About the Author

ಮದ್ರಾಸ್ ವಿಶ್ವವಿದ್ಯಾಲಯದಿಂದ ಮೊಟ್ಟ ಮೊದಲನೆಯ ಕನ್ನಡ ಎಂ.ಎ. ಪದವಿ ಪಡೆದ ಆರ್. ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಲೋಕದಲ್ಲಿ ‘ಕವಿಚರಿತೆ’ಕಾರ ಎಂದೇ ಚಿರಪರಿಚಿತರು. ಸಂಶೋಧಕ ಮತ್ತು ಶಾಸನ ತಜ್ಞರೂ ಆಗಿದ್ದ ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪಕರಲ್ಲಿ ಒಬ್ಬರು.
ಮಂಡ್ಯದ ಕೊಪ್ಪಲು ಗ್ರಾಮದಲ್ಲಿ 1860ರ ಏಪ್ರಿಲ್ 9ರಂದು ಜನಿಸಿದ ಆರ್. ನರಸಿಂಹಾಚಾರ್ ಅವರ ತಂದೆ ತಿರುನಾರಾಯಣ ಪೆರುಮಾಳ್ ಮತ್ತು ತಾಯಿ ಶಿಂಗಮ್ಮಾಳ್. ಕೂಲಿಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಮದ್ರಾಸಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದು ಮೆಟ್ರಿಕ್ ಪಾಸಾದರು. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿ 1882ರಲ್ಲಿ ಬಿ.ಎ. ಮತ್ತು 1883ರಲ್ಲಿ ಎಂ.ಎ. ಪದವಿ ಪಡೆದರು.
ಅಭ್ಯಾಸ ಮಾಡುತ್ತಿದ್ದ ದಿನಗಳಲ್ಲಿಯೇ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದ ನರಸಿಂಹಾಚಾರ್ ಅವರು ಎಂ.ಎ. ಪದವೀಧರರರಾದ ಮೇಲೆ ಶಿಕ್ಷಣ ಇಲಾಖೆಯಲ್ಲಿ (1894) ಕನ್ನಡ ಭಾಷಾಂತರಕಾರರಾಗಿ ಐದು ವರ್ಷ ಕೆಲಸ ಮಾಡಿದರು. 1899ರಲ್ಲಿ ಪ್ರಾಚ್ಯವಿದ್ಯಾ ಇಲಾಖೆಯಲ್ಲಿ ಲೂಯಿ ರೈಸ್ ಅವರ ಸಹಾಯಕ ಅಧಿಕಾರಿಯಾಗಿ ನೇಮಕಗೊಂಡ ಅವರು ‘ಪಂಪ ಭಾರತ’ದ ಪರಿಷ್ಕರಣೆಯಲ್ಲಿ ನೆರವಾದರು. 1906ರಿಂದ 1922ರ ಅವಧಿಯಲ್ಲಿ ಶಾಸನ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಅವರು ಮುಖ್ಯ ಅಧಿಕಾರಿಯಾಗಿ ನಿವೃತ್ತರಾದರು.
ರಾಯಲ್ ಏಷ್ಯಾಟಿಕ್ ಸೊಸೈಟಿ ಸದಸ್ಯರಾಗಿದ್ದ ಆರ್. ನರಸಿಂಹಾಚಾರ್ ಅವರು ಕವಿ ಚರಿತೆಯ ಮೊದಲ ಸಂಪುಟವನ್ನು ಎಸ್. ಜಿ. ನರಸಿಂಹಾಚಾರ್ ಅವರ ಜೊತೆ ಸಂಪಾದಿಸಿ ಪ್ರಕಟಿಸಿದರು. ಉಳಿದ ಎರಡು ಸಂಪುಟಗಳನ್ನು ತಾವೇ ರಚಿಸಿ ಪ್ರಕಟಿಸಿದ ಅವರು ಐದು ಸಾವಿರಕ್ಕೂ ಹೆಚ್ಚು ಹೊಸ ಶಾಸನಗಳನ್ನು ಶೋಧಿಸಿದರು. ಸಾವಿರಕ್ಕೂ ಹೆಚ್ಚು ಪ್ರಾಚ್ಯಕಟ್ಟಡಗಳ ಪರಿಶೀಲನೆ ನಡೆಸಿದರು. ನೂರಕ್ಕೂ ಹೆಚ್ಚು ನಾಣ್ಯಗಳ ಬಗ್ಗೆ ಸಂಶೋಧನೆ ನಡೆಸಿದ ಅವರು ನಕ್ಷೆ ತಯಾರಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು. ಹೊಯ್ಸಳ ಶೈಲಿಯ ಶಿಲ್ಪಕಲೆಯ
ವೈಶಿಷ್ಟಯವನ್ನು ಗುರುತಿಸಿ-ದಾಖಲಿಸಿದರು. ಉಭಯ ವೇದಾಂತ ಸಭೆಗೆ 35 ವರ್ಷ ಮಾರ್ಗದರ್ಶಕರಾಗಿದ್ದರು. 19929ರಲ್ಲಿ ಕಲ್ಕತ್ತಾದ ಅಖಿಲ ಭಾರತ ಸಾಹಿತ್ಯ ಸಂಘ `ಪ್ರಾಚ್ಯವಿದ್ಯಾವೈಭವ’ ಬಿರುದು ನೀಡಿ ಗೌರವಿಸಿದರೆ ಮೈಸೂರು ಮಹಾರಾಜರು 1913ರಲ್ಲಿ ಪ್ರಾಕ್ತನ ವಿಮರ್ಶೆ ವಿಚಕ್ಷಣ ಪ್ರಶಸ್ತಿ ಪ್ರದಾನ ಮಾಡಿದರು. ಕೇಂದ್ರ ಸರ್ಕಾರವು 1934ರಲ್ಲಿ ‘ಮಹಾಮಹೋಪಾಧ್ಯಾಯ  ಪ್ರಶಸ್ತಿ’ ನೀಡಿತು. ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಶಾಸನ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಇವರು 1936ರ ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು.
ಕೆಲವು ಕೃತಿಗಳು ಹೀಗಿವೆ.
1) ನೀತಿಮಂಜರಿ (ತಮಿಳಿನ ಕುರುಳ್ ಅನುವಾದ) 
2). ನಗೆಗಡಲು (ಹಾಸ್ಯಪ್ರಸಂಗಗಳ ಸಂಕಲನ) 
3) ಕಾವ್ಯಾವಲೋಕನ (ಸಂಪಾದನೆ) 
4) ಶಬ್ದಾನುಶಾಸನ (ಸಂಪಾದನೆ) 

5) ಭಾಷಾಭೂಷಣ (ಸಂಪಾದನೆ)  
6) ಕರ್ಣಾಟಕ ಕವಿಚರಿತೆ (೩ ಭಾಗಗಳು),
7) ಹಿಸ್ಟರಿ  ಆಫ್  ಕನ್ನಡ  ಲಿಟರೇಚರ್ (ಇಂಗ್ಲಿಷ್)
8) ಹಿಸ್ಟರಿ ಆಫ್  ಕನ್ನಡ  ಲ್ಯಾಂಗ್ವೇಜ್ (ಇಂಗ್ಲಿಷ್)
9) ಶಾಸನ ಪದ್ಯಮಂಜರಿ  ಇತ್ಯಾದಿ
ನೂರಾರು ಸಂಶೋಧನ ಲೇಖನಗಳು (ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟ)

ಆರ್. ನರಸಿಂಹಾಚಾರ್

(08 Apr 1860-06 Dec 1936)