ಬಂಡಾರ ಪ್ರಕಾಶನದ ಸಹಯೋಗದಲ್ಲಿ ‘ಬುಕ್ ಬ್ರಹ್ಮ’ ಪ್ರಕಟಿಸುತ್ತಿರುವ ‘ಒಳತಿಳಿ’ ವಾರದ ಓದು ವಿಶೇಷ ವಿಮರ್ಶಾ ಸರಣಿಯಲ್ಲಿ 10ನೇ ಭಾಗವಾಗಿ ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವ್ಯಾಸರಾವ್ ಜೆ.ಎಸ್ ಅವರು ಲೇಖಕಿ ಜಯಲಲಿತಾ ಅವರು ಕನ್ನಡಕ್ಕೆ ಅನುವಾದಿಸಿರುವ ಪ್ರೊ. ಕಾರ್ಲೋಸ್‍ರವರ ‘ಶಂಭಾಲ' ಕಾದಂಬರಿಯ ಕುರಿತು ವಿಶ್ಲೇಷಿಸಿದ್ದಾರೆ.
ಕನ್ನಡದಲ್ಲಿ ರಾಜಕೀಯ ಕಾದಂಬರಿಗಳು ಪ್ರಕಟಗೊಳ್ಳುವುದೇ ಅಪರೂಪ. ಸಮಕಾಲೀನ ವಿಷಯಗಳನ್ನಾಧರಿಸಿ ಅದನ್ನೇ ಮುಖ್ಯ ವಸ್ತುವನ್ನಾಗಿರಿಸಿಕೊಂಡು ರಚನೆಯಾಗುವ ಕಾದಂಬರಿಗಳು ವಿರಳವೆಂದೇ ಹೇಳಬಹುದು. ಈ ರೀತಿ ರಾಜಕೀಯವನ್ನೇ ಮುಖ್ಯ ವಸ್ತುವನ್ನಾಗಿರಿಸಿಕೊಂಡು ರಚನೆಯಾದ ಕಾದಂಬರಿಗಳಲ್ಲಿ ಪ್ರೊ. ಕಾರ್ಲೋಸ್‍ರವರ ‘ಶಂಭಾಲ’ವೂ ಒಂದು. ಪ್ರೊ. ಜಯಲಲಿತಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ದೇಸೀ ಪ್ರಕಾಶನ, ಬೆಂಗಳೂರು ಇದನ್ನು ಪ್ರಕಟಿಸಿದೆ.
ರಾಜಕೀಯ – ರಾಜಕಾರಣ ಈ ಎರಡು ಪದಗಳು ನಮ್ಮ ದೈನಂದಿನ ಮಾತುಕತೆಯಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ಬಳಕೆಗೊಳ್ಳುತ್ತಲೇ ಇರುತ್ತವೆ. ಸಾಮಾನ್ಯವಾಗಿ ರಾಜಕೀಯವನ್ನು ನಾವು ಆಡಳಿತಾತ್ಮಕ ನೆಲೆಯಲ್ಲಿ ಮಾತ್ರ ಕಾಣುತ್ತೇವೆ. ಅಂದರೆ ರಾಜಕೀಯವೆನ್ನುವುದು ಕೇವಲ ಸರ್ಕಾರದ ಆಡಳಿತ ನೀತಿಗೆ ಮಾತ್ರ ಸಂಬಂಧಪಟ್ಟದ್ದೆಂದು ಪರಿಭಾವಿಸುತ್ತೇವೆ. ಆದರೆ ರಾಜಕೀಯ ಅಷ್ಟಕ್ಕೇ ಸೀಮಿತವಾದದ್ದಲ್ಲ. ಅದು ಇಡೀ ಸಮಾಜದ ಮತ್ತು ಸಾಮಾಜಿಕ ಜೀವನದ ಪ್ರಮುಖ ಭಾಗವೇ ಆಗಿರುತ್ತದೆ. ಶಂಭಾಲ ಕಾದಂಬರಿಯೂ ಸಹಾ ಹಲವು ರಾಜಕೀಯ ಆಯಾಮಗಳನ್ನು ಒಳಗೊಂಡಿದ್ದು, ಆ ಅಂಶಗಳ ಕಡೆಗೆ ಭಿನ್ನ ನೋಟವನ್ನು ಹರಿಸುತ್ತದೆ. ಇತಿಹಾಸದೊಂದಿಗೆ ವಾಸ್ತವತೆಯನ್ನು ತಿಳಿಸುತ್ತಾ ಸಾಗುವುದು ಕಾದಂಬರಿಯ ಒಂದು ಕ್ರಮ. ಇತಿಹಾಸ – ವಾಸ್ತವ ಈ ಎರಡರ ನಡುವೆ ಸಾಮಾನ್ಯ ಅಂಶವಾಗಿ ನಿಲ್ಲುವುದು ‘ಅಧಿಕಾರ’ ಎಂಬ ಅಕ್ಷಯ ಪಾತ್ರೆ. ಅಧಿಕಾರ ಎಂಬುದರ ಕುರಿತಾದ ಅನೇಕ ವ್ಯಾಖ್ಯಾನಗಳು ಮೊದಲಿನಿಂದಲೂ ಅನೇಕ ಬಾರಿ ಚರ್ಚೆಗೊಳಪಡುತ್ತಾ ಬಂದಿದೆ. ಇಂದಿಗೂ ಅದರ ನಿಜಾರ್ಥವನ್ನು ಹೇಳುವ ಪ್ರಯತ್ನದಲ್ಲೇ ಸಮಾಜ ಸಾಗುತ್ತಿದೆ. ಅಧಿಕಾರವೆನ್ನುವುದು ‘ಸರ್ವಾಧಿಕಾರ’ದ ಕಡೆ ದಾಪುಗಾಲಿಡುವಾಗ ಅದರಿಂದಾಗುವ ಕೆಡಕುಗಳನ್ನು ಎಚ್ಚರಿಸುವ ಕೆಲಸ ಆ ದೇಶದ ವಿಚಾರವಂತರದ್ದಾಗಿರುತ್ತದೆ. ಅವರನ್ನು ಪ್ರಗತಿಪರರು, ಬುದ್ಧಿಜೀವಿಗಳು ಎಂತಲೂ ಕರೆಯುತ್ತಾರೆ. ಆದರೆ ವಿಚಾರವಂತರೆನಿಸಿಕೊಂಡವರ ಮಾತುಗಳನ್ನು, ಬರಹಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರೆ ಅದು ‘ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಎಂದೆನಿಸಿಕೊಳ್ಳುತ್ತದೆ. ಹೀಗೆ ಅಧಿಕಾರ ಮತ್ತು ವಿಚಾರ ಈ ಎರಡರ ಮುಖಾಮುಖಿಯೇ ‘ಶಂಭಾಲ’ ಕಾದಂಬರಿ. ಈ ಎರಡು ವಿಷಯಗಳಿಗೂ ಮುಖಾಮುಖಿಯಾಗುವುದು ‘ಅಮರ್‍ನಾಥ್’ ಎಂಬ ಕಾದಂಬರಿಯ ಕೇಂದ್ರ ಪಾತ್ರ.
ಅಮರ್‍ನಾಥ್ ಒಬ್ಬ ಲೇಖಕ, ಪತ್ರಿಕಾರಂಗದಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧನಾಗಿರುವ ವ್ಯಕ್ತಿ. ಇವರಿಗೆ ಹದಿಮೂರು ವರುಷದ ‘ಅಮರಿ’ ಎಂಬ ಮಗಳು ಸಹಾ ಇದ್ದಾಳೆ. ಕಾದಂಬರಿಯ ಮೊದಲ ಭಾಗದಲ್ಲೇ ಅಮರ್‍ನಾಥ್ ಮನೆಯಲ್ಲಿ ಪೊಲೀಸರ ಶೋಧಕಾರ್ಯದ ಮೂಲಕ ನೇರ ಪ್ರವೇಶ ಪಡೆಯುತ್ತದೆ. ಪೊಲೀಸ್, ಅವರ ಪ್ರಶ್ನೆಗಳು, ಶೋಧನೆ ಇವೆಲ್ಲವೂ ಕುತೂಹಲ ಹುಟ್ಟಿಸುವಂತಹ ವಿಷಯಗಳು. ಈ ಕುತೂಹಲವನ್ನು ಕಾದಂಬರಿ ಪ್ರಾರಂಭದಲ್ಲಿಯೇ ನೀಡಿ, ಕೊನೆಯವರೆಗೂ ಉಳಿಸಿಕೊಳ್ಳುತ್ತದೆ. ಅಮರ್‍ನಾಥ್‍ನ ಮನೆಯಲ್ಲಿ ಪೊಲೀಸರ ಶೋಧಕಾರ್ಯವಾದರೂ ಏನು ಎಂದರೆ ಅದು ‘ಪದಗಳ ಹುಡುಕಾಟ’. ವ್ಯವಸ್ಥೆಯ ಚಿಂತನಾಕ್ರಮಕ್ಕೆ ವಿರುದ್ಧವಾಗಿ ಇವರ ವಿಚಾರಧಾರೆಯಿದೆಯೇ ಎಂಬುದರ ಹುಡುಕಾಟ. ಹೀಗೆ ಹುಡುಕುವುದು ಸಾಧ್ಯವೇ? ಎಂಬುದು ಕಾದಂಬರಿಯ ಕೇಂದ್ರಪಾತ್ರದ ಮತ್ತು ಕಾದಂಬರಿಯನ್ನು ಓದುವವರ ಏಕಕಾಲಿಕ ಪ್ರಶ್ನೆಯಾಗಿರುತ್ತದೆ. ಈ ಸಾಧ್ಯತೆಗಳಿಗೆ ಉತ್ತರ ಕಾದಂಬರಿಯ ಮುಂದಿನ ಕಥಾಕ್ರಮ ನೀಡುತ್ತಾ ಸಾಗುತ್ತದೆ.
ಅಮರ್‍ನಾಥ್‍ನ ಕತೆಯೊಂದಿಗೆ ಮತ್ತೊಂದು ಕತೆ ಕಾದಂಬರಿಯಲ್ಲಿ ಜೋಡಣೆಯಗುತ್ತದೆ. ಅದು ‘ಹಿಟ್ಲರ್’ನ ಕತೆ. ಮೊದಮೊದಲು ಈ ಎರಡು ಕತೆಗಳಿಗೆ ನೇರ ಸಂಬಂಧವಿಲ್ಲ ಎನಿಸುವಂತೆ ಕಂಡುಬರುತ್ತದೆ. ಆದರೆ ಈ ಎರಡು ಕಥೆಗಳ ಐಕ್ಯತೆಯನ್ನು ತಿಳಿಯಬೇಕಾದರೇ ಕಾದಂಬರಿಯನ್ನು ಕೊನೆಯ ಅಧ್ಯಾಯದವರೆಗೂ ಓದಲೇಬೇಕಾಗುತ್ತದೆ. ಇಲ್ಲಿ ಬರುವ ಹಿಟ್ಲರ್ ಪಾತ್ರ ಜರ್ಮನಿಯವನಾಗಿರದೆ, ಭಾರತದ ಸಾಮಾನ್ಯ ಹಳ್ಳಿಯಲ್ಲಿ ಹುಟ್ಟಿದವನಾಗಿರುತ್ತಾನೆ. ಒಂದು ‘ಸುಳ್ಳು’ ಹೇಳುವ ಮೂಲಕ ಪ್ರಾರಂಭಗೊಳ್ಳುವ ಈ ಪಾತ್ರ, ಕ್ರಮೇಣ ಅದು ಬೆಳೆಯುವ ಪರಿ ಬೆರಗು ಹುಟ್ಟಿಸುತ್ತಾ ಹೋಗುತ್ತದೆ. ಹಿಟ್ಲರ್‍ನ ‘ದೈಹಿಕ ಬಲ’ (ಕುಸ್ತಿ) ಮತ್ತು ‘ಮನೋ ಬಲ’ (ಚಿತ್ರಕಲೆ) ಈ ಎರಡು ಬಲಗಳು ಅವನನ್ನು ರಾಜಕೀಯದಲ್ಲಿ ಎತ್ತರದ ಸ್ಥಾನಕ್ಕೆ ತಂದು ನಿಲ್ಲಿಸುತ್ತವೆ. ತನ್ನ ಹೆಸರಿನ ಆಳ-ಅಗಲ ಗೊತ್ತಿಲ್ಲದೆಯೇ ಮುಖ್ಯಮಂತ್ರಿಯ ಬಲಗೈ ಬಂಟನಾಗುತ್ತಾನೆ. ಜ್ಯೂನಿಯರ್ ಮಂತ್ರಿಯಗುತ್ತಾನೆ. ಕಾದಂಬರಿಯಲ್ಲಿ ಬರುವ ‘ಸ್ವಾಮೀಜಿ’ ಎನ್ನುವ ಪಾತ್ರ ಹಿಟ್ಲರ್‍ನ ಕುರಿತು ಹೀಗೆ ಹೇಳುತ್ತಾರೆ. “ಜಗತ್ತನ್ನೇ ನಡುಗಿಸಿದಂತಹ ವ್ಯಕ್ತಿಯಪ್ಪಾ ನೀನು. ಹೆಸರಂದ್ರೇ ಸುಮ್ನೇನಾ? ಯಾರ ಹೆಸರನ್ನು ನಾವು ಇಟ್ಕೊಂಡಿರ್ತೇವೋ ಆ ವ್ಯಕ್ತಿಯ ಗುಣ ಐವತ್ತು ಪರ್ಸೆಂಟ್ ನಮ್ಗೂ ಬಂದ್ಬಿಡುತ್ತೆ.” (ಪುಟ 137) ನಿಜವಾದ ಹಿಟ್ಲರ್‍ನ ಕೆಲವು ಗುಣಗಳು ಕಾದಂಬರಿಯ ಪಾತ್ರವಾದ ಹಿಟ್ಲರ್‍ನಲ್ಲೂ ಕಾಣಿಸಿದರೂ, ಅದು ಎಲ್ಲಾ ಕಾಲಕ್ಕು ಅನ್ವಯವಾಗುವ, ಮುಂದುವರೆದ ರೂಪವಾಗಿ ಕಾಣಸಿಗುತ್ತದೆಯಷ್ಟೆ. ಇಲ್ಲಿಯ ಹಿಟ್ಲರ್ ಸಹಾ ನೀಲಿ ಕಣ್ಣುಗಳನ್ನು ಹೊಂದಿದವನಾಗಿದ್ದಾನೆ.
ನೀಲಿಕಣ್ಣು ಎಂಬುದೇ ಅನ್ಯರಿಗಿಂತ ವಿಭಿನ್ನವಾಗಿ, ವಿಶಿಷ್ಟವಾಗಿ ಕಾಣಿಸಿಕೊಳ್ಳುವ ಸೂಚಕ. ಅದರಿಂದ ಈ ಪಾತ್ರವೂ ಕಾದಂಬರಿಯುದ್ದಕ್ಕೂ ವಿಶಿಷ್ಟವಾಗಿಯೇ ಸಾಗುತ್ತದೆ. ಈ ಹಿಟ್ಲರ್‍ನ ರಾಜಕೀಯ ಬೆಳವಣಿಗೆಗೆ ‘ನೆರಳಾ’ಗಿ ನಿಂತಿದ್ದವನು ಎ.ಪಿ.ಸಿಂಗ್ ಎಂಬುವವ. ಹಿಟ್ಲರ್‍ನ ತಂತ್ರಗಳೆಲ್ಲವೂ ಫಲಿಸುತ್ತಾ ಸಾಗಿದಂತೆ, ಆತ ಎಲ್ಲರನ್ನು ಮಣಿಸುತ್ತಾ ಬರುತ್ತಾನೆ. ‘ಮಾಜಿ ಸಭಾನಾಯಕಿ’ಯ ನಂಬಿಕೆ ಗಳಿಸುವಂತಹದು, ‘ಹಾರ್ವಡ್’ ಹೆಸರಿನ ಮುಖ್ಯಮಂತ್ರಿಯ ಮಗನನ್ನು, ಮುಖ್ಯಮಂತ್ರಿಯ ಮನೆಗೆ ಬರುವಂತೆ ಮಾಡಿದ್ದು ಇವೆಲ್ಲವೂ ಹಿಟ್ಲರ್‍ನ ರಾಜಕೀಯ ತಂತ್ರದ ಭಾಗವಾಗಿ ಕಂಡುಬರುತ್ತದೆ. ಹಿಟ್ಲರ್‍ನ ವೈಯಕ್ತಿಕ ಜೀವನದ ವೈಫಲ್ಯವೆಂದರೆ ಆ ತನ್ನ ‘ಪ್ರೀತಿ’ಯನ್ನು ಕಳೆದುಕೊಂಡದ್ದು. ಈ ಬೇರ್ಪಡೆಗೆ ಕಾರಣಕರ್ತರಾದವರಿಗೆ ಕೊಟ್ಟ ಹಿಂಸೆ ಅವನ ಮತ್ತೊಂದು ಮುಖವನ್ನು ಅನಾವರಣ ಮಾಡುತ್ತದೆ. ತನ್ನ ಬದುಕಿನ ಪ್ರತಿ ಹಂತದಲ್ಲೂ ತಾನು ಏನ್ನನ್ನು ಬೇಕಾದರೂ ಗೆಲ್ಲಬಲ್ಲೆನೆಂಬ ಛಲದಲ್ಲೇ ತನ್ನ ಜೀವನವನ್ನು ಸಾಗಿಸುತ್ತಾನೆ. ತಂತ್ರಗಳನ್ನೇ ರಾಜಕೀಯದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುತ್ತಾನೆ. ಕೊನೆಗೆ ‘ಶಂಭಾಲ’ ಎನ್ನುವ ಉನ್ನತ ಅಧಿಕಾರಕ್ಕೇರುವ ಆಸೆಗೆ ಸಿಕ್ಕಿಬೀಳುತ್ತಾನೆ. ಇಡೀ ಕಾದಂಬರಿಯಲ್ಲಿ ಹಿಟ್ಲರ್‍ನ ಜೀವನ ವಿಧಾನಗಳು ರಾಜಕೀಯದ ಮಜಲುಗಳನ್ನು ತಿಳಿಸುವ ಕತೆಯಾದರೆ, ಮತ್ತೊಂದು ಕಡೆ ಸಮಕಾಲೀನ ವಿಚಾರಗಳತ್ತ ಓದುಗನನ್ನು ಪ್ರಭಾವಿಸುವ ‘ಅಮರ್‍ನಾಥ್’ನ ಕತೆಯಿದೆ.
ಇಪ್ಪತ್ತೊಂದನೇ ಶತಮಾನ ಹಲವು ರೀತಿಯ ಬದಲಾವಣೆಗೆ ತೆರೆದುಕೊಂಡ ಕಾಲಘಟ್ಟ. ಧರ್ಮ ಮತ್ತು ರಾಜಕೀಯ ಒಂದರೊಳಗೊಂದು ಬೆರೆತುಕೊಂಡು ಜನರ ಮನಸ್ಸನ್ನು ಅತಿಯಾಗಿ ಪ್ರಭಾವಿಸಿದ ಕಾಲ. ಪ್ರಶ್ನಿಸುವುದೇ ಅಪರಾಧ ಎನ್ನುವಂತೆ ಬಿಂಬಿಸಿದ ಕಾಲ. ಈ ಎಲ್ಲದರ ಸೂಕ್ಷ್ಮ ಅವಲೋಕನ ಅಮರ್‍ನಾಥ್ ಅವರ ಕತೆಯಲ್ಲಿ ಕಾಣಬಹುದು. “ರಾಜಕೀಯ ಕಾನೂನಿನಲ್ಲಿ ಇರುವ ಪದಗಳಿಗೂ, ನಿಮ್ಮ ಮನಸ್ಸಲ್ಲಿ ಇರೋ ಪದಗಳಿಗೂ ಹೊಂದಾಣಿಕೆ ಆಗ್ತಿಲ್ಲ ಅಂತ ನಮ್ಮ ಮೇಲಧಿಕಾರಿಗಳ ಭಾವನೆ. ಹಾಗಾಗಿ ದೇಶದಲ್ಲಿ ಏನಾದರೂ ಅಸಂಭವ ನಡೀಬಹುದು. ನಿಮ್ಮ ಮೆದುಳಿನ ಒಳ್ಗಡೆ ನಾವು ನುಗ್ಗೋಕೆ ಆಗಲ್ಲ. ಆದ್ರೆ ನಿಮ್ಮ ಪದಗಳೊಳ್ಗೆ ನುಗ್ಗಬಹುದು. ಅದ್ರ ಮೂಲಕ ನೀವು ಅಪಾಯಕಾರಿ ವ್ಯಕ್ತಿನಾ, ಅಲ್ವ ಅನ್ನೋದು ತಿಳ್ಕೋಬಹುದು. ಅದಕ್ಕೆ ಹಲವಾರು ರೀತಿ ತನಿಖೆ ಮಾಡ್ತೀವಿ.” (ಪುಟ 23) ಇದು ‘ಥಾಟ್ ಪೊಲೀಸ್’ ಎಂಬ ಗುಪ್ತಚಾರ ದಳ ಎನಿಸಿಕೊಂಡ ಒಬ್ಬ ಪೊಲೀಸಿನ ಕಾರ್ಯ ಮತ್ತು ಹೇಳಿಕೆ. ಮೇಲ್ನೋಟಕ್ಕೆ ಇದು ಕಲ್ಪಿತವೆನಿಸಿದರೂ, ಈ ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಸಾಧ್ಯ. ಉದಾಹರಣೆಗೆ ಇಂದು ಫೇಸ್‍ಬುಕ್ಕಿನಲ್ಲಿ ‘ಆಕ್ಷೇಪಾರ್ಹ ಪದ ಬಳಕೆ’ ಎಂಬ ಹೆಸರಿನಡಿಯಲ್ಲಿ ಇಡೀ ಬರಹವನ್ನು ನಿರ್ಬಂಧಿಸುವ, ಆ ವ್ಯಕ್ತಿಯ ಖಾತೆಯನ್ನು ಒಂದಷ್ಟು ದಿನಗಳ ಕಾಲ ಕಾರ್ಯನಿರ್ವಹಿಸದಂತೆ ಮಾಡುವ ಕ್ರಮ ಜಾರಿಯಲ್ಲಿದೆ. ಇದರ ಹಿಂದಿರುವ ಶಕ್ತಿ ಯಾವುದು? ಅಧಿಕಾರ ಯಾವುದು? ಎಂದು ಆಲೋಚಿಸಿದರೆ ಈ ಮೇಲಿನ ಥಾಟ್ ಪೊಲೀಸರ ಹೇಳಿಕೆಗೆ ಅರ್ಥ ಬರುತ್ತದೆ. “ಪದಗಳ ಮೇಲೆ ಹಿಡಿತ ಇರೋರ್ಗೆ, ಹಾಸ್ಯ ಸ್ವಭಾವವೂ ಇರೋದು ತುಂಬಾ ಅಪಾಯ ಅಂತಾ ಅವ್ರು ಭಾವಿಸ್ತಾರೆ.” (ಪುಟ 24) ವಿಡಂಬನೆಯೂ ದೇಶವಿರೋಧಿತನದ ಚಟುವಟಿಕೆ ಎಂಬ ಸ್ಥಿತಿ ಏರ್ಪಟ್ಟಿದೆ ಎಂದು ಈ ಹೇಳಿಕೆ ಸೂಚಿಸುತ್ತದೆ.
ದೇಶದಲ್ಲಿ ಮಹತ್ತ್ವದ ಬದಲಾವಣೆಗಾಗಿ ಸರ್ಕಾರ ತೆಗೆದುಕೊಂಡ ಕೆಲವು ಕ್ರಮಗಳನ್ನು ಇಲ್ಲಿ ಸಮರ್ಥವಾಗಿ ವಿಶ್ಲೇಷಿಸಲಾಗಿದೆ. ನೋಟು ಅಮಾನ್ಯೀಕರಣದಿಂದ ಜನರು ಪಟ್ಟ ಪರಿಪಾಟಲನ್ನು ಇಲ್ಲಿ ‘ಕನ್ನಯ್ಯ’ ಎಂಬ ಪಾತ್ರದ ಮೂಲಕ ಪ್ರಸ್ತಾಪಿಸುತ್ತಾರೆ. ನೋಟು ಅಮಾನ್ಯೀಕರಣದಿಂದಾಗಿ ದೇಶಕ್ಕೆ, ಅದರಲ್ಲೂ ಸಾಮಾನ್ಯ ಜನಕ್ಕೆ ದೊರೆತ ಪ್ರತಿಫಲವೇನು ಎಂಬ ಪ್ರಶ್ನೆ ಇಂದಿಗೂ ಕಗ್ಗಂಟಾಗಿಯೇ ಉಳಿಯುತ್ತದೆ. ಹೊಸ ನೋಟನ್ನು ಏಕೆ ಜಾರಿಗೆ ತಂದರು? ಮತ್ತೆ ಅದನ್ನು ಏಕೆ ತಡೆ ಹಿಡಿದರು? ಈ ಪ್ರಶ್ನೆಗಳಿಗೆ ಸಮರ್ಥನೀಯ ಉತ್ತರ ದೊರಕುವುದೇ ಇಲ್ಲ. ಈ ಕಾದಂಬರಿಯಲ್ಲೂ ಸಹಾ ಈ ನೋಟು ಅಮಾನ್ಯೀಕರಣದ ವಿಷಯ ಆದಿವಾಸಿಗಳಿಗೆ, ಬುಡಕಟ್ಟು ಜನರಿಗೆ ತಲುಪದೆ ಇದ್ದದ್ದು, ನಂತರ ಅದು ಹುಟ್ಟಿಸಿದ ಆತಂಕ, ಅದರ ಕುರಿತಾಗಿದ್ದ ಜನರ ನಂಬಿಕೆಗಳು, ಅದರಿಂದಾದ ಸಾವು ಇವೆಲ್ಲವೂ ಕಾದಂಬರಿಯಲ್ಲಿ ವಾಸ್ತವತೆಗೆ ಹಿಡಿದ ಕನ್ನಡಿಯಂತೆ ಬಿಂಬಿತವಾಗಿದೆ. ಡಿಜಿಟಲ್ ವ್ಯವಹಾರವನ್ನು ದೇಶದ ಅರ್ಧಕ್ಕಿಂತ ಕಡಿಮೆ ಜನ ಬಳಸುತ್ತಿದ್ದಾರೆ ಎಂಬುದನ್ನು ಅಧಿಕಾರ ಸ್ಥಾನದಲ್ಲಿರುವವರು ಮರೆಯಬಾರದು.
ಶಂಭಾಲ ಕಾದಂಬರಿಯಲ್ಲಿ ಇರುವ ಮತ್ತೊಂದು ಪ್ರಸಂಗ ಒಬ್ಬ ಬಾಲಕ ಹಾಳುಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಪ್ರಕರಣ. ಇಲ್ಲಿ ಬಾಲಕನ ಸಾವಿಗಿಂತ ಪ್ರಮುಖವಾಗಿ ಅಲ್ಲಿ ಚರ್ಚೆಗೊಳಪಡುವುದು ಆ ಬಾಲಕ ‘ಹಿಂದುವೋ’, ‘ಮುಸ್ಲಿಮನೋ’ ಎಂಬುದಾಗಿ. “ಒಬ್ಬನೇ ಹುಡುಗ ಹಿಂದುವಾಗಿಯೂ, ಮುಸ್ಲಿಂ ಆಗಿಯೂ ಭಾರತದಲ್ಲಿ ಹುಟ್ಟಿಬಿಟ್ಟರೆ ಎಷ್ಟು ಉತ್ತಮ.” (ಪುಟ 103) ಅಮರ್‍ನಾಥ್‍ರ ಈ ಯೋಚನೆ ಧರ್ಮದ ಹೆಸರಿನಲ್ಲಿ ಹೊಡೆದಾಡುವುದನ್ನು ಕಂಡಾಗ, ಸೌಹಾರ್ದತೆಯಲ್ಲಿ ನಂಬಿಕೆಯನಿರಿಸಿದವರ ಭಾವವೂ ಆಗುತ್ತದೆ. “ಹಾಗಾದ್ರೆ ದೇಶ ಒಂದು ಅಗ್ನಿಪರ್ವತದ ಮೇಲೆ ಇದೆ ಅಲ್ವಾ.” (ಪುಟ 105) ಅಮರ್‍ನಾಥ್‍ರ ಈ ಮಾತು ಇಂದಿನ ದಿನಮಾನಕ್ಕೆ ಸೂಕ್ತ ಎನಿಸಿಕೊಳ್ಳುತ್ತದೆ.
ಅಮರ್‍ನಾಥ್‍ರ ಕಥಾಭಾಗದಲ್ಲಿಯೇ ಮೂಡಿಬಂದ ಮತ್ತೊಂದು ಒಳಕತೆ ರಾಬರ್ಟ್ ವಿನಾಯಕನಾಗುವುದು. ಬಲಪಂಥೀಯ ವಿಚಾರಧಾರೆಗೆ ಒಳಗಾಗುವ ಹುಡುಗ ಕ್ರಮೇಣ ಅದರ ಪೊಳ್ಳುತನವನ್ನು ಕಂಡು ಬದಲಾಗುವ ಚಿತ್ರಣವನ್ನು ಇಲ್ಲಿ ಕಾದಂಬರಿಕಾರರು ವಿಸ್ತøತವಾಗಿಯೇ ರಾಬರ್ಟ್ ಅಥವಾ ವಿನಾಯಕನ ಪಾತ್ರದ ಮೂಲಕ ಚರ್ಚಿಸುತ್ತಾರೆ.
ಈ ಎಲ್ಲವೂ ಕೇವಲ ಸಮಕಾಲೀನ ಚಿತ್ರಗಳಾಗಿ ತೋರದೆ, ಹೊಸ ಆಲೋಚನೆ ಮತ್ತು ಚಿಂತನೆಗಳಿಗೆ ಇಂಬು ಕೊಡುವಂತಾಗಿರುತ್ತದೆ. ಈ ಎಲ್ಲದರ ನಡುವೆ ಅಮರ್‍ನಾಥ್‍ರ ವಿಚಾರಗಳ ಕುರಿತಾದ ಶೋಧ ನಡೆಯುತ್ತಲೇ ಸಾಗುತ್ತದೆ. ಅವರನ್ನು ಮೌನವಾಗಿಸಲು ‘ಅಮರಿ ಕಾಣೆಯಾಗಿದ್ದಾಳೆ’ ಎಂದು ಅನಾಮಧೇಯ ಕರೆಗಳು ಅವರನ್ನು ವಿಚಲಿತಗೊಳಿಸುತ್ತವೆ. ಕೊನೆಗೆ ‘ಅಮರಿ’ಯ ಮಾತುಗಳೇ ದೈರ್ಯವನ್ನು ಸಹಾ ಕೊಡುತ್ತವೆ. ಇವುಗಳೆಲ್ಲದರೊಂದಿಗೆ ಹುಟ್ಟಿನ ಮೂಲವನ್ನು ಬಿಡಿಸಿಕೊಳ್ಳಲಾಗದ ‘ಲಕ್ಷ್ಮಣ’ನ ಪಾತ್ರ ಮನಸ್ಸನ್ನು ಕಲಕಿಸುತ್ತದೆ. ದಲಿತ ಎಂಬ ಕಾರಣಕ್ಕೆ ಮೇಲಧಿಕಾರಿತನ ಎಂಬುವುದು ಆತನನ್ನು ನಡೆಸಿಕೊಳ್ಳುವ ರೀತಿಯನ್ನು ಕಾದಂಬರಿಕಾರರು ಬಹುಸೂಕ್ಷ್ಮವಾಗಿ ವಿನ್ಯಾಸಗೊಳಿಸಿದ್ದಾರೆ. “ನನ್ನಿಂದ ಲಂಚಾ ಎಲ್ಲಾ ತಗೋಳಕ್ಕೆ ಆಗಲ್ಲ...... ನಾನು ಒಳ್ಳೆಯವ್ನು ಅಂತಲ್ಲ. ಲಂಚಾ ತಗೋಳಕ್ಕೂ ಒಂದು ಹುಟ್ಟಿನ ಮೂಲ ಇರ್ಬೇಕು....” (ಪುಟ 143) ಲಕ್ಷ್ಮಣ ಎಂಬ ಪೊಲೀಸ್ ಪಾತ್ರದ ಈ ಮಾತುಗಳು ಹಲವು ಬಗೆಯ ಯೋಚನೆಗಳನ್ನು ಹುಟ್ಟಿಹಾಕುತ್ತವೆ.
ಈ ರೀತಿ ಇಡೀ ಕಾದಂಬರಿ ನಾನಾ ಆಯಾಮಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಹಿಟ್ಲರ್‍ನ ಕತೆಯಲ್ಲಿ ‘ಫ್ಲಾಶ್‍ಬ್ಯಾಕ್’ ತಂತ್ರ ಅವನ ಜೀವನ ಕತೆಯ ಕುತೂಹಲವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಎರಡು ಕತೆಗಳನ್ನು ಒಟ್ಟೊಟ್ಟಿಗೆ ಹೇಳುತ್ತಿದ್ದರೂ ಆ ಕತೆಗಳ ಕೊಂಡಿ ತಪ್ಪದಂತೆ ನಿರ್ವಹಿಸಿರುವುದು ಕಾದಂಬರಿಕಾರರ ಕೌಶಲಕ್ಕೊಂದು ಉದಾಹರಣೆ. ಇಲ್ಲಿ ಬಳಸಲಾಗಿರುವ ಕೆಲವು ಪ್ರತಿಮೆಗಳು ಸಹಾ ಓದುಗನ ಗಮನ ಸೆಳೆಯುತ್ತವೆ. ಕಾದಂಬರಿಯ ಮೊದಲಾರ್ಧದಲ್ಲಿ ಮತ್ತೆ ಮತ್ತೆ ಬರುವ ಒಂದು ಪ್ರತಿಮೆ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು, ವಿದ್ಯಾರ್ಥಿಗಳಿಗೆ ದೇಶಾಭಿಮಾನ ಮೂಡಿಸಲು ಕ್ಯಾಂಪಸ್‍ನಲ್ಲಿ ಯುದ್ಧದ ಟ್ಯಾಂಕರ್ ಒಂದನ್ನು ನೇತಾಕುವ ಮಾತುಗಳು. ಇದು ದೇಶಾಭಿಮಾನದ ಹೆಸರಿನಲ್ಲಿ ಹಿಂಸೆಯನ್ನು ಪ್ರೋತ್ಸಾಹಿಸಿದಂತೆ ತೋರುತ್ತದೆ. ಹಿಟ್ಲರ್‍ನ ಗುಣಸ್ವಭಾವವನ್ನು, ಆತನ ಬಲವನ್ನು ಪ್ರಾಣಿಗಳಿಗೆ ಹೋಲಿಸುವುದು. “ಭಯಂಕರವಾದ ಉಡವೊಂದು ಅವನೊಳಗಿದೆ.” (ಪುಟ 35) ಅಲ್ಲಲ್ಲಿ ಬರುವ ‘ಅವನೊಳಗೊಂದು ಹುಲಿಯಿದೆ’ ಎಂಬ ಮಾತುಗಳು ಅವನ ರಾಜಕೀಯ ತಂತ್ರಗಾರಿಕೆ, ಅವನ ಶಕ್ತಿಗೆ ಪ್ರತಿಮೆಯಾಗಿ ನಿಲ್ಲುತ್ತದೆ. ಹಾಗೇಯೆ ಮುಖ್ಯಮಂತ್ರಿಯ ‘ವಿಗ್’ ಕೃತಕತೆಗೆ ಸಂಕೇತವಾದರೇ ಎ.ಪಿ.ಸಿಂಗನ್ನು ‘ನೆರಳು’ ಎಂದು ಹೇಳುವುದು ಹೇಳಿದ್ದನ್ನು ಕೇಳುವ, ಹೇಳಿದ್ದನ್ನು ಮಾತ್ರ ಮಾಡುವ..... ಇಷ್ಟಕ್ಕೆ ಸೀಮಿತವಾಗುತ್ತದೆ. ಒಟ್ಟಿನಲ್ಲಿ ‘ಶಂಭಾಲ’ ಎನ್ನುವ ಸ್ಥಳವೇ, ಅದರ ಕುರಿತಾದ ಕಲ್ಪನೆಯೇ ಒಂದು ದೊಡ್ಡ ಪ್ರತಿಮೆ. ನಡೆದಷ್ಟು ನಡೆಸಿಕೊಂಡು ಹೋಗುವ ಅಧಿಕಾರ ಎಂಬ ಶಕ್ತಿಕೇಂದ್ರವೇ ಶಂಭಾಲ ಎಂದು ಹೇಳಬಹುದು.
ಒಟ್ಟಂದದಲ್ಲಿ ಕಾದಂಬರಿಕಾರರಾದ ಪ್ರೊ. ಕಾರ್ಲೋಸ್‍ರವರು (ತಮಿಳವನ್) ಈ ಕಾದಂಬರಿಯನ್ನು ಒಂದು ಕ್ಷೇತ್ರಕ್ಕೋ, ರಾಜ್ಯಕ್ಕೋ ಸೀಮಿತಗೊಳಿಸದೇ, ಎಲ್ಲಾ ಪ್ರಾಂತ್ಯಗಳಿಗೂ ಸಮಾನವಾಗಿ ಅನ್ವಯವಾಗುವಂತೆ ರಚಿಸಿರುವುದು ಒಂದು ಹೆಗ್ಗಳಿಕೆ. ಇದನ್ನು ಅನುವಾದಿಸಿರುವ ಪ್ರೊ. ಜಯಲಲಿತ ಅವರು ಕನ್ನಡದ್ದೇ ಕಾದಂಬರಿ ಎನ್ನುವಂತೆ ರಚಿಸಿರುವುದು ಅವರ ಅನುವಾದದ ಶಕ್ತಿಯನ್ನು ತೋರ್ಪಡಿಸುತ್ತದೆ.
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.