ನಟಿ ಉಮಾಶ್ರೀ ನಟನೆಯ ‘ಶರ್ಮಿಷ್ಠೆ’: ಒಂದು ನೋಟ 


"ಕಾರ್ನಾಡರ ನಾಟಕದಲ್ಲಿ ದುಃಖಾಂತ್ಯವಿದೆ. ಇಲ್ಲಿ ಶರ್ಮಿಷ್ಠೆ ನಿಮಿತ್ತವಾಗಿ, ಯಾಯಾತಿಯೂ ದೇವಯಾನಿಯೂ ಸಹಜವಾಗಿ ತಂತಮ್ಮ ಲೋಪದೋಷಗಳನ್ನು ಒಪ್ಪಿಕೊಂಡು ಜೀವನವನ್ನು ನೇರ್ಪುಗೊಳಿಸಲು ಇನ್ನೊಂದು ಅವಕಾಶ ಪಡೆಯುತ್ತಾರೆ. ಮಾಗಿದ ಮೂವರು ಹಿರಿಯರೂ ಸಹಜವಾಗಿ ವಾನಪ್ರಸ್ಥಕ್ಕೆ ತೆರಳುತ್ತಾರೆ, ಮಕ್ಕಳಿಗೆ ನ್ಯಾಯ ಸಲ್ಲುತ್ತದೆ. ಪುರು ಚಿತ್ರಲೇಖೆ ಮುನ್ನೆಲೆಗೆ ಬರುತ್ತಾರೆ. ಅಂತೂ ಪ್ರಕೃತಿಧರ್ಮ ಗೆಲ್ಲುತ್ತದೆ," ಎನ್ನುತ್ತಾರೆ ಅಹಲ್ಯಾ ಬಲ್ಲಾಳ. ಅವರು ನಟಿ ಉಮಾಶ್ರೀ ಅಭಿನಯದ ಬೇಲೂರು ರಘುನಂದನ್ ರಚಿತ ‘ಶರ್ಮಿಷ್ಠೆ’ ನಾಟಕ ಕುರಿತು ಬರೆದ ಒಳ ನೋಟ.

ಮಾನವನ ಮಹತ್ವಾಕಾಂಕ್ಷೆ, ಅತಿ ಲೋಲುಪತೆ, ಯೌವನ/ಅಧಿಕಾರದ ದಾಹ, ಯುದ್ಧದವರೆಗೂ ಅವ್ಯಾಹತವಾಗಿ ಸಾಗುವ ಸ್ವಮೋಹ, ಅಹಂಕಾರ ಇವೆಲ್ಲವೂ ಇತಿಹಾಸದುದ್ದಕ್ಕೂ ನಡೆಯುತ್ತಲೇ ಬಂದ ಸಂಗತಿಗಳು. ಆಧುನಿಕ ಯುಗದಲ್ಲಿ ಒಂದೆಡೆ ವಿಜ್ಞಾನಾದಿ ಕ್ಷೇತ್ರಗಳ ವಿಕಾಸವಾದರೆ ಇನ್ನೊಂದೆಡೆ ಭಾವನೆಗಳಿಗೆ ಅತಿಯಾದ ಪ್ರಾಮುಖ್ಯ ಕೊಟ್ಟ ಕಾರಣ ಉಂಟಾದ ಬಗೆಬಗೆಯ ವಿಪತ್ತುಗಳು ಎದುರಾಗುತ್ತಲೇ ಇವೆ. ಅಥವಾ ಇಂದು ಇಂಥವು ಹೆಚ್ಚು ಹೆಚ್ಚು ಗೋಚರವಾಗುತ್ತವೆ ಎನ್ನಬಹುದೇನೋ. ಹೀಗಿರುವಾಗ ಮಾನವನ ಅಭಿವ್ಯಕ್ತಿಯಲ್ಲಿಯೂ ಇದರ ಪ್ರತಿಫಲನ ಮೂಡುವುದು ಸಹಜ. ಇಂದಿನ ವಿವಿಧ ಆಯಾಮಗಳ, ತರಹೇವಾರಿ ಕೇಂದ್ರಗಳ, ಸಂಕೀರ್ಣ ಮುಖಗಳ ಸತ್ಯಗಳನ್ನು ತಮ್ಮ ಕೃತಿಯಲ್ಲಿ ಸೆರೆಹಿಡಿಯುವುದು ರಚನೆಕಾರರ ಮುಂದಿರುವ ಬಹು ದೊಡ್ಡ ಸವಾಲು.

ಕನ್ನಡ ನಾಟಕಗಳಲ್ಲಿ ಪುರಾಣ, ಇತಿಹಾಸದ ಸಂಗತಿಗಳತ್ತ ಕವಿಗಳು ಕಾಲಕಾಲಕ್ಕೆ ಹೊಸ ನೋಟ ಬೀರುತ್ತಾ ಬಂದಿದ್ದಾರೆ. ಈಗೀಗ ಅನುಕೂಲದ ದೃಷ್ಟಿಯಿಂದ ಏಕವ್ಯಕ್ತಿ ರಂಗಪ್ರಯೋಗಗಳೂ ಜನಪ್ರಿಯವಾಗುತ್ತಿವೆ. ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕ, ಸಂಘಟಕ, ರಂಗಕರ್ಮಿ ಡಾ. ಬೇಲೂರು ರಘುನಂದನರು ಏಕವ್ಯಕ್ತಿ ರಂಗಪ್ರಸ್ತುತಿ " ಶರ್ಮಿಷ್ಠೆ" ಏನು ಹೇಳಹೊರಟಿದ್ದಾಳೆ, ತನ್ನೊಳಗನ್ನು ಹೇಗೆ ಪ್ರಸ್ತುತಪಡಿಸುತ್ತಾಳೆ ಎನ್ನುವುದು ರಂಗಲೋಲರಿಗೆ ಮತ್ತು ಸಾಹಿತ್ಯಪ್ರೇಮಿಗಳಿಗೆ ಆಸಕ್ತಿಯ ವಿಷಯವೇ ಆಗಿದೆ.

ಮಹಾಭಾರತದ ಯಯಾತಿ - ದೇವಯಾನಿ - ಶರ್ಮಿಷ್ಠೆ - ಪುರು ಇವರ ಕಥೆ ಕಾಲಾನುಸಾರಿಯಾಗಿ ಅನೇಕರಿಂದ ಮರುರೂಪ ಪಡೆದಿದೆ. ವಿ. ಎಸ್. ಖಾಂಡೇಕರವರು ಮರಾಠಿಯಲ್ಲಿ ರಚಿಸಿದ " ಯಯಾತಿ" ಕಾದಂಬರಿ ಹಲವು ನಿರೂಪಕರ ತಂತ್ರವನ್ನು ಬಳಸಿಕೊಳ್ಳುತ್ತದೆ. ಡಾ. ಗಿರೀಶ್ ಕಾರ್ನಾಡರು ನಾಟಕ ಪ್ರಕಾರದಲ್ಲಿ ಯಯಾತಿಯನ್ನು ಕನ್ನಡದಲ್ಲಿ ಕಾಣಿಸುತ್ತಾ, ಮಾನವನ ಹೊಣೆಗಾರಿಕೆಯನ್ನು ಕುರಿತು ಸಂಕೀರ್ಣ ಅಸ್ತಿತ್ವವಾದಿ ನೋಟಗಳನ್ನು ನೀಡುತ್ತಾರೆ. ಅವರು ಚಿತ್ರಿಸುವ ಮಹಿಳಾ ಪಾತ್ರಗಳು ಪ್ರಬಲ ಲಿಂಗಭೇದದ ಚೌಕಟ್ಟಿನಾಚೆಯ ವಿಚಾರವಂತಿಕೆಯನ್ನು ತೋರಿಸಿದರೂ ಅಂತಿಮವಾಗಿ ಪಿತೃಪ್ರಧಾನತೆಯ ಬೇಡಿಗಳನ್ನು ಕಿತ್ತೊಗೆಯುವುದರಲ್ಲಿ ಅಸಫಲರಾಗುತ್ತಾರೆ.

ಬೇಲೂರರ ಈ ನಾಟಕದಲ್ಲಿ ಶರ್ಮಿಷ್ಠೆಯೇ ಕೇಂದ್ರ ಬಿಂದು ಎಂಬುದು ನಿರೀಕ್ಷಿತವೇ. ಇದರ ಜೊತೆಗೆ ಅವಳು " ಪುರಾಣ ಮಹಾಕಾವ್ಯಗಳ ಭೂತದಲ್ಲಿ ಕಳೆದು ಹೋಗಿರುವ ವರ್ತಮಾನದ ಹೆಣ್ಣು, ಭವಿತವ್ಯದ ಕಣ್ಣು." ಲೇಖಕರು ರಂಗಾನುಭವಿ ನಿರ್ದೇಶಕರೂ ಆಗಿರುವುದರಿಂದ ರಚನೆಯುದ್ದಕ್ಕೂ ವಿವಿಧ ರಂಗತಂತ್ರ ಹಾಗೂ ಕ್ರಿಯೆಗಳನ್ನು ಸೇರಿಸಿಕೊಂಡು, ಪ್ರೇಕ್ಷಕರೊಂದಿಗೂ ಕೆಲವೆಡೆ ಸಂವಾದ ನಡೆಸುತ್ತಾ, ನೋಡುವ, ಕೇಳುವ ಅಥವಾ ಓದುವ ಆಸಕ್ತರಿಗೆ ತಮ್ಮ ಮಾತನ್ನು ತಲುಪಿಸುತ್ತಾರೆ. " ಇದು ಬೆಳಕು ಚೆಲ್ಲುವ / ಹಣತೆ ಮಾತ್ರವಲ್ಲ / ದುಃಖದ ದಾರಿಗೆ ಸಮಾಧಾನದ ತೋರಣ" ಎನ್ನುತ್ತಾಳೆ ಇಲ್ಲಿಯ ಮಾಗಿದ, ಸಮಾಧಾನದ ನಾಯಕಿ.

ಶರ್ಮಿಷ್ಠೆ ತನ್ನ ಬಾಲ್ಯದ ಗೆಳತಿಯೂ ಈಗಿನ ಸವತಿಯೂ ಆದ ದೇವಯಾನಿ, ಪತಿಯೂ ಪ್ರೇಮಿಯೂ ಆದ ಯಯಾತಿ, ಅಕ್ಕರೆಯ ಮಗ ಪುರು ಮತ್ತು ಅವನ ನವವಧು ಚಿತ್ರಲೇಖೆಯ ಪುತ್ಥಳಿಗಳ ಜೊತೆ ನಡೆಸುವ ಸಂವಾದದ ಮೂಲಕ ತನ್ನ ಜೀವನದ ಘಟನೆಗಳನ್ನು ಇಲ್ಲಿ ನಿರೂಪಿಸುತ್ತಾಳೆ. " ಮಬ್ಬು ಮಬ್ಬಾದವರ, ಛಿದ್ರಗೊಂಡವರ, ತಣ್ಣಗಿದ್ದೂ ಒಳಗೆ ಬೆಂದು ನೊಂದುಹೋದವರ, ಮನಸು ಮೆಚ್ಚಿದವರ , ದೇಹದ ಹುಚ್ಚು ಹತ್ತಿಸಿಕೊಂಡವರ, ಮೇಲು ಕೀಳಿನ ಕಾಲ್ತುಳಿತಕ್ಕೆ ನಲುಗಿದವರ" ಕಥೆಯನ್ನು ಕಾವ್ಯಾತ್ಮಕವಾಗಿ ಹೆಣೆಯುತ್ತಾ ಸಾಗುವ ದೃಶ್ಯಗಳು ಅಂದಿಗೂ ಇಂದಿಗೂ ಹೌದು ಹೌದೆನಿಸುವ ಅನೇಕ ಸಂಗತಿಗಳನ್ನು ಮುನ್ನೆಲೆಗೆ ತರುತ್ತವೆ; ಹೊಸ ಕಾಣ್ಕೆ ಸಿಗುತ್ತದೆ.

ಇಲ್ಲಿಯ ಕೇಂದ್ರ ಪಾತ್ರ ದೇವತೆಯೂ ಅಲ್ಲದ, ರಕ್ಕಸಿಯೂ ಅಲ್ಲದ, ಅಪ್ಪಟ ಮನುಷ್ಯಳು. ಸಹಜ ಭಾವನೆಗಳನ್ನು ಹೊಂದಿರುವ, ಅವುಗಳಿಗೆ ಸ್ಪಂದಿಸುವ, ಬಾಳಿನಲ್ಲಿ ಬಂದ ಏಳು ಬೀಳುಗಳನ್ನು ಎದುರಿಸುವ, ಕುಟುಂಬದ ಶ್ರೇಯವನ್ನೇ ಬಯಸುವ, ಸವತಿಯೂ ಸೇರಿದಂತೆ ಅದರ ಪ್ರತಿಯೊಬ್ಬ ಸದಸ್ಯರನ್ನೂ ಒಳಗೊಳ್ಳುತ್ತಾ, ತಾನು ಮಾಡಿದ ತಪ್ಪುಗಳನ್ನೂ ನಿವೇದಿಸಿಕೊಳ್ಳುತ್ತಾ, ಒಲವು ಮತ್ತು ಸಂಯಮದಿಂದ ತಿಳಿ ಹೇಳುವ ಪ್ರೇಮಮಯಿ.

ಈ ಸಾಲುಗಳನ್ನು ಗಮನಿಸಬಹುದು:

@ದೇವಯಾನಿಯ ಜೊತೆಗಿನ ದೃಶ್ಯಗಳಲ್ಲಿ:

  • ನಿನ್ನ ಮೇಲೆ ಮಾತ್ರ ಬೆಳಕು ಪ್ರಖರವಾಗಿರಬೇಕೆಂಬ ಬಯಕೆಯೇ?
  • (ಅಪ್ಪಂದಿರನ್ನು ಕುರಿತು) ಆನೆಯ ಮೇಲೆ ಕೂರಿಸುವುದು ಮಾತ್ರವಲ್ಲ, ನೆಲದ ಮೇಲೆ ನಡೆಸುವುದನ್ನೂ ಅಪ್ಪಂದಿರ ಜಗತ್ತು ಕಲಿಸಬೇಕಿತ್ತು.
  • ದೇವೂ, ಕ್ಷಮಿಸು. ನಿನ್ನ ಗೆಳತಿ ಶರ್ಮಿಷ್ಠೆ ಏನೂ ತಪ್ಪು ಮಾಡಿಲ್ಲ ಎಂದು ಹೇಳಲಾಗದು.

@ಯಯಾತಿಯ ಜೊತೆ:

  • ನಾನು ಅಂಚಿನಲ್ಲಿ ನಿಂತು, ಅಂಚಿನಲ್ಲಿದ್ದವರ ಬಗ್ಗೆ ನಿಮಗೆ ಹೇಳಬೇಕು.
  • (ವಯಸ್ಸಾಗುತ್ತಿರುವ ಗಂಡನನ್ನು ಕುರಿತು ಹೆಂಡತಿ) ಸಾಂತ್ವನ ನೀಡುವ ಆತ್ಮ ಸಖಿಯಾಗಿ ಜೀವದ ಗೆಳತಿಯಾಗಿ, ವೃದ್ಧಾಪ್ಯವನ್ನು ಅವರು ಚೆಲುವಾಗಿ ಕಳೆಯುತ್ತಾರೆ ಎಂಬುದು ನಿಮ್ಮ ಅರಿವಿಗೇಕೆ ಬರಲಿಲ್ಲ?
  • 'ಗಂಡಸಿನ ಯಾವ ಮಿತಿಗಳೂ ಪ್ರಕಟವಾಗಬಾರದು ' ಎಂಬ ನಿಮ್ಮ ಧೋರಣೆಯೇ ನಮ್ಮ ಸಂಸಾರದ ಈ ಸ್ಥಿತಿಗೆ ಕಾರಣವಾಯಿತು.

 

@ಪುರುವಿನ ದೃಶ್ಯದಲ್ಲಿ:

  • ನೀನು ನೋಡಿದರೆ ನಿನ್ನ ಪಿತೃವಿನ ಕಾರಣಕ್ಕೆ ಆದರ್ಶದ ಮಣಭಾರವನ್ನು ಹೊತ್ತುಬಿಟ್ಟೆ.
  • ನನ್ನನ್ನೂ ಚಿತ್ರಲೇಖೆಯನ್ನೂ ಕುಸಿಯುವಂತೆ ಮಾಡಿದೆ.
  • ಗಂಡನಾದರೇನು ಮಗನಾದರೇನು ನೀವಿಬ್ಬರೂ ಒಂದು ಹೆಣ್ಣಿನ ಅಂತರಂಗವನ್ನು ಪ್ರವೇಶಿಸಲು ಸೋತುಬಿಟ್ಟಿರಿ.
  • ಹಲವನ್ನು ಏಕಕಾಲದಲ್ಲಿ ಪಡೆಯಲು ಹೋಗಿ, ಆರೋಗ್ಯವಿಲ್ಲದೇ ಮುಪ್ಪಾಗುತ್ತಿದ್ದಾರಲ್ಲ ಈ ಕಾಲದ ಮಕ್ಕಳು.

ಅಂತೆಯೇ ಚಿತ್ರಲೇಖೆಯ ಜೊತೆಗಿನ ದೃಶ್ಯದಲ್ಲಿ ಲಾವಣಿಯ ಹಾಡಿನ ಆಟ ಆಡುತ್ತಾ ಮಗ ದುರ್ಬಲನಲ್ಲ ಎಂದು ಅನುನಯದಿಂದ ಹೇಳುವುದು; ಯಯಾತಿಗೂ ತನ್ನ ಮನದಿಂಗಿತವನ್ನು ಹೇಳಿಕೊಳ್ಳಲು ಅವಕಾಶ ಕೊಡುವುದು ಮುಂತಾದ ಅನೇಕ ಕಡೆಗಳಲ್ಲಿ ನಾಟಕಕಾರರ ಕೌಶಲ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಕಾರ್ನಾಡರ ನಾಟಕದಲ್ಲಿ ದುಃಖಾಂತ್ಯವಿದೆ. ಇಲ್ಲಿ ಶರ್ಮಿಷ್ಠೆ ನಿಮಿತ್ತವಾಗಿ, ಯಾಯಾತಿಯೂ ದೇವಯಾನಿಯೂ ಸಹಜವಾಗಿ ತಂತಮ್ಮ ಲೋಪದೋಷಗಳನ್ನು ಒಪ್ಪಿಕೊಂಡು ಜೀವನವನ್ನು ನೇರ್ಪುಗೊಳಿಸಲು ಇನ್ನೊಂದು ಅವಕಾಶ ಪಡೆಯುತ್ತಾರೆ. ಮಾಗಿದ ಮೂವರು ಹಿರಿಯರೂ ಸಹಜವಾಗಿ ವಾನಪ್ರಸ್ಥಕ್ಕೆ ತೆರಳುತ್ತಾರೆ, ಮಕ್ಕಳಿಗೆ ನ್ಯಾಯ ಸಲ್ಲುತ್ತದೆ. ಪುರು ಚಿತ್ರಲೇಖೆ ಮುನ್ನೆಲೆಗೆ ಬರುತ್ತಾರೆ. ಅಂತೂ ಪ್ರಕೃತಿಧರ್ಮ ಗೆಲ್ಲುತ್ತದೆ.

ಒಟ್ಟಿನಲ್ಲಿ ಇಲ್ಲಿಯ ಶರ್ಮಿಷ್ಠೆಯ ಚಿತ್ರಣ ಸ್ವಸ್ಥ ಮನಸ್ಸಿನ, ಆಧುನಿಕ ಮಹಿಳೆಯ ಆಶೋತ್ತರಗಳಿಗೆ ಸಂವಾದಿಯಾಗಿ, ವಾಸ್ತವವನ್ನು ಒಪ್ಪಿಕೊಳ್ಳುವ ಮತ್ತು ಎಲ್ಲರನ್ನೂ ಒಳಗೊಳ್ಳುವ ವಿಶಾಲ ಮನೋಭಾವದ್ದು. ಈ ಕೃತಿ ರಂಗದ ಮೇಲೆ ಹೇಗೆ ಕಾಣಿಸಿಕೊಳ್ಳುತ್ತದೆ ಎಂಬ ಕುತೂಹಲ ಉಂಟಾಗುತ್ತದೆ. ನಾಟಕಕಾರರಿಗೆ ಅಭಿನಂದನೆಗಳು.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...