About the Author

ಲೇಖಕ ಶಾಂತವೀರಯ್ಯನವರು ಹುಟ್ಟಿದ್ದು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಪ್ರಸಿದ್ಧ ಮನೆತನದಲ್ಲಿ. ತಂದೆ-ಚಿಕ್ಕಯ್ಯ, ತಾಯ- ಚಿಕ್ಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ ಪೂರ್ಣಗೊಳಿಸಿದ ಅವರು ಕಾಲೇಜು ವಿದ್ಯಾಭ್ಯಾಸವನ್ನು ದಾವಣಗೆರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿಗಳನ್ನು ಪಡೆದರು. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ತಿಪಟೂರು, ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆಸಲ್ಲಿಸಿ ನಿವೃತ್ತಿ ಪಡೆದರು. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಹಲವಾರು ಲೇಖನಗಳು ನಗೆಬರಹಗಳು ಪ್ರಕಟವಾಗಿವೆ.

ಕನ್ನಡ ನಾಡು ನುಡಿಯ ಬಗ್ಗೆ ತಿಳಿಸಲು ನಾಡಿನಾಧ್ಯಂತ ಸಂಚರಿಸುತ್ತಿದ್ದ ಅವರು ಧಾರ್ಮಿಕ ಸಭೆ, ಶರಣ ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಗೋಷ್ಠಿ, ಸಮ್ಮೇಳನ ಸಮಾವೇಶಗಳಲ್ಲಿ, ಸಂಶೋಧನಾತ್ಮಕ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಮಹತ್ವದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕನ್ನಡಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಅವರು ನೊಳಂಬ ವೀರಶೈವ ಸಂಘ, ಅಖಿಲ ಕರ್ನಾಟಕ ವೀರಶೈವ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕಲ್ಯಾಣ ಮಿಷನ್, ಮನುವನ ನಿವಾಸಿ ಸಂಘ, ಮಿತ್ರ ವೃಂದ, ಅಖಿಲ ಭಾರತ ನಗೆ ಬರಹಗಾರರ ಸಂಘ, ಬಿ.ಎಂ.ಶ್ರೀ. ಪ್ರತಿಷ್ಠಾನ ಮುಂದತಾದೆಡೆ ಸದಸ್ಯರಾಗಿ, ವೀರಶೈವ ಮಠಗಳ ಆಸ್ಥಾನ ವಿದ್ವಾಂಸರಾಗಿ, ಶಿಕ್ಷಣ ಸಂಸ್ಥೆಗಳ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಕನ್ನಡ ನಿಘಂಟು, ಸಾವಿರದ ಕೋಶ, ಹರಭಕ್ತಿಸಾರ, ಗಾದೆಗಳ ಸಾರ, ಒಗಟಿನಾಗರ, ಶಾಸನ ಪರಿಚಯ, ಶರಣ ಸಂಪದ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ. ಭಾಷೆ ಮತ್ತು ಸಾಹಿತ್ಯಕ್ಷೇತ್ರದಲ್ಲಿ ಅವರು ಮಾಡಿದ ಮಹತ್ವದ ಕಾರ್ಯಗಳಿಗಾಗಿ ರಾಜ್ಯೋತ್ಸವ ಪ್ರಶಸ್ತಿ, ಕಿಟಲ್ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಶಿವಲಿಂಗ ಪ್ರಶಸ್ತಿ, ಮಠಾಪತಿಗಳ ಪ್ರಶಸ್ತಿ, ಕನ್ನಡರತ್ನ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಜಂಗಮ ವಿಶ್ವಕೋಶ, ನಡೆದಾಡುವ ನಿಘಂಟು ಎಂಬ ಬಿರುದು ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. ಅವರು 2020 ಸೆಪ್ಟಂಬರ್‌ 27ರಂದು ನಿಧನರಾದರು.

ಹೀ.ಚಿ. ಶಾಂತವೀರಯ್ಯ

(11 Jun 1934-27 Sep 2020)