ಇತಿಹಾಸದ ಅರಿವಿದ್ದರೆ ಮಾತ್ರ ಇತಿಹಾಸ ಬರೆಯಬಹುದು: ಡಿ.ಎಸ್ ವೀರಯ್ಯ

Date: 08-01-2023

Location: ಹಾವೇರಿ


ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇಯ ದಿನದ ಒಂಭತ್ತನೇ ಗೋಷ್ಠಿಯು ಕನಕ ಶರೀಫ-ಸರ್ವಜ್ಞ ಪ್ರದಾನ ವೇದಿಕೆಯಲ್ಲಿ ಮಾಜಿ ಶಾಸಕ ಡಿ.ಎಸ್. ವೀರಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗೋಷ್ಟಿಯು ‘ದಮನಿತ ಲೋಕದ ಸಬಲೀಕರಣ’ ವಿಚಾರದ ಕುರಿತು ನಡೆಯಿತು. ಕನ್ನಡ ಸಾಹಿತ್ಯದಲ್ಲಿ ದಲಿತರ ಸಾಹಿತ್ಯ, ಶೋಷಿತ ವರ್ಗಗಳ ಸಬಲೀಕರಣ ಹಾಗೂ ಆರೋಗ್ಯಯುತ ಸಮಾಜದ ಪರಿಕಲ್ಪನೆ ವಿಚಾರಗಳೇ ಮುಖ್ಯ ಕೇಂದ್ರಬಿಂದುಗಳಾಗಿದ್ದವು.

ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಬೇರು: "ಡಿ.ಎಸ್ ವೀರಯ್ಯ ಅಧ್ಯಕ್ಷೀಯ ನುಡಿಗಳನ್ನಾಡಿ, “ಕನ್ನಡ ಸಾಹಿತ್ಯ ಆಲದಮರವಾದರೆ ದಲಿತ ಸಾಹಿತ್ಯ ಅದರ ಬೇರುಗಳು. ದಲಿತರು ಕನ್ನಡ ನಾಡಿನ ಸಾಂಸ್ಕೃತಿಕ ಸಾಹಿತ್ಯದ ವಾರಿಸುದಾರರು. ಇನ್ನು ಸಮಾಜವು ಜಾತಿ ರೋಗದಿಂದ ವಿಮುಕ್ತವಾಗಿ ಆರೋಗ್ಯಯುತವಾಗಿ ಬದಲಾಗಬೇಕಿದೆ. ಅದಕ್ಕಾಗಿ ಬದಲಾವಣೆ ಅಗತ್ಯ. ಬದಲಾವಣೆಯನ್ನು ಇತಿಹಾಸವನ್ನು ಬರೆಯುದರ ಮೂಲಕ ಬದಲಿಸಬಹುದು. ಆದರೆ ಇತಿಹಾಸದ ಅರಿವಿದ್ದರೆ ಮಾತ್ರ ಇತಿಹಾಸ ಬರೆಯಬಹುದು. ಇತಿಹಾಸ ಬರೆಯುವವ ಯಾವ ರೀತಿಯ ಇತಿಹಾಸವನ್ನು ಬರೆಯುತ್ತಾನೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಇತಿಹಾಸ ಅಥವಾ ಸಾಮಾಜಿಕತೆ ಅನ್ನುವಂತಹದ್ದು ನಿಂತ ನೀರಾಗಿರಬಾರದು. ಜೋರಾಗಿ ಹರಿಯುವ ಶಕ್ತಿಯ ಜೊತೆಗೆ ನಿಧಾನವಾಗಿ ಚಲಿಸುವ ಶಕ್ತಿಯು ಇರಬೇಕು. ಅಂತಹ ಇತಿಹಾಸ ಇವತ್ತಿನ ಸಮಾಜಕ್ಕೆ ಬೇಕಾಗಿದೆ. ಅದರಿಂದ ಮಾತ್ರ ದಲಿತ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯವಾಗುತ್ತದೆ".

ಚರಿತ್ರೆಯ ಅರಿವು ಮನುಷ್ಯರಂತೆ ಬದುಕಲು ಮುಖ್ಯವಾಗುತ್ತದೆ: " ದಮನಿತರ ಸಾಂಸ್ಕೃತಿಕ ಜೀವನ ದೃಷ್ಟಿ ವಿಚಾರ ಮಂಡಿಸಿದ ಬಿ. ಗಂಗಾಧರ, “ಅನೇಕರಿಗೆ ಚರಿತ್ರೆಯ ಬಗ್ಗೆ ಮಾಹಿತಿಯಿಲ್ಲ. ಚರಿತ್ರೆಯ ಅರಿವು ನಮಗಿರಬೇಕು. ನಡೆದು ಹೋದ ಕಾಲಘಟ್ಟದ ಮಾನವೀಯತೆಯ ವಿಚಾರ, ದೌರ್ಜನ್ಯಗಳ ಸ್ವರೂಪವನ್ನು ತಿಳಿದುಕೊಳ್ಳಬೇಕು ಮತ್ತು ಅವು ಪುನರಾವರ್ತನೆ ಆಗದಂತೆ ಜಗತ್ತಿನ ದೃಷ್ಟಿಯಲ್ಲಿ ನಾವು ಮನುಷ್ಯರಾಗಿ ಕಾಣಬೇಕು. ಇದಕ್ಕಾಗಿ ನಮಗೆ ಚರಿತ್ರೆಯ ಅರಿವಿರಬೇಕು. ಬದುಕಿನ ಮೌಲ್ಯಗಳನ್ನು ಕಲಿಸುವ ಚರಿತ್ರೆ ಮನುಷ್ಯರಂತೆ ಬದುಕುವುದನ್ನು ತಿಳಿಸುತ್ತದೆ".

ದಮನಿತರು ಕಾವ್ಯ ಕಟ್ಟುವ ಮುಖೇನ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ: " ನಿರಂತರವಾಗಿ ದಮನಕ್ಕೆ, ಹಲ್ಲೆಗೆ ಒಳಗಾಗಿ ಬದುಕನ್ನು ಕಳೆದುಕೊಂಡಂತಹ ಜನಸಮುದಾಯಗಳು ಜೀವನವನ್ನು ಕುರಿತ ದರ್ಶನವನ್ನು ಹೀಗೆ ವ್ಯಕ್ತಗೊಳಿಸಬೇಕಾದ ಪರಿಸ್ಥಿತಿ ನಮ್ಮಲ್ಲಿದೆ. ದಮನಿತರ ಮೇಲೆ ವಿವಿಧ ಸ್ವರೂಪದ ಹಲ್ಲೆಗಳು ನಡೆಯುತ್ತಾ ಬರುತ್ತಿದ್ದರೂ ಕೂಡ ಇವರೆಲ್ಲೂ ಕೂಡ ಪ್ರತಿಕಾರದ ಕನಿಷ್ಟ ಪ್ರಯತ್ನವನ್ನು ಕೂಡ ಮಾಡಿಲ್ಲ. ಯಾಕೆಂದರೆ ಅವರು ತಾಯಿ ಪ್ರೀತಿಯಿಂದ ಈ ಎಲ್ಲಾ ಹಲ್ಲೆಕೋರ ಪ್ರವೃತ್ತಿಗಳನ್ನು ನೋಡುತ್ತಿದ್ದಾರೆ. ಆದರೆ ಇವರೆಲ್ಲೂ ಕೂಡ ಪ್ರತೀಕಾರದ ಕಿಚ್ಚನ್ನು ಹಚ್ಚಿಲ್ಲ. ಹೋರಾಟ, ಚಳುವಳಿಯ ಮೂಲಕವೇ ತಮಗಾದ ಅನ್ಯಾಯವನ್ನೂ ವಿರೋಧಿಸುತ್ತಿದ್ದಾರೆ. ಇದು ಅವರ ಜೀವನ ಮೌಲ್ಯ”.

ದಲಿತರೆಂದರೆ ಬಡವರು, ಶೋಷಣೆಗೆ ಒಳಗಾದ ಸಮುದಾಯ : "ಹನುಮಂತಪ್ಪ ಸಂಜೀವಣ್ಣನವರು ಕನ್ನಡದಲ್ಲಿ ದಮನಿತರ ಸಾಹಿತ್ಯ ವಿಚಾರವನ್ನು ಮಂಡಿಸಿ, “ದಲಿತ, ದಮನಿತರು ಶೋಷಣೆಗೆ ಗುರಿಯಾಗುವುದನ್ನು ನಾವು ಕಾಣುತ್ತಲೇ ಇದ್ದೇವೆ. ದಲಿತಸಾಹಿತ್ಯವೆಂದರೆ ತುಳಿತಕ್ಕೆ ಒಳಗಾಗಿ, ಅವರ ಜೀವನಚಿತ್ರಣವನ್ನು ಚೆನ್ನಾಗಿ ಬಲ್ಲವರು ರಚಿಸಿರುವಂತಹ ಸಾಹಿತ್ಯ. ದಲಿತರೆಂದರೆ ಬಡವರು, ಶೋಷಣೆಗೆ ಒಳಗಾದ ಸಮುದಾಯ. ವಿಮೋಚನೆಗೋಸ್ಕರ ಅನೇಕ ಕಾಲಘಟ್ಟದಲ್ಲಿ ಬದುಕಿನ ಆಶಾ ಕಿರಣವಾಗಿ ಚಳುವಳಿಗಳು, ಸಾಹಿತ್ಯ ಚಿಂತನೆಗಳ ರೂಪದಲ್ಲಿ ಪ್ರಜ್ಞೆಯ ರೂಪದಲ್ಲಿ ಬದುಕಿದವರು ದಲಿತರು. ಕಾವ್ಯದಲ್ಲಿ ಕೆಳವರ್ಗದ ಜನರ ಆಲೋಚನೆಗಳನ್ನು ಮೇಲ್ವರ್ಗದ ಕವಿಯಾಗಿದ್ದವರು ಅವರ ಭಾವನೆ, ನೋವುಗಳನ್ನು ಅರ್ಥಹಿಸಿ ತಿಳಿಸಿರುವುದನ್ನು ನಾವು ಕಾಣಬಹುದು"

ದಲಿತರ ಸಾಹಿತ್ಯ, ದಮನಿತರ ಸಾಹಿತ್ಯ: “ಕನ್ನಡ ಸಾಹಿತ್ಯದಲ್ಲಿ ನಡುಗನ್ನಡ ಸಾಹಿತ್ಯ ಅತ್ಯಂತ ಪ್ರಮುಖ ಘಟ್ಟ ಸಮಷ್ಟಿ ಪ್ರಜ್ಞೆಯಿಂದ ಲೋಕಕಲ್ಯಾಣಕ್ಕಾಗಿ ರಚನೆಯಾದ ಸಾಹಿತ್ಯವೆಂದರೆ, ಅದು ವಚನ ಸಾಹಿತ್ಯ. ವಚನ ಸಾಹಿತ್ಯ ಅನ್ನುವಂತಹದ್ದು ಮಾನವ ಸಮುದಾಯವನ್ನು ಸ್ವಾಸ್ಥ್ಯತೆಯಿಂದ ಆರೋಗ್ಯಕರವಾಗಿ ನಿರ್ಮಾಣ ಮಾಡಬೇಕೆಂದು ರಚನೆಯಾಗಿದೆ. ಮಾದರ ಚೆನ್ನಯ್ಯ ಹೇಳುವ ಹಾಗೆ, ಅಂದಿನ ಸಮಾಜದ ಅಸಮಾನತೆಯ ಕುರಿತು ಇಡೀ ಸಮಾಜಕ್ಕೆ, ಒಂದು ವಿಶೇಷವಾಗಿರತಕ್ಕಂತಹ ಮಾತಿನ ಮೂಲಕ ಸಮಾಜದಲ್ಲಿ ವ್ಯಕ್ತಿತ್ವ ನಿರ್ಮಾಣವಾಗಿ ಗುರುತಿಸುವಂತಹದ್ದು ಆತನ ಸಾಧನೆ ಹಾಗೂ ನಡತೆಯ ಮೇರೆಗೆ. ದಲಿತರ ಸಾಹಿತ್ಯ, ದಮನಿತರ ಸಾಹಿತ್ಯ, ಅಸಮಾನತೆ ಅನ್ನುವಂತಹದ್ದು ಕೇವಲ ಒಂದೇ ಸಮುದಾಯಕ್ಕೆ ಇಲ್ಲ. ಅದು ಬಡವರ್ಗದ ಎಲ್ಲಾ ಸಮುದಾಯದ ಮೇಲೆ ತನ್ನ ದೃಷ್ಟಿಯನ್ನು ನೆಟ್ಟಿದೆ. ಸಾಹಿತ್ಯದಲ್ಲಿ ಕವಿಗಳು ದಮನಿತರ ಕುರಿತು ವಸ್ತುವನ್ನು ಆಯ್ಕೆ ಮಾಡಿಕೊಳ್ಳುವದರ ಮೂಲಕ ಆದರ್ಶಮಯವಾಗಿ ವಿಚಾರವನ್ನು ಬಿತ್ತರಿಸಬೇಕು. ಇದು ಇವತ್ತಿನ ಬದಲಾವಣೆಯ ಅನಿವಾರ್ಯತೆ ಕೂಡ ಹೌದು.”

ಅಂಬೇಡ್ಕರ್ ಅವರ ಶಿಕ್ಷಣ ಹೋರಾಟ: "ಬದಲಾದ ಹೋರಾಗಳ ಸ್ವರೂಪ ಮತ್ತು ಯೋಜನೆಗಳ ಬಳಕೆ ವಿಚಾರದ ಕುರಿತು ನಟರಾಜ್, “ಹೋರಾಟಗಳು ಒಂದು ಉದ್ದೇಶವನ್ನು ಹಿಡಿದುಕೊಂಡು ಪ್ರಾರಂಭವಾಗುತ್ತವೆ. ಅವಕಾಶ ವಂಚಿತರಾದ ಮಹಿಳೆಯರು, ತುಳಿತಕ್ಕೊಳಕ್ಕಾದ ಹಿಂದುಳಿದ ವರ್ಗದ ಪರವಾಗಿ ಈ ಹೋರಾಟಗಳು ಪ್ರಾರಂಭವಾಗಿದೆ. ಈ ಹೋರಾಟಗಳು ತಮ್ಮ ಸಂದರ್ಭ ಹಾಗೂ ಕಾಲಕ್ಕೆ ತಕ್ಕುದಾದ ವಿಚಾರಗಳನ್ನು ಹಿಡಿದುಕೊಂಡು ಬದಲಾಗುತ್ತಾ ಹೋಗುತ್ತದೆ. ಜಾತಿ ವ್ಯವಸ್ಥೆಯ ವಿರುದ್ಧ ಜ್ಯೋತಿ ಬಾ ಫುಲೆ ಸೇರಿದಂತೆ ಅನೇಕರು ಹೋರಾಟವನ್ನು ಮಾಡಿದ್ದಾರೆ”.

ಸಮಸಮಾಜದ ನಿರ್ಮಾಣದ ಅಗತ್ಯವಿದೆ : “ಅಂಬೇಡ್ಕರ್ ಅವರು ಶಿಕ್ಷಣ ಸಂಘಟನೆ ಹೋರಾಟದ ಮೇರೆಗೆ ಈ ಸಾಮಾಜಿಕ ಸಮಾನತೆಯ ಮೇರೆಗೆ ಸಂವಿಧಾನದಲ್ಲಿ ನಮಗೆ ಬದಲಾವಣೆಯನ್ನು ಕೊಟ್ಟಿದ್ದಾರೆ. ಪ್ರತಿಯೊಂದು ಧರ್ಮವನ್ನು ಸಮಾನವಾಗಿ ಕಾಣಬೇಕು, ಸಮಾನವಾದ ಅವಕಾಶವನ್ನು ಕಲ್ಪಿಸಿಕೊಡಬೇಕು ಎನ್ನುವಂತಹ ನಿಟ್ಟಿನಲ್ಲಿ ಹಕ್ಕುಗಳನ್ನು ದೊರಕಿಸಿಕೊಟ್ಟಿದ್ದಾರೆ. ಬಹಳಷ್ಟು ಪ್ರಗತಿಪರ ಮನಸ್ಸುಗಳು ನಮ್ಮ ದಮನಿತ ಸಮುದಾಯದ ಒಂದು ಕಾಳಜಿಯನ್ನು ಇಟ್ಟುಕೊಂಡು ಅವರದ್ದೇ ಆದಂತಹ ಕೊಡುಗೆಗಳನ್ನು ನೀಡಿದ್ದಾರೆ. ಚಳುವಳಿಗಳ ಪ್ರಭಾವಗಳು ದಲಿತ ಸಮುದಾಯದ ಮೇಲೆ ತೀವ್ರವಾಗಿ ಆಗಿದ್ದು, ಸಮಾಜದಲ್ಲಿ ನಡೆಯುತ್ತಿರುವ ಅಪಮಾನ, ದೌರ್ಜನ್ಯವನ್ನು ಸರಿಪಡಿಸುವ ಅಗತ್ಯವಿದೆ ಎಂದು ಸರಕಾರ ಹಾಗೂ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಅಂಬೇಡ್ಕರ್ ಮಾಡಿದ್ದರು. ಮುಂದಿನ ದಿನಗಳಲ್ಲಿ ನಾವು ಕೂಡ ಜಾಗೃತಿಯ ಸಂಕಲ್ಪ ಮಾಡಿದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ. ನಾವೆಲ್ಲರೂ ಸಮಸಮಾಜದ ನಿರ್ಮಾಣಕ್ಕೆ ಕೊಡುಗೆಯನ್ನು ನೀಡುವುದು ಬಹು ಮುಖ್ಯವಾಗಿದೆ”.

- ರಂಜಿತಾ ಸಿದ್ದಕಟ್ಟೆ

 

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...