ಪ್ರತಿಗಂಧರ್ವ : ಪ್ರಥಮ ಪ್ರಯತ್ನವೇ ಫಲಪ್ರದ

Date: 20-11-2025

Location: ಬೆಂಗಳೂರು


"ವೃತ್ತಿ ರಂಗಭೂಮಿ ಪರಂಪರೆಯ ಕಂಪನಿ ನಾಟಕವೊಂದು ಹೀಗಿರಬೇಕು. ಅದರ ಸಂವೇದನಾಶೀಲ ಮಾದರಿ ಸಾಧ್ಯತೆಗಳು ಹೀಗೇ ಇರಬೇಕೆಂಬ ಸೃಜನಾತ್ಮಕ ಚಿಂತನೆಗಳು ಸಜೀವಗೊಳಿಸುವಲ್ಲಿ ನಿತ್ಯವೂ ಕಾರ್ಯೋನ್ಮುಖ ಆಗುವುದು ನನಗೆ ಕಾಯಕವೇ ಆಗಿದೆ," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣದಲ್ಲಿ ಬರೆದಿರುವ ʻಪ್ರತಿಗಂಧರ್ವ : ಪ್ರಥಮ ಪ್ರಯತ್ನವೇ ಫಲಪ್ರದʼ ಲೇಖನ ನಿಮ್ಮ ಓದಿಗಾಗಿ..

ಅದು ಬಹಳ ದಿವಸಗಳ ಕನಸು. ಅಂತಹ ಅಪರೂಪದ ಕನಸೊಂದು ಫಲಪ್ರದಗೊಂಡಾಗ ಸಣ್ಣಗೆ ಹರಿಗಡಿಯದಂತೆ ಹುರಿದುಂಬಿಸುವ ಸಹಜವಾದ ಹುರುಪಿನ ಖುಷಿ. ಅದೇನು ಖಂಡುಗ ಖುಷಿಯಲ್ಲ. ಆದರೆ ಅಂದುಕೊಂಡ ಕನಸಿನ ಹಾದಿಗುಂಟ ಸಾಗುವಾಗ ಸಿಗುವ ಸಕಾರಾತ್ಮಕ ಫಲಿತವ್ಯ. ಅಂತಹ ಗುಣೀಭೂತ ಸಂತಸಕ್ಕೆ ಎಣೆಯುಂಟೇ ಎಂಬ ಪ್ರೀತಿಯ ಪರಾಮಳಿಕೆ. ನಾನು ದಾವಣಗೇರಿಯ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕನಾಗಿ ಒಂದು ವರುಷ ಮುಗಿಯುವ ಮರು ಗಳಿಗೆಗಳಲ್ಲಿ ಅಂತಹದ್ದೊಂದು ಮಹತಿನ ಕನಸು ಈಡೇರಿದ ಭರಪೂರ ಸಂಪ್ರೀತಿ. ಮನದುಂಬಿದ ರಂಗೋಲ್ಲಾಸ.

ವೃತ್ತಿ ರಂಗಭೂಮಿ ಪರಂಪರೆಯ ಕಂಪನಿ ನಾಟಕವೊಂದು ಹೀಗಿರಬೇಕು. ಅದರ ಸಂವೇದನಾಶೀಲ ಮಾದರಿ ಸಾಧ್ಯತೆಗಳು ಹೀಗೇ ಇರಬೇಕೆಂಬ ಸೃಜನಾತ್ಮಕ ಚಿಂತನೆಗಳು ಸಜೀವಗೊಳಿಸುವಲ್ಲಿ ನಿತ್ಯವೂ ಕಾರ್ಯೋನ್ಮುಖ ಆಗುವುದು ನನಗೆ ಕಾಯಕವೇ ಆಗಿದೆ. ಅದರ ಸ್ವರೂಪದ ಒಳತೋಟಿ ಇದೀಗ ವೈಚಾರಿಕ ಪ್ರಜ್ಞೆಯ ಬುದ್ದಿಜೀವಿಗಳ ಮನಸು ಗೆಲ್ಲಬೇಕಿದೆ. ಇದು ನಮ್ಮ ರಂಗಾಯಣದ ಕನಸುಗಳ ಭಿತ್ತಿಚಿತ್ತವೂ ಹೌದು. ವರ್ತಮಾನದ ಸೃಜನಶೀಲ ರಂಗಭೂಮಿ ಕಂಡರಸುವ ವಿನೂತನ ರಂಗಪ್ರಯೋಗ ಅಂತಲೂ ಕರೆಯಬಹುದಾದ ತೀಕ್ಷ್ಣ ಬೆಳವಣಿಗೆ. ಅಂತಹ ಬೆಳವಣಿಗೆಗಳೇ ನಮ್ಮ ರಂಗಾಯಣದ ಚಟುವಟಿಕೆಗಳ ಉಮೇದು ಇಮ್ಮಡಿಗೊಳಿಸಿವೆ.

ಅಂದಹಾಗೆ ಮೊನ್ನೆ ಅಂದರೆ ಇದೇ ೨೦೨೫ ರ ನವೆಂಬರ್ ಹದಿನೈದರಂದು ನಮ್ಮ ದಾವಣಗೆರೆ ರಂಗಾಯಣ ಸಿದ್ದಗೊಳಿಸಿದ ಪ್ರಥಮ ನಾಟಕ "ಪ್ರತಿಗಂಧರ್ವ" ಯಶದ ಮೆಟ್ಟಿಲೇರಿದೆ. ದಾವಣಗೇರಿ ಶಹರದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಾವು ಹಾಕಿದ ಝಗಮಗಿಸುವ, ನವನವೀನ ರಂಗಸಜ್ಜಿಕೆ ಅದಾಗಿತ್ತು. ಅವತ್ತು ಪ್ರತಿಗಂಧರ್ವ ನಾಟಕಕ್ಕೆ ಒಂದು ಸಾವಿರಕ್ಕೂ ಹೆಚ್ಚು ಸಹೃದಯ ಪ್ರೇಕ್ಷಕರು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾದರು. ಅಜಮಾಸು ಒಂದು ತಿಂಗಳು ಮೀರಿದ ನಿರಂತರ ತಾಲೀಮು, ರಂಗತಾಲೀಮು ಫಲ ಕೊಟ್ಟಿತು. ಡಾ. ರಾಜಪ್ಪ ದಳವಾಯಿ ಪ್ರತಿಗಂಧರ್ವ ನಾಟಕವನ್ನು ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕಾಗಿಯೇ ಬರೆದಂತಿದೆ. ಗುಬ್ಬಿ ವೀರಣ್ಣ ವಂಶದ ಕುಡಿ ಬಿ. ಜಯಶ್ರೀ ಸದರಿ ರಂಗಪ್ರಯೋಗ ಉದ್ಘಾಟನೆ ಮಾಡಿದ್ದು, ರಹಮತ್ ತರೀಕೆರೆ ಪ್ರದರ್ಶನ ಪರಿಚಯದ ಪುಸ್ತಿಕೆ ಬಿಡುಗಡೆ ಮಾಡಿದ್ದು ಅರ್ಥಪೂರ್ಣ ಎನಿಸಿತು.

ದಾವಣಗೆರೆ ರಂಗಾಯಣ ಈ ನಾಟಕವನ್ನು ಸವಾಲಿನಿಂದ ರಂಗಸಮನ್ವಯದ ಮಾದರಿಯನ್ನಾಗಿ ಸಿದ್ಧಗೊಳಿಸಿದೆ. ಅದಕ್ಕಾಗಿ ಪಟ್ಟ ಪರಿಶ್ರಮ ಬಣ್ಣಿಸಲಸದಳ. ನಾಟಕಕ್ಕೆ ಕಲಾವಿದರ ಆಯ್ಕೆಯಂತೂ ತುಂಬಾನೇ ಅರ್ಥಭರಿತ ಮತ್ತು ಡೆಮಾಕ್ರಟಿಕ್ ಆಗಿತ್ತು. ದೂರದ ಕಾರವಾರ, ಬಾಗಲಕೋಟೆ, ಕೊಪ್ಪಳ, ಬೆಂಗಳೂರು, ಧಾರವಾಡ, ರಾಯಚೂರು, ವಿಜಯನಗರ, ದಾವಣಗೆರೆ ಹೀಗೆ ಏಳೆಂಟು ಜಿಲ್ಲೆಗಳ ಅನೇಕ ಆಕಾಂಕ್ಷಿಗಳು ಆಗಮಿಸಿದ್ದರು. ಸಂದರ್ಶನಕ್ಕೆ ಬಂದಿದ್ದ ಮೂವತ್ಮೂರು ಮಂದಿಯಲ್ಲಿ ಏಳು ಮಂದಿ ಮಹಿಳೆಯರಿದ್ದರು. ಅವರಲ್ಲಿ ಕಾಲೇಜು ಉಪನ್ಯಾಸಕರೂ ಇದ್ದುದು ವಿಶೇಷ. ಹೊಸದಾದ ನಮ್ಮ ರಂಗಾಯಣಕ್ಕೆ ಅದೆಲ್ಲವೂ ಹೊಸದು ಮತ್ತು ಇನ್ನೋವೆಟಿವ್ ಸಂಗತಿ. ಹೀಗಿರುವಾಗ ಆಯ್ಕೆ ಸಮಿತಿಯು ಅವರಲ್ಲಿ ಹದಿನೈದು ಮಂದಿ ಕಲಾವಿದರನ್ನು ಆಯ್ಕೆ ಮಾಡಿತು.

ಹೀಗೆ ಆಯ್ಕೆಯಾದ ಕಲಾವಿದರನ್ನು ತಡಮಾಡದೇ ಪ್ರತಿಗಂಧರ್ವ ನಾಟಕದ ತಾಲೀಮಿಗೆ ತೊಡಗಿಸಿಕೊಂಡೆವು. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ನಾನು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿದ್ದಾಗ ಚಂದ್ರಶೇಖರ ಕಂಬಾರರ "ಹುಲಿಯ ನೆರಳು" ನಾಟಕವನ್ನು ಮಾಲತೇಶ ಬಡಿಗೇರ ಅವರಿಂದ ನಿರ್ದೇಶನ ಮಾಡಿಸಿ ಕಲಬುರಗಿ ಶಹರದಲ್ಲಿ ಪ್ರದರ್ಶನ ಮಾಡಿದ್ದ ನೆನಪು ಹಚ್ಚ ಹಸಿರಾಗಿತ್ತು. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಪ್ರಾಂತ್ಯ ಮಾತ್ರವಲ್ಲದೆ ಮಹಾರಾಷ್ಟ್ರದ ವಿದರ್ಭದ ಪುಣೆ ಪ್ರಾಂತ್ಯದಲ್ಲಿ ಜರುಗುವ ಪ್ರತಿಗಂಧರ್ವ ನಾಟಕದ ಜೀವನ ಕಥನಗಳನ್ನು ಅದೇ ಪ್ರಾಂತ್ಯ ಫಾಸಲೆಯ ಅರ್ಥಾತ್ ಅಂದಿನ ಮರಾಠಿಗರ ಮಾತಲ್ಲಿ ದಕ್ಷಿಣ ಮಹಾರಾಷ್ಟ್ರ ಎಂದು ಕರೆಯಲಾಗುತ್ತಿದ್ದ ಅವತ್ತಿನ ಧಾರವಾಡ ಜಿಲ್ಲೆಗೆ ಸೇರಿದ ಮಾಲತೇಶ ಬಡಿಗೇರ ನಿರ್ದೇಶನ ಮಾಡುವುದು ಸೂಕ್ತ ಎನಿಸಿತು. ಅಷ್ಟಕ್ಕೂ ನಾಟಕಕಾರ ರಾಜಪ್ಪ ದಳವಾಯಿ ಅಭಿಮತವೂ ಅದೇ ಆಗಿತ್ತು.

ಹಾಗಂತಲೇ ಬಡಿಗೇರ ಮಾಲತೇಶ ಅವರನ್ನು ಆಯ್ಕೆ ಮಾಡಿಕೊಂಡೆ. ಬಡಿಗೇರ ನೀನಾಸಂ ಗರಡಿಯಲ್ಲಿ ಸಾಮು ತೆಗೆದವರು. ಆದರೆ "ಅವರಿಗೆ ಕಂಪನಿ ನಾಟಕಗಳ ಗೊತ್ತು ಗುರಿಗಳು ಗೊತ್ತಿಲ್ಲ. ವೃತ್ತಿರಂಗದ ಪರಿಚಯವಿಲ್ಲದ ಅವರನ್ನೇಕೆ‌ ಆಯ್ಕೆ ಮಾಡಿಕೊಂಡಿರೆಂದು" ನಾಟಕ ಕಂಪನಿಗಳ ಅನೇಕರ ಅಪಸ್ವರಗಳಿಗೆ ನಿತ್ಯವೂ ಸಮಜಾಯಿಷಿ ನೀಡಿ ನೀಡಿ ಸಾಕಾಯ್ತು. "ಪ್ರತಿಗಂಧರ್ವದಂತಹ ಹೊಸ ನಾಟಕ ಯಾಕ ತಗೊಂಡ್ರಿ.? ಯಾವುದಾದರೂ ನಮ್ಮ ಕಂಪನಿಗಳ ಹಳೇ ನಾಟಕ ತಗೋಬೇಕಿತ್ತು"ಎಂದು ಪೀಡಿಸಿದವರನೇಕರು. "ಆಧುನಿಕ ರಂಗಭೂಮಿ ನಿರ್ದೇಶಕರ ಬದಲು ನಮ್ಮ ಕಂಪನಿ ಮಾಲೀಕರಿಂದ ನಿರ್ದೇಶನ ಮಾಡಿಸಬೇಕಿತ್ತೆಂದು" ಕೆಲವರು ಪ್ರತಿರೋಧಿಸಿದರು.

ಹೀಗೆ ಯಾವತ್ತೂ ಒತ್ತರಿಸಿ ಬರುವ ಪ್ರತಿಕ್ರಿಯೆಗಳನ್ನು ಸಮಚಿತ್ತದಿಂದಲೇ ಸ್ವೀಕರಿಸಿ ಸ್ವಾಸ್ಥ್ಯ ಚಿತ್ತದ ಗಟ್ಟಿ ನಿರ್ಧಾರಕ್ಕೆ ಬರುವುದು ನನ್ನ ಜಾಯಮಾನ. ನಾಟಕ ಕಂಪನಿಗಳ ತವರೂರು ಗದಗ ‌ಮೂಲದ ‌ಮಾಲತೇಶ ಮೂಲತಃ ವೃತ್ತಿ ರಂಗ ಪರಂಪರೆಯ ಪ್ರಭಾವಕ್ಕೊಳಗಾದವರು. ತಮ್ಮೂರ ಕಡೆಯ ಹಳ್ಳಿಗಳ ಕಂಪನಿ ಶೈಲಿಯ ನಾಟಕಗಳನ್ನು ನೋಡಿ ಬೆಳೆದವರು.‌ ಅಷ್ಟಲ್ಲದೇ ಇತ್ತೀಚೆಗೆ ಕೆ. ಎನ್. ಸಾಳುಂಕೆ ಅವರ ''ತಾಳಿಯ ತಕರಾರು" ಅರ್ಥಾತ್ ಕಿವುಡ ಮಾಡಿದ ಕಿತಾಪತಿ ಎಂಬ ವೃತ್ತಿಪರ ನಾಟಕವನ್ನು ಸಾಣೇಹಳ್ಳಿಯ ಶಿವಸಂಚಾರಕ್ಕೆ ಯಶಸ್ವಿಯಾಗಿ ಕಟ್ಟಿಕೊಟ್ಟವರು. ಈ ಎಲ್ಲ ಸಾತ್ವಿಕ ಪುರಾವೆಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿದವು. ಅಷ್ಟಕ್ಕೂ ಅರ್ಧ ಶತಮಾನ ಕಾಲ ನಾನು ಮಾಡಿದ ವೃತ್ತಿ ರಂಗಭೂಮಿಯ ಅಧ್ಯಯನ ‌ಮತ್ತು ಅನುಭವ ಸದಾ ಅನುಗಾಲದ ಸನ್ಮಿತ್ರನಂತೆ ನನ್ನೊಂದಿಗೆ ನಿತಾಂತವಾಗಿರುತ್ತದೆ. ಈ ಎಲ್ಲ ರಂಗಸಾಧ್ಯತೆಗಳೊಂದಿಗೆ ನಿರ್ದೇಶಕನ ಆಯ್ಕೆ ಮಾಡಿಕೊಂಡೆ.

ಅಕ್ಟೋಬರ್ ಹದಿಮೂರರಂದು ಪ್ರತಿಗಂಧರ್ವ ನಾಟಕದ ಕಥೆಪೂಜೆ ಮಾಡಿಯೇ ಬಿಟ್ಟೆವು. ದಳವಾಯಿ ರಾಜಪ್ಪ ನಡೆಸಿಕೊಟ್ಟ ಭಾವಪೂರ್ಣ ರೀಡಿಂಗ್ ನಮ್ಮ ಕಲಾವಿದರನ್ನು ಮಂತ್ರಮುಗ್ಧ ಮಾಡಿತು. ಕಲಾವಿದೆ ಶೃತಿರಾಜ್ ಭಾವುಕಳಾಗಿ ಅವಳಿಂದ ಮಾತೇ ಹೊರಡದಾದವು. ಪ್ರತಿಗಂಧರ್ವ ಪ್ರತಿಯೊಬ್ಬ ಕಲಾವಿದರ ಮನಸು ಗೆದ್ದಿತು. ನಾಟಕದ ಚೋಪಡಿಗಳನ್ನು ಎಲ್ಲಾ ಕಲಾವಿದರಿಗೆ ಝೆರಾಕ್ಸ್ ಮಾಡಿಕೊಟ್ಟೆವು. ಎಲ್ಲರೂ ಒಂದೆರಡು ಬಾರಿ ಓದುವ ಮೂಲಕ ಪ್ರತಿಗಂಧರ್ವ ನಾಟಕದ ಒಟ್ಟು ಕಥಾಹಂದರ ಮನವರಿಕೆ ಮಾಡಿಕೊಂಡರು. ಮರುದಿನ ಪಾತ್ರಗಳ ಹಂಚಿಕೆ ಮಾಡಿಕೊಡಲಾಯಿತು. ಆಗ ನೋಡಿ ಅವರವರ ಪಾತ್ರದಾರಿಕೆಯ ಜವಾಬ್ದಾರಿ ಜಾಗೃತಗೊಂಡಿತು. ಕೆಲವೊಬ್ಬರಿಗೆ ಎರಡು, ಮೂರು ಸಣ್ಣ ಸಣ್ಣ ಪಾರ್ಟುಗಳ ಹೊಣೆ. ಅದಕ್ಕೆ ಎಲ್ಲಾ ‌ಕಲಾವಿದರು ಸಹಕರಿಸಿದರು. ಕೇವಲ ಒಂದೇ ಒಂದು ತಿಂಗಳಲ್ಲಿ ನಾಟಕ ಸಿದ್ಧವಾಯಿತು.

ಬಹುಪಾಲು ದಕ್ಷಿಣ ಕರ್ನಾಟಕದ ಭಾಷೆಯ ಪ್ರಖರತೆ ಗೋಹರಬಾಯಿ ಮತ್ತು ಬಾಲಗಂಧರ್ವ ಬಯೋಪಿಕ್ ಜೋಡಿ ಕಥನಕ್ರಿಯೆಗೆ ಹೆಚ್ಚು ಪೂರಕವಾಗಿರಲಿಲ್ಲ. ಇದನ್ನು ಮನಗಂಡೇ ನಿತ್ಯವೂ ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಹುಡುಕಿ ಹುಡುಕಿ ಸೇರಿಸುವ, ಸರಿಪಡಿಸುವ ಮುಖ್ಯ ಕೆಲಸ ನನ್ನದಾಯಿತು.‌ ಧ್ವನಿಪೂರ್ಣವಾದ ಸ್ವರೋಚ್ಛಾರ ಕಲಿಕೆ ಬಹಳೇ ಉಪಯುಕ್ತವೆನಿಸಿತು. ಇದು ನಿರ್ದೇಶಕ ಮಾಲತೇಶ ಸದಾಶಯವೂ ಆಗಿತ್ತು. ಅದರ ಜತೆಯಲಿ ತುಂಬಾ ವರುಷಗಳ ಹಿಂದೇನೇ ಕಸ್ತೂರಿ ಡೈಜೆಸ್ಟ್ ಮತ್ತು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಗೊಂಡ ಗೋಹರಬಾಯಿ ಕುರಿತಾದ ಬರಹಗಳು ನನ್ನ ನೆನಪಿನಾಳದ ಜೀವಕೋಶಗಳಂತೆ ನಾಟಕ ಕಟ್ಟಲು ಮಾಲತೇಶ ಬಡಿಗೇರ ಅವರಿಗೂ ಹೆಚ್ಚು ನೆರವಾದವು. ನಿಜಕ್ಕೂ ಮಾಲತೇಶ ಸಹೃದಯ ನಿರ್ದೇಶಕ. ಸಹೃದಯತೆಯಿಂದ ಆಲಿಸುವ ವಾತ್ಸಲ್ಯಮಯಿ.

ಶತಮಾನದಷ್ಟು ಹಿಂದೆಯೇ ಗತಿಸುವ ಭಾರತೀಯ ವೃತ್ತಿ ರಂಗಭೂಮಿಯ ಹಾಡು ನಟ ನಟಿಯರ ಜೀವನ ಕಥನದ ಸುತ್ತ ಭಾವಚೈತನ್ಯದ ಬೆಳಕು ಸ್ಫುರಿಸುವುದೇ ಈ ನಾಟಕ. ಎರಡು ಭಿನ್ನ ಧರ್ಮ, ಜಾತಿ, ಮತ ಮತ್ತು ರಾಜ್ಯಗಳ ನಡುವಿನ‌ ಸಾಂಸ್ಕೃತಿಕ ಸಾಮರಸ್ಯ ಮತ್ತು ಸಂಘರ್ಷಗಳ ಅನಾವರಣ. ಇದನ್ನು ರಂಗಭೂಮಿ ಮೇಲೆ ಸಾದೃಶ್ಯಗೊಳಿಸಲು ಬಡಿಗೇರ ಸಾಕಷ್ಟು ಶ್ರಮಿಸಿದರು. ನಿತ್ಯವೂ ಬಗೆ ಬಗೆಯ ಚರ್ಚೆಗಳು. ಒಮ್ಮೊಮ್ಮೆ ನಮ್ಮಿಬ್ಬರ ರಾತ್ರಿಯ ಸಂವಾದಗಳು ತಾರಕಕ್ಕೇರಿ "ನೀವೇ ಮಾಡಿಕೊಳ್ಳಿ ನಾನು ಹೋಗಿ ಬಿಡ್ತೇನೆ" ಎನ್ನುವ ಘಟ್ಟ ತಲುಪಿದರೂ ಮಳ್ಳೆ ಮರುದಿನ ಪುನಃ ತಾಲೀಮಿನಲ್ಲಿ ಇಬ್ಬರ ವಿಚಾರಗಳು ಸಮನ್ವಯದ ರೂಹು ತಾಳುತ್ತಿದ್ದವು. ತಾತ್ವಿಕ ಭಿನ್ನಮತದ ನಡುವೆ ರಂಗಸಾತ್ವಿಕತೆ ಮರುವಿನ್ಯಾಸ ಪಡೆದುಕೊಳ್ಳುತ್ತಿತ್ತು. ಪ್ರಾಯಶಃ ಇಂತಹ ನಾಟಕವನ್ನು ಕಟ್ಟುವಾಗ ಈ ಬಗೆಯ ಸವಾಲುಗಳು ಕಂಡುಕೊಳ್ಳುವ ಪರಿಹಾರ ಅದಾಗಿರಬಲ್ಲದು.

ಶತಮಾನದಷ್ಟು (೧೯೨೮) ಹಿಂದೆ ಗದಗ ಪಟ್ಟಣದ ಪ್ರಸಿದ್ಧ ವ್ಯಾಪಾರಿ ಯರಾಸಿ ಭರಮಪ್ಪನವರ ಶ್ರೀ ವಾಣಿ ವಿಲಾಸ ನಾಟಕ ಕಂಪನಿಯು ಹಂದಿಗನೂರ ಸಿದ್ರಾಮಪ್ಪ, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ಮನ್ಸೂರ, ಮಧ್ವರಾಜ ಉಮರ್ಜಿ ಅವರಂತಹ ಮಹಾನ್ ಕಲಾವಿದರು, ಕಂದಗಲ್ ಹಣಮಂತರಾಯರಂತಹ ನಾಟಕಕಾರರ ರಂಗಸ್ಥಳ ಆಗಿತ್ತು. ಅಂತಹ ಅನನ್ಯ ರಂಗಸಂಸ್ಕೃತಿಯ ನಡುವೆ ಅರಳಿದ ಅಭಿಜಾತ ಕಲಾವಿದೆಯರೆಂದರೆ ಬೀಳಗಿಯ ಗೋಹರಬಾಯಿ - ಅಮೀರಬಾಯಿ ಸಹೋದರಿಯರು. ಅತ್ತ ಮಹಾರಾಷ್ಟ್ರದ ಬಾಲಗಂಧರ್ವರ "ಗಂಧರ್ವ ಸಂಗೀತ ನಾಟಕ ಮಂಡಳಿ" ಅಂತಹದೇ ಅನನ್ಯತೆ ಪಡೆದ ನಾಟಕ ಮಂಡಳಿ ಅದಾಗಿತ್ತು.

ಹೀಗೆ ಭಾರತೀಯ ವೃತ್ತಿ ರಂಗಭೂಮಿಯ ನಾಟಕ ಕಂಪನಿ ಮತ್ತು ಕಲಾವಿದರ ಬದುಕಿನ ಸಾದ್ಯಂತ ಸಂಗತಿಗಳ ಮೇಲೆ ಚೆಂದನೆಯ ಬೆಳಕು ಚೆಲ್ಲುವ ಚಾರಿತ್ರಿಕ ನಾಟಕ.‌ ಅದು ತನ್ನ ಪರಿಣಾಮಕಾರಿ ಪ್ರದರ್ಶನದ ಮೂಲಕ ಗೆಲುವು ಸಾಧಿಸಿತು. ಪ್ರೇಕ್ಷಕ ಪ್ರಭುಗಳ ಮನಸು ಗೆದ್ದಿತು. ಖರೇವಂದ್ರ ಎಲ್ಲ ಕಲಾವಿದರು ಚೆನ್ನಾಗಿಯೇ ಅಭಿನಯಿಸಿದರು ಎಂದರೆ ಹೆತ್ತವರಿಗೆ ಹೆಗ್ಗಣ ಮುದ್ದೆಂದು ತಪ್ಪು ತಿಳಿಯಬಾರದೆಂದು ಹೇಳುವೆ. ಆದರೆ ನೆರೆದ ನೂರಾರು ಮಂದಿ ಪ್ರೇಕ್ಷಕರೇ ನಾಟಕದ ಗೆಲುವು ಕೊಂಡಾಡಿದ್ದು ಮಾತ್ರ ಸುಳ್ಳಲ್ಲ. ಇದರಲ್ಲಿ ಹಾಸ್ಯವೇ ಇಲ್ಲ ಎಂದು ತಕರಾರಿನ ಸಣ್ಣ ಸ್ವರವೂ ಕೇಳಿಬಂದಿದೆ. ಹಾಗೇನೇ ನಾಟಕದ ನಾವು ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳುವುದಿದೆ. ಇದನ್ನು ಸಹಿತ ವಿನಮ್ರವಾಗಿ ಒಪ್ಪಿಕೊಳ್ಳುವೆ.

ರಂಗಭ್ಯಾಸ ಅರ್ಥಾತ್ ರಿಹರ್ಸಲ್ ನಡೆಯುತ್ತಿದ್ದಾಗಲೇ ಮೆಚ್ಚುಗೆಯ ಸುರಿಮಳೆ. ಅದರಲ್ಲೂ ವಿಶೇಷವಾಗಿ ನಾಟಕ ಕಂಪನಿಯ ಮಾಲಿಕ ಮತ್ತು ನಟರಾಗಿರುವ ಬಸವರಾಜ ಬೆಂಗೇರಿ ಪ್ರತಿಕ್ರಿಯೆ ಬರೆದು ಹೇಳಿದ್ದು ಹೀಗಿದೆ : ಮೂಲಭೂತವಾದಿ ಮಠಾಧೀಶನೋರ್ವ "ಕೋಮು ಸಾಮರಸ್ಯ, ಸೌಹಾರ್ದತೆ, ಜಾತ್ಯತೀತ ಎಂದು ಮಾತಾಡುವವರನ್ನು ಹಿಡಿದು ಹೊಡೆಯಬೇಕು." ಎಂದು ಹೇಳಿಕೆ ನೀಡಿರುವ ಸಂದರ್ಭದಲ್ಲಿ ದಾವಣಗೆರೆ ರಂಗಾಯಣ "ಪ್ರತಿ ಗಂಧರ್ವ" ಎಂಬ ನಾಟಕ ಆಯ್ಕೆ ಮಾಡಿಕೊಂಡಿರುವುದು ಔಚಿತ್ಯ ಪೂರ್ಣವಾಗಿದೆ. ಇಂಥ ಕ್ಲಾಸಿಕ್ ನಾಟಕವನ್ನು ಸರ್ಕಾರ ರಾಜ್ಯಾದ್ಯಂತ ಪ್ರದರ್ಶನ ಮಾಡಲು ಸೂಕ್ತ ನೆರವು ಮಾಡಿಕೊಡಬೇಕಿದೆ ಎಂದಿದ್ದಾರೆ. ಹಾಗೆಯೇ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್. ಬಿ. ಶೇಖ ಮಾಸ್ತರ ವಿಜಯಪುರ ಶಹರದಲ್ಲಿ ಪ್ರತಿ ಗಂಧರ್ವ ನಾಟಕದ ಒಂದೆರಡು ಪ್ರದರ್ಶನಗಳನ್ನು ಅವಶ್ಯವಾಗಿ ಮಾಡಿಸಲು ಮುಂದೆ ಬಂದಿದ್ದಾರೆ. ಅಂದಹಾಗೆ ಇದೇ ಡಿಸೆಂಬರ್ ೧೯ರಂದು ಮೈಸೂರಿನ ನಿರಂತರ ನಾಟಕೋತ್ಸವದಲ್ಲಿ ಪ್ರತಿಗಂಧರ್ವ ಪ್ರದರ್ಶನವಿದೆ.

 

MORE NEWS

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...

ಹರಿಹರ ಬಸ್ ನಿಲ್ದಾಣದಲ್ಲಿ ಕಳ್ಳರು ದೋಚಿದ ಪರ್ಸಿನಲ್ಲಿ ಇದ್ದದ್ದು ಹಣ ಮಾತ್ರವಲ್ಲ.

28-11-2025 ಬೆಂಗಳೂರು

"ದಾವಣಗೆರೆಯಲ್ಲಿ ಇಳಿದಾಗ ರಾತ್ರಿ ಎರಡೂವರೆ. ಆಟೋಕ್ಕೆ ಹೋಗಲೂ ಕಾಸಿಲ್ಲ. ಅದ್ಯಾರೋ ಪುಣ್ಯಾತ್ಮನಿಗೆ ಇರುವ ಸ್ಥಿತಿ ...