ಶಿಲ್ಪಿ ಚಪಡನ ಚರಿತ್ರೆಯನ್ನು ಹೇಳುವ ಕಾದಂಬರಿ - ಚಪಡ


ಶಿಲ್ಪಿ ಚಪಡನಿಗೆ ಶುಶ್ರೂಷೆಯನ್ನು ಮಾಡಿ ಆತನ ಆರೋಗ್ಯವನ್ನು ಸರಿಪಡಿಸಿದ್ದ ಪಂಡಿತ ಅಶ್ವಿನಿ ಆಚಾರ್ಯರ ಜೀವನಕಥೆಯೂ ಇಲ್ಲಿ ಬರುತ್ತದೆ. ಪಂಡಿತ ಅಶ್ವಿನಿ ಆಚಾರ್ಯರ ಬದುಕಿನ ಕಥೆ ಭಾವನಾತ್ಮಕವಾಗಿ ಮೂಡಿಬಂದಿದೆ. ಪಂಡಿತರಿಗೂ ಚಪಡನಿಗೂ ಅವಿನಾಭಾವ ಸಂಬಂಧವಿರುತ್ತದೆ. ಇಲ್ಲಿ ಕಾದಂಬರಿ ಒಂದು ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಬರಹಗಾರ ನವೀನಕೃಷ್ಣ ಭಟ್ ಉಪ್ಪಿನಂಗಡಿ. ಅವರು ಎಚ್.ಜಿ.ಶ್ರೀಧರ್ ಅವರ ‘ಚಪಡ’ ಕೃತಿಯ ಬಗ್ಗೆ ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಕಾದಂಬರಿ: ಚಪಡ -ಇದು ಅಕ್ಷರದ ಪಯಣ
ಲೇಖಕರು: ಡಾ. ಶ್ರೀಧರ ಎಚ್. ಜಿ
ಪ್ರಕಾಶಕರು: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್, ಬೆಂಗಳೂರು
ಪುಟಗಳು: 292

'ಚಪಡ' ಈ ಹೆಸರನ್ನು ಕೇಳಿದ್ದೀರಾ? ನಾನಂತೂ ಈ ಕಾದಂಬರಿಯನ್ನು ಓದುವ ಮೊದಲು ಕೇಳಿಯೇ ಇರಲಿಲ್ಲ. ಕರ್ನಾಟಕ ಶಾಸನಗಳ ಮೊದಲ ಲಿಪಿಕಾರನೇ ಚಪಡ! ಬ್ರಹ್ಮಗಿರಿ ಶಾಸನದಲ್ಲಿರುವ 'ಚಪಡೇನ ಲಿಖಿತೇ ಲಿಪಿಕರೇಣ’ ಎಂಬ ಸಾಲುಗಳು ಲಿಖಿತ ಇತಿಹಾಸದ ದೃಷ್ಟಿಯಿಂದ ಗಮನಾರ್ಹವಾಗಿದೆ.

ಇದೊಂದು ಚಾರಿತ್ರಿಕ ಕಾದಂಬರಿಯಾಗಿದ್ದು, ಆರಿಸಿಕೊಂಡ ಕಥಾವಸ್ತು ಅಪೂರ್ವವಾದದ್ದು. ಶಿಲ್ಪಿ ಚಪಡನ ಕುರಿತಾಗಿ ದೊರೆಯುವ ಮಾಹಿತಿಯನ್ನಾಧರಿಸಿ, ಉತ್ತರ ಭಾರತದ 'ಪಾಟಲಿಪುತ್ರ'ದಿಂದ ದಕ್ಷಿಣಭಾರತದ 'ಬ್ರಹ್ಮಗಿರಿ' ವರೆಗಿನ ಸಾಂಸ್ಕೃತಿಕ ಬೃಹದ್ಭಾರತವನ್ನು ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಚಕ್ರವರ್ತಿ ಅಶೋಕನ ಕಾಲದಲ್ಲಿ ಅಂದರೆ ಸರಿಸುಮಾರು 2,270 ವರ್ಷಗಳ ಹಿಂದೆ ಶಿಲ್ಪಿಯೊಬ್ಬನ ಜೀವನ ಹೇಗಿದ್ದಿರಬಹುದು ಎಂಬುವುದನ್ನು ಈ ಕಾದಂಬರಿ ಕಟ್ಟಿಕೊಡುತ್ತದೆ.

'ದೇವನಾಂಪ್ರಿಯ' ಎಂದು ಪ್ರಸಿದ್ಧನಾದ ಸಮ್ರಾಟ ಅಶೋಕನ ಕಾಲಘಟ್ಟದಲ್ಲಿ ಧರ್ಮಸಂದೇಶಗಳನ್ನು ಎಲ್ಲೆಡೆ ಪಸರಿಸುವ ಕಾರ್ಯ ಪ್ರಾರಂಭವಾಗಿ ಮಹಾರಾಜರ ಮನದ ಇಂಗಿತದಂತೆ ಈ ಕೆಲಸವನ್ನು ನಿರ್ವಹಿಸುವುದಕ್ಕೆ ಗಾಂಧಾರದಿಂದ ಇಸಿಲ ನಗರವನ್ನು ತಲುಪಿದ ಶಿಲ್ಪಿ 'ಚಪಡ'. ರಾಜಾಜ್ಞೆಯಂತೆ ಚಪಡನು ಇಸಿಲದ ಬ್ರಹ್ಮಗಿರಿ ಬೆಟ್ಟದಲ್ಲಿ ಧರ್ಮಲಿಪಿಯನ್ನು ಶಿಲ್ಪದಲ್ಲಿ ಕಂಡರಿಸಲು ಆರಂಭಿಸುತ್ತಾನೆ. ಚಪಡನು ಬ್ರಹ್ಮಗಿರಿಯಲ್ಲಿ ಕೆಲಸವನ್ನು ಪ್ರಾರಂಭಿಸುವುದಕ್ಕೂ ಪೂರ್ವದಲ್ಲಿ ಇಸಿಲ ನಗರವನ್ನು ತಲುಪಿದ ಮೊದಲಿಗೆ ಮಹಾಮಾತ್ರ ಅಶ್ವಸೇನರ ಆಣತಿಯಂತೆ ಜಟಿಂಗ ರಾಮೇಶ್ವರದಲ್ಲಿ ಅಕ್ಷರಗಳ ಕೆತ್ತನೆಯನ್ನು ಮುಗಿಸಿದನಾದರೂ ತಾಂತ್ರಿಕ ದೋಷದಿಂದಾಗಿ ಆ ಪ್ರಯತ್ನ ಫಲಪ್ರದವಾಗುವುದಿಲ್ಲ. ಬಳಿಕ ಸಿದ್ದರಪುರಕ್ಕೆ ತೆರಳುವ ಚಪಡನು ತನ್ನ ಕಾರ್ಯವನ್ನು  ಪ್ರಾರಂಭಿಸಿದಾಗ ಅಂತಹ ತಾಂತ್ರಿಕ ದೋಷಗಳು ಕಾಣಲಿಲ್ಲವಾದರೂ ಅಲ್ಲಿಯ ಹವಾಮಾನಕ್ಕೆ ತತ್ ಕ್ಷಣ ಹೊಂದಿಕೊಳ್ಳುವಲ್ಲಿ ವಿಫಲನಾಗಿ ಹಾಗೂ ತದನಂತರದಲ್ಲಿ ನಿರಂತರ ಕೆಲಸದಿಂದ ಕೈಗಳಲ್ಲಿ ಗಾಯವಾಗಿ, ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾನೆ. ಪಂಡಿತ ಅಶ್ವಿನಿ ಆಚಾರ್ಯರ ಆರೈಕೆಯಲ್ಲಿ  ಚಪಡನ ಆರೋಗ್ಯ ಸುಧಾರಿಸುತ್ತದೆ. ಬಳಿಕ ಪಂಡಿತ ಅಶ್ವಿನಿ ಆಚಾರ್ಯರ ಜೊತೆಗಿನ ಸಂವಹನದಲ್ಲಿ ಹಾಗೂ ಪಂಡಿತರ ಮನೆಯಲ್ಲಿ ಆರೈಕೆಗಾಗಿ ತಾತ್ಕಾಲಿಕವಾಗಿ ನೆಲೆ ನಿಂತಿದ್ದ ಸಂದರ್ಭದಲ್ಲಿ ಚಪಡನ ವೈಯಕ್ತಿಕ ಜೀವನದ ದರ್ಶನವಾಗುತ್ತದೆ. ಆ ಕಾಲದಲ್ಲಿ ಶಿಲ್ಪಿಯೊಬ್ಬನ ಜೀವನ ಹೇಗಿತ್ತೆಂಬುವುದನ್ನು ತಕ್ಷಶಿಲಾ, ಗಾಂಧಾರ ಮುಂತಾದ ಪ್ರದೇಶಗಳ ಚಿತ್ರಣವನ್ನು ನೀಡುತ್ತಾ ಲೇಖಕರು ಓದುಗರಿಗೆ ತೆರೆದಿಡುತ್ತಾರೆ. 

ಶಿಲ್ಪಿಯೊಬ್ಬನ ಜೀವನ ನಾವು ಊಹಿಸದಂತಲ್ಲ; ಬದಲಾಗಿ ಕಡು ಕಷ್ಟಕರವಾದುದು. ಶಿಲ್ಪದ ಮೇಲೆ ಕುಂಚದಲ್ಲಿ ಬರೆದ ಅಕ್ಷರಗಳು ಮಳೆ ಬರುವ ಹೊತ್ತಿನಲ್ಲಿ  ನೀರಿನಲ್ಲಿ ತೊಳೆದು ಹೋಗುವ ಸಂಭವ ಅಧಿಕವಿರುತ್ತದೆ. ಒಂದು ವೇಳೆ ಇದನ್ನು ಗಮನಿಸದೆ ಕೆಲಸವನ್ನು ಮುಂದುವರಿಸಿದರೆ, ಶಾಸನದ ಕಾರ್ಯ ಪೂರ್ತಿಯಾದಾಗ ತಿದ್ದುವುದಕ್ಕೆ ಅವಕಾಶವೇ ಇರುವುದಿಲ್ಲ! ಹಲವಾರು ದಿನಗಳ ಅವಿರತಶ್ರಮವು ವ್ಯರ್ಥವಾಗುವ ಪ್ರಮೇಯ ಬರುವ ಸಾಧ್ಯತೆಯಿದೆ. ಇಂತಹ ಒಂದು ಸಂದರ್ಭವೂ ಶಿಲ್ಪಿ ಚಪಡನ ಜೀವನದಲ್ಲಿ ಬರುತ್ತದೆ. ಆಗ ಚಪಡನಿಗೆ ತಂದೆ ಪೃಥಕನ ಮಾತುಗಳು ನೆನಪಾಗುತ್ತದೆ. "ಗತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಬಳಸಬೇಕು, ವರ್ತಮಾನವನ್ನು ಅನುಭವ ಗಳಿಸಲು ಬಳಸಬೇಕು." - ಬಹಳ ಅರ್ಥಪೂರ್ಣವಾದ ಮಾತಿದು!

ಸಮ್ರಾಟ ಅಶೋಕನು ಧರ್ಮ ಸಂದೇಶಗಳನ್ನು ಬಿತ್ತರಿಸುವ ಕಾರ್ಯವನ್ನು ಕೈಗೊಳ್ಳುವುದಕ್ಕೆ ಕಾರಣವಾದ ಅಂಶವೂ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲ್ಪಟ್ಟಿದೆ (ಅಧ್ಯಾಯ7). ತನ್ನ ಜೀವನದಲ್ಲಿ ಘಟಿಸಿದ ಪ್ರಮುಖ ಘಟನೆಯಿಂದ ಚಕ್ರವರ್ತಿಯ ಮನದಲ್ಲಿ ಆವರಿಸಿದ ವ್ಯಾಕುಲತೆಯ ಗಾಢ ಚಿತ್ರಣ, ಅದರಿಂದ ಹೊರಬರಲು ಸಹಾಯಕವಾದ ಅಂಶ ಹಾಗೂ ಇದರಿಂದ ಚಪಡನ ಬದುಕಿನಲ್ಲಾದ ಬದಲಾವಣೆಗಳ ಕುರಿತಾದ ಉಲ್ಲೇಖಗಳು ಕಾದಂಬರಿಗೆ ಅಪೇಕ್ಷಣೀಯ.

ಸಾಮ್ರಾಜ್ಯದಲ್ಲಿನ ಪ್ರಜೆಗಳಿಗೆ ಸಮ್ರಾಟನು ಧರ್ಮ ಸಂದೇಶವನ್ನು ನೀಡಲು ಬಯಸಿ, ಶಿಲ್ಪದಲ್ಲಿ ಕಂಡರಿಸುವ ಯೋಜನೆಯಲ್ಲಿ ಹಾಕಿಕೊಂಡಾಗ ಹಲವು ಜಟಿಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲಿ ಭಾಷಾ ತೊಡಕೂ ಒಂದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಜೀವನ ಪದ್ಧತಿ, ಬಳಸುವ ಭಾಷೆಯಲ್ಲಿ ಸಾಕಷ್ಟು ವ್ಯತ್ಯಾಸವಿರುವುದರಿಂದ ಇಡೀ ದೇಶಕ್ಕೆ ಒಂದು ಭಾಷೆ, ಒಂದು ಲಿಪಿಯನ್ನು ಬಳಸುವುದು ದು:ಸಾಧ್ಯ. ಈ ನಿಟ್ಟಿನಲ್ಲಿ ಅಶೋಕ ಹಾಗೂ ಅವನ ಸಭಾಸ್ಥಾನದಲ್ಲಿರುವ ಮಹನೀಯರು ಶಿಲ್ಪಿಗಳೊಡನೆ ಚರ್ಚಿಸಿ ಅಂತಿಮವಾಗಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಇದು ಕಾದಂಬರಿಯ 9ನೇಯ ಅಧ್ಯಾಯದಲ್ಲಿದೆ. ಸಮ್ರಾಟ ಹಾಗೂ ಆತನ ಸಂಗಡಿಗರು ಶಿಲ್ಪಿಗಳ ಸಂಗಡ ಬಂದೊದಗಿದ ಸಮಸ್ಯೆಯನ್ನು ಪರಿಹರಿಸುವಲ್ಲಿ ನಡೆಸುವ ಚರ್ಚೆಗಳು ಬಹಳ ಸಂಶೋಧನಾತ್ಮಕವಾಗಿದೆ. ಆಗಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಖರೋಷ್ಠಿ, ಬ್ರಾಹ್ಮಿ, ಗ್ರೀಕ್, ಅರೈಮಿಕ್, ಪಾಳಿ ಮುಂತಾದ ಲಿಪಿ/ಭಾಷೆಗಳ ಕುರಿತಾಗಿ ಸ್ಥೂಲ ಚಿತ್ರಣ  ದೊರಕುತ್ತದೆ. ಸಭೆಯ ಕೊನೆಗೆ ಮಹತ್ವದ ನಿರ್ಧಾರಕ್ಕೆ ಬರುವ ಅಶೋಕ ಚಕ್ರವರ್ತಿ, ಅಕ್ಷರ ಸಂಸ್ಕೃತಿಯ ಇತಿಹಾಸಕ್ಕೆ ನಾಂದಿಹಾಡುತ್ತಾನೆ. ಈ ದಿಶೆಯಲ್ಲಿ ಕೃತಿಯ ಅಡಿಬರೆಹ 'ಇದು ಅಕ್ಷರದ ಪಯಣ' ಸೂಕ್ತವಾಗಿದೆ.

ಶಿಲ್ಪಿ ಚಪಡನಿಗೆ ಶುಶ್ರೂಷೆಯನ್ನು ಮಾಡಿ ಆತನ ಆರೋಗ್ಯವನ್ನು ಸರಿಪಡಿಸಿದ್ದ ಪಂಡಿತ ಅಶ್ವಿನಿ ಆಚಾರ್ಯರ ಜೀವನಕಥೆಯೂ ಇಲ್ಲಿ ಬರುತ್ತದೆ. ಪಂಡಿತ ಅಶ್ವಿನಿ ಆಚಾರ್ಯರ ಬದುಕಿನ ಕಥೆ ಭಾವನಾತ್ಮಕವಾಗಿ ಮೂಡಿಬಂದಿದೆ. ಪಂಡಿತರಿಗೂ ಚಪಡನಿಗೂ ಅವಿನಾಭಾವ ಸಂಬಂಧವಿರುತ್ತದೆ. ಇಲ್ಲಿ ಕಾದಂಬರಿ ಒಂದು ತಿರುವನ್ನು ಪಡೆದುಕೊಳ್ಳುತ್ತದೆ.

ಸಾರ್ಥವಾಹರ ಜೀವನಕ್ರಮ, ವಾಣಿಜ್ಯ ವ್ಯವಹಾರದ ಚಿತ್ರಣವೂ ಇಲ್ಲಿದೆ. ಉಷ್ಣೀಷ, ತತ್ರಾಣಿ, ಪಾನಪಾತ್ರೆ, ಗಾವುದ, ಅರವಟ್ಟಿಗೆ, ಉತ್ತರೀಯ ಮುಂತಾದ  ಪ್ರಸ್ತುತ ತೀರಾ ಅಪರೂಪವಾಗಿ ಬಳಕೆಯಲ್ಲಿರುವ ಅಥವಾ ಬಳಕೆಯಲ್ಲಿಯೇ ಇಲ್ಲದ ಶಬ್ಧಗಳ ಬಳಕೆ ಕಾದಂಬರಿಯ ಘನತೆಯನ್ನು ಹೆಚ್ಚಿಸಿದೆ.

ಹೀಗೆ ಶಿಲ್ಪಿಯೊಬ್ಬನ ಜೀವನದ ಏರುತಗ್ಗುಗಳು, ಶಿಲ್ಪವನ್ನು ಕಂಡರಿಸುವಾಗ ಒದಗಿಬರುವ ಬವಣೆಗಳು ಸೇರಿದಂತೆ ಇತ್ಯಾದಿ ಪೂರಕ ವಿವರಗಳನ್ನು ಲೇಖಕರು ಕಾದಂಬರಿಯಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಗಾಂಧಾರ ಮತ್ತು ಇಸಿಲದ ಬೆಸುಗೆಯನ್ನು ವೈವಿಧ್ಯಮಯವಾಗಿ ಸದ್ರಿ ಕಾದಂಬರಿ ಕಟ್ಟಿಕೊಟ್ಟಿದೆ. ಕಥಾಹರಹನ್ನು ಸುಲಭವಾಗಿ ಗ್ರಹಿಸುವುದಕ್ಕಾಗಿ ಕಾದಂಬರಿಯನ್ನು 16 ಅಧ್ಯಾಯಗಳನ್ನಾಗಿ ವಿಂಗಡಿಸಲಾಗಿದೆ. ನೇರ ಹಾಗೂ ಸರಳ ನಿರೂಪಣೆಯಿಂದ ಕಾದಂಬರಿಯ ಓದು ಸುಲಲಿತವಾಗುತ್ತದೆ. ಕಾದಂಬರಿಯ ಕೊನೆಗೆ ಬ್ರಹ್ಮಗಿರಿಯ ಶಾಸನ ಹಾಗೂ ಅದರ ಕನ್ನಡ ಅನುವಾದನ್ನೂ ನೀಡಿದ್ದಾರೆ. ಜೊತೆಗೆ ಪರಾಮರ್ಶನ ಗ್ರಂಥಗಳ ವಿವರಗಳು, ಓದುಗರ ಅಭಿಪ್ರಾಯಗಳೂ ಅಡಕವಾಗಿವೆ.

 ಎಚ್.ಜಿ. ಶ್ರೀಧರ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

 

 

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...