About the Author

`ಪಾಪು’ ಎಂದೇ ಚಿರಪರಿಚಿತರಿರುವ ಪಾಟೀಲ ಪುಟ್ಟಪ್ಪ ಅವರು ಪತ್ರಿಕೋದ್ಯಮ, ಸಾಹಿತ್ಯ ರಚನೆ ಮತ್ತು ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡವರು. ಇವರು ಹಾವೇರಿ ಜಿಲ್ಲೆಯ ಕುರುಬಗೊಂಡ ಗ್ರಾಮದವರು. ತಂದೆ ಸಿದ್ಧಲಿಂಗಪ್ಪ-ತಾಯಿ ಮಲ್ಲಮ್ಮ. 1922ರ ಜನೆವರಿ 4ರಂದು ಜನಿಸಿದರು. ಶಾಲಾ ಶಿಕ್ಷಣವನ್ನು ಹಲಗೇರಿ, ಬ್ಯಾಡಗಿ, ಚಿತ್ರದುರ್ಗ, ಹಾವೇರಿಗಳಲ್ಲಿ ಮುಗಿಸಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಪೂರೈಸಿ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಎಂ.ಎಂ.ಬಿ. ವ್ಯಾಸಂಗ ಮಾಡಿದರು. 1949ರಲ್ಲಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಎಂ.ಎಫ್.ಪಿ ಪದವಿ ಗಳಿಸಿದರು.

‘ವಿಶಾಲ ಕರ್ನಾಟಕ’ ಪತ್ರಿಕೆ ಸಂಪಾದಕರಾಗಿ ಕೆಲಸಮಾಡಿದ ಪುಟ್ಟಪ್ಪನವರು ಕ್ಯಾಲಿಫೋರ್ನಿಯಾಗೆ ಹೋಗಿ ಬಂದ ಮೇಲೆ ‘ನವಯುಗ’ ಮಾಸಪತ್ರಿಕೆ ಸಂಪಾದಕರಾದರು. ಆಮೇಲೆ 1954ರಲ್ಲಿ ಪ್ರಪಂಚ ವಾರಪತ್ರಿಕೆಯನ್ನು ತಾವೇ ಹುಟ್ಟು ಹಾಕಿದರು. 1957ರಲ್ಲಿ ಸಂಗಮ ಎಂಬ ಕನ್ನಡ ಡೈಜಸ್ಟನ್ನು ಪ್ರಾರಂಭಿಸಿದರು. 1959ರಲ್ಲಿ ವಿಶ್ವವಾಣಿ ದಿನಪತ್ರಿಕೆಯನ್ನೂ ಮನೋರಮಾ ಎಂಬ ಚಲನಚಿತ್ರ ಮಾಸಿಕವನ್ನೂ ಆರಂಭಿಸಿದರು. ಹೀಗೆ ಪತ್ರಿಕೆಗಳನ್ನು ಹುಟ್ಟು ಹಾಕುತ್ತಲೂ ನಡೆಸುತ್ತಲೂ ಪತ್ರಿಕೋದ್ಯಮದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದರು. ಇದರ ಜೊತೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ, ಅನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಅಂಕಣಕಾರರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ರಾಜ್ಯ ಸಭೆಯ ಸದಸ್ಯರಾಗಿದ್ದರು. (1962-71). ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 1967 ರಿಂದ ಅಧ್ಯಕ್ಷರಾಗಿದ್ದಾರೆ. ಗೋಕಾಕ ವರದಿ ಜಾರಿಗೆ ಬರಲು ನಡೆದ ಚಳುವಳಿಯ ನೇತೃತ್ವ ವಹಿಸಿದ್ದರು. ಕರ್ನಾಟಕ ಸರಕಾರ ಕನ್ನಡ ಕಾವಲು ಮತ್ತು ಗಡಿಸಲಹಾ ಸಮಿತಿ ರಚಿಸಿ ಇವರನ್ನು ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದಾಗ ಕನ್ನಡ ಅನುಷ್ಠಾನಕ್ಕೆ ಇವರು ಶ್ರಮಿಸಿದರು. 

ಕರ್ನಾಟಕ ವಿಶ್ವವಿದ್ಯಾಲಯದ ಡಿ’ಲಿಟ್’ ಪದವಿ (1994), ಕರ್ನಾಟಕ ಸರಕಾರದ ಟಿ.ಎಸ್.ಆರ್.ಪ್ರಶಸ್ತಿ (1994)ಲ್ಲಿ ರಾಜ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಭಾರತ ಜ್ಯೋತಿ ಪ್ರಶಸ್ತಿ (1990), ಹುಬ್ಬಳ್ಳಿಯ ತಿಲಕ್ ಮೊಹರೆ ಪ್ರಶಸ್ತಿ (1999), ಹಂಪಿ ವಿಶ್ವವಿದ್ಯಾಲದ ನಾಡೋಜ ಗೌರವ (1996), ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ (2001), ೨00೨ರಲ್ಲಿ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ (2002), ‘ಕನ್ನಡ  ಸಾಹಿತ್ಯ ಪರಿಷತ್ತಿನ  ‘ನೃಪತುಂಗ’ ಪ್ರಶಸ್ತಿ ಇತ್ಯಾದಿ ಲಭಿಸಿವೆ. ಬೆಳಗಾವಿಯಲ್ಲಿ ನಡೆದ 70ನೇ ಕನ್ನಡ ಸಾಹಿತ್ಯ ಸಮ್ಮೇಳನ (2003) ಅಧ್ಯಕ್ಷತೆ ವಹಿಸಿದ್ದರು.

ನನ್ನದು ಈ ಕನ್ನಡ ನಾಡು (1975), ನಮ್ಮದು ಈ ಭರತಭೂಮಿ(1977), ಕರ್ನಾಟಕ ಕಥೆ(1991), ಸೋವಿಯತ್ ದೇಶ ಕಂಡೆ(1944), ಗವಾಕ್ಷಿ ತೆರೆಯಿತು(1974), ಶಿಲಾಬಾಲಿಕೆ ನುಡಿದಳು(1974), ನಮ್ಮ ದೇಶ ನಮ್ಮ ಜನ(1973), ಈಗ ಹೊಸದನ್ನು ಕಟ್ಟೋಣ(1975), ಪಾಪು ಪ್ರಪಂಚ(2000). ಅವರು 2020 ಮಾರ್ಚಿ 16ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. 

ಪಾಟೀಲ ಪುಟ್ಟಪ್ಪ

(14 Jan 1922-16 Mar 2020)

ABOUT THE AUTHOR