About the Author

ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ. 

‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ  ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 

ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ಸಾಂಸ್ಕೃತಿಕ ವೇದಿಕೆ ತಿರುಕರಂಗದ ಸಂಸ್ಥಾಪಕರೂ ಆದ ಪಾಟೀಲರ ಮೂರು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ದೊರೆತಿದೆ. ಜೊತೆಗೆ, ಎದೆಗೆ ಎದೆ ಮಿಡಿತ ಕೃತಿಗೆ ಕರ್ನಾಟಕ ಸಾಹಿತ್ಯ ಪರಿಷತ್ತಿನ 2017ನೇ ಸಾಲಿನ ದತ್ತಿನಿಧಿ ಬಹುಮಾನ ಸಂದಿದೆ. ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ನೆಲೆಯ ಅಪ್ಪಟ ಸೃಜನಶೀಲ ದನಿಯಾಗಿ, ಅಧ್ಯಾಪಕ, ಲೇಖಕ, ರಂಗಸಂಘಟಕ, ನಾಟಕಗಾರರಾಗಿ ರಾಘವೇಂದ್ರ ಪಾಟೀಲ ಅವರು ಬಹುಮುಖ ಪ್ರತಿಭೆ. 

ರಾಘವೇಂದ್ರ ಪಾಟೀಲ

(16 Apr 1951)