About the Author

ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.

'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ವಿವಿಧ ಸಾಹಿತ್ಯ, ಶೈಕ್ಷಣಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು ಉತ್ತಮ ಸಂಘಟಕರಾಗಿದ್ದಾರೆ. ಸಾಗರದಲ್ಲಿ ಸಾಯಂಕಾಲ, ಅಶ್ವತ್ಥಾಮ, ವಿರಹ ಕಡಲು (ಕವನ ಸಂಕಲನ), ಕಾಲ, ಮುಖಗಳು, ಹೆಜ್ಜೆ ಮೂಡದ ಹಾದಿಯಲ್ಲಿ, ಚಂದಿರನೇತಕೆ ಓಡುವನಮ್ಮ, ಬ್ರಹ್ಮರಾಕ್ಷಸ (ಕಥಾ ಸಂಕಲನ), ಅಂತರ (ಕಾದಂಬರಿ), ವಸಂತ ಋತು ಮಳೆ (ಅನುವಾದ) ಮುಂತಾದ ಪ್ರಮುಖ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರ ಬಹುಮುಖ ಸಾಧನೆಗಳಿಗಾಗಿ ಗೊರೂರು ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹತ್ತುಹಲವು ಪ್ರಶಸ್ತಿಗಳು ಲಭಿಸಿವೆ.  ಕಾರ್ಕಳ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಜಯಪ್ರಕಾಶ ಮಾವಿನಕುಳಿ

(05 May 1951)

Awards