185 ಪುಟಗಳ ಕಾದಂಬರಿ ಓದಿದ ಅನುಭವ: ಈಗಲೂ ಕರ್ಣನ ಲೋಕದಲ್ಲಿ!


185 ಪುಟಗಳನ್ನು ಒಳಗೊಂಡಿರುವ ಈ ಕಾದಂಬರಿಯನ್ನು ಓದಿ ಮುಗಿಸಿದ ನಂತರ ನಾನು ಕರ್ಣನ ಪಾತ್ರದ ಗುಂಗಿನಲ್ಲೇ ಇದ್ದೆ. ಕೆಲವು ಸನ್ನಿವೇಷಗಳು, ಕೆಲವು ಪಾತ್ರಗಳು, ಸಂಭಾಷಣೆಗಳು ಅಬ್ಬಾ ಮರೆಯಲು ಸಾಧ್ಯವಿಲ್ಲ'. ಎನ್ನುತ್ತಾರೆ ಬರೆಹಗಾರ ಕಾರ್ತಿಕೇಯ. ಅವರು ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ ಅವರು ಬರೆದ, ಲೇಖಕ ಅಶೋಕ ನೀಲಗಾರ ಅನುವಾದಿಸಿದ 'ಮೃತ್ಯುಂಜಯ' ಕೃತಿಗೆ ಬರೆದ ಅನಿಸಿಕೆ...
  
ಕರ್ಣನ ಸಂದೇಶ - ಒಂದೇ ಸವನೆ ಗರಗರ ತಿರುಗುವ ದೈವದ ಪೆಟ್ಟುಗಳನ್ನು ಮಹಾನ್ ಸಂಯಮದಿಂದ ಸಹಿಸಿ ಕೊಳ್ಳುತ್ತಾ ಸ್ವಾಭಿಮಾನದಿಂದ ಪುರುಷಾರ್ಥದ ಬಾಳನ್ನು ಬಾಳುವುದಿರುತ್ತದೆ.

185 ಪುಟಗಳನ್ನು ಒಳಗೊಂಡಿರುವ ಈ ಕಾದಂಬರಿಯನ್ನು ಓದಿ ಮುಗಿಸಿದ ನಂತರ ನಾನು ಕರ್ಣನ ಪಾತ್ರದ ಗುಂಗಿನಲ್ಲೇ ಇದ್ದೆ. ಕೆಲವು ಸನ್ನಿವೇಷಗಳು, ಕೆಲವು ಪಾತ್ರಗಳು, ಸಂಭಾಷಣೆಗಳು ಅಬ್ಬಾ ಮರೆಯಲು ಸಾಧ್ಯವಿಲ್ಲ, ಮೊದಲಬಾರಿಗೆ ಈ ಪುಸ್ತಕದಲ್ಲಿ ಪುಟ ಪುಟದಲ್ಲೂ ಪೆನ್ಸಿಲಿನಲ್ಲಿ ಗುರುತು ಮಾಡಿದ್ದೇನೆ ಕಾರಣ ಲೇಖಕರು ಅಷ್ಟು ಸೊಗಸಾಗಿ ಬಳಸಿರುವ ಪದಗಳು, ವಾಕ್ಯಗಳು ಇಷ್ಟವಾಯಿತು. 9 ಅಧ್ಯಾಗಳನ್ನು ಒಳಗೊಂಡ ಈ ಕಾದಂಬರಿಯಲ್ಲಿ ಒಂದೊಂದು ಅಧ್ಯಾಯದಲ್ಲಿ ಒಂದೊಂದು ಮುಖ್ಯ ಪಾತ್ರಗಳು(ಕರ್ಣ, ಕುಂತಿ, ವೃಷಾಲಿ, ಶೋಣ, ದುರ್ಯೋಧನ, ಶ್ರೀಕೃಷ್ಣ) ಕರ್ಣನನ್ನು ಕುರಿತು ವಿವರಿಸುತ್ತದೆ. ಸ್ವತಃ ಕರ್ಣನೂ ಅವನ ಕಥೆಯನ್ನು ಹೇಳಿಕೊಳ್ಳುತ್ತಾನೆ.

ಇಡೀ ಜೀವನ ಸೂತಪುತ್ರನೆಂದು ಕರೆಸಿಕೊಳ್ಳುವುದೇ ಸವಾಲಾಗುತ್ತದೆ, ಸೂತಕುಲದಲ್ಲಿ ಜನ್ಮ ಪಡೆದಿರುವುದು ತನ್ನ ತಪ್ಪಲ್ಲ ಅದೆಲ್ಲಾ ದೈವೇಚ್ಚೆ, ಎಲ್ಲರಿಗೂ ತನ್ನಲ್ಲಿರುವ ಕವಚ ಕುಂಡಲಗಳ ಬಗ್ಗೆ ಕುತೂಹಲ ಹೆಚ್ಚು, ತನಗಿದ್ದ ಕುಂಡಲಗಳು ತನ್ನ ತಮ್ಮ ಶೋಣನಿಗೆ ಹಾಗು ಮಕ್ಕಳಿಗೆ ಏಕಿಲ್ಲಾ ಎಂಬ ಪ್ರಶ್ನೆಗೆ ಪತ್ನಿ ವೃಷಾಲಿ, ತಾಯಿ ರಾಧಮಾತೆ ಉತ್ತರ ಹೇಳಲಾಗುವುದಿಲ್ಲ, ತಾನು ಯಾರಿರಬಹುದು? ಇದೊಂದು ಉತ್ತರಿಸಲಾಗದ ಪ್ರಶ್ನೆ. ತನ್ನ ಜೀವನದಲ್ಲಿ ಪ್ರೀತಿ ತೋರಿಸಿದ ವ್ಯಕ್ತಿಗಳೆಂದರೆ ತಾಯಿ ರಾಧಾಮಾತೆ, ತಮ್ಮ ಶೋಣ, ಪಿತಾಮಹರು, ಮಿತ್ರ ದುರ್ಯೋಧನ, ಗುರುಪುತ್ರ ಅಶ್ವತ್ಥಾಮ. ಸೂತಪುತ್ರನೆಂದು ಗುರುದ್ರೋಣರು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಲ್ಲ, ಅವರಿಗೆ ಅರ್ಜುನನೇ ಅಚ್ಚುಮೆಚ್ಚು, ದ್ರೋಣರು ಶಿಷ್ಯನನ್ನಾಗಿ ಸ್ವೀಕರಿಸಿದಿದ್ದಾಗ ಸೂರ್ಯನನ್ನೇ ಗುರುವೆಂದು ಆಧರಿಸಿದ ಕರ್ಣನು ಸುತಪುತ್ರನಿಂದ ಹಿಡಿದು ಅಧಿರಥನು, ಮಹಾರಥನು, ಕುರುಸೇನಾಪತಿ, ದಾನವೀರ ಶೂರನಾಗಿ ಪ್ರಸಿದ್ಧ ಹೊಂದುತ್ತಾನೆ. 

ಇಡೀ ಕಾದಂಬರಿಯಲ್ಲಿ ಕರ್ಣನ ಜನ್ಮದಿಂದ ಹಿಡಿದು, ಮಿತ್ರ ದುರ್ಯೋಧನನಿಗೆ ಮಾತು ಕೊಟ್ಟಂತೆ ಪಾಂಡವರ ವಿರುದ್ಧ ಯುದ್ಧದಲ್ಲಿ ಹೋರಾಡುವವರೆಗೂ ತಿಳಿಯಬಹುದು. ಚಂಪಾನಗರದಲ್ಲಿದ್ದ ವಸುಸೇನನು ಬಾಲ್ಯವನ್ನು ಎಷ್ಟು ಆನಂದಿಂದ ಸಾಗಿಸುತ್ತಾನೆ, ಆದರೆ ಹಸ್ತಿನಾಪುರಕ್ಕೆ ಬಿಲ್ವಿದ್ಯೆಯನ್ನು ಕಲಿಯಲು ಬಂದಾಗ ಹಲವಾರು ಸವಾಲುಗಳನ್ನು ಎದರಿಸುತ್ತಾನೆ, ಅವಮಾನಕ್ಕೆ ಒಳಗಾಗುತ್ತಾನೆ, ಬೆಂಬಲವಾಗಿ ನಿಂತಿದ್ದು ದುರ್ಯೋಧನನು ಮಾತ್ರ, ಆತನ ದಾರಿ ಸರಿಯಿಲ್ಲದಿದ್ದರು ಆತನ ಪರವೇ ಹೋರಾಡುತ್ತಾನೆ, ಕೃಷ್ಣನನ್ನು ಕಂಡರೆ ಎಲ್ಲಿಲದ ಆತ್ಮೀಯತೆ, ಯುದ್ಧದ ಮುಂಚೆ ಕೃಷ್ಣನು ತನ್ನ ಜನ್ಮ ವೃತ್ತಾಂತವನ್ನು ತಿಳಿಸಿ ತಾನು ಮೊದಲನೆಯ ಕುಂತೀಸುತನು, ಪಾಂಡವರ ಪಕ್ಷಕ್ಕೆ ಸೇರಿ ಯುದ್ಧ ಮಾಡೆಂದು ಅವಕಾಶ ಕೊಟ್ಟಾಗ ನಿರಾಕರಿಸುತ್ತಾನೆ. ಇಷ್ಟು ವರ್ಷ ಎಷ್ಟು ಸಲ ಭೇಟಿಯಾದರೂ ತನ್ನ ಜನ್ಮ ವೃತ್ತಾಂತವನ್ನು ಕೃಷ್ಣನೂ ಹೇಳಲಿಲ್ಲ, ಹೆತ್ತ ತಾಯಿಯೂ ಹೇಳಲಿಲ್ಲ, ಸ್ವತಃ ಹೆತ್ತ ತಾಯಿ ಬಂದು ತನ್ನ ಮಕ್ಕಳನ್ನು ಕಾಪಾಡು ಎಂದು ಕಣ್ಣೀರು ಸುರಿಸಿದಾಗ,
ಯುದ್ಧದಲ್ಲಿ ಅರ್ಜುನನನ್ನು ಬಿಟ್ಟು ಉಳಿದ ಪಾಂಡವರನ್ನು ವಧಿಸುವುದಿಲ್ಲ, ತಾನು ಮರಣಿಸಿದರೂ ನಿನ್ನ ಐದು ಮಕ್ಕಳು ಸುರಕ್ಷಿತರಿರುತ್ತಾರೆಂದು ಜನ್ಮ ಕೊಟ್ಟ ತಾಯಿಗೆ ವಚನವನ್ನು ನೀಡುವ ಕರ್ಣನ ಗುಣವು ಇಷ್ಟವಾಗುತ್ತದೆ.

ತಾನು ದಾನವೀರ ಕರ್ಣನು, ದಿಗ್ವಿಜಯಿ, ಕುರುಸೇನಾಪತಿ, ಮಹಾರಥಿ, ವಾತ್ಸಲ್ಯಹೃದಯಿಯಾದರೂ ತಾನೂ ಸಹ ಕೆಲವು ತಪ್ಪು ಮಾಡಿರುವುದು ಅಂತಿಮಕಾಲದಲ್ಲಿ ಅರಿವಾಗುತ್ತದೆ. ಜೂಜಾಟದ ಸಮಯದಲ್ಲಿ ದ್ರೌಪದಿಗೆ ವರಾಂಗನೆ ಎಂದು ಅವಮಾನಿಸಿದಾಗ, ಪಾಂಡವರು ಬರಿಗಾಲಿನೊಂದಿಗೆ ವನವಾಸಕ್ಕೆ ಹೋಗುವುದನ್ನು ಕುಂತಿದೇವಿ ನೋಡಿದಾಗ, ಪಾಂಡವರು ಲಾಕ್ಷಾಗೃಹದಲ್ಲಿ ಭಸ್ಮರಾದರೆಂಬ ವಾರ್ತೆಯನ್ನು ಕೇಳಿದಾಗ, 16 ವರ್ಷದ ಹದಿಹರೆಯದ ಅಭಿಮನ್ಯುವನ್ನು ಆರು ಜನರು ಸೇರಿಸಿ ಯುದ್ಧದಲ್ಲಿ ಕೊಂದಾಗ ಹಾಗು ಅರ್ಜುನನು ಸ್ವಂತ ತಮ್ಮನೆಂದು ತಿಳಿದೂ ಅವನ ಜೊತೆ ಯುದ್ಧ ಮಾಡಿದಾಗ ತನ್ನ ಧರ್ಮವು ಏಕೆ ನೆನಪಾಗಲಿಲ್ಲ, ಆ ಕಾರಣದಿಂದಲೇ ಅಂತಿಮ ಸಮಯದಲ್ಲಿ ಎಲ್ಲರ ಶಾಪಗಳು ಒಂದೇ ಸಮಯಕ್ಕೆ ತಟ್ಟುತ್ತದೆ. ಪರಶುರಾಮರ ಶಾಪದಿಂದ ಬ್ರಹ್ಮಾಸ್ತ್ರವು ಮರೆತುಹೋಗುತ್ತದೆ, ಗೋಹತ್ಯೆಯ ಶಾಪದಿಂದ ರಥದ ಚಕ್ರವೂ ಭೂಮಿಯಲ್ಲಿ ಹೂತುಹೋಗುತ್ತದೆ.

ಕೊನೆ ಕೊನೆಯಲ್ಲಿ ಓದುತ್ತಾ ಓದುತ್ತಾ ದುಃಖವಾಗುತ್ತದೆ, ಯುದ್ಧದ ಮುಂಚೆ ಕುಂತಿ - ಕರ್ಣನ ಸಂಭಾಷಣೆಯಲ್ಲಿ ಅತ್ತ ತಾಯಿಯ ದುಃಖ, ಕರ್ಣನ ವೇದನೆ, ಲೋಕಕ್ಕೆ ತನ್ನ ಮೊದಲನೆಯ ಮಗನೆಂದು ಹೇಳಿಕೊಳ್ಳುವುದಕ್ಕೆ ಏನೆಲ್ಲಾ ಅಡ್ಡಿ ಬರುತ್ತದೆ, ಬರೀ ಜನ್ಮಕೊಟ್ಟರೆ ಸಾರ್ಥಕವಲ್ಲ, ಜನ್ಮಕೊಟ್ಟುಬಿಟ್ಟರೆ ತಾಯಿ ಎನಿಸಿಕೊಳ್ಳುವುದಿಲ್ಲ,ಮಕ್ಕಳನ್ನು ಪ್ರೀತಿಸಿ ಸರಿಯಾದ ಮಾರ್ಗದಲ್ಲಿ ಬೆಳಸುವವಳು ನಿಜವಾದ ತಾಯಿ ಆ ತಾಯಿಯ ಸ್ಥಾನ ರಾಧಾಮಾತೆಗಲ್ಲದೆ ಜನ್ಮಕೊಟ್ಟ ಕುಂತಿಗೂ ಕರ್ಣನು ಕೊಡುವುದಿಲ್ಲ. ತಾಯಿಯ ವಾತ್ಸಲ್ಯವು ವಿಶಾಲ ಸಾಗರವಿದ್ದಂತೆ, ತಾನು ಕರ್ಣನೇ ಆದರೂ ರಾಧಾಮಾತೆಗೆ ತಾನೆಂದೂ ವಸುಸೇನನೆ, ವಸೂ ವಸೂ ಎಂಬ ಕರೆಗೆ ಎಷ್ಟು ಆನಂದ ಬಾಷ್ಪಗಳನ್ನು ಸುರಿಸಿದ್ದನೋ ಆತನಿಗೇ ತಿಳಿಯದು. ಆದರೂ ತನಗೆ ಇಬ್ಬರು ತಾಯಂದಿರು, ತನ್ನನ್ನು ಇಬ್ಬರೂ ಹೆಚ್ಚು ಪ್ರೀತಿಸುವವರು ಇಂತಹ ಸೌಭಾಗ್ಯ ತನಗೆ ದೊರಕಿರುವುದು ಆನಂದವಾಗುತ್ತದೆ. ಇನ್ನು ತನ್ನ ಜೀವನವೂ ಹೂತುಹೋದ ರಥದ ಚಕ್ರದಂತೆ ಬಾಲ್ಯದಿಂದ ಹಿಡಿದು ತನ್ನನ್ನು ಯಾರೂ ಮೇಲೆತ್ತಲಿಲ್ಲ, ಸ್ವತಃ ತಾನೇ ಕಷ್ಟಪಟ್ಟು ಮೇಲೆಬಂದೆ, ಅರ್ಜುನನ ಬಾಣಗಳಿಗೆ ತುತ್ತಾಗಿ ಹೂತುಹೋದ ಚಕ್ರವನ್ನು ಮೇಲೆತ್ತಲು ತಾನೇ ಪ್ರಯತ್ನಪಡಬೇಕು ಆದರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ, ಮನಮೋಹನಾ ಹಣ್ಣಿನಲ್ಲಿ ಸಾಕಷ್ಟು ರಸವು ತುಂಬಿರುತ್ತದೆ, ಒಳಗೆ ಕೆಲವು ಬೀಜಗಳಿರುತ್ತವೆ, ರಸವು ತನ್ನನ್ನು ನಾಶಮಾಡಿಕೊಂಡು ಬೀಜಗಳನ್ನು ಪೋಷಿಸುತ್ತದೆ, ತಾನು ಆ ರಸದಂತೆಯೇ ಜೀವನವನ್ನು ಸಾಗಿಸಿದೆನು, ಇನ್ನು ತನ್ನ ಸಮಯವು ಮೀರಿದೆ, ಮನಸ್ಸು ದುಃಖಗಳಿಂದ, ಶಾಪಗಳಿಂದ ಭಾರವಾಗಿದೆ, ಈಗಲಾದರೂ ಲೋಕಕ್ಕೆ ಕುಂತಿದೇವಿಯು ತನ್ನನ್ನು ಮೊದಲನೆಯ ಮಗನೆಂದು ಸಾರಿ ಹೇಳಲು ಕೇಳಿಕೊಳ್ಳುವ ಪ್ರಸಂಗವು ಕಣ್ಣೀರು ತರಿಸುತ್ತದೆ.

ಮೃತ್ಯುಂಜಯ
ಲೇಖಕ : ಶಿವಾಜಿ ಸಾವಂತ
ಅನುವಾದಕರು: ಅಶೋಕ ನೀಲಗಾರ
ಪ್ರಕಾಶಕರು: ಅಮಿತ ಪ್ರಕಾಶನ
ಬೆಲೆ:185

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...