ಸೌಂದರ್ಯ ಪ್ರಜ್ಞೆಯ ಪ್ರತೀಕ-ಬುಗಡೀ ಕಡ್ಡಿ

Date: 13-09-2020

Location: ಬೆಂಗಳೂರು


ಹೈದರಾಬಾದ್‌ ಮತ್ತು ಉತ್ತರ ಕರ್ನಾಟಕಗಳಲ್ಲಿ ಹೆಂಗಳೆಯರು ಬಳಸುವ ಕಿವಿಯ ಆಭರಣಗಳ ಕುರಿತು ಸಂಶೋಧಕಿ-ಲೇಖಕಿ ರೇಣುಕಾ ಕೋಡಗುಂಟಿ ಅವರು ಬರೆದಿದ್ದಾರೆ. ಹೈದರಾಬಾದ್‌ ಕರ್ನಾಟಕದ ವಿಭಿನ್ನ ಆಚರಣೆ-ನಂಬಿಕೆ ಕುರಿತು 'ವರ್‍ತಿ ನೀರು ಕರಿಕಿ ಬೇರು’ ಅಂಕಣದಲ್ಲಿ ಬರೆಯುತ್ತಾರೆ.

ಬುಗಡಿಕಡ್ಡಿ
ಅಲಂಕಾರ ಸಾಧನಗಳಾಗಿರುವ ಆಭರಣಗಳು ಮನುಷ್ಯರೊಳಗಿನ ಸೌಂದರ್‍ಯ ಪ್ರಜ್ಞೆಯ ಸಂಕೇತ. ಭಾರತೀಯ ಪರಂಪರೆಯಲ್ಲಿ ಆಭರಣಗಳು ಮನುಷ್ಯರ ಬದುಕಿನಲ್ಲಿ ಮಹತ್ವವನ್ನು ಪಡೆದಿವೆ. ಅಲಂಕಾರದ ಆಭರಣಗಳು ಕ್ರಮೇಣ ಸೌಂದರ್‍ಯ, ಬದುಕು ಎಂದು ಬೆಳೆದು ಮುಂದೆ ಪ್ರತಿಷ್ಠೆಯಾಗಿ ಸಾಮಾಜಿಕ, ಸಾಂಸ್ಕೃತಿಕವಾಗಿವೆ. ಆಭರಣ ಸೌಂದರ್‍ಯವಾಗಿದ್ದರಿಂದಲೆ ಸುತ್ತ ಪ್ರಕೃತಿಯಲ್ಲಿ ಸಿಗುವ ಬೆಂಡು+ಓಲೆ = ಬೆಂಡೋಲೆ ಒಂದು ಆಭರಣವಾಗಿ ಬಳಕೆಯಲ್ಲಿದ್ದುದಕ್ಕೆ ಪದವಿನ್ನೂ ನಮ್ಮೊಂದಿಗೆ ಉಳಿದಿದೆ. ಮುಂದೆ ಇದು ಲೋಹಕ್ಕೆ ಸೀಮಿತವಾಯಿತು, ಬಂಗಾರ ಈ ಕಾರಣಕ್ಕೆ ವಿಶೇಷ ಮಹತ್ವ ಪಡೆದುಕೊಂಡಿತು. ಹೀಗೆ ಸೌಂದರ್‍ಯ ಪ್ರಜ್ಞೆಯಾಗಿ ಬೆಳೆದ ಆಭರಣಗಳು ಸಾಮಾಜಿಕತೆ ಮಾತ್ರವಲ್ಲದೆ ಆರ್ಥಿಕತೆಯೂ ಆಗಿ ಬೆಳೆಯಿತು. ಇಂದಿಗೂ ಹಳ್ಳಿಗಳಲ್ಲಿ ಬಂಗಾರಕ್ಕೆ, ಬಂಗಾರದ ಆಭರಣಗಳಿಗೆ ’ಬದುಕು’ ಎಂದು ಕರೆಯುತ್ತಾರೆ. ಇಂದು ಬಂಗಾರದ ಬೆಲೆ ಮುಗಿಲು ಮುಟ್ಟುತ್ತಿರುವುದಕ್ಕೆ ಇದು ಮುಖ್ಯ ಕಾರಣಗಳಲ್ಲೊಂದು. ಆಭರಣಗಳು ಸಂಪ್ರದಾಯ, ಪದ್ದತಿ ಆಗಿರುವುದನ್ನೂ ಗಮನಿಸಬಹುದು. ಹಾಗೆಯೆ ಇವು ಜೀವನದ ಮೌಲ್ಯಗಳಿಗೆ ಸಂಕೇತವಾಗಿವೆ.

ಆಭರಣಗಳನ್ನು ಗಂಡಸರು ಹೆಂಗಸರು ಎಂಬ ಬೇಧವಿಲ್ಲದೆ ಎಲ್ಲರೂ ತೊಡುತ್ತಿದ್ದರು. ನಮ್ಮ ಸಿನಿಮಾಗಳಲ್ಲಿ ಇಂದಿಗೂ ರಾಜರು, ದೇವರು ಮೈತುಂಬಾ ಆಭರಣಗಳನ್ನು ಹಾಕಿಕೊಳ್ಳುವುದು ಕಾಣಬಹುದು. ಇಂದಿಗೂ ಕೆಲ ಸಮುದಾಯಗಳಲ್ಲಿ ಗಂಡಸರು ಆಭರಣ ಹಾಕುತ್ತಾರೆ. ಕಿವಿಯಲ್ಲಿ, ಮೂಗಿನಲ್ಲಿ, ಕೊರಳಲ್ಲಿ, ತಲೆಯಲ್ಲಿ, ಕಯ್ಯಲ್ಲಿ, ಕಾಲಲ್ಲಿ. ದಿನಗಳು ಕಳೆದಂತೆ ಗಂಡಸರು ಆಭರಣ ತೊಡುವುದು ಕಡಿಮೆಯಾಗಿದೆ, ಆದರೆ ಹೆಂಗಸರಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಇದೆ/ಬೆಳೆದಿದೆ.

ಮಾನವನ ಬದುಕಿನೊಂದಿಗೆ ಕಾಲಾಂತರದಿಂದಲೂ ಇವು ಬೆಸೆದುಕೊಂಡೆ ಬಂದಿವೆ. ಗಾದೆ ಮಾತು, ನುಡಿಗಟ್ಟು, ಒಗಟು, ಜನಪದ ಹಾಡು, ಜನಪದ ಕಥೆಗಳಲ್ಲಿ ಆಭರಣಗಳ ಪ್ರಸ್ತಾಪವನ್ನು ನಾವು ಕಾಣಬಹುದಾಗಿದೆ. ಒಡವೆಗಳನ್ನು ಧರಿಸುವುದರಲ್ಲಿ ಬದುಕಿನ ಶ್ರೀಮಂತಿಕೆ ಅಂದರೆ ಆರ್ಥಿಕ ಶ್ರೀಮಂತಿಕೆ ಜೊತೆಜೊತೆಗೆ ಅವರು ಎಷ್ಟು ಸಂತೋಷದಿಂದ ಜೀವನವನ್ನು ಜೀವಿಸಿದರು ಎಂಬುದು ಕಂಡುಬರುತ್ತದೆ.

ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನರೀತಿಯ ಆಭರಣಗಳನ್ನು ಬಳಸಲಾಗುತ್ತದೆ. ಒಡವೆಗಳಲ್ಲಿ ಸಾಮಾನ್ಯವಾಗಿ ಕಿವಿ, ಮೂಗು, ತುರುಬು, ನೆತ್ತಿ, ಕೊರಳು, ಡಾಬು, ಕೈ, ಬೆರಳುಗಳಿಗೆ ಚಿನ್ನದ ಒಡವೆಗಳನ್ನು ಧರಿಸುತ್ತಾರೆ. ಆದರೆ ಕಾಲಿಗೆ, ಕಾಲಿನ ಬೆರಳಿಗೆ ಬೆಳ್ಳಿಯ ಒಡವೆಗಳನ್ನು ಹಾಕುತ್ತಾರೆ. ಹೈದರಾಬಾದ್ ಕರ್ನಾಟಕ ಪರಿಸರದ ಆಭರಣಗಳನ್ನು ಈ ಲೇಖನದಲ್ಲಿ ತುಸು ಪರಿಚಯಿಸಲಾಗುವುದು. ಪ್ರಧಾನವಾಗಿ ಕಿವಿಗೆ ಹಾಕುವ ಆಭರಣಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗುವುದು. ಉಳಿದವನ್ನು ಈ ಲೇಖನದ ಮಿತಿಯ ಕಾರಣವಾಗಿ ಬರಿಯ ಪಟ್ಟಿ ನೀಡಲಾಗಿದೆ. ಕೇವಲ ಕಿವಿಗೆ ಹಾಕುವುದಕ್ಕೆಂದು ಹತ್ತಾರು ಆಭರಣಗಳು ಇವೆ. ಇನ್ನೊಂದು ಮುಖ್ಯವಾದ ಅಂಶವೆಂದರೆ ಒಂದೆ ಆಭರಣದಲ್ಲಿ ವಿವಿಧ ವಸ್ತುಗಳನ್ನು ಬಳಸಿ, ವಿವಿಧ ವಿನ್ಯಾಸಗಳನ್ನು ಮಾಡಿಕೊಂಡು ಹಲವು ಭಿನ್ನತೆಗಳನ್ನು ಮಾಡಿಕೊಂಡು ಮತ್ತೆ ಹಲವು ಪ್ರಕಾರಗಳನ್ನು ಮಾಡಿಕೊಂಡಿರುವುದು ಗಮನಿಸಬೇಕಾದ ಅಂಶ. ಈ ಅಗಾಧವಾದ ವೈವಿಧ್ಯತೆ ಬೆರಗು ಮೂಡಿಸುತ್ತದೆ. ಇಲ್ಲಿ ಜನಪದರು ಬದುಕನ್ನು ಎಷ್ಟು ಮಟ್ಟಿಗೆ ಅನುಭವಿಸಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಕಿವಿಗೆ ಹಾಕುವ ಆಭರಣಗಳನ್ನು ನೋಡುವುದಾದರೆ; ಬುಗಡಿಕಡ್ಡಿ, ಕತ್ರಿ ಬಾವುಲಿ, ತಾಲಾಕು, ಚಂದ್ರತಾಲಾಕು, ಗೂಬಿ ತಾಲಾಕು, ವಾಲಿ, ಜುಮಿಕಿ, ಬೆಂಡಾಲಿ, ಅಳ್ಳಿನ ಬೆಂಡಾಲಿ, ಬೆಂಡಾಲಿ, ಗುಂಡು, ಮಾಟೀಲು, ಎಳಿಇನ್ನು ಮೊದಲಾದವು ಕಿವಿಗೆ ಹಾಕುವ ಆಭರಣಗಳಾಗಿವೆ. ಇಲ್ಲಿ ಒಂದೊಂದು ಆಭರಣವನ್ನು ಸ್ತೂಲವಾಗಿ ಪರಿಚಯಿಸಬಹುದು.
ಬುಗಡಿಕಡ್ಡಿ: ಕಿವಿಗೆ ಹಾಕುವ ಹಲವು ಬಗೆಯ ಆಭರಣಗಳಲ್ಲಿ ಇದು ವಿಶೇಷವಾದುದಾಗಿದೆ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೆ ಇದೊಂದು ಪ್ರತಿಷ್ಠೆಯ ಒಡವೆಯಾಗಿದೆ. ಇದನ್ನು ಕಿವಿಯ ಮೇಲ್ಭಾಗದ ತುದಿಯಲ್ಲಿ ಚುಚ್ಚಿಕೊಳ್ಳಲಾಗುತ್ತದೆ. ಇದು ನೋಡಲು ಒಂದು ಇಂಚಿನಷ್ಟು ಅಥವಾ ಅದಕ್ಕಿಂತ ಸ್ವಲ್ಪ ಸಣ್ಣ ಅಳತೆಯಷ್ಟು ಉದ್ದವಿದ್ದು, ಮೇಲ್ಭಾಗದಲ್ಲಿ ಕಳಶದಂತೆ ಇದ್ದು ಕೆಳ ಭಾಗದಲ್ಲಿ ಸಣ್ಣ ಮುತ್ತುಗಳು ಜುಮಿಕಿಯಂತೆ ತೂಗಾಡುತ್ತಿರುತ್ತವೆ. ಮಧ್ಯದಲ್ಲಿ ಮೇಲ್ಭಾಗಕ್ಕು ಕೆಳಭಾಗಕ್ಕು ಸೇತುವೆಯಾಗಿ ಬಂಗಾರದ ಕಡ್ಡಿ ಇರುತ್ತದೆ ಆದ್ದರಿಂದಲೆ ಇದನ್ನು ’ಬುಗುಡಿಕಡ್ಡಿ’ ಎಂದು ಕರೆಯುತ್ತಾರೆ. ಇದರಲ್ಲಿ ಜೋಡುಜುಮಿಕಿ ಬುಗುಡಿ, ಬೋಳ ಬುಗುಡಿ, ಗಡ್ಡಿ ಬುಗುಡಿ ಎಂದು ಹಲವು ಬಗೆಯ ಬುಗುಡಿಗಳಿವೆ. ಜೋಡುಜುಮಿಕಿ ಬುಗುಡಿ ಅಂದರೆ ಸ್ವಲ್ಪ ಹೆಚ್ಚಿಗೆ ಬೆಲೆಯುಳ್ಳದ್ದು. ಇದು ಕೆಳ ಭಾಗದಲ್ಲಿ ಎರಡು ಹಂತದಲ್ಲಿ ಮುತ್ತಿನ ಸಾಲುಗಳು ಬಂದಿರುತ್ತವೆ.

ಈ ಭಾಗದ ಜನಪದ ಹಾಡುಗಳಲ್ಲಿ ಹೆಚ್ಚಾಗಿ ಇದರ ಪ್ರಸ್ತಾಪ ಬರುತ್ತದೆ. ಒಗಟು, ನುಡಿಗಟ್ಟು, ಗಾದೆ ಮಾತುಗಳಲ್ಲಿ ಬುಗುಡಿಯ ಮಹತ್ವದ ಬಗ್ಗೆ ಹೇಳಲಾಗುತ್ತದೆ. ಉದಾ: ನಗಡಿಯಂತಾ ರೋಗಿಲ್ಲ, ಬುಗಡಿಯಂತಾ ವಸ್ತುಇಲ್ಲ ಎಂಬುದು ಈ ಭಾಗದಲ್ಲಿ ಜನಸಾಮಾನ್ಯರು ಹೇಳುವ ಮಾತಾಗಿದೆ. ಇದರರ್ಥ ಎಲ್ಲಾ ಆಭರಣಗಳಿಗಿಂತ ಬುಗುಡಿ ಎನ್ನುವ ಆಭರಣ ಬಹಳ ಶ್ರೇಷ್ಠವಾದದ್ದು ಎಂಬುದಾಗಿದೆ.

ಕಿವಿಯ ಮೇಲ್ಭಾಗದಲ್ಲಿ ಈ ಬುಗುಡಿ ಕಡ್ಡಿಯನ್ನು ಹಾಕುತ್ತಾರೆ ಅದರ ಪಕ್ಕದಲ್ಲಿ ಅಂದರೆ ತುಸು ಕೆಳ ಭಾಗದಲ್ಲಿ, ಇಂದಲಗಡ್ಡಿ ಎನ್ನುವ ಒಡವೆಯನ್ನು ಹಾಕುತ್ತಾರೆ ಇದು ಕೇವಲ ಬಂಗಾರದಕಡ್ಡಿಯಂತೆ ಇದ್ದು, ಕೆಳ ಭಾಗ ಮತ್ತು ಮೇಲ್ಭಾಗದಲ್ಲಿ ದುಂಡನಯ ವಿನ್ಯಾಸವುಳ್ಳದ್ದಾಗಿರುತ್ತದೆ. ಇದರ ನಂತರ ಕತ್ರಿಬಾವುಲಿ ಎನ್ನುವ ಒಡವೆ ಬರುತ್ತದೆ, ಅದರ ನಂತರದಲ್ಲಿ ಚಂದ್ರತಾಲಾಕು ಬರುತ್ತದೆ, ಇದು ಚಂದ್ರಾಕಾರದಲ್ಲಿ ಇರುವುದರಿಂದ ಇದಕ್ಕೆ ಚಂದ್ರತಾಲಾಕು ಎನ್ನುವರು. ಇದರ ನಂತರ ತಾಲಾಕನ್ನು ಚುಚ್ಚಿಕೊಳ್ಳುತ್ತಾರೆ. ಇದರಲ್ಲಿ ಹಲವು ಬಗೆಯ ವಿನ್ಯಾಸಗಳು ಬರುತ್ತವೆ. ಇದರ ನಂತರಕಿವಿಯ ಕೆಳ ಭಾಗಕ್ಕೆ ಬೆಂಡಾಲಿಯನ್ನುಇಡುತ್ತಾರೆ. ಸಾಮಾನ್ಯವಾಗಿ ಕಿವಿಯ ಕೆಳ ಬಾಗದಲ್ಲಿ ಬರುವ ಈ ಜಾಗದಲ್ಲಿ ಎಲ್ಲರೂ ಒಡವೆಯನ್ನು ಹಾಕುತ್ತಾರೆ. ಬೆಂಡಾಲಿ, ವಾಲಿ ಜುಮಿಕಿ, ಗುಂಡು, ಇನ್ನು ಮೊದಲಾದವುಗಳನ್ನು ಇಲ್ಲಿತೊಡುತ್ತಾರೆ. ಇನ್ನುಕಿವಿಯ ಕೆಳ ಭಾಗದಿಂದ ಮೇಲ್ಭಾಗಕ್ಕೆ ಸೇತುವೆಯಂತೆ ಎಳೆದುಕೊಂಡ ಒಡವೆಯನ್ನು ಮಾಟೀಲು ಎನ್ನುವರು. ಇದು ಕೂಡ ಹಲವು ವಿನ್ಯಾಸಗಳಲ್ಲಿ ಇರುತ್ತದೆ. ಇದೊಂದು ಕಿವಿಯ ಸುತ್ತಲೂ ಬರುವ ಒಂದು ಎಳೆ ಆಕಾರದ ಒಡವೆಯಾಗಿದೆ. ಇದಕ್ಕೆ ಎಳೆ ಎಂದೇ ಹೇಳಲಾಗುತ್ತದೆ.

ಇದುವರೆಗೆ ಹೇಳಿದ ಈ ಎಲ್ಲಾಒಡವೆಗಳು ಕಿವಿಯ ಹೊರ ಪದರಿಗೆ ಸಾಲಾಗಿ ಬರುತ್ತವೆ. ಇದರ ಎದುರಿನ ಇನ್ನೊಂದು ತುದಿಗೆ ಕಾಣುವ, ಕಿವಿಯ ಸಣ್ಣ ಒಂದು ಭಾಗದಲ್ಲಿಯೂ ತಾಲಾಕನ್ನು ಚುಚ್ಚಿಕೊಳ್ಳುತ್ತಾರೆ. ಇದನ್ನು ಗೂಬಿ ತಾಲಾಕು ಎನ್ನುವರು. ಇದನ್ನು ಬಹಳ ಕಡಿಮೆ ಸಂಖ್ಯೆಯ ಜನರಲ್ಲಿ ಕಾಣಬಹುದಾಗಿದೆ. ಕಿವಿಯ ಒಳ ಪದರಿಗೂ ಕೂಡ ಕೆಲವು ಕಡೆ ಒಡವೆಗಳನ್ನು ಧರಿಸುತ್ತಾರೆ. ಇಷ್ಟು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ತೊಡುವಂತಹ ಕಿವಿಯ ಆಭರಣಗಳಾಗಿವೆ.

ಕೇವಲ ಕಿವಿಯಲ್ಲಿ ಹಾಕುವ ಒಡವೆಗಳೆ ಇಷ್ಟೊಂದು ಬಗೆಯಲ್ಲಿ ಇವೆ. ಕಿವಿಯ ಒಡವೆಗಳು ಸೇರಿ, ಇನ್ನುಳಿದ ಒಡವೆಗಳ ಕುರಿತು ಒಂದು ದೊಡ್ಡ ಅಧ್ಯಯನವನ್ನೆ ಮಾಡಬಹುದಾದಷ್ಟು ಬಗೆಯ ಒಡವೆಗಳು ನಮ್ಮಲ್ಲಿವೆ.

ಇನ್ನುಳಿದ ಒಡವೆಗಳ ಹೆಸರುಗಳನ್ನು ಈ ಕೆಳಗೆ ಕೊಡಲಾಗಿದೆ.
ತಲೆಗೆ ಹಾಕುವ ಒಡವೆಗಳು: ನಾಗರ, ರೋಜಾದುವ್ವ, ರಾಗ್ಟಿ, ಅಳ್ಳಿಉವ್ವ ,ಅಂಬ್ರಿಉವ್ವ (ಇವು ಬಂಗಾರದಿಂದ ಮಾಡಿದ ಹೂವ್ವುಗಳು)
ಮೂಗಿನ ಒಡವೆಗಳು: ನತ್ತು, ಗೋಟೆ ಮುತ್ತು,ಅಂತ್ರಗಾಡಿ ಮುತ್ತು, ಮುಗಬಟ್ಟು ಮೊ
ಕೊರಳಿನ ಒಡವೆಗಳು: ಟಿಕ್ಕೆ ಮಣಿ, ಕಟಾಣಿ, ಸಣ್ಣಕಟಾಣಿ, ಗೆಜ್ಜಿಟಿಕ್ಕಿ, ಬೋರ್‍ಮಳ, ಮೇಲ್‌ಗುಂಡು, ತಾಳಿ ಸಾಮಾನು, ಅವಲಕ್ಕಿ ಸರ, ಚೈನ್ ಸರ, ಪದಕ, ಏಕಾವಳಿ ಸರ, ಕಂಟಿ ಮಾಮೂಲಿ ಸರ, ಕೊರಳ ಕಂಟಿ, ತಾಳಿ ಮುತ್ತು, ಲಿಂಗದ ಕಾಯಿ, ಸಣ್ಣಗುಂಡು, ದೊಡ್ಡಗುಂಡು, ಸಣ್ಣ ತಾಳಿ, ಹವಳದ ಸರ, ಅವಲಕ್ಕಿ ಸರ, ನಕ್ಲೇಸು. ಯಾಡೆಳಿ ಸರ. ಗುಂಡಿನಟಿಕ್ಕಿ, ಆರೆಳಿ ಕಟಾಣಿ, ಮೂರೆಳಿ ಕಟಾಣಿ.
ತಾಳಿಯಲ್ಲಿ ಹಾಕುವ ಒಡವೆ:ಮಣಿ,ಕರಿಮಣಿ, ಬೆಲ್ಲದ ಮಣಿ, ಹವಳ, ಮುತ್ತು, ಗುಂಡು, ಕೋವಿ ಮಣಿಮೊ.
ಕೈಯಲ್ಲಿ ಹಾಕುವ ಒಡವೆಗಳು: ಪಾಟ್ಲಿ, ಬಿಲವಾರ, ತೋಡೇವು, ಉಂಗ್ರ, ಸುತ್ತಿನಉಂಗ್ರ, ಅಳ್ಳಿನ ಉಂಗ್ರ, ಗಟ್ಟಿಉಂಗ್ರ, ದ್ವಾರೆದುಂಗ್ರ, ಕಡಗ, ದ್ವಾರೇದಕಡಗ, ಪಚ್ಚೇದರಳು, ಬಂಗಾರ ಬಳಿ, ಮುಡಿಉಂಗ್ರ, ಮುತ್ತಿನಉಂಗ್ರ, ರತ್ನದುಂಗ್ರ, ಸರಿಗಿ, ವಂಕಿಉಂಗ್ರ, ಬಿಂಜಿ ಮೊ.
ತೋಳಿನ ಒಡವೆಗಳು: ವಂಕಿ, ನಾಗ ಮುರಿ, ಬಾಜುಬಂಧಿ, ತೋಳಬಂಧಿ ಮೊ.
ನಡುವಿಗೆ ಹಾಕುವ ಒಡವೆಗಳು: ಡಾಬಾ, ಅಡ್ಯಾಣ, ಗೆಜ್ಜಿಡಾಬಾ, ಡಾಗಿಣ, ಉಡದಾರ ಮೊ.
ಕಾಲಿನ ಒಡವೆಗಳು: ಚೈನ, ಕಡಗ, ರುಳಿ, ಕಾಲುಂಗರ, ಪಿಲ್ಲಿ, ಬೆತಾಸು, ಗೆಜ್ಜಿ, ಪೆಂಡಿಗೆಜ್ಜಿ, ಮುತ್ತಿನ ಸರ, ಹಾಲಗಡಗ ಮೊ.
ಹಿಂದಿನ ದಿನಗಳಲ್ಲಿ ಸಾಮಾನ್ಯವಾಗಿಎಲ್ಲಾ ಹೆಂಗಸರು ಬುಗುಡಿಗಡ್ಡಿಯನ್ನುತೊಡುತ್ತಿದ್ದರು. ಅನಂತರದ ದಿನಗಳಲ್ಲಿ ಇದರ ಬಳಕೆ ಕಡಿಮೆಯಾಗಿತ್ತು. ಆದರೆಇಂದು ಕಾಲಕ್ಕೆ ತಕ್ಕಂತೆ ಹೊಸ ಹೊಸ ಡಿಸೈನ್‌ನಲ್ಲಿ ಬಂದಿರುವ ಈ ಬುಗಡಿಕಡ್ಡಿಯನ್ನು ಇಂದಿನ ಯುವತಿಯರು ಇದನ್ನು ಫ್ಯಾಶನ್ ಆಗಿ ಬಳಸುತ್ತಿದ್ದಾರೆ. ಓಲ್ಡಇಸ್‌ಗೋಲ್ಡ್, ಎಂಬಂತೆ ಇದು ಹೊಸ ರೂಪದಲ್ಲಿ ಆಕರ್ಷಿಸುತ್ತಿದೆ.

ಆಭರಣಗಳು ಅದೊಂದು ಲೋಕ. ಅದರಲ್ಲಿ ಭಾರತೀಯ ಹೆಣ್ಣುಮಕ್ಕಳ ಜಗತ್ತು ತುಂಬಿಕೊಂಡಿದೆ. ಹೆಣ್ಣು ಜಗತ್ತಿನ ಬಹುದೊಡ್ಡ ಆವರಣ. ಹೆಣ್ಣುಮಕ್ಕಳ ವಿವಿಧ ಬಗೆಯ ಒಡವೆಗಳು ಕೇವಲ ಒಡವೆಗಳಾಗಿರದೆ ಬದುಕನ್ನು ಅರಳಿಸುವ ಕುಸುಮಗಳಾಗಿವೆ.

ಈ ಅಂಕಣದ ಹಿಂದಿನ ಬರೆಹ

ಉತ್ತರ ಕರ್ನಾಟಕದ ’ಇಲಿಪೂಜೆ’ಯೆಂಬ ವಿಶಿಷ್ಟ ಆಚರಣೆ

MORE NEWS

ಮೊದಲ ನಾಟಕದ ಮೊದಲ ಟೀಮ್ ಸ್ಪಿರಿಟ್

08-12-2025 ಬೆಂಗಳೂರು

"ರಂಗಾಭ್ಯಾಸದಲ್ಲಿ ಮೊದ ಮೊದಲು ಅರ್ಥಾತ್ ಆರಂಭಕ್ಕೆ ಭಾಷಿಕವಾಗಿ ಸಣ್ಪುಟ್ಟ ತೊಡಕುಗಳು ಕಾಡಿದವು. ಪ್ರತಿಗಂಧರ್ವ ಹೆಸ...

ಪುರುಷವತಾರ- ದೇಹ ಮೀಮಾಂಸೆಯ ಕಥನ 

05-12-2025 ಬೆಂಗಳೂರು

"`ಪುರುಷಾವತಾರ’ ಕಾದಂಬರಿಯಲ್ಲಿ ಗೋಸಾಯಿ ಗುರು ಹನುಮಂತ ಒಂಟಿಮನಿ ಅವರಿಗೆ ಹೇಳುವ ಮಾತುಗಳಿವು. ಈ ಮಾತುಗಳು ಕ...

DAILY COLUMN: ಮಗುವಿನ ಪ್ರಾಗ್ನಿಕ ರಚನೆ, ಕಲಿಕೆ ಮತ್ತು ಬಾಶೆ

04-12-2025 ಬೆಂಗಳೂರು

"ತಾಯ್ಮಾತು ಮತ್ತು ಶಿಕ್ಶಣ ಮಾದ್ಯಮ ಇವುಗಳ ನಡುವಿನ ರಾಚನಿಕ ಬಿನ್ನತೆಗಳೂ ಕೂಡ ಪೆರಮಾತಿನ ಶಿಕ್ಶಣದ ಸೋಲಿಗೆ ಕಾರಣವಾ...