ವಿದೇಶದಲ್ಲಿದ್ದರೂ ತಾಯ್ನುಡಿಯ ಬೇರುಗಳನ್ನು ಹಸಿಯಾಗಿರಿಸಿಕೊಂಡಿರುವ ಸಂಜೋತಾ


"ತಾವು ಆಯ್ದುಕೊಂಡ ವಸ್ತುವನ್ನು ಸೂಕ್ತ ಸ್ಥಳ, ಸನ್ನಿವೇಶ, ವಿವರಣೆಗಳೊಂದಿಗೆ ಓದುಗರ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ ಲೇಖಕಿ. ಇಲ್ಲಿನ ಕತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ನೋಡುವುದಾದರೆ ಕೆಲವು ತಾಯ್ನೆಲದಲ್ಲಿ ನಡೆಯುವ ಕತೆಗಳಾದರೆ ಮತ್ತೆ ಕೆಲವು ವಿದೇಶದಲ್ಲಿ ನಡೆದ, ನಡೆಯುತ್ತಿರುವ ಘಟನೆಗಳಿಗೆ ಕಥನರೂಪ ಕೊಟ್ಟಿರುವಂತದ್ದು," ಎನ್ನುತ್ತಾರೆ ವಸುಮತಿ ಉಡುಪ, ಮೈಸೂರು. ಅವರು ಸಂಜೋತಾ ಪುರೋಹಿತ ಅವರ ʻನೆಲವೆಲ್ಲ ನಂದಬಟ್ಟಲುʼ ಕೃತಿಗೆ ಬರೆದ ನಾಲ್ಕು ಮಾತು.

ವಿದೇಶದಲ್ಲಿದ್ದರೂ ತಾಯ್ನುಡಿಯ ಬೇರುಗಳನ್ನು ಹಸಿಯಾಗಿರಿಸಿಕೊಂಡು ಬರೆಯುತ್ತಿರುವ ಸಂಜೋತಾ ಪುರೋಹಿತ ಅವರ ಪ್ರಸ್ತುತ ಕಥಾ ಸಂಕಲನ ಕನ್ನಡ ಸಾಹಿತ್ಯಕ್ಕೆ ಒಂದು ಗಮನಾರ್ಹ ಕೊಡುಗೆಯಾಗಿ ಸೇರ್ಪಡೆಯಾಗುತ್ತಿರುವುದು ಅಭಿಮಾನದ ಸಂಗತಿ. ವಿಷಯವೈವಿಧ್ಯತೆಯಿಂದ ಕೂಡಿದ ಇಲ್ಲಿನ ಕತೆಗಳು ಓದುಗರ ಕುತೂಹಲವನ್ನು ಹಿಡಿದಿಟ್ಟುಕೊಂಡು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಎಲ್ಲಿಯೂ ಅತಿರಂಜಿತ ಕಲ್ಪನೆಗಳಿಲ್ಲದೆ ವಾಸ್ತವದ ನೆಲೆಗಟ್ಟಿನ ಮೇಲೆ ರಚನೆಯಾಗಿರುವಂತಾ ಕತೆಗಳು ಸಂಕಲನದ ಮೆರುಗನ್ನು ಹೆಚ್ಚಿಸಿವೆ.

ತಾವು ಆಯ್ದುಕೊಂಡ ವಸ್ತುವನ್ನು ಸೂಕ್ತ ಸ್ಥಳ, ಸನ್ನಿವೇಶ, ವಿವರಣೆಗಳೊಂದಿಗೆ ಓದುಗರ ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ ಲೇಖಕಿ. ಇಲ್ಲಿನ ಕತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ನೋಡುವುದಾದರೆ ಕೆಲವು ತಾಯ್ನೆಲದಲ್ಲಿ ನಡೆಯುವ ಕತೆಗಳಾದರೆ ಮತ್ತೆ ಕೆಲವು ವಿದೇಶದಲ್ಲಿ ನಡೆದ, ನಡೆಯುತ್ತಿರುವ ಘಟನೆಗಳಿಗೆ ಕಥನರೂಪ ಕೊಟ್ಟಿರುವಂತದ್ದು. ವಿದೇಶದಲ್ಲಿ ನಡೆಯುವ ಇಂತಹ ಪ್ರಸಂಗಗಳನ್ನು ಅಲ್ಲಿಯೇ ನೆಲೆಸಿರುವವರೊಬ್ಬರು ಪ್ರಸ್ತುತಪಡಿಸುವಾಗ ಅದನ್ನು ಓದುವಾಗಿನ ಅನುಭವ ಅನನ್ಯ. ಮಾತಿಗೆ ಮೀರಿದ ಅನುಭೂತಿ.

ಅಸಹಾಯಕ ಪರಿಸ್ಥಿತಿಯಲ್ಲೂ ಸ್ವಾಭಿಮಾನ ಮೆರೆಯುವ ʼಮಿಸ್. ಬ್ರೆಂಡಾʼ ಕತೆ ವಿದೇಶದ ಜೀವನಶೈಲಿಯ ಒಂದು ಹೊಳಹನ್ನು ಕಟ್ಟಿಕೊಟ್ಟರೆ ʼಒಂದು ಹೂವಿನ ನೆಳಲುʼ ಇನ್ನಿಲ್ಲವಾದ ಚಾರುಲತೆಯ ಬದುಕಿನ ಕೊನೆಯ ಪುಟಗಳನ್ನು ಚಂದ್ರಹಾಸನ ಮೂಲಕ ತೆರೆದಿಡುತ್ತದೆ. ವೇಗಾಸಿನ ಕಸಿನೋಗಳಲ್ಲಿ ಹಗಲು ರಾತ್ರಿಯ ಪರಿವೆ ಇಲ್ಲದೆ ನಡೆಯುವ ಜೂಜಾಟಗಳು, ಅಲ್ಲಿಯ ಉನ್ಮತ್ತ ಜೀವನದ ವಿಸ್ತೃತ ವಿವರಣೆ, ಬ್ಲ್ಯಾಕ್‌ ಜಾಕ್‌ ಆಟದ ಕುರಿತಾದ ಸಮಗ್ರ ಮಾಹಿತಿ, ಆಟದ ಉನ್ಮಾದದಲ್ಲಿ ಕಳೆದು ಹೋಗುವ ಜಾನ್‌ನ ಕತೆಯನ್ನೊಳಗೊಳಗೊಂಡ ʼಬೆಲಾಜಿಯೋದ ಗರ್ಭದೊಳಗೆʼ ಕೆಸಿನೋ ಪ್ರಪಂಚವೊಂದರ ಒಳಹೊರಗನ್ನು ಓದುಗರೆದುರು ಅನಾವರಣಗೊಳಿಸಿದರೆ ಹದಿಹರೆಯದ ಹುಡುಗನೊಬ್ಬ ಬಂದೂಕು ಹಿಡಿದು ಸ್ಕೂಲಿಗೆ ನುಗ್ಗಿ ಅನೇಕ ಮುಗ್ಧ ಮಕ್ಕಳ ಸಾವುನೋವಿಗೆ ಕಾರಣವಾಗುವ, ಗಾಢ ವಿಷಾದಭಾವವನ್ನು ಮೀಟಿ ʼಅಯ್ಯೋ..ʼ ಅನಿಸುವ ಕತೆ ʼಪಿತೃದೋಷʼ. ಅಮೆರಿಕಾದಲ್ಲಿ ನಡೆಯುವ ಇಂತಹ ಅನೇಕ ಘಟನೆಗಳನ್ನು ಪೇಪರಿನಲ್ಲಿ ಓದಿ, ದೂರದರ್ಶನದಲ್ಲಿ ನೋಡಿದ ಅರಿವಿದ್ದರೂ ಕಥಾರೂಪದಲ್ಲಿ ಮನ ಮಿಡಿಯುವಂತೆ ಸಶಕ್ತವಾಗಿ ಇದನ್ನು ಕಣ್ಣೆದುರು ಕಟ್ಟಿ ಕೊಟ್ಟಿದ್ದಾರೆ ಲೇಖಕಿ.

ತಾಯ್ನೆಲದ ಕತೆಗಳ ವಿಷಯಕ್ಕೆ ಬರುವುದಾದರೆ ವಿಳಾಸವಿಲ್ಲದ ಒಂದು ಪತ್ರ ಯಾರ್ಯಾರ ಜೀವನದಲ್ಲಿ ಏನೇನು ಸಂಶಯ, ಅನಾಹುತ, ಅವಾಂತರ ಇತ್ಯಾದಿಗಳಿಗೆ ಕಾರಣವಾಯಿತು ಎನ್ನುವುದನ್ನು ಹೇಳುವ ಕತೆ ʼತಾಪತ್ರಯʼ. ʼಬದುಕು ಕೊಟ್ಟಿದ್ದನ್ನು ಎರಡು ಬೊಗಸೆಗಳಿಂದ ಸ್ವೀಕರಿಸುವʼ ಮನೋಭಾವದ ಗಟ್ಟಿಗಿತ್ತಿ ತಾರಾ ಚಿಕ್ಕಮ್ಮನ ಬದುಕಿನ ಪುಟಗಳಿಂದ ರೂಪುಗೊಂಡ ʼಅಗ್ನಿತಾರೆʼ, ಮಗನನ್ನು ಸಂಕಷ್ಟದಿಂದ ಪಾರು ಮಾಡಲು ತಾನು ಮಾಡದ ಅತ್ಯಾಚಾರದ ತಪ್ಪಿಗೆ ತನ್ನನ್ನು ಹೊಣೆಯಾಗಿಸಿಕೊಂಡ ಪಿತೃಹೃದಯದ ಮಾರ್ದವತೆಯ ಕತೆ ʼಭಾವಕ್ಕೆ ಬಂಧಮುಕ್ತʼ, ಧಡೂತಿ ಶರೀರದ ಶ್ರಾವಣಿಯನ್ನು ಮೆಚ್ಚಿ ಮದುವೆಯಾಗಿ ವಿದೇಶಕ್ಕೆ ಕರೆದುಕೊಂಡು ಹೋದ ವರನ ಕುರಿತಾಗಿ ವಾಸ್ತವ ತಿಳಿದು ಬಂದಾಗ ಶ್ರಾವಣಿ ತೆಗೆದುಕೊಳ್ಳುವ ನಿರ್ಧಾರದ ʼಇನ್ನೇನು ಬೆಳಗಾಗುತ್ತದೆʼ ಕತೆ, ಮನ ಮೆಚ್ಚಿದ ಹುಡುಗಿ ತನ್ನಿಂದಾಗಿ ದುರಂತ ಅಂತ್ಯ ಕಂಡಳೆಂಬ ಕನವರಿಕೆಯಲ್ಲಿ, ಅವಳು ದೆವ್ವವಾಗಿದ್ದಾಳೆಂಬ ವದಂತಿಯ ಹಿನ್ನೆಲೆಯಲ್ಲಿ ಮನೋವೈಕಲ್ಯಕ್ಕೊಳಗಾಗಿ ತನ್ನ ಸಾವನ್ನು ತಾನೇ ತಂದುಕೊಂಡ ಯುವಕನ ಕತೆ ʼಗೊರಟಿ ಹೂವಿನ ಹುಡುಗಿʼ, ʼಎಲ್ಲೀ ತನಕಾ ನಾವ್‌ ತಿರುಗಿ ಕೊಡಾಂಗಿಲ್ಲೋ ಅಲ್ಲೀ ತನಕಾ ಮಂದಿ ನಮ್ಮ ಬೆನ್ನು ಹತ್ತುದ ಬಿಡಾಂಗಿಲ್ಲʼ ಎನ್ನುವ ಕಥಾನಾಯಕಿ ಮುಕ್ತಾ ಪುಂಡುಹುಡುಗನೊಬ್ಬನ ಕಾಟವನ್ನು ಎದುರಿಸಿ ಗೆದ್ದ ʼನೆಲವೆಲ್ಲ ನಂದಬಟ್ಟಲುʼ ಕತೆ, ಹೀಗೆ ಪ್ರತಿ ಕತೆಗಳಲ್ಲೂ ಲೇಖಕಿಯ ಕುಸುರಿ ಕೆಲಸ ಎಷ್ಟು ಸ್ವಾಭಾವಿಕವಾಗಿ ಮೂಡಿ ಬಂದಿದೆ ಎನ್ನುವ ಸೊಗಸನ್ನು ಇಲ್ಲಿನ ಕತೆಗಳನ್ನು ಓದಿಯೇ ಅರಿಯಬೇಕು.

ಕತೆ ಹೇಳುವುದರಲ್ಲಿ ತಮ್ಮದೇ ಸ್ವಂತಿಕೆ, ಶೈಲಿಯನ್ನು ಸಾಧಿಸಿಕೊಂಡಿರುವ ಲೇಖಕಿ ಎಲ್ಲಿಯೂ ಅವಸರಪಡದೆ ತಾವು ಹೇಳಬೇಕಾದ್ದನ್ನು ಸಾವಕಾಶವಾಗಿ, ಅಷ್ಟೇ ಸಮರ್ಥವಾಗಿ, ಪ್ರಭಾವಶಾಲಿಯಾಗಿ ಓದುಗರಿಗೆ ತಲುಪಿಸಿದ್ದಾರೆ. ಸ್ತ್ರೀ ಕೇಂದ್ರಿತ ಕತೆಗಳಲ್ಲಿ ತನ್ನ ಸಮಸ್ಯೆಗಳಿಗೆ ಮಹಿಳೆ ತಾನೇ ಪರಿಹಾರ ಕಂಡುಕೊಂಡು ಸ್ವಾಭಿಮಾನದ ಬದುಕು ನಡೆಸಬೇಕಾದ್ದರ ಕುರಿತು ಲೇಖಕಿಯ ಒಲವು, ನಿಲುವುಗಳು ಸ್ಪಷ್ಟವಾಗುವಂತಿದ್ದರೆ, ವಿಷಯ ಯಾವುದೇ ಆದರೂ ಅದನ್ನು ಕಥನರೂಪದಲ್ಲಿ ಹೇಳಬಲ್ಲ ತಮ್ಮ ಪ್ರತಿಭೆಯನ್ನು ಪ್ರತಿ ಕತೆಯಲ್ಲೂ ಸಾಬೀತುಗೊಳಿಸಿದ್ದಾರೆ ಲೇಖಕಿ. ಸಂಜೋತಾ ಪುರೋಹಿತ ಅವರಿಂದ ಹೀಗೆಯೇ ಉತ್ತಮ ಕತೆಗಳು ರಚನೆಯಾಗಿ ಓದುಗರನ್ನು ತಲುಪಲಿ, ಪ್ರಸ್ತುತ ಕಥಾ ಸಂಕಲನ ಅರ್ಹ ಪ್ರಶಸ್ತಿ, ಬಹುಮಾನಗಳಿಗೆ ಭಾಜನವಾಗಲಿ ಎಂದು ಹೃತ್ಪೂರ್ವಕವಾಗಿ ಶುಭ ಹಾರೈಸುತ್ತೇನೆ.

 

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...