ಅಭಿರುಚಿ ಗಣೇಶ್ ಅವರ ಸಾಹಿತ್ಯ ಪ್ರೀತಿಯಿಂದಾಗಿ ಹುಟ್ಟಿಕೊಂಡ ಪ್ರಕಾಶನ ಸಂಸ್ಥೆ ಅಭಿರುಚಿ ಪ್ರಕಾಶನ. 1993ರಲ್ಲಿ ಪುಸ್ತಕ ವ್ಯಾಪಾರದೊಂದಿಗೆ ಆರಂಭಿಸಿ, ಎರಡು ವರ್ಷಗಳ ಬಳಿಕ ಮೊದಲ ಪುಸ್ತಕವನ್ನು ಪ್ರಕಟಿಸಿ 1998ರರಿಂದ ಪೂರ್ಣ ಪ್ರಮಾಣದಲ್ಲಿ ಪ್ರಕಾಶನದಲ್ಲಿ ತೊಡಗಿಸಿಕೊಂಡರು. ಸೃಜನಶೀಲ, ವಿಮರ್ಶೆ ಸೇರಿದಂತೆ ಸಾಹಿತ್ಯ ಮತ್ತು ವೈಚಾರಿಕ ಕೃತಿಗಳನ್ನು ಪ್ರಕಟಿಸುತ್ತ ಬಂದಿರುವ ಅಭಿರುಚಿ, ಈವರೆಗೆ 400ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವ ಮೂಲಕ ಕನ್ನಡ ಪುಸ್ತಕ ಲೋಕಕ್ಕೆ ಮೌಲಿಕ ಕೊಡುಗೆ ಕೊಟ್ಟಿದೆ.
ದೇವನೂರ ಮಹಾದೇವ ಅವರ ’ಆರ್ ಎಸ್ ಎಸ್ - ಆಳ ಅಗಲ’ ಅಭಿರುಚಿಯ ಇತ್ತೀಚಿನ ಪ್ರಕಟಣೆಯಾಗಿದ್ದು, ಇತರ ಪ್ರಕಾಶಕರೂ ಅದನ್ನು ಪ್ರಕಟಿಸಲು ಅನುವು ಮಾಡಿಕೊಡುವ ಮೂಲಕ ಹೊಸದೊಂದು ಸಂಪ್ರದಾಯಕ್ಕೂ ನಾಂದಿ ಹಾಡಿದೆ. ಚದುರಂಗರ ಸಮಗ್ರ ಕೃತಿಗಳನ್ನು ಮೊದಲು ಪ್ರಕಟಿಸಿದ್ದು ಕೂಡ ಅಭಿರುಚಿಯೇ. ಇತ್ತೀಚೆಗಷ್ಟೇ ಬರಗೂರು ರಾಮಚಂದ್ರ ಅವರ ಸಮಗ್ರ ಬರಹಗಳನ್ನು 5250 ಪುಟಗಳಲ್ಲಿ 14 ಸಂಪುಟಗಳಲ್ಲಿ ಏಕಕಾಲಕ್ಕೆ ಹೊರತಂದಿದೆ. ದೇವನೂರ, ಕುಂವೀ, ಬಾನು ಮುಷ್ತಾಕ್, ರಾಜೇಂದ್ರ ಚೆನ್ನಿ, ರೂಪಾ ಹಾಸನ, ಡಿಎಸ್ ನಾಗಭೂಷಣ, ಎಂ.ಡಿ.ನಂಜುಂಡಸ್ವಾಮಿ, ರಾಜೀವ್ ತಾರಾನಾಥ್, ಕೃಷ್ಣಮೂರ್ತಿ ಹನೂರು ಮೊದಲಾದವರ ಕೃತಿಗಳನ್ನು ಪ್ರಕಟಿಸಿರುವ ಹೆಗ್ಗಳಿಕೆ ಅಭಿರುಚಿ ಪ್ರಕಾಶನದ್ದು.
ಅಭಿರುಚಿ ಪ್ರಕಾಶನದ ಪುಸ್ತಕಗಳಿಗೆ 2007, 2018 ಮತ್ತು 2019 ಹೀಗೆ ಮೂರು ಬಾರಿ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ ಬಂದಿದೆ. ಇವರು ಪ್ರಕಟಿಸಿರುವ ಕೃತಿಯ ಮುಖಪುಟ ಕಲಾವಿದರಿಗೂ ಬಹುಮಾನ ಲಭಿಸಿದೆ. 2009ರಿಂದ 2011ರವರೆಗೆ ’ತಿಂಗಳು’ ಎಂಬ ಸಾಹಿತ್ಯ ಮಾಸಿಕವನ್ನೂ ಪ್ರಕಟಿಸಿದ ಹೆಗ್ಗಳಿಕೆ ಅಭಿರುಚಿ ಪ್ರಕಾಶನದ್ದು.
©2025 Book Brahma Private Limited.