ಹಿರಿಯ ಜೀವ ರಮಾಕಾಂತ ಜೋಶಿಯವರು ಇನ್ನಿಲ್ಲ

Date: 17-05-2025

Location: ಬೆಂಗಳೂರು


ಧಾರವಾಡದಲ್ಲಿ ಅಕ್ಷರ ಸಂತನಂತೆ ಬದುಕಿದ ನಮಗಮೆಲ್ಲರ ಪ್ರೀತಿಯ ಹಿರಿಯ ಜೀವ ರಮಾಕಾಂತ ಜೋಶಿಯವರು ಇಂದು ನಮ್ಮನ್ನು ಅಗಲಿದ್ದಾರೆ.

1960-70 ರ ದಶಕದಲ್ಲಿ ಧಾರವಾಡದ ಸುಭಾಷ್ ರಸ್ತೆಯಲ್ಲಿ ಮಹಡಿಯ ಮೇಲಿರುವ ಮನೋಹರ ಗ್ರಂಥಮಾಲೆ ಪ್ರಕಾಶನ ಸಂಸ್ಥೆಯು ಇವರ ತಂದೆಯವರಾದ ಜಿ.ಬಿ. ಜೋಶಿಯವರ ನೇತೃತ್ವದಲ್ಲಿ ಸಾಹಿತ್ಯದ ಅಟ್ಟ ಎಂದು ಹೆಸರಾಗಿತ್ತು. ಕುರ್ತುಕೋಟಿ, ಗಿರೀಶ್ ಕಾರ್ನಾಡ್ ಹೀಗೆ ಅನೇಕ ಸಾಹಿತ್ಯ ಲೋಕದ ಹಿರಿಯ ಜೀವಗಳ ಚರ್ಚೆಯ ತಾಣವಾಗಿತ್ತು.

ನಂತರದ ದಿನಗಳಲ್ಲಿ ರಮಾಕಾಂತ ಜೋಶಿಯವರು ಅದೇ ಪರಂಪರೆಯನ್ನು ಚನ್ನವೀರಕಣವಿ, ಜಿ.ಎಸಗ.ಅಮೂರ್, ಎಂ.ಎಂ.ಕಲ್ಬುರ್ಗಿ, ಗಿರಡ್ಡಿ ಗೋವಿಂದರಾಜು, ಮಲ್ಲಿಕಾರ್ಜುನ ಹೀರೇಮಠ, ಬಾಳಣ್ಣ ಶೀಗಿಹಳ್ಳಿ, ಕಾಖಂಡಕಿ ಹೀಗೆ ಅನೇಕ ಹಿರಿಯ ಜೀವಗಳ ಸಾಹಿತ್ಯ ಚರ್ಚೆಯ ತಾಣವಾಗಿ ಅಟ್ಟವನ್ನು ಪರಿವರ್ತಿಸಿದ್ದರು. ಈ ಅಟ್ಟದ ಚರ್ಚೆಗಳಲ್ಲಿ ಪಾಲ್ಗೊಂಡ ಅದೃಷ್ಟವಂತರಲ್ಲಿ ನಾನೂ ಒಬ್ಬ.

ಜೊತೆಗೆ ನನ್ನ ಮೂರು ಕೃತಿಗಳನ್ನು ರಮಾಕಾಂತ ಜೋಶಿ ಮತ್ತು ಅವರ ಪುತ್ರ ಸಮೀರ್ ಜೋಶಿ ಪ್ರೀತಿಯಿಂದ ಪ್ರಕಟಿಸಿ ನಾಡಿನ ಓದುಗರಿಗೆ ತಲುಪಿಸಿದರು. ಇವುಗಳಲ್ಲಿ ಮರುಭೂಮಿ ಹೂ ಮತ್ತು ಸಂಗೀತ ಲೋಕದ ಸಂತ ಬಿಸ್ಮಿಲ್ಲಾಖಾನ್ ಕೃತಿಗಳು ಅತ್ಯಂತ ಜನಪ್ರಿಯ ಕೃತಿಗಳಾಗುವುದರ ಜೊತೆಗೆ ಹಲವು ವಿಶ್ವವಿದ್ಯಾಲಯ ದ ಪಠ್ಯಗಳಾಗಿದ್ದವು.

ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದ ಜೋಶಿಯವರು ಎಲ್ಲಾ ಬಗೆಯ ವಿಚಾರಗಳನ್ನು ಪ್ರೀತಿಯಿಂದ ಸ್ವೀಕರಿಸುವ ಮತ್ತು ಗೌರವಿಸುವ ಗುಣ ಹೊಂದಿದ್ದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಸಾಹಿತ್ಯದ ಕುರಿತಾದ ಗಂಭೀರವಾದ ಒಳನೋಟಗಳಿದ್ದವು. ಅವರ ನೆನಪಿನ ಶಕ್ತಿಯೂ ಕೂಡಾ ಅದ್ಬುತವಾಗಿತ್ತು.

ಪ್ರಸಿದ್ಧ ಸಂಗೀತಗಾರ ಭೀಮಸೇನ ಜೋಶಿಯವರು ಸಂಬಂಧದಲ್ಲಿ ಇವರಿಗೆ ಸಹೋದರ ಆಗಿದ್ದರು. ಇಬ್ಬರದು ಏಕವಚನದ ಬಳಕೆ. ಇವರು ಅವರನ್ನು ಭೀಮಾ ಎಂದು ಕರೆದರೆ, ಅವರು ಇವರನ್ನು ರಮಾ ಎಂದು ಕರೆಯುತ್ತಿದ್ದರು. ರಮಾಕಾಂತ ಜೋಸದಿಯವರ ತಂದೆ ಜಿ.ಬಿ. ಜೋಶಿಯವರು ಮೂಲತಃ ಗದಗ ಜಿಲ್ಲೆಯವರು. ಭೀಮಸೇನ ಜೋಶಿಯವರಿಗೆ ಚಿಕ್ಕಪ್ಪ ಆಗಿದ್ದರು.

ನಾನು ಅಟ್ಟಕ್ಕೆ ಹೋದಾಗಲೆಲ್ಲಾ, ಪಂಡಿತ್ ಭೀಮಸೇನ ಜೋಶಿಯವರ ಕಥೆಗಳನ್ನು ಇವರ ಬಾಯಿಂದ ಕೇಳುತ್ತಿದ್ದೆ. ಧಾರವಾಡದ ನನ್ನ ಮೂರು ಶಾಶ್ವತ ಅಡ್ಡೆಗಳಲ್ಲಿ ಮನೋಹರ ಗ್ರಂಥಮಾಲೆ ಕೂಡಾ ಒಂದಾಗಿತ್ತು. ಈಗಲೂ ಸಹ ಅತ್ತ ಕಡೆ ಹೋದಾಗ, ಭೇಟಿ ನೀಡಿ ಅವರ ಜೊತೆ ಮತ್ತು ಪುತ್ರ ಸಮೀರ್ ಜೊತೆ ಚಹಾ ಕುಡಿದು, ಒಂದು ಗಂಟೆ ಮಾತನಾಡಿ ಬರುವ ಪದ್ಧತಿಯನ್ನು ಉಳಿಸಿಕೊಂಡಿದ್ದೀನಿ.

ಸುಮಾರು 88 ಅಥವಾ 87 ವರ್ಷದ ಜೋಶಿಯವರು ವಯೋ ಸಹಜವಾಗಿ ನಮನ್ನು ಅಗಲಿದ್ದಾರೆ. ಹೋಗಿ ಬನ್ನಿ ಸರ್.
ನಿಮ್ಮ‌ನಗುಮೊಗ ಹಾಗೂ ಪ್ರೀತಿಯ ಮಾತುಗಳು ಸದಾ ನನ್ನ ನೆನಪಿನಲ್ಲಿರುತ್ತವೆ.

- ಎನ್.ಜಗದೀಶ್ ಕೊಪ್ಪ, ಮೈಸೂರು.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...