About the Author

‘ಕರ್ನಾಟಕದ ಕುಲಪುರೋಹಿತ’ ಎನಿಸಿದ ಆಲೂರು ವೆಂಕಟರಾಯರು ಕನ್ನಡ -ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಕಾರ್ಯ ನಿರ್ವಹಿಸಿದವರು. ಧಾರವಾಡದಲ್ಲಿ 1880ರ ಜುಲೈ 12ರಂದು ಜನಿಸಿದ ವೆಂಕಟರಾಯರ ತಂದೆ ಭೀಮರಾಯ, ತಾಯಿ ಭಾಗೀರಥಿ. ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. (1903, ಎಲ್ಎಲ್ ಬಿ (1905) ಪದವಿ ಪಡೆದರು.

ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದ ಆಲೂರು ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಕ್ಕಾಗಿ ವಕೀಲಿವೃತ್ತಿ ಕೈ ಬಿಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸೂತ್ರಧಾರರಲ್ಲಿ ಒಬ್ಬರಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡ ಗ್ರಂಥಕರ್ತರ ಸಮ್ಮೇಳನ ನಡೆಸಿದ ಅವರು ಜಯ ಕರ್ಣಾಟಕ,  ವಾಗ್ಭೂಷಣ ಪತ್ರಿಕೆಗಳನ್ನು ಆರಂಭಿಸಿ ನಡೆಸಿದರು.

ಏಕೀಕಕರಣಕ್ಕೆ ದುಡಿದ ಅವರು ಕರ್ನಾಟಕವನ್ನೆಲ್ಲ ಸುತ್ತಿ ಇತಿಹಾಸದ ಮಹತ್ವದ ಸಂಗತಿ ಕನ್ನಡಿಗರಿಗೆ ತಿಳಿಸುವ ‘ಕರ್ನಾಟಕ ಗತ ವೈಭವ’ ಕೃತಿ ರಚಿಸಿದರು.  ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲಿ ಅವರು ಬೆಂಗಳೂರಿನಲ್ಲಿ ಮೂರನೇ ಕನ್ನಡ ಗ್ರಂಥಕರ್ತರ ಸಮ್ಮೇಳನ ಏರ್ಪಡಿಸಲು ಪ್ರಯತ್ನಿಸಿದರು. 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹೈದ್ರಾಬಾದ್ ಕನ್ನಡಿಗರು 1941ರಲ್ಲಿ ಕರ್ನಾಟಕ ಕುಲ ಪುರೋಹಿತ ಎಂಬ ಬಿರುದು ನೀಡಿರು. 1956ರಲ್ಲಿ ಕನ್ನಡ ರಾಜ್ಯೋದಯದಲ್ಲಿ ಭುವನೇಶ್ವರಿಯ ಉತ್ಸವವನ್ನು ಹಂಪೆಯಲ್ಲಿ ನಡೆಸಿ ಅದರ ನೇತೃತ್ವ ವಹಿಸಿದ್ದರು.

ಕರ್ನಾಟಕ ಗತವೈಭವ,  ಶಿಕ್ಷಣ ಮೀಮಾಂಸೆ,  ಸಂಸಾರ ಸುಖ,  ಕರ್ನಾಟಕ ವೀರರತ್ನಗಳು,  ಕರ್ನಾಟಕತ್ವದ ವಿಕಾಸ,  ಗೀತಾ ರಹಸ್ಯ (ಅನುವಾದ),  ನನ್ನ ಜೀವನ ಸ್ಮೃತಿಗಳು (ಆತ್ಮಕಥೆ),  ಮಧ್ವ ಸಿದ್ಧಾಂತ ಪ್ರಕಾಶಿಕೆ,  ಗೀತಾಪರಿಮಳ,  ಗೀತಾ ಪ್ರಕಾಶ ಅವರ ಪ್ರಕಟಿತ ಕೃತಿಗಳು. ಅವರು 1964 ಫೆಬ್ರುವರಿ 25ರಂದು ನಿಧನರಾದರು. 

ಆಲೂರು ವೆಂಕಟರಾಯ

(12 Jul 1880-25 Feb 1964)