About the Author

ಲೇಖಕಿ ಸತ್ಯವತಿ ರಾಮನಾಥ ಅವರು 1951ರಲ್ಲಿ, ಹಾಸನ ಜಿಲ್ಲೆಯ ಮರಿತಮ್ಮನ ಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣಪ್ಪ ಮತ್ತು ತಾಯಿ ಅನಂತಲಕ್ಷ್ಮಿ. 1970ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯ ದಿಂದ ಬಿ.ಎಸ್ಸಿ.ಪದವಿಯನ್ನೂ, 1974ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಥಮ ಶ್ರೇಣಿಯಲ್ಲಿ ಸಂಸ್ಕೃತ ಭಾಷೆಯ ಎಂ.ಎ. ಪದವಿಯನ್ನೂ ಗಳಿಸಿದರು. ಅವರು ಸಂಸ್ಕೃತ ಅಧ್ಯಾಪಕರಾಗಿ ಅನೇಕ ಮಹಾವಿದ್ಯಾಲಯಗಳಲ್ಲಿ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಕಾರ್ಯ ನಿರ್ವಹಿಸಿದ್ದಾರೆ. ಮೂರುದಶಕಗಳಿಂದಲೂ ಗಮಕ ಕಾವ್ಯವಾಚನಗಳಿಗೆ ವ್ಯಾಖ್ಯಾನ ನೀಡುವುದರ ಮೂಲಕ ಕನ್ನಡದ ವರಕವಿಗಳಾದ ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಕುವೆಂಪು ಮೊದಲಾದವರನ್ನು ಕೇಳುಗರಿಗೆ ಪರಿಚಯಿಸಿದ್ದಾರೆ. ಇವರ ಸಾವಿರಾರು ವ್ಯಾಖ್ಯಾನ ಕಾರ್ಯಕ್ರಮಗಳು ರಾಜ್ಯದ ಅನೇಕ ಕಡೆಗಳಲ್ಲಿ, ಮುಖ್ಯವಾಗಿ, ಬೆಂಗಳೂರು, ಮೈಸೂರು, ತುಮಕೂರು, ಕನಕಪುರ, ಹಾಸನ, ಚಿಕ್ಕಮಗಳೂರು ನಗರಗಳಲ್ಲಿ ನಡೆದಿವೆ. ಬೆಂಗಳೂರಿನ ಆರ್ಯ ಸಮಾಜದಲ್ಲಿ ಸುಮಾರು ಏಳು ವರ್ಷಗಳ ಕಾಲ ಮಹರ್ಷಿ ದಯಾನಂದ ಸರಸ್ವತಿಗಳ ಜೀವನ ಚರಿತ್ರೆಯ ಗಮಕ ವಾಚನಕ್ಕೆ ವ್ಯಾಖ್ಯಾನವನ್ನು ನೀಡಿದ್ದಾರೆ. ಕೃತಿಗಳು: 'ಭಾರತೀಯ ಹಬ್ಬಗಳು', 'ಸಂಸ್ಕೃತಿ ಸಿಂಚನ', 'ಮಹಿಳಾ ಸಾಧಕರು', 'ನಾರಿ ಅಂಕಣ' (ಹಿಂದಿ ಭಾಷೆಯಿಂದ ಅನುವಾದ), 'ಕುಮಾರವ್ಯಾಸ ಭಾರತದ ಆಯ್ದ ಸಂಧಿ ಗಳಿಗೆ ವ್ಯಾಖ್ಯಾನ ಬಂಧ', 'ದಿವ್ಯ ಸಸಿ ತುಳಸಿ', ಮತ್ತು 'ಪಾಶುಪತಾಸ್ತ್ರ ಪ್ರದಾನ ವ್ಯಾಖ್ಯಾನ ಬಂಧ (ಕುಮಾರವ್ಯಾಸ ಭಾರತದಿಂದ)', 'ಮಾನನೀಯ ದೌಪದಿ- ವ್ಯಾಖ್ಯಾನ ಬಂಧ (ಕುಮಾರವ್ಯಾಸ ಭಾರತದಿಂದ)'.

ಸತ್ಯವತಿ ರಾಮನಾಥ