About the Author

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ಬಡ ಕೃಷಿಕ ಕುಟುಂಬದಲ್ಲಿ  (ಜನನ : 28-4-1980) ಜನಿಸಿದ ಪ್ರಕಾಶ ಗಿರಿಮಲ್ಲನವರ ಶರಣ ಸಾಹಿತ್ಯ, ಸಂಸ್ಕೃತಿ ಪರಿಸರದಲ್ಲಿ ಬೆಳೆದು ಬಂದ ಒಬ್ಬ ಭರವಸೆಯ ಯುವ ಬರಹಗಾರ.  ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರು ಸ್ಥಾಪಿಸಿದ ಉಚಿತ ಪ್ರಸಾದ ನಿಲಯದಲ್ಲಿ ಆಶ್ರಯ ಪಡೆದು ಬೆಳೆದವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ’ಲಿಂಗಾಯತ ಸಂಶೋಧನ ಕೇಂದ್ರ ಗ್ರಂಥಾಲಯ’ (ವಚನ ಅಧ್ಯಯನ ಕೇಂದ್ರ)ದಲ್ಲಿ 20 ವರ್ಷಗಳ ಕಾಲ ಗ್ರಂಥಾಲಯ ಸಹಾಯಕರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮಹಾತ್ಮರ, ಸಮಾಜ ಸೇವಕರ ಹಾಗೂ ಸಾಹಿತ್ಯ ಸಾಧಕರ ಜೀವನ ಚರಿತ್ರೆಗಳನ್ನು ಬರೆಯುವಲ್ಲಿ ಇವರು ಸಿದ್ಧಹಸ್ತರು. ನಾಡಿನ ಪ್ರತಿಷ್ಠಿತ ಮಠಪೀಠಗಳು, ಸಂಸ್ಥೆಗಳು ಇವರ ಕೃತಿಗಳನ್ನು ಪ್ರಕಟಿಸಿವೆ. ಅನೇಕ ಅಭಿನಂದನ ಗ್ರಂಥ, ಸ್ಮರಣ ಸಂಪುಟಗಳ ಸಂಪಾದಕರಾಗಿಯೂ ಕಾರ್‍ಯ ಮಾಡಿದ್ದಾರೆ. ’ಬೆಳದಿಂಗಳು ಪ್ರಕಾಶನ’ ಎಂಬ ಸ್ವಂತ ಗ್ರಂಥ ಪ್ರಕಾಶನವನ್ನು ಆರಂಭಿಸಿ, ಅದರ ಅಡಿಯಲ್ಲಿ ನಾಡಿನ ಖ್ಯಾತನಾಮ ಸಾಹಿತಿಗಳ ಅನೇಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಸಾಹಿತ್ಯಸೇವೆಯನ್ನು ಗಮನಿಸಿ  ಅನೇಕ ಪ್ರಶಸ್ತಿ ಗೌರವಗಳು ಸಂದಿವೆ. ಡಾ. ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಯುವಪುರಸ್ಕಾರ (2014), ಡಾ. ಎಚ್. ತಿಪ್ಪೇರುದ್ರಸ್ವಾಮಿ ಕೃತಿಗೆ ಹಾರೂಗೇರಿಯ ಆಜೂರೆ ಪ್ರತಿಷ್ಠಾನದ ಪ್ರಶಸ್ತಿ, ’ಬೆಳಗಾವಿ ಜಿಲ್ಲೆಯ ವೃತ್ತಿರಂಗಭೂಮಿ ಪರಂಪರೆ’ ಎಂಬ ಕೃತಿಗೆ ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಫ್ (ಐವತ್ತು ಸಾವಿರ ಮೊತ್ತ) ದೊರೆತಿವೆ. ’ಮಹಾಮನೆ’ ಪತ್ರಿಕೆಯಲ್ಲಿ ಇವರು ಬರೆದ ’ಸಿದ್ಧರಾಮನ ವಚನಗಳ ನಿಜಪಠ್ಯ-ಪ್ರಕ್ಷಿಪ್ತ ಪಠ್ಯ’ ಎಂಬ ಸಂಶೋಧನಾತ್ಮಕ ಲೇಖನಕ್ಕೆ ’ಬೆಳಗಾವಿ ಸಾರ್ವಜನಿಕ ವಾಚನಾಲಯದ ರಾಜ್ಯಮಟ್ಟದ ಶ್ರೇಷ್ಠ ಪತ್ರಕಾರ ಪ್ರಶಸ್ತಿ’ (ಐದು ಸಾವಿರ ನಗದು) ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿಗಳು ಸಂದಿವೆ. ವಿಜಯಪುರ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಯುವಸಾಹಿತಿ ಪ್ರಶಸ್ತಿ (೨೫ ಸಾವಿರ ನಗದು), ಬೆಳಗಾವಿ ಸಿರಿಗನ್ನಡ ಸಾಹಿತ್ಯ ಪ್ರಶಸ್ತಿಗಳು ದೊರೆತಿವೆ. ಇವರ ಕೆಲವು ಲೇಖನಗಳು ಪದವಿ ಕಾಲೇಜಿನ ಪಠ್ಯಪುಸ್ತಕಗಳಲ್ಲಿ ಆಯ್ಕೆಯಾಗಿವೆ. ಶ್ರೇಷ್ಠ ವಿದ್ವಜ್ಜನರಾದ ಡಾ. ಗುರುಲಿಂಗ ಕಾಪಸೆ, ಡಾ. ಎಸ್. ಆರ್. ಗುಂಜಾಳ, ಡಾ. ಎಂ. ಎಂ. ಕಲಬುರ್ಗಿ ಅವರ ಗರಡಿಯಲ್ಲಿ ಬೆಳೆದು ಬಂದ ಇವರು ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಲೇಖನ ಸೂಚಿಗಳನ್ನು ಸಿದ್ಧಪಡಿಸಿ ಸಂಶೋಧಕರಿಗೆ ಆಕರ ಸಾಮಗ್ರಿಯನ್ನು ಒದಗಿಸಿದ್ದಾರೆ. ’ವಚನ ಧರ್ಮ : ವೈಚಾರಿಕ ವಿವೇಚನೆ’, ’ವಚನ ಸಂಸ್ಕೃತಿ’, ’ಬಸವಣ್ಣನವರು ಕಟ್ಟ ಬಯಸಿದ ಸಮಾಜ’, ’ವಚನ ಸಾಹಿತ್ಯ : ಸಾಂಸ್ಕೃತಿಕ ಮುಖಾಮುಖಿ’ ಮೊದಲಾದ ವಚನ ಸಾಹಿತ್ಯ ಕುರಿತ ಕೃತಿಗಳು ಇವರಿಂದ ರಚನೆಗೊಂಡಿವೆ.

 

ಪ್ರಕಾಶ ಗಿರಿಮಲ್ಲನವರ

(24 Aug 1980)