ವಿಂಗ್ ಕಮಾಂಡರ್ ಸುದರ್ಶನ್ ನನಗೊಂದು ಜೀವಂತ ಬೆರಗು: ಎಚ್‌.ಎಸ್‌.ವೆಂಕಟೇಶಮೂರ್ತಿ


ಭಾರತೀಯ ವಾಯುಸೇನೆಗೆ ತೊಡಗಿದ ಸುದರ್ಶನ್, ದೃಢ ಸಂಕಲ್ಪ ಮತ್ತು ತ್ರಿವಿಕ್ರಮ ಛಲದಿಂದ ವಾಯುಸೇನೆಯ ಯಶಸ್ವೀ ವೈಮಾನಿಕರಾಗಿ ಹೆಸರು ಮಾಡಿದ್ದು ನಮ್ಮ ನಾಡಿಗೇ ಹೆಮ್ಮೆಯ ವಿಷಯ. ಈ ಎಲ್ಲಾ ಬಹಿರಂಗದ ನಡುವೆ ಅವರ ಅಂತರಂಗದಲ್ಲಿ ಕನ್ನಡ ಮತ್ತು ಸಾಹಿತ್ಯದ ಒಲವು ಜೀವಂತ ಝರಿಯಾಗಿತ್ತು. ಪ್ರಸ್ತುತ ಕೃತಿಯು ಗಂಗೂರಿನಿಂದ ಗಗನಕ್ಕೆ ಅವರ ವಾಯುಸೇನೆಯ ಶಿಕ್ಷಣದ ಮತ್ತು ರೋಚಕ ಅನುಭವಗಳ ಅತ್ಯಾಕರ್ಷಕ ನಿರೂಪಣೆಯಾಗಿದೆ ಎನ್ನುತ್ತಾರೆ ಸಾಹಿತಿ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಸುದರ್ಶನ ಬಿ.ಎಸ್‌ ಅವರ ನಭಃ ಸ್ಪೃಶಂ ದೀಪ್ತಂ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ….

ವಿಂಗ್ ಕಮಾಂಡರ್, ಸುದರ್ಶನ್ ನನಗೊಂದು ಜೀವಂತ ಬೆರಗು. ನಾವಿಬ್ಬರೂ ಒಂದೇ ಪರಿಸರದವರು, ಅಕ್ಕಪಕ್ಕದ ಹಳ್ಳಿಯವರು. ಜೀವನವೇ ರೈತಾಪಿ ಪ್ರಧಾನವಾಗಿರುವ ಹಿರೇಗಂಗೂರಿನ ಸಂಸ್ಕಾರವಂತರ ಮನೆತನದಲ್ಲಿ ಹುಟ್ಟಿ ಬೆಳೆದವರು. ಆರಂಭಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪಡೆದವರು. ಬಾಲ್ಯದಲ್ಲಿ ಜನಪ್ರಿಯ ಶಿಕ್ಷಕರಾಗಿದ್ದ ತಮ್ಮ ತಂದೆಯವರಿಂದ ಸಾಹಿತ್ಯ ಮತ್ತು ಸಂಸ್ಕೃತಿಯ ಗಾಢ ಪ್ರಭಾವ ಪಡೆದವರು.ಅಚ್ಚ ಹಸಿರಿನ ನಡುವೆಯೇ ಓರ್ವ ಯೋಧ ತನ್ನರಿವಿಲ್ಲದೇ ಮೈಗೊಳ್ಳುತ್ತಿದ್ದುದೂ ಒಂದು ಬೆರಗೇ!

ಭಾರತೀಯ ವಾಯುಸೇನೆಯಲ್ಲಿ ವಾಯುಸೈನಿಕರಾಗಿ ಸೇವೆಗೆ ತೊಡಗಿದ ಸುದರ್ಶನ್, ದೃಢ ಸಂಕಲ್ಪ ಮತ್ತು ತ್ರಿವಿಕ್ರಮ ಛಲದಿಂದ ವಾಯುಸೇನೆಯ ಯಶಸ್ವೀ ವೈಮಾನಿಕರಾಗಿ ಹೆಸರು ಮಾಡಿದ್ದು ನಮ್ಮ ನಾಡಿಗೇ ಹೆಮ್ಮೆಯ ವಿಷಯ. ಈ ಎಲ್ಲಾ ಬಹಿರಂಗದ ನಡುವೆ ಅವರ ಅಂತರಂಗದಲ್ಲಿ ಕನ್ನಡ ಮತ್ತು ಸಾಹಿತ್ಯದ ಒಲವು ಜೀವಂತ ಝರಿಯಾಗಿತ್ತು. ವಾಯುಸೇನೆಯಿಂದ ನಿವೃತ್ತರಾದ ಮೇಲೆ ಇಂಡಿಗೋ ವಾಯುಯಾನ ಸಂಸ್ಥೆಯಲ್ಲಿ ವೈಮಾನಿಕರಾದ ಅವರು ಜೊತೆಯಲ್ಲಿಯೇ ಸಾಹಿತ್ಯ ರಚನೆಯಲ್ಲಿಯೂ ಸಹಾ ತಮ್ಮನ್ನು ತಾವು ತೊಡಗಿಸಿಕೊಂಡರು. ಪ್ರಸ್ತುತ ಕೃತಿ 'ನಭ ಸ್ಪಶಂ ದೀಪ್ತಂ, ಗಂಗೂರಿನಿಂದ ಗಗನಕ್ಕೆ” ಅವರ ವಾಯುಸೇನೆಯ ಶಿಕ್ಷಣದ ಮತ್ತು ರೋಚಕ ಅನುಭವಗಳ ಅತ್ಯಾಕರ್ಷಕ ನಿರೂಪಣೆ. ಸುದರ್ಶನರು ಈಗ ನನ್ನ ಅಭಿಮಾನದ ಕಿರಿಯ ಮಿತ್ರರು!

- ಎಚ್‌.ಎಸ್‌. ವೆಂಕಟೇಶಮೂರ್ತಿ

ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಲೇಖಕ ಪರಿಚಯ

ಆಯ್ದ ಭಾಗ

" Through These Portals Pass the Best Trained Pilots in the World"

ವಾಯುಸೇನೆಯ ಅಕಾಡೆಮಿಯ ಮುಖ್ಯ ಕಛೇರಿಯ ಪ್ರವೇಶದ್ವಾರದಲ್ಲಿ ಹೆಮ್ಮೆಯಿಂದ ಎದ್ದು ಕಾಣುತ್ತದೆ ಈ ಬರಹ. ದೀಕ್ಷಾಂತ ಸಮಾರೋಹದಲ್ಲಿ 'ಪೈಲಟ್ ಆಫೀಸರ್' ಆಗಿ ದೀಕ್ಷೆ ಪಡೆದ ವಾಯುಸೇನೆಯ ಪೈಲಟ್ಟುಗಳು ಈ ದ್ವಾರದ ಮುಖಾಂತರ ಪ್ರವೇಶಿಸಿ ಒಳಗೆ ಹೆಮ್ಮೆಯಿಂದ ಕಾಯುತ್ತಿರುವ ತಮ್ಮ ತಂದೆ ತಾಯಿಯರ ಬಳಿ ಸಾಗುತ್ತಿರುವಾಗಲೇ ಮೇಲಿನಿಂದ ಇಪ್ಪತ್ತನಾಲ್ಕು ತರಬೇತಿ ವಿಮಾನಗಳು..ಸುಯ್..ಸುಯ್ ಎಂದು ಸಾಲಾಗಿ ಹಾರಾಡುತ್ತಾ ಹೋಗುತ್ತಿರುತ್ತವೆ. ಭಾರತದ ರಾಷ್ಟ್ರಪತಿಯವರೇ ನಮ್ಮ ಸಶಸ್ತ್ರ ಸೇನಾಡಡೆಗಳ ಸರ್ವೋಚ್ಚ ದಂಡನಾಯಕ. ಭೂಸೇನೆ, ವಾಯುಸೇನೆ ಮತ್ತು ನೌಕಾದಳ ಪ್ರತಿಯೊಬ್ಬ ಅಧಿಕಾರಿಗೂ..

'Having absolute faith in your honesty, integrity, capability...I hereby appoint you as an Officer.....'ಎನ್ನುವ ಲಿಖಿತವಿರುವ, ರಾಷ್ಟ್ರಪತಿಯವರು ಸಹಿ ಹಾಕಿರುವ ಪದವಿಪತ್ರ.. Certificate of Commissioning ಸಿಗುತ್ತದೆ.

ಈ ನೂತನ ಅಧಿಕಾರಿಗಳಿಗೆ ಮೊಟ್ಟಮೊದಲ ಸಲ್ಯೂಟ್ ಯಾರು ಕೊಡುತ್ತಾರೆ ಎನ್ನುವುದು ಇನ್ನೊಂದು ವಿವೇಕಯುತ, ಭಾವುಕ ಅನುಭವ. ಹಲವಾರು ಹಿನ್ನಲೆಗಳಿಂದ ಬಂದ ಯುವಕರನ್ನು ಮಿಲಿಟರಿಯ ಶಿಸ್ತಿಗೆ ಒಳಪಡಿಸುವ, ಅದಕ್ಕೆ ಬೇಕಾದ ದೈಹಿಕ ಮತ್ತು ಮಾನಸಿಕ ತರಬೇತಿ ನೀಡುವ, ಬಗ್ಗದವರನ್ನು ಶಿಕ್ಷಿಸುವ, ಬಂಡೆಗಳನ್ನು ಕೆತ್ತಿ ಮೂರ್ತಿಗಳನ್ನು ಮಾಡುವ, ಸರಿಯಾಗಿ ಹೇಗೆ ಸಲ್ಯೂಟ್ ಮಾಡುವುದನ್ನು ಕಲಿಸಿಕೊಡುವ ದೈಹಿಕ ಶಿಕ್ಷಕರ...Ground Training Instructor(GTI) ಮುಖ್ಯಸ್ಥ ಪ್ರವೇಶ ದ್ವಾರದಲ್ಲೇ ನಿಂತು...

”ನೀವು ಮೊಟ್ಟಮೊದಲು ನನ್ನ ತಂಡದ ಪರವಾಗಿ ಸಲ್ಯೂಟ್ ಸ್ವೀಕರಿಸಿ.. ತರಬೇತಿ ಸಮಯದಲ್ಲಿ ನಾವು ಮಾಡಿದ್ದೆಲ್ಲಾ ನಿಮ್ಮ ಒಳಿತಿಗಾಗಿ” ಎನ್ನುವ ಭಾವದಿಂದ ನೋಡುತ್ತಿದ್ದರೆ ಎಂಥಹವರೂ ಭಾವುಕರಾಗುತ್ತಾರೆ. ಈ ಅಧಿಕಾರಿಗಳು ಮುಂದೆ ಏರ್ ಮಾರ್ಷಲ್ ಪದವಿಗೆ ತಲುಪಿದರೂ ಅಕ್ಯಾಡಮಿಯ ಈ GTI ಗಳನ್ನು ಆದರದಿಂದ ನೆನಪಿಸಿಕೊಳ್ಳುತ್ತಾರೆ. ಆಕಾಶದಲ್ಲಿ ವಾಯುಯಾನದ ಗುರುವಾಗಲಿ, ಭೂಮಿಯ ಮೇಲಿನ ಶಿಕ್ಷಕರಾಗಲಿ ಗುರುಶಿಷ್ಯ ಪರಂಪರೆ ವಾಯುಸೇನೆಯಲ್ಲಿ ಹಾಸುಹೊಕ್ಕಾಗಿದೆ.

ಇದನ್ನೆಲ್ಲಾ ನಮ್ಮ ಸೀನಿಯರ್ ಬ್ಯಾಚಿನ ದೀಕ್ಷಾಂತ ಪರೇಡಿನಲ್ಲಿ ನೋಡುತ್ತಾ ಆಲೋಚಿಸುತ್ತಿರುವಾಗ...ಇನ್ನೇನು ಆರು ತಿಂಗಳಲ್ಲಿ ನಾನೂ ಈ ಸ್ಥಾನದಲ್ಲಿರುತ್ತೇನೆ ಎನ್ನುವ ಹಗಲುಗನಸೊಂದು ಸುಳಿದು ಹೋಯಿತು ಆದರೆ ಇದಕ್ಕಾಗಿ ಇನ್ನೂ ಹಲವಾರು ಸವಾಲುಗಳನ್ನು ಎದುರಿಸಬೇಕು...ಈಸ ಬೇಕು, ಈಸಿ ಜಯಿಸಬೇಕು. ಕೊಯಮತ್ತೂರಿನ ವಾಯುಸೇನೆಯ ಆಡಳಿತ ಕಾಲೇಜಿನ ಆರು ತಿಂಗಳು, ಬೀದರಿನಲ್ಲಿ ಆರು ತಿಂಗಳು ಪ್ರಾಥಮಿಕ ವಾಯುಯಾನದ ತರಬೇತಿಯನ್ನು ಮುಗಿಸಿ ಈಗ ಮೂರನೇ ಹಂತದ ಜೆಟ್ ವಿಮಾನಗಳ ತರಬೇತಿಗೆ ಹೈದರಾಬಾದಿನ ಬಳಿಯ ವಾಯುಸೇನೆಯ ಅಕ್ಯಾಡಮಿಗೆ ಬಂದಿದ್ದೆವು. ಇದೊಂದು ಅಂತಿಮ ಹಂತವನ್ನು ಗೆದ್ದುಕೊಂಡು ಬಿಟ್ಟರೆ..ಕುರುಕ್ಷೇತ್ರವನ್ನು ಗೆದ್ದ ಹಾಗೆ.

ಬೆಂಗಳೂರಿನ ವಾಯುಸೇನಾ ತಾಂತ್ರಿಕ ಕಾಲೇಜನ್ನು ಹೊರತು ಪಡಿಸಿದರೆ ಇನ್ನು ಇತರೆ ಎಲ್ಲಾ ಬ್ರಾಂಚಿನ ಅಧಿಕಾರಿಗಳ ತರಬೇತಿ ಇಲ್ಲೇ ನಡೆಯುತ್ತದೆ. ಸುಮಾರು ಏಳು ಸಾವಿರ ಎಕರೆಯ ಈ ವಿಶಾಲ ಪ್ರದೇಶದಲ್ಲಿ ಒಂದೇ ಸಮಯಕ್ಕೆ ವಿವಿಧ ಬ್ರ್ಯಾಂಚಿನ ಸುಮಾರು ಐನೂರು ಫ್ಲೈಟ್ ಕೆಡೆಟ್ಟುಗಳ ತರಬೇತಿ ನಡೆಯುತ್ತದೆ. ಅಷ್ಟೊಂದು ರೂಮುಗಳು, ಒಂದೇ ಸಮಯಕ್ಕೆ ಅಷ್ಟೊಂದು ಹಸಿದ ಹೊಟ್ಟೆಗಳಿಗೆ ಊಟದ ವ್ಯವಸ್ಥೆಯ ಭೋಜನಶಾಲೆ, ಅಂತರಾಷ್ಟ್ರೀಯ ಮಟ್ಟದ ಈಜುಕೊಳ, ಆಟದ ಮೈದಾನಗಳು, ಬೃಹತ್ ಗ್ರಂಥಾಲಯ, ಒಂದು ಚಿಕ್ಕ ಸಿನೆಮಾ ಥಿಯೇಟರಿನಷ್ಟು Pre Flight Briefing Hall...ಅಕ್ಯಾಡಮಿಯ ಒಂದೊಂದು ಅಂಗವೂ ಅಗಾಧ, ವಿಶಾಲ.

ಇಲ್ಲಿನ ತರಬೇತಿ ಕಿರಣ್- ಹಿಂದೂಸ್ತಾನ್ ಜೆಟ್ ಟ್ರೈನರ್ ಎನ್ನುವ ವಿಮಾನದಲ್ಲಿ ನಡೆಯುತ್ತದೆ. ಮುಂದೆ ಇದೇ ವಿಮಾನಗಳ ‘ ಸೂರ್ಯ ಕಿರಣ್’ ಎನ್ನುವ ಏರೋಬಾಟಿಕ್ ತಂಡ ತಮ್ಮ ಚಮತ್ಕಾರಿಕ ಕಲಾಬಾಜಿಯಿಂದ ಎಲ್ಲರ ಗಮನ ಸೆಳೆದಿದ್ದವು.

ನಮ್ಮ ತರಬೇತಿ ಪ್ರಾರಂಭವಾದದ್ದು ಎಜೆಕ್ಷನ್ ಸೀಟಿನ ಪರಿಚಯದಿಂದ. ಎಲ್ಲಾ ಜೆಟ್ ಯುದ್ಧ ವಿಮಾನಗಳಲ್ಲಿ ಪೈಲಟ್ಟುಗಳು ಕುಳಿತಿರುವ ಸೀಟಿನ ಕೆಳಗೆ ಎರಡು ಸಣ್ಣ ಬಾಂಬುಗಳನ್ನು ಇಟ್ಟಿರುತ್ತಾರೆ...ಹೆದರಿಕೋ ಬೇಡಿ, ಇವುಗಳನ್ನು ಬಹಳ ಭದ್ರವಾಗಿ ಸೀಟಿನ ಹಿಂದಿನ ಭಾಗಕ್ಕೆ ಕಟ್ಟಿರುವ ಉಕ್ಕಿನ ಕೊಳವೆಗಳ ಒಳಗೆ ತೂರಿಸಿ ಇಡಲಾಗಿರುತ್ತದೆ ಇವುಗಳನ್ನು ಸಿಡಿಸುವ ಅನಿವಾರ್ಯತೆ ಬಂದಾಗ ನಿಯಮಿತವಾಗಿ ತೂಬಿನ ಒಳಗೆ ಸ್ಪೋಟಿಸಿ ಪೈಲಟ್ ಸಮೇತ ಸೀಟನ್ನು ಅತಿ ವೇಗವಾಗಿ.. ಅಂದರೆ ಕೆಲವೇ ಸೆಕೆಂಡುಗಳಲ್ಲಿ ವಿಮಾನದಿಂದ ಹೊರಚಿಮ್ಮಿಸಿ ಬಿಡುತ್ತವೆ, ನಂತರ ಸೀಟಿಗೆ ಕಟ್ಟಿರುವ ಪ್ಯಾರಾಚೂಟು ಬಿಚ್ಚಿಕೊಳ್ಳುತ್ತದೆ ಆಮೇಲೆ ಪೈಲಟ್ಟು ಭೂಸ್ಪರ್ಶ ಮಾಡುತ್ತಾನೆ. ಎಲ್ಲಾ ಪ್ರಯತ್ನಗಳು ಮುಗಿದು ಇನ್ನೇನು ವಿಮಾನದಿಂದ ಹೊರಬರಲೇ ಬೇಕಾದ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಈ ಎಜೆಕ್ಷನ್ ಸೀಟಿನ ಪ್ರಯೋಗ. ಇಂಥಹ ತುರ್ತುಪರಿಸ್ಥಿತಿ ಯಾವಾಗ ಬೇಕಾದರೂ ಬಂದೆರಗಬಹುದು, ಅದಕ್ಕೇ ಮೊದಲಿಂದಲೇ ಅದಕ್ಕೆ ತಯಾರಿ.

ವಿಮಾನದಲ್ಲಿ ಬಂದೆರಗುವ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸುವ ಮತ್ತು ಪ್ರತಿಯೊಂದು ಹಂತದಲ್ಲೂ ಕ್ರಮಬದ್ಧವಾಗಿ ಅನುಸರಿಸಲೇ ಬೇಕಾದ checks and procedures ಅವನ್ನೆಲ್ಲಾ ಚಾಚೂ ತಪ್ಪದೆ ಬಾಯಿಪಾಟ ಮಾಡಿಕೊಳ್ಳಬೇಕು. ನಂತರ ಕಣ್ಣಿಗೆ ಬಟ್ಟೆಕಟ್ಟಿ ಅವರು ಹೇಳಿದ ಸ್ವಿಚ್, ಕಂಟ್ರೋಲ್ ಮತ್ತು ಹಲವಾರು ಉಪಕರಣಗಳನ್ನು ಕೂಡಲೇ ಮುಟ್ಟಿ ತೋರಿಸಬೇಕು. ವಿಮಾನದ ಇಂಚಿಂಚೂ ಪರಿಚಯವಿರಬೇಕು, ಅಂತಿಮವಾಗಿ ವಿಮಾನದ ತಾಂತ್ರಿಕ ಜ್ಞಾನದ ಒಂದು ಪರೀಕ್ಷೆಯಲ್ಲಿ ಪಾಸಾದ ನಂತರ ವಾಯುಯಾನದ ತರಬೇತಿ ಪ್ರಾರಂಭವಾಗುತ್ತದೆ.

ಜೆಟ್ ವಿಮಾನದ ಗತಿಯಂತೆ ತರಬೇತಿಯೂ ಬಹಳ ವೇಗವಾಗಿ ಸಾಗುತ್ತದೆ. ಕೆಲವೇ ಗಂಟೆಗಳಲ್ಲಿ ಇನ್ನೇನು ಈ ವಿಮಾನಕ್ಕೆ ಹೊಂದಿಕೊಂಡೆ ಎನ್ನುವ ಆತ್ಮವಿಶ್ವಾಸ ಬರುತ್ತಿದ್ದಂತೇ ಮೊದಲನೆಯ ಅಗ್ನಿಪರೀಕ್ಷೆ ಎದುರು ನಿಲ್ಲುತ್ತದೆ... ಅದೇ Solo check. ಸ್ಕಾಡ್ರನ್ ಲೀಡರ್ ಪಶುಪತಿ ನಮ್ಮ ಮುಖ್ಯ ಪರೀಕ್ಷಕರು. ನಾನು ಒಬ್ಬನೇ ಈ ವಿಮಾನ ಹಾರಿಸಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಬಲ್ಲೆ ಎನ್ನುವ ಸಾಮರ್ಥ್ಯವನ್ನು ಅವರಿಗೆ ಪ್ರದರ್ಶಿಸಬೇಕಿತ್ತು. ಹಿಂದಿನ ರಾತ್ರಿಯಿಡೀ ಖುರ್ಚಿಯ ಮೇಲೆ ಕುಳಿತು ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲೇ ಹಲವಾರು ಗಂಟೆಗಳ ವಿಮಾನ ಹಾರಾಟದ ಸಾಧನೆ ಮಾಡಿದ್ದೆ.

ಬೆಳಿಗ್ಗೆ ಗಗನಕ್ಕೇರಿದ ಮೊಟ್ಟ ಮೊದಲ ವಿಮಾನವೇ ನಮ್ಮದು. ತಂಪಾದ ವಾತಾವರಣ. ಪಶುಪತಿಯವರು ಒಂದೂ ಮಾತಾಡದೆ ನಾನು ಮಾಡುತ್ತಿರುವುದನ್ನು ಗಮನಿಸುತ್ತಿದ್ದರು. ಮೂರು ಸಲ ರೌಂಡು ಹಾಕಿ ಲ್ಯಾಂಡ್ ಮಾಡಿದೆ, ಎಲ್ಲಾ ಸರಿಯಾಗೇ ಇತ್ತು. ಅಷ್ಟೊತ್ತಿಗೆ ಬಿಸಿಲೇರಿ, ಗಾಳಿ ಜೋರಾಗಿ ಬೀಸತೊಡಗಿತು. ನಾಲ್ಕನೇ ಲ್ಯಾಂಡಿಗಿಗೆ ಬಂದಾಗ ಅಡ್ಡಲಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ವಿಮಾನ ರನ್ ವೇ ಯ ಮಧ್ಯಗೆರೆಯಿಂದ ಎಡಕ್ಕೆ ವಾಲಿತ್ತು. ಅಲ್ಲೀವರಗೂ ಶಾಂತಮೂರ್ತಿಯಂತೆ ಕುಳಿತಿದ್ದ ಪಶುಪತಿಯವರು ಹಿಂದಿ ಮಿಶ್ರಿತ ಇಂಗ್ಲೀಷಿನ ಬೈಗುಳದ ಸುರಿಮಳೆ ಸುರಿಸಿದರು, ನಾನು ತಮಿಳಿನವನು ಎಂದು ತಿಳಿದು ತಮಿಳಿನಲ್ಲೂ ಬೈಯಲು ಶುರುಮಾಡಿದರು. ಇನ್ನೇನು ನನ್ನ ಕಥೆ ಮುಗಿಯಿತು ಎನಿಸಿತು. ಅದೇ ಏರು ದನಿಯಲ್ಲಿ

'Are you confident in going solo?

ಮುಳುಗುತ್ತಿದ್ದವನಿಗೆ ಹುಲುಕಡ್ಡಿಯ ಆಧಾರ ಸಿಕ್ಕಂತೆ...ಇದ್ದ ಬದ್ದ ಶಕ್ತಿಯನ್ನು ಕೂಡಿಸಿ..

'ಎಸ್ಸ್...ಸರ್' ಎಂದೆ.

'ಸರಿ..ಮತ್ತೊಮ್ಮೆ ರನ್ ವೇ ಕಡೆ ಹೋಗಿ, ಟೈರ್ ಚೆಕ್ ಪಾಯಿಂಟ್ ಹತ್ತಿರ ನಿಲ್ಲಿಸು..'

ರೇಡಿಯೋ ಮುಖಾಂತರ

ಫ್ಲೈಟ್ ಕೆಡೆಟ್ ಸುದರ್ಶನ್ ಮೊದಲ solo ಫ್ಲೈಟ್' ಎಂದು ATC ಕಂಟ್ರೋಲಿಗೆ ತಿಳಿಸಿ ವಿಮಾನದಿಂದ ನಿರ್ಗಮಿಸಿದರು. ಒಂದು ಕಡೆ ಸಂತೋಷ ಮತ್ತೊಂದು ಕಡೆ ನನ್ನ ಬಗ್ಗೆ ನನಗೇ ಸಿಟ್ಟು..ಛೆ ವಿಮಾನವನ್ನು ಅಡ್ಡಗಾಳಿಗೆ ಹರಿಯಲು ಬಿಟ್ಟೆನಲ್ಲಾ ಎಂದು, ಒಂದೆರಡು ಸಲ ನನ್ನ ತಲೆಯ ಮೇಲಿನ ಹೆಲ್ಮೆಟ್ಟಿಗೆ ಬಡಿದುಕೊಂಡೆ. ಪಶುಪತಿಯವರು ನನ್ನ ಲ್ಯಾಂಡಿಂಗ್ ನೋಡಲೆಂದೇ ಅಲ್ಲಿ ನಿಂತಿದ್ದಾರೆಂದು ಗೊತ್ತಾಯಿತು. ಪಕ್ಕದಲ್ಲೇ ಹಾರುತ್ತಿದ್ದ ಪಟ್ಟಿ ಪಟ್ಟಿಯ ಗಾಳಿಚೀಲವನ್ನು ನೋಡಿ ಮತ್ತೊಮ್ಮೆ ಭೂಸ್ಪರ್ಶ ಸಮಯದಲ್ಲಿ ಸರಿಪಡಿಸ ಬೇಕಾದ ಅಂಶಗಳನ್ನು ಮನದಟ್ಟು ಮಾಡಿಕೊಂಡೆ.

ATC ಯಿಂದ ಆದೇಶ ಬಂದದ್ದೇ ಇಂಜಿನ್ನಿನ ಥ್ರೋಟಲನನ್ನು ಪೂರ್ತಿ ಮುಂದೆ ಮಾಡಿದ ತಕ್ಷಣ ವಿಮಾನ ರನ್ ವೇ ಮೇಲೆ ದೌಡಾಯಿಸಿತು. ಬಹಳ ಲೀಲಾಜಾಲವಾಗಿ ಗಗನಕ್ಕೇರಿತು. ಬಹುಶಃ ಎಂಬತ್ತು ಕೇಜಿಯ ಪಶುಪತಿಯವರು ಇಳಿದಿದ್ದರಿಂದ ವಿಮಾನ ಹಗುರಾಗಿದೆ ಎನಿಸಿ ಸಣ್ಣಗೆ ಒಂದು ಕಿರುನಗು ಸುಳಿದು ಹೋಯಿತು. ಈ ಸಲದ ಲ್ಯಾಂಡಿಗ್ ತುಂಬಾ ನಯಸ್ಸಾಗಿತ್ತು. ಪೈಲಟ್ಟುಗಳ ಭಾಷೆಯಲ್ಲಿ ಇದನ್ನು Kisser landing ಅನ್ನುತ್ತಾರೆ. ಇದನ್ನು ನೋಡಿದ ಪಶುಪತಿಯವರೂ ಸಂತೋಷಿರುತ್ತಾರೆ ಎಂದುಕೊಂಡು ವಿಮಾನದಿಂದ ಇಳಿದು ಅವರನ್ನು ಭೇಟಿಮಾಡಿದ ನಂತರ ಪುನಃ ತಮಿಳಿನಲ್ಲಿ ಬೈಯೋದೇ… ನನಗೆ ಯಾಕೆ ಇಷ್ಟೊಳ್ಳೇ ಲ್ಯಾಂಡಿಗ್ ತೋರಿಸಲಿಲ್ಲಾ ಅಂತಾ. ಅವರ ಹಾಸ್ಯ ಮುಗಿದ ನಂತರ ಕಂಗ್ರಾಚುಲೇಷನ್ಸ್ ಅಂತಾ ಜೋರಾಗಿ ಕೈಕುಲಕಿದರು. ಅಂತೂ ಮೊದಲನೇ ಹಂತ ಪಾರು ಮಾಡಿಕೊಂಡಂತಾಯಿತು. ಸ್ಕಾಡ್ರನ್ ಲೀಡರ್ ವಿಕಾಸ್ ಯಜುರ್ವೇದಿಯವರ ಮಾರ್ಗದರ್ಶನದಲ್ಲಿ ಏರೋಬಾಟಿಕ್, ನ್ಯಾವಿಗೇಷನ್, ಫಾರ್ಮೇಷನ್, ರಾತ್ರಿಯ ವಾಯುಯಾನದ ಹಂತಗಳನ್ನು ಒಂದೊಂದೇ ಯಶಸ್ವಿಯಾಗಿ ಮುಗಿಸಿ ಅಂತಿಮ ಪರೀಕ್ಷೆಯಲ್ಲೂ ಪಾಸಾದೆ.

ಆ ವರ್ಷ ಭಾರತೀಯ ವಾಯುಸೇನೆಯ ಸುವರ್ಣ ಮಹೋತ್ಸವದ ವರ್ಷ. 1932 ರ ಅಕ್ಟೋಬರ್ 8 ರಂದು ಕೇವಲ ನಾಲ್ಕು ವಿಮಾನಗಳು ಆರು ಪೈಲಟ್ಟುಗಳು ಮತ್ತು ಹನ್ನೊಂದು ತಾಂತ್ರಿಕ ಸಿಬ್ಬಂದಿಯಿಂದ ಪ್ರಾರಂಭವಾದ ಭಾರತೀಯ ವಾಯುಸೇನೆ ಈಗ ಪ್ರಪಂಚದ ನಾಲ್ಕನೇ ಅತಿದೊಡ್ಡ ವಾಯುಸೇನೆಯಾಗಿ ಬೆಳೆದಿರುವುದು ಹೆಮ್ಮೆಯ ವಿಷಯ. ವರ್ಷವಿಡೀ ವಿವಿಧ ರೀತಿಯ ಸಂಭ್ರಮಗಳ ಸರಮಾಲೆಗಳನ್ನೇ ಹೆಣೆದಿದ್ದರು. ನಮ್ಮ ದೀಕ್ಷಾಂತ ಸಮಾರೋಹಕ್ಕೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಬರಲಿದ್ದರು, ಹಾಗಾಗಿ ಅಕ್ಯಾಡಮಿಯಲ್ಲಿ ಸಡಗರದ ಸಿದ್ಧತೆಗಳು ನಡೆಯಲಾರಂಭಿಸಿದವು. ಸಮಾರಂಭ ಹತ್ತಿರವಾದಂತೆ ನಮ್ಮ ಚಟುವಟಿಕೆಗಳು ಬಿರಿಸಿನಿಂದ ನಡೆಯತೊಡಗಿದವು. ದಿನಕ್ಕೆ ಎರಡು ಸಲ ಪರೇಡಿನ ತಾಲೀಮು, ತಾಂತ್ರಿಕ ಪರೀಕ್ಷೆಗಳು, ಯುದ್ಧ ವಿಮಾನಗಳ ಹಾರಾಟಕ್ಕೆ ವೈದ್ಯಕೀಯ ಪರೀಕ್ಷೆ, ರಾತ್ರಿ ಭೋಜನ ಕೂಟದ ಪೂರ್ವಾಭ್ಯಾಸ! ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿತ್ತು. ಇವೆಲ್ಲದರ ಮಧ್ಯೆ ಗಂಗೂರಿನಿಂದ ಹೈದರಾಬಾದಿಗೆ ನಮ್ಮ ತಂದೆತಾಯಿಗಳು ಬಂದದ್ದೇ ತಿಳಿಯಲಿಲ್ಲ. ಒಂದು ಮಧ್ಯಾಹ್ನ ಓಡೋಡುತ್ತಲೇ ಅವಸರವಾಗಿ ಊಟಕ್ಕೆ ಬಂದು ಟೇಬಲ್ಲಿನಲ್ಲಿ ಕೂತಾಗ ಎದುರಿಗೇ ನಮ್ಮ ತಂದೆತಾಯಿ ಕುಳಿತು ಮಜವಾಗಿ ಊಟಮಾಡುತ್ತಿದ್ದರು! ಅವರ ಪ್ರಯಾಣದ ವ್ಯವಸ್ಥೆ, ಊಟ ವಸತಿ ಎಲ್ಲವನ್ನೂ ಅಕ್ಯಾಡಮಿಯವರೇ ಎಷ್ಟು ಅಚ್ಚುಕಟ್ಟಾಗಿ ಮಾಡಿದ್ದರೆಂದರೆ ನಮಗೆ ಗೊತ್ತೇ ಆಗಲಿಲ್ಲ. ಒಂದಿಷ್ಟು ಹೊತ್ತು ಅವರನ್ನು ಮಾತಾಡಿಸಿ ಮತ್ತೆ ಮುಂದಿನ ಚಟುವಟಿಕೆಗಳಿಗೆ ದೌಡಾಯಿಸಿದೆ.

ಅಂತೂ ಹಲವಾರು ವರ್ಷಗಳ ಕನಸು ನನಸಾಗುವ ದಿನ ಬಂದೇಬಿಟ್ಟಿತು. ಸಮಾರೋಹದ ಮುಖ್ಯ ಅತಿಥಿಗಳಿಂದ ಭುಜದ ಮೇಲೆ ಪೈಲಟ್ ಆಫೀಸರ್ ಪಟ್ಟಿ ಮತ್ತು ಎದೆಯ ಮೇಲೆ ಪೈಲಟ್ ವಿಂಗ್ ಧರಿಸಿ ಹೆಮ್ಮೆಯಿಂದ ನಿಧಾನಗತಿಯಲ್ಲಿ ಜ್ಯೂನಿಯರ್ ಕೆಡೆಟ್ಟುಗಳ ಸಲ್ಯೂಟ್ ಸ್ವೀಕಾರಿಸುತ್ತಾ ಪರೇಡ್ ಚೌಕದಿಂದ ಹೊರಬಂದು ಬೆರಗುಗಣ್ಣಿನಿಂದ ಇದನ್ನೆಲ್ಲಾ ನೋಡುತ್ತಿದ್ದ ನಮ್ಮ ತಂದೆ ತಾಯಿಯ ಬಳಿಬಂದೆ. ಅವರುಗಳಿಗೆ ನಮ್ಮ ಗುರುಗಳ, ಸಿಬ್ಬಂದಿಯ, ವಿಮಾನದ ಮತ್ತು ತಾಂತ್ರಿಕ ಸಿಬ್ಬಂದಿಯ ಪರಿಚಯ ನಂತರ ಎಲ್ಲರೊಂದಿಗೆ ಲಘುಉಪಹಾರದ ಸಮಾರಾಧನೆಯನ್ನು ಮುಗಿಸಿಕೊಂಡು ಬರುವಷ್ಟರಲ್ಲಿ ಕಾನ್ಫರೆನ್ಸ್ ಕಕ್ಷೆಗೆ ಬರಲು ಇನ್ನೊಂದು ಆದೇಶ ಬಂತು. ಅಲ್ಲಿ ನೀಟಾಗಿ ಜೋಡಿಸಿಟ್ಟ ಲಕೋಟಿಗಳಲ್ಲಿ ನಮ್ಮ ಮೊದಲ ಸಂಬಳ, ಮುಂಗಡವಾಗಿ ಕೊಟ್ಟಿದ್ದರು! ಅದನ್ನು ಹಾಗೇ ನಮ್ಮ ತಾಯಿಯವರಿಗೆ ಒಪ್ಪಿಸಿ ಕೃತಾರ್ಥನಾದೆ.

ವಾಯುಸೇನೆಯ ಮತ್ತೊಂದು ಹಂತದ ಯಾನ ಪ್ರಾರಂಭವಾಯಿತು....

 

MORE FEATURES

ಕನಸುಗಳ ಕಣಿವೆಯಲ್ಲಿ ಭ್ರಮೆಗಳನ್ನು ಮಾರಿದವಳು..

12-12-2025 ಬೆಂಗಳೂರು

"ಕದಡಿದ ಕೊಳವು ತಿಳಿಯಾಗಿರಲು (ಬಿಡಿ ಬರಹ, ಪ್ರಬಂಧ) ಓದಿದೆ. ಇಲ್ಲಿನ ಹೆಚ್ಚಿನ ಲೇಖನಗಳನ್ನು ನಾನು ಈ ಮೊದಲೇ ಓದಿದ್...

ಎರಡು ರಟ್ಟುಗಳ ನಡುವೆ ಏನಿದೆ, ಏನಿಲ್ಲ!

12-12-2025 ಬೆಂಗಳೂರು

"ಪುಸ್ತಕ, ಓದು ಮತ್ತು ಬರವಣಿಗೆ ಒಂದು ವರ್ಗದ ಪ್ಯಾಶನ್. ತನ್ಮಯತೆಯಿಂದ ಓದುತ್ತಾ ಕೂತ ವ್ಯಕ್ತಿ ನಮಗೆ ಯಾವತ್ತೂ ಒಂದ...

ಕಥನ ಕಾರಣ ವಿನೂತನ

11-12-2025 ಬೆಂಗಳೂರು

"ಈ ನಡುವೆ ದಶಕಗಳ ಹಿಂದೆಯೇ ಆಗೀಗ ಬರೆದಿಟ್ಟಿದ್ದ ಚೀಟಿಗಳು ಕಣ್ಣಿಗೆ ಬಿದ್ದಾಗೆಲ್ಲಾ 'ನಮ್ಮನ್ನು ಹೀಗೇ ಬಿಟ್ಟರ...