“ತೇಜಸ್ವಿ ಇರುವಾಗ ಮತ್ತು ಆಮೇಲೆ ನಿಂಬೆಮೂಲೆಯ ಅವರ ತೋಟದ ಮನೆಗೆ ಹೋಗುತ್ತಿದ್ದೆ. ತೇಜಸ್ವಿಯವರು ಇವರನ್ನು 'ರಾಜೀ....' ಎಂದು ಕರೆಯುತ್ತಿದ್ದುದೇ ಒಂದು ಸೊಗಸು" ಎನ್ನುತ್ತಾರೆ ಲೇಖಕ ಡಾ. ಎಚ್.ಎಸ್. ಸತ್ಯನಾರಾಯಣ ಅವರ ಮಾತು..ಅವರು ರಾಜೇಶ್ವರಿ ತೇಜಸ್ವಿ ಅವರೊಂದಿಗಿನ ಒಡಣಾಟದ ಬಗ್ಗೆ ಬರೆದ ಲೇಖನ ನಿಮ್ಮ ಓದಿಗಾಗಿ..
ಇಂದಿನ ಬೆಳಗು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ನಿಧನರಾದ ಸುದ್ದಿಯಿಂದ ಮನಸ್ಸನ್ನು ಮುಕ್ಕಾಗಿಸಿತು. ಪೂರ್ಣಚಂದ್ರ ತೇಜಸ್ವಿಯರು ಹೋದಮೇಲೆ 'ನಿರುತ್ತರ'ದಲ್ಲಿ ತೇಜಸ್ವಿಯವರ ನೆನಪುಗಳೊಂದಿಗೆ ಜೀವಿಸುತ್ತ, ತೋಟದ ಹಾಗೂ ಪುಸ್ತಕ ಪ್ರಕಾಶನದ ಉಸ್ತುವಾರಿಯಲ್ಲಿ, ಮಕ್ಕಳು, ಮೊಮ್ಮಕ್ಕಳನ್ನು ನೋಡುತ್ತ, ಮಾತಾಡುತ್ತ ಅಂತರಂಗದಲ್ಲಿ ಏಕಾಂಗಿ ತಪಸ್ವಿನಿಯ ರೀತಿಯಿದ್ದ ರಾಜೇಶ್ವರಿಯವರು ಒಂಟಿತನವನ್ನು ನಿವಾರಿಸಿಕೊಳ್ಳುವ ಪರ್ಯಾಯದಲ್ಲಿ ಲೇಖಕಿಯಾಗಿ ಅನಾವರಣಗೊಂಡಿದ್ದು ಅಚ್ಚರಿ ಮೂಡಿಸಿತು. ಅವರ 'ನನ್ನ ತೇಜಸ್ವಿ' ಹಲವು ಕಾರಣದಿಂದ ಮಹತ್ತ್ವದ ರಚನೆಯೆನಿಸಿತು. ಅವರ ಊರಿಗೆ ಗಾಂಧೀಜಿ ಬಂದಿದ್ದ ಕಥೆಯನ್ನೂ ಸೊಗಸಾಗಿ ಹೇಳಿದ್ದಾರೆ. ಮನಸ್ಸು ಮತ್ತು ದೇಹದ ಆರೋಗ್ಯವನ್ನು ಸಮಸ್ಥಿತಿಯಿಂದ ಕಾಪಾಡಿಕೊಂಡಿದ್ದ ಈ ಹಿರಿಯ ಜೀವದ ಕಣ್ಮರೆಯಿಂದ ಮೂಡಿಗೆರೆಯ ತೇಜಸ್ವಿ ತೋಟ ಬಿಕೋ ಎನ್ನಲಿದೆ.
ತೇಜಸ್ವಿಯವರನ್ನು ಪ್ರೀತಿಸಿ ಮದುವೆಯಾದ ರಾಜೇಶ್ವರಿಯವರು ಆ ವಿವರವನ್ನು ಸೊಗಸಾಗಿ ದಾಖಲಿಸಿದ್ದರು. ಏರುಜವ್ವನದ ತೇಜಸ್ವಿಯವರ ಮನೋಲೋಕವನ್ನು ಹತ್ತಿರದಿಂದ ಕಂಡಿದ್ದ ಬಾಳಸಂಗಾತಿಯ ಮಾತುಗಳಲ್ಲಿ ಇರುವ ನಿರ್ದಿಷ್ಟತೆ ಮತ್ತು ಅಧಿಕೃತತೆಗಳು ತೇಜಸ್ವಿಯವರ ಅಭಿಮಾನಿಗಳಿಗೆಲ್ಲ ಅವರ ಖಾಸಗಿ ಸಂಗತಿಗಳನ್ನರಿಯುವ ಚಾಪಲ್ಯವನ್ನೂ ಖುಷಿಯನ್ನೂ ಕೊಟ್ಟಿತು. ತೇಜಸ್ವಿಯವರ ಪ್ರೇಮ ಎಷ್ಟು ತೀವ್ರತೆಯಿಂದ ಕೂಡಿತೆಂಬುದನ್ನು ರಾಜೇಶ್ವರಿಯವರು ತಮಗೆ ಬರೆದಿದ್ದ ಪ್ರೇಮ ಪತ್ರಗಳ ಸಮೇತ ಹೇಳಿಕೊಂಡಿದ್ದರು. ಕನ್ನಡದ ಎತ್ತರದ ಲೇಖಕನೋರ್ವನ ಹೆಂಡತಿಯಾಗಿ, ಮಹಾಕವಿಯೊಬ್ಬರ ಸೊಸೆಯಾಗಿ, ಕೊನೆಯ ದಿನಗಳಲ್ಲಿ ಕನ್ನಡದ ಲೇಖಕಿಯಾಗಿ ತಮ್ಮ ಅಸ್ಮಿತೆಯನ್ನು ರಾಜೇಶ್ವರಿಯವರು ಮೂಡಿಸಿ ಹೋಗಿದ್ದಾರೆ.1.jpg)
ರಾಜೇಶ್ವರಿಯವರ ಹೆಸರನ್ನು ನಾವೆಲ್ಲ ಮೊದ ಮೊದಲು ಕೇಳಿದ್ದು ತೇಜಸ್ವಿಯವರು ಕ್ವಚಿತ್ತಾಗಿ ತಮ್ಮ ಬರಹಗಳಲ್ಲಿ ಕಾಣಿಸುತ್ತಿದ್ದ ವಿವರಗಳಲ್ಲಿಯೇ. ಕರ್ವಾಲೋ ಕಾದಂಬರಿಯಲ್ಲಿ ಕರ್ವಾಲೋ ಅವರೊಮ್ಮೆ ನಿರೂಪಕರ ಮನೆಗೆ ಬಂದು ತಾವು ಶೋಧಿಸಲೆಳಸುತ್ತಿರುವ ಹಾರುವ ಓತಿ ಜೀವ ವೈವಿಧ್ಯತೆಯಲ್ಲಿ ಎಷ್ಟು ಹಳತು ಮತ್ತು ಪ್ರಮುಖವಾದುದ್ದೆಂಬುದನ್ನು ವಿವರಿಸುವಾಗ ಅದಕ್ಕೆ ಸ್ಪಂದಿಸುವ ಎಂ.ಎ. ಓದಿದ್ದ ನಿರೂಪಕರ ಬೌದ್ಧಿಕ ಸಂಗಾತಿಯ ಪಡಿನೆಳಲಿನ ಹಿಂದೆ ನಮಗೆ ಶ್ರೀಮತಿ ರಾಜೇಶ್ವರಿಯವರೇ ಕಾಣಿಸುತ್ತಿದ್ದರು. ತೇಜಸ್ವಿ ಶಿಕಾರಿ ಮುಗಿಸಿಯೋ ಮೀನು ಹಿಡಿದೋ ಸಂಜೆ ವಾಪಾಸು ಮನೆಗೆ ಬಂದ ಮೇಲೆ ಅದಕ್ಕೆ ಮಸಾಲೆ ರುಬ್ಬುಹಾಕಿ ಸಾರು ಮಾಡುವುದರಿಂದ ತೊಡಗಿ, ಕಂಪ್ಯೂಟರಿನಲ್ಲಿ ಪತಿಯ ಬರಹವನ್ನು ಡಿ.ಟಿ.ಪಿ. ಮಾಡಿಕೊಡುವವರೆಗಿನ ಸಕಲ ಉಸ್ತುವಾರಿಯನ್ನೂ ನೋಡಿಕೊಂಡವರು ರಾಜೇಶ್ವರಿಯವರೇ. ಕಾರ್ ಡ್ರೈವ್ ಮಾಡಿಕೊಂಡು ಹೋಗಿ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ, ಮರಳಿ ಕರೆತರುವ ಕೆಲಸವನ್ನು ಮಾಡುತ್ತಿದ್ದ ರಾಜೇಶ್ವರಿಯವರು ಮೂಡಿಗೆರೆಯ ಜನರ ಪಾಲಿಗೆ 'ಕಾರ್ ಓಡ್ಸೋ ಮೇಡಂ' ಆಗಿದ್ದರಂತೆ. ಬಹುಬಗೆಯ ಆಸಕ್ತಿ, ಬಹುಬಗೆಯ ಚಟುವಟಿಕೆಗಳ ಮನೋಧರ್ಮದ ತೇಜಸ್ವಿಯವರ ಬಾಳಸಂಗಾತಿಯಾಗುವುದೆಂದರೆ ನಿತ್ಯವೂ ನೂರಾರು ಸಮಸ್ಯೆಗಳಿಗೆ ಹೆಗಲೆಣೆಯಾಗುವ ಜವಾಬ್ದಾರಿಯನ್ನು ನಿಭಾಯಿಸುವುದು ಸಾಮಾನ್ಯದ ವಿಚಾರವೆ? ಆ ವಿಚಾರದಲ್ಲಿ ರಾಜೇಶ್ವರಿ ಮಹಾಗಟ್ಟಿಗಿತ್ತಿ. ಅವರೊಡನೆ ವ್ಯವಹರಿಸಿದವರಿಗೆಲ್ಲ ಆಕೆಯ ಅಪ್ಪಟ ವ್ಯವಹಾರ ಪ್ರಜ್ಞೆಯ ಅನುಭವವಾಗಿದೆ.
ತೇಜಸ್ವಿ ಇರುವಾಗ ಮತ್ತು ಆಮೇಲೆ ನಿಂಬೆಮೂಲೆಯ ಅವರ ತೋಟದ ಮನೆಗೆ ಹೋಗುತ್ತಿದ್ದೆ. ತೇಜಸ್ವಿಯವರು ಇವರನ್ನು 'ರಾಜೀ....' ಎಂದು ಕರೆಯುತ್ತಿದ್ದುದೇ ಒಂದು ಸೊಗಸು. ರಾಜು...ರಾಜೇಶ್....ರಾಜೀ ಎಂದೆಲ್ಲ ಪ್ರೀತಿಯಿಂದ ಕರೆಯುತ್ತಿದ್ದರಂತೆ..
ನಾನು ಹಲವುಸಲ ಅವರ ಮನೆಗೆ ಹೋಗಿ ಬಂದಿದ್ದೆನಾದರೂ ಅವರು ಫೋನ್ ಮಾಡಿದಾಗೆಲ್ಲ 'ಸತ್ಯನಾರಾಯಣ ಅಂದ್ರೆ ಯಾರು, ಇಲ್ಲಿ ಕಾಲೇಜಲ್ಲಿ ಲೆಕ್ಚರ್ ಆಗಿದ್ರಲ್ಲ ಅವರೇನ್ರೀ?' ಅಂತಾನೆ ಮಾತು ಶುರು ಮಾಡ್ತಿದ್ದುದು. ನನಗೂ ಅದೇ ಅಭ್ಯಾಸವಾಗಿ ಎಷ್ಟು ಸಲ ಕೇಳ್ತಾರಪ್ಪ ಅಂತೇನೂ ಬೇಸರವಾಗ್ತಿರಲಿಲ್ಲ. ಎಷ್ಟೊಂದು ಭೇಟಿಯ, ಎಷ್ಟೊಂದು ಮಾತುಕತೆಗಳ ನೆನಪು ಸಾಲುಸಾಲಾಗಿ ನುಗ್ಗಿ ಬರುತ್ತಿದೆ. ಅವನ್ನೆಲ್ಲ ನಿಧಾನವಾಗಿ ಬರೆಯಬಹುದೆನ್ನಿಸುತ್ತಿದೆ. ಕೋವಿಡ್ ಬಂದ ಮೇಲೆ ಭೇಟಿಯಾಗಲೇ ಇಲ್ಲ. ಫೋನಿನಲ್ಲಿ ಮಾತಾಡಿದ್ದಷ್ಟೇ. ತಾರಿಣಿಯವರು 'ಮಗಳು ಕಂಡ ಕುವೆಂಪು ಬರೆದಂತೆ, ನೀವು 'ಸೊಸೆಯ ಕಣ್ಣಲ್ಲಿ ಕುವೆಂಪು' ಅಂತ ನಿಮ್ಮ ನೆನಪುಗಳನ್ನು ಬರೀರಿ ಮೇಡಂ ಅಂತ ನಾನು ಪ್ರತಿಭೇಟಿಯಲ್ಲೂ ತಪ್ಪದೆ ವಿನಂತಿಸುತ್ತಿದ್ದೆ. ಬರೆಯೋಕ್ಕೆ ಬೇಕಾದಷ್ಟಿದೆ ಕಣ್ರಿ ಅಂತ ಅವರೂ ಹೇಳುತ್ತಲೇ ಇದ್ದರು. ನನ್ನ ತೇಜಸ್ವಿಯಲ್ಲಿ ಕುವೆಂಪು ಮತ್ತು ಹೇಮಾವತಿಯವರುಗಳು ತಮ್ಮನ್ನು ಪ್ರೀತಿಯ ಸೊಸೆಯಾಗಿ ಪ್ರೀತ್ಯಾದರಗಳಿಂದ ನಡೆಸಿಕೊಂಡ ಅನೇಕ ಸಂಗತಿಗಳನ್ನು ರಾಜೇಶ್ವರಿಯವರು ದಾಖಲಿಸಿರುವುದನ್ನೇ ನಾವಿನ್ನು ಮತ್ತೆ ಮತ್ತೆ ಓದಬೇಕಷ್ಟೇ.
ದ್ವಿತೀಯ ಪಿಯುಸಿ ಕನ್ನಡ ಪಠ್ಯಕ್ಕೆ ತೇಜಸ್ವಿಯವರ 'ಕೃಷ್ಣೇಗೌಡನ ಆನೆ' ಎಂಬ ನೀಳ್ಗತೆಯನ್ನು ಆಯ್ಕೆ ಮಾಡಿ, ಅನುಮತಿ ಪತ್ರ ಪಡೆಯಲು ನಿರುತ್ತರಕ್ಕೆ ಹೋದಾಗಿನ ಘಟನೆಯೊಂದನ್ನು ಉಲ್ಲೇಖಿಸಲೇ ಬೇಕು. ಆ ಕಥೆಯಲ್ಲಿ ಪ್ರಾಣಿಹಿಂಸೆ ಮಾಡಬಾರದೆಂಬ ಜೈನಧರ್ಮದ ಸೂಚನೆಯಂತೆ ಬೀದಿನಾಯಿಗಳನ್ನು ಕೊಲ್ಲದೆ, ಧರ್ಮಸ್ಥಳದಿಂದ ರಾತ್ರೋರಾತ್ರಿ ಲಾರಿಯಲ್ಲಿ ತಂದು ಘಟ್ಟದಮೇಲೆ ಬಿಟ್ಟು ಹೋಗುವುದರಿಂದ ಮೂಡಿಗೆರೆಯಲ್ಲಿ ದಿನೇದಿನೇ ಬೀದಿನಾಯಿಗಳು ಜಾಸ್ತಿಯಾಗ್ತಿವೆ ಎಂಬ ಮಾತನ್ನು ಪುರಸಭೆಯ ಅಧ್ಯಕ್ಷರಾದ ಖಾನ್ ಸಾಹೇಬರು ನಿರೂಪಕರಿಗೆ ಹೇಳುವ ಸಂದರ್ಭ ಬರುತ್ತದೆ. ನಾನು 'ಮೇಡಂ ಧರ್ಮಸ್ಥಳ ಎಂಬ ಹೆಸರನ್ನು ಆ ವಾಕ್ಯದಿಂದ ತೆಗೆಯಬಹುದೆ? ಪಠ್ಯವಾದ ಮೇಲೆ ಸುಮ್ಮನೆ ವಿವಾದ ಸೃಷ್ಟಿಯಾಗಬಹುದು' ಎಂದು ಕೇಳಿದೆ. ರಾಜೇಶ್ವರಿಯವರು ಬಿಲ್ ಕುಲ್ ಒಪ್ಪಲಿಲ್ಲ. "ತೇಜಸ್ವಿಯವರು ಹೇಗೆ ಬರೆದಿದ್ದಾರೋ ಹಾಗೇ ಹಾಕುವುದಾದರೆ ಹಾಕಿ, ಇಲ್ಲದಿದ್ದರೆ ನೀವೀ ಕತೇನಾ ಪುಸ್ತಕಕ್ಕೆ ಸೇರಿಸೋದೆ ಬ್ಯಾಡ" ಎಂದು ಬಿಟ್ಟರು. ನಾನು ಪಠ್ಯ ರಚನೆಯ ಸಂದರ್ಭದಲ್ಲಿ ಮತ್ತು ಪಠ್ಯಪುಸ್ತಕ ಪ್ರಕಟವಾದ ಮೇಲೆ ಎದುರಾಗಬಹುದಾದ ತಕರಾರುಗಳನ್ನೆಲ್ಲ ವಿವರಿಸಿದ ಮೇಲೆ, ಆ ಒಂದು ಹೆಸರನ್ನು ಬದಲಿಸುವುದರಿಂದ ಆ ವಾಕ್ಯದ ಟೋನ್ ಬದಲಾಗುವುದಿಲ್ಲವೆಂದು ಹೇಳಿದ ಮೇಲಷ್ಟೇ ಸಮ್ಮತಿಸಿದರು. ಧರ್ಮಸ್ಥಳ ಎಂಬ ಅಂಕಿತನಾಮದ ಬದಲಿಗೆ 'ಹೊರಗಡೆಯಿಂದ' ಎಂಬ ಪದವನ್ನು ಸೇರಿಸಿ ತೋರಿಸಿದ ಮೇಲೂ ಇಡೀ ಪ್ಯಾರವನ್ನು ಮತ್ತೆ ಮತ್ತೆ ನನ್ನಿಂದ ಓದಿಸಿದರು. ಅಂತೂ ಅವರ ಒಪ್ಪಿಗೆಯಿಂದ ಕೃಷ್ಣೇಗೌಡನ ಆನೆ ನಮ್ಮ ಪಠ್ಯವನ್ನು ಸೇರಿತು. ಲೇಖಕರಿಗೆ ಕೊಡಬೇಕಾದ ಗೌರವಧನ ತಲುಪಿದಾಗಲೂ ರಾಜೇಶ್ವರಿಯವರು ಮರೆಯದೆ ಫೋನ್ ಮಾಡಿ ಹೇಳಿದರು. ಎಲ್ಲವೂ ಕರಾರುವಾಕ್ಕಾಗಿ ಮಾಡಬೇಕೆಂಬ ಅವರ ಧೋರಣೆಗೆ ಇದೊಂದು ಪುಟ್ಟ ಉದಾಹರಣೆಯಷ್ಟೇ.
ಎಪ್ಪತ್ತರ ದಶಕದಲ್ಲಿ ನಮ್ಮ ನಾಡಿನಲ್ಲಿ ನಡೆದ ರೈತ ಚಳವಳಿ, ಜಾತಿ ವಿನಾಶ ಸಮಾವೇಶ ಮುಂತಾದ ಚಾರಿತ್ರಿಕ ಸಂಗತಿಗಳು ರೂಪುಗೊಳ್ಳುತ್ತಿದ್ದುದು ಹೆಚ್ಚಾಗಿ ತೇಜಸ್ವಿಯವರ ಮನೆಯಂಗಳದಲ್ಲಿಯೇ. ಲಂಕೇಶ್, ರಾಮದಾಸ್, ಕಡಿದಾಳು ಶಾಮಣ್ಣ, ಎಂ ಡಿ ನಂಜುಂಡಸ್ವಾಮಿ ಮುಂತಾದವರು ತೇಜಸ್ವಿ ತೋಟದ ಮನೆಯ ಅಂಗಳದಲ್ಲಿ ಕೂತು ನಡೆಸುತ್ತಿದ್ದ ಚರ್ಚೆಗಳಲ್ಲಿ ಆಸಕ್ತಿಯಿಂದ ಭಾಗಿಯಾಗುತ್ತಲೇ ಅವರೆಲ್ಲರಿಗೆ ಅಡುಗೆ ಮಾಡಿ ಹಾಕುತ್ತಿದ್ದ, ಕಾಫಿ ಟೀ ಒದಗಿಸುತ್ತಿದ್ದ ರಾಜೇಶ್ವರ ಮನೋಭೂಮಿಕೆಯಲ್ಲಿ ಆ ಎಲ್ಲ ಸಂಗತಿಗಳು ಅಪೂರ್ವವಾಗಿ ದಾಖಲಾಗಿವೆ. 'ನನ್ನ ತೇಜಸ್ವಿಯಲ್ಲಿ' ಅವೆಲ್ಲವೂ ಸಮರ್ಪಕವಾಗಿ ದಾಖಲಾಗಿವೆ ಕೂಡ. ರಾಜೇಶ್ವರಿಯವರಿಗಿದ್ದ ಓದಿನ ಹವ್ಯಾಸ ಕೂಡ ಅದರಲ್ಲಿ ಕಾಣಿಸುತ್ತದೆ. ಇಂಗ್ಲಿಷ್ ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿದ್ದ ರಾಜೇಶ್ವರಿಯವರಿಗೆ ಕನ್ನಡದ ಸಾಹಿತ್ಯ ಚಳುವಳಿಗಳ ಬಗ್ಗೆ, ಅದನ್ನು ರೂಪಿಸಿದ ಸಂದರ್ಭಗಳ ಬಗ್ಗೆ ಖಚಿತವಾದ ತಿಳುವಳಿಕೆಯಿತ್ತು. 1.jpg)
ಆದರೆ ಅವರೊಳಗಿನ ಲೇಖಕಿ ಮುನ್ನೆಲೆಗೆ ಬರಲು ತೇಜಸ್ವಿಯ ನಿರ್ಗಮನದವರೆಗೆ ಏಕೆ ಸಾಧ್ಯವಾಗಲಿಲ್ಲ? ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಗಂಡನ ಎಲ್ಲ ಚಟುವಟಿಕೆಗಳ ಹಿಂದೆ ಅದೃಶ್ಯರೂಪದಲ್ಲಿ ಒತ್ತಾಸೆಯಾಗಿ ನಿಂತಿದ್ದ ರಾಜೇಶ್ವರಿಯವರ ಸಾಹಿತ್ಯ ಸೃಷ್ಟಿಶೀಲ ಶಕ್ತಿಯನ್ನು ಗುರುತಿಸುವಲ್ಲಿ ತೇಜಸ್ವಿಯವರು ವಿಫಲರಾದರೆ ಅಥವಾ ಪತ್ನಿಯ ಬರಹದ ಬಗ್ಗೆ ಅಸಡ್ಡೆಯಿಂದ ನಡೆದುಕೊಂಡರೆ ಎಂಬುದು ಮುಖ್ಯ ಪ್ರಶ್ನೆ ಕೂಡ. 'ನಿಮ್ಮ ಹೆಂಡತಿಯವರು ಏನಾದರೂ ಬರೆಯುತ್ತಾರ?' ಎಂದ್ಯಾರೋ ಪ್ರಶ್ನಿಸಿದ್ದಕ್ಕೆ ತೇಜಸ್ವಿಯವರು 'ಅವಳೇನು ಬರೆದಾಳು? ಬರೆದರೆ ನನಗೆ ಸೋಡಾ ಚೀಟಿ (ಡೈವೋರ್ಸ್) ಬರೆಯಬಹುದಷ್ಟೇ' ಅಂತ ನಕ್ಕಿದ್ದು ದಾಖಲಾಗಿದೆ. ಇಲ್ಲಿ ತೇಜಸ್ವಿಯವರ ಬಗ್ಗೆ ಅಪಸ್ವರ ಎತ್ತುತ್ತುಲ್ಲ. ಬದಲಿಗೆ ಹೆಣ್ಣಿನ ಸೃಜನಶೀಲ ಶಕ್ತಿಯ ಪ್ರಕಾಶಕ್ಕೆ ಎದುರಾಗುವ ಸವಾಲುಗಳು, ಹತ್ತಿಕ್ಕುವ ಸಾಂಸಾರಿಕ ಬಾಧೆಗಳು ಯಾವ ಯಾವ ರೂಪದಲ್ಲಿ ಕಾಡುತ್ತವೆಂಬ ಬಗ್ಗೆ ವಿಷಾದವಷ್ಟೇ ನಮ್ಮದು. ಅದೆಷ್ಟು ನೆನಪುಗಳನ್ನು ಎದೆಯಲ್ಲಿಟ್ಟುಕೊಂಡಿದ್ದರೆಂಬುದನ್ನು ಅವರ ಬರಹಗಳಿಂದ ಅರಿಯಬಹುದು.
ತೇಜಸ್ವಿಯವರು ಹೋದಮೇಲೆ ಬರೆದದ್ದು ಮಾತ್ರವಲ್ಲ, ತೇಜಸ್ವಿಯವರ ಬರೆದು ಎಲ್ಲೆಲ್ಲೋ ಇಟ್ಟು ಮರೆತಿದ್ದ ಅನೇಕ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದು ರಾಜೇಶ್ವರಿಯವರೇ. ಹೊಸ ವಿಚಾರಗಳು, ಪಾಕಕ್ರಾಂತಿ ಮತ್ತು ಇತರ ಕಥೆಗಳು, ವಿಮರ್ಶೆಯ ವಿಮರ್ಶೆ, ಕಾಡು ಮತ್ತು ಕ್ರೌರ್ಯ ಮುಂತಾದವುಗಳನ್ನು ಹುಡುಕಿ, ಸಂಯೋಜಿಸಿ ಪ್ರಕಟಣೆಗೆ ಸಿದ್ಧಪಡಿಸಲು ಬಾಳಸಂಗಾತಿಯ ನಿರ್ಗಮನ ಸೃಷ್ಟಿಸಿದ ಏಕಾಂತವನ್ನು ರಾಜೇಶ್ವರಿ ದುಡಿಸಿಕೊಂಡರು. "ಇವನ್ನೆಲ್ಲ ಪ್ರಕಟಿಸುವುದು ತೇಜಸ್ವಿಯವರಿಗೆ ಇಷ್ಟವಿರಲಿಲ್ಲವೆನಿಸುತ್ತೆ. ಅದಕ್ಜೆ ಅವರಿದ್ದಾಗ ಇವನ್ನು ಪ್ರಕಟಿಸಿರಲಿಲ್ಲ. ನೀವ್ಯಾಕೆ ಇವನ್ನೆಲ್ಲ ಪ್ರಕಟಿಸುವ ಸಾಹಸ ಮಾಡಿದಿರಿ?" ಎಂದು ನಾನು ಕೇಳಿದ್ದಕ್ಕೆ ರಾಜೇಶ್ವರಿಯವರಿಗೆ ಸ್ವಲ್ಪ ಸಿಟ್ಟೇ ಬಂದಿತ್ತು. ಈಗಲೂ ನನ್ನ ಅಭಿಪ್ರಾಯದಲ್ಲಿ ಬದಲಾವಣೆಯೇನಿಲ್ಲ. ಪಾಕಕ್ರಾಂತಿ, ಕಾಡು ಮತ್ತು ಕ್ರೌರ್ಯ ದುರ್ಬಲ ಬರಹಗಳು. ತೇಜಸ್ವಿಯವರ ಒಳ್ಳೆಯ ರಚನೆಗಳನ್ನೋದಿ ಮೆಚ್ಚಿದವರಿಗೆ ತುಂಬ ನಿರಾಸೆ ಮೂಡಿಸುತ್ತವೆ. ವಿಮರ್ಶೆಯ ವಿಮರ್ಶೆ ಕೃತಿಯ ಕೆಲವು ಲೇಖನಗಳಂತೂ ಅವರು ಎಂಎ ಮಾಡುವಾಗ ಬರೆದವು. ಅವುಗಳನ್ನು ತಿದ್ದಿತೀಡದೆ ಹಸಿಹಸಿಯಾಗಿ ಪ್ರಕಟಿಸುವುದು ಬೇಡವೆಂದೇ ತೇಜಸ್ವಿಯವರು ಬದಿಗಿಟ್ಟಿರಬಹುದು. ತೇಜಸ್ವಿಯವರಲ್ಲಿದ್ದ ಈ ಸೂಕ್ಷ್ಮತೆ ರಾಜೇಶ್ವರಿಯವರಲ್ಲಿ ನಿರೀಕ್ಷಿಸಬೇಕೋ ಬೇಡವೋ ಎಂದು ತಿಳಿಯದೆ ಸುಮ್ಮನಾದೆವು.
ತೇಜಸ್ವಿಯವರು ತೀರಿಕೊಂಡ ಬಳಿಕ ಲೇಖಕಿಯಾಗಿ ಬೆಳಕಿಗೆ ಬಂದ ರಾಜೇಶ್ವರಿಯವರು ಸಮಾರಂಭಗಳಲ್ಲೂ ಕಾಣಿಸಿಕೊಳ್ಳುವ ಮನಸ್ಸು ಮಾಡಿದ್ದರು. ಮೂರು ವರ್ಷಗಳ ಹಿಂದೆ ಮೂಡಿಗೆರೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಾನು ತೇಜಸ್ವಿಯವರ ಬಗ್ಗೆ ಮಾತಾಡಲು ಹೋಗಿದ್ದಾಗ ರಾಜೇಶ್ವರಿಯವರೂ ವೇದಿಕೆಯಲ್ಲಿದ್ದರು. ಆ ದಿನ ಅವರೊಂದು ಪ್ರಬಂಧ ಕೂಡ ಮಂಡಿಸಿದ್ದರು. ಗೋಷ್ಠಿಯ ಉದ್ಘಾಟನೆಗೋ ಅಧ್ಯಕ್ಷ ಪದವಿಗೋ ಕರೆಯದೆ ಎಂಬತ್ತರ ಪ್ರಾಯದ ಆ ಹಿರಿಯ ಜೀವವನ್ನು ಪ್ರಬಂಧ ಮಂಡಿಸಲು ಕರೆಯುವುದೇ ಎಂದು ನಾನು ತಕರಾರು ಮಂಡಿಸಿದೆ. ಪಾಪ ಅವರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಾವು ಆ ಪ್ರಬಂಧಕ್ಕೆ ಮಾಡಿಕೊಂಡ ಸಿದ್ಧತೆಯ ಬಗ್ಗೆ ನನ್ನೊಂದಿಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದರು. ಆಗ ಮಾತ್ರ ಮುಗ್ಧರಾಗಿ ಕಾಣಿಸಿದರು.
ಕೊರೊನಾ ಬಂದ ಮೇಲೆ ತೋಟಕ್ಕೆ ಬಂದವರನ್ನು ಕಿಟಕಿಯಿಂದಲೇ ಮಾತಾಡಿಸಿ ಕಳಿಸುತ್ತಿದ್ದರಾಗಿ ಎರಡು ವರ್ಷದಿಂದ ಅವರನ್ನು ನೋಡಲಾಗಿರಲಿಲ್ಲ. ಆದರೆ ಗೆಳೆಯರನ್ನು ವಿಚಾರಿಸುತ್ತಿದ್ದೆ. ಕ್ಲಬಾ ಹೌಸಿಗೆ ಬಂದು ತೇಜಸ್ವಿ ಕುರಿತು ಸೊಗಸಾಗಿ ಮಾತಾಡಿದ್ದು ಬಹುಶಃ ಅವರ ಕೊನೆಯ ಕಾರ್ಯಕ್ರಮವಿರಬೇಕು. ವಯೋ ಸಹಜತೆ ಅವರನ್ನು ಕುಗ್ಗಿಸಿತ್ತು. ಇರುವಷ್ಟು ಕಾಲವೂ ಅವರು ತೋರಿದ ಮನಸ್ಥೈರ್ಯ ಮಾತ್ರ ಅಪರೂಪದ್ದು. ಅದು ನಮ್ಮೆಲ್ಲರಿಗೂ ಮಾದರಿಯಾಗುವಂಥದ್ದು. ಹೋಗಿ ಬನ್ನಿ ರಾಜೇಶ್ವರಿ ಮೇಡಂ, ನಮಸ್ಕಾರ ನಿಮಗೆ.
ಎಚ್.ಎಸ್. ಸತ್ಯನಾರಾಯಣ ಅವರ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.