ಪುರುಷೋತ್ತಮ ಬಿಳಿಮಲೆ ಅವರ 'ಕಾಗೆ ಮುಟ್ಟಿದ ನೀರು' ಪುಸ್ತಕ ರೋಚಕವಾಗುವಂತೆ ಉಪ್ಪು ಖಾರ ಸೇರಿಸಿ ಬರೆದ ಕಥನವಲ್ಲ.ಈ ಆತ್ಮಕಥಾನಕದ ಚದುರಿ ಬಿದ್ದ ತುಣುಕುಗಳ ಪ್ರತಿ ಕಣದಲ್ಲೂ ಕಡು ಪ್ರಾಮಾಣಿಕತೆಯಿದೆ, ತನ್ನ ಪ್ರತಿಭೆಗೆ ಬೀಗದ humbleness ಇದೆ, ಎಲ್ಲವನ್ನೂ ಸಮಾಧಾನದಿಂದ ಸ್ವೀಕರಿಸುವ ಮಾಗಿದ ಮನಸ್ಸಿದೆ. ವಿದ್ಯೆ ಹಣ ಅಂತಸ್ತು ಏನೂ ಇಲ್ಲದ ಹಿನ್ನೆಲೆಯ ಹುಡುಗನೊಬ್ಬ ತನ್ನೊಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಛಲವನ್ನ ಮಹಾಪ್ರವಾಹವಾಗಿಸಿಕೊಂಡು ಆತ್ಮವಿಶ್ವಾಸದ ಗಟ್ಟಿ ದೋಣಿಯನ್ನೇರಿ ಯಶಸ್ಸಿನ ಸಾಗರ ತಲುಪಿದ ಕಥೆ ಇದು. ನಿಮ್ಮ ಬಗ್ಗೆ ಮೊದಲೇ ಇದ್ದ ಗೌರವ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ 'ಕಾಗೆ ಮುಟ್ಟಿದ ನೀರು'. ನಿಮ್ಮ ಮಾತಿನಂತೆ ಬರವಣಿಗೆಗೂ ಅಪಾರ ಶಕ್ತಿ ಇದೆಯೆಂಬುದನ್ನು ಈ ಪುಸ್ತಕದ ಮೂಲಕ ನೀವು ತೋರಿಸಿಕೊಟ್ಟಿದ್ದೀರಿ ಎಂಬುದಾಗಿ ಲೇಖಕಿ ದೀಪಾ ಹಿರೇಗುತ್ತಿ ಹೇಳಿದ್ದಾರೆ..ಇದರ ಇನ್ನಷ್ಟು ಮಾಹಿತಿ ನಿಮ್ಮ ಓದಿದಾಗಿ.
ಪ್ರೀತಿಯ ಬಿಳಿಮಲೆ ಸರ್,
'ಕಾಗೆ ಮುಟ್ಟಿದ ನೀರು' ಓದಲು ಮನೆಯಲ್ಲಿ ಒಬ್ಬ ಪ್ರತಿಸ್ಪರ್ಧಿ ಇದ್ದ ಕಾರಣ ಮತ್ತು ಮನೆಯ ವಿಳಾಸವಿದ್ದರೂ ಕೊರಿಯರ್ ನವರು ಅವರ ಕಚೇರಿಗೇ ಹೋಗಿ ಕೊರಿಯರ್ ಕೊಡುವುದರಿಂದ ಪುಸ್ತಕ ನನ್ನ ಕೈ ಸೇರುವುದು ಸ್ವಲ್ಪ ತಡವಾಯಿತು. ಮೊನ್ನೆ ಓದಬೇಕು ಅಂದುಕೊಂಡು ಪುಸ್ತಕ ತೆಗೆದಿಟ್ಟರೆ ಅದು ನಮ್ಮ ಮನೆಯ ಪುಸ್ತಕದ ರಾಶಿಯಲ್ಲಿ ಎಲ್ಲೋ ಕಳೆದೇ ಹೋಯಿತು. ಆ ಸಮಯದಲ್ಲಿ ನಾನು ಒಂದಿಷ್ಟು ಮಲಯಾಳಂ ಸಿನಿಮಾಗಳನ್ನು ನೋಡುತ್ತಿದ್ದೆ. ಇಡುಕ್ಕಿ ಮತ್ತು ಅಂತಹ ಜಾಗಗಳ ಮೋಹಕತೆಗೆ, ಮಲಯಾಳಂ ನಟರ ಅಭಿನಯಕ್ಕೆ, ಸೂಕ್ಷ್ಮ ವಿಷಯಗಳನ್ನು ಸಿನಿಮಾ ಮಾಡಿ ಒಂದು ಕಲಾಕೃತಿಯಂತೆ ಕಟ್ಟಿಕೊಡುವ ನಿರ್ದೇಶಕರಿಗೆ ಮನಸೋತಿದ್ದೆ. ಪುಸ್ತಕ ಎಷ್ಟು ಹುಡುಕಿದರೂ ಸಿಗದ ಕಾರಣ ಬಹಳ ದಿನಗಳಿಂದ ನೋಡಬೇಕೆಂದು ಕೊಂಡಿದ್ದ ನೆಟ್ಫ್ಲಿಕ್ಸ್ ನ Money Heist ವೆಬ್ ಸರಣಿ ನೋಡಲು ಶುರುಮಾಡಿದೆ. ಸಮಯವನ್ನು ಕದ್ದು ಸೇರುವ ಪ್ರೇಮಿಗಳಿಗಿಂತ ಚಾಲಾಕಿನಿಂದ ಕಾಲೇಜು, ಮಕ್ಕಳು, ಮನೆ ಬೇಡುವ ಸಮಯವನ್ನು ದರೋಡೆ ಮಾಡಿ ಎರಡು ಸರಣಿಯ 22 ಎಪಿಸೋಡುಗಳನ್ನೂ ನೋಡಿಬಿಟ್ಟೆ! ಹಗಲು-ರಾತ್ರಿಯೋ ರಾತ್ರಿ-ಹಗಲೋ ಏನೂ ಗೊತ್ತಾಗುತ್ತಿರಲಿಲ್ಲ. ಒಂದಾದಮೇಲೊಂದರಂತೆ ಮುಂದಿನ ಎಪಿಸೋಡು ನೋಡುತ್ತಾ ಅಂತೂ ಮೂರನೇ ಸರಣಿಯ ಮೊದಲ ಎಪಿಸೋಡ್ ನೋಡಿದ ಮೇಲೆ ಕಂಪ್ಯೂಟರ್ ನಡಿಯಲ್ಲಿ ಬ್ಯಾಗಿನಲ್ಲಿದ್ದ 'ಕಾಗೆ ಮುಟ್ಟಿದ ನೀರು' ಸಿಕ್ಕಿಬಿಟ್ಟಿತು!!
ನನ್ನ ಅಳಿದುಳಿದ ವಿಲ್ ಪವರ್ ಒಗ್ಗೂಡಿಸಿ ವೆಬ್ ಸಿರೀಸ್ ನೋಡುವುದನ್ನು ನಿಲ್ಲಿಸಿದೆ. ಅಷ್ಟರಲ್ಲಿ ನಡುರಾತ್ರಿ ದಾಟಿತ್ತು. ಬೆಳಿಗ್ಗೆ ಎದ್ದು ಹಬ್ಬಕ್ಕೆ ಊರಿಗೆ ಹೋಗಬೇಕಾಯಿತು. ಮಧ್ಯಾಹ್ನ ಎಲ್ಲರೂ ಹಬ್ಬದ ಊಟ ಮಾಡಿ ಮಲಗಿದ್ದರೆ ನಾನು 'ಕಾಗೆ ಮುಟ್ಟಿದ ನೀರು' ಹಿಡಿದು ಕುಳಿತೆ.
ಈ ಪುಸ್ತಕಗಳು, ಸಿನಿಮಾಗಳು ತೀರಾ ಇತ್ತೀಚಿಗೆ ವೆಬ್ ಸರಣಿಗಳು ಇವೆಲ್ಲಾ ಇತರರ ಬದುಕನ್ನು ಕೆಲ ಕಾಲದ ಮಟ್ಟಿಗಾದರೂ ನಾವು ಬದುಕುವ ಅನುಭವ ನೀಡುವ ವಿಶಿಷ್ಟ ರೀತಿಯ ವರಗಳು ಅಂತ ನಾನು ಬಲವಾಗಿ ನಂಬಿದ್ದೇನೆ. ಮಲಯಾಳಂ ಚಿತ್ರಗಳನ್ನು ನೋಡಿ ಇಡುಕ್ಕಿಯಂತಹ ಜಾಗಕ್ಕೆ ಮೋಹಗೊಂಡು ಮುಂದಿನ ಜನ್ಮದಲ್ಲಿ ರೈತ ಮಹಿಳೆಯೇ ಆಗಬೇಕೆಂದು ಕನಸು ಕಂಡು, ಸ್ಪೇನಿನ ರಾಯಲ್ ಮಿಂಟ್ ಒಳಗೆ ದರೋಡೆಕೋರರು ಮತ್ತು ಅಪಹೃತರ ನಡುವೆ ಆತಂಕಗೊಳ್ಳುತ್ತಾ, ದರೋಡೆಯ ಮಾಸ್ಟರ್ ಮೈಂಡ್ ಪ್ರೊಫೆಸರನ ತಲೆ ಎಂಥದ್ದು ಎಂದು ಯೋಚಿಸುತ್ತಾ, ಅವನ ಮತ್ತು ಪೊಲೀಸ್ ಅಧಿಕಾರಿ ರಾಕೆಲ್ ಳ ಪ್ರೇಮ ಫಲಿಸಿದ್ದಕ್ಕೆ ಗುಟ್ಟಾಗಿ ಖುಷಿ ಪಡುತ್ತಾ, ಇತ್ತ ಅಮಾವಾಸ್ಯೆಯಂದು ಬಡತನವನ್ನು ಹಂಚಿಕೊಳ್ಳಲು ಹುಟ್ಟಿದ ತಮ್ಮ ಮೂರನೇ ಗಂಡುಮಗುವನ್ನು ಅರೆಮನಸ್ಸಿನಿಂದಲೆ ಬರಮಾಡಿಕೊಂಡ ದಕ್ಷಿಣ ಕನ್ನಡದ ಕುಗ್ರಾಮದ ದಂಪತಿಗಳ ಗುಡಿಸಲೊಳಗೆ ಹಗೂರಕ್ಕೆ ಪ್ರವೇಶಿಸಿ ಬಿಟ್ಟಿದ್ದೆ.
ಕರ್ರಗೆ ಕುಳ್ಳಗೆ ಎಲ್ಲರೂ ನಿರ್ಲಕ್ಷಿಸುವಂತೆ ಇದ್ದ ವಾಮನನಂತಿದ್ದ ಮಗು ಬೆಳೆದು ಪ್ರತಿಷ್ಠಿತ ಹುದ್ದೆಗಳನ್ನು ನಿರ್ವಹಿಸುತ್ತಾ ದೇಶ-ವಿದೇಶಗಳಲ್ಲಿ ಉಪನ್ಯಾಸ ನೀಡುತ್ತಾ ತ್ರಿವಿಕ್ರಮನಾಗಿ ಬೆಳೆದ ಅಪೂರ್ವ ಪಯಣದ ಅನುಭವವನ್ನು ನಾನೂ ಪಡೆದೆ.
ವೆಬ್ ಸಿರೀಸ್ ಗಳ ಒಂದು ಗುಣ (ಕೆಟ್ಟ?) ಎಂದರೆ ನೋಡಲು ಶುರು ಮಾಡಿದರೆ ಯಾವ ಕಾರಣಕ್ಕೂ ಅರ್ಧಕ್ಕೆ ನಿಲ್ಲಿಸಲು ಆಗುವುದಿಲ್ಲ. ಯಾಕೆಂದರೆ ಪ್ರತಿ ಎಪಿಸೋಡಿನ ಕೊನೆಯೂ ರೋಚಕವಾಗಿರುತ್ತದೆ. ಅಲ್ಲಿ ಉದ್ದೇಶಪೂರ್ವಕವಾಗಿ ಹಾಗೆ ಮಾಡಿರುತ್ತಾರೆ. ಇಲ್ಲಿ 'ಕಾಗೆ ಮುಟ್ಟಿದ ನೀರು' ಎತ್ತಿಕೊಂಡ ನಾನು, ಪುಸ್ತಕದ ಕೊನೆಯಲ್ಲಿ ನೀವು ದೆಹಲಿಯ ಏಮ್ಸ್ ನ ವ್ಯಕ್ತಿಗೆ 'ಇಷ್ಟೆಲ್ಲದರ ನಡುವೆಯೂ ಹೇಗೆ ಬದುಕಿದ' ಎಂದು ಬರೆದುಕೊಳ್ಳಲು ತಮಾಷೆ ಮಾಡುವಂತೆ ಪುಸ್ತಕ ಮುಚ್ಚಿ ಯೋಚಿಸತೊಡಗಿದೆ 'ನೆತ್ತಿಯಲ್ಲಿದ್ದ ಸೂರ್ಯ ಮುಳುಗುವ ಒಳಗಾಗಿ ಅಲ್ಲಾಡದೆ ಕುಳಿತು ನಾನು ಹೇಗೆ ಪುಸ್ತಕ ಮುಗಿಸಿದೆ?'
ಏಕೆಂದರೆ ಈ ಪುಸ್ತಕ ರೋಚಕವಾಗುವಂತೆ ಉಪ್ಪು ಖಾರ ಸೇರಿಸಿ ಬರೆದ ಕಥನವಲ್ಲ.ಈ ಆತ್ಮಕಥಾನಕದ ಚದುರಿ ಬಿದ್ದ ತುಣುಕುಗಳ ಪ್ರತಿ ಕಣದಲ್ಲೂ ಕಡು ಪ್ರಾಮಾಣಿಕತೆಯಿದೆ, ತನ್ನ ಪ್ರತಿಭೆಗೆ ಬೀಗದ humbleness ಇದೆ, ಎಲ್ಲವನ್ನೂ ಸಮಾಧಾನದಿಂದ ಸ್ವೀಕರಿಸುವ ಮಾಗಿದ ಮನಸ್ಸಿದೆ. ವಿದ್ಯೆ ಹಣ ಅಂತಸ್ತು ಏನೂ ಇಲ್ಲದ ಹಿನ್ನೆಲೆಯ ಹುಡುಗನೊಬ್ಬ ತನ್ನೊಳಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಛಲವನ್ನ ಮಹಾಪ್ರವಾಹವಾಗಿಸಿಕೊಂಡು ಆತ್ಮವಿಶ್ವಾಸದ ಗಟ್ಟಿ ದೋಣಿಯನ್ನೇರಿ ಯಶಸ್ಸಿನ ಸಾಗರ ತಲುಪಿದ ಕಥೆ ಇದು. ನಿಮ್ಮ ಬಗ್ಗೆ ಮೊದಲೇ ಇದ್ದ ಗೌರವ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ 'ಕಾಗೆ ಮುಟ್ಟಿದ ನೀರು'. ನಿಮ್ಮ ಮಾತಿನಂತೆ ಬರವಣಿಗೆಗೂ ಅಪಾರ ಶಕ್ತಿ ಇದೆಯೆಂಬುದನ್ನು ಈ ಪುಸ್ತಕದ ಮೂಲಕ ನೀವು ತೋರಿಸಿಕೊಟ್ಟಿದ್ದೀರಿ.
ಕನ್ನಡ ಕಟ್ಟುವ ಕೆಲಸ ಬಿಟ್ಟು ಬರವಣಿಗೆಯ ಹಾದಿ ಹಿಡಿದಿದ್ದರೆ ಇಷ್ಟರೊಳಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೇನೂ ಮೋಸ ಇರಲಿಲ್ಲ. ಆದರೂ ಪರವಾಗಿಲ್ಲ, ನೀವು ಮಾಡಿದ ಕೆಲಸಗಳು ಎಲ್ಲರ ಹತ್ತಿರ ಆಗುವಂಥವೂ ಆಗಿರಲಿಲ್ಲ. ತಡವಾದರೂ ಓಕೆ ಸರ್ ಒಳ್ಳೆಯ ಕೃತಿಯನ್ನು ನೀಡಿರುವಿರಿ. ಬಹಳ ಜನ ಕೃತಿಯ ಬಗ್ಗೆ ಬರೆದಿದ್ದಾರೆ. ವಿಮರ್ಶಕಿಯಲ್ಲದ ನಾನು ಹಾಗೇನೂ ಬರೆಯಲಾರೆ. ಆದರೆ ಓದಿಯೇ ಅನುಭವಿಸಬೇಕಾದ ಒಂದು ಆತ್ಮಕಥನವನ್ನು ನೀಡಿದ್ದಕ್ಕೆ ನಿಮಗೆ ಒಂದು ಬೆಚ್ಚನೆಯ hug. ನಿಮ್ಮ ಮಡದಿಗೆ ಒಂದು hug ಜಾಸ್ತಿ. ಏಕೆಂದರೆ ಈ ಪುಸ್ತಕ ಬರೆಯಲು ನಿಮಗೆ ಸಾಧ್ಯವಾಗಿದ್ದು ಅವರಿಂದಲೇ.
ಅರೆ, ಪುಸ್ತಕದ ಬಗ್ಗೆ ಬರೆಯುವ ಬದಲು ವೆಬ್ ಸಿರೀಸ್, ಸಿನಿಮಾ ಅಂತ ಏನೇನೋ ಹಲುಬಿದ್ದಾಳೆ ಎಂದುಕೊಳ್ಳಬೇಡಿ. ವಾರಕ್ಕೂ ಕಡಿಮೆ ಅವಧಿಯಲ್ಲಿ ಇಡುಕ್ಕಿಯಿಂದ ಸ್ಪೇನಿಗೆ ಹೋಗಿ ಎರಡು ದಿನ ನಿದ್ದೆ ಬಿಟ್ಟು ದರೋಡೆಕೋರರ ನಡುವೆ ಇದ್ದು, ಅಲ್ಲಿಂದ ಬಿಳಿಮಲೆಗೆ ಬಂದು ನಿಮ್ಮ ಜೊತೆ ಕಾಡು, ಹೊಳೆ ದಾಟಿ ಶಾಲೆಗೆ ಹೋಗಿ, ನೀವು ಹೊಳೆ ದಾಟಲಾರದೆ ಮರದ ಪೊಟರೆಯಲ್ಲಿ ಕೂತು ಅಳುವಾಗ ನಾವೂ ಅತ್ತು, ವಿಮಾನದಲ್ಲಿ ದೆಹಲಿ ಅಲ್ಲಿ ಇಲ್ಲಿ ಹೋಗುವಾಗ ಹೀಗಾಗಿದೆ ಮಾರಾಯ್ರೆ. ತಪ್ಪು ತಿಳಿಯಬೇಡಿ.
ಮುಂದಿನ ವರ್ಷದ ಪ್ರಶಸ್ತಿಗಳ ಪಟ್ಟಿಯಲ್ಲಿ ಬಹಳ ಕಡೆ 'ಕಾಗೆ ಮುಟ್ಟಿದ ನೀರು' ಮಿಂಚಲಿಕ್ಕಿದೆ. ಆದರೆ ನಮ್ಮ ಹಳ್ಳಿಗಾಡಿನ ಹುಡುಗ ಹುಡುಗಿಯರು, ಸಕಲ ಸೌಲಭ್ಯಗಳಿದ್ದರೂ ಬದುಕಿನ ಸವಾಲುಗಳನ್ನು ಎದುರಿಸುವಲ್ಲಿ ಸೋಲುವ ಪೇಟೆಯ ಮಕ್ಕಳು ಈ ಪುಸ್ತಕ ಓದಿ ಆತ್ಮವಿಶ್ವಾಸ ಬೆಳೆಸಿಕೊಂಡು ಒಂದು ದಡ ಮುಟ್ಟಿದರೆ ಬಹುಶಃ ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರಿಲ್ಲ. ಮತ್ತೊಮ್ಮೆ ಧನ್ಯವಾದಗಳು ಸರ್.
ಪ್ರೀತಿಯಿಂದ
ದೀಪಾ ಹಿರೇಗುತ್ತಿ
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.