"ಪ್ರಕೃತಿ ಸಹಜವಾದ ಕಾಮಕ್ಕೆ ಎರಡು ಮುಖಗಳು ಒಂದು ವಿಕೃತಿ ಅಷ್ಟಾವಂಕ ಸ್ವರೂಪದ್ದು, ಇನ್ನೊಂದು ಸಂಸ್ಕೃತಿ ಯಶೋಧರ ರೂಪದ್ದು. ಕಾಮ ನಮ್ಮ ದೇಹದಲ್ಲಿ ನಾವು ಅರಿವಿನಿಂದ ಪರವೆಗೆ ಜಾರುವವರೆಗೂ ಜಾಗೃತವಾಗಿದ್ದು, ಕೊನೆಗೆ ನಮ್ಮ ದೇಹಾಂತ್ಯದೊಡನೆ ಸಾಯುತ್ತದೆ. ಕಾಮದ ಎರಡೂ ರೂಪಗಳನ್ನು ಈ ಕಥಾಸಂಕಲನದ ಎಂಟು ಕಥೆಗಳಲ್ಲಿ ಲೇಖಕರು ಬಹು ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ," ಎನ್ನುತ್ತಾರೆ ಭವ್ಯಶ್ರೀ ಕೆಯ್ಯೂರು. ಅವರು ಹಿರಿಯ ಲೇಖಕ ಎನ್.ಆರ್. ನಾಯಕ ಅವರ ‘ಅಷ್ಟಾವಂಕ-ಯಶೋಧರ’ ಕಥಾಸಂಕಲನಕ್ಕೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
ಅಷ್ಟಾವಂಕ-ಯಶೋಧರ ಹೆಸರೇ ಹೇಳುವ ಹಾಗೆ ಇದೊಂದು ವಿಭಿನ್ನ ಕಥಾಸಂಕಲನ. ಹಿರಿಯ ಲೇಖಕ ಎನ್.ಆರ್. ನಾಯಕ ಅವರ ತೊಂಬತ್ತನೆಯ ಕೃತಿಯಾಗಿದೆ. ಈ ಸಂಕಲನದಲ್ಲಿ ಒಟ್ಟು 8 ಕಥೆಗಳಿದ್ದು, ಪ್ರತೀ ಕಥೆಯು ಮನುಷ್ಯನ ಮೂಲಭೂತ ಪ್ರವೃತ್ತಿಯಾದ ಕಾಮಕ್ಕೆ ಮೂಲವಾದ ಪ್ರೇಮದ ವಿವಿಧ ಆಯಾಮಗಳ ಸುತ್ತ ಈ ಕಥೆಗಳು ಸುತ್ತುತ್ತಿದ್ದರೂ, ಯಾವೂದು ಅತಿಯೆನಿಸದಂತೆ ನಯವಾಗಿ, ಬಹಳ ಸುಂದರವಾಗಿ ಓದುಗನನ್ನು ಓದಿಸಿಕೊಂಡು ಹೋಗುತ್ತದೆ.
‘ನಾನು ಕೊಂದವಳು’
ವೈದೇಹಿ ಮತ್ತು ಮಾಸ್ತರರ ಪ್ರೇಮದಿಂದ ಶುರುವಾಗುವ ಕಥೆಯು ಒಂದು ಹೆಣ್ಣು ಸಮಾಜದಲ್ಲಿ ಎಷ್ಟು ಕಷ್ಟ ಪಟ್ಟರು ಆಕೆ ಅಬಲೆಯಾಗಿ ಉಳಿದಿರುತ್ತಾಳೆ. ಗಂಡು ಮತ್ತು ಹೆಣ್ಣು ತನ್ನ ಯೌವನದಲ್ಲಿ ಮಾಡುವ ತಪ್ಪುಗಳಿಗೆ ಜೀವನ ಪರ್ಯಂತ ಶಿಕ್ಷೆ ಅನುಭವಿಸಿಕೊಂಡು ಕಷ್ಟದ ಜೀವನ ಸಾಗಿಸಬೇಕಾಗುತ್ತದೆ. ಹೀಗೆ ಈ ಕತೆ ಇಂದಿನ ಸಮಾಜದಲ್ಲಿ ಕಾಣುವ ವಾಸ್ತವ ಸಂಗತಿಗಳ ಕುದಿ ಬಿಂದುಗಳಾಗಿವೆ .
‘ಅನರ್ಥ’
ಇಲ್ಲಿ ಅಮಾಯಕ ಹುಡುಗನ ಮೇಲಿನ ದಬ್ಬಾಳಿಕೆ ಮತ್ತು ಇಂದಿನ ಸಮಾಜದ ನೈಜತೆಯ ಅನಾವರಣ ಮಾಡಲಾಗಿದೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ನಡುವೆ ಇರುವ ವ್ಯತ್ಯಾಸವನ್ನು ಲೇಖಕರು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮನುಷ್ಯನ ವ್ಯಕ್ತಿತ್ವವವನ್ನು ತೊಡುವ ಬಟ್ಟೆ ಅಥವಾ ದೃಷ್ಟಿಯ ಮೂಲಕ ಅಳೆಯಬಾರದು ಹಾಗೂ ಮೇಲು-ಕೀಳು ಎಂಬ ಭಾವನೆಗಳು ನೋಡುವ ದೃಷ್ಟಿಯಲ್ಲಿ ಇರಬಾರದು. ಹೀಗೆ ಅನೇಕ ವಿಚಾರಗಳನ್ನು ಈ ಕಥೆಯು ತಿಳಿಸಿಕೊಡುತ್ತದೆ.
‘ಕೊಂದವರು ಯಾರು?’
ನಿಷ್ಕಲ್ಮಶವಾದ ಪ್ರೀತಿಗೆ ಶ್ರೀಮಂತ-ಬಡವ ಎಂಬ ಪರದೆಗಳು ಬಂದರೆ ನಂತರ ಆ ಪ್ರೀತಿ ಶಾಶ್ವತವಲ್ಲ ಎಂಬುದನ್ನು ಈ ಕಥೆಯು ತಿಳಿಸಿಕೊಡುತ್ತದೆ. ಚೈತ್ರಳ ನಿಷ್ಕಲ್ಮಶವಾದ ಪ್ರೀತಿಗೆ ಆಕೆಯ ಶ್ರೀಮಂತಿಕೆ ಮುಳುವಾಯಿತು. “ನಾನು ನಿನ್ನನು ಪ್ರೀತಿಸಿದ್ದು ನಿನ್ನ ರೂಪ, ಯೌವ್ವನ, ಅಧಿಕಾರ ನೋಡಿ ಅಲ್ಲ. ಬದಲಾಗಿ ನೀನು ನನ್ನನು ಬಾಲ್ಯದಿಂದಲೇ ಅರಗಿಣಿಯಂತೆ ನೋಡಿಕೊಂಡಿದ್ದಿ,” ಹೀಗೆ ಕೊನೆಯಾಗುವ ಕೊನೆಯ ಸಾಲುಗಳು ಕಣ್ಣಂಚಿನಲ್ಲಿ ನೀರು ತರಿಸುತ್ತದೆ ಹಾಗೂ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತವೆ.
‘ಮನಸಿಜನ ಮಾಯಾ ಜಾಲ’
ಈ ಕಥೆಯನ್ನು ಓದಿದಾಗ ಜನ್ನ ಮಹಾಕವಿಯ ಅನಂತನಾಥ ಪುರಾಣದ ಚಂಡಶಾಸನ ಕಥೆ ಕಣ್ಮುಂದೆ ಹಾಗೆ ಸುಳಿದು ಹೋದ ಅನುಭವ ನೀಡಿತು.
‘ಮೌನ ತಪೋಸಿದ್ಧಿ’
ದೇವಿದಾಸ ಬಾಲ್ಯದಿಂದಲೂ ಅಂತರ್ಮುಖಿ. ಬೇರೆಯವರ ಜೊತೆ ಬೆರೆಯುವ ಸ್ವಭಾವ ಅವನದಲ್ಲ, ಹೀಗೆ ಪ್ರಾರಂಭವಾಗುವ ಕಥೆಯು ನಾಜುಕಾಗಿ ಓದಿಸಿಕೊಂಡು ಹೋಗುತ್ತದೆ. ಚಂದ್ರಿಕಾ ಮತ್ತು ದೇವಿದಾಸ್ ಅವರ ಗುರು ಶಿಷ್ಯ ಸಂಬಂಧವು ಪ್ರೇಮಾಂಕುರ ಗೊಳ್ಳುವಾಗ ಅದೇನೋ ಖುಷಿ. ಪ್ರೀತಿ ಸಿಗದೇ ಹೋಗುವಾಗ ವ್ಯಕ್ತಿಯು ಅನುಭವಿಸುವ ಯಾತನೆ ಮತ್ತು ನೋವುಗಳನ್ನು ಲೇಖಕರು ಸುಂದರವಾಗಿ ರೂಪುಗೊಳಿಸಿದ್ದಾರೆ.
‘ಕಣ್ಣು ತೆರೆಯಿತು, ಸತ್ಯಕಾಮ, ಜೋಡಿ ವಾಸ್ತವ್ಯ’
ಈ ಕಥೆಗಳನ್ನು ಓದಿದಾಗ ನನಗೆ ಅನ್ನಿಸಿದ್ದೂ ಎಲ್ಲರೊಳಗೂ ವಿಕೃತಿಯ ಅಷ್ಟಾವಕ್ರನೂ, ಸಂಸ್ಕೃತಿಯ ಯಶೋಧರೆಯೂ ಸಮ ಪ್ರಮಾಣದ ಮಿಶ್ರಣದಂತೆ ಇದ್ದೇ ಇರುತ್ತಾರೆ. ಪ್ರಕೃತಿ ಸಹಜವಾದ ಕಾಮಕ್ಕೆ ಎರಡು ಮುಖಗಳು, ಒಂದು ವಿಕೃತಿ ಅಷ್ಟಾವಂಕ ಸ್ವರೂಪದ್ದು, ಇನ್ನೊಂದು ಸಂಸ್ಕೃತಿ ಯಶೋಧರ ರೂಪದ್ದು. ಕಾಮ ನಮ್ಮ ದೇಹದಲ್ಲಿ, ನಾವು ಅರಿವಿನಿಂದ ಪರವೆಗೆ ಜಾರುವವರೆಗೂ ಜಾಗೃತವಾಗಿದ್ದು, ಕೊನೆಗೆ ನಮ್ಮ ದೇಹಾಂತ್ಯದೊಡನೆ ಸಾಯುತ್ತದೆ. ಕಾಮದ ಎರಡೂ ರೂಪಗಳನ್ನು ಈ ಕಥಾಸಂಕಲನದ ಎಂಟು ಕಥೆಗಳಲ್ಲಿ ಲೇಖಕರು ಬಹು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
-ಭವ್ಯಶ್ರೀ ಕೆಯ್ಯೂರು
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.