About the Author

ಎಂ. ಪ್ರಭಾಕರ್ ಜೋಷಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮಾಳದಲ್ಲಿ 1946 ರಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಜೋಷಿ; ಪ್ರಸಿದ್ದ  ವಿದ್ವಾಂಸರು ಹಾಗೂ ವಾಗ್ಮಿಗಳು. ಅನಿರುದ್ಧ ಭಟ್ಟರು ಯಕ್ಷಗಾನದ ಅರ್ಥಧಾರಿಗಳು. ಜೋಷಿಯವರು ಇವರಲ್ಲೇ ಯಕ್ಷಗಾನ ಕಲಿತರು. ಎಂ.ಕಾಂ.ಪದವೀಧರರಾದ ಜೋಷಿ, ಹಿಂದಿ ಸಾಹಿತ್ಯ ರತ್ನ ಹಾಗೂ "ಯಕ್ಷಗಾನದಲ್ಲಿ ’ಕೃಷ್ಣ ಸಂಧಾನ`ಪ್ರಸಂಗ" ವಿಷಯದಲ್ಲಿ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದವರು.

ಯಕ್ಷಗಾನ ಪರಂಪರೆ, ಅದು ನಡೆದು ಬಂದ ದಾರಿ,ಇತ್ತೀಚೆಗೆ ಬದಲಾವಣೆಗೊಂಡಿರುವ ಕೆಲವು ಸಂಪ್ರದಾಯಗಳ ಸಾಧಕ-ಬಾಧಕಗಳ ಜ್ಞಾನ ಇರುವ ಜೋಷಿ, ಶ್ರೇಷ್ಠ ವಿಮರ್ಶಕರೂ ಹೌದು. ವಿದೇಶಗಳಲ್ಲೂ ಯಕ್ಷಗಾನದ ನೂರಾರು ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ನೂರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣ ಸಂಧಾನ: ಪ್ರಸಂಗ ಮತ್ತು ಪ್ರಯೋಗ, ಜಾಗರ, ಕೇದಗೆ ಮಾರುಮಾಲೆ, ಪ್ರಸ್ತುತ, ವಾಗಾರ್ಥ ಪದಕೋಶ, ವಾಗಾರ್ಥ ಯಕ್ಷಗಾನ ಪದಕೋಶ, ಮುಡಿ, ತಾಳಮದ್ದಳೆ ಪ್ರಮುಖವಾದವು. 2016ರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ, ಶೇಣಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕುಬೆವೂರು ಪ್ರಶಸ್ತಿ, ಕುರಿಯ ಪ್ರಶಸ್ತಿ, ಯಕ್ಷಸಂಗಮ ಮೂಡಬಿದ್ರಿ ಪ್ರಶಸ್ತಿ, ದುಬೈ - ಬೆಹ್ರೈನ್ ನಂಥಹ ವಿದೇಶಗಳಲ್ಲಿ ಸಹಿತ ನೂರಾರು ಸಂಮಾನಗಳು ಸಂದಿವೆ. 

ತಾಳಮದ್ದಳೆ ಕೂಟಗಳಲ್ಲಿ ಪ್ರಧಾನ ಅರ್ಥಧಾರಿಗಳಾಗಿ ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ವಾಲಿ, ಸುಗ್ರೀವ, ಶ್ರೀರಾಮ, ಧರ್ಮರಾಯ, ಭೀಮ ರಾವಣ, ಕೌರವ, ಶ್ರೀಕೃಷ್ಣ, ಅತಿಕಾಯ, ಅರ್ಜುನ, ಭರತ, ಭೀಷ್ಮ,ಶೂರ್ಪಣಖಿ, ಪರಶುರಾಮ, ವಿಶ್ವಾಮಿತ್ರ, ಬೃಹನ್ನಳೆ, ಮಂಡನಮಿಶ್ರ ಮುಂತಾದವು ಜೋಷಿಯವರ ಪ್ರಮುಖ ಪಾತ್ರಗಳಾಗಿವೆ.  

 

ಎಂ. ಪ್ರಭಾಕರ ಜೋಷಿ