Date: 04-01-2025
Location: ಬೆಂಗಳೂರು
"ಬಹುತೇಕ ಸಂದರ್ಭಗಳಲ್ಲಿ ಪ್ರಸಿದ್ಧ ಲೇಖಕರ ಮೊದಲ ಕೃತಿ ಅಜ್ಞಾತವಾಗಿಯೇ ಉಳಿದಿರುತ್ತದೆ. ಆ ಕೃತಿ ಪ್ರಕಟವಾಗುವಾಗ ಲೇಖಕ ಕೂಡ ಅನಾಮಿಕನೇ ಆಗಿರುತ್ತಾನೆ. ಹೀಗಾಗಿ ಮೊದಲ ಕೃತಿಯೂ ಅನಾಮಿಕವಾಗಿಯೇ ಉಳಿಯುತ್ತದೆಯೇ? ಹಾಗಂತ ಎಲ್ಲ ಲೇಖಕರ ಮೊದಲ ಕೃತಿಗಳ ಭಾಗ್ಯ ಹೀಗೆಯೇ ಇರುತ್ತದೆ ಎಂದು ಹೇಳಲು ಆಗುವುದಿಲ್ಲ. ಲೇಖಕರು ಮೊದಲ ಕೃತಿಯ ನೆಪದಲ್ಲಿ ಅವರ ಆರಂಭದ ಬರವಣಿಗೆಯ ಬಗ್ಗೆ ಅರಿಯುವ ಕುತೂಹಲ ಈ ಸರಣಿಯದು," ಎನ್ನುತ್ತಾರೆ ಪತ್ರಕರ್ತ, ಲೇಖಕ ದೇವು ಪತ್ತಾರ್. ಅವರು ತಮ್ಮ ‘ಮೊದಲ ಕೃತಿ’ ಅಂಕಣದಲ್ಲಿ ‘ಶಿವರಾಮ ಕಾರಂತ’ರ ಮೊದಲ ಕೃತಿ ಬಗ್ಗೆ ವಿವರಿಸಿದ್ದಾರೆ.
ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರ ಪ್ರೀತಿ-ಮನ್ನಣೆಗೆ ಪಾತ್ರರಾಗಿರುವ ಕೋಟ ಶಿವರಾಮ ಕಾರಂತರು ಪ್ರಕಟಿಸಿದ ಒಟ್ಟು ಪುಸ್ತಕಗಳ ಸಂಖ್ಯೆ 400 ದಾಟುತ್ತದೆ. 45 ಕಾದಂಬರಿ ಪ್ರಕಟಿಸಿದ್ದ ಕಾರಂತರು 90ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದರು. ‘ಬಾಲಪ್ರಪಂಚ’ ಮತ್ತು ‘ವಿಜ್ಞಾನ ಪ್ರಪಂಚ’ದಂತಹ ವಿಶ್ವಕೋಶಗಳನ್ನು ಸಿದ್ಧಪಡಿಸಿದ ಕಾರಂತರು ಸ್ವತಃ ‘ನಡೆದಾಡುವ ವಿಶ್ವವಿದ್ಯಾಲಯ’ದಂತಿದ್ದರು. ದೇಶದ ಅತ್ಯುನ್ನತ ಪ್ರಶಸ್ತಿಗಳಿಗೆ ಕಾರಂತರು ಭಾಜನರಾಗಿದ್ದರು. ಇಂತಹ ಅಸಾಧಾರಣ ಸಾಧನೆ ಮಾಡಿದ ಕಾರಂತರ ಮೊದಲ ಪುಸ್ತಕ ಮಾತ್ರ ಅನಾಮಿಕವಾಗಿಯೇ ಉಳಿದಿದೆ. ಕಾರಂತರ 21ನೇ ವಯಸ್ಸಿನಲ್ಲಿ (1923) ಪ್ರಕಟವಾದ ಮೊದಲ ಪುಸ್ತಕಕ್ಕೆ ಮರುಮುದ್ರಣದ ಭಾಗ್ಯ ಬಂದದ್ದು 2011ರಲ್ಲಿ. ಅದೂ ’ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿ’ ಒಂದನೇ ಸಂಪುಟದ ಭಾಗವಾಗಿ.
`ರಾಷ್ಟ್ರಗೀತ ಸುಧಾಕರ’ ಕಾರಂತರ ಮೊದಲ ಪ್ರಕಟಿತ ಗ್ರಂಥವಾದರೂ ಅದೇ ಮೊದಲ ಕೃತಿಯೇನಲ್ಲ. ಮೇಲ್ನೋಟಕ್ಕೆ ಗೀತೆಗಳ ಮೂಲಕ ಕಾರಂತರ ಬರವಣಿಗೆ ಆರಂಭವಾದಂತೆ ಅನಿಸುತ್ತದೆ. ಆದರೆ, ಅದು ನಿಜವೇನಲ್ಲ.
ಶಿವರಾಮ ಕಾರಂತರ ಲೇಖನಗಳನ್ನು ಸಂಗ್ರಹಿಸಿ-ಸಂಪಾದಿಸಿದ ಮಾಲಿನಿ ಮಲ್ಯ ಅವರು ಲೇಖನಗಳ ನಾಲ್ಕನೇ ಸಂಪುಟದಲ್ಲಿ ‘ಮೊದಲ ಲಭ್ಯಕೃತಿ- ರಾಷ್ಟ್ರಭಕ್ತಿಗೀತೆಗಳ ಸಂಗ್ರಹ (1923)ವಾದರೂ, ಈ ಅವಧಿಯಲ್ಲಿ-ರಾಷ್ಟ್ರೀಯ ಚಳವಳಿಗೆ ಪೂರಕವಾಗಿ ಕೆಲವಾದರೂ ಲೇಖನಗಳನ್ನು- ಅಂದು ದಕ್ಷಿಣ ಕನ್ನಡದ ಉಡುಪಿಯಿಂದ ಹೊರಡುತ್ತಿದ್ದ ಸತ್ಯಾಗ್ರಹಿಯಂತಹ ಪತ್ರಿಕೆಗಳಲ್ಲಿ ಪ್ರಕಟಿಸಿರಬಹುದು’ ಎಂದು ಅಭಿಪ್ರಾಯ ಪಡುತ್ತಾರೆ.
ಮಾಲಿನಿ ಮಲ್ಯ ಅವರು ‘ನವಕರ್ನಾಟಕ ಸಾಹಿತ್ಯ ಸಂಪದ’ ಸರಣಿಯ ‘ಶಿವರಾಮ ಕಾರಂತ’ ಪುಸ್ತಕದಲ್ಲಿ ‘ಲಭ್ಯವಿರುವ ದಾಖಲೆಗಳ ಪ್ರಕಾರ 1923ರಲ್ಲಿ ಕಾರಂತರು ಬರೆದಿದ್ದ `ರಾಷ್ಟ್ರಗೀತ ಸುಧಾಕರ’ ಎಂಬ ಕವನ ಸಂಕಲನವೇ ಅವರ ಮೊದಲ ಬರಹವೆಂದು ಭಾವಿಸಿದ್ದೆ. ಆದರೆ, ಕಾರಂತರ ನಾಟಕಗಳ ಬಗ್ಗೆ ನಾನು ನಡೆಸಿದ ಕ್ಷೇತ್ರಾಧ್ಯಯನದ ಫಲವಾಗಿ 1921ರಲ್ಲೇ ಅವರು ‘ನಿಶಾಮಹಿಮೆ’ ನಾಟಕವನ್ನು ಕುಂದಾಪುರದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಪರಿಷತ್ತಿನ ಸಮಾವೇಶದಲ್ಲಿ ಆಡಿದ್ದ ಸಂಗತಿ ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಕುಂದಾಪುರದ ವಾಸುದೇವ ನಾಯಕರ ಹೇಳಿಕೆಯಿಂದ ತಿಳಿದು ಬಂದಿದೆ. ಇದರಿಂದ ಕಾರಂತರ ಮೊದಲ ಬರಹ ಕವನ ಸಂಕಲನವಲ್ಲ, ನಾಟಕ ಕೃತಿ ಎಂಬುದಾಗಿ ಭಾವಿಸಬಹುದು. ನಿಶಾಮಹಿಮೆ’ ಮರಾಠಿಯ ಪ್ರಸಿದ್ಧ ನಾಟಕಕಾರ ರಾಮಗಣೇಶ ಗಡಕರಿಯವರ ’ಏಕಚ್ ಪ್ಯಾಲಾ’ದ ರೂಪಾಂತರ. ಈ ಕೃತಿ ಗ್ರಂಥ ರೂಪದಲ್ಲಿ ಪ್ರಕಟಗೊಂಡಿರದ ಪ್ರಯುಕ್ತ ಅದು ಮರೆಯುಲ್ಲುಳಿಯುವಂತಾಯಿತು’ ಎಂದು ಉಲ್ಲೇಖಿಸಿದ್ದಾರೆ.
ಈ ಮಾಹಿತಿಯನ್ನು ವಿ.ಎಂ. ಇನಾಂದಾರ್ ಅವರು ’ಶಿವರಾಮ ಕಾರಂತ: ಬದುಕು-ಬರಹ’ ಕೃತಿಯಲ್ಲಿ ‘ವೃತ್ತಿರಂಗಭೂಮಿಗಾಗಿ “ನಿಶಾಮಹಿಮೆ” (ಗಡಕರಿಯವರ ಮರಾಠಿ ಏಕಚ ಪ್ಯಾಲಾ ನಾಟಕದ ಅನುವಾದ) “ಸತೀ ಸಂಯುಕ್ತ”, “ಗೋಮಾತೆ”, “ವಿಜಯನಗರದ ಸೂರ್ಯ, “ಕಠಾರಿ ಭೈರವ”, “ಗದಾಯುದ್ಧ”, “ಕರ್ಣಾರ್ಜುನ, “ಜ್ವಾಲಾಬಂಧನ", ಮತ್ತು ’ದೆಹಲಿಯ ದೌರ್ಭಾಗ್ಯ” ಎಂದು ಮುಂತಾಗಿ ನಾಟಕಗಳನ್ನು ಬರೆದುಕೊಟ್ಟು ನಿರ್ದೇಶಿಸಿದರು. ಈ ಯಾವ ನಾಟಕಗಳೂ ಮತ್ತೆ ರಂಗಭೂಮಿಯ ಮೇಲೆ ಕಾಣಿಸಿಕೊಂಡಿಲ್ಲ. ಪುಸ್ತಕರೂಪದಲ್ಲಿಯೂ ಪ್ರಕಟವಾಗಿಲ್ಲ. ಅಂಥ ನಾಟಕಗಳನ್ನು ಬಿಟ್ಟು ಕಾರಂತರು ಹೊಸ ಪ್ರಯೋಗಗಳತ್ತ ಸಾಗುವಂತೆ ಅವು ಮಾಡಿದುವು ಎನ್ನುವ ದೃಷ್ಟಿಯಿಂದ ಮಾತ್ರ ಅವನ್ನು ನಾವು ನೆನೆಯಬೇಕಷ್ಟೇ’ ಎಂದು ಖಚಿತಪಡಿಸಿದ್ದಾರೆ.
’ನಿಶಾಮಹಿಮೆ’ ಕುರಿತು ಮಾಲಿನಿ ಮಲ್ಯ ಅವರು ನವಕರ್ನಾಟಕಕ್ಕಾಗಿ ಬರೆದ ಪುಸ್ತಕದಲ್ಲಿ ’ಆ ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಕೊಡುತ್ತಿದ್ದ ಕಂಪೆನಿ ನಾಟಕಗಳಿಂದ ಪ್ರಭಾವಿತರಾದ ಕಾರಂತರು ರಂಗಭೂಮಿಯನ್ನು ಮೂಢನಂಬಿಕೆ ನಿವಾರಿಸಿ, ಸಮಾಜ ಉದ್ದರಿಸುವ ಕೆಲಸಕ್ಕೆ ಆಯ್ದುಕೊಂಡರು. ಅಂದಿನ ಪ್ರಸಿದ್ಧ ಮರಾಠಿ ನಾಟಕ ’ಏಕಚ್ ಪ್ಯಾಲಾ’ವನ್ನು ಮಿತ್ರರ ನೆರವಿನಿಂದ ಕನ್ನಡಕ್ಕೆ ಅನುವಾದಿಸಿದ್ದಲ್ಲದೆ, ಸ್ವಲ್ಪ ರೂಪಾಂತರವನ್ನೂ ಮಾಡಿ ’ನಿಷಾ ಮಹಿಮೆ’ ಎಂದು ಹೆಸರಿಸಿ, ಸ್ವಂತ ನಿರ್ದೇಶನ, ನಟನೆಗಳಿಂದ, ಸ್ನೇಹಿತರನ್ನೂ ಸೇರಿಸಿಕೊಂಡು ಈ ನಾಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಪ್ರದರ್ಶಿಸಿದರು. ಮದ್ಯಪಾನದ ಕೆಡುಕುಗಳನ್ನು ತಿಳಿಸುವ ಈ ನಾಟಕ ಯಶಸ್ವಿಯಾಯಿತು. 1921ರಲ್ಲಿ ಕುಂದಾಪುರದಲ್ಲಿ ಜರುಗಿದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಕಾರಂತರ ನಿಷಾ ಮಹಿಮೆ ನಾಟಕ ಪ್ರದರ್ಶನಗೊಂಡ ಉಲ್ಲೇಖವಿದೆ. ಮುದ್ರಣ ರೂಪದಲ್ಲಿ ಲಭ್ಯವಿಲ್ಲದ ಈ ನಾಟಕ ಶಿವರಾಮ ಕಾರಂತರ ಮೊತ್ತ ಮೊದಲ ಸಾಹಿತ್ಯ ಕೃತಿ’ಎಂದು ಖಚಿತ ಪಡಿಸುತ್ತಾರೆ.
ಗೌರೀಶ ಕಾಯ್ಕಿಣಿ ಅವರು ಉದಯವಾಣಿಗೆ ಬರೆದ (25-9-1988) ’ನಟಸಾಮ್ರಾಟ ಬಾಲಗಂಧರ್ವ’ ಲೇಖನದಲ್ಲಿ ’ಏಕಚ್ ಪ್ಯಾಲಾ’ದ ಬಗ್ಗೆ ’ರಾಮ ಗಣೇಶ ಕಡಕರಿ (ಕವಿ ’ಗೋವಿಂದಾಗ್ರಜ’) ಬಾಲಗಂಧರ್ವರಿಗಾಗಿ ’ಏಕಚ ಪ್ಯಾಲಾ’ ನಾಟಕ ಬರೆದರು. ಆ ತನಕ ರಾಜಕನ್ನೆಯರ ಶ್ರೀಮಂತ ರಂಗಸಜ್ಜಿಕೆಯಲ್ಲಿ ಶೋಭಿಸುತ್ತಿದ್ದ ಬಾಲಗಂಧರ್ವರಿಗಾಗಿ ಅವರು ಒಬ್ಬ ಸೆರೆಕುಡುಕ ನಾಯಕನ ದುರ್ದೆಶೆಗೆ ಬಲಿಯಾದ ಹೆಂಡತಿ ಸಿಂಧೂಳ ಪಾತ್ರವನ್ನು ನಿರ್ಮಿಸಿದರು. ಬಾಲಗಂಧರ್ವರು ನಾಟಕವನ್ನು ಬೇಡಿದಾಗಲೇ ಗಡಕರಿ ಅವರಿಗೆ ಅಂದಿದ್ದರು. ನಾರಾಯಣರಾವ್ (ಬಾಲಗಂಧರ್ವ) ಖಾಡಿಲಕರರು ನಿಮ್ಮನ್ನು ಜರತಾರೀ ಸೀರೆ ಶಾಲು ಹಾಗೂ ರತ್ನಾಭರಣಗಳಲ್ಲಿ ಮೆರೆಯಿಸಿದರು. ನಾನು ನಿಮ್ಮನ್ನು ಹರಕು ಸೀರೆಯಲ್ಲಿ ಸ್ಟೇಜಿಗೆ ತರಲಿದ್ದೇನೆ’ ಎಂಬ ಮಾಹಿತಿ ಒದಗಿಸಿದ್ದಾರೆ.
ಎನ್ಕೆ (ಎನ್.ಕೆ. ಕುಲಕರ್ಣಿ) ಅವರು ’ಗಡಕರಿ ಪ್ರತಿಭಾವಂತ ನಾಟಕಕಾರ. ಮದ್ಯಪಾನದ ದುರಂತ ಚಿತ್ರದೊಂದಿಗೆ ಹಿಂದೂ ಸ್ತ್ರೀಧರ್ಮದ ಆದರ್ಶವನ್ನು ಈ ನಾಟಕದಲ್ಲಿ ಗಡಕರಿಯವರು ಮಾರ್ಮಿಕವಾಗಿ ರೂಪಿಸಿದ್ದಾರೆ. ಇಂತಹ ರಸಸಾಮಗ್ರಿ ಸಿಕ್ಕ ಮೇಲೆ ಅಷ್ಟೇ ಪ್ರತಿಭಾವಂತ ಕಲಾವಿದ ಬಾಲ ಗಂಧರ್ವರ ಕೂ ಹಿಡಿದವರುಂಟೆ? ಕಥಾನಾಯಿಕೆ ಸಿಂಧುವಾಗಿ ಕಟುಕನೂ ಕಣ್ಣೀರು ಹಾಕುವಂತೆ ಮಾಡಿದರು. ಗಡಕರಿಯಂಥ ನಾಟಕಾರರಿಲ್ಲ, ಬಾಲಗಂಧರ್ವರಂತಹ ನಟರಿಲ್ಲ, ಎಂಬ ಮಾತಿಗೆ ಸಾಕ್ಷಿಯಂತಿತ್ತು ’ಏಕಚ್ ಪ್ಯಾಲಾ’’ ಎಂದು ಕಸ್ತೂರಿ (ಮೇ 1973)ಗೆ ಬರೆದ ’ಬಾಲ ಗಂಧರ್ವ’ ಲೇಖನದಲ್ಲಿ ವಿವರಿಸಿದ್ದಾರೆ.
ಈ ಮಾಹಿತಿಗೆ ಪೂರಕವೆಂಬಂತೆ ನಾ ಡಿ’ಸೋಜಾ ಅವರು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳ ಅಭಿನಂದನ ಗ್ರಂಥ ’ನಂದನವನ’ (1978)ದ ’ಮೂರು ಮುಖಗಳು: ರಾಘವ’ ಲೇಖನದಲ್ಲಿ ’ಶ್ರೀ ಅಂಬಾ ಪ್ರಸಾದಿತ ನಾಟಕ ಮಂಡಳಿ ಈ ಶತಕದ ಎರಡು-ಮೂರನೇ ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿತವಾಗಿ ನಾಟಕ ರಂಗದಲ್ಲಿ ಬಹಳಷ್ಟು ಸೇವೆಯನ್ನು ಮಾಡಿದ ವ್ಯಾಪಾರ ಕಲಾಮೇಳ. ಇದರ ಮಾಲೀಕರು ದಿವಂಗತ ರಂಗನಾಥ ಭಟ್ ಮುಂಡಾಜೆ. ಶಿವರಾಮ ಕಾರಂತರು ಈ ಕಂಪೆನಿಯೊಡನೆ ಸಂಪರ್ಕವಿರಿಸಿಕೊಂಡಿದ್ದಲ್ಲದೆ ’ಏಕಚ್ ಪ್ಯಾಲಾ’ ಮರಾಠಿ ನಾಟಕದ ಕನ್ನಡ ಅನುವಾದವನ್ನು `ನಿಷಾಮಹಿಮೆ’ ಎಂಬ ಹೆಸರಿನಲ್ಲಿ ಮಾಡಿಕೊಟ್ಟು ಈ ಕಂಪನಿಯವರಿಂದ ಆಡಿಸಿದರು. ಕಾರಂತರ ’ಸತೀ ಸಂಯುಕ್ತೆ’ಯನ್ನು ಕೂಡ ಇವರು ಅಭಿನಯಿಸುತ್ತಿದ್ದರು. ಕಾಳಿಂಗರಾಯರು ಕೂಡ ಈ ಕಂಪೆನಿಯ ಮೂಲಕವೇ ರಂಗಪ್ರವೇಶ ಮಾಡಿದ್ದು’ ಎಂದು ಮತ್ತಷ್ಟು ವಿವರ ನೀಡುತ್ತಾರೆ.
’ಗಡಕರಿ ಮಾಸ್ತರ’ರು ಎಂದೇ ಜನಪ್ರಿಯರಾಗಿದ್ದ ’ಕಿರ್ಲೋಸ್ಕರ್ ನಾಟಕ ಕಂಪೆನಿ’ಯಲ್ಲಿ ಕಲಾವಿದರಿಗೆ ಮರಾಠೀ ಪಾಠ ಕಲಿಸುತ್ತಿದ್ದರು. ಗಡಕರಿಯವರನ್ನು ಕುರಿತು ಸುಮತೀಂದ್ರ ನಾಡಿಗರು `ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’ (1989) ಕೃತಿಯಲ್ಲಿ 1885 ರಲ್ಲಿ ಹುಟ್ಟಿದ ಗೋವಿಂದಾಗ್ರಜರು (ರಾಮಗಣೇಶ ಗಡಕರಿ) ಪೂನಾದ ಫರ್ಗೂಸನ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು, ಅವರು ಪ್ರಸಿದ್ಧ ನಾಟಕಕಾರರೂ ಆಗಿದ್ದರು. ಮಾತು ಮಾತಿಗೆ ಚಮತ್ಕಾರಗಳನ್ನು ಜೋಡಿಸುತ್ತಿದ್ದ ಈ ಕವಿ ತಮ್ಮ ಮೇಲೆ ಪ್ರಭಾವ ಬೀರಿದವರಲ್ಲಿ ಒಬ್ಬರು ಎಂದು ಬೇಂದ್ರೆಯವರು ಹೇಳಿದ್ದಾರೆ. ಗೋವಿಂದಾಗ್ರಜರ ಅತ್ಯಂತ ಪ್ರಸಿದ್ಧವಾದ ರಾಜಹಂಸ ಮಾರು ನಿಜಲಾ.!! ಎನ್ನುವ ಕವಿತೆಯ ಬಂಧಕ್ಕೆ, ಸ್ಮರಣೆಯಲ್ಲಿ ಉಳಿಯುವಂಥ ಅದರ ಮಾಂತ್ರಿಕತೆಗೆ ಕನ್ನಡ ಕವಿಗಳೂ ಮರುಳಾಗಿದ್ದರು’ ಎಂದು ಬರೆದಿದ್ದಾರೆ.
ಅ.ರಾ. ತೋರೊ ಅವರು ಕಸ್ತೂರಿಗೆ (ನವೆಂಬರ್ 1982) ಬರೆದ ’ಬೇಂದ್ರೆ -ಮಹಾರಾಷ್ಟ್ರ ಕಂಡಂತೆ’ ಲೇಖನದಲ್ಲಿ ’ಗೋವಿಂದಾಗ್ರಜರ ’ಮಹಾರಾಷ್ಟ್ರ ಗೀತಾ’ ಬೇಂದ್ರೆಯವರಿಂದ ಎಷ್ಟೊಂದು ಸುಂದರವಾಗಿ ಕನ್ನಡಿಸಲ್ಪಟ್ಟಿದೆಯೆಂದರೆ ಅವರೊಂದಿಗೆ ಮಾತನಾಡುತ್ತಿದ್ದಾಗ ನಾನೊಮ್ಮೆ ಹೇಳಿದೆ, ’ಸರ್, ಗೋವಿಂದಾಗ್ರಜರು ನಿಮಗಿಂತ ಮುಂಚೆಯೇ ಹುಟ್ಟಿ ಒಳ್ಳೆಯದನ್ನೇ ಮಾಡಿದರು, ಇಲ್ಲವಾದರೆ ಅವರ ಮೇಲೆ ವಾಙ್ಮಯಚೌರ್ಯದ ಆರೋಪ ಖಂಡಿತ ಬರುತ್ತಿತ್ತು ಎಂದು. ಅವರು ನಕ್ಕು ಬಿಟ್ಟರು’ ಎಂದು ನೆನಪಿಸಿಕೊಂಡಿದ್ದಾರೆ.
’ಏಕಚ ಪ್ಯಾಲಾ’ ಬಗೆಗೆ ಬೇಂದ್ರೆ ಉವಾಚ’ ಎಂಬ ಲೇಖನದಲ್ಲಿ (ಆರ್ಕೆಸ್ಟ್ರಾ ಮತ್ತು ತಂಬೂರಿ) ಗೌರೀಶ ಕಾಯ್ಕಿಣಿ ಅವರು ಗಡಕರಿ ಅವರ ’ಅವರ ನಾಟಕಗಳಲ್ಲಿ ’ಏಕಚ ಪ್ಯಾಲಾ’ ಗಂಧರ್ವ ಕಂಪೆನಿಯನ್ನೂ ’ಭಾವಬಂಧನ’ ಮಾಸ್ಟರ್ ದೀನಾನಾಥ ಮಂಗೇಶಕರರ ಬಲವಂತ ನಾಟಕ ಮಂಡಳಿಯನ್ನೂ ಮುಳುಗಡೆಉ ಮಡುವಿನಿಂದ ಎತ್ತಿ ನಿಲ್ಲಿಸಿದವು. ನಾಟ್ಯಲೇಖನ, ಪಾತ್ರ ಸೃಷ್ಟಿಯಲ್ಲಿ ಗಡಕರಿ ಮರಾಠಿಯ ಶೇಕ್ಸ್‌ಪಿಯರ್ ಎನಿಸಿಕೊಂಡರು’ ಎಂದು ವಿವರಿಸುತ್ತಾರೆ.
ಅದೇ ಲೇಖನದಲ್ಲಿ ಕಾಯ್ಕಿಣಿಯವರು ’ನಮ್ಮ ಬೇಂದ್ರೆ ಮಾಸ್ತರರು ಈ ಗಡಕರಿ ಮಾಸ್ತರರ ವಿಷಯವಾಗಿ ಸಲ್ಲಿಸಿದ ಕಾಣಿಕೆಯ ಕುರಿತು. ನಮ್ಮ ವರಕವಿ ಪುಣೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕವಿ ’ಗೋವಿಂದಾಗ್ರಜ’ರಿಂದ ತುಂಬ ಪ್ರಭಾವಿತರಾಗಿದ್ದರು. ಬೇಂದ್ರೆಯವರ ಕಾವ್ಯಮಯ ಶೈಲಿಯ ಭಾಷಾಸಂಪತ್ತು ಚತುರೋಕ್ತಿಚಾತುರ್ಯ, ಊಹೆ ಉತ್ಪ್ರೇಕ್ಷೆಗಳ ದಿಗಂತ ಉಡ್ಡಾಣ. ಹರಟೆ- ಹುಚ್ಚಾಟಗಳಲ್ಲಿಯ ವಿಕಟ ವಿನೋ ಇವುಗಳಲ್ಲಿ ಗಡಕರಿಯವರ ಪ್ರಭಾವ ಕಾಣಿಸುತ್ತವೆ’ ಎಂದು ಬರೆದಿದ್ದಾರೆ.
ಕಾಯ್ಕಿಣಿ ಅವರು ’ಆರ್ಕೆಸ್ಟ್ರಾ ಮತ್ತು ತಂಬೂರಿ’ (1993) ಪುಸ್ತಕದ ’ರಾಮ ಗಣೇಶ ಗಡಕರಿ’ ಲೇಖನದಲ್ಲಿ ’ವರಕವಿ ಬೇಂದ್ರೆ ಪುಣೆಯಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಕವಿ ಗೋವಿಂದಾಗ್ರಜರ ಕಾವ್ಯದ ಚಮತ್ಕಾರ ಮತ್ತು ಶ್ಲೇಷ ಪ್ರಚುರ ಭಾಷಾ ಶೈಲಿಗೆ ಅವರ ವಿಕಟ ವಿನೋದದ ಉತ್ಪ್ರೇಕ್ಷೆಯ ಸ್ವೈರ ಉಡ್ಡಾಣಕ್ಕೆ ’ವಾಗೀಂದ್ರ ಜಾಲಕ್ಕೆ’ ಮನ ಸೋತಿದ್ದರು. ಗಡಕರಿಯವರ ವಾಗ್ವೈಜಯಂತಿ ಹೂವಿನ ಜೇನಿಗೆ ಗುಂಗುಗಾನವೆಸಗುವ ಭೃಂಗದ ಬೆನ್ನೇರಿ ಬೇಂದ್ರೆಯವರ ಕಲ್ಪನಾ ವಿಲಾಸ ಬಂತು. ಗಡಕರಿಯವರ ವಾಙ್ಮಯಾಭ್ಯಾಸದ ಮಂಥನ ಕ್ರಿಯೆ ಮೂಲದಲ್ಲಿ ಇದೆ’ ಎಂದು ಪುನರುಚ್ಚರಿಸಿದ್ದಾರೆ.
ಗಡಕರಿ ಅವರ ಮಹತ್ವ ಮತ್ತು ಅವರ ’ಏಕಚ್ ಪ್ಯಾಲಾ’ ಕನ್ನಡ ಸಾಹಿತ್ಯವನ್ನು ಪ್ರಭಾವಿಸಿದ ರೀತಿಯಿದು. ಅದಿರಲಿ.
ಶಿವರಾಮ ಕಾರಂತರು ತಮ್ಮ ಮೊದಲ ಕೃತಿಯ ಬಗ್ಗೆ ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಆದರೆ, ’ಸ್ಮೃತಿಪಟಲದಿಂದ’ದ ಎರಡನೇ ಸಂಪುಟ (1978) ದಲ್ಲಿ ’ಈ ಹೊತ್ತು ನಾನೊಬ್ಬ ಸಾಹಿತಿ ಅನಿಸಿಯೇ ಬಿಟ್ಟಿದ್ದೇನೆ. ಹಾಯ್‌ಸ್ಕೂಲ್ ಓದುತ್ತಿದ್ದಾಗ ಪೋರ್ತ್ ಫಾರ್ಮಿನಲ್ಲಿ 'ವಿಯೋಗಿನಿ' ಎಂಬ ಒಂದು ಕಾದಂಬರಿಯನ್ನು ಬರೆಯಲು ಹವಣಿಸಿ, ಅರ್ಧ ಅಧ್ಯಾಯವನ್ನಾದರೂ ಬರೆದಿರಬೇಕೆಂಬುದೂ ನೆನಪಿದೆ. ಅದರ ಪ್ರತಿ ಈಗ ನನ್ನ ಕೈಗೆ ಸಿಗುತ್ತಿದ್ದರೆ ಏನೆಲ್ಲ ಬರೆದಿದ್ದೆ ಎಂಬ ನನ್ನ ಮೂರ್ಖತೆಯ ಆಳ ತಿಳಿಯುತ್ತಿತ್ತೋ ಏನೋ. 'ವಿಯೋಗಿನಿ' ಎಂಬ ಭರ್ಜರಿ ಹೆಸರನ್ನು ಕೇಳಿದಾಗಲೇ ವೆಂಕಟಾಚಾರ್ಯರ ಕಾದಂಬರಿಗಳನ್ನು ಓದಿದ ವ್ಯಾಮೋಹದಿಂದ, ಅರ್ಥವೇನೇ ಇದ್ದರೂ ಆಡಂಬರದ ಶಬ್ದಗಳನ್ನು ತುರುಕಿಸಬೇಕೆಂಬ ಚಪಲ ಅಂದು ನನ್ನಲ್ಲಿ ಮೂಡಿತ್ತೆಂಬುದು ಸ್ಪಷ್ಟವಾಗುತ್ತದೆ. ಗದ್ಯವಿರಲಿ, ಪದ್ಯವಿರಲಿ-ಅದು ಇರುವುದೇ ವ್ಯಕ್ತಿ ತನ್ನ ಅನುಭವಗಳನ್ನು, ತಿಳಿವನ್ನು, ಭಾವನೆಗಳನ್ನು, ಕಲ್ಪನೆಗಳನ್ನು, ವಿಚಾರಗಳನ್ನು ತನಗನಿಸಿದಷ್ಟೇ ಶಕ್ತಿಯುತವಾಗಿ, ಸ್ವಾರಸ್ಯವಾಗಿ ಇತರರಿಗೆ ತಿಳಿಸುವುದಕ್ಕೆ ಎಂಬ ವಿಚಾರಸರಣಿ ಆ ಕಾಲಕ್ಕಂತು ಖಂಡಿತವಾಗಿ ನನ್ನಲ್ಲಿ ಮೂಡಿರಲಿಲ್ಲ. ಇತರರಿಗಿಂತಲೂ ತಾನು ಭರ್ಜರಿ ಮಾತುಗಾರ ಎಂದು ತೋರಿಸುವ ಸಾಧನ ಅದಾಗಿ ಕಾಣಿಸಿತ್ತು’ ಎಂಬ ಬರವಣಿಗೆಯ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಾರಂತರ ಪ್ರಕಾರ ’ವಿಯೋಗಿನಿ’ ಅವರ ಮೊದಲ ರಚನೆಯಾದರೂ ಅದು ಅಪೂರ್ಣ ಹಾಗೂ ಅಪ್ರಕಟಿತ ಕೃತಿ. ಆದ್ದರಿಂದ ಅದಕ್ಕೆ ಮೊದಲ ಪ್ರಯತ್ನದ ಶ್ರೇಯ ದೊರೆಯಬಹುದೇ ಹೊರತು ಮೊದಲ ಕೃತಿಯಾಗಲಾರದು.
ಆದರೆ, ಕಾರಂತರು ತಮ್ಮ ’ಹುಚ್ಚು ಮನಸ್ಸಿನ ಹತ್ತು ಮನಸ್ಸುಗಳು’ ಕೃತಿಯಲ್ಲಿ ’1924ರಲ್ಲಿ ನನ್ನ ಸಂಪಾದಕತ್ವದಲ್ಲಿ 'ವಸಂತ' ಎಂಬ ಮಾಸ ಪತ್ರಿಕೆಯನ್ನು ಹೊರಡಿಸುವ ನಿರ್ಧಾರವಾಯಿತು. 'ಸಂಪಾದಕ' ಎಂಬ ಪದದ ಮೇಲೆ ಮೋಹ ನನಗೆ. 'ಯಾವೊಂದು ಬಿರುದು ಇಲ್ಲದೆ ಹೋದರೂ, ಸಂಪಾದಕ' ಎಂಬ ಬಿರುದಿಂದ ದೊಡ್ಡ ವ್ಯಕ್ತಿಯಾಗಬಹುದೆಂದು ಅನಿಸಿತೋ ಏನೋ ! ಆ ಕೆಲಸ ಮಾಡಲು ಒಪ್ಪಿಕೊಂಡೆ. ನನ್ನಲ್ಲಿ ಹಣವಿರಲಿಲ್ಲ. ದೇವಣ್ಣ ಪೈಗಳವರು ಸಾಲಮಾಡಿ, 'ಒಂದು ವರ್ಷದ ಮಟ್ಟಿಗೆ ಅದನ್ನು ಹೇಗೂ ನಡೆಸುವ' ಎಂದರು. ಯೋಚನೆ ಬಂದಷ್ಟೇ ತೀವೃದಿಂದ 'ವಸಂತ'ವೆಂಬ ಮಾಸಪತ್ರಿಕೆಯನ್ನು ಹೊರಡಿಸುವ ನಿಶ್ಚಯವಾಯಿತು’ ಎಂದು ದಾಖಲಿಸಿದ್ದಾರೆ.
ಮಾಲಿನಿ ಮಲ್ಯ ಅವರು ನವಕರ್ನಾಟಕಕ್ಕೆ ಬರೆದ ಕೃತಿಯಲ್ಲಿ 2023ರ ದಶಂಬರ ತಿಂಗಳಲ್ಲಿ ಕಾರಂತರು ಆರಂಭಿಸಿದ `ವಸಂತ’ ಎಂಬ ಕನ್ನಡ ಪತ್ರಿಕೆಯೇ ಒಬ್ಬ ಪ್ರತಿಭಾನ್ವಿತ ಲೇಖಕ, ವಿಮರ್ಶಕ, ವಿಚಾರವಾದಿ, ಹೋರಾಟಗಾರ ಸಾಹಿತಿಯನ್ನು ಸೃಷ್ಟಿಸಿತೆಂದು ಹೇಳಬಹುದು. `ವಸಂತ’ ಪತ್ರಿಕೆ ಕನ್ನಡ ಸಾಹಿತ್ಯ ಜಗತ್ತಿನ ಪಾಲಿಗೆ ವಸಂತ ಋತುವಿನ ಆಗಮನದ ಸಂಕೇತವಾಗಿತ್ತು’ ಎಂದು ಬರೆದಿದ್ದಾರೆ. ಮುಂದುವರೆದು `1924ರಲ್ಲಿ ಸ್ವಂತಕ್ಕೆ ತೊಡಗಿದ ಪತ್ರಿಕಾ ಸಾಹಸದ ದೆಸೆಯಿಂದಾಗಿ- ಕಾರಂತರ ಲೇಖನಿ ಪಳಗಲಾರಂಭಿಸಿದ್ದನ್ನು ಗಮನಿಸಬಹುದು’ ಎಂದು ಪ್ರಸ್ತಾಪಿಸಿದ್ದಾರೆ.
ವಿ.ಎಂ. ಇನಾಂದಾರ್ ಅವರು `ಶಿವರಾಮ ಕಾರಂತ: ಬದುಕು-ಬರಹ’ ಕೃತಿಯಲ್ಲಿ' ಕಾರಂತರು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ್ದು ಪತ್ರಿಕಾ ವ್ಯವಸಾಯದ ಮುಖಾಂತರ, ಅಂದು ಅವರು ಒಂದು ಪತ್ರಿಕೆಯನ್ನು ಪ್ರಾರಂಭಿಸಿರದಿದ್ದರೆ ಈಗ ಬೆಳೆದಂತೆ ಅವರು ಬೆಳೆಯುತ್ತಿದ್ದರೋ ಹೇಳಲಾಗುವುದಿಲ್ಲ. ಅವರು ತೊಡಗಿದ ಪತ್ರಿಕೆ ಬರವಣಿಗೆಯ ಕ್ಷೇತ್ರದಲ್ಲಿಯ ಮೊದಲ ಹೆಜ್ಜೆಯಾದಂತೆ ಮುಂದೆ ಅವರು ನಡೆದ ದಾರಿಯಲ್ಲಿಯೇ ಆ ಹೆಜ್ಜೆಗಳು ಬೀಳುವಂತೆ ಮಾಡಿದ ಪ್ರಭಾವಶಕ್ತಿಯೂ ಆಯಿತು. ಸಮಕಾಲೀನ ಜೀವನದ ಎಲ್ಲ ಮುಖಗಳನ್ನು ಕುರಿತ ವಿಚಾರಗಳ ಪ್ರಚಾರವನ್ನೇ ಗುರಿಯಾಗಿಸಿ ಕೊಂಡ “ವಸಂತ” ಎಂಬ ಪಾಕ್ಷಿಕ ಪತ್ರಿಕೆಯನ್ನು 1924ರಲ್ಲಿ ಪ್ರಾರಂಭಿಸಿದರು’ ಎಂದು ಬರೆದು ’ಅವರ ಮೊದಲ ಕಾದಂಬರಿಗಳಾದ “ವಿಚಿತ್ರಕೂಟ” ಮತ್ತು “ಭೂತ' ಪ್ರಕಟವಾದದ್ದು ಆ ಪತ್ರಿಕೆಯಲ್ಲಿ, ಸೆಕ್ಸಟನ್ ಬೈಕ್ ಮಾದರಿಯ ಪತ್ತೇದಾರಿ ಕಾದಂಬರಿಗಳು ಅವು. ಕೊನೆಯವರೆಗೆ ಕುತೂಹಲವನ್ನು ಕಾಯ್ದುಕೊಂಡು ಹೋಗಬೇಕಾದ ಕೃತಕ ಕಥಾರಚನೆಯೇ ಮುಖ್ಯವಾಗಿದ್ದ ಅಂಥ ಕೃತಿಗಳಲ್ಲಿ ಮುಂದೆ ಬೆಳೆಯಲಿದ್ದ ಕಾದಂಬರಿಕಾರನ ಯಾವ ಸೂಚನೆಯೂ ಸಿಕ್ಕುವುದಿಲ್ಲ. ಆದರೆ ಮುಂದೆ ಒಂದೆರಡು ವರ್ಷಗಳಲ್ಲಿ ಪ್ರಕಟವಾದ ’ನಿರ್ಭಾಗ್ಯ ಜನ್ಮ’, ’ದೇವದೂತರು’ ಮತ್ತು ’ಸೂಳೆಯ ಸಂಸಾರ’ಗಳಲ್ಲಿ ಹೊಸ ದೃಷ್ಟಿ ಕಾಣಿಸಿಕೊಳ್ಳುತ್ತದೆ’ ಎಂದು ವಿಶ್ಲೇಷಿಸಿದ್ದಾರೆ.
ಇದಕ್ಕೆ ಪೂರಕವಾಗಿ ಕಾರಂತರು ತಮ್ಮ ’ಸ್ಮತಿ ಪಟಲದಿಂದ’ (ಸಂಪುಟ 2) ಕೃತಿಯಲ್ಲಿ `ನಾನು-ಆರ್ಥರ್ ಕಾನನ್‌ಡೈಲನ ಪತ್ತೇದಾರಿ ಕಥೆಗಳನ್ನು, ಸೆಕ್ಸ್‌ಟನ್ ಪ್ಲೇಕನ ಕಥೆಗಳನ್ನು ತುಣುಕು, ಚೂರು ಓದಿಕೊಂಡದ್ದರ ಮೇಲಿಂದ, ಅಂತಹ ಅದ್ಭುತ ಕಾಲ್ಪನಿಕ ಕಥಾನಕಗಳನ್ನು ನಾನೇ ಹೊಸೆಯುವುದಕ್ಕೆ ತೊಡಗಿದೆ. ಪತ್ರಿಕೆಯ ಕೆಲವು ಪುಟಗಳನ್ನು ಅದರಿಂದ ಹಾಗೂ ಹೀಗೂ ತುಂಬಿಸಿದೆ’ ಎಂದು ಮಾಹಿತಿ ನೀಡುವುದರ ಜೊತೆಗೆ ’ಪತ್ತೇದಾರಿ ಕಾದಂಬರಿಯಂತಹ ಕಗ್ಗವನ್ನು ಹೊಸೆಯುವುದಕ್ಕೆ ನನ್ನ ಕಲ್ಪನೆ ಸಾಕೆನಿಸಿತ್ತು. ನಾನು ಪ್ರಕಟಿಸಿದ 'ಭೂತ' ಮತ್ತು 'ವಿಚಿತ್ರ ಕೂಟ' ಎಂಬೆರಡು ಕಾದಂಬರಿಗಳನ್ನು ನನ್ನಷ್ಟೂ ಬುದ್ಧಿ ಇಲ್ಲದ ಎಷ್ಟೋ ಹುಂಬ ಜನರು ಮೆಚ್ಚಿದ್ದರು. ಅದರಿಂದ ನಾನು ಹಿಗ್ಗಿ ನಲಿಯುತ್ತಿದ್ದ ಕಾಲದಲ್ಲೇ ಪುತ್ತೂರಿನಲ್ಲಿ ನೆಲೆಸಿದ್ದ ಉಗ್ರಾಣ ಮಂಗೇಶರಾಯರು ಎಂಬ ಪಂಡಿತರು ನನ್ನನ್ನು ಪ್ರೀತಿಯಿಂದ ಹತ್ತಿರ ಕರೆದು ಕಾರಂತರೇ, ಈ ವಿಚಿತ್ರಕೂಟ ಬರೆದಿರಲ್ಲ, ಇದರಿಂದ ಏನು ಪ್ರಯೋಜನ ?' ಎಂದು ಪ್ರಶ್ನಿಸಿಯೇ ಬಿಟ್ಟರು. ಈ ಪ್ರಶ್ನೆ ನನ್ನನ್ನು ವಿಚಾರಕ್ಕೆ ಗುರಿಮಾಡಲೇ ಬೇಕಾಯಿತು’ ಎಂದು ವಿವರಿಸಿದ್ದಾರೆ.
ಕಾರಂತರ ಕಾದಂಬರಿಯ ಬರವಣಿಗೆ ಆರಂಭವಾದದ್ದು ’ವಸಂತ’ದಲ್ಲಿ ಧಾರಾವಾಹಿಗಳಾಗಿ ಪ್ರಕಟಣೆ ಆರಂಭಿಸಿದ್ದರಿಂದ ಎಂಬುದು ನಿರ್ವಿವಾದ. ಇದಕ್ಕೆ ಪೂರಕವಾಗಿ ಮಾಲಿನಿ ಮಲ್ಯ ಅವರು ನವಕರ್ನಾಟಕಕ್ಕಾಗಿ ರಚಿಸಿದ ಕೃತಿಯಲ್ಲಿ ’ಸ್ತ್ರೀಪರ ನಿಷ್ಠೆಯಿಂದ ಕೂಡಿದ ಇಂಥ ಸಾಮಾಜಿಕ ಕಾದಂಬರಿಗಳು ಕಾರಂತರ ಮನಸ್ಸನ್ನು ತಟ್ಟಿದ್ದರಿಂದ ಅವೇ ಧ್ಯೇಯ ಧೋರಣೆಗಳನ್ನು ಪ್ರತಿಪಾದಿಸುವ `ನಿರ್ಭಾಗ್ಯ ಜನ್ಮ’ (1925) ಮತ್ತು ಕನ್ಯಾಬಲಿ ಅಥವಾ ಸೂಳೆಯ ಸಂಸಾರ (1929-30) ಎಂಬ ಕಾದಂಬರಿಗಳನ್ನು ಕಾರಂತರು ತಮ್ಮ ಸ್ವಂತ ಪತ್ರಿಕೆ ’ವಸಂತ’ದಲ್ಲಿ ಪ್ರಕಟಿಸಿದರು. ಇದಕ್ಕೂ ಮುನ್ನ, ಬಂಗಾಳೀ ಕಾದಂಬರಿಗಳ ಕನ್ನಡ ಅನುವಾದಗಳ ಸ್ಫೂರ್ತಿಯಿಂದ ಅದ್ಭುತ, ರಮಣೀಯತೆಗಳ ಕಡೆಗೆ ಮಾರುಹೋಗಿದ್ದ ಕಾರಂತರು, ಜನರಂಜನೆಗಾಗಿ ’ವಸಂತ’ ಪತ್ರಿಕೆಯಲ್ಲಿ 1924ರಲ್ಲಿ ’ವಿಚಿತ್ರಕೂಟ’ ಮತ್ತು 1925ರಲ್ಲಿ ’ಭೂತ’ ಎಂಬ ಎರಡು ಪತ್ತೇದಾರಿಗಳನ್ನು ಪ್ರಕಟಪಡಿಸಿದರು. ಕಾರಂತರ ಮೊದಲ ಕಾದಂಬರಿ ವಿಚಿತ್ರಕೂಟ ವಸ್ತುವಿನ ದೃಷ್ಟಿಯಿಂದ ಮಹತ್ವದ ಕಾದಂಬರಿಯಲ್ಲದಿದ್ದರೂ ಕಾರಂತರ ಕಥನಶೈಲಿ ಮೊದಲ ಬರಹದಲ್ಲೇ ಆಕರ್ಷಕವಾಗಿದ್ದನ್ನು ವಿಮರ್ಶಕರು ಕಡೆಗಣಿಸುವಂತಿಲ್ಲ; ಮಾತ್ರವಲ್ಲ, ಅದೊಂದು ಪತ್ತೇದಾರಿ ಕಾದಂಬರಿ ಆಗಿರುವುದರಿಂದ ಪತ್ತೇದಾರಿ ಕಾದಂಬರಿ ಹೇಗಿರಬೇಕೋ, ಹೇಗಿರುತ್ತದೋ ಆ ಎಲ್ಲ ಲಕ್ಷಣಗಳನ್ನೂ ಈ ಕಾದಂಬರಿ ಹೊಂದಿರುವುದರಿಂದ ಇದೊಂದು ಯಶಸ್ವೀ ಬರಹವೆಂದು ಪರಿಗಣಿಸಲ್ಪಡಬೇಕಾದ ಅಗತ್ಯವಿದೆ. ಜನರಂಜನೆಗಾಗಿ, ಪತ್ರಿಕೆಯ ಆಕರ್ಷಣೆಯನ್ನು ಹೆಚ್ಚಿಸಲು ಇಂಥದೊಂದು ಕತೆಯನ್ನು ಪ್ರಕಟಿಸಿದರೂ, ಕಾರಂತರ ಒಳಮನಸ್ಸು ಗಂಭೀರ ಚಿಂತನೆಯತ್ತ ವಾಲಿದ್ದುದರ ಸ್ಪಷ್ಟ ಸೂಚನೆ ಈ ಕಾದಂಬರಿಯ ಅಂತ್ಯದಲ್ಲಿ ಸಿಗುತ್ತದೆ’ ಎಂದು ತಿಳಿಸಿದ್ದಾರೆ.
1925ರಲ್ಲಿ ’ವಸಂತ’ ಪತ್ರಿಕೆಯಲ್ಲಿ ಪ್ರಕಟಗೊಂಡ, ಕ್ರೌನ್ ಚತುರ್ಥ ಆಕಾರದ 49 ಪುಟಗಳ ಕಾರಂತರ ಸಾಮಾಜಿಕ ಕಾದಂಬರಿಯೇ ’ನಿರ್ಭಾಗ್ಯ ಜನ್ಮ’ದ ಬಗ್ಗೆ ಪ್ರಸ್ತಾಪಿಸುವ ಮಾಲಿನಿ ಮಲ್ಯ ಅವರು 1925ರಲ್ಲಿ ಪ್ರಕಟವಾದ `ಭೂತ’ವೂ ಪತ್ತೇದಾರಿ ಕಾದಂಬರಿಯೇ. ಇದೂ ಭಾಷೆಯ ಸಮರ್ಥ ಪ್ರಯೋಗ, ವಸ್ತು ಮತ್ತು ಕಾದಂಬರಿಯ ಪ್ರಕಾರದಿಂದಾಗಿ, ಕಾದಂಬರಿ ಹುಟ್ಟಿಕೊಂಡ ಕಾಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ವಿಮರ್ಶಿಸಿದಾಗ, ಕಾರಂತರ ಮೊದಲ ಯಶಸ್ವೀ ಕಾದಂಬರಿ ಎಂಬುದಾಗಿ ಧಾರಾಳವಾಗಿ ಹೇಳಬಹುದು. ಭೂತಪ್ರೇತಗಳು ನಿಜವೆಂಬು ನಂಬಿ, ಭಯ ವಿಹ್ವಲರಾಗುವ ಜನರಿಗೆ ವೈಜ್ಞಾನಿಕ ಪ್ರಯೋಗಗಳ ಮೂಲಕ 1925ರಲ್ಲಿಯೇ ಕಾರಂತರು ತೋರಿಸಿಕೊಟ್ಟರು’ ಎಂದು ಕಾರಂತರ ಕಾದಂಬರಿ ಬರವಣಿಗೆಯ ಆರಂಭದ ದಿನಗಳ ಬಗ್ಗೆ ಬರೆಯುತ್ತಾರೆ.
`1923 ರಲ್ಲಿ ಶಿವರಾಮ ಕಾರಂತರು ರಚಿಸಿದ ಕವನ ಸಂಕಲನ `ರಾಷ್ಟ್ರಗೀತ ಸುಧಾಕರ’ ಎಂಬ ಹೆಸರಿನಲ್ಲಿ ಉಡುಪಿಯ ಸತ್ಯಾಗ್ರಹೀ ಮುದ್ರಣಾಲಯದಲ್ಲಿ ಮುದ್ರಣಗೊಂಡು ಪ್ರಕಟವಾಯಿತು. ಇದರಲ್ಲಿ 22 ಕಿರು ಪದ್ಯಗಳಿವೆ. ಉತ್ತರಾದಿ ಶೈಲಿಯಲ್ಲಿ ಹಾಡಲು ಅನುವಾಗುವಂತೆ ರಾಗ, ತಾಳಗಳನ್ನು ಸೂಚಿಸಲಾಗಿದೆ. ಕವನ ಸಂಕಲನದ ಶಿರೋನಾಮೆಯೇ ಸೂಚಿಸುವಂತೆ, ರಾಷ್ಟ್ರಭಕ್ತಿಯಿಂದ ಪ್ರೇರಿತವಾದುದು. ಮದ್ಯಪಾನದ ದುಷ್ಪರಿಣಾಮ, ಅಸ್ಪೃಶ್ಯತೆಯ ಕಳಂಕ, ಮುಂತಾದ ಸಮಾಜ ಸುಧಾರಣಾ ಕನಸುಗಳಿಂದ ಪ್ರೇರಿತವಾಗಿರುವ ವಸ್ತುಗಳ ಕಾರಣಕ್ಕಾಗಿ ಈ ಕಿರುಗೀತ ಸಂಕಲನ ಐತಿಹಾಸಿಕ ಮಹತ್ವವುಳ್ಳದ್ದು’ ಎಂದು ಮಾಲಿನಿ ಮಲ್ಯ ಅವರು ಬರೆದಿದ್ದಾರೆ.
ಭೀಮಪಲಾಸ ರಾಗ ಮತ್ತು ತ್ರಿವಟ ತಾಳದಲ್ಲಿ ಹಾಡಬಹುದಾದ ’ಚರಣ ಕಿಂಕರನ ಪ್ರಾರ್ಥನೆ’ ಎಂದು ಎರಡು ಸಾಲುಗಳ
’ಜನನಿ ನಿನ್ನಯಾ ಪ್ರೇಮರಸವೇ| ಆಶೀರ್ವಾದಂ ಬಲು ಸುರಸಾ ||೧||
ಜನನಿ ನಿನ್ನೊಳೂ ಸ್ವರ್ಗಸುಖವೂ | ನಿತ್ಯಾನಂದವನು ಕೊಡುವಾ ||೨||
ಎಂಬ ಕವಿತೆಯು ಸಂಕಲನದ ಮೊದಲ ಕವಿತೆ. ಹೀಗೆಯೇ ಅಮೀರ ಕಲ್ಯಾಣಿ, ಕಲ್ಯಾಣಿ, ಕಾಂಬೋಧಿ, ಜುಂಜೂಟಿ ಮಿಶ್ರ, ಪೀಲ ಜಿಲ್ಹಾ, ಕಾಫಿ ಜಿಲ್ಹಾ, ಮುಖಾರಿ, ಕೇದಾರ, ಪೂರ್ವಿ, ಕಾನಡಾ, ಕೇದಾರಗೌಳ, ಯಮನ್ ಕಲ್ಯಾಣಿ, ದರ್ಬಾರಿ ಕಾನಡಾ, ಚಾಲ್ ರಾಗಗಳಲ್ಲಿ ಹಾಡಬಹುದಾದ ಒಟ್ಟು 22 ಗೀತೆಗಳಿವೆ. ಭಜನೆ ಮಟ್ಟಿನ ಎರಡು ಹಾಡುಗಳೂ ಇದರಲ್ಲಿ ಸೇರಿವೆ.
ಬಹುತೇಕ ಗೀತೆಗಳು ದೇಶವನ್ನು ಕುರಿತವು. `ಸ್ವಯಂಸೇವಕನ ಮಂತ್ರ’, `ಎದ್ದು ಕರ್ತವ್ಯವನ್ನು ತಿಳಿ’, `ಗಾಂಧಿ ಯಾರು?’, `ಭರತ ಬಂಧುವಿನ ಕರ್ತವ್ಯ’, `ದೇವತೆಗಳ ಆಶೀರ್ವಾದ’, `ಮಾತೆಯ ಸೇವೆ’, `ಬಾಲಗಂಗಾಧರ ವಾ ಮಾತಾ ವಿಲಾಪ’, `ಸ್ವರಾಜ್ಯ ಛಲ’, `ವಂದೇ ಮಾತರಂ’ ಈ ಕವಿತೆಗಳು ದೇಶದ ಬಗೆಗಿನ ಕವಿಯ ದ್ಯೋತಕವಾಗಿವೆ. ಅಲ್ಲದೇ `ಮದ್ಯಪಾನದ ಪರಿಣಾಮ’, `ಯವನನಾರು?’, `ಅಸ್ಪರ್ಶತಾ ಕಲಂಕ’ ಎಂಬ ಸಾಮಾಜಿಕ ಪಿಡುಗುಗಳನ್ನು ಕುರಿತ ಕವಿತೆಗಳನ್ನೂ ಈ ಸಂಕಲನ ಒಳಗೊಂಡಿದೆ. ಮಾತಾ ಸ್ತುತಿ’ ಎಂಬ ದೀರ್ಘ ಗೀತೆಯೂ `ವಿದೇಶಿ ಬಹಿಷ್ಕಾರ’ `ವಾಸ್ತವಿಕ ಸ್ಥಿತಿ’ ಎಂಬ ಗೀತೆಗಳೂ ಕೂಡ ಸಂಕಲನದ ಭಾಗವಾಗಿವೆ. ’ಮಂಗಳಂ’ ಕವಿತೆಯೊಂದಿಗೆ ಸಂಕಲನ ಮುಗಿಯುತ್ತದೆ.
1923ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ಉಡುಪಿಯ ಸತ್ಯಾಗ್ರಹೀ ಮುದ್ರಣಾಲಯದಲ್ಲಿ ಮುದ್ರಣವಾಗಿತ್ತು. ಉ. ಶಾಂತರಾಮ ರಾಯರು ಮುದ್ರಕರಾಗಿದ್ದರೆ ಕವಿ ಕೋಟ ಶಿವರಾಮ ಕಾರಂತರು ಪ್ರಕಾಶಕರಾಗಿ ಪ್ರಕಟಿಸಿದ್ದರು.
1923ರಲ್ಲಿಯೇ ಕವನ ಸಂಕಲನ ಪ್ರಕಟಿದ್ದರೂ ಕಾರಂತರಿಗೆ ಕವಿತೆ-ಕಾವ್ಯ ಕುರಿತು ಅಂತಹ ವಿಶೇಷ ಆಸಕ್ತಿಯೇನೂ ಇರಲಿಲ್ಲ ಎಂಬುದು ಸ್ಮೃತಿಪಟಲದಿಂದ (ಎರಡನೇ ಸಂಪುಟ) ಗೊತ್ತಾಗುತ್ತದೆ. ’ಬೇಂದ್ರೆಯವರು, ಗೋವಿಂದ ಪೈಗಳು ಆ ವಿಷಯದಲ್ಲಿ ನನಗೆ ನೆರವಾದದ್ದುಂಟು. ಸ್ವತಃ ಕವನಗಳಲ್ಲಿ ಪ್ರೀತಿ ಬೆಳೆಯಿಸಿಕೊಳ್ಳದಿದ್ದ ನಾನು, ಕನ್ನಡದ ಸೇವೆ ಮಾಡುವುದಕ್ಕೆ ಇಂಥ ಮಿತ್ರರನ್ನು ಮೊರೆಹೋಗಬೇಕಾಯಿತು’ ಎಂದು ತಿಳಿದು ಬರುತ್ತದೆ. ಅದು ಕೂಡ ಅಷ್ಟೇನು ನಿಜವಾದ ಸಂಗತಿಯಲ್ಲಿ ನಂತರದ ದಿನಗಳಲ್ಲಿ ಅವರು `ಸೀಳ್ಗವನಗಳು’ ಎಂಬ ಮತ್ತೊಂದು ಸಂಕಲನ ಪ್ರಕಟಿಸಿದ್ದರು. ಹಾಗೆಯೇ ಅವರ ಗೀತ ನಾಟಕಗಳು ಅವರ ಕಾವ್ಯಶಕ್ತಿಯ ಮುಂದುವರಿಕೆಯೇ ಆಗಿದೆ.
ಊರಿನ ಕೆರೆಯೊಂದರ ಬಗ್ಗೆ ಅವರು ಬರೆದ ಪ್ರಬಂಧವೊಂದರಲ್ಲಿ ಬರೆದ ಮೂರು ಸಾಲಿನ ಕವನ ಇಂತಿದೆ-
ಮೊದಲು ನಾನಾದೆ ಋಷಿಗಾಗಿ
ಆಮೇಲೆ ನಾನಾದೆ ಕೃಷಿಗಾಗಿ
ಈಗಿರುವೆ ನೋಡಯ್ಯ ನುಸಿಗಾಗಿ
ಪತನಮುಖೀ ಸಮಾಜವನ್ನು ಕಾರಂತರು ಚಿತ್ರಿಸುವ ಬಗೆ ಈ ರೀತಿಯದು.
’ಬೆಟ್ಟದ ಜೀವ’ವು ಕಾರಂತರು ಬರೆದ ಕಾವ್ಯದಂಥಾ ಕಾದಂಬರಿ’ ಎಂದು ಪುರುಷೋತ್ತಮ ಬಿಳಿಮಲೆ ಅವರು `ಶಿವರಾಮ ಕಾರಂತ ವೇದಿಕೆಯ ಮುಖಪತ್ರಿಕೆಯಾದ `ಹಣತೆ’ಯಲ್ಲಿ ಪ್ರಕಟವಾದ ’ಶಿವರಾಮ ಕಾರಂತರ ಅನನ್ಯತೆ’ ಲೇಖನದಲ್ಲಿ ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಪೂರಕವೆಂಬಂತೆ `ಮಗುವಿನ ಮುಗ್ಧತೆ, ವಿಜ್ಞಾನಿಯ ಕುತೂಹಲ, ಕಲಾವಿದನ ಸೂಕ್ಷ್ಮತೆ, ತತ್ವಜ್ಞಾನಿಯ ತರ್ಕ, ಕವಿಯ ಭಾವುಕತೆಗಳೆಲ್ಲ ಮೇಳೈಸಿದ ವರ್ಣರಂಜಿತ ವ್ಯಕ್ತಿತ್ವ ಅವರದು’ ಎಂದು ಬಿಳಿಮಲೆ ಬರೆದಿದ್ದಾರೆ.
`ವೈಚಾರಿಕತೆ ಇರುವವರಿಗೆ ಭಾವುಕವಾದ ಕವನಗಳನ್ನು ಬರೆಯಲಾಗುವುದಿಲ್ಲ. ಗದ್ಯವೇ ಅವರ ಪ್ರಮುಖ ಮಾಧ್ಯಮ. ಡಾ. ಶಿವರಾಮ ಕಾರಂತರಿಗಾದರೂ ಅಷ್ಟೆ. `ಸೀಳ್ಗವನಗಳು’, `ರಾಷ್ಟ್ರಗೀತ ಸುಧಾಕರ’ ಎಂಬ ಹೆಸರಿನ ಕವನ ಸಂಕಲನಗಳನ್ನು ಅವರು ಪ್ರಕಟಿಸಿರುವರಾದರೂ ಕನ್ನಡಿಗರು ಅವನ್ನು ಗಂಭೀರವಾಗಿ ಸ್ವೀಕರಿಸಿಲ್ಲ’ ಎಂಬ ಅಭಿಪ್ರಾಯ ಬಿಳಿಮಲೆ ಅವರದು.
ಅದೇನೇ ಇದ್ದರೂ ಕಾರಂತರು 1923ರಲ್ಲಿ ಪ್ರಕಟಿಸಿದ `ರಾಷ್ಟ್ರಗೀತ ಸುಧಾಕರ’ವೇ ಅವರ ಮೊದಲ ಪ್ರಕಟಿತ ಕೃತಿ. ಅದಕ್ಕಿಂದ ಮೊದಲು ಕಾರಂತರು ಬರವಣಿಗೆಯ ಹಲವು ಪ್ರಯೋಗಗಳನ್ನ ಮಾಡಿದ್ದು ತಿಳಿದು ಬರುತ್ತದೆ.
ಸಾಹಿತ್ಯ ಕುರಿತ ಕಾರಂತರ ಗ್ರಹಿಕೆಯನ್ನು ಸೂಚಿಸುವ ಈ ಸಾಲುಗಳೊಂದಿಗೆ ಈ ಬರೆಹಕ್ಕೆ ವಿರಾಮ ನೀಡಬಹುದು.
ಸಾಹಿತ್ಯ ಕೃತಿಗಳು ಸಹಜ ಜೀವನದ ಚಿತ್ರಗಳಂತೆ ಕಂಡರೂ ತೀರ ಅವುಗಳ ತದ್ ಪ್ರತಿಗಳಲ್ಲ. ವಸ್ತುವನ್ನು ಇದ್ದಕ್ಕಿದ್ದಂತೆ ಹೇಳುವುದಕ್ಕೆ ಇಂದು ಎಷ್ಟೋ ಯಂತ್ರೋಪಕರಣಗಳಿವೆ. ಕೆಮರಾ ಆ ಕೆಲಸ ಮಾಡುತ್ತದೆ. ಮಾತುಗಳ ವಿಚಾರದಲ್ಲಿ ಬರಿಯ ಅಷ್ಟೊಂದು ಕೆಲಸಕ್ಕೆ ಸಾಹಿತಿಯೂ ಬೇಡ, ಕಲಾವಿದನೂ ಬೇಡ. ಆದರೆ ಈ ರೀತಿಯಲ್ಲಿ ಅನುಕರಣೆ ಮಾಡುವುದಕ್ಕೆ ಕಲೆ ಎನ್ನುವುದಿಲ್ಲ. ವಾಸ್ತವಿಕ ಜಗತ್ತಿನಲ್ಲಿ ಬಾಳಿ, ಕೇಳಿ, ನೋಡಿ, ಮೂಸಿ, ಆಸ್ವಾದಿಸಿ, ಮುಟ್ಟಿ ತೂಗುವ ಮನುಷ್ಯ ತನ್ನದಾದ ಅನುಭವಗಳನ್ನು ಗಳಿಸಿ, ಯಾವುದೋ ಆಂತರಿಕ ಒತ್ತಡದಿಂದ ಪ್ರಕಟಿಸುವ ಬಗೆಯ್ನು ನಾವು ಕೆಲ, ಸಾಹಿತ್ಯ ಅನ್ನುತ್ತೇವೆ.
"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...
"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...
"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...
©2025 Book Brahma Private Limited.