ಗೈರ ಸಮಜೂತಿ

Author : ರಾಘವೇಂದ್ರ ಪಾಟೀಲ

₹ 458.00
Year of Publication: 2020
Published by: ಮನೋಹರ ಗ್ರಂಥಮಾಲಾ
Address: ಧಾರವಾಡ

Synopsys

’ತೇರು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕತೆಗಾರ ರಾಘವೇಂದ್ರ ಪಾಟೀಲರ ಕಾದಂಬರಿ 'ಗೈರ ಸಮಜೂತಿʼ. ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ಈ ಕಾದಂಬರಿ ಇವತ್ತಿನ ಸಮಾಜ ಕಟ್ಟಿಕೊಂಡಿರುವ ತಪ್ಪುಕಲ್ಪನೆಗಳನ್ನು ಎತ್ತಿ ತೋರಿಸುತ್ತದೆ. ತಮ್ಮ ಅನುಭವಗಳ ಮೂಸೆಯಲ್ಲಿ ಈ ಕಾದಂಬರಿಯನ್ನು ಹೊಸೆದಿರುವ ಲೇಖಕರು, ತಪ್ಪು ಕಲ್ಪನೆಗಳಿಂದಾಗಿ ಸಮಾಜದಲ್ಲಿ ಘಟಿಸುವ ಹಲವು ಅನ್ಯಾಯಗಳ ಕುರಿತು ಈ ಕೃತಿಯಲ್ಲಿ ಹೊಸ ದೃಷ್ಟಿಕೋನ ನೀಡಿದ್ದಾರೆ.

About the Author

ರಾಘವೇಂದ್ರ ಪಾಟೀಲ
(16 April 1951)

ಕನ್ನಡದ ಸೃಜನಶೀಲ ಬರಹಗಾರ ರಾಘವೇಂದ್ರ ಪಾಟೀಲರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನವರು. ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಅಧ್ಯಾಪಕ, ಪ್ರಾಂಶುಪಾಲರಾಗಿಯೂ ದುಡಿದವರು. ಬಾಲ್ಯದಿಂದಲೂ ಬರೆಹದ ತುಡಿತವಿದ್ದ ಅವರು ಕಥಾರಚನೆಯಿಂದ ಕಾದಂಬರಿ, ಪ್ರವಾಸಸಾಹಿತ್ಯ, ವಿಮರ್ಶೆ ಇನ್ನಿತರ ಪ್ರಕಾರಗಳತ್ತ ವಿಸ್ತಾರಗೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ.  ‘ಒಡಪುಗಳು, ಪ್ರತಿಮೆಗಳು, ಮಾಯಿಯ ಮುಖಗಳು, ದೇಸಗತಿ’ ಅವರ ಕತಾ ಸಂಕಲನಗಳಾದರೆ ‘ಬಾಳವ್ವನ ಕನಸುಗಳು, ತೇರು’ ಕಾದಂಬರಿಗಳು. ಜೊತೆಗೆ ಆನಂದಕಂದರ ಬದುಕು-ಬರಹ, ವಾಗ್ವಾದ ಅವರ ವಿಮರ್ಶಾಕೃತಿಗಳು. ಕಥೆಯ ಹುಚ್ಚಿನ ಕರಿಟೊಪಿಗಿಯರಾಯ, ತುದಿಯೆಂಬ ತುದಿಯಿಲ್ಲ ಪಾಟೀಲರ  ನಾಟಕಗಳು, ಇವರ ತೇರು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.  ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ...

READ MORE

Reviews

ಗೈರ ಸಮಜೂತಿ ಕೃತಿಯ ವಿಮರ್ಶೆ

'ಒಡಪುಗಳು', 'ಪ್ರತಿಮೆಗಳು', 'ದೇಸಗತಿ', 'ಮಾಯಿಯ ಮುಖಗಳು', 'ತೇರು' ಕೃತಿಗಳ ಮೂಲಕ ಕಥನ ಕ್ರಿಯೆಯ ಹೊಸ ಸಾಧ್ಯತೆಗಳನ್ನು ತೋರಿದ ರಾಘವೇಂದ್ರ ಗೈರ ಸಮಸೂತಿ ಪಾಟೀಲ ಕನ್ನಡ ಕಥನ ಸಾಹಿತ್ಯದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಈಗ ಅವರ ಹೊಸ ಕಾದಂಬರಿ 'ಗೈರ ಸಮಜೂತಿ' ಬಂದಿದೆ. ಅವರ ಕೃತಿಗಳ ವಸ್ತು, ಅವು ನಿರೂಪಿಸ ಬಯಸುವ ಬದುಕು, ಅಲ್ಲಿನ ಪಾತ್ರಗಳ ವೈವಿಧ್ಯತೆ... ಇವು ಯಾವೂ ಕೂಡ ಪಾಟೀಲರ ವಿಶಿಷ್ಟ ಕಥನ ಕ್ರಮವನ್ನು ನಿರ್ಲಕ್ಷಿಸಲು ಬಿಡುವುದಿಲ್ಲ. ಈ 'ಗೈರ ಸಮಜೂತಿ' ಕಾದಂಬರಿಯಲ್ಲೂ ಅವರು ಕಥನದ ಮತ್ತೊಂದು ಮಗ್ಗುಲನ್ನು ತಲುಪಲು ಯತ್ನಿಸಿದ್ದಾರೆ. 

ಸ್ವಾತಂತ್ರ್ಯ ಪೂರ್ವ ಕಾಲದ ಬದುಕಿನಿಂದ ಆರಂಭವಾಗುವ ಈ ಕಾದಂಬರಿಯ ವಸ್ತು ಈ ಹೊತ್ತಿನ ವರ್ತಮಾನದವರೆಗೂ ಚಾಚಿಕೊಳ್ಳುತ್ತದೆ. ಮೂರು ತಲೆಮಾರುಗಳ ಈ ಕಥನ ಬೆಟಗೇರಿ, ಐನಾಪುರದ ಎರಡು ಬ್ರಾಹ್ಮಣ ಕುಟುಂಬಗಳ ಅಥವಾ ಶಾಮರಾಯ, ಸತ್ಯಭೋಧ, ಅಚ್ಯುತ, ರಾಘಣ್ಣ, ವಚ್ಚಕ್ಕ, ರಾಧಜ್ಜಿ, ಕುಮಾರಿಲನಾಥನ ಕತೆಯಷ್ಟೇ ಆಗದೆ ಭಾರತದ ಸ್ವಾತಂತ್ರ್ಯ ಹೋರಾಟ, ಗಾಂಧೀಜಿಯ ಸತ್ಯಾನ್ವೇಷಣೆ, ವಿಧವಾ ಸಮಸ್ಯೆಗಳ ಮೂಲಕ ಈ ಕಾದಂಬರಿ ಹಲವು ಭಾವತಂತುಗಳನ್ನು ಮೀಟುತ್ತದೆ. ಧಾರ್ಮಿಕ, ರಾಜಕೀಯ ಜಿಜ್ಞಾಸೆಗಳನ್ನು ನಡೆಸುತ್ತ ಭಾರತದ ಸಂಸ್ಕೃತಿ, ಅದರ ಸೌಹಾರ್ದದ ನೆಲೆಗಳನ್ನು ಶೋಧಿಸಲು ಯತ್ನಿಸುತ್ತದೆ.

ಆಡುನುಡಿಯಲ್ಲಿ ಇಂತಹದೊಂದು ದೀರ್ಘ ಕಾದಂಬರಿ ಬರೆಯುವುದು ಬಲು ಪ್ರಯಾಸದ ಕ್ರಿಯೆ. ಎಲ್ಲೂ ಅಸಹಜ ಅನ್ನಿಸದಂತೆ, ಗೋಕಾಂವಿ ಭಾಷೆಯ ಸೊಗಡು ತಟಗೂ ಮುಕ್ಕಾಗದಂತೆ ಒಂದು ಲಯದೊಳಗಡೆ ಇಡೀ ಕಾದಂಬರಿಯ ನೇಯ್ಕೆ ಇದೆ. ಓದುತ್ತಾ ಹಳ್ಳಿಯ ಯಾವುದೋ ಒಂದು ಓಣಿಯಲ್ಲಿ ತಿರುಗಾಡಿದಂತೆ, ಆ ಪಾತ್ರಗಳ ಜೊತೆ ನಾವು ಜೀವಿಸುತ್ತಿರುವಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಇಲ್ಲಿನ ಭಾಷೆ ಜೀವಂತಿಕೆಯನ್ನು ಚಿಮ್ಮಿಸುತ್ತದೆ.

'ಗೈರ ಸಮಜೂತಿ' ಎಂದರೆ ತಪ್ಪು ಕಲ್ಪನೆ ಎಂದರ್ಥ. ಬ್ರಿಟಿಷ್ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡು ತಲೆ ಮರೆಸಿಕೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ, ತನ್ನ ಚಿಕ್ಕಪ್ಪ ಕೃಷ್ಣಾಜಿಯನ್ನು ಅಚ್ಯುತ ಹೋಲುತ್ತಿದ್ದ. ಅವನನ್ನು ಬಂಧಿಸಲಾಗದಿದ್ದಲ್ಲಿ ಗುಂಡಿಕ್ಕಿ ಕೊಲ್ಲುವ ಆದೇಶವಿತ್ತು. ಅಚ್ಯುತನನ್ನೇ ಕೃಷ್ಣಾಜಿಯೆಂದು ಭಾವಿಸಿ ಕೊಲ್ಲಲಾಯಿತು. ಈ 'ಗೈರ ಸಮಜೂತಿ'ಯಿಂದಾಗಿ ಬಾಲ್ಯವಿವಾಹವಾಗಿದ್ದ ವಚ್ಚಕ್ಕ ವಿಧವೆಯಾಗುತ್ತಾಳೆ. ಬ್ರಾಹ್ಮಣ ಪರಿಸರದ ವೈಧವ್ಯದ ಪಡಿಪಾಟಲುಗಳನ್ನು ದಾಟಿಕೊಂಡು ವಚ್ಚಕ್ಕೆ ಸಂಸ್ಕೃತ ಕಲಿಯುತ್ತ, ಕಠೋಪನಿಷತ್‌ನ್ನು ಬದುಕಿನಲ್ಲಿ ಅಳವಡಿಸಿಕೊಂಡು ಓಂಕಾರದ ವಚ್ಚಕ್ಕೆ ಗೌಡತಿಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಮದುವೆಯೊಂದೇ ಅಂತಿಮವಲ್ಲ; ಬದುಕು ಬಹು ದೊಡ್ಡದು. ಬದುಕಿನ ದಿನಚರಿಗೆ ಮುಖಾಮುಖಿಯಾಗುತ್ತ ಆದರ್ಶದ ಬಾಳನ್ನು ಕಟ್ಟಿಕೊಳ್ಳುವದು ಮುಖ್ಯವೆಂದು ತೋರ್ಪಡಿಸುತ್ತಲೆ ವಚ್ಚಕ್ಕನ ದಿಟ್ಟ ಬದುಕನ್ನು ಲೇಖಕ ಪಾಟೀಲರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಸಂಭವಿಸುವ 'ಗೈರ ಸಮಜೂತಿ'ಗಳು ಆ ವ್ಯಕ್ತಿಯ ಬಾಳಿನಲ್ಲಷ್ಟೇ ತಾಪತ್ರಯ ತಂದೊಡ್ಡಬಹುದು. ಆದರೆ, ಪಭುತ್ವ ಎಸಗುವ ತಪ್ಪು ಕಲ್ಪನೆಗಳು ಸಮಾಜೋ- ರಾಜಕೀಯ ವಿಪ್ಲವಗಳಿಗೆ ಕಾರಣವಾಗುತ್ತವೆ. ಅಂತಹ ಹತ್ತಾರು 'ಗೈರ ಸಮಜೂತಿ'ಗಳನ್ನು ಈ ಕಾದಂಬರಿಯುದ್ದಕ್ಕೂ ಕಾಣುತ್ತೇವೆ. ಕೌಟುಂಬಿಕ, ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ವಲಯದೊಳಗಡೆ ಜರುಗುವ ಗೈರ ಸಮಜೂತಿಗಳು ಹೇಗೆ ಸಾಮಾಜಿಕವಾಗಿ ಪ್ರಕ್ಷುಬ್ದತೆಯನ್ನು ಉಂಟುಮಾಡುತ್ತವೆ ಎನ್ನುವುದನ್ನು ಕಾದಂಬರಿ ಮನಗಾಣಿಸುತ್ತದೆ. ಇಲ್ಲಿ 'ಗೈರ ಸಮಜೂತಿ' ಒಂದು ರೂಪಕ, ತಂತ್ರದಂತೆ ಬಳಕೆಯಾಗಿದೆ.

ಮುಸ್ಲಿಂ ಮಹಿಳೆಯೊಬ್ಬಳು ಹೆರಿಗೆ ಬೇನೆ ತಿನ್ನುತ್ತ ತೊಂದರೆ ಅನುಭವಿಸುತ್ತಿರುವಾಗ ಆ ಹೆರಿಗೆ ಮಾಡಿಸಲು ಸಹಾಯ ಕೋರಿ ವಚಕ್ಕನನ್ನು ಕೇಳಲು ಹುಸೇನಬೀ ಶಾಮರಾಯರ ಮನೆಗೆ ಬರುವ ದೃಶ್ಯ ಮನ ಕಲಕುವಂತಿದೆ. ಮತಾಂಧತೆ ಎನ್ನುವುದು ಅದೆಷ್ಟು ಕಠೋರವಾಗಿರುತ್ತದೆ, ಕತ್ತಿಯ ಅಂಚಿನ ಹಾಗೆ ಹರಿತವಾಗಿರುತ್ತದೆ ಎಂಬುದನ್ನೂ ಪಾಟೀಲರು ಇಲ್ಲಿ ಚಿತ್ರಿಸಿದ್ದಾರೆ. ಹುಸೇನಬೀ ಬಂದಾಗ ಮಾಧವ ರೌಸಿನಿಂದ ಚೀರಾಡಲು ಶುರು ಮಾಡುತ್ತಾನೆ: 'ಯಾವ ಓಂಕಾರದ ಗೋಡತೇನೂ ಬರೂದುಲ್ಲಾ... ಯಾರೂ ಬರೂದುಲ್ಲಾ..! ನಡೀರಿ... ಹೋಗರಿ ಅಲ್ಲಿಗೇ... ಅದ ನಿಮ್ಮ ಪಾಕಿಸ್ತಾನ ಐತೆಲಾ.. ಅಲ್ಲಿಗೇ ಹೋಗರೀ..'

- ಹುಸನಬೀ ಎರಡೂ ಕೈ ಜೋಡಿಸಿ ಅಂದಳು. 'ನಮಗ ಯಾವ ಪಾಕಿಸ್ತಾನನೂ ಗೊಂತಿಲ್ಲ ಯಪ್ಪಾ, ದುಡಕೊಂಡು ತಿನ್ನಾವರ ನಾವಾ.. ನಮಗ ಗೊಂತಿರೂದು ಇದ ಬೆಟಗೇರೀ ಮತ್ತ ಖಬರಸ್ತಾನಾ ಎಡ್ಡ. ಇವನ್ನ ಬಿಟ್ಟರ ನಮಗ ಯಾವದೂ ಗೊಂತಿಲ್ಲ ತಂದೆ.”

ಕೊನೆಗೆ ಮಾಧವನ ಮಾತನ್ನು ಅಲಕ್ಷಿಸಿ ವಚ್ಚಕ್ಕೆ ಹೆರಿಗೆ ಮಾಡಿಸಲು ತೆರಳುತ್ತಾಳೆ. ಜಾತಿ, ಮತದ ಹೊಟ್ಟು ಗಾಳಿಗೆ ತೂರಿ ಮುಂದೆ ಸಾಗುವ ಮಜ್ಜನ ಮಾನವೀಯತೆಗೆ ಗೆಲುವಾಗುತ್ತದೆ

ಭಾರತದ ಸಾಮಾಜಿಕ, ಧಾರ್ಮಿಕ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿಯಲ್ಲಿಯೇ ಉತ್ತರಗಳಿವೆ ಎಂಬುದನ್ನು ಸೂಚ್ಯವಾಗಿ ಕಾದಂಬರಿ ಪ್ರಕಟಿಸಲು ಪ್ರಯತ್ನಿಸುತ್ತಿರುವಂತಿದೆ. ಇದು ಈ ಹೊತ್ತಿನ ಹಿಂದೂ - ಮುಸ್ಲಿಂ ಸಮುದಾಯಗಳ ಮೂಲಭೂತವಾದ ತಂದೊಡ್ಡಿದ ಸಮಸ್ಯೆಯವರೆಗೂ ಮಾತಾಡುತ್ತದೆ. 'ನಾವು' ಮತ್ತು 'ಅವರು' ಎನ್ನುವ ಭಿನ್ನತೆ ಹುಟ್ಟಿಕೊಂಡದ್ದು ರಾಜಕೀಯ ದುರುದ್ದೇಶದಿಂದ ಎಂಬುದು ಸ್ಪಷ್ಟವಾಗಿದ್ದರೂ ಕೆಲ 'ಗೈರ ಸಮಜೂತಿ'ಗಳಿಂದಾಗಿ ಇಂಡಿಯಾದ ಮನಸ್ಸುಗಳಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಲೇ ಇದೆ. ಇದು ಶಮನವಾಗುವುದು ಎರಡೂ ಕಡೆಯ ಮೂಲಭೂತವಾದಕ್ಕೆ ಬೇಕಾಗಿಲ್ಲ ಎಂದು ಸೂಚಿಸುತ್ತಾ ಲೇಖಕರು ಈ ಭಿನ್ನ ಸಂಸ್ಕೃತಿಗಳನ್ನು ಚಿತ್ರಿಸುವಾಗ ಮತ್ತೊಂದು ಸಂಸ್ಕೃತಿಯ ಬಗೆಗೆ ಮೆಲುವಾಗಿ ಮಾತಾಡಿದರೂ ಅಲ್ಲೊಂದು ಅಸ್ಪಷ್ಟತೆಯ ಗೆರೆ ಕೊರೆದುಕೊಂಡು ಹೋಗುತ್ತದೆ.

ತಮ್ಮ ಅನುಬಂಧಧ ಮಾತುಗಳಲ್ಲಿ ಓ.ಎಲ್. ನಾಗಭೂಷಣಸ್ವಾಮಿ ಅವರು ಗುರುತಿಸುವಂತೆ ಮನುಷ್ಯ ಪ್ರೀತಿ, ಕಾರುಣ್ಯಗಳ ದಾರಿ "ನಿಜ' ಸನಾತನ ಮಾತ್ರವೇ? ಹೌದಾದರೂ ಅದರ ಪ್ರತಿನಿಧಿಯಾಗಿರುವ ವಚಕ್ಕನಿಗೆ ಜೊತೆಯಾಗಿ ನಿಸರ್ಗವೂ ಹಕ್ಕಿ ಪಕ್ಷಿಗಳೂ ಒದಗಿಬರುವುದು ಸುಂದರ, ಅಪೇಕ್ಷಣಿಯ ಸ್ವಪ್ನವಾಗಿದ್ದರೂ ಮಾಧವ ಪ್ರತಿನಿಧಿಸುವ ಉಗ್ರ ಧಾರ್ಮಿಕತೆಯೇ ನಿಜವೆನಿಸಿಬಿಡುವ ಅಪಾಯವಿದೆ...

ಈ ಮಾತು ಖರೆ. ಈ ಕಾದಂಬರಿಯ ಪಾತ್ರಗಳಾದ ಆದರ್ಶದ ಹಾದಿ ತುಳಿದ ವಚ್ಚಕ್ಕೆ, ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಾಜಿ ಮತ್ತು ಮತಾಂಧನಂತಿರುವ ಮಾಧವ ಒಂದೇ ಕುಟುಂಬದಿಂದ ಬಂದವರು. ಆದರೆ ಎಲ್ಲರದೂ ಭಿನ್ನ ವ್ಯಕ್ತಿತ್ವ ಮತ್ತು ಭಿನ್ನ 'ಸಂಸ್ಕಾರ'. ಈ ವಿಭಿನ್ನತೆ ಬರೀ ಈ ಕುಟುಂಬದಲ್ಲಷ್ಟೇ ಅಲ್ಲ, ಎಲ್ಲ ಭಾರತೀಯ ಧರ್ಮಗಳ ಬಹುತೇಕ ಕುಟುಂಬಗಳ ಕತೆಯೂ ಹೀಗೆಯೇ ಇರುತ್ತದೆ. ಈ ಕಾದಂಬರಿ ಹೊರಡಿಸಲು ಪ್ರಯತ್ನಿಸುವ ಆದರ್ಶ ಮಾರ್ಗದ ಧ್ವನಿ ಹಲವು ತರಂಗಗಳಲ್ಲಿ ಕೇಳಿಸಿ ಗೊಂದಲ ಮೂಡಿಸುತ್ತದೆ. ಸಂಸ್ಕೃತ ಕಲಿತು, ಕಠೋಪನಿಷತ್ತು ಅಳವಡಿಸಿಕೊಂಡವರಷ್ಟೇ ಆದರ್ಶದ ದಾರಿಯಲ್ಲಿ ಸಾಗುತ್ತಾರೆ. ಭಾರತೀಯ ಅಧ್ಯಾತ್ಮಿಕ ಪರಂಪರೆ ಹಾಗೂ ಸನಾತನೆಗಳಲ್ಲಿಯೇ ಔನ್ಯತ್ಯ ಅಡಗಿದೆ ಎಂಬರ್ಥ ಇಲ್ಲಿ ಧ್ವನಿಸಿದಂತಾಗುತ್ತದೆ. ಧರ್ಮ ಮತ್ತು ರಾಜಕಾರಣದ ಬಗೆಗೆ ಕೃತಿಯಲ್ಲಿ ನಡೆಯುವ ಜಿಜ್ಞಾಸೆ ತಿಳಿಗೊಳ್ಳದೆ ಓದುಗನೊಳಗೆ ಹಲವು ಜಟಿಲ ಪ್ರಶ್ನೆಗಳ ಅಲೆ ಎಬ್ಬಿಸಿ ಈ ಕಾದಂಬರಿ ಮುನ್ನಡೆಯುತ್ತದೆ.

(ಕೃಪೆ: ಹೊಸ ಮನುಷ್ಯ ಡಿಸೆಂಬರ್ 2021, ಬರಹ- ಟಿ.ಎಸ್‌.ಗೊರವರ)

Related Books