Date: 01-06-2025
Location: ಬೆಂಗಳೂರು
ಖ್ಯಾತ ಗಾಯಕಿ, ಉಪಾಸನಾ ಮೋಹನ್ ಶಿಷ್ಯೆ ವರ್ಷ ಬಿ. ಸುರೇಶ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಎಚ್.ಎಸ್.ವಿ ಜೊತೆಗೆ ಕಳೆದ ನೆನಪು. ಅಕ್ಷರ ರೂಪದಲ್ಲಿ...
ನಾನು 6ನೇ-7ನೇ ತರಗತಿಯಲ್ಲಿ ಭಾವಗೀತೆ ಎಂದರೇನು ಎಂದು ಅರಿತುಕೊಳ್ಳೋ ವೇಳೆಯಲ್ಲಿ “ಉಪಾಸನಾ” ಸಂಗೀತ ಶಾಲೆಯನ್ನು ಸೇರಿದೆ. ನನ್ನ ಗುರುಗಳಾದ ಶ್ರೀ ಉಪಾಸನಾ ಮೋಹನ್ ಸರ್ ನನ್ನ ಪಾಲಿಗೆ ಭಾವಗೀತಾಲೋಕದ ಬಾಗಿಲನ್ನು ತೆರೆದಿಟ್ಟರು. ಕವಿತೆ, ಕವಿ-ಕಾವ್ಯ ಪರಿಚಯವಾಯಿತು. ನನ್ನ ಅದೃಷ್ಟವೇನೆಂದರೆ ನಾನು ಹಾಡುವ ಕವಿತೆಗಳ ಕರ್ತೃ -ಕವಿಗಳನ್ನೇ ನಾನು ಭೇಟಿಯಾದೆ! ಹೀಗೆಂದು ನಾನು ಕನಸ್ಸಿನಲ್ಲೂ ಸಹ ನೆನೆಸಿರಲಿಲ್ಲ. ನಾನು ಚಿಕ್ಕವಳಾದ್ದರಿಂದ ನನಗೆ ಆಗ ಎಚ್.ಎಸ್.ವಿ ಸರ್ ಅಂದರೆ ಯಾರು , ಅವರ ಪಾಂಡಿತ್ಯವೇನೆಂದು ತಿಳಿದಿರಲಿಲ್ಲ. ನನ್ನ ಹಾಡುಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಪ್ರತೀ ಕಾರ್ಯಕ್ರಮದ ನಂತರ ನನಗೆ ಸರಿ ತಪ್ಪುಗಳ ತಿಳಿ ಹೇಳಿ, ಭೇಷ್ ಎನ್ನುವರು ಎಂದಷ್ಟೇ ತಿಳಿದಿತ್ತು. ಕೆಲವು ವರ್ಷಗಳ ನಂತರ ನನಿಗರಿವಾಯಿತು , ಎಂತಹ ಮಹಾನ್ ಕವಿಗಳ ಸತ್ಸಂಗದಲ್ಲಿರುವೆ ಎಂದು. ಡಾ. ಜಿ. ಎಸ್. ಶಿವರುದ್ರಪ್ಪ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್, ಎಚ್. ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣ ರಾವ್, ಕೆ.ಎಸ್. ನಿಸ್ಸಾರ್ ಅಹಮದ್ , ಎಂ .ಎನ್ . ವ್ಯಾಸರಾವ್, ಡುಂಡಿರಾಜ್, ಸುಬ್ರಾಯ ಚೊಕ್ಕಾಡಿ ಮುಂತಾದ ದಿಗ್ಗಜರ ಪರಿಚಯ, ಸತ್ಸಂಗ ನನ್ನ ಸಂಗೀತ ಪಯಣದಲ್ಲಿ ದೊಡ್ಡ ತಿರುವು ಸಿಕ್ಕಿ ತು.
ಎಚ್ಚೆಸ್ವಿ ಸರ್ ಪ್ರತಿ ಭೇಟಿಯಲ್ಲೂ ನನ್ನನ್ನು ಮಗುವಿನಂತೆ ನನ್ನ ಪಾಠದ ಬಗ್ಗೆ ಅತ್ಯಂತ ಪ್ರೀತಿಯಿಂದ ವಿಚಾರಿಸುತ್ತಿದ್ದರು. ನನ್ನನ್ನು ಅವರ ಮನೆಯಂಗಳದಲ್ಲಿ ಹಾಡಿಸಿ, ತಿದ್ದಿ -ತೀಡಿ , ನಾನು ಅವರ ಮನೆಯವರಲ್ಲಿ ಒಬ್ಬಳು ಎನ್ನುವ ರೀತಿ ಪ್ರೀತಿಸುತ್ತಿದ್ದರು. ಅವರ ಶಿಷ್ಯವೃಂದದ “ಅಭ್ಯಾಸ” ತಂಡದಿಂದ ನನಗೆ ಕೆಲವು ಬಾರಿ ಸಾಹಿತ್ಯದ ಪಾಠ ಕೇಳುವ ಸದಾವಕಾಶ ಕೂಡ ಒದಗಿದೆ! ಎಂತಹಾ ಸೌಭಾಗ್ಯ !
ಅವರ ಕವಿತೆಗಳನ್ನು ಹಾಡುತ್ತಾ ನನಗೆ ಗೊತ್ತಿಲ್ಲದೆ ನನ್ನ ಭಾವನೆಗಳು ಹೊರಹೊಮ್ಮುತ್ತಾ ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ.
ಮಹಾನ್ ಕವಿ ಇನ್ನಿಲ್ಲವೆಂದು ನಂಬಲು ಅಸಾಧ್ಯ! ಭಾವಗೀತೆ ಹಾಗು ಸಾಹಿತ್ಯ ಕ್ಷೇತ್ರಕ್ಕೆ ಭರಿಸಲಾಗದ ನಷ್ಟ!
ಕೆಲವು ತಿಂಗಳ ಹಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಲು ಅವರ ಮನೆಗೆ ನನ್ನ ಪೋಷಕರ ಜತೆ ಹೋಗಿದ್ದೆ. ಅವರ ನೋವಿನ ಪರಿಸ್ಥಿತಿ ನೋಡಿ ನಮಗೆ ಕಣ್ಣಲ್ಲಿ ನೀರು ತುಂಬಿತು. ಅಂತಹಾ ಪರಿಸ್ಥಿತಿಯಲ್ಲೂ ಅವರು, “ವರ್ಷಾ, ನಾನು ಬರೆದಿರೋ ಹಾಡು ನಿನ್ನ ಬಾಯಲ್ಲಿ ಕೇಳಬೇಕೆನಿಸುತ್ತಿದೆ, ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯ ಹಾಡನ್ನು ಹಾಡುವೆಯಾ? “ ಎಂದು ಕೇಳಿದಾಗ , ನಾನು ಭಾವುಕಳಾಗಿ ಹಾಡಿದೆ.
.- ಎಚ್.ಎಸ್.ವಿ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಕೈಹಿಡಿದುಕೊಂಡು 'ಬಯಲಿನೊಳಗೆ ಯಾರೋ ಮರೆತ ಶೃತಿ ಮಾಡಿದ ವೀಣೆಯʼ ಭಾವಗೀತೆ ಹಾಡಿದ ವರ್ಷ ಬಿ. ಸುರೇಶ್.
ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...
2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...
ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...
©2025 Book Brahma Private Limited.