Date: 12-09-2025
Location: ಬೆಂಗಳೂರು
"ಸೋಜಿಗ ಮತ್ತು ದುರಂತದ ಸಮಾಚಾರವೆಂದರೆ ಗಣಕಜ್ಞಾನಿಗಳೆಂಬಂತೆ ಅಹಮಿಕೆಯ ಕೆಲವು ಪತ್ರಕರ್ತರು ತಮ್ಮ ಕಿಲಾಡಿ ಗಣಿತೋದ್ಯಮದಿಂದಾಗಿ ಕುಬೇರರೇ ಆಗುತ್ತಿರುವ ಸನ್ನಿವೇಶದಲ್ಲಿ ಇವರು ಇನ್ನೂ ಪೆನ್ನು ಪೇಪರ್ ಹಾಳೆಗಳ ಮೇಲೆ ಬರೆದು ಸಂತೃಪ್ತಿ ಪಡುತ್ತಿದ್ದಾರೆ," ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಲೇಖನವಿದು.
ನಾನು ಡಾವಣಗೇರಿ ಎಂಬ ಶಹರಕ್ಕೆ ಬಂದು ಅದೇ ಆಗ ಎರಡು ವರುಷಗಳು ಗತಿಸಿದ್ದವು. ನನಗಾಗ ಅಕ್ಷರಲೋಕದ ಪತ್ರಿಕೋದ್ಯಮದಲ್ಲಿ ಮೊಟ್ಟ ಮೊದಲು ಪರಿಚಯವಾದವರು ಆ ಊರಿನ ಅಶೋಕ ರಸ್ತೆಯ 'ಜನತಾವಾಣಿ' ದೈನಿಕದ ಸಂಪಾದಕ ಎಚ್. ಎನ್. ಷಡಾಕ್ಷರಪ್ಪ. ಎರಡನೆಯದಾಗಿ ಅದೇ ರಸ್ತೆಯ ಎಲಿಗಾರ ಸಿದ್ದಪ್ಪ ಮಾಲೀಕತ್ವದ ರವಿಶಂಕರ ಮುದ್ರಣಾಲಯದ ಅಟ್ಟದ ಮೇಲೆ ಪುಟ್ಟದೊಂದು ವಾಸ್ತವ್ಯ ಕಟ್ಟಿಕೊಂಡಿದ್ದ 'ಜಿಲ್ಲೆ ಸಮಾಚಾರ' ಎಂಬ ಸಾಪ್ತಾಹಿಕದ ಸಂಪಾದಕ ವಿ. ಹನುಮಂತಪ್ಪ.
ಎಲಿಗಾರ ಪ್ರಿಂಟಿಂಗ್ ಪ್ರೆಸ್ಸಿಗೆ ಅಂಟಿಕೊಂಡಂತೆ ಅದರ ಹಿಂಬದಿಗೆ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿ. ನಾನು ಕಲಬುರ್ಗಿಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಿ.ಪಿ.ಆಯ್. ಪಕ್ಷದ ಕಾಮ್ರೇಡ್ ಪಂಪಾಪತಿ ಮತ್ತು ಅವರ ಹೋರಾಟದ ವಿಸ್ತೃತ ವಿವರಗಳ ಕುರಿತು ಕೇಳಿ ತಿಳಿದುಕೊಂಡಿದ್ದೆ. ಮತ್ತು ದಾವಣಗೆರೆ ನಗರದಲ್ಲಿ ಜರುಗಿದ ಪ್ರಗತಿಪಂಥ ಸಮ್ಮೇಳನ ಕುರಿತು ಸಾಕಷ್ಟು ಜಿಜ್ಞಾಸೆ ಹೊಂದಿದ್ದೆ. ಕಾಮ್ರೇಡ್ ಪಂಪಾಪತಿ ಆ ಸಮ್ಮೇಳನದ ಸಾರಥಿ. ಅದೇನೆಂದರೆ ನಾನಾಗ ಪ್ರಗತಿಪಂಥದ ಕಲಬುರ್ಗಿ ಜಿಲ್ಲಾ ಸಂಚಾಲಕನಾಗಿದ್ದೆ. ನನ್ನೊಂದಿಗೆ ಎಸ್. ಕೆ. ಮಾವನೂರ ಸಹಿತ ಸಂಚಾಲಕ ಆಗಿದ್ದರು. ಬಸವರಾಜ ಕಟ್ಟೀಮನಿ ಮತ್ತು ನಿರಂಜನ (ಕುಳಕುಂದ ಶಿವರಾಯ) ಅವರು ಪ್ರಗತಿಪಂಥ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದರು.
ದಾವಣಗೆರೆಯ ಪ್ರಗತಿಪಂಥ ಸಮ್ಮೇಳನದ ಸ್ಮರಣ ಸಂಚಿಕೆಯ ಜವಾಬ್ದಾರಿಯನ್ನು ಜನತಾವಾಣಿ ಸಂಪಾದಕ ಎಚ್. ಎನ್. ಷಡಾಕ್ಷರಪ್ಪ ವಹಿಸಿಕೊಂಡಿದ್ದರು. ಕೇವಲ ಇಪ್ಪತ್ತೆಂಟು ರುಪಾಯಿ ಒಂದು ಕಡೆಯ ಬಸ್ ಚಾರ್ಜ್. ಎರಡೂ ಕಡೆ ಸೇರಿದರೆ ಐವತ್ತಾರು ರುಪಾಯಿಗಳು ನನ್ನ ಬಳಿ ಆಗ ಇದ್ದಿದ್ರೆ ನಾನು ದಾವಣಗೆರೆ ಸಮ್ಮೇಳನಕ್ಕೆ ಬಂದು ಹೋಗಬಹುದಿತ್ತು. ಆದರೆ ಪತ್ರಗಳ ಮುಖೇನ ಷಡಾಕ್ಷರಪ್ಪ ಮಾತ್ರ ಅಲ್ಲಿನ ವಿದ್ಯಮಾನಗಳನ್ನು ನನಗೆ ಆಗಾಗ ತಿಳಿಸುತ್ತಿದ್ದರು.
ಇದೆಲ್ಲ ಯಾಕೆ ನೆನಪಾಯಿತೆಂದರೆ ನಮಗೆಲ್ಲ ಆಗ ಕಿತ್ತು ತಿನ್ನುವ ಕ್ರೂರ ಬಡತನ. ನಿತ್ಯದ ಅನ್ನಕ್ಕೂ ತತ್ವಾರ. ಕುಡಿಯಲು ನೀರಿಲ್ಲದೇ ಬರಗಾಲದಿಂದ ತತ್ತರಿಸಿದ ದಿನಮಾನಗಳು. ನಾಲ್ಕು ದಶಕಗಳ ಸನ್ಮಿತ್ರ ವಿ. ಹನುಮಂತಪ್ಪ ಬಡತನದ ನನ್ನ ಈ ಅನುಭವಗಳಿಗೆ ಹೊರತಾದವರಲ್ಲ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ಎಂಬುದು ನಮ್ಮ ಹೈದ್ರಾಬಾದ್ ಕರ್ನಾಟಕವೆಂಬ ಇಂದಿನ ಕಲ್ಯಾಣ ಕರ್ನಾಟಕದ ಯಾವುದೇ ಪ್ರದೇಶದ ನಿಕೃಷ್ಟ ತಾಲೂಕುಗಳಿಗಿಂತ ಕಡಿಮೆ ಹಿಂದುಳಿದುದೇನಲ್ಲ. ಅದೇ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿ ವಿ. ಹನುಮಂತಪ್ಪನವರ ಹುಟ್ಟೂರು. ಹನುಮಂತಪ್ಪಗೆ ಬಾಲ್ಯದಲ್ಲಿ ಉಂಡುಡಲು ಯಥೇಚ್ಛವಾಗಿದ್ದುದು ಬಡತನ ಮತ್ತು ನುಂಕೆಮಲೆ ಬೆಟ್ಟದ ರಣಭಯಂಕರ ಬಿಸಿಲು. ಮಣ್ಣುವಡ್ಡರ ಕುಲದ ತಿಮ್ಮಪ್ಪ ಹನುಮಮ್ಮ , ಹನುಮಂತಪ್ಪನ ಅಪ್ಪ ಅಮ್ಮ. ಅಷ್ಟಕ್ಕೂ ಕೊಂಡ್ಲಹಳ್ಳಿ ಎಂಬುದು ಶ್ರೀ ಕೃಷ್ಣದೇವರಾಯನ ಕಡೆಯನಾಡು ರಾಯಲಸೀಮಾಂಧ್ರದ ಗಡಿನಾಡು.
ಅಂತಹ ಕಡುಬಡತನದ ಸುಡುಸುಡುವ ಸತ್ಯಗಳ ನಡುವೆ ಅರಳಿದ್ದು ಮೈಸೂರಿನಲ್ಲಿ ಪತ್ರಿಕೋದ್ಯಮದ ಪದವಿಯ ಓದು. ಅದಾಗ ದೇಶಕ್ಕೆ ತುರ್ತು ಪರಿಸ್ಥಿತಿಯ ಕರಾಳ ದಿನಗಳು. ಅಂತಹ ದುರಿತಕಾಲದ ವಿರುದ್ದ ಹೋರಾಟ. ಅದೇ ಸಂದರ್ಭದಲ್ಲಿ ಆರ್.ಎಸ್. ಎಸ್. ಸೆಳೆತ. ಅದು ಮೊಳಕಾಲ್ಮೂರಲ್ಲೇ ಮೊಳಕೆ ಆಗಿತ್ತು. ಆದರೆ ಹನುಮಂತಪ್ಪ ಚಿಂತನಾ ಕ್ರಮದಲ್ಲಿ ಯಾವತ್ತೂ ಕರ್ಮಠೀಯತೆಯನ್ನು ಒಪ್ಪಿದವರಲ್ಲ. ಸಭ್ಯ ಬದುಕಿನ ಮೌಲ್ಯಗಳಿಗೆ ಚ್ಯುತಿ ಬಾರದ ವ್ರತ ಅವರದು. ಇಷ್ಟು ಮಾತ್ರಖರೇ : ಕೆಲವು ಸೋಗಲಾಡಿ ಪ್ರಗತಿಪರರಿಗಿಂತ ಸಾವಿರಪಾಲು ಉತ್ತಮ ವಿಚಾರ, ಆಚಾರಗಳ ಅನುಸಂಧಾನಿ ನಮ್ಮ ಹನುಮಂತಪ್ಪ. ಏಕೆಂದರೆ ಆಷಾಢಭೂತಿ ವಿಚಾರವಾದಿಗಳು ಆಳದಲ್ಲಿ ಸನಾತನಿಗಳಿಗಿಂತ ಹೆಚ್ಚು ಅಪಾಯಕಾರಿಗಳೇ ಆಗಿರುವುದುಂಟು. ಹಾಗೆಂದು ಸನಾತನಿಗಳು ಜೀವಪರರು, ಶ್ರೇಷ್ಠರೆಂದೇನಲ್ಲ.
ಆರಂಭಕ್ಕೆ "ಬಳ್ಳಾರಿ ಬಂಧು" ಹೆಸರಿನ ಸಾಪ್ತಾಹಿಕ, ಇವರ ಸಂಪಾದಕತ್ವದ ಮೊದಲ ಪತ್ರಿಕೆ. ಅಷ್ಟೊತ್ತಿಗಾಗಲೆ ಬಳ್ಳಾರಿಯಲ್ಲಿ ವಕೀಲ ಎಂ.ಪಿ. ಪ್ರಕಾಶ ಅವರ "ಜನಮನ" ಪತ್ರಿಕೆಯ ಸೋನೆಮಳೆ ಶುರುವಾಗಿತ್ತು. ಆಗ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ವಿರೋಧಿಸಿ ಇಬ್ಬರೂ ಪೊಗದಸ್ತಾಗಿ ಬರೆಯುತ್ತಿದ್ದರೆಂಬ ದಿವಿನಾದ ನೆನಪು. ವರ್ಷವೊಪ್ಪತ್ತು ಕಳೆಯುತ್ತಿದ್ದಂತೆ ವಿ. ಎಚ್. ದಾವಣಗೆರೆಗೆ ಸ್ಥಳಾಂತರ. ಮದುವೆ ಮಾಡಿಕೊಂಡು ದಾವಣಗೆರೆಯ ಅಳಿಯನಾದರು. ಅಲ್ಲಿಂದ ಇಲ್ಲಿಯವರೆಗೆ ಅಜಮಾಸು ಅರ್ಧ ಶತಮಾನ ಕಾಲ ಅಕ್ಷರಶಃ ಪತ್ರಿಕೋದ್ಯಮದ ಪರಿಶುಭ್ರ ವೃತ್ತಿಪರತೆ. ಅದನ್ನವರು ಅನ್ನ ಮತ್ತು ಅಕ್ಷರ ಕಾಯಕದಂತೆ ಕಾಪಿಟ್ಟುಕೊಂಡು ಬಂದವರು. ಹಾಗೆಯೇ ಮಡದಿ ರೇಣುಕ ಮತ್ತು ನಾಲ್ವರು ಮಕ್ಕಳು.
ದೇವರಾಜ ಅರಸು ತೀರಿಕೊಂಡಾಗ 'ಜಿಲ್ಲೆ ಸಮಾಚಾರ'ಕ್ಕೆ ಬರೆಯುವ ಮೂಲಕ ಅವರ ನನ್ನ ಸ್ನೇಹ ಆರಂಭ. ನನ್ನ ಆರೋಗ್ಯ ಇಲಾಖೆಯ ಸಣ್ಣದೊಂದು ಸರಕಾರಿ ನೌಕರಿಯ ನಡುವೆಯೂ ಅವಕಾಶ ಮಾಡಿಕೊಂಡು ಹನುಮಂತಪ್ಪನವರ ಸಾತ್ವಿಕ ಸಾಹಸಗಳಿಗೆ ಬೆಂಬಲಿಸಿದ್ದೇನೆ. ಅಂದಿನಿಂದ ಇಂದಿನವರೆಗೂ ನಾಲ್ಕು ದಶಕಗಳ ನಮ್ಮ ಗೆಳೆತನಕ್ಕೆ ಮುಪ್ಪಾಗಲಿ ಮತ್ತು ಮುಕ್ಕಾಗಲಿ ಬಂದಿಲ್ಲ. ಅದೊಂದು ಹಾಳತವಾದ ಸಸ್ನೇಹ ವಾತ್ಸಲ್ಯದ ಬಂಧನ. ಆಗೀಗ ಮತ್ತು ಆಗಾಗ ಅವರ ಸಾತ್ವಿಕ ಸಿಟ್ಟು ಹಾಗೂ ಸೆಡವಿನ ಶಿಸ್ತು ಎರಡನ್ನೂ ಆನುಷಂಗಿಕ ಫಲಶೃತಿಯಂತೆ ಸ್ವೀಕರಿಸಿದ್ದೇನೆ.
ಹಾಗೆ ನೋಡಿದರೆ ಹನುಮಂತಪ್ಪ ಓರ್ವ ಸೃಜನಶೀಲ ಬರಹಗಾರ. ತೆಲುಗು ಮತ್ತು ಇಂಗ್ಲಿಷ್ ಸಾಹಿತ್ಯದ ಅನೇಕ ಬರಹಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದ ಅವರ ಅನುವಾದಗಳು ಸೃಜನಾತ್ಮಕ ಸಾಂಗತ್ಯವೇ ಆಗಿರುತ್ತವೆ. ಆರೋಗ್ಯ ಸಾಹಿತ್ಯ, ಸಿನೆಮಾ ಸಾಹಿತ್ಯ, ರಂಗಭೂಮಿ ಸಾಹಿತ್ಯ ಕುರಿತು ಅವರಿಗೆ ಅಪಾರ ಆಸ್ಥೆ. ಈಗಲೂ ಪ್ರತಿ ಶನಿವಾರದ ಜಿಲ್ಲೆ ಸಮಾಚಾರದಲ್ಲಿ 'ರಂಗಸೌರಭ' ಎಂಬ ಅಂಕಣ ಪ್ರಕಟವಾಗುತ್ತದೆ. ಬಸವರಾಜ ಐರಣಿ ಅಂಕಣಕಾರ.
ಕನ್ನಡ ನಾಡಿನ ಬಹುಪಾಲು ವೃತ್ತಿ ರಂಗಭೂಮಿ ಕಲಾವಿದರ ಕುರಿತು ಪರಿಚಯಿಸುವ ಅಂಕಣ ಅದಾಗಿದೆ. ಕಳೆದ ನಾಕೈದು ವರುಷಗಳಿಂದ ನೂರಾರು ಕಲಾವಿದರ ಸಾಧನೆಗಳನ್ನು ಈಗಾಗಲೇ ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಈ ಅಂಕಣಕ್ಕೆ ಸಲ್ಲುತ್ತದೆ. ಇವರ "ಅಕ್ಷರಯೋಧ ರಾಮೋಜಿರಾವ್" ಎಂಬುದು ಕನ್ನಡದಲ್ಲಿ ಬಂದ ಅಪರೂಪದ ಕೃತಿ. ಹಾಗೆಯೇ ಸಿನೆಮಾಲೋಕದ ಗಾನಗಾರುಡಿಗ ಎಸ್. ಪಿ. ಬಾಲಸುಬ್ರಹ್ಮಣ್ಯಂ ಕುರಿತು ಹನುಮಂತಪ್ಪ ಒಂದು ಚೆಂದದ ಕೃತಿ ಪ್ರಕಟಿಸಿದ್ದಾರೆ. ಹೀಗೆ ಇದುವರೆಗೆ ಅವರು ಆರೇಳು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಹನುಮಂತಪ್ಪ ಯಾವತ್ತೂ ತಾನು ಬರೆದುದಕಿಂತ ಇತರರ ಸಾಹಿತ್ಯ ಕೃತಿಗಳನ್ನು ಓದುವುದೇ ಅಧಿಕ.
ಅವರ ಬಳಿ ನೂರಾರು ಸಾಹಿತ್ಯ ಕೃತಿಗಳ ಸಂಗ್ರಹವಿದೆ. ಅದರಲ್ಲಿ ಕತೆ, ಕಾದಂಬರಿ, ಆತ್ಮಕಥನ, ಐತಿಹಾಸಿಕ ಪುಸ್ತಕಗಳು ಹೆಚ್ಚಾಗಿವೆ. ಪುಸ್ತಕ ಯಾವುದೇ ಪ್ರಕಾರದ್ದಿರಲಿ ಅದನ್ನು ಅತ್ಯಂತ ಶ್ರದ್ಧೆಯಿಂದ ಓದಿ, ಸಾಧ್ಯವಾದರೆ ಓದಿದ ಪುಸ್ತಕ ಕುರಿತು ಪುಟ್ಟದಾದರೂ ಟಿಪ್ಪಣಿ ಬರೆದು ಪ್ರಕಟಿಸುವ ಪ್ರೀತಿ ಅವರದು. ಆಮೇಲೆ ತಾನು ಓದಿದ ಆ ಪುಸ್ತಕಕ್ಕೆ ಅಚ್ಚುಕಟ್ಟಾಗಿ ಬೈಂಡ್ ಹಾಕಿ ಕಪಾಟಿನಲ್ಲಿ ನೀಟಾಗಿ ಜೋಡಿಸಿಡುವ ಅವರ ಶಿಸ್ತುಬದ್ಧ ಕ್ರಮ ನನಗಂತೂ ಅಚ್ಚುಮೆಚ್ಚು.
ಆಪ್ತ ಗೆಳೆಯರಿಗೆ ಇಂತಹದ್ದೊಂದು ಹೊಸ ಪುಸ್ತಕ ಬಂದಿದೆ ಓದಿರೆಂದು ಓದಲು ಹುರಿದುಂಬಿಸುವ ಸಹೃದಯತೆ. ಅವರ ಮಕ್ಕಳಿಗೆ ತಮ್ಮದೇ ಪತ್ರಿಕೋದ್ಯಮದ ಪ್ರಭಾವ. ಇಂಜಿನಿಯರಿಂಗ್ ಓದಿದ ಮಗ ವೆಂಕಟೇಶ್ ಮತ್ತು ಮಗಳು ಭಾರತಿ ಇಬ್ಬರೂ ಮಕ್ಕಳು ಜಿಲ್ಲೆ ಸಮಾಚಾರ ದೈನಿಕದ ನೊಗ ಹೊತ್ತು ಮುನ್ನಡೆಸುತ್ತಿದ್ದಾರೆ. ಎಪ್ಪತ್ತು ವಸಂತಗಳನ್ನು ಪೂರೈಸುತ್ತಿರುವ ಹನುಮಂತಪ್ಪನವರ ಹೆಗಲಿಗೆ ಇದೀಗ ಒಂದಷ್ಟು ವಿಶ್ರಾಂತಿ ದೊರಕಿದೆ. ಕಾಲು ಊನಗೊಂಡ ಮೇಲೆ ಅಲೆಮಾರಿತನಕ್ಕೂ ಬ್ರೇಕ್ ಬಿದ್ದಿದೆ.
ಸಹೃದಯಿ, ಜಗದ್ಗುರು, ಸುದ್ದಿಪ್ರಿಯ, ನ್ಯೂಸ್ ಮ್ಯಾನ್, ವಿಕ್ಟರಿ ಹನುಮಂತಪ್ಪ ಮೊದಲಾದ ಅಡ್ಡ ಹೆಸರುಗಳಿಂದ ನೂರಾರು ಸೊಗಸಾದ ಬರಹಗಳನ್ನು ಬರೆದಿದ್ದಾರೆ. ಈಗಲೂ ಕಸ್ತೂರಿ, ಪ್ರಿಯಾಂಕ ಮೊದಲಾದ ನಿಯತಕಾಲಿಕಗಳಿಗೆ ಲೇಖನಗಳನ್ನು ನಿರಂತರವಾಗಿ ಬರೆಯುವಲ್ಲಿ ನಿರತರು. ರಾಮೋಜಿರಾಯರ 'ಈ ನಾಡು' ತೆಲುಗು ದೈನಿಕಕ್ಕೆ ಹತ್ತಾರು ವರುಷಗಳ ಕಾಲ ಬಾತ್ಮಿದಾರನಾಗಿ ದಾವಣಗೆರೆಯ ಸುದ್ದಿ, ಸಮಾಚಾರಗಳನ್ನು ತೆಲುಗಿನಲ್ಲಿ ಪ್ರಕಟಿಸಿದ್ದಾರೆ. ಅವರಿಗೆ ಹಲವು ಪ್ರಶಸ್ತಿ, ಪುರಸ್ಕಾರ ದೊರಕಿವೆ. ಅದರಲ್ಲಿ ಮುಖ್ಯವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ. ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗೌರವಿಸಿವೆ. ಅಮೆರಿಕನ್ ಬಯೋಗ್ರಾಫಿಕಲ್ ವ್ಯಾಲ್ಯುಮ್ ನಲ್ಲಿ ಇವರ ಹೆಸರು ಸೇರ್ಪಡೆಯಾದ ವಿಶೇಷ ಅವಕಾಶ ದೊರಕಿದೆ.
ಕಳೆದ ಹದಿನೈದು ವರುಷಗಳಿಂದ ಜಿಲ್ಲೆ ಸಮಾಚಾರ ಪತ್ರಿಕಾ ಬಳಗದ ವತಿಯಿಂದ ಅವರು ನಡೆಸಿಕೊಂಡು ಬರುತ್ತಿರುವ "ವರ್ಷದವ್ಯಕ್ತಿ ಪ್ರಶಸ್ತಿ" ಪುರಸ್ಕಾರ ಹೆಚ್ಚು ಜನಪ್ರಿಯತೆ ಗಳಿಸಿದೆ. ಪ್ರಾದೇಶಿಕ ದಿನಪತ್ರಿಕೆಯೊಂದು ನಡೆಸುತ್ತಿರುವ ಅಪರೂಪದ ಕಾರ್ಯಕ್ರಮ ಇದಾಗಿದೆ. ಅದೆಲ್ಲ ಸಹೃದಯ ಅಭಿಮಾನಿಗಳ ಸಹಕಾರದಿಂದ ಸಾಧ್ಯವಾಗಿದೆ ಎಂಬ ವಿನಮ್ರತೆ ಅವರದು.
ಹನುಮಂತಪ್ಪ ಅವರಿಗೆ ಪತ್ರಿಕೋದ್ಯಮದ ಗ್ರಾಮರ್ ಗೊತ್ತಿದೆ. ಆದರೆ ಗ್ಲಾಮರ್ ಮತ್ತು ಮೆಥೆಮೆಟಿಕ್ಸ್ ಗೊತ್ತಿಲ್ಲ. ಸೋಜಿಗ ಮತ್ತು ದುರಂತದ ಸಮಾಚಾರವೆಂದರೆ ಗಣಕಜ್ಞಾನಿಗಳೆಂಬಂತೆ ಅಹಮಿಕೆಯ ಕೆಲವು ಪತ್ರಕರ್ತರು ತಮ್ಮ ಕಿಲಾಡಿ ಗಣಿತೋದ್ಯಮದಿಂದಾಗಿ ಕುಬೇರರೇ ಆಗುತ್ತಿರುವ ಸನ್ನಿವೇಶದಲ್ಲಿ ಇವರು ಇನ್ನೂ ಪೆನ್ನು ಪೇಪರ್ ಹಾಳೆಗಳ ಮೇಲೆ ಬರೆದು ಸಂತೃಪ್ತಿ ಪಡುತ್ತಿದ್ದಾರೆ. ಅದರಲ್ಲೂ ಬಗೆಬಗೆಯ ಸಾಮಾಜಿಕ ಜಾಲತಾಣಗಳು, ತೀರ ಈಚೆಗೆ ಕೃತಕ ಬುದ್ದಿಮತ್ತೆಯ ವೈವಿಧ್ಯದ ಮೇಲೋಗರ ಮತ್ತು ಮುನ್ನೆಲೆ.
ಅದರಿಂದಾಗಿ ಮಾಧ್ಯಮದ ಮತ್ತು ಸುದ್ದಿಮನೆಗಳ ಚಿತ್ರಶರೀರವೇ ಚುರುಕಾಗಿ ಬದಲಾಗಿದೆ. ಉತ್ತೇಜಿತ ತಂತ್ರಜ್ಞಾನದ ಹೊಸ ಹೊಳಹುಗಳಿಗೆ ತನ್ನನ್ನು ಮುಕ್ತವಾಗಿ ಮತ್ತು ತೀವ್ರವಾಗಿ ತೆರೆದುಕೊಂಡು ಮುನ್ನುಗ್ಗದೇ ಹನುಮಂತಪ್ಪ ಇನ್ನೂ ಕಾಗದದ ಮೇಲೆ ಅಕ್ಷರ ಬರೆಯುವ ಪತ್ರಿಕೋದ್ಯಮದಲ್ಲೇ ಅಗಾಧ ಪ್ರೀತಿ ಇಟ್ಟುಕೊಂಡಿದ್ದಾರೆ. ಅದು ಪರಂಪರೆಯೋ, ಸಂಪ್ರದಾಯವೋ ಗೊತ್ತಿಲ್ಲ. ಹೆಚ್ಚು ಮಾತನಾಡದ ಮೌನ ಸಜ್ಜನಿಕೆಯ ಹನುಮಂತಪ್ಪ ಅವರ ಸಾತ್ವಿಕ ಬದುಕು ಸಾಧನೆಗೆ ಸರ್ಕಾರದ ಇನ್ನಷ್ಟು ಗೌರವಗಳು ಲಭಿಸಲಿ. ಏಕೆಂದರೆ ಆತ ಪತ್ರಕರ್ತನಾಗಿ ಉಂಡ ಸಂತಸ ಸೌಲಭ್ಯಗಳಿಗಿಂತ ದಲಿತನಾಗಿ ಕಂಡ ನೋವು, ಸಂಕಟ, ಅವಮಾನಗಳೇ ಅತ್ಯಧಿಕ.
"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.