ಪರ್ವತವಾಣಿಯವರೆಂದರೆ 'ನ' ಗುಣಿತದ ಮೊದಲ ಮೂರು ಅಕ್ಷರಗಳು


“ಮೊದಲು ನಟ, ನಂತರ ನಾಟಕಕಾರ, ಆನಂತರದಲ್ಲಿ ನಿರ್ದೇಶಕ ಈ ಮೂರೂ ಆಗಿದ್ದ ಪರ್ವತವಾಣಿಯವರು, ಕಳೆದ ಶತಮಾನದ ನಾಲ್ಕನೇ ದಶಕದಿಂದ ಮುಂದಿನ ನಾಲೈದು ದಶಕಗಳವರೆಗೆ ಇಡೀ ರಂಗಭೂಮಿಯನ್ನು ಆಕ್ರಮಿಸಿದಂತಹ ರಂಗಸಾಧಕ,” ಎನ್ನುತ್ತಾರೆ ಕೆ.ಎಂ. ವಿಜಯಲಕ್ಷ್ಮಿ. ಅವರು ಸಂಪಾದಿಸಿದ “ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು” ಕೃತಿಗೆ ಬರೆದ ಸಂಪಾದಕರ ಮಾತು

ಸಂಗೀತ, ನಟನೆ, ನಿರ್ದೇಶನ ಕಲೆ ಮತ್ತು ನಾಟಕ ರಚನೆ - ಈ ಎಲ್ಲವೂ ಮೇಲೈಸಿದ 'ಪರ್ವತವಾಣಿ' ಎಂಬ ಕಾವ್ಯನಾಮದ ಪಿ. ನರಸಿಂಗರಾವ್ ಅವರು ಕನ್ನಡ ನವೋದಯ ಸಾಹಿತ್ಯದ ಆಧುನಿಕ ನಾಟಕಕಾರರಲ್ಲಿ ಒಂದು ಮಹತ್ವದ ಹೆಸರಾಗಿ ಬಹುಕಾಲ ಮಿಂಚಿದವರು. ಪರ್ವತವಾಣಿಯವರ ಹೆಸರಿನ ಜೊತೆ ಜೊತೆಗೇ ಅವರನ್ನು ಬಲ್ಲವರಿಗೆ ನೆನಪಾಗುವುದು ಅವರ ಹಾಸ್ಯ. ಹಾಸ್ಯ ಮತ್ತು ವಿಡಂಬನೆಗಳ ಮೂಲಕ ಸಮಾಜದ ಓರೆಕೋರೆಗಳ ಮೇಲೆ ಬೆಳಕು ಚೆಲ್ಲುವ ಅವರ ನಾಟಕಗಳು.

ಕನ್ನಡ ನೆಲದಲ್ಲಿ ಜನಿಸಿ, ಮಾತೃಭಾಷೆ ಕನ್ನಡವೇ ಇದ್ದರೂ, ಕನ್ನಡವನ್ನೇ ಮರೆಯುತ್ತಿರುವ, ಈ ಕಾಲದ ಯುವಜನತೆಗೆ ಪರ್ವತವಾಣಿಯವರ ಹೆಸರು ತಿಳಿಯದೇ ಇರುವ ಸಾಧ್ಯತೆ ಇದೆ. ಅದರಿಂದ ಇಲ್ಲಿ ಅವರ ಸಂಕ್ಷಿಪ್ತ ಪರಿಚಯ ಕೊಡುವುದು ಸೂಕ್ತ.

ಪರ್ವತವಾಣಿಯವರೆಂದರೆ 'ನ' ಗುಣಿತದ ಮೊದಲ ಮೂರು ಅಕ್ಷರಗಳು, “ನ, ನಾ, ನಿ'. ಅಂದರೆ ನಟ, ನಾಟಕಕಾರ, ನಿರ್ದೇಶಕ. ಮೊದಲು ನಟ, ನಂತರ ನಾಟಕಕಾರ, ಆನಂತರದಲ್ಲಿ ನಿರ್ದೇಶಕ ಈ ಮೂರೂ ಆಗಿದ್ದ ಪರ್ವತವಾಣಿಯವರು, ಕಳೆದ ಶತಮಾನದ ನಾಲ್ಕನೇ ದಶಕದಿಂದ ಮುಂದಿನ ನಾಲೈದು ದಶಕಗಳವರೆಗೆ ಇಡೀ ರಂಗಭೂಮಿಯನ್ನು ಆಕ್ರಮಿಸಿದಂತಹ ರಂಗಸಾಧಕ. ಆ ಕಾಲದ ಯಾವುದೇ ಶಾಲಾ ಕಾಲೇಜುಗಳಾಗಲೀ, ಕರ್ನಾಟಕದಲ್ಲಿದ್ದ ಹವ್ಯಾಸಿ ರಂಗತಂಡಗಳಾಗಲೀ, ಸಂಘ ಸಂಸ್ಥೆ ಗಳಾಗಲೀ, ಅವರ ನಾಟಕಗಳನ್ನು ಆಡದೇ ಬಿಟ್ಟಿಲ್ಲ ಎನ್ನುವುದು ಅತಿಶಯೋಕ್ತಿಯಲ್ಲ. ಪ್ರತ್ಯೇಕ ರಂಗಭೂಮಿಗಳೇ, ಇಲ್ಲದೆ, ಬೇರೆ ರಂಜನೀಯ ಮಾರ್ಗಗಳೂ ಇಲ್ಲದೆ ಶಾಲಾ ಕಾಲೇಜುಗಳ ವೇದಿಕೆಗಳೇ ನಾಟಕಗಳಿಗೆ ಹೆಚ್ಚು ಆಧಾರ ನೀಡುತ್ತಿದ್ದಂತಹ ಕಾಲದ ಸತ್ಯವಾದ ಮಾತದು. ಜೀವನದಲ್ಲಿ ಕೆಲವರ ವ್ಯಕ್ತಿತ್ವ ಸೌಮ್ಯವಿರುತ್ತದೆ, ಕೆಲವರದು ಜ್ವಲಿಸುತ್ತದೆ, ಇನ್ನು ಕೆಲವರದು ಪ್ರಜ್ವಲಿಸುತ್ತದೆ. ಹೀಗೆ ಪ್ರಜ್ವಲಿಸುತ್ತಿದ್ದವರು. ರಂಗಭೂಮಿಗೆ ತಮ್ಮ ಇಡಿಸಿ ಜೀವನವನ್ನು ಮುಡಿಪಾಗಿಟ್ಟ ಪರ್ವತವಾಣಿಯವರು" ಎಂದು ಖ್ಯಾತ ಸಾಹಿತಿ ಮತ್ತು ವಿಮರ್ಶಕ, ಪ್ರೊ. ಎಲ್.ಎಸ್. ಶೇಷಗಿರಿ ರಾವ್ ಅವರು, 'ಪರ್ವತವಾಣಿಯವರ ಕೆಲವು ನೆನಪುಗಳು' ಎಂಬ ವಿಷಯವಾಗಿ ಅವರ 87ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಮಾತಾಡುವಾಗ ಹೇಳಿದ್ದರು. ಪರ್ವತವಾಣಿಯವರ ಸಾಧನೆ ಹಾಗೂ ವ್ಯಕ್ತಿತ್ವ ಎಂಥದೆಂಬುದನ್ನು ವಿವರಿಸಲು ಇದೊಂದು ಮಾತು ಸಾಕು.

ಪರ್ವತವಾಡಿ ನರಸಿಂಗರಾವ್ ಅವರು ಪ್ರಪ್ರಥಮವಾಗಿ ನಾಟಕಕ್ಕೆ ಪ್ರವೇಶಿಸಿದ್ದು 1936ರಲ್ಲಿ, ನಾಯಕನಟನಾಗಿಯೇ. ಭದ್ರಾವತಿಯಲ್ಲಿ ಅರಣ್ಯ ಇಲಾಖೆಯಲ್ಲಿ ಗುಮಾಸ್ತ ರಾಗಿ ಕೆಲಸಕ್ಕೆ ಸೇರಿದ ಸಂದರ್ಭದಲ್ಲಿ ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆಗೊಂಡು ಬಂದು ನಾಟಕಾಸಕ್ತ ಗೆಳೆಯರ ಜೊತೆಗೂಡಿದ ಮೇಲೆ, 1939ರಲ್ಲಿ 'ಪರ್ವತವಾಡಿ' ಎಂಬ ಹೆಸರಿನಲ್ಲಿ ಯಾರಿಗೂ ತಿಳಿಸದೆ ಬರೆದ ಮೊದಲ ನಾಟಕ 'ಮಾಲತಿ'. ನಂತರ ನಾಟಕಾಧ್ಯಯನದಿಂದಾಗಿ ಪಾಶ್ಚಾತ್ಯ ನಾಟಕಗಳಿಂದ ಪ್ರೇರಿತರಾದರು. ಪ್ರಭಾವಿತರಾದರು. ರಚನಾ ಕಾರ್ಯದಲ್ಲಿ ನಿರತರಾದರು. ಜಗತ್ತಿನ ಎಲ್ಲ ಶ್ರೇಷ್ಠ ನಾಟಕಕಾರರ ವಸ್ತುಗಳನ್ನು ಆಧಾರವಾಗಿಟ್ಟುಕೊಂಡು, ಸ್ವತಂತ್ರ ಆಲೋಚನೆಗಳಿಂದ, ಕನ್ನಡ ಸಂಸ್ಕೃತಿಗೆ ಹಾಗೂ ಕರ್ನಾಟಕದಲ್ಲೇ ನಡೆದಿದೆ ಎನಿಸುವಂತ ನಾಟಕಗಳನ್ನು ಬರೆದರು. ವಿಲಿಯಂ ಶೇಕ್ಸ್‌ಪಿಯ‌ರ್, ಆಲಿವ‌ರ್ ಗೋಲ್ಡ್ ಸ್ಮಿತ್, ಮಾರ್ಕ್‌ಹೀಂ, ಆ್ಯಂಟನ್ ಚೆಕೋವ್, ಮೋಲಿಯೇರ್, ರಿಚರ್ಡ್ ಬ್ರಿನ್ಸ್‌ಲೇ ಪೆರಿಡನ್, ಇಬ್ಬನ್, ಮುಂತಾದ, ವಿವಿಧ ದೇಶಗಳ, ವಿವಿಧ ಭಾಷೆಗಳ ರಂಗದಿಗ್ಗಜರ ಕೃತಿಗಳು ಪರ್ವತವಾಣಿ ಅವರ ಕೈಯಲ್ಲಿ ಕನ್ನಡದ ಕೃತಿಗಳಾದವು. ಕರ್ನಾಟಕದಲ್ಲೇ ನಡೆದ ಕಥೆಗಳಾದವು.

ರಚಿಸಿದ ನಾಟಕಗಳಲ್ಲಿ ಮೀನಾ ಮದುವೆ, ಗಿಳಿಯ ಪಂಜರ, ತಿನ್ನಬೇಕೇ ತಿಂದು ಕುಡಿಯಬೇಕೇ?, ಜುಕುತಿ ಕೂಗುತಿ, ಮದ್ಯಪಾನ, ಹಗ್ಗದ ಕೊನೆ, ಪಿಂಡಕ್ಕಾಗಿ, ತಪ್ಪು ಹೆಜ್ಜೆ, ಅಂತಿಂಥ ಹೆಣ್ಣು ಇವಳಲ್ಲ, ನಾಯಿ ಬಾಲ, ಮಂಗಮಾಯ, ನಾಯಿ ಬೊಗಳಿತು. ಮುಂತಾಗಿ ಸುಮಾರು ನಲವತ್ತಾರು ಸ್ವಂತ ಕೃತಿಗಳಾದರೆ, ಉಳಿದ ನಲವತ್ತು ಕೃತಿಗಳು ರೂಪಾಂತರಿಸಿ ಅಥವಾ ಸ್ವಂತದ್ದಾಗಿಸಿಕೊಂಡು ಸೃಷ್ಟಿಸಿದವುಗಳು. ಶೇಕ್ಸ್‌ಪಿಯರಿನ 'ಟೇಮಿಂಗ್ ಆಫ್ ದ ಶೂ' ನಾಟಕಾಧಾರಿತ 'ಬಹದ್ದೂರ್ ಗಂಡ', ಗೋಲ್ಡ್‌ಸ್ಮಿತ್‌ನ 'ಶೀ ಸ್ಪೂಪ್ಸ್ ಟು ಕಾಂಕರ್‌'ನ ರೂಪಾಂತರವಾದ 'ಉಂಡಾಡಿಗುಂಡ', ಇವು ಇವರು ನಾಟಕ ರಚನೆಗೆ ಇಳಿದ ಹೊಸತರಲ್ಲೇ ಇವರ ಹೆಸರನ್ನು ಅಂತರಿಕ್ಷಕ್ಕೇರಿಸಿದ ಕೃತಿಗಳು, 1945-46ರಲ್ಲಿ, ಶೇಕ್ಸ್‌ಪಿಯರಿನ 'ಟೇಮಿಂಗ್ ಆಫ್ ದ ಶೂ' ನಾಟಕವನ್ನು ಆಧರಿಸಿ ಬರೆದ 'ಬಹದ್ದೂರ್ ಗಂಡ' ನಾಟಕ; ಕೆ.ಜಿ. ರಸ್ತೆಯಲ್ಲಿದ್ದ ಹಿರಣ್ಣಯ್ಯನವರ 'ಶ್ರೀ' ಥಿಯೇಟರ್‌ನಲ್ಲಿ, ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಅಖಂಡವಾಗಿ ನೂರಾಐವತ್ತು ಪ್ರದರ್ಶನಗಳನ್ನು ನೀಡಿದ್ದು, ಹವ್ಯಾಸಿ ರಂಗಭೂಮಿಯಲ್ಲಿ ಇಂದಿಗೂ ಮುರಿಯಲಾಗದೇ ಉಳಿದಿರುವ ದಾಖಲೆ.

ಪರ್ವತವಾಣಿಯವರ 'ಸಪ್ತಪದಿ'ಯ ಆಯ್ದ ಭಾಗ, 'ಕವಿಭಿಕ್ಷೆ' ಮತ್ತು 'ಪಾಚೋ ಪಾಪಚ್ಚಿ ಪಾಚೋ' ನಾಟಕಗಳು ಮಹಾರಾಷ್ಟ್ರ, ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪದವಿ ಹಾಗೂ ಪದವಿಪೂರ್ವ ತರಗತಿಗಳಿಗೆ ಪಠ್ಯಗಳಾಗಿದ್ದವು. ಸುಂದ್ರೋಪಸುಂದ್ರು, ಪಿಂಡಕ್ಕಾಗಿ, ತಿನ್ನಬೇಕೇ ತಿಂದು ಕುಡಿಯಬೇಕೇ, ಮುಂತಾದವು ದೂರದರ್ಶನದಲ್ಲಿ, ಈಗಲೂ, ಆಗಾಗ ಪ್ರಸಾರವಾಗುತ್ತಿದ್ದು, ಅನೇಕರು ನೋಡಿರ ಬಹುದಾದ ನಾಟಕಗಳು. ಡಾ. ರಾಜ್‌ ಕುಮಾರ್, ಪಿ. ಲಂಕೇಶ್ ಅವರುಗಳೊಂದಿಗೆ, ಚಲನಚಿತ್ರದ ಅಭಿನಯಕ್ಕಿಳಿದಿದ್ದರು. ಪಲ್ಲವಿ, ದಂಗೆ ಎದ್ದ ಮಕ್ಕಳು, ಅನುರೂಪ, ಭಾಗ್ಯದ ಲಕ್ಷ್ಮೀ ಬಾರಮ್ಮ, ರಥಸಪ್ತಮಿ, ಶೃತಿ ಸೇರಿದಾಗ, ಅನುರಾಗ ಅರಳಿತು, ಗೋಲೀಬಾರ್ ಮುಂತಾದವು ಅವರು ಅಭಿನಯಿಸಿದ ಕೆಲವು ಚಲನಚಿತ್ರಗಳು.

ಶಿವಮೊಗ್ಗದಲ್ಲಿ 1943ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಬಹದ್ದೂರ್ ಗಂಡ' ನಾಟಕದ ಪ್ರದರ್ಶನವನ್ನು ನೋಡಿದ, ಖ್ಯಾತ ಸಾಹಿತಿ ವಿ.ಕೃ. ಗೋಕಾಕರು, ಪರ್ವತವಾಣಿಯವರ ದೊಡ್ಡ ಧ್ವನಿಗೆ ಮಾರುಹೋಗಿ, 'ಪರ್ವತವಾಡಿ'ಗೆ ಬದಲಾಗಿ 'ಪರ್ವತವಾಣಿ' ಎಂದಿಟ್ಟುಕೊಂಡರೆ ಹೆಚ್ಚು ಸೂಕ್ತವಾಗುತ್ತದೆ ಎಂದು ನೀಡಿದ ಸೂಚನೆ ಒಪ್ಪಿಗೆಯಾಗಿ, ಅಲ್ಲಿಂದ ಮುಂದೆ ಜನಪ್ರಿಯಗೊಂಡಿದ್ದು 'ಪರ್ವತವಾಣಿ' ಎಂಬ ಕಾವ್ಯನಾಮವೇ. ಪಿ. ನರಸಿಂಗರಾವ್ ಎನ್ನುವುದು ಕೇವಲ ಕಛೇರಿಯ ದಾಖಲೆಗಳಲ್ಲಿ ಮಾತ್ರ ಉಳಿದುಕೊಂಡ ಹೆಸರು.

ಅವರು ಬರೆದ 'ಹಗ್ಗದ ಕೊನೆ' ನಾಟಕವನ್ನು ಆಧರಿಸಿ, ಖ್ಯಾತ ನಿರ್ದೇಶಕ ಶ್ರೀ ದಯಾಲ್ ಪದ್ಮನಾಭನ್ ಅವರ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಇದೇ ಹೆಸರಿನ ಚಲನಚಿತ್ರವು 2014ರ ಅಕ್ಟೋಬರ್ 26 ರಂದು ಬಿಡುಗಡೆ ಕಂಡಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ಮನ್ನಣೆ ಪಡೆದಿದೆ. 2015ರ ಏಪ್ರಿಲ್‌ನಲ್ಲಿ ನಡೆದ, ದಾದಾಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರದರ್ಶನ ನೀಡಿ ಕನ್ನಡದ ಗರಿಮೆ ಹೆಚ್ಚಿಸಿದೆ. ಇವಿಷ್ಟೂ ಪರ್ವತವಾಣಿಯವರ ಸಾಧನೆಯ ಸಂಕ್ಷಿಪ್ತ ಪರಿಚಯ.

ತಮ್ಮ ಜೀವನದ ಪ್ರಮುಖ ಘಟನೆಗಳ ಬಗ್ಗೆ, ತಮ್ಮ ಸಾಧನೆಗೆ ಸಹಾಯ ಮಾಡಿದವರ ಮತ್ತು ಪ್ರಭಾವಿಸಿದವರ ಬಗ್ಗೆ ಸಂಕ್ಷಿಪ್ತವಾಗಿ ಬರೆಯಬೇಕೆಂಬ ಆಲೋಚನೆ ಪರ್ವತವಾಣಿಯವರಿಗೆ ಮೊದಲೇ ಮನದಲ್ಲಿತ್ತು. ಈ ಆಲೋಚನೆಯನ್ನು ಬಲ ಗೊಳಿಸಿದ್ದು, 1988ರಲ್ಲಿ ಪ್ರಕಟವಾದ, 'ದಿ ಅನ್ನೊಟೇಟೆಡ್ ಶೇಕ್ಸ್ಪಿಯರ್' ಎಂಬ ಶೇಕ್ಸ್‌ ಪಿಯರಿನ ಕುರಿತ ಬೃಹತ್ ಗ್ರಂಥ. ಜಯನಗರ ಐದನೇ ಬ್ಲಾಕಿನ ಶಾಲಿನಿ ಹೋಟೆಲ್ ಬಳಿಯ ಪುಸ್ತಕ ಪ್ರದರ್ಶನವೊಂದಕ್ಕೆ ಫೆಬ್ರವರಿ 1993ರಲ್ಲಿ ಹೋದಾಗ ಕಣ್ಣಿಗೆ ಬಿದ್ದದ್ದು ಶೇಕ್ಸ್ಪಿಯರಿನ ಸುಖಾಂತ ನಾಟಕಗಳು, ಸಾನೆಟ್‌ಗಳು, ಕವಿತೆಗಳು, ದುಖಾಂತಗಳು, ಅವುಗಳ ಹಿನ್ನೆಲೆಗಳು, ಇತ್ಯಾದಿಗಳನ್ನೆಲ್ಲವನ್ನೂ ಒಳಗೊಂಡ, 44 ಅಳತೆಯ ಸುಮಾರು ಎರಡೂವರೆ ಸಾವಿರ ಪುಟಗಳ ಬೃಹತ್ ಗಂಥ, ಅವರನ್ನು ಅದು ಎಷ್ಟು ಆಕರ್ಷಿಸಿತೆಂದರೆ, ಮರು ಆಲೋಚನೆಯೂ ಮಾಡದೇ ಎರಡು ಸಾವಿರ ರುಪಾಯಿಗಳನ್ನು ಕೊಟ್ಟು ಅದನ್ನು ಖರೀದಿಸಿದರು. ಆಸಕ್ತಿಯಿಂದ ಅದರ ಒಳಗನ್ನು ಗಮನಿಸಿದರು. ಈ ಪುಸ್ತಕವನ್ನು ಮುಂದಿಟ್ಟುಕೊಂಡು ಅದರಂತೆ ತಮ್ಮ ಸುಮಾರು ಐವತ್ತಾದರೂ ಉತ್ತಮ ನಾಟಕಗಳ ಒಂದು ಸಂಗ್ರಹ, ಸಂಕ್ಷಿಪ್ತ ಆತ್ಮ ವೃತ್ತಾಂತಗಳೊಂದಿಗೆ ಒಂದೆಡೆ ಪ್ರಕಟವಾಗಲಿ ಎಂದು ಬಯಸಿದರು. ಬರೆಯತೊಡಗಿದರು.

ಆದರೆ ಅವರಿಗೆ ಆಗಲೇ ಆಗಾಗ ಆರೋಗ್ಯ ಕೈಕೊಡತೊಡಗಿತ್ತು. ಉಸಿರಾಟದ ತೊಂದರೆ ಆರಂಭಗೊಂಡಿತ್ತು. ಸಾವು ಕದ ತಟ್ಟುವುದು ಕೇಳಿಸತೊಡಗಿತ್ತು. ಆದರೂ ಇನ್ನು ನನ್ನ ಕೆಲಸ ಮುಗಿಯಿತು ಎಂದು ಹೇಳುತ್ತಲೇ ಅವರು ತಮ್ಮ ಮನೋಬಲವನ್ನೆಲ್ಲ ಲೇಖನಿಗೆ ತುಂಬಿದರು. ಕೆಲ ತಿಂಗಳ ಕಾಲ ಸತತವಾಗಿ ಕುಳಿತು ತಮ್ಮ ನಾಟಕಗಳನ್ನು ಅಲ್ಲಲ್ಲಿ ಪರಿಷ್ಕರಿಸಿದರು. ಸಂಕಲನಕ್ಕೆ ಸೇರಿಸುವ ನಾಟಕಗಳ ಪಟ್ಟಿ ಮಾಡಿ, ಹಿನ್ನೆಲೆಗಳನ್ನೂ ಬರೆದರು. ಇದರ ಜೊತೆ ಜೊತೆಗೇ ನಾಲ್ಕು ಸಲ ನರ್ಸಿಂಗ್ ಹೋಂನಲ್ಲಿ ಇದ್ದು ಗೆದ್ದು ಹೊರ ಬರಬೇಕಾದ ಸಂದರ್ಭಗಳೂ ಅವರಿಗೆ ಬಂದವು. ಅವರ ಮರಣಕ್ಕೆ ಕೇವಲ ಕೆಲವು ತಿಂಗಳುಗಳ ಮುಂಚೆಯಷ್ಟೇ ಅವರು ತಮ್ಮ ಈ ಕೆಲಸವನ್ನು ಪೂರೈಸಿದರು. "ಇನ್ನು ನನ್ನ ಕೆಲಸ ಮುಗಿಯಿತು. ಈಗ ಮಾಡಿದ್ದು ಬೇರಾರಿಂದಲೂ ಆಗದ, ನಾನೇ ಮಾಡಬೇಕಾಗಿದ್ದ, ನಾನೇ ಬರೆಯಬೇಕಾಗಿದ್ದ ಕೆಲಸ. ಇನ್ನು ಇದನ್ನು ಯಾರಾದರೂ ಪ್ರಕಟಿಸಬಹುದು. ಯಾರು ಬೇಕಾದರೂ ಹೇಗೆ ಬೇಕಾದರೂ ಹೊರ ತರಬಹುದು" ಎಂದು ಮುಗಿದ ದಿನ ಸಂಪೂರ್ಣ ನಿರಾಳರಾಗಿ, ಸಮಾಧಾನ ಚಿತ್ತರಾಗಿ ನಮ್ಮೆಲ್ಲರ ಮುಂದೂ ಹೇಳಿದ್ದರು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...