ಮಕ್ಕಳ ಸಂಪೂರ್ಣ ವಿಕಾಸಕ್ಕೆ ಸಾಹಿತ್ಯ ಅವಶ್ಯ : ಹಿರಿಯ ಸಾಹಿತಿ ಡುಂಡಿರಾಜ್

Date: 07-01-2023

Location: ಹಾವೇರಿ


ಹಾವೇರಿ : ಮಕ್ಕಳ ಮನೋವಿಕಾಸಕ್ಕಷ್ಟೇ ಅಲ್ಲ, ಸಂಪೂರ್ಣ ವಿಕಾಸಕ್ಕೆ ಸಾಹಿತ್ಯ ಅತ್ಯವಶ್ಯಕ. ಬಾಲ್ಯದಲ್ಲಿ ದೊರೆತ ಗಟ್ಟಿ ಬಾಲ ಸಾಹಿತ್ಯದ ಓದು ನನ್ನನ್ನು ಒಬ್ಬ ಸಾಹಿತಿಯಾಗಿ ರೂಪಿಸಿತು ಎಂದು ಹಿರಿಯ ಸಾಹಿತಿ ಡುಂಡಿರಾಜ್ ಹೇಳಿದರು.

ಹಾವೇರಿಯ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಆಯೋಜಿಸಲಾದ ‘ಮಕ್ಕಳ ಸಾಹಿತ್ಯ- ಮನೋವಿಕಾಸ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಕ್ಕಳ ಮನೋಭೂಮಿಕೆ ಬೇರೆ, ಇದಕ್ಕೆ ತಕ್ಕ ಹಾಗೆ ಸಾಹಿತ್ಯ ರಚಿಸುವುದು ಒಂದು ಸವಾಲು. ಇದರ ಜೊತೆಗೆ ಮಕ್ಕಳ ಸಾಹಿತ್ಯವನ್ನು ಪ್ರಕಾಶನ ಮಾಡಲು ಯಾರ ಮುಂದೆ ಬರುವುದಿಲ್ಲ. ಇದರ ಮಧ್ಯಯು ಕನ್ನಡದಲ್ಲಿ ಮಕ್ಕಳ ಸಾಹಿತ್ಯವನ್ನು ರಚಿಸುವ ವರ್ಗವು ಇದೆ ಎನ್ನುವುದು ಆಶಾದಾಯಕ ಎಂದರು.

ಚಿಕ್ಕಂದಿನಲ್ಲಿ ಮಕ್ಕಳ ಹಾಡು,ನೃತ್ಯ, ನಾಟಕಗಳನ್ನು ಪ್ರೋತ್ಸಾಹಿಸಿ ಆನಂದಿಸುವ ಪೋಷಕರು, 10 ತರಗತಿ ವೇಳೆಗೆ ಮಕ್ಕಳನ್ನು ಈ ಚಟುವಟಿಕೆಗಳಿಂದ ದೂರ ಮಾಡುತ್ತಾರೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಒಳ್ಳೆಯ ಕೆಲಸಗಳಿಗೆ ಮಕ್ಕಳು ತೆರಳಲಿ ಎನ್ನುವುದು ಪೋಷಕರ ಹಂಬಲ. ಆದರೆ ಹೀಗೆ ಓದಿದ ಮಕ್ಕಳು ಸಾಷ್ಟವೇರ್ ಹಾಗೂ ಇತರೆ ಕ್ಷೇತ್ರಗಳಲ್ಲಿ ಗುಲಾಮರಂತೆ ದುಡಿಯುವ ಪರಿಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಕ್ಕಳು ಹಿರಿಯರನ್ನು ನೋಡಿ ಅನುಕರಿಸಿ ಬೆಳೆಯುತ್ತಾರೆ. ಇಂದಿನ ಜಗತ್ತಿನಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಇತರೆ ಗ್ಯಾಜೆಟ್‌ಗಳು ಅಂಟಿಕೊಂಡಿರುವುದು ಅದು ಗೀಳಾಗಿ ಬದಲಾಗಿದೆ. ಮೊಬೈಲ್ ಬಿಟ್ಟಿರುವುದು ದೊಡ್ಡವರು ಹಾಗೂ ಮಕ್ಕಳಿಗೆ ಕಷ್ಟವಾಗಿದೆ. “ಮೊಬೈಲ್ ಹಾಗೂ ಮಕ್ಕಳ ಡೈಪರ್ ಎರೆಡು ಒಂದೇ, ಆಗಾಗ ಏನಾದರು ಬಂತಾ...! ಎಂದು ನೋಡುತ್ತಿರಬೇಕು” ಎಂದು ಮೊಬೈಲ್ ಗೀಳಿನ ಬಗ್ಗೆ ವ್ಯಂಗ್ಯ ಮಾತುಗಳನ್ನಾಡಿದರು.

ಸರ್ಕಾರವು ಮಕ್ಕಳ ಸಂಪೂರ್ಣ ವಿಕಾಸಕ್ಕೆ ಮಕ್ಕಳ ಸಾಹಿತ್ಯ ಅವಶ್ಯಕ ಎಂದು ಮನಗಂಡಿದೆ. ಹಾಗಾಗಿ ಸರಕಾರಿ ಶಾಲೆಗಳಲ್ಲಿ ನಲಿ-ಕಲಿ ಯೋಜನೆ ಜಾರಿಗೊಳಿಸಿದೆ. ಚಿಕ್ಕಂದಿನಲ್ಲಿ ನಾನು ರಚನೆ ಮಾಡಿದ ಸಾಹಿತ್ಯ ಪತ್ರಿಕೆಯ ಮಕ್ಕಳ ಸಾಹಿತ್ಯ ಕಾಲಂಗಳಲ್ಲಿ ಪ್ರಕಟವಾಗುತ್ತಿತ್ತು. ಬೆಳೆದಂತೆ ಮಕ್ಕಳ ಸಾಹಿತ್ಯ ರಚನೆಯಿಂದ ದೂರವಾದೆ. ನಂತರ 2013ರಲ್ಲಿ ನಮ್ಮ ಮನೆಗೆ ಬಂದ ಇಂಚರ ಮತ್ತೆ ನನ್ನನ್ನು ಮಕ್ಕಳ ಸಾಹಿತ್ಯ ರಚನೆಗೆ ಪ್ರೇರೇಪಿಸಿದಳು. ಇದರ ಫಲವಾಗಿ ‘ಇಂಚರ ಬಂದಳು ಇಂಚರ’ ಕವನ ಸಂಕಲನ ಹೊರ ಬಂದಿತು. ಕೋವಿಡ್ ಸಂದರ್ಭದಲ್ಲೂ ಮಕ್ಕಳ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡೆ ಎಂದು ತಮ್ಮ ವೈಯಕ್ತಿಕ ಅನುಭವನ್ನು ಸಾದರ ಪಡಿಸಿದರು.
ಮಕ್ಕಳ ಸಾಹಿತಿ ಆನಂದ್ ಪಾಟೀಲ್ ಗೋಷ್ಠಿಯ ಆಶಯ ಕುರಿತು ಮಾತನಾಡಿ, ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಕ್ಕಳ ಸಾಹಿತ್ಯ ಕೃಷಿಯನ್ನು ಗಂಭೀರವಾಗಿ ತೆಗದುಕೊಂಡು ಸಾಹಿತ್ಯ ರಚನೆಯಲ್ಲಿ ತೊಡುಗವ ಸಾಹಿತಿಗಳ ಸಂಖ್ಯೆಯ ಬೆರಳೆಣಿಕೆಯಷ್ಟಿದೆ. ಇದಕ್ಕೆ ವಿರುದ್ದವಾಗಿ ಇಂಗ್ಲೀಷ್ ಹಾಗೂ ಬಂಗಾಲಿಯಲ್ಲಿ ವಿಫುಲವಾಗಿ ಮಕ್ಕಳ ಸಾಹಿತ್ಯ ರಚನೆಯಾಗಿದೆ.

ನವೋದಯ ಸಾಹಿತ್ಯ ಕಾಲಘಟ್ಟದಲ್ಲಿ ಕುವೆಂಪು, ದಿನಕರ ದೇಸಾಯಿ ಸೇರಿದಂತೆ ಕೆಲವು ದಿಗ್ಗಜ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆ ಮಾಡಿದರು. ಮಕ್ಕಳ ಸಾಹಿತ್ಯವನ್ನು ಚಿತ್ರಗಳ ಸಹಿತ ಆಕರ್ಷಕವಾಗಿ ಮುದ್ರಿಸಿ ಪ್ರಕಾಶಿಸುವ ಸಂಸ್ಥೆಗಳು ಕಡಿಮೆಯಿವೆ. ಇಂಗ್ಲೀಷ್‌ನಲ್ಲಿ ಮಾರ್ಕ್ ಟ್ವಿನ್, ಸಿ.ಎಸ್.ಲೆವಿಸ್, ಜಾಯ್ ಡೆವಿಡ್ ಮನ್ ಪ್ರಸ್ತುತ ಜೆ.ಕೆ.ರೌಲಿಂಗ್ ನಂತವರು ಮಕ್ಕಳ ಸಾಹಿತ್ಯವನ್ನು ರಚನೆ ಮಾಡಿದ್ದರೆ. ಇವು ಕೇಲವ ನೀತಿ ಕಥೆಗಳಾಗಿರದೆ, ಅದ್ಬುತ ಎನಿಸುವ ಕಲ್ಪನಾ ಲೋಕದ ಕಥೆಗಳಾಗಿವೆ ಎಂದರು.

ವಿಶೇಷ ಮನೋಧರ್ಮ ಹಾಗೂ ಬಾಲ್ಯ ಅತಿಯಾಗಿ ಕಾಡಿದಾಗ ಮಾತ್ರ ಮಕ್ಕಳ ಸಾಹಿತ್ಯ ರಚಿಸಲು ಸಾಧ್ಯವಾಗುತ್ತದೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಪ್ರಕಾಶಕರ ಅಶ್ಯಕತೆ ಇದೆ. ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಯಾವುದೇ ವಿಭಾಗಗಳಿಲ್ಲ, ಸಂಶೋಧನೆಗಳು ಜರುಗುತ್ತಿಲ್ಲ. ಕನ್ನಡಕ್ಕಾಗಿಯೇ ಸ್ಥಾಪಿತವಾದ ಹಂಪಿ ವಿಶ್ವ ವಿದ್ಯಾಲಯವು ಮಕ್ಕಳ ಸಾಹಿತ್ಯವನ್ನು ನಿರ್ಲಕ್ಷಿಸಿದೆ. ಅಕಾಡೆಮಿಗಳು, ಸಾಹಿತ್ಯ ಪರಿಷತ್ತು ಕೂಡ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಗೋಷ್ಠಿಯಲ್ಲಿ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತ್ಯ ಬಲವರ್ಧನೆ ಕುರಿತು, ಹಾಲಯ್ಯ ಹಿರೇಮಠ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸದ ಕುರಿತು ಹಾಗೂ ಡಾ.ಕೆ.ಎಸ್.ಪವಿತ್ರಾ ಮಕ್ಕಳ ಸಾಹಿತ್ಯದಲ್ಲಿನ ಪ್ರಯೋಗ ಶೀಲತೆ ಕುರಿತು ವಿಷಯ ಮಂಡನೆ ಮಾಡಿದರು.

MORE NEWS

ವಿಶ್ವ ಸಾಹಿತ್ಯದಲ್ಲಿ ಕನ್ನಡಕ್ಕೆ ಮಹತ್ತರ ಸ್ಥಾನವಿದೆ: ಸಮ್ಮೇಳನದ ಅಧ್ಯಕ್ಷ ದೊಡ್ಡರಂಗೇಗೌಡ

08-01-2023 ಹಾವೇರಿ

ಹಾವೇರಿಯ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭವು ಭಾನುವಾರದಂದು ಕನಕ ಶರೀಫ-ಸರ್ವಜ್ಞ ಪ್ರದಾನ ವ...

ಜನಪದ ಸಾಹಿತ್ಯ, ಕೃಷಿ, ಅನಿವಾಸಿ ಭಾರತೀಯರ ಇಂದಿನ ಸ್ಥಿತಿಗತಿ : ವಿಚಾರಗೋಷ್ಠಿ

08-01-2023 ಹಾವೇರಿ

ಹಾವೇರಿ : ಬರವಣಿಗೆಯ ಯುಗದಲ್ಲಿ ಮಹಿಳೆ ಸಾಹಿತ್ಯದಲ್ಲಿ ಹಿಂದೆ ಬಿದ್ದಿರುವುದೇಕೇ ಎಂಬ ಪ್ರಶ್ನೆ ಬಹುವಾಗಿ ಕಾಡುತ್ತಿದೆ ಎನ...

ಕನ್ನಡ ಸಬಲೀಕರಣ ಕಾಯ್ದೆ ಜಾರಿಗೆ ಒತ್ತಾಯ : ರೇವಣಸಿದ್ದಪ್ಪ

08-01-2023 ಹಾವೇರಿ

ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭಕ್ಕೆ ಮುಕ್ತ ಅವಕಾಶ ನೀಡುವ ಮೂಲಕ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳುವುದು ...