. ಈಕೆ ವಿವಾಹಿತೆ. ಮದುವೆಯಾಗಿ ನಾಲ್ಕೂವರೆ ವರ್ಷಗಳ ಕಾಲ ಸುಖವಾಗಿ ದಾಂಪತ್ಯ ನಡೆಸಿದ ಬಳಿಕ ಈಕೆಗೆ "ಕೇವಲ ಅಭ್ಯಾಸ ಆಗಿಬಿಟ್ಟಿದೆ" ಎಂಬ ಕಾರಣಕ್ಕೇ ಇನ್ನೂ ಸಂಸಾರ ನಡೆಸಿಕೊಂಡು ಹೋಗುವ ಬಗ್ಗೆ ಒಂಥರಾ ರೆಸಿಸ್ಟೆನ್ಸ್ ಹುಟ್ಟಿ ಅದು ಗಟ್ಟಿಗೊಳ್ಳುತ್ತ ಹೋಗುತ್ತದೆ ಎನ್ನುವುದು ಮೊದಲನೆಯ ಅಂಶ. ಈ ಅಂಶ ಯಾಕೆ ಮುಖ್ಯ ಎನಿಸುತ್ತದೆ ಎನ್ನುವುದಕ್ಕೆ ಪುಟ್ಟ ವಿವರಣೆ.
ಮನುಷ್ಯನ ಮೂಲಭೂತ Instinct, ಬದುಕುವುದು ಎಂಬುದೇನಿದೆ, ಅದೇ ಅವನಿಗೆ ಬದುಕುವುದು ಅಭ್ಯಾಸವಾಗಿಬಿಟ್ಟ ಕರ್ಮಕ್ಕೆ ಅನಿಸುತ್ತದೆ. ಅವನ ನಿತ್ಯ ಪೂಜೆ, ಅವನ ದೇವರು, ಅಧ್ಯಾತ್ಮ, ಭಜನೆ, ಯೋಗ, ಅವನು ನಡೆಸಿಕೊಂಡು ಬರುವ ಶ್ರಾದ್ಧ, ಯಾತ್ರೆ, ವ್ರತದಂಥ ಕ್ರಿಯೆಗಳು, ಅವನ ನಿತ್ಯದ ವಾಕಿಂಗ್, ಟೀ-ಕಾಫಿ, ಅವನ ಹವ್ಯಾಸಗಳು - ಟೀವಿ ನೋಡುವುದು, ಓದುವುದು, ಬರೆಯುವುದು, ನೌಕರಿ, ಕಾಮ ಎಲ್ಲವೂ ಒಂದು ನೆಲೆಯಿಂದ ನಿನ್ನೆ ಮಾಡಿದ್ದೇನೆಂದು ಇವತ್ತೂ ಮಾಡುವ, ಇವತ್ತು ಮಾಡಿದ್ದರಿಂದ ನಾಳೆಯೂ ಮಾಡುವ, ಎಲ್ಲರೂ ಮಾಡುತ್ತಾರೆಂದು ನಾವೂ ಮಾಡುವ ಚಟಕ್ಕೆ ಬಿದ್ದ ಒಂದು ಕ್ರಮ ಅಥವಾ ಪದ್ಧತಿಯಾಗಿದೆ ಅಷ್ಟೇ ಅನಿಸಿದರೆ ಅಚ್ಚರಿಯೇನಿಲ್ಲ. ಅದರಲ್ಲಿ ಹೊಸತನ, ಹೊಸ ಕಲಿಕೆ, Educative value ಆಗಲಿ, Entertaining ಅಂಶವಾಗಲಿ, Joyfullnessನ ಅಂಶವಾಗಲೀ ಇಲ್ಲ. ಹಾಗಾಗಿ ಅವನು ಕುಡಿತ, ಬೇರೆ ಬೇರೆ ತರದ ಮೋಜು, ಮೊಬೈಲಿನಲ್ಲಿ ಲಭ್ಯವಿರುವ ವೈವಿಧ್ಯಮಯ ವೀಕ್ಷಣೆಗಳಲ್ಲಿ, ಸೋಶಿಯಲ್ ಮೀಡಿಯಾದ ಹಪಹಪಿಕೆಗಳಲ್ಲಿ, ಹೊಸ ಲೈಂಗಿಕ ಸಾಹಸಗಳಲ್ಲಿ, ಶೇರ್ ಮಾರ್ಕೆಟ್ ಸಾಹಸಗಳಲ್ಲಿ, ಪ್ರಶಸ್ತಿ-ಪುರಸ್ಕಾರಗಳು ತಂದುಕೊಡುವ ಗಮನಸೆಳೆಯುವಿಕೆಯಲ್ಲಿ ಅಂಥದ್ದನ್ನು ಹುಡುಕುವ ಚಾಳಿಗೆ ಬೀಳುತ್ತಿರಬಹುದು.
ಈ ಎಲ್ಲದರಲ್ಲೂ ಕ್ರಮೇಣ ಬರುವ ರೆಸಿಸ್ಟೆನ್ಸ್ ಇದ್ದೇ ಇರುತ್ತದೆ. ಅದನ್ನು ಸ್ವೀಕರಿಸಬಹುದು, ನಿರಾಕರಿಸಿ ಅದರಿಂದ ಹೊರಬಂದು ಇನ್ನೊಂದೇನನ್ನೋ ಹಿಡಿದುಕೊಳ್ಳಬಹುದು. ಒಂದು ನೆಲೆಯಿಂದ ಅವನ ಪ್ರತಿಯೊಂದು ಚಟುವಟಿಕೆಯನ್ನೂ ಮೌನ ಮತ್ತು ಅಂತರಂಗದ ಮುಖಾಮುಖಿಗೆ ವಿರುದ್ಧ ದಿಕ್ಕಿನಲ್ಲಿ ಸಾಗುವ ಉದ್ದೇಶದ ಎಸ್ಕೇಪಿಸಂ ಅನಿಸಿದರೆ ಅಚ್ಚರಿಯೇನಿಲ್ಲ. ಅದು ನಾವು ಎಲ್ಲಿ ನಿಂತು ನೋಡುತ್ತಿದ್ದೇವೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ ಅಷ್ಟೆ. ದಾಂಪತ್ಯದ ರೆಸಿಸ್ಟೆನ್ಸ್ ಮತ್ತು ಪರ್ಯಾಯದ ಆಯ್ಕೆ ಸ್ವಲ್ಪ ಸಂಘರ್ಷದ್ದು ಮತ್ತು ವೈಯಕ್ತಿಕವನ್ನು ದಾಟಿ ಕುಟುಂಬ ಮತ್ತು ಸಮಾಜದ ನೆಲೆಯಲ್ಲಿ ಮಹತ್ವವನ್ನು ಪಡೆದುಕೊಳ್ಳಬಹುದಾದ್ದು ಎನ್ನುವುದಷ್ಟೇ ವಿಶೇಷ.
02. ಸುಖ ಮತ್ತು ಸಂತೋಷದ ಪರಿಕಲ್ಪನೆಯನ್ನೂ ಮಾಲಿನಿ ಪ್ರಶ್ನಿಸುತ್ತಾಳೆ. ಯಾವುದು ನಿಜ ಮತ್ತು ಯಾವುದು ನಕಲಿ ಎನ್ನುವುದು ಪ್ರಶ್ನೆ. ನಮ್ಮ ದೈನಂದಿನ ಬದುಕಿನ ಎಲ್ಲ ಜಂಜಾಟಗಳ ನಡುವೆಯೂ ಇರುವ ಸುಪ್ತವಾದ ಸುಖ ಬೇರೆ. ಭೋಗದಿಂದ, ಆಹಾರ, ನಿದ್ದೆ, ಮೈಥುನ, ಐಷಾರಾಮಿತನ ಇತ್ಯಾದಿಗಳಲ್ಲಿ ಇದೆ ಎಂದುಕೊಳ್ಳುವ ಸುಖ ಬೇರೆ. ಈ ಸುಖವನ್ನು ಪ್ರಶ್ನಿಸಿಕೊಂಡರೆ ಅದು ತಟ್ಟನೆ ಮಾಯವಾಗಿ ಬಿಡುತ್ತದೆ. ಕಾಮ ನಿಜಕ್ಕೂ ಸುಖ ಆಗಿರುವುದು ಯಾವಾಗ, ಎಷ್ಟು ಹೊತ್ತು ಮತ್ತು ಆ ಹೊತ್ತು ಮುಗಿದದ್ದೇ ಯಾಕೆ ಅದು ಇನ್ನೇನೋ ಅನಿಸುತ್ತದೆ ಮತ್ತು ಪುನಃ ಪುನಃ ಮನುಷ್ಯ ಯಾಕೆ ಅದನ್ನು ಮುಟ್ಟಲು, ತಲುಪಲು ಬಯಸುತ್ತಲೇ ಇರುತ್ತಾನೆ - ಬೇರೆ ಬೇರೆ ಬಗೆಯಲ್ಲಿ ಬಯಸುತ್ತಾನೆ ಹಾಗೂ ಈ ಯಾವೆಲ್ಲ ಹಂತದಲ್ಲಿ, ಅಂದರೆ ಪೂರ್ವಭಾವಿ ಕಲ್ಪನೆ, ಕ್ರಿಯೆ, ಕ್ರಿಯೆ ಮುಗಿದ ತತ್‌ಕ್ಷಣದಲ್ಲಿ ಮತ್ತು ಪುನಃ ಅದನ್ನು ಅದೇ ಬಗೆಯಲ್ಲಿಯೋ ನವೀಕೃತ ಬಗೆಯಲ್ಲಿಯೋ ಅವನು ಬಯಸುವ ಹಂತ - ಈ ಯಾವೆಲ್ಲ ಹಂತದಲ್ಲಿ ಅದು ಒಂದು ಸುಖ ಅಥವಾ ಸಂತೋಷ ಆಗಿರುತ್ತದೆ? ಇಬ್ಬರಲ್ಲಿ ಒಬ್ಬೊಬ್ಬರಿಗೂ ಅದು ಭಿನ್ನವಾಗಿರಬಹುದಲ್ಲವೆ ಎಂಬ ಮಾಲಿನಿಯ ಅನುಮಾನಗಳು ಎರಡನೆಯ ಮುಖ್ಯ ಅಂಶ.
ಮೊದಲಿಗೆ ಮನುಷ್ಯ ತನ್ನ ದೈನಂದಿನ ಕ್ಷುಲ್ಲಕಗಳಲ್ಲಿ, ಸಣ್ಣಪುಟ್ಟ ಸಂಗತಿಗಳಲ್ಲಿ ಸುಖ ಅಥವಾ ಸಂತೋಷ ಇದೆ ಎಂದು ಕಂಡುಕೊಳ್ಳುವಲ್ಲಿ ಹಿಂದಾಗುವುದು. ವೈಶಿಷ್ಟ್ಯಪೂರ್ಣ ವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ ಅಥವಾ ಕ್ರಿಯೆಗಳಲ್ಲಿ ಮಾತ್ರ ಅದು ಇದೆ, ಇರುತ್ತದೆ ಎಂದು ನಂಬುವಲ್ಲಿ ಮುಂದಾಗುವುದು. ಕ್ರಮೇಣ ಅದು ಅವನಿಗೆ ಏಕತಾನತೆಯನ್ನು ಒಡ್ಡುವುದು ಮತ್ತು ಸುಖ-ಸಂತೋಷದ ಪರಿಕಲ್ಪನೆಯ ಬಗ್ಗೆ ಅನುಮಾನಗಳು ಹುಟ್ಟಿಕೊಳ್ಳುವುದು. ದಾಂಪತ್ಯ ಕೂಡ ಇದಕ್ಕೆ ಪಕ್ಕಾಗುವ ಒಂದು ಸಂಗತಿಯೇ, ಎಲ್ಲರಿಗೂ ಎನ್ನುವುದು ಸಹಜ ಮತ್ತು ಸರಿ. ಆದರೆ ರೋಗದ ಎಳೆ ಇರುವುದು ಸುಖ ಮತ್ತು ಸಂತೋಷವನ್ನು ಇದ್ದಲ್ಲಿ ಕಂಡುಕೊಳ್ಳದೆ ಇಲ್ಲದಿರುವಲ್ಲಿ ಕಂಡುಕೊಳ್ಳಲು ಹೊರಡುವ ಹಪಹಪಿಯಲ್ಲಿ ಅಷ್ಟೆ. ಇದು ದೇವರನ್ನು ಕಾಣಲು ಅಥವಾ ಕಂಡುಕೊಳ್ಳಲು ಕಾಶಿ, ರಾಮೇಶ್ವರ ಎಂದು ತೀರ್ಥಕ್ಷೇತ್ರಗಳಿಗೆ ಎಡತಾಕುವಂತೆಯೇ.
03. ಮೊದಲ ಮದುವೆ ಟ್ರಯಲ್ ಇದ್ದಂತೆ, ಎರಡನೆಯದಕ್ಕೆ ಬೇಕಾದ ತಯಾರಿ ಒದಗಿಸುತ್ತದೆ ಎಂಬರ್ಥದ ಮಾತು. ಲಿವಿಂಗ್ ಇನ್ ಸಂಬಂಧದ ಪ್ರಾಯೋಗಿಕತೆಯ ಹಿಂದಿರುವ ತರ್ಕವೂ ಇದೇ. ಮದುವೆ ಎಂಬ ವ್ಯವಸ್ಥೆಯಲ್ಲಿ, ಸಂಸ್ಥೆಯಲ್ಲಿ ಕ್ರಮೇಣ ವಿಶ್ವಾಸ ಕಡಿಮೆಯಾಗುತ್ತಿರುವುದು ಮತ್ತು ಅದೇ ಕಾಲಕ್ಕೆ ಅದರ ಆಚರಣೆ (ರಿಚ್ಯುಯಲ್ಸ್), ಸಂಭ್ರಮ, ವೆಚ್ಚ ಮತ್ತು ತೋರುಗಾಣಿಕೆಯ ಚಪಲ ಅತಿಯಾಗುತ್ತಲೇ ಇರುವುದು ಎರಡೂ ಸದ್ಯದ ವಿದ್ಯಮಾನ. ಕೆ ಸತ್ಯನಾರಾಯಣ ಅವರ ಕಾದಂಬರಿ ತಡಕಾಡಿರುವುದು ಅತ್ಯಂತ ಸಮಕಾಲೀನವಾದ ವಸ್ತುವನ್ನೇ.
ಮಾಲಿನಿ ದಾಂಪತ್ಯದ ವ್ಯವಸ್ಥೆಯಿಂದ ಹೊರಬಂದರೂ ಆ ವ್ಯವಸ್ಥೆಯ ಉದ್ದೇಶವನ್ನು ತಿರಸ್ಕರಿಸುವುದಿಲ್ಲ ಎನ್ನುವುದು ಗಮನಾರ್ಹ. ಅವಳು ಕಾಲವ್ಯಾಪನೆ ಮಾಡದೆ, ತಕ್ಷಣವೇ ಕೃತಕ ಗರ್ಭಧಾರಣೆಯಿಂದ ಮಗು ಮಾಡಿಕೊಂಡು, ತಂದೆ-ತಾಯಿಯ ಆಶ್ರಯದಿಂದಲೂ ಕಳಚಿಕೊಂಡು, ನೈನಿತಾಲ್‌ಗೆ ಹೋಗಿ ಮತ್ತೊಂದು ಮಜಲಿನ ದಾಂಪತ್ಯ ಮತ್ತು ಮನುಷ್ಯ ಸಂಬಂಧಗಳ Matrix ಮೇಲಿನ ಸಂಶೋಧನೆಯಲ್ಲಿ ತೊಡಗಿಕೊಳ್ಳುತ್ತಾಳೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿಲ್ಲ. ಈ ಮಾತು ಕೇವಲ ಕಾದಂಬರಿಯ ಚೌಕಟ್ಟು, ಆಕೃತಿ, ತಾತ್ವಿಕ ಆಯಾಮಗಳಿಗಷ್ಟೇ ಅನ್ವಯಿಸಿ ಹೇಳುತ್ತಿರುವುದಲ್ಲ. ಹೊರಗೆ ನಾವೂ ಎದುರಿಸಬೇಕಾದ ಒಂದು ಬದುಕು ಎಂಬುದಿದೆಯಲ್ಲ, ಅದು ಕೂಡ ಇಷ್ಟೇ ಸಂಕೀರ್ಣವಾಗಿರುತ್ತದಲ್ಲ, ಮತ್ತು ನಾವದನ್ನು ಅರ್ಥ ಮಾಡಿಕೊಳ್ಳಬೇಕಲ್ಲ ಎಂಬ ನೆಲೆಯಿಂದಲೂ ಹೇಳುತ್ತಿರುವುದು. ಇದು ದಾಂಪತ್ಯ ಎಂಬ ಸಂಸ್ಥೆ ಹುಟ್ಟಿಕೊಳ್ಳುವುದಕ್ಕೂ ಮುನ್ನ ಮನುಷ್ಯ ಆ ದಿಸೆಯಲ್ಲಿ ನಡೆಸಿದ ಪ್ರಾಯೋಗಿಕ ವ್ಯಾಯಾಮಗಳ ಬಗ್ಗೆ, ಅದರ ಲಾಜಿಕಲ್ ಅಗತ್ಯಗಳ ಬಗ್ಗೆ ಮತ್ತು ಅದರ ಸ್ವರೂಪ ಈಗಿರುವಂತೆ ಪರಿಪೂರ್ಣ ಅಲ್ಲ ಎನ್ನುವ ವಾದದ ಬಗ್ಗೆ ಚರ್ಚೆಯನ್ನು ಬೆಳೆಸುತ್ತದೆ. ಅದಕ್ಕೆ ಮಾಲಿನಿಯ ವೃತ್ತಿಪರ ಸಂಶೋಧನೆಯ ಮುಂದುವರಿಕೆ ಕೂಡ ಯಾವ ದಿಕ್ಕಿನಲ್ಲಿ ನಡೆಯುವುದಿದೆ ಎಂಬ ಬಗ್ಗೆ ಇಲ್ಲಿ ಸಿಗುವ ಹೊಳಹು ಪೂರಕವಾಗಿಯೇ ಇದೆ. ಹಾಗಿದ್ದೂ ಕಾದಂಬರಿ ಎತ್ತುವ ಪ್ರಶ್ನೆಗಳಿಗೆ ತಾತ್ವಿಕ ಪರಿಹಾರವೊಂದು ಇದೆ ಅನಿಸುವುದಿಲ್ಲ. ಅಷ್ಟರಮಟ್ಟಿಗೆ ಅದು ವೈಯಕ್ತಿಕವಾದದ್ದೇ.
ಮಾಲಿನಿಯ ಅನುಮಾನ, ಜಿಜ್ಞಾಸೆ ತಪ್ಪೆ? ಅಲ್ಲ. ಆಕೆ ಅದನ್ನು ಅದುಮಿಟ್ಟುಕೊಂಡು ಸಂಸಾರ ಸಾಗಿಸಬೇಕಿತ್ತೆ? ಇಲ್ಲ. ಅದು ಆತ್ಮದ್ರೋಹವಾಗುತ್ತದೆ. ಬಟ್ ದಾಂಪತ್ಯದ ಈ itchಗೆ ಪರಿಹಾರ ಏನು? ಡೈವೋರ್ಸ್ ಅಥವಾ ಕಾನೂನಾತ್ಮಕ ಬೇರ್ಪಡುವಿಕೆ ಎನ್ನುವುದೇ ಇಲ್ಲದ ಸಂಬಂಧಗಳಲ್ಲಿ ಏನಾಗುತ್ತದೆ? ಅಂಥ ಸಂದರ್ಭಗಳಲ್ಲಿ ಅಣ್ಣ-ತಮ್ಮ ಬೇರೆ ಮನೆ ಮಾಡುತ್ತಾರೆ, ಬೇರೆ ಬೇರೆಯಾಗಿ ಇರುತ್ತಾರೆ. ಅಲ್ಲಿ ಮತ್ತೆ ಒಂದಾಗುವ ಎಲ್ಲ ಅವಕಾಶಗಳೂ ತೆರೆದೇ ಇರುತ್ತವೆ. ಆದರೆ ಇಲ್ಲಿ ಮಾಲಿನಿಯ ಗಂಡ ಎರಡನೆಯ ಮದುವೆಗೆ ತಯಾರಾಗುವ ಮಟ್ಟಿಗೆ ಅದೇ ಕಾದಂಬರಿಯ burning point ಆಗಿ ನಿಲ್ಲುತ್ತದೆ ಎನ್ನುವುದನ್ನು ಗಮನಿಸಬೇಕು. ಇದೇ ಕಾದಂಬರಿಯ ಆರಂಭ ಮಾತ್ರವಲ್ಲ ಕಾದಂಬರಿಯ ಹೆಸರು ಕೂಡ "ನಮಗೊಂದು ಸೊಸೆ ಬೇಕು" ಎನ್ನುವುದೇ. ನಮಗೊಂದು ಸೊಸೆ ಬೇಕು ಎಂದು ಹೊರಡುವ, ಅಂಥ ಹುಡುಕಾಟಕ್ಕೆ ಪ್ರೇರಣೆಯಾದ ಎಲ್ಲರೂ ಈ ಸುಡುವ ಬಿಂದುವಿನ ಎದುರು ನಿಲ್ಲಲೇ ಬೇಕಾಗಿದೆ, ಅದನ್ನು ಹಾಯಲೇ ಬೇಕಿದೆ. ನಮಗೊಂದು ಅಪ್ಪ ಬೇಕು, ಅಮ್ಮ ಬೇಕು, ಅಕ್ಕ ಬೇಕು, ತಂಗಿ ಬೇಕು ಎನ್ನುವುದೆಲ್ಲ ಸಾಧ್ಯವಿಲ್ಲ. "ಡೈರೆಕ್ಟರ್ಸ್ ಸ್ಪೆಶಲ್" ಎಂಬ ಸಿನಿಮಾ ಇದನ್ನು ಪ್ರಯತ್ನಿಸಿತ್ತು ಎನ್ನುವುದನ್ನು ಇಲ್ಲಿ ನೆನೆಯಬಹುದು. ಸೊಸೆ ಬೇಕು, ಹೆಂಡತಿ ಬೇಕು ಸಾಧ್ಯವಿದೆ. ಹಾಗೆಯೇ ಇಲ್ಲಿ ಮುಂದೊಂದು ದಿನ ಅದನ್ನು ’ಬೇಡ’ ಎನ್ನುವ ಸಾಧ್ಯತೆಯೂ ಆಗಲೇ ಹುಟ್ಟಿಕೊಂಡು ಬಿಡುತ್ತದೆ. ಬಹುಶಃ ಅದನ್ನು ನೀವು ಬೇರೆಯೇ ಮನೆಯಿಂದ, ಹೊರಗಿನಿಂದ ತಂದಿದ್ದು ಎಂಬ ಕಾರಣಕ್ಕೆ?
ತಾಳಿ ಕಟ್ಟಿ, ಮಂತ್ರ ಹೇಳಿ, ಅಗ್ನಿಯನ್ನೋ ಇನ್ಯಾರನ್ನೋ ಸಾಕ್ಷಿಯಾಗಿಸಿ, ಪರಂಪರಾನುಗತ ಮೌಲ್ಯಗಳಿಗೆ, ಕಾನೂನುಗಳಿಗೆ ಕಟ್ಟಿ ಹಾಕಿ ಗಟ್ಟಿಗೊಳಿಸಿಕೊಂಡ ಸಂಬಂಧಗಳಿಗೆ ಕಳಚಿಕೊಳ್ಳುವ, ಅದನ್ನು ಪುನಃ ಬೇರೆ ವ್ಯಕ್ತಿಯೊಂದಿಗೆ ಸಂರಚಿಸಿಕೊಳ್ಳುವ ಅವಕಾಶವಿದೆ, ’ಅಮರ ಮಧುರ ಪ್ರೇಮ’ ದ ಅದ್ಭುತ ರಮ್ಯ ಪರಿಕಲ್ಪನೆಯ ನೆರಳಿನಲ್ಲೇ ಇದೆಲ್ಲವೂ ಇರುವುದು ನಿಜ ಮತ್ತು ಸೋಜಿಗ. ಆದರೆ ಈ ಯಾವ ರಿಚ್ಯುವಲ್‌ಗಳೂ ಇಲ್ಲದ ಸಂಬಂಧಗಳು ಹೆಚ್ಚು ಸಹಜವಾಗಿ ನಡೆಯುತ್ತವೆ, ಸಂಘರ್ಷ, ಘಟಸ್ಫೋಟಗಳೆಲ್ಲ ಇದ್ದೂ.
ದಾನ - ಕನ್ಯಾದಾನವೂ ಸೇರಿಕೊಂಡಂತೆ, ದಾನ ಮತ್ತು ಅದರ ರಿಜೆಕ್ಷನ್ - ದಾನ ಪಡೆದವನಿಂದ ಅಥವಾ ದಾನ ಕೊಟ್ಟವನಿಂದ ಅಥವಾ ದಾನಗೊಂಡ ವಸ್ತುವಿನಿಂದಲೇ ಆದಾಗ ಹುಟ್ಟಿಕೊಳ್ಳುವ ಜಿಜ್ಞಾಸೆಗಳಿವೆ. ಇದನ್ನು ಕೂಡ ಕಾನೂನಿನ ನೆಲೆಯಿಂದ ಮತ್ತು ಸಾಂಪ್ರದಾಯಿಕ ನೆಲೆಯಿಂದ ಅಂದರೆ ಬಹುಶಃ ದಾನದ ಪರಿಕಲ್ಪನೆಯನ್ನು ಶಿಷ್ಟಗೊಳಿಸಿದಂಥ ಶಾಸ್ತ್ರಗ್ರಂಥಗಳ ನೆಲೆಯಿಂದ ವಿಭಿನ್ನವಾಗಿಯೇ ನೋಡಲು ಸಾಧ್ಯವಿದೆ. ಹಾಗೆಯೇ ನಮ್ಮ ವ್ಯಕ್ತಿಗತ ಬದುಕಿನಲ್ಲಿಯೂ ಮನುಷ್ಯ ಸಂಬಂಧಗಳತ್ತ ಇರಬೇಕಾದ ಕನಿಷ್ಠ ಬದ್ಧತೆಯ ಪ್ರಶ್ನೆಗಳೂ ಇವೆ. ಬದ್ಧತೆಯ ಪ್ರಶ್ನೆ ಕೇವಲ ನೈತಿಕವಾದದ್ದಲ್ಲ. ಅದು ಸಾಮಾಜಿಕವಾದದ್ದು, ಸಾಮುದಾಯಿಕವಾದದ್ದು ಕೂಡ ಆಗಿರುತ್ತದೆ. ನಾವು ರಾಮನ ಸೀತಾ ಪರಿತ್ಯಾಗವನ್ನು, ನಡುರಾತ್ರಿಯ ಬುದ್ಧನ ಸಂಸಾರ ತ್ಯಾಗವನ್ನು, ಗೌತಮನ ಶಾಪವನ್ನು ಕಾಣುವ ನೆಲೆಗಳನ್ನೆಲ್ಲ ಇಂಥ ಬದ್ಧತೆಯ ನೆಲೆಯಿಂದ ಪ್ರಶ್ನಿಸುತ್ತೇವಲ್ಲವೆ? ಒಂದು ಸಮುದಾಯದ ಮಠ ಅಥವಾ ಗುರುವಿನ ಪೀಠತ್ಯಾಗ ಮತ್ತು ಲೈಂಗಿಕತೆಯನ್ನು ಕೂಡ ಅದೇ ಬದ್ಧತೆಯ ಮೌಲ್ಯದಿಂದ ತೂಗುತ್ತೇವಲ್ಲವೆ? ಹಾಗೆ ಮದುವೆ ಎಂಬುದು ಕೂಡ ಕೇವಲ ವೈಯಕ್ತಿಕವಾಗಿರುವುದಿಲ್ಲ, ಅದು ಎರಡು ಸಂಸಾರದ ಮತ್ತು ಪರೋಕ್ಷವಾಗಿ ಸಾಮುದಾಯಿಕವಾದ ಪ್ರಕ್ರಿಯೆ ಕೂಡ ಆಗಿರುತ್ತದೆ. ಹಾಗಿದ್ದೂ ಅದರ ಖಾಸಗಿ ನೆಲೆಗಳನ್ನು ಕೂಡ ಗೌರವಿಸಬೇಕು ಎನ್ನುವುದು ಸರಿಯೇ.
ಕಾದಂಬರಿಯ ವ್ಯಾಪ್ತಿಯಿಂದ ಸ್ವಲ್ಪ ಹೊರಕ್ಕೆ ವಿಸ್ತರಿಸಿದರೆ, ದಾಂಪತ್ಯದ ಮಹತ್ವದ ಉದ್ದೇಶವಾದ ಸಂತಾನ, ಅದು ಕಾನೀನ ಶಿಶು, ನಿಯೋಗದ ಮೂಲಕ ಪಡೆದ ಶಿಶು, ದತ್ತು ಪಡೆದ ಶಿಶು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಪಡೆದ ಶಿಶು - ಯಾವುದೇ ಆಗಿರಲಿ, ಅದರ ಹೊರತಾಗಿ ಏನು ಎಂಬ ಪ್ರಶ್ನೆಯಿದೆ. ಕರ್ಣನಂತೆ ಪರಿತ್ಯಜಿಸಲ್ಪಟ್ಟ ಶಿಶುಗಳ ನೆಲೆಯಿಂದಲೂ ದಾಂಪತ್ಯವನ್ನು ಕಾಣಲು ಸಾಧ್ಯವಿದೆ, ಮದುವೆಯ ನಂತರ ಹುಟ್ಟಿದ್ದಷ್ಟೇ ಪ್ರಶ್ನೆಯ ವ್ಯಾಪ್ತಿಗೆ ಬರಬೇಕು ಎಂಬ ಮಡಿವಂತಿಕೆ ಬಿಟ್ಟು ನೋಡಿದರೆ. ಯಾವುದೇ ತಲೆಮಾರು, ಅದು ದಾಂಪತ್ಯದ ಚೌಕಟ್ಟನ್ನು ಅದು ಇದ್ದ ಹಾಗೇ ಸರಿಯಾಗಿಲ್ಲ ಎನ್ನುವ ತಲೆಮಾರು ಕೂಡ ಮುಂದಿನ ತಲೆಮಾರು ಬೇಡ ಎನ್ನುತ್ತಿಲ್ಲ, ಗಂಡು-ಗಂಡು, ಹೆಣ್ಣು-ಹೆಣ್ಣುಗಳ ವಿವಾಹಕ್ಕೆ ಕಾನೂನಿನ ಸಮ್ಮತಿ ಸಿಗಬೇಕು ಎನ್ನುವವರನ್ನೂ ಸೇರಿಸಿ. ಬೇರ್ಪಡುವ ಸಾಧ್ಯತೆಯನ್ನು ತನ್ನ ಗರ್ಭದಲ್ಲಿಟ್ಟುಕೊಂಡೇ ಒಂದಾಗುವ ಯಾವ ದಾಂಪತ್ಯವೂ ಗರ್ಭದಲ್ಲಿರುವ ಶಿಶುವಿನ ನೆಲೆಯಿಂದ ಆ ಸಾಧ್ಯತೆಯನ್ನು ಕಾಣುವುದಿಲ್ಲ ಎನ್ನುವುದು ಕೂಡ ಅಷ್ಟೇ ನಿಜವಲ್ಲವೆ?
ಒಟ್ಟಿಗಿರುವುದರಲ್ಲಿ ಅರ್ಥವಿಲ್ಲ, ಬೇಡ ಅನಿಸುವುದು ಯಾವಾಗ?
ಹಾಗೆ ಅನಿಸಿದ್ದು ಕೂಡ ಎಷ್ಟರ ಮಟ್ಟಿಗೆ ಪುನರ್ ಪರಿಶೀಲನೆಗೆ ಒಳಗಾಗದ ಗಟ್ಟಿಯಾದ ನಿಲುವು?
ವ್ಯಕ್ತಿಯಿಂದ ವ್ಯಕ್ತಿಗೆ ಅದು ಭಿನ್ನವಾಗುತ್ತದೆ, ವೈಯಕ್ತಿಕವಾಗುತ್ತದೆ. ಹಾಗಾಗಿ ಅದನ್ನು ನಾವು ಹೆಚ್ಚು ಹೆಚ್ಚು ಆಳಕ್ಕೆ ಬಗೆದಂತೆಲ್ಲ ಅದು ಸಾಮಾಜಿಕವಾದ, ಸಾರ್ವಕಾಲಿಕವಾದ ಅಥವಾ ಸಾರ್ವತ್ರಿಕವಾದ ಸತ್ಯಗಳ ಕಡೆಗೆ ನಮ್ಮನ್ನು ಕೊಂಡೊಯ್ಯುವುದು ಸಾಧ್ಯವಾಗದು. ಆದರೆ ವ್ಯಕ್ತಿಯೊಳಗೆ ಜಿಜ್ಞಾಸೆ ಶಾಶ್ವತವಾಗಿರುತ್ತದೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.