About the Author

ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ಪಡೆದ ಅವರು, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನೂ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು. 

ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಅವರು, ನಂತರ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ಮತ್ತು ಫುಡ್ ಟೆಕ್ನಾಲಜಿಯ ವಿಭಾಗದಲ್ಲಿ ಆಹಾರ ವಿಜ್ಞಾನ ಶಾಖೆಯ ಪ್ರಮುಖ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ಆನಂತರ ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿದರು.

ನಿವೃತ್ತಿಯ ನಂತರ ಮುಂಬೈ ವಿಶ್ವವಿದ್ಯಾಲಯದಲ್ಲಿ ಜೀವರಸಾಯನ ಶಾಸ್ತ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಹಲವಾರು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಭಾಭಾ ಪರಮಾಣು ಕೇಂದ್ರದಲ್ಲಿದ್ದಾಗ ವ್ಯಾಸರಾವ್ ಅವರ 87 ಸಂಶೋಧನ ಪ್ರಬಂಧಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿತವಾಗಿವೆ. ಅಂತರಕೋಶೀಯ ಲೈಸೋಸೋಮ್ ಮತ್ತು ಲೈಸೋಸೋಮ್ ಕಿಣ್ವಗಳ ಬಗ್ಗೆ ಸಂಶೋಧನೆ ನಡೆಸಿದ ಅವರು, ಆಹಾರ ವಿಜ್ಞಾನ, ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ. ಆಹಾರ ಸಂರಕ್ಷಣೆಯಲ್ಲಿ ಗಾಮಾ ವಿಕಿರಣಗಳ ಬಳಕೆ, ಪ್ರೊಟೀನ್ ನ್ಯೂನತೆಯ ಪ್ರಭಾವ, ಮಾನವ ಫಲೀಕರಣದಲ್ಲಿ ಕಿಣ್ವಗಳ ಪಾತ್ರ ಮುಂತಾದ ವಿಷಯಗಳಲ್ಲಿ ವಿಶ್ವಮಾನ್ಯ ಸಂಶೋಧನೆಗಳನ್ನೂ ನಡೆಸಿದ್ದಾರೆ. ವಿಜ್ಞಾನಿಯಾಗಷ್ಟೇ ಅಲ್ಲದೆ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ವ್ಯಾಸರಾವ್ ಅವರು ಉಸಿರು, ಚಾಮುಂಡೇಶ್ವರಿ ಭವನ ಕಾದಂಬರಿಗಳು, ಹಾಗೇ ಕುಂಕುಮ, ಮಂಚ ಎಂಬ ಕಥಾಸಂಕಲನಗಳು, ನಲ್ವತ್ತರ ನಲುಗು ಎಂಬ ನಾಟಕ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ಅಲ್ಲದೇ ಮಕ್ಕಳಿಗಾಗಿ-ಹೋಯಿಭಾಭಾ ಕಥೆ ಬರೆದಿದ್ದು, ಇವರ ಹಲವಾರು ಕವಿತೆ, ಕಥೆ ಹಲವು  ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಜೊತೆಗೆ ಹಲವಾರು ಪತ್ರಿಕೆಗಳ ಸಂಪಾದಕತ್ವ. ಬುಲೆಟಿನ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ, ಇರ್ರೇಡಿಯೇಷನ್ ನ್ಯೂಸ್, ಬೆಳಗು, ಗೋಕುಲವಾಣಿ ಮುಂತಾದ ಪತ್ರಿಕೆಗಳ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ‘ಉಸಿರು’ ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ, ‘ಚಾಮುಂಡೇಶ್ವರಿ ಭವನ’ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹಾಗೂ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ವರ್ಧಮಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್, ಮೂಡಬಿದಿರೆ 71ನೇ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಶ್ರೀ’ ಪ್ರಶಸ್ತಿ. ಮಹಾರಾಷ್ಟ್ರದ 6ನೆಯ ಸಾಂಸ್ಕೃತಿಕ ಸಮಾವೇಶದಲ್ಲಿ ‘ಮಹಾರಾಷ್ಟ್ರದ ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಲಭಿಸಿವೆ.

ವ್ಯಾಸರಾವ್ ನಿಂಜೂರ್

(06 Oct 1940)