ರಾಜಕೀಯ ಚರಿತ್ರೆ ಹಾಗೂ ವಿಶ್ಲೇಷಣೆಯಲ್ಲಿ ಇದೊಂದು ಮೈಲಿಗಲ್ಲು: ಡಾ.ರಾಜೇಂದ್ರ ಚೆನ್ನಿ


'ಧರ್ಮ, ನಂಬಿಕೆ, ಸಿದ್ಧಾಂತಗಳು, ಬೌದ್ಧಿಕ, ಆರ್ಥಿಕ, ರಾಜಕೀಯ ಹಕ್ಕುಗಳು, ಸ್ವಾತಂತ್ರ್ಯ ಸಮಾನತೆಯ ಮುಗಿಯದ ಹೋರಾಟಗಳು-ಇವು ಭಾರತದ ಮಟ್ಟಿಗೆ ಅಂಬೇಡ್ಕರ್ ಮುನ್ನೆಲೆಗೆ ತಂದ ವಿಷಯಗಳು. ಆದ್ದರಿಂದಲೇ ನಾವು ಬದುಕುತ್ತಿರುವುದು ಅಂಬೇಡ್ಕರ್ ಭಾರತದಲ್ಲಿ' ಎನ್ನುತ್ತಾರೆ ಹಿರಿಯ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ . ಅವರು ಲೇಖಕ ವಿಕಾಸ್ ಆರ್. ಮೌರ್ಯ ಅನುವಾದಿಸಿರುವ ಅಂಬೇಡ್ಕರ್ ಜಗತ್ತು ಕೃತಿಗೆ ಬರೆದ ಬೆನ್ನುಡಿ ನಿಮ್ಮ ಓದಿಗಾಗಿ. 

1960ರ ದಶಕದಲ್ಲಿ ಸಂಶೋಧನಾ ಪ್ರಬಂಧವಾಗಿ ಎಲಿನರ್ ಜೆಲಿಯಟ್ ಅವರು ಬರೆದ ಈ ಕೃತಿಯು ಹಲವು ಬಗೆಯಲ್ಲಿ ದಲಿತ ಅಧ್ಯಯನಗಳ ಬುನಾದಿಯಾಗಿದೆ. ಮಹಾರಾಷ್ಟ್ರದ ಮಹಾರ್ ಜನಾಂಗವು ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳ ಮೂಲಕ ತನ್ನನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪಿಸಿಕೊಂಡ ಕಥನದ ಮೂಲಕ ಅಂಬೇಡ್ಕರ್ ಅವರ ಅಪ್ರತಿಮ ರಾಜಕೀಯ ಚಿಂತನೆ ಹಾಗೂ ಕ್ರಿಯಾಶೀಲತೆಯ ವಸ್ತುನಿಷ್ಠ ಅಧ್ಯಯನವಿದಾಗಿದೆ.

ರಾಜಕೀಯ ಚರಿತ್ರೆ ಹಾಗೂ ವಿಶ್ಲೇಷಣೆಯಲ್ಲಿ ಇದೊಂದು ಮೈಲಿಗಲ್ಲು. ವ್ಯಕ್ತಿ ಕೇಂದ್ರಿತ ನಾಯಕ ಆರಾಧನೆಯೆ ಮುಖ್ಯವಾದ ಮಾದರಿಯಾಗಿದ್ದ ಕಾಲದಲ್ಲಿ ಎಲಿನರ್ ಜಾತಿವ್ಯವಸ್ಥೆ ಹಾಗೂ ಅಸ್ಪೃಶ್ಯತೆಗಳ ತೀವ್ರ ಅಸಮಾನತೆಯ ಸಮಾಜವೊಂದರಲ್ಲಿ ವಸಾಹತುಶಾಹಿ, ಆಧುನಿಕತೆ, ನಗರೀಕರಣ ಇವುಗಳ ಪ್ರಭಾವದಲ್ಲಿ ವಿಶಾಲ ಅರ್ಥದ ರಾಜಕೀಯ ಹೋರಾಟವೊಂದರ ಭಾಗವಾಗಿ ಒಂದು ಸಮುದಾಯವು ಹೊಂದುವ ಪರಿವರ್ತನೆಯನ್ನು ದಾಖಲಿಸುತ್ತಾರೆ. ಹೀಗಾಗಿ ಇದು ಒಂದು ಯುಗ ಹಾಗೂ ಯುಗಧರ್ಮದ ಚರಿತ್ರೆಯೂ ಆಗಿದೆ. ಇದರಿಂದಾಗಿ ಅಂಬೇಡ್ಕರ್ ಅವರ ಚಿಂತನೆ ಹಾಗೂ ಕ್ರಿಯೆಗಳನ್ನು ಚರಿತ್ರೆಯ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.

ಅಂಬೇಡ್ಕರ್‌ ಅವರ ಚಿಂತನೆ ಭಾರತೀಯ ರಾಜಕೀಯವನ್ನು ಮೂಲಭೂತವಾಗಿ ಪುನರ್‌ರಚಿಸಿದ ಬಗೆಯೂ ಸ್ಪಷ್ಟವಾಗುತ್ತದೆ. ಧರ್ಮ, ನಂಬಿಕೆ, ಸಿದ್ಧಾಂತಗಳು, ಬೌದ್ಧಿಕ, ಆರ್ಥಿಕ, ರಾಜಕೀಯ ಹಕ್ಕುಗಳು, ಸ್ವಾತಂತ್ರ್ಯ ಸಮಾನತೆಯ ಮುಗಿಯದ ಹೋರಾಟಗಳು-ಇವು ಭಾರತದ ಮಟ್ಟಿಗೆ ಅಂಬೇಡ್ಕರ್ ಮುನ್ನೆಲೆಗೆ ತಂದ ವಿಷಯಗಳು. ಆದ್ದರಿಂದಲೇ ನಾವು ಬದುಕುತ್ತಿರುವುದು ಅಂಬೇಡ್ಕರ್ ಭಾರತದಲ್ಲಿ.

ವಸ್ತುನಿಷ್ಠವಾಗಿ, ಸರಳವಾಗಿ, ಆಪ್ತವಾಗಿ ಅಂಬೇಡ್ಕರ್ ಜೀವನ ಮತ್ತು ರಾಜಕೀಯವನ್ನು ಆಕರ್ಷಕ ಕಥನವಾಗಿಯೂ ಹೇಳುವ ಈ ಕೃತಿಯನ್ನು ವಿಕಾಸ ಮೌರ್ಯ ಅವರು ಅದ್ಭುತವಾಗಿ ಅನುವಾದಿಸಿದ್ದಾರೆ. ಅಕ್ಷರ ಬಲ್ಲ ಪ್ರತಿಯೊಬ್ಬರೂ ಓದಲೇ ಬೇಕಾದ ಮಾತ್ರವಲ್ಲ ನಿರಂತರ ಸಂಗಾತಿಯಾಗಿ ಜೊತೆಗಿಟ್ಟುಕೊಳ್ಳಬೇಕಾದ ಕೃತಿಯಿದು. ದ್ವೇಷ, ಗೊಂದಲಗಳ ಸಂತೆಯ ನಮ್ಮ ಕಾಲದಲ್ಲಿ ಈ ಕೃತಿಯನ್ನು ಓದುವುದೇ ಸಮಾಜ ಹಾಗೂ ಸಂಸ್ಕೃತಿಗಳ ಆರೋಗ್ಯದ ಕಡೆಗೆ ದೊಡ್ಡ ಹೆಜ್ಜೆಯನ್ನು ಇಟ್ಟಂತೆ.

* ರಾಜೇಂದ್ರ ಚೆನ್ನಿ

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...