'ವಿ.ಕೃ.ಗೋಕಾಕ್ ಪ್ರಶಸ್ತಿ’ ಜವಾಬ್ದಾರಿಯನ್ನು ಹೆಚ್ಚಿಸಿದೆ: ಗುರುರಾಜ ಕರ್ಜಗಿ

Date: 29-09-2024

Location: ಬೆಂಗಳೂರು


ಬೆಂಗಳೂರು: ವಿನಾಯಕ ಗೋಕಾಕ್ ವಾಜ್ಞಯ ಟ್ರಸ್ಟ್ ಹಾಗೂ ಭಾರತೀಯ ವಿದ್ಯಾಭವನ ನೀಡುವ 2024ನೇ ಸಾಲಿನ 'ವಿ.ಕೃ.ಗೋಕಾಕ್ ಪ್ರಶಸ್ತಿ'ಸಮಾರಂಭವು 2024 ಸೆ. 29 ಭಾನುವಾರದಂದು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಡೆಯಿತು.

ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಅವರು ಮಾತನಾಡಿ, 'ವಿ.ಕೃ ಗೋಕಾಕ್ ಅವರಿಗೆ ಸಮಯ ಹಾಗೂ ಶಿಸ್ತು ಬಹಳ ಮುಖ್ಯವಾಗಿತ್ತು. ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಪ್ರವೃತ್ತಿಯಲ್ಲಿ ಚಿಂತಕರಾಗಿದ್ದರು. ಹೀಗೆ ವೃತ್ತಿಯ ಜೊತೆಗೆ ಬೇರೆ ಯಾವುದಾದರೂ ವಿಷಯವನ್ನು ತೆಗೆದುಕೊಂಡಾಗ ಅವರು ಸ್ವಾಭಾವಿಕವಾಗಿ ದೊಡ್ಡ ಮಟ್ಟದಲ್ಲಿ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆ. ಈ ವಿಷಯದಲ್ಲಿ ಇಂದು ನಮ್ಮೊಂದಿಗೆ ಇರುವ ಡಾ. ಗುರುರಾಜ ಕರ್ಜಗಿ ಅವರನ್ನು ಯಾವ ರೀತಿ ಬಣ್ಣಿಸಬೇಕು ಗೊತ್ತಿಲ್ಲ. ಅವರು ಯಾವುದಾದರೂ ಒಂದು ವಿಷಯದ ಬಗ್ಗೆ ಆಳವಾದ ಜ್ಞಾನವನ್ನು ಜನರಿಗೆ ಕೊಡುತ್ತಾ ಬಂದಿದ್ದಾರೆ,' ಎಂದು ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, 'ಇವತ್ತು ಕರ್ನಾಟಕದಲ್ಲಿ, ಅಷ್ಟೇಕೆ ಭಾರತದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ತಮ್ಮನ್ನು ತೊಡಗಿಸಿಕೊಂಡಂತಹ ಸರ್ಕಾರದ ಸಂಸ್ಥೆ ಹಾಗೂ ಖಾಸಗಿ ಸಂಸ್ಥೆಗಳನ್ನು ಕಾಣುತ್ತೇವೆ. ಸರ್ಕಾರದ ಸಂಸ್ಥೆಗಳು ಯಾವರೀತಿ ಕೆಲಸ ಮಾಡುತ್ತಿದೆ ಎಂಬುವುದು ತಮಗೆಲ್ಲ ಗೊತ್ತು. ಇವತ್ತು ಪ್ರಭುತ್ವ ಒಂದು ರೀತಿಯಲ್ಲಿ ದೀನ ಮನಸ್ಥಿತಿಯನ್ನ ನಮ್ಮೆಲ್ಲರಲ್ಲೂ ಸೃಷ್ಟಿಸುತ್ತಿದೆ. ತನ್ನ ಅಧಿಕಾರವನ್ನ ತನ್ನ ರಾಜಕೀಯ ನೆಲೆ ಇರಬಹುದು, ಧಾರ್ಮಿಕ ನೆಲೆ ಇರಬಹುದು, ಪ್ರಜ್ಞೆಯನ್ನು ಕಸಿದುಕೊಂಡು ಅಧೀನಾ ಪ್ರಜ್ಞೆಯನ್ನ ನಮ್ಮೆಲ್ಲರಲ್ಲೂ ಬಿತ್ತುತ್ತಿದೆ. ಹೀಗಾಗಿ ಇವತ್ತು ಸಾಮಾನ್ಯ ಪ್ರಜೆ ತನ್ನ ದನಿಯನ್ನು ಕಳೆದುಕೊಂಡು ಅಸಹಾಯಕ ರೀತಿಯಲ್ಲಿದ್ದಾನೆ. ಇವಾಗ ಸೊರಗಿರುವ ಕ್ಷೇತ್ರ ಅಂದರೆ ಸಂಶೋಧನೆ. ಹೀಗಾಗಿ ಹೊಸ ತಲೆ ಮಾರಿನಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಬೇಕು, " ಎಂದರು.

ವಿ.ಕೃ ಗೋಕಾಕ್ ಪ್ರಶಸ್ತಿ ಪುರಸ್ಕೃತ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರು ಮಾತನಾಡಿ, "ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಪರಿಚಯ ನೋಡಿ ಅಥವಾ ಮಾತನ್ನು ಕೇಳಿ, ಪುಸ್ತಕವನ್ನು ಓದಿಯಾದರು ವ್ಯಕ್ತಿಯ ಪರಿಚಯ ಆಗಬೇಕು. ಆದರೆ ನನಗೆ ಇದು ಯಾವುದು ಆಗದೆ ವಿ.ಕೃ ಅವರ ಪರಿಚಯ ಆಯ್ತು. ಅವರನ್ನು ನೋಡಿಲ್ಲ, ಒಂದು ಪುಸ್ತಕ ಕೂಡ ಓದಿಲ್ಲ. ಆದರೆ ಗೋಕಾಕ್ ಅವರ ಪರಿಚಯ ನಮ್ಮ ಮನೆಯಲ್ಲಿ ಎಲ್ಲರಿಗೂ ಇತ್ತು. ನನ್ನ ಸೋದರ ಮಾವ ಗೋಕಾಕ್ ಅವರ ವಿದ್ಯಾರ್ಥಿ. ಗೋಕಾಕ್ ಅವರ ಭಕ್ತ ಕೂಡ ಆಗಿದ್ದರು. ಹೀಗೆ ಅವರ ಪರಿಚಯ ಆಯಿತು. 'ವಿ.ಕೃ.ಗೋಕಾಕ್ ಪ್ರಶಸ್ತಿ’ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತವೆ. ಇದನ್ನು ಗೋಕಾಕ್ ಅವರ ಆಶೀರ್ವಾದ ಅಂದುಕೊಂಡಿದ್ದೇನೆ. ಅವರು ಹಾಕಿ ಕೊಟ್ಟ ನೆರಳಲ್ಲಿ ಇನ್ನು ನಾಲ್ಕು ಹೆಜ್ಜೆ ನಡೆಯೋದಾದರೆ ಆ ಪ್ರಶಸ್ತಿಗೆ ಗೌರವ ಕೊಟ್ಟಂತೆ ಆಗುತ್ತದೆ," ಎಂದು ಆಶಯ ನುಡಿಗಳನ್ನಾಡಿದರು.

ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರಿಗೆ ಪ್ರಶಸ್ತಿ ಹಾಗೂ ₹25 ಸಾವಿರ ನಗದು ಮತ್ತು ಫಲಕವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಚ್. ಎನ್. ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

- ಪೊನ್ನಮ್ಮ

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...