ಈ ಕವಿತೆಯಲ್ಲಿ ಕನ್ನಡ ನಾಡಿನ ಜನಜೀವನ, ಹಿರಿಮೆ-ಗರಿಮೆಯನ್ನು ಎತ್ತಿ ತೋರಿಸಿದ್ದಾರೆ. ತುಂಬಿ ಹರಿಯುವ ನದಿಗಳು,ಕಾಡು -ಮೇಡು ಹಾಗೂ ಸಂಸ್ಕೃತಿಯ ಹೆಗ್ಗಳಿಕೆಯನ್ನು ಹೇಳಿಕೊಟ್ಟಿದ್ದಾರೆ. ಎನ್ನುತ್ತಾರೆ ಮಕ್ಕಳ ಸಾಹಿತಿ ಪ. ಗು ಸಿದ್ದಾಪುರ. ಅವರು ಲೇಖಕ ವಿಶ್ವನಾಥ ಅರಬಿ ಬರೆದ 'ಭಾರತ ಮಾತೆಯ ಮಕ್ಕಳು ನಾವು' ಕೃತಿಗೆ ಬರೆದ ಮುನ್ನುಡಿ ಹೀಗಿದೆ....
'ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ' ಎನ್ನುವ ಹಾಗೆ ಸತಿಪತಿ ಜೊತೆಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು, ಸಾರಸ್ವತ ಲೋಕವೇ ಶ್ರೀಮಂತಗೊಳ್ಳುವುದರಲ್ಲಿ ಸಂದೇಹವಿಲ್ಲ. ಸಾರಸ್ವತ ಲೋಕದಲ್ಲಿ ಜೊತೆಜೊತೆಯಾಗಿ ಕೆಲಸ ಮಾಡಿದವರುಂಟು, ಅಂಥವರ ಸಾಲಿನಲ್ಲಿ ಶ್ರೀ ವಿಶ್ವನಾಥ ಅರಬಿ ಶ್ರೀಮತಿ ಸಂಗೀತಾ ಮಠಪತಿಯವರೂ ಸೇರಿರುವುದು ತುಂಬಾ ಸಂತಸ ತಂದಿದೆ. ಈಗಾಗಲೇ ಇವರು ಸ್ಪರ್ಧೆಯ ಮೇಲೆ ಹತ್ತೆಂಟು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಕಾವ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿ ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ.
ವಿಶ್ವನಾಥ ಅರಬಿಯವರು ವೃತ್ತಿಯಿಂದ ಗ್ರಾಮ ಆಡಳಿತ ಅಧಿಕಾರಿಯಾದರೂ ಪ್ರವೃತ್ತಿಯಿಂದ ಒಳ್ಳೆಯ ಯುವ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. 'ಭಾರತ ಮಾತೆಯ ಮಕ್ಕಳು ನಾವು' ಇದು ಇವರ ಹತ್ತನೆಯ ಕೃತಿಯಾಗಿ ಓದುಗರ ಕೈ ಸೇರಲಿದೆ ಮಕ್ಕಳಿಗಾಗಿ ಬರೆದ ಸಂಕಲನ ಇದಾಗಿದೆ. ಇದರಲ್ಲಿ 30 ಕವಿತೆಗಳಿದ್ದು ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ. ಮಕ್ಕಳ ಸಾಹಿತ್ಯ ಓದಲು ತುಂಬಾ ಸುಲಭ ಆದರೆ ಬರೆಯುವುದು ಅಷ್ಟೇ ಕಷ್ಟ. ಆಳವಾದ ಅಧ್ಯಯನದೊಂದಿಗೆ ಪರಕಾಯ ಪ್ರವೇಶ ಮಾಡಿ ಬರೆದರೆ ಆ ಕಥೆ, ಕವಿತೆ ಮಕ್ಕಳ ಮನಸೂರೆಗೊಳ್ಳುವುದರಲ್ಲಿ ಸಂದೇಹವಿಲ್ಲ. ಬಾಲ ಭಾಷೆಯಲ್ಲಿ ಬರೆದಾಗ ಆ ಕೃತಿಯನ್ನು ಅಬಾಲ ವೃದ್ಧರು ಮೆಚ್ಚಿ ಓದುತ್ತಾರೆ. ಅಂಥ ಪ್ರಯತ್ನವನ್ನು ವಿಶ್ವನಾಥ ಅವರು ಇಲ್ಲಿ ಅನಾವರಣಗೊಳಿಸಿದ್ದಾರೆ. ಅವರು ಚೊಚ್ಚಲು ಸುಪುತ್ರನ ಬಾಲ ಲೀಲೆಯನ್ನೇ ಹಂಚಿಕೊಂಡಿದ್ದಾರೆ. ಸುಪುತ್ರನ ಕೊಡುಗೆಯೇ ಈ ಕೃತಿಯೆಂದು ಹೇಳಬಹುದು.
ನಮ್ಮಯ ನಾಡು
ಸುಂದರ ಬೀಡು
ಭೇದವ ತೋರದ
ಸಮತೆಯ ಗೂಡು
ಇಲ್ಲಿನ ಜನರು
ಬಲು ಸಜ್ಜನರು
ಹೊಟ್ಟೆಪಾಡಿಗೆ
ನಿತ್ಯವು ದುಡಿವರು
(ನಮ್ಮ ನಾಡು )
ಈ ಕವಿತೆಯಲ್ಲಿ ಕನ್ನಡ ನಾಡಿನ ಜನಜೀವನ, ಹಿರಿಮೆ-ಗರಿಮೆಯನ್ನು ಎತ್ತಿ ತೋರಿಸಿದ್ದಾರೆ. ತುಂಬಿ ಹರಿಯುವ ನದಿಗಳು,ಕಾಡು -ಮೇಡು ಹಾಗೂ ಸಂಸ್ಕೃತಿಯ ಹೆಗ್ಗಳಿಕೆಯನ್ನು ಹೇಳಿಕೊಟ್ಟಿದ್ದಾರೆ.
ಭವ್ಯ ಭಾರತದ
ಪ್ರಜೆಗಳು ನಾವು
ಘನತೆ ಹೊತ್ತ
ಮಾತೆಯ ಮಕ್ಕಳು
ರಾಷ್ಟ್ರ ನಿಂದನೆ
ಸಹಿಸಲಾರೆವು
ಏಕತೆಯೊಂದಿಗೆ
ಶಿಸ್ತನು ಮೆರೆವೆವು
(ದೇಶದ ರಕ್ಷಣೆ)
'ದೇಶ ನನ್ನದು; ನನ್ನದು ನಾಡು, ಎನ್ನದ ಮಾನವನೆದೆ ಸುಡುಗಾಡು' ಎನ್ನುವಂತೆ ನಾವು ದೇಶ ರಕ್ಷಣೆಗಾಗಿ ಏನೆಲ್ಲ ಮಾಡಲು ಸಿದ್ಧರಿದ್ದೇವೆ. 'ಜನನಿ ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು' ಅವಳಿಗಾಗಿ ಸದಾ ಶ್ರಮಿಸುವೆವು ಎಂದು ಶ್ರದ್ಧಾಭಕ್ತಿಯಿಂದ ಹೇಳಿಕೊಂಡಿದ್ದಾರೆ. ಬೆಳೆಯುವ ಮಕ್ಕಳ ಮನೋಭೂಮಿಕೆಯಲ್ಲಿ ಇಂಥಹ ವಿಚಾರಗಳನ್ನು ಬಿತ್ತುವುದರಿಂದ ದೇಶಭಕ್ತಿ ಹೆಮ್ಮರವಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ.
ಗಗನ ಚುಕ್ಕೆ ನಾನಾಗುವೆನು
ಎಲ್ಲೆಡೆ ಮಿನುಗುತ ನಲಿವೆನು
ದೇಶದ ಸೈನಿಕ ನಾನಾಗುವೆನು
ಕೋವಿಯ ಹಿಡಿದು ಹೋರಾಡುವೆನು
(ಗಗನದ ಚುಕ್ಕೆ )
ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು. ಅವು ಸದಾ ನಮ್ಮ ಮಧ್ಯ ಮಿನುಗುತ್ತಲೇ ಇರುತ್ತವೆ. ಇಲ್ಲಿ ಕವಿ ವಿಶ್ವನಾಥ ಅರಬಿಯವರು ಆಕಾಶದ ನಕ್ಷತ್ರದಂತೆ ನಾನು ಸಹ ಮಿನುಗುವೆನೆಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪರಕಾಯ ಪ್ರವೇಶ ಎನ್ನುವರು. ಬರೆಯುವಾಗ ನಾವು ಬಾಲಕರಾದರೆ ಬಾಲ್ಯಕ್ಕೆ ನಮಗರಿವಿಲ್ಲದಂತೆ ಜಾರಿ ಬಿಡುತ್ತೇವೆ. ಅಂದಿನ ಆಟ ಪಾಠ ಏನೆಲ್ಲ ನೆನಪಿನ ಸುರಳಿ ಬಿಚ್ಚತೊಡಗುತ್ತದೆ. ಅದನ್ನೇ ಬರಹ ವಸ್ತುವನ್ನು ಶಬ್ದ ರೂಪದಲ್ಲಿ ಹಿಡಿದಿಟ್ಟಾಗ ಅಪ್ಪಟ ಮಕ್ಕಳ ಕವಿತೆಯಾಗುವುದರಲ್ಲಿ ಸಂದೇಹವಿಲ್ಲ. ಮಕ್ಕಳ ಕವಿಗಳು ಇದನ್ನು ಅನುಸರಿಸಿದರೆ ಈ ನಿಟ್ಟಿನಲ್ಲಿ ಯಶಸ್ವಿಯಾಗುತ್ತಾರೆಂದು ಹೇಳಬಹುದು.
ಜಿಟಿ ಜಿಟಿ ಮಳೆಯು ನಿಲ್ಲುತಲಿಲ್ಲ
ಹೊರಗಡೆ ಹೋಗಲು ಆಗುತಲಿಲ್ಲ
ಶಾಲೆಗೆ ರಜೆಯು ದೊರೆತೀತಲ್ಲ
ಗೆಳೆಯರ ಬಳಗವು ಸಿಗುತಲೇ ಇಲ್ಲ
(ಜಿಟಿ ಜಿಟಿ ಮಳೆ )
ಮಳೆಗಾಲವೆಂದರೆ ಮಕ್ಕಳಿಗೆ ಖುಷಿಯೋ ಖುಷಿ. ನೀರಲ್ಲಿ ನೆನೆದುಕೊಂಡರೂ ಹಿಂಜರಿಯದೇ ಆಡಿದ್ದೇ ಆಡಿದ್ದು. ಓಡಾಡಿ ಹಾಳೆಯ ಹಡಗು ಬಿಡುವುದೊಂದು ಸ್ಪರ್ಧಾತ್ಮಕ ಆಟ. ಆ ಸೊಬಗಿನ ಕಾಲ ಸ್ಮರಿಸಿಕೊಂಡು ಹಲವಾರು ಜನ ಕವಿಗಳು ಸಾಕಷ್ಟು ಕವಿತೆ ಬರೆದಿದ್ದಾರೆ. ಅದರಲ್ಲಿ ನಾನೂ ಒಬ್ಬನೆಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ. ಇಲ್ಲಿ ವಿಶ್ವನಾಥವರು ಜಿಟಿ ಜಿಟಿ ಮಳೆಯಲ್ಲಿ ಆಡಿದ್ದಾರೆ, ಹಾಡಿದ್ದಾರೆ. ಇದು ಒಳ್ಳೆಯ ಕವಿತೆಯೆಂದು ಹೇಳಬಹುದು.
ಮೂರು ಬಣ್ಣಗಳು ಇರುವವು ಧ್ವಜದಲಿ
ಸಿದ್ಧಪಡಿಸುವರು ಭಕ್ತಿಯಿಂದಲಿ
ಕೇಸರಿ ಬಣ್ಣವು ತ್ಯಾಗದ ಪ್ರತೀಕ
ಶ್ವೇತ ವರ್ಣವು ಶಾಂತಿಯ ದ್ಯೋತಕ
ಹಸಿರು ಬಣ್ಣವು ಸಮೃದ್ಧಿ ಸೂಚಕ
ಅಶೋಕ ಚಕ್ರವು ಮೌಲ್ಯದ ರೂಪಕ
(ನಮ್ಮ ಧ್ವಜ )
ಕವಿ ವಿಶ್ವನಾಥವರು ಇಲ್ಲಿ ಧ್ವಜದ ಪರಿಕಲ್ಪನೆಯನ್ನು ಎಲ್ಲರಿಗೂ ತಿಳಿಯುವಂತೆ ಸರಳ ಸುಂದರವಾಗಿ ಹೇಳಿಕೊಟ್ಟಿದ್ದಾರೆ. ಪಾಠ ಬೋಧನೆಯಲ್ಲಿ ಇದೊಂದು ಪೂರಕ ಪದ್ಯವಾಗಿದೆ. ಧ್ವಜದ ಹಿರಿಮೆ ಗರಿಮೆಯನ್ನು ಈ ಪದ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ರಾಷ್ಟ್ರಧ್ವಜದ ಒಳಾರ್ಥವನ್ನು ಎಲ್ಲರೂ ತಿಳಿದುಕೊಳ್ಳುವಂತೆ ಮೂಡಿ ಬಂದಿದೆ.
ದಿನವು ಮನೆಯನು
ಕಾವಲು ಕಾಯುವ
ಶ್ವಾನವೆ ನಿನಗೆ ವಂದನೆ
ಸಂಬಳ ಪಡೆಯದೆ
ಹಗಲಿರುಲೆನ್ನದೆ
ದುಡಿಯುವ ನಿನಗೆ ವಂದನೆ
(ಕಾವಲುಗಾರ )
ಪ್ರಾಣಿಗಳಲ್ಲಿಯೇ ನಿಯತ್ತಿನ ಪ್ರಾಣಿ ನಾಯಿ ಎಂದು ಹೆಮ್ಮೆಯಿಂದ ಹೇಳಬಹುದು. ನಂಬಿದ ಒಡೆಯನಿಗಾಗಿ ಪ್ರಾಣವನ್ನೇ ಕೊಟ್ಟ ನಾಯಿಯ ಕಥೆ ಜನಜನಿತವಾದುದು. ಇದು ಶತಸತ್ಯ. ಆರಕ್ಷಕ ಇಲಾಖೆಯಲ್ಲಿ ನಾಯಿಯದೇ ಹೆಚ್ಚಿನ ಪಾತ್ರ ಇದ್ದಿರುವುದು ನಮಗೆಲ್ಲ ತಿಳಿದ ಸಂಗತಿ. ಮನುಷ್ಯ ಸ್ವಾರ್ಥಿ, ಮೋಸಗಾರ, ನಂಬಿದವರಿಗೆ ದ್ರೋಹ ಬಗೆಯುವ. ಆದರೆ, ನಾಯಿ ಹಾಗಲ್ಲ! ಅಂತೆಯೇ ಅದಕ್ಕೆ ಕವಿ ಹೃದಯ ತುಂಬಿ 'ನಮನ-ವಂದನೆ' ಹೇಳಿದ್ದಾರೆ.
ವಿಶ್ವನಾಥ ಅರಬಿಯವರ ಮಕ್ಕಳ ಸಾಹಿತ್ಯದಲ್ಲಿ ಪ್ರಥಮ ಪ್ರಯತ್ನ ಖುಷಿ ನೀಡಿದೆ. ಇನ್ನು ಈ ನಿಟ್ಟಿನಲ್ಲಿ ಅರಬಿಯವರು ಅಧ್ಯಯನ ಮಾಡಬೇಕು. ಬೇರೆ ಬೇರೆ ಕೃತಿಗಳನ್ನು ಓದಿ ಅರಗಿಸಿಕೊಳ್ಳಬೇಕು. ಶಬ್ದ ಸಂಪತ್ತು ಹೆಚ್ಚಿದಷ್ಟು ಕವಿತೆಗಳು ಸಹಜವಾಗಿ ಮುತ್ತು ಪವಣಿಸಿದಂತೆ ಮೂಡಿ ಬರುತ್ತವೆ. ಮುಂಬರುವ ಕೃತಿಗಳು ಇನ್ನೂ ಚೆನ್ನಾಗಿ ಮೂಡಿಬರಲೆಂದು ಶುಭ ಹಾರೈಸುವೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.