About the Author

ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು  12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ ಕನ್ನಡ ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆ ಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “ಮನ್ವಂತರ”ಕ್ಕೆ ಇವರು ಸಂಪಾದಕರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಮಾಡಿದ ಅವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕೀರ್ತಿನಾಥ ಕುರ್ತಕೋಟಿ

(12 Oct 1928)