About the Author

ಕರ್ನಾಟಕದ ಕಲಾವಲಯದ ಹಿರಿಯರು ’ಮರಿ’ ಎಂದು ಕರೆಯುತ್ತಿದ್ದ ಎನ್. ಮರಿಶಾಮಾಚಾರ್‌ ಅವರು ರಾಜ್ಯದ ಅಪರೂಪದ ಕಲಾಪರಿಚಾರಕ-ಲೇಖಕ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್‌  ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದ ಮರಿಶಾಮಾಚಾರ್‌ ಅವರು ಕಲಾಸಾಹಿತಿ. ’ನಡೆದಾಡುವ ಕಲಾಕೋಶ’ ಎಂದು ಕಲಾವಲಯದಲ್ಲಿ ಅವರನ್ನು ಗುರುತಿಸಲಾಗುತ್ತಿತ್ತು.

ವಿಜಯಪುರದಲ್ಲಿ 1951ರ ಮೇ 15ರಂದು ಜನಿಸಿದ ಮರಿಶಾಮಾಚಾರ್‌ ಅವರು ಜಯನಗರದ ಆರ್‌.ವಿ. ಹೈಸ್ಕೂಲಿನಲ್ಲಿ ಓದುತ್ತಿರುವಾಗ ಡ್ರಾಯಿಂಗ್ ಮಾಡಲು ಆರಂಭಿಸಿದ್ದರು. ಅವರ ಅಣ್ಣ ಕೆನ್‌ ಶಾಲೆಯ ವಿದ್ಯಾರ್ಥಿಯಾಗಿದ್ದ. ಕಲೆಯ ಅಭಿರುಚಿ ಬಂದದ್ದು ಅವರ ಅಣ್ಣನಿಂದಲೇ. ಅಣ್ಣನ ಮೂಲಕ ಪರಿಚಯವಾದ ಕಲಾಗುರು ಆರ್‌.ಎಂ. ಹಡಪದ ಅವರ ಶಿಷ್ಯರಾಗಿದ್ದ ’ಮರಿ’ ಅವರು ಅವರ ಬಳಿ ಐದು ವರ್ಷ ಡಿಪ್ಲೊಮಾ, ಎರಡು ವರ್ಷ ಆರ್ಟ್ ಮಾಸ್ಕರ್‌ ಕಲಿತರು. ಎರಡರಲೂ ಮೊದಲ ಹಾಗೂ ಎರಡನೇ ರ್‍ಯಾಂಕ್ ಪಡೆದರು.

ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಡ್ರಾಯಿಂಗ್ ಮೇಷ್ಟ್ರಾಗಿ ಕೆಲಸಕ್ಕೆ ಸೇರಿದ ಅವರು ಅಲ್ಲಿ ಕೇವಲ ನಾಲ್ಕು ದಿನ ಮಾತ್ರ ಕೆಲಸ ಮಾಡಿದರು.

ಹೆಸರಾಂತ ಕಲಾವಿದ ಕೆ.ಕೆ.ಹೆಬ್ಬಾರರು ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1977) ಬರೋಡಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರತಿಭಾವಂತರನ್ನು ಕಳುಹಿಸುವ ಯೋಜನೆ ಹಾಕಿಕೊಂಡಿದ್ದರು. ಆಗ ರ್‍ಯಾಂಕ್‌ ಪಡೆದಿದ್ದ ಮರಿಶಾಮಾಚಾರ್ ಅವರು ಹೆಬ್ಬಾರರಿಗೆ ಪರಿಚಯವಾಯಿತು. ಹೆಬ್ಬಾರರು ಬರೋಡಾಗೆ ಹೋಗುವಂತೆ ಸೂಚಿಸಿದರು. ಗುರುಸಮಾನರಾದ ಹೆಬ್ಬಾರರ ಮಾತು ಕೇಳದೇ ಇರಲು ಸಾಧ್ಯವಿರಲಿಲ್ಲ. ಕೈಯಲ್ಲಿಲಿದ್ದ್ದದ ಸಂಬಳ ತರುವ ಡ್ರಾಯಿಂಗ್ ಮೇಷ್ಟು ಕೆಲಸ ಬಿಟ್ಟು ಹೊಗುವಷ್ಟು ಸ್ಥಿತಿವಂತರೂ ಆಗಿರಲಿಲ್ಲ. ಆ ದಿನಗಳಲ್ಲಿ ತಿಂಗಳಿಗೆ ರೂ. 400 ವಿದ್ಯಾರ್ಥಿವೇತನ ದೊರೆಯುವುದು ಕಷ್ಟವಿತ್ತು. ’ಗುರು’ ತೋರಿದ ದಾರಿ ಆಯ್ಕೆ ಮಾಡಿದ ಮರಿಶಾಮಾಚಾರ್ ಅವರು 1978ರಲ್ಲಿ ಕೆಲಸಕ್ಕೆ ರಾಜೀನಾಮೆ ಬರೋಡಕ್ಕೆ ಹೋದರು.

ಬೆಂಗಳೂರಿನ ಲಲಿತ ಕಲಾ ಅಕಾಡೆಮಿಯಲ್ಲಿ ಪ್ರದರ್ಶನ ಆಯೋಜಿಸುವ ಅಧಿಕಾರಿ ಅಗತ್ಯ ಇತ್ತು ಬರೋಡದಲ್ಲಿ ಗುರುವಾಗಿದ್ದ ಕೆ.ಜಿ, ಸುಬ್ರಹ್ಮಣ್ಯಂ ಹೆಬ್ಬಾರರಿಗೆ ತಕ್ಷಣ ಸೂಚಿಸಿದ ಹೆಸರು `ಮರಿಶಾಮಾಚಾರ್ ಅವರದಾಗಿತ್ತು. ಖಾತರಿ ಇಲ್ಲದ ಕೆಲಸದಲ್ಲಿ ಹದಿನಾರು ವರ್ಷ ಕಾರ್ಯ ನಿರ್ವಹಿಸಿದ ಅವರು 1995ರಲ್ಲಿ ಶಿಲ್ಪಕಲಾ ಅಕಾಡೆಮಿ ಆರಂಭವಾದಾಗ ರಿಜಿಸ್ಟ್ರಾರ್‌ ಆಗಿ ನೇಮಕಗೊಂಡರು. ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಮರಿಶಾಮಾಚಾರ್ ಅವರ ಹೆಸರನ್ನು ಸೂಚಿಸಿದ್ದರು. `ಕಲಾಗ್ರಾಮ'ದಂಥ ಮಹತ್ವದ ಕಲ್ಪನೆ ಸಾಕಾರಗೊಳ್ಳುವುದಕ್ಕೆ ಮರಿಶಾಮಾಚಾರ್ ಪರಿಶ್ರಮ ಅಗಾಧವಾಗಿತ್ತು. ಅವರು ಸಂಸ್ಕಾಪಕ ಸದಸ್ಯರಲ್ಲಿ ಒಬ್ಬರು. ಕೇಂದ್ರ ಲಲಿತ ಕಲಾ ಅಕಾಡೆಮಿಯ ಸದಸ್ಯರೂ ಆಗಿದ್ದರು.

ಮಿನಿಯೇಚರ್ ಪೇಟಿಂಗ್, ತೊಗಲುಗೊಂಬೆ ಅಳವಡಿಸಿ ಚಿತ್ರ ರಚಿಸಿದ ಮರಿಶಾಮಾಚಾರ್ ಅವರು, ಕಲಾ ಪರಿಚಾರಿಕೆ ಆರಂಭವಾದ ಮೇಲೆ ಮೇಲೆ ಚಿತ್ರ ಬರೆಯುವುದು ಕಡಿಮೆಯಾಯಿತು.

ಕಲೆಯ ಅಧ್ಯಯನಕ್ಕೆ ಪೂರಕವಾದ ಅಕಾಡೆಮಿಕ್ ಪುಸ್ತಕಗಳನ್ನು ರಚಿಸಿ, ಪ್ರಕಟಿಸಿದ್ದು ಮರಿಶಾಮಾಚಾರ್ ಅವರ ಮಹತ್ವದ ಕೆಲಸ. `ಚಿತ್ರಕಲಾ ಪ್ರಪಂಚ', `ಶಿಲ್ಪಕಲಾ ಪ್ರಪಂಚ', `ಕಲಾಕೋಶ' ಸಂಪುಟಗಳು ಮರಿಶಾಮಾಚಾರ್ ಅವರ ಮಹತ್ವದ ಕೃತಿಗಳಾಗಿವೆ.`ದೃಶ್ಯಕಲಾ', `ಸಮಕಾಲೀನ ಕಲೆ', `ಭಾರತದ ದೃಶ್ಯ ಕಲಾವಿದರು', `ಕಲಾ ಸಾಧಕ', ಕೆ.ಕೆ.ಹೆಬ್ಬಾರ್ ಅವರನ್ನು ಕುರಿತ `ಹಾಡುವ ರೇಖೆ' ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.ರೆ.

ಮರಿಶಾಮಾಚಾರ್‌ ಅವರಿಗೆ ಪ್ರಿಯರಾಗಿದ್ದ ಕೆ.ಕೆ. ಹೆಬ್ಬಾರ್, ಆರ್.ಎಂ. ಹಡಪದ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಗಳ ಗೌರವ ಪಡೆದಿದ್ದ ಅವರಿಗೆ 2007ರಲ್ಲಿ ಶಿಲ್ಪಕಲಾ ಅಕಾಡೆಮಿಯ ಸುವರ್ಣ ಕರ್ನಾಟಕ ಪ್ರಶಸ್ತಿ ನೀಡಲಾಗಿತ್ತು.

ಎನ್. ಮರಿಶಾಮಾಚಾರ್

(15 May 1951-03 Apr 2013)