ಸಾಹಿತ್ಯದಿಂದ ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನಿಕೆ ನಿರ್ವಚನ; ಭೀಮಾಶಂಕರ ಬಿರಾದಾರ

Date: 03-12-2025

Location: ಬೆಂಗಳೂರು


ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ಲಾಭಕೋರ ಸಂಸ್ಕೃತಿಯ ಕಾಲಘಟ್ಟದಲ್ಲಿ ಮಾನವೀಯತೆಯು ಅವನತಿ ಹೊಂದುತ್ತಿರುವ ದುಗುಡವನ್ನು ಮಹಾಂತೇಶ ಪಾಟೀಲ ಅವರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಬಸವಕಲ್ಯಾಣದ ಸಾಹಿತಿ ಭೀಮಾಶಂಕರ ಬಿರಾದಾರ ಹೇಳಿದರು.

ನವ ದೇಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯು ಮುಧೋಳನ ಬಿವಿವಿಎಸ್ ಸಂಸ್ಥೆಯ ಎಸ್. ಆರ್. ಕಂಠಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 'ಯುವ ಸಾಹಿತಿ- ಸಾಹಿತ್ಯಾನುಸಂಧಾನ' ಸಮಾರಂಭದಲ್ಲಿ. ಮುಧೋಳದ ಲೇಖಕ ಮಹಾಂತೇಶ ಪಾಟೀಲ ಕುರಿತು ನೀಡಿದ ವಿಶೇಷ ಉಪನ್ಯಾಸ ನೀಡಿದ ಅವರು, ಸಾಂಸ್ಕೃತಿಕ ಯಜಮಾನಿಕೆ ಪ್ರಶ್ನಿಸುವ, ಅಧಿಕಾರದ ಹಲವು ಮುಖಗಳನ್ನು ಸೂಕ್ಷ್ಮವಾಗಿ ಅರಿಯಲು ಸಾಹಿತ್ಯದ ಗಂಭೀರ ಅನುಸಂಧಾನ ಅಗತ್ಯ ಎಂದು ಹೇಳಿದರು.

"ಜಾಗತೀಕರಣ, ಮುಕ್ತ ಮಾರುಕಟ್ಟೆ , ಬಂಡವಾಳಶಾಹಿ ಸೇರಿದಂತೆ ಹಲವು ಪ್ರಭುತ್ವಗಳು ಜನ ಬದುಕನ್ನು ಹೇಗೆ ನಿಯಂತ್ರಿಸುತ್ತವೆ. ಎಷ್ಟೆಲ್ಲ ಸಂದಿಗ್ಧತೆಗೆ ಕಾರಣವಾಗಿದೆ ಎಂಬುದು ಮಹಾಂತೇಶ ಪಾಟೀಲ ಅವರ ಕವಿತೆಗಳು ಧ್ವನಿಸುತ್ತವೆ. ಜನಮುಖಿಯಾಗದ ಯೋಜನೆಗಳು, ರಾಜಕಾರಣದ ಹಲವು ತಂತ್ರಗಳು, ಲೋಕೋದ್ಧಾರದ ಸೂತ್ರಗಳೆಂಬ ಕಣ್ಕಟ್ಟುಗಳು ಹೇಗೆ ಜನ ಬದುಕಿನ ಸೂತ್ರ ತಪ್ಪಿಸುತ್ತದೆ ಎಂಬುದುರ ಕುರಿತು," ಪಾಟೀಲರ ಕಾವ್ಯ ಮಾತನಾಡಿದೆ ಎಂದರು.

ಆಧುನಿಕೋತ್ತರ ಚಿಂತನೆಗಳು, ಪರಿಸರವಾದಿ ತತ್ವಗಳು ತಮ್ಮ ವಿಮರ್ಶೆಗೆ ಪರಿಕರಗಳಾಗಿ ಹಳಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯದ ಪಠ್ಯಗಳನ್ನು ವಿಮರ್ಶಿಸುವಾಗ ಬಳಸಿದ್ದಾರೆ. `ಬೆಳಕು ಬೆಳೆಯುವ ಹೊತ್ತು' ಕೃತಿಯ ಮೂಲಕ ಕನ್ನಡಕ್ಕೆ ಮಹಾಂತೇಶ ಪಾಟೀಲ ಅವರು ಭರವಸೆಯ ವಿಮರ್ಶೆಕರಾಗಿ ಸಿಕ್ಕಿದ್ದಾರೆ ಎಂದರು.

ಬೀಳಗಿಯ ಯುವಕವಿ ಚೇತನ ನಾಗರಾಳ ಸಾಹಿತ್ಯದ ಕುರಿತು ಮಾತನಾಡಿದ ಬೆಂಗಳೂರಿನ ಸಾಹಿತಿ ಸಂಗಮೇಶ ಗಣಿ ಅವರು, ಸಮಾಜಮುಖಿ ಚಿಂತನೆ ಇರದಿದ್ದರೆ ಅಂಥ ಕಾವ್ಯಕ್ಕೆ ಹೆಚ್ಚು ಕಾಲ ನಡೆಯಲು ಸಾಧ್ಯವಿಲ್ಲ. ಪ್ರೀತಿ ಪ್ರೇಮದ ಜೊತೆಗೆ ಲೋಕ ಚಿಂತನೆ ಚೇತನ ಅವರ ಗಜಲ್ ಮತ್ತು ಕವಿತೆಗಳಲ್ಲಿ ಅಡಗಿದೆ ಎಂದರು.

ಕಾವ್ಯ ನಿರಂತರ ಮನುಷ್ಯ ಪ್ರೇಮ ಧ್ಯಾನಿಸುತ್ತದೆ. ಹೃದಯದಲ್ಲಿ ಪ್ರೇಮವಿರಿಸಿಕೊಳ್ಳದರು ಕಾವ್ಯಾರ್ಥಿಗಳಾಗಲು ಸಾಧ್ಯವಿಲ್ಲ. ಸಮಾಜವನ್ನು ಒಗ್ಗೂಡಿಸುವ, ಅಂತಃಕರಣದ ಸತ್ವ ಚೇತನ್ ನಾಗರಾಳ ಅವರ ಕಾವ್ಯದಲ್ಲಿ ಅಡಕವಾಗಿದೆ ಎಂದರು.

ಸಮಾರಂಭ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರು, ಸಾಹಿತ್ಯ ಎಂದಿಗೂ ಸಮಾಜಮುಖಿ ಚಿಂತನೆ, ಜನಪರ ನಿಲುವು, ಸ್ವ ವಿಮರ್ಶೆ ಹೊಂದಿರುತ್ತದೆ. ಈ ಕಾಲದ ಸಾಹಿತ್ಯದ ಹೊಸ ಫಸಲು ಹೊಸ ಭರವಸೆ ಮೂಡಿಸಿದೆ. ಬಾಗಲಕೋಟೆಯ ಯುವ ಕವಿಗಳು ಹೊಸ ರೂಪಕಗಳು, ಪ್ರತಿಮೆಗಳು ಬಳಸಿ ಬರೆದ ಪದ್ಯಗಳು ನಾಡಿನ ಹಲವು ಸಾಹಿತ್ಯಕ ಸಂಸ್ಥೆಗಳು ನಡೆಸುವ ಕಾವ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಮುಧೋಳನ ಕವಿ-ವಿಮರ್ಶಕ ಮಹಾಂತೇಶ ಪಾಟೀಲ, ಬೀಳಗಿಯ ಕವಿ ಚೇತನ ನಾಗರಾಳ ಈ ನೆಲದ ಯುವ ಪ್ರತಿಭೆಗಳು. ಅವರ ಕಾವ್ಯ ಈ ಕಾಲದ ಹಲವು ಸಂಗತಿಗಳನ್ನು ಕುರಿತು ಮಾತನಾಡುತ್ತವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಬರಹಗಾರರ ಬರೆಹವನ್ನು ಓದು ಮತ್ತು ಚರ್ಚೆ ಮೂಲಕ ಅವರ ಸಾಹಿತ್ಯದ ಸತ್ವ ಸಮಾಜಕ್ಕೆ ದಾಟಿಸುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಆರ್. ಜರಗುಂಟಿ ಮಾತನಾಡಿ, ಸಾಹಿತ್ಯ ರಾಷ್ಟ್ರೀಯತೆ ಕುರಿತು ಎಷ್ಟು ಕಥನಿಸಿದೆಯೋ ಅದಕ್ಕಿಂತ ಹೆಚ್ಚಾಗಿ ಸ್ಥಳೀಯತೆ ಕುರಿತು ಮಾತನಾಡಿದೆ. ಸ್ಥಳೀಯ ಚಿಂತನೆಯೂ ರಾಷ್ಟ್ರೀಯತೆಯ ಸಮಾಜವಾದದ ಭಾಗವಾಗಿರುತ್ತದೆ. ಜಗತ್ತಿನ ಚರಿತ್ರೆಯ ರಚನೆಯಲ್ಲಿ ಸಾಹಿತ್ಯದ ಪಾತ್ರ ದೊಡ್ಡದು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಇಡೀ ಸಮಾಜದ ಜೀವಂತಿಕೆಗೆ ಕಾರಣವಾಗಿದೆ ಎಂದರು.

ಡಾ. ಮಹಾಂತೇಶ ಪಾಟೀಲ ಮಾತನಾಡಿ, ರೈತ ಬೆಳೆದ ಕಬ್ಬು ಮತ್ತು ಕವಿ ಬರೆದ ಕಬ್ಬ ಎರಡಕ್ಕೂ ಮಾರುಕಟ್ಟೆಯಲ್ಲಿ ಮೌಲ್ಯಗಳಿಲ್ಲ. ರೈತನ ಬೆಳೆ ದಲ್ಲಾಳಿಗಳ ಕೈಶದಲ್ಲಿವೆ. ಕವಿತೆ ಓದುಗರ ಅಭಾವದಲ್ಲಿ ಸೊರಗುತ್ತಿದೆ ಎಂದರು.

ಚೇತನ ನಾಗರಾಳ ಮಾತನಾಡಿ, ನೆಲದ ನೋವು, ಜನರ ಸಂಕಟಗಳು,ಸಂಕಷ್ಟಗಳು ಕಾವ್ಯ ರೂಪದಲ್ಲಿ ಹಿಡಿದಿಡಲು ಯತ್ನಿಸಿರುವೆ ಎಂದರು.

ವಿದ್ಯಾರ್ಥಿನಿ ಭಕ್ತಿ ಗೀತೆ ಗಾಯನ ನಡೆಸಿಕೊಟ್ಟರು. ಪ್ರೊ. ಎಸ್. ಎಸ್. ಬಿರಾದಾರ ಸ್ವಾಗತಿಸಿದರು . ಡಾ. ಪ್ರಹ್ಲಾದ ಕೆ. ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಆರ್.ಆರ್. ಮಾಲಿಪಾಟೀಲ ಪ್ರೊ. ಡಿ. ಬಿ. ಕುಂಬಾರ ನಿರೂಪಿಸಿದರು. ಪ್ರೊ. ವಿ ಎಮ್. ಕಿತ್ತೂರ ವಂದಿಸಿದರು‌.

MORE NEWS

ಡಿಸೆಂಬರ್ 6ರಿಂದ ಬೆಂಗಳೂರು ಸಾಹಿತ್ಯ ಉತ್ಸವ

05-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...

ಇ.ಎಸ್.ಐ.ಸಿ. ಕನ್ನಡ ರತ್ನ ಪ್ರಶಸ್ತಿ - 2025 ಪ್ರಕಟ

03-12-2025 ಬೆಂಗಳೂರು

ಕವಿ ಬಿಆರ್ ಎಲ್ ಗೆ ಇ.ಎಸ್.ಐ.ಸಿ. ಕನ್ನಡ ರತ್ನ ಪ್ರಶಸ್ತಿ ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮನರಂಜನಾ ಕೂ...

ಎಸ್.ಎನ್. ಸೇತುರಾಮ್ ಅವರಿಗೆ 'ಶಾರದಾ ಕೃಷ್ಣ' ಪ್ರಶಸ್ತಿ -2026

02-12-2025 ಬೆಂಗಳೂರು

ಉಡುಪಿ: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ...