About the Author

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ಇಂಡಸ್ಟ್ರಿಯಲ್ ಸೈಕಾಲಜಿ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ನೇಮಕಗೊಂಡರು.ಸಿಂಹಳದ ಬೌದ್ಧ ಬಿಕ್ಕುವಿನಿಂದ ಪಾಲಿ ಭಾಷೆಯ ಆಧ್ಯಯನ ಮಾಡಿದರು. ಜೈನ-ಬೌದ್ಧ ಧರ್ಮದ ಆಳ ಅಧ್ಯಯನ ಅವರಿಗಿತ್ತು. 

ದಿ. ಡೆವೆಲಪ್ ಮೆಂಟ್ ಆಫ್ ಸೈಕಾಲಜಿಕಲ್ ಥಾಟ್ ಇನ್ ಇಂಡಿಯಾ ಕೃತಿ ರಚಿಸಿದ್ದಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಸ್ಥೆಯ ಡಿಪಾರ್ಟ್ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾದರು. ಮನಶಾಸ್ತ್ರ, ತತ್ವಶಾಸ್ತ್ರ, ಭಾರತೀಯ ದರ್ಶನ ಶಾಸ್ತ್ರಗಳಲ್ಲಿ ಆಳವಾದ ವಿದ್ವತ್ ಹೊಂದಿದ್ದು, ಹಲವಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಸಂಸ್ಥೆಯ ಸೀನಿಯರ ಅಸೋಸಿಯೇಟ್ ಆಗಿದ್ದರು. ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ ಮತ್ತು ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿದ್ದರು. 

ಕೃತಿಗಳು: ಕನ್ನಡದಲ್ಲಿ ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು 90ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.  ಸಂಸ್ಕೃತದಲ್ಲಿ ‘ಪೌರವ ದಿಗ್ವಿಜಯ ಕೃತಿ, ಬುದ್ಧ ಘೋಶನ ಕುರಿತಾದ ‘ವಿಶುದ್ಧಿಮಗ್ಗಭಾವಿನಿ’ ಗ್ರಂಥ, ಪಾಲಿಯ ‘ಸುಮಂಗಲ-ಗಾಥಾ’ ಬಗೆಗಿನ ವಿಶ್ಲೇಷಣಾತ್ಮಕ ಬರಹವು 1957ರ ವರ್ಷದಲ್ಲಿ ಪ್ರಖ್ಯಾತ ಪ್ರಕಟಣೆಯಾದ ‘ದಿ ಲೈಟ್ ಆಫ್ ಧಮ್ಮಾ’ ದಲ್ಲಿ ಪ್ರಕಟಗೊಂಡಿತ್ತು. ಅಭಿನವ ಗುಪ್ತ, ಆದಿಕವಿ ವಾಲ್ಮೀಕಿ, ಭರತಮುನಿಯ ನಾಟ್ಯಶಾಸ್ತ್ರ, ಭಾರತದ ದೇವಾಲಯಗಳ ಜಾನಪದ ಮೂಲ, ಬೋಧಿ ಧರ್ಮ, ಬೋಧಿಯ ಬೆಳಕಿನಲ್ಲಿ,, ಗೊಮ್ಮಟೇಶ್ವರ,, ಕನ್ನಡ ನಾಡಿನ ಧಾರ್ಮಿಕ ಪರಂಪರೆ, ಕನ್ನಡ ನಾಡಿನಲ್ಲಿ ಆಯುರ್ವೇದ, ಕನಕದಾಸರು, ಮಹಾಕವಿ ಅಶ್ವಘೋಶ, ಶ್ರೀ ಪುರಂದರ ದಾಸರು, ದಂಡಿಯ ಅವಂತಿ ಸುಂದರೀ, ವೇದದಲ್ಲಿನ ಕಥೆಗಳು ಹೀಗೆ ಅಸಂಖ್ಯೆ ಕೃತಿಗಳು ರಚಿಸಿದ್ದಾರೆ.   

ಪ್ರಶಸ್ತಿಗಳು: ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರಿಗೆ 1986ರ ವರ್ಷದ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಮುಂಬೈನ ಸ್ವಾಮಿ ಗಂಗೇಶ್ವರಾನಂದಜೀ ಟ್ರಸ್ಟ್ ನಿಂದ ‘ವೇದರತ್ನ’ ಗೌರವ, ನಿಡುಮಾಮಿಡಿ ಶ್ರೀಶೈಲ ಮಠ ‘ವಿದ್ಯಾಲಂಕಾರ’, ತಿರುಪತಿಯ ರಾಷ್ಟೀಯ ಸಂಸ್ಕೃತ ವಿದ್ಯಾಪೀಠ ‘ವಾಚಸ್ಪತಿ’, ಗಾಯನ ಸಮಾಜ ‘ಸಂಗೀತ ಕಲಾ ರತ್ನ’ ಉಜ್ಜೈನಿಯ ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನವು ಅವರಿಗೆ (2000) ಪ್ರತಿಷ್ಟಿತ ಪ್ರಶಸ್ತಿ ಸಲ್ಲಿಸಿದೆ. ಅವರು 02-02-2006ರಂದು ನಿಧನರಾದರು.

ಸಾ. ಕೃ. ರಾಮಚಂದ್ರರಾವ್

(04 Sep 1927-02 Feb 2006)