About the Author

ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು.

ಕರ್ನಾಟಕ ವಿ.ವಿ ಹಾಗೂ ಗುಲಬರ್ಗಾ ವಿ.ವಿ. ವ್ಯಾಪ್ತಿಯ ಕಾಲೇಜುಗಳ ಪ್ರಾಚಾರ್ಯರು, ಆಡಳಿತ ಮಂಡಳಿಯ ಕಾರ್ಯದರ್ಶಿ, ಧಾರವಾಡದ ಸಿತಾರ ರತ್ನ ರಹೀಮ್ ಖಾನ್ ಸಮಿತಿ ಅಧ್ಯಕ್ಷರು, ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷರು, ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಟ್ರಸ್ಟ್ ಸದಸ್ಯರಾಗಿದ್ದರು.  

ಅನುವಾದಿತ ಕೃತಿಗಳು: ವಾಣಿಜ್ಯ ಮತ್ತು ಬ್ಯಾಂಕಿಂಗ್, ರೊಮಿಲಾ ಥಾಪಸ್, ಭೀಮಸೇನ ಜೋಶಿ, ರಾಬರ್ಟ್ ಸಿವೆಲ್, ಮಿಥಿಲೆಯನ್ನಾಳಿದ ಕರ್ನಾಟರು, ಹಿಮಾಚಲವನ್ನಾಳಿದ ಸೇನರು, ವಿಜಯನಗರದ ಆರಂಭಿಕ ಇತಿಹಾಸ, ಸಾವಿಗೆ ಆಹ್ವಾನ . 

ಸಂಪಾದಿತ ಕೃತಿಗಳು: ಲಕ್ಷ್ಮೇಶ್ವರದ ಇತಿಹಾಸದ ‘ಪುಲಿಗೆರೆ’, ವೀರಶೈವ ಸಾಹಿತ್ಯ ಸಮೀಕ್ಷೆ, ಪ್ರೊ. ಸ.ಸ. ಮಾಳವಾಡರ ‘ವ್ಯಾಸಂಗ’, ಡಾ. ಎಂ.ಎಂ. ಕಲಬುರ್ಗಿ ಅವರ ‘ಮಹಾಮಾರ್ಗ’. ಜೀವನಚರಿತ್ರೆಗಳು: ದೇಶಭಕ್ತ ಕೌಜಲಗಿ ಶ್ರೀನಿವಾಸರಾಯರು, ನಾಟಕ ಸಾರ್ವಭೌಮ, ಶಿರಹಟ್ಟಿ ವೆಂಕೋಬರಾಯರು, ನಾಟಕರತ್ನ ಗುಬ್ಬಿ ವೀರಣ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಮಲ್ಲಿಕಾರ್ಜುನ ಮನಸೂರ, ಸವಾಯಿ ಗಂಧರ್ವ, ಹುಕ್ಕೇರಿ ಬಾಳಪ್ಪ, ಕರ್ನಾಟಕದ ಹಿಂದೂಸ್ಥಾನಿ ಸಂಗೀತಗಾರರು. ಕ್ರೀಡೆ-ಒಲಿಂಪಿಕ್ಸ್ ನಡೆದು ಬಂದ ದಾರಿ ಮತ್ತು ಪರಿಸರ ಕುರಿತ ಕೃತಿ ‘ಕಿತ್ತಿಕೋ ಹಚ್ಚಿಕೋ’ (ಕುಲವಳ್ಳಿ ಗುಡ್ಡದ ಭೂಹೀನರ ಹೋರಾಟ ಕುರಿತು)   ಪ್ರಕಟವಾಗಿವೆ. ಪತ್ರಿಕೆಗಳಿಗೆ, ವಿಶ್ವಕೋಶಕ್ಕೆ ಲೇಖನಗಳನ್ನು ಬರೆದಿದ್ದಾರೆ. ಇಂಗ್ಲಿಷ್ ಕೃತಿಗಳು: Quest for Justice, Mallikarjuna Manasur, Karnataka HImdustani Musicians, Eminent Lingayats ಮುಂತಾದವು. 

ಪ್ರಶಸ್ತಿ-ಗೌರವಗಳು: ನೃತ್ಯ ಅಕಾಡಮಿಯಿಂದ ಕಲಾವಿಮರ್ಶೆಗೆ ಪ್ರಶಸ್ತಿ, ರಾಣಿಬೆನ್ನೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಸೇರಿದಂತೆ ಹಲವು ಗೌರವ- ಪ್ರಶಸ್ತಿಗಳು ಸಂದಿವೆ. 

ಸದಾನಂದ ಕನವಳ್ಳಿ ಅವರು 2015ರ ಏಪ್ರಿಲ್ 3ರಂದು ನಿಧನರಾದರು. ಅವರು ತಮ್ಮ ದೇಹವನ್ನು ಎಸ್‌ಡಿಎಂ ಆಸ್ಪತ್ರೆಗೆ ದಾನ ಮಾಡಿದ್ದರು.

 

ಸದಾನಂದ ಕನವಳ್ಳಿ

(18 Sep 1935-03 Apr 2015)