ಅಪ್ಯಾಯಮಾನವಾಗಿ ಸದಾಕಾಡುವ ಜೀವ ಕತೆಗಳು!


"ಪ್ರತಿಕತೆಗಳ ಹುಟ್ಟಿಗೂ ನೂರಾರು ಕಾರಣಗಳು ಇರುತ್ತವೆ. ಕೆಲವು ಕತೆಗಳು ಕಾಲ್ಪನಿಕವಾದರೂ ಬಹುತೇಕ ಕತೆಗಳು ನಮ್ಮ ಸುತ್ತಲೂ ನಡೆಯುವಕಿರುಘಟನೆಗಳ ಪೂರ್ಣ ಹೂರಣವಾಗಿರುತ್ತವೆ. ಸೂಕ್ಷ್ಮಸಂವೇದನೆಯ ಹೃದಯವುಳ್ಳ ಬರಹಗಾರನನ್ನು ಮತ್ತೆಮತ್ತೆ ಕಾಡಿಸಿಕೊಂಡ ಕತೆಗಳೂ ಬಹಳಷ್ಟು ಇರುತ್ತವೆ," ಎನ್ನುತ್ತಾರೆ ರಾಜು ಹಗ್ಗದ್ ಎನ್ನುತ್ತಾರೆ. ಅವರು ಜಗದೀಶ್ ಬ ಹಾದಿಮನಿ ಅವರ ʻಅಬುಚಾ! ಅಬುಚಾ!ʼ ಕೃತಿಗೆ ಬರೆದ ಮುನ್ನುಡಿ.

ಕತೆಗಳುಮನುಷ್ಯರೆದೆಯ ಅಂತರಂಗದ ಪಿಸುನುಡಿಗಳು. ಕತೆ ಬರೆಯುವ ಲೇಖಕಮಾತ್ರ ಆ ಪಿಸುನುಡಿಗಳಿಗೆ ಕಿವಿಯಾಗಿ, ಹೃದಯದಲಿ ಪದೇಪದೇ ವಿರಮಿಸಲು ನೆಲೆ ಕೊಟ್ಟು, ಅವುಗಳನ್ನುಅಕ್ಕರೆಯಿಂದ ಅಕ್ಷರ ರೂಪಕ್ಕಿಳಿಸುತ್ತಾನೆ. ಅಕ್ಷರರೂಪಕ್ಕಿಳಿಯುವಾಗ ಲೇಖಕನೆದೆಯ ಭಾವಲೇಪನ ಚೂರುಪಾರು ಅಕ್ಷರಕ್ಕಂಟಿಕೊಂಡು ಕತೆಯ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಒಮ್ಮೊಮ್ಮೆ ಭಾವರಹಿರತವಾಗಿಯೂ ಅಕ್ಷರಕ್ಕಿಳಿಯಬಹುದು. ಇಲ್ಲಿ ಬರಹಗಾರ ಕೇವಲ ಮಧ್ಯವರ್ತಿಯಾಗಿ ನಿಲ್ಲುತ್ತಾನೆ. ಕತೆ ಯಶಸ್ವಿಯಾದರೆ ನಿಜವಾಗಿಯೂ ಕತೆ ಹುಟ್ಟಿಗೆ ಕಾರಣವಾದಘಟನೆಯ ಮೂಲ ರೂವಾರಿಗೆ ಸಲ್ಲಬೇಕೆಂದುಬಹಳಷ್ಟು ಸಲ ಅನಿಸುತ್ತೆ. ಆದರೂ, ಲೇಖಕನಿಗೂ ಆ ಪ್ರಶಸ್ತಿಯ ಗರಿಸಲ್ಲಬೇಕು. ಕಾರಣ, ತನ್ನೆದೆಯ ಭಾವದ ಮೂಸೆಯಲ್ಲಿ ಕತೆಗೆಜೀವ ಕೊಟ್ಟಿದ್ದಕ್ಕಾಗಿ, ಕಲ್ಲಾಗಿದ್ದ ಯಾವುದೋ ಘಟನೆಗೆ ಅಕ್ಷರ ರೂಪಕೊಟ್ಟು ಕತೆಯಂತಹ ಮೂರ್ತಿಯಾಗಿಸಿದ್ದಕ್ಕೆ. ಹೀಗಾಗಿ, ಕತೆ ಗೆದ್ದಾಗಲೆಲ್ಲ ಲೇಖಕರಗೌರವಿಸುವ ಪದ್ಧತಿಯಿದೆ ಎನಿಸುತ್ತದೆ. ಗೆದ್ದ ಕತೆಗೆ, ಘಟನೆಯಷ್ಟೇ ಅಲ್ಲದೆ ಲೇಖಕನೂ ಕಾರಣ. ಹಾಗೆಯೇ ಸೋತ ಕತೆಗೂ ಇದುಅನ್ವಯಿಸುತ್ತದೆ.

ಪ್ರತಿಕತೆಗಳ ಹುಟ್ಟಿಗೂ ನೂರಾರು ಕಾರಣಗಳು ಇರುತ್ತವೆ. ಕೆಲವು ಕತೆಗಳು ಕಾಲ್ಪನಿಕವಾದರೂ ಬಹುತೇಕ ಕತೆಗಳು ನಮ್ಮ ಸುತ್ತಲೂ ನಡೆಯುವಕಿರುಘಟನೆಗಳ ಪೂರ್ಣ ಹೂರಣವಾಗಿರುತ್ತವೆ. ಸೂಕ್ಷ್ಮಸಂವೇದನೆಯ ಹೃದಯವುಳ್ಳ ಬರಹಗಾರನನ್ನು ಮತ್ತೆಮತ್ತೆ ಕಾಡಿಸಿಕೊಂಡ ಕತೆಗಳೂ ಬಹಳಷ್ಟು ಇರುತ್ತವೆ.

ಬರಹಗಾರನಎದೆಯೊಳಗೆ ಕೋಮಲವಾದ ಕತೆಗಳು ಕೋಳಿಮರಿಯಂತೆ ಒಂದಾದ ನಂತರ ಒಂದರಂತೆ ಹುಟ್ಟುತ್ತಲೇಇರುತ್ತವೆ. ಅವುಗಳನ್ನು ಜೋಪಾನದಿಂದ ಜತನ ಮಾಡಿ ಅದಕ್ಕೊಂದುಚೌಕಟ್ಟು ಹಾಕಿ, ಅಕ್ಷರರೂಪ ಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೂ ಬಹಳಷ್ಟು ಸಂಯಮ ಹಾಗೂ ತಾಳ್ಮೆಯಸ್ಥಿತಿ ನಮ್ಮೊಳಗೆ ಇರಬೇಕು. ಅಂತಹ ಸಂಯಮ ಎದೆಯೊಳಗಿದ್ದಾಗಮಾತ್ರ ಇಂತಹ ಕತೆಗಳು ಹುಟ್ಟಲುಸಾಧ್ಯ.

ಜಗದೀಶಹಾದಿಮನಿ ಗುರುಗಳ ಎದೆಯೊಳಗೆ ಹುಟ್ಟಿರುವ ಕತೆಗಳು ಗಿಲಗಿಂಚಿಯಂತೆ ಓದುಗರ ಕಿವಿಯೊಳಗೆ ಸದಾ ಘಲ್‌ಘಲ್ಎಂದು ಗುಂಯ್ ಗುಡುತ್ತವೆ. ಪ್ರತಿಯೊಂದೂ ಕತೆಗಳು ಹೇಳಲಾರದ ಭಾವಗಳನ್ನು ಹೊತ್ತು ನಮ್ಮನ್ನು ಕಾಡುತ್ತವೆ. ಅಪ್ಪಟ ಗ್ರಾಮೀಣ ಭಾಷೆಯ ಬಳಕೆಯ ಮೂಲಕ, ಕಥೆಗಳು ಓದುಗರನ್ನು ಇನ್ನಷ್ಟು ಮತ್ತಷ್ಟು ಗಾಢವಾಗಿ ಆವರಿಸಿಕೊಳ್ಳುತ್ತವೆ. ಶೀರ್ಷಿಕೆ ಹೊತ್ತ ‘ಅಬುಚಾ! ಅಬುಚಾ! ಅಬುಚಾ!’ ಕತೆಯು ಪುಟ್ಟ ಮಕ್ಕಳ ರೋಧನೆ, ಅವರ ಒಡನಾಟದಲ್ಲಿ ಬದುಕಿನವೈಭವ, ಮಕ್ಕಳ ಕೀಟಲೆಗಳ ಮುಂದೆ ಒಮ್ಮೊಮ್ಮೆ ಸಾಕಪ್ಪ ಎನ್ನಿಸುವ ಪರಿಯೂ ಉಂಟು. ಅಂತಹ ಸಾಕಪ್ಪ ಸಾಕುಎನಿಸುವಂತಹ ಮಗುವಿನ ರೋಧನೆಯ ತಮಾಷೆ ಪ್ರಸಂಗವನ್ನು ಇಲ್ಲಿ ಕಾಣಬಹುದು.

‘ಭೂಮಿ’ಯಂತೂ ಎಡೆಬಿಡದೆ ಕಾಡುವಕತೆ. ಈ ನೆಲದ ಮಣ್ಣಿನಸೊಗಡು ಬಲು ಸೊಬಗು. ನಮ್ಮಭಾಷೆಯ ಸೊಗಸು ಕೂಡ ಅಂಥದ್ದೆ. ಅದನ್ನುದೂರದಿಂದ ನೋಡಿದರೆ ಬಾರಿಕಂಟಿ, ಕವಳೆಕಂಟಿಯಂಗ ಹತ್ತಿರ ಹೋಗಲೇಬಾರದು ಎನಿಸುತ್ತದೆ. ಹತ್ತಿರ ಹೋಗಿ ಮುಳ್ಳುಗಳ ಮಧ್ಯಕೈಹಾಕಿ ಕವಳೆಹಣ್ಣುಗಳನ್ನು ಕಿತ್ತಿ ತಿನ್ನುವ ಸವಿ ಹಾಗೂ ಕೈಹಾಕಿದೊಡನೆತನ್ನ ಕೊಕ್ಕೆಯೊಂದಿಗೆ ಗಬಕ್ ಎಂದು ಹಿಡಿಯುವಬಾರಿಕಂಟಿಯ ಮಧ್ಯದಲ್ಲಿಯೂ ಒಗರಾದ ಬಾರಿಕಾಯಿಯನ್ನು ಆರಿಸಿ ತಿನ್ನುವ ಸವಿಯಿದೆಯಲ್ಲ ಅದು ಬಲುಸೊಬಗು. ನಮ್ಮನೆಲದ ಭಾಷೆಯೂ ಕೂಡ ಅಷ್ಟೆ. ಆಯಾನೆಲದ ಭಾವನೆಗಳೊಟ್ಟಿಗೆ ಬೆರೆತ ಜೀವಧ್ವನಿ ಅದು. ಅಂತಹ ಉತ್ತರಕರ್ನಾಟಕದ ಜೀವಧ್ವನಿಯನ್ನು ಹೊತ್ತ ಕತೆ ಇದಾಗಿದೆ. ಓದುವಾಗಭಾಷೆಯು ನಮ್ಮನ್ನು ತಡೆತಡೆದು ಓದಿಸಿದರೂ ಅದರೊಳಗಿನ ಭಾವ ನಮ್ಮನ್ನು ತಟ್ಟುತ್ತದೆ. ಹಳ್ಳಿಸೊಗಡಿನ ಬದುಕಿನ ಘಟನೆಯನ್ನು ಹೊತ್ತು ಸಾಗುವ ಕತೆ, ಆರಂಭದಲ್ಲಿ ಮೆಲ್ಲಮೆಲ್ಲಗೆಪುಟ್ಟಪುಟ್ಟ ಹೆಜ್ಜೆಯಿಡುವ ಮಗು ಮನೆಯಂಗಳದಿಂದ ಪಡಸಾಲೆಗೆಬರುವಂತೆ ಆ ಮಗುವನ್ನು ಓಡಿಹೋಗಿಎತ್ತಿಕೊಳ್ಳಬೇಕು ಎನ್ನುವುದರೊಳಗೇ ಮಗು ಮಸಣದ ಹೂವಾಗಿರುತ್ತದೆ. ಬಿರುಬಿಸಿಲಲ್ಲೂ ಹೊಲಕ್ಕೆ ಹೋಗುವ ಅಪ್ಪನ ಹೆಗಲಮೇಲೆ ಕುಳಿತು ಅಪ್ಪನ ಬೆನ್ನಮೇಲೆ ಹರಿಯುವ ಬೆವರಹನಿಗಳನ್ನು ಒರೆಸುತ್ತಾ, ಅಪ್ಪನೊಡನೆ ಮುಗ್ಧವಾಗಿ ತುಂಟಾಟವಾಡುವ, ಅಪ್ಪ ನೆಲವನ್ನು ಅಗೆಯುವಾಗಓಡೋಡಿ ತತ್ರಾಣಿಯಲ್ಲಿ ನೀರು ತಂದು ಕೊಡುವಮಗು, ಅಪ್ಪನಿಗೆ ಮಗುವೆಂದು ಅನ್ನಿಸಲೇ ಇಲ್ಲ. ಅಪ್ಪ ಮರಳಿ ಮನೆಗೆಬರುವಾಗ ಅವನ ಹೆಗಲ ಮೇಲೆಹಾರೆ, ಸಲುಕೆ, ಪುಟ್ಟಿಗಳು ಮಾತ್ರ ಅಪ್ಪನ ಕಂಡು ಗಹಗಹಿಸಿ ನಗುತ್ತಿದ್ದವು.

ಸೃಷ್ಟಿಯಮೂಲವನ್ನೇ ಪ್ರಶ್ನಿಸುವ ಗಂಡು-ಹೆಣ್ಣು ಎಂಬಬೇಧವನ್ನು ಇನ್ನಾದರೂ ಈ ಸಾಮಾಜ ಮರೆತುಸಾಗುವ ಪ್ರಯತ್ನ ಮಾಡಬೇಕಿದೆ. ತುಂಬಾ ಕಾಡಿದ ಕಥೆ. ಹೇಳಲು ಮಾತುಗಳಿಲ್ಲ. ಎದೆಯೊಳಗೆ ಮಡುಗಟ್ಟಿದ ಮೌನವಿದೆ. ಸಾಕು ಇನ್ನಾದರೂ ಮಗಳನ್ನುಹೊತ್ತು ನಡೆಯೋಣ. ಹೆತ್ತು ಪ್ರೀತಿಯಿಂದ ಸಲಹೋಣ.

‘ಕಂಗಳಂತೂ ಅವಳನ್ನೇ ತುಂಬಿಕೊಳ್ಳುತ್ತಿದ್ದವು’ ಕತೆಯಜಾಡೇ ಬೇರೆ. ಒಲುಮೆಗೆ ನಲುಗಿದ ಹೃದಯಗಳೆಷ್ಟೊ! ಹೇಳ ಹೆಸರಿಲ್ಲದಂತೆ ಮುದುಡಿದತಾವರೆಯಂತೆ, ಒಣಗಿದ ತರಗೆಲೆಗಳಂತೆ ತಮ್ಮ ಬದುಕನ್ನು ಕೊನೆಗಾಣಿಸಿಕೊಂಡಿವೆ. ಪರಸ್ಪರ ಒಪ್ಪಿತ ಪ್ರೀತಿಯೂ ಒಮ್ಮೊಮ್ಮೆ ಸಾಮಾಜಿಕ ಪ್ರತಿಷ್ಠೆ, ಆಸ್ತಿ, ಅಂತಸ್ತು, ಜಾತಿಗಳ ಜೇಡರಬಲೆಗೆ ಸಿಲುಕಿ ಒಮ್ಮುಖವಾಗಿ ಚಲಿಸಲಾರಂಭಿಸುತ್ತವೆ. ಆಗ ಆ ಬಲೆಯಲ್ಲಿಬೇಯುವ ಹೃದಯದ ವೇದನೆಯ ಸಾರವನ್ನು ಕತೆ ಹೇಳುತ್ತಾ ಸಾಗುತ್ತದೆ. ಕತೆಯ ಅಂತ್ಯದಲ್ಲಿ ಸಾಮಾಜಿಕ ಪಿಡುಗೆನಿಸಿದ ಸಂಗತಿಯೊಂದು ಥಟ್ಟಂತೆ ಎದ್ದು ನಿಂತಾಗಲೇ ಅವನ ಹೃದಯದಲ್ಲಿ ನಿರ್ಮಲಪ್ರೀತಿಯಿದ್ದರೂ ಅದನ್ನು ನೋಡುವ ಗೊಡವೆಗೆ ಯಾರೂ ಹೋಗುವುದಿಲ್ಲ. ಸಾಮಾಜಿಕಹಣೆಪಟ್ಟಿ ಹೊತ್ತನಂತರ ಹೃದಯದ ಅಂತರಾಳ ಅರಿಯುವವರಾದರೂ ಯಾರು? ಕಂಗಳ ತುಂಬಿಕೊಂಡೆ ಹೊರಡುವಕಥಾನಾಯಕನ ಎದೆಯಾಳದ ಪ್ರೀತಿ ಹಾಗೂ ನೋವಿಗೆ ಏನೆಂದುಹೆಸರಿಡಲು ಸಾಧ್ಯ?

‘ಕಾವೇರಮ್ಮ’ ಕತೆಯು ಮತ್ತೊಂದು ಮಗ್ಗುಲನ್ನು ಪರಿಚಯಿಸುತ್ತದೆ. ಬದುಕಿನ ಬಂಡಿ ಎಳೆಯುವಾಗ, ಹೆತ್ತವರುಅದೆಷ್ಟು ಕಷ್ಟಕಾರ್ಪಣ್ಯಗಳನ್ನು ದಾಟಿ ಬದುಕಿನ ಸಣ್ಣಸಣ್ಣಸವಿಯನ್ನು ಅನುಭವಿಸುವಂತೆ ಮಾಡುತ್ತಾರೆಂಬುದನ್ನು ಊಹಿಸಲು ಅಸಾಧ್ಯ. ಅಂತಹ ಬದುಕನ್ನು ಕಟ್ಟಿಕೊಂಡಕಾವೇರಮ್ಮನಿಗೆ ಜೀವನದ ಸಂಧ್ಯಾಕಾಲದಲ್ಲಿ ಸೊಸೆ, ಮೊಮ್ಮಕ್ಕಳು, ಮಗನನ್ನು ನೋಡಿಕೊಂಡು ಅದೆಷ್ಟೋ ಸುಖಿಯಾಗಿದ್ದ ಮುದುಕಿ ಕಾವೇರಮ್ಮನ ಬದುಕಿನ ಅಂತ್ಯ ಮಾತ್ರ, ಪ್ರೀತಿಯ ಮುಖವಾಡ ಹೊತ್ತ ಕೈಗಳಿಂದಲೇ ಆಗುತ್ತದೆ. ಹೆತ್ತು, ಹೊತ್ತು ಮಕ್ಕಳೇ ಸರ್ವಸ್ವವೆಂದು ಸಾಕುವ ಹೆತ್ತವರಿಗೆ ಮಕ್ಕಳಾದವರು ನೀಡುವ ನಿಜವಾದ ಉಡುಗೊರೆ ಇದೆ ಎನಿಸುತ್ತೆ! ಮಕ್ಕಳುಕಲಿಯಲಿ ಕಲಿಯಲಿ ಎಂದು ಒಳ್ಳೆಯ ಶಿಕ್ಷಣಕೊಡಿಸಿ, ಮಕ್ಕಳನ್ನು ಹೆತ್ತವರು ದೂರ ಮಾಡಿಕೊಳ್ಳುವ ಪರಿವಾಸ್ತವ ಕಾಲಘಟ್ಟದಲ್ಲಿ ಇದೆ. ಸರಕಾರಿ ನೌಕರಿಎನ್ನುವುದು ಕೇವಲ ಹೆಸರಿಗಷ್ಟೇ ಸೌಖ್ಯದಸಂಕೇತ. ಅದರಂತರಂಗ ಮಾತ್ರ ಜೀತಕ್ಕಿಂತಲೂ ಕೀಳಾಗಿದೆ. ನಮ್ಮದೇ ಮಕ್ಕಳನ್ನು ನಾವೇ ಕೈಯಾರೆ ಶಿಕ್ಷಣಕೊಡಿಸಿ ಈ ರೀತಿ ಮಾಡುತ್ತಿದ್ದೇವಾ? ಎಂಬ ಬೇಸರವೂ ಒಮ್ಮೊಮ್ಮೆ ಆಗುತ್ತದೆ. ಕಾವೇರಮ್ಮನ ಅಂತರಂಗದ ತಳಮಳ ಇಂದಿನ ಮಕ್ಕಳೆದೆಯಲ್ಲಿಒಂಚೂರಾದರೂ ಸಣ್ಣ ಭಾವದಲೆಯನ್ನು ಹುಟ್ಟಿಸಿಮನುಷ್ಯರನ್ನಾಗಿಸಿದರೆ ಸಾಕು ಎನಿಸುತ್ತದೆ.

‘ಮಾತಿನ ಬೆನ್ನು ಹತ್ತಿ’ ಕತೆಯು, ಬದುಕಿನಲ್ಲಿ ಎಲ್ಲವೂ ಹೀಗೆ ತುಂಬಾ ಚೆನ್ನಾಗಿದೆಎನ್ನುವಾಗಲೇ ಇನ್ನೊಂದು ಮಗ್ಗುಲಿಗೆ ಕಣ್ಣೀರನ್ನೂ ಉಡುಗೊರೆಯಾಗಿ ಕೊಡುತ್ತದೆ. ಕಷ್ಟಗಳ ರಾಶಿಯೇ ನನ್ನನ್ನು ಆವರಿಸಿವೆ ಎನ್ನುವಾಗಲೇ ತಂಗಾಳಿಯಂತೆ ಅವುಗಳಿಗೆ ಪರಿಹಾರವೂ ದೊರೆತು ಕಷ್ಟಗಳು ಮರೆಯಾಗುತ್ತವೆ. ಇದು ಬದುಕಿನ ಪರಿ. ರೇವತಿ ಹಾಗೂ ಭರತನ ಕುಟುಂಬವೂಇದಕ್ಕೆ ಹೊರತಾಗಿರಲಿಲ್ಲ. ರೇವತಿಯ ಮಾತುಗಳಿಗೆ ಕಟುಬಿದ್ದ ಭರತ ಅನೇಕ ಸಂಕಟಗಳನ್ನುಅನುಭವಿಸಿ, ಕಣ್ಣೀರನ್ನು ಸುರಿಸಿ ಕೊನೆಗೂ ರೇವತಿಯ ಮಡಿಲ ಮಗುವಿನ ಕಂಗಳಭಾವಬಿಂದುವಾದ. ಕುಟುಂಬವೊಂದರ ಪ್ರೀತಿ, ಪ್ರೇಮ ಸಾಮರಸ್ಯದಾಚೆ ಕಡುಕಷ್ಟದಲ್ಲೂ ಬದುಕನ್ನು ಪ್ರೀತಿಸುವ ಕುಟುಂಬವೊಂದರ ದುರಂತ ಕತೆ. ಎದೆಯೊಳಗೆ ಮಡುಗಟ್ಟಿದನೋವಷ್ಟೆ ಉಳಿದದ್ದು, ಕತೆಯೋದಿ ಮುಗಿದಾಗ.

‘ನಿಮ್ಮೊಳಗಿನ’ ಕತೆಯನ್ನು ಸೂಕ್ಷö್ಮವಾಗಿ ಎಲ್ಲಾ ರಂಗಗಳಲ್ಲಿಯೂ ಗುರುತಿಸಬಹುದು. ಹಾಗೆಯೇ ಸಾಹಿತ್ಯಲೋಕದಲ್ಲಿಯೂ ಸಾಹಿತಿಗಳು ಹಾಗೂ ಓದುಗರ ಮುಖಾಮುಖಿಎಲ್ಲ ಕಾಲಘಟ್ಟದಲ್ಲೂ ನಡೆಯುತ್ತಲೇ ಇರುತ್ತದೆ. ಪ್ರತಿಯೊಬ್ಬ ಓದುಗನಿಗೂ ಅಷ್ಟೆ, ಒಂದು ಕೃತಿ ಓದಿದನಂತರ ಕೃತಿಯ ಭಾವಲಹರಿ ನಮ್ಮನ್ನು ಇನ್ನಿಲ್ಲದಂತೆ ಕಾಡಿದಾಗ, ಆ ಬರಹ ಇಷ್ಟವಾದಾಗಲೇಖಕರನ್ನು ಕಾಣಬೇಕು ಎಂಬ ತುಡಿತ ನಮ್ಮೊಳಗೆಹುಟ್ಟುವುದು ಸಹಜ. ಅದು ಉತ್ಕಟಇಚ್ಛೆಯ ಕೌತುಕವೂ ಹೌದು. ಅವಕಾಶ ಸಿಕ್ಕಾಗಲೆಲ್ಲ ಅವರನ್ನು ಭೇಟಿಯಾಗಿ ಸಂಭ್ರಮಿಸುವ ಪರಿ ಓದುಗ ಹಾಗೂಬರಹಗಾರರಿಬ್ಬರೂ ಅನುಭವಿಸಿರುತ್ತಾರೆ. ಆ ಬರಹಗಾರ ಹಾಗೂಓದುಗರ ನಡುವೆಯೂ ಅಮೂರ್ತವಾಗಿ ರೂಪುಗೊಂಡ ಪ್ರೀತಿ, ಗೌರವ ಅವರ ಬರಹದಿಂದಹುಟ್ಟಿರುತ್ತದೆ. ಬದುಕು-ಬರಹ ಒಂದಾದಾಗಲೇ ಬದುಕಿಗೆಅರ್ಥವೆನಿಸುತ್ತದೆ.

ಬರಹದ್ದೇಒಂದು ದಿಕ್ಕು, ಲೇಖಕನ ಬದುಕೇ ಇನ್ನೊಂದು ದಿಕ್ಕಾದರೆ ಅಂತಹ ಬರಹಗಾರರು ಓದುಗರನೆನಪಲ್ಲಿ ಉಳಿಯುವುದುಂಟೆ!?... ನೆನಪಲ್ಲುಳಿದ ಬರಹಗಾರ ಹಾಗೂ ಓದುಗರಿಬ್ಬರ ನಡುವೆನಡೆದ ಚರ್ಚೆ, ಮಾತುಕತೆ, ಸಂವಾದಗಳ ಹೂರಣವನ್ನು ಇಲ್ಲಿ ಸವಿಯಬಹುದು. ಅದರಂತೆ ಬರಹಗಾರನ ಭಾವಚಿತ್ರ ಮನೆಯ ನಡುಹಾಲಿನಲ್ಲಿ ಎತ್ತರದಗಾತ್ರದಲ್ಲಿ ನಿಲ್ಲಿಸುವಮಟ್ಟದ್ದು ಎಂದರೆ ಅದೆಂತಹ ಪ್ರೀತಿ, ಗೌರವ! ಕತೆಯನ್ನು ಓದಿ ಆನಂದಿಸಿ.

‘ಸೇಡು’ ಕತೆಯು, ಮನದೊಳಗೆ ಹೆಪ್ಪುಗಟ್ಟಿದ ಸಂಕಟಕ್ಕೆ ಪ್ರತಿಕ್ರಿಯೆಯಾಗಿದೆ. ಸಿದ್ದವ್ವಳ ಎದೆಯುರಿ, ಹೇಳಲಾಗದ ಸಂಕಟ, ಅನುಭವಿಸಿದ ನರಕಯಾತನೆ ಎಲ್ಲವೂ ಮನದೊಳಗೆ ದ್ವೇಷದ ಕಿಡಿಯನ್ನು ಹಚ್ಚಿ ಜ್ವಾಲೆಯಾಗಿ ಸುಡುವಂತೆ ಮಾಡಿದವು. ಜ್ವಾಲೆ ತನ್ನುದರ ನೋಯಿಸಿದ ಎಲ್ಲರನ್ನೂ ಸುಡುವ ಹಂತಕ್ಕೆ ತಲುಪಿತು. ಸಿದ್ದವ್ವ ಒಳಗೊಳಗೆ ಕೊರಗಿ ಕಣ್ಣೀರು ಹಾಕಿದಳು. ಸಾಮಾಜಿಕ ಬದುಕಿನಲ್ಲಿ ಸಿದ್ದವ್ವಳಂತೆ ನೋವುಂಡವರೂ ತಮ್ಮ ಬದುಕನ್ನೇ ಬರ್ಬಾದಮಾಡಿಕೊಂಡು, ತಮ್ಮ ನೋವಿಗೆ ಕಾರಣರಾದವರಸಾವು ನೋಡಲು ಕಾಯುತ್ತಾ ಇರುತ್ತಾರೆ. ಬದುಕಿನ ಸಂತಿ ಯಾರಪ್ಪಂದು ಅಲ್ಲನೋಡಿ. ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಅನುಭವಿಸಲೇಬೇಕು. ಸಿದ್ದವ್ವನ ಎದೆಯುರಿ ತಣ್ಣಗಾಗೋದರೊಳಗೆ ತನ್ನನ್ನು ದೂರ ತಳ್ಳಿದ ಪತಿಯುಇನ್ನಾದರೂ ಚೆನ್ನಾಗಿರಲಿ ಎಂದು ಬಯಸುವ ಭಾವಎಂಥವರ ಎದೆಯನ್ನು ಭಾರಮಾಡುತ್ತದೆ.

‘ಉಯಿಲು’ ಉರುಲಾದದ್ದು. ಬದುಕು ಬಟಾಬಯಲಾಗದೇ ಉಯಿಲುಗಳೆಂಬ ಮೋಹದ ಉರುಳಾಗಿ ಮನುಷ್ಯನನ್ನುಸಂಕಷ್ಟದ ದಡಕ್ಕೆ ತಂದು ನಿಲ್ಲಿಸುತ್ತದೆ. ಅಂತಹಉಯಿಲು ಸುಂದರ ಕುಟುಂಬವನ್ನೇ ಸಂಕಷ್ಟದ ಸುಳಿಗೆ ಸಿಲುಕಿಸುತ್ತದೆ. ಆಧುನಿಕ ಮನಸ್ಸುಗಳ ಸುಳಿಗೆ ನಲುಗಿದ ಹಿರಿಯ ಜೀವವೊಂದು ಉಯಿಲು ನನ್ನ ಬದುಕಿಗೆ ಉರುಳಾಯಿತೆಂದುಕೊರಗುವಂತಾಗುತ್ತದೆ. ಹಿಂದಿನ ಕಾಲಘಟ್ಟದಲ್ಲಿದ್ದ ನಂಬಿಕೆ, ವಿಶ್ವಾಸಗಳು ಪ್ರಸ್ತುತ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಪಲ್ಲಟಗೊಳಿಸಿವೆ. ಬೇಕಾದಲ್ಲಿ ಇರದೇ ಬೇಡವಾದಲ್ಲಿ ಇರುವಂತೆನಂಬಿಕೆ, ವಿಶ್ವಾಸಗಳು ಆಧುನಿಕ ಮನುಷ್ಯನ ಸಂಗಕ್ಕೆ ಸಿಕ್ಕು ತಮ್ಮ ಮೌಲ್ಯವನ್ನು ಕಳೆದುಕೊಂಡಿವೆ. ಅಂತಹ ಕುಟುಂಬವೊಂದರ ಕಥನ ಇಲ್ಲಿ ಕಾಣಬಹುದು.

‘ಜೀವನ್ಮುಕ್ತಿ’ಯು ಬದುಕಿನ ಜೇಡರಬಲೆಯನ್ನು ತೆರೆದು ತೋರಿಸುತ್ತದೆ. ಬಂದದ್ದು ಅನುಭವಿಸಲೇಬೇಕು. ಯಾವುದು, ಯಾರಿಗೆ, ಯಾಕೆ ಬರುತ್ತದೆ ಎಂದುಇದುವರೆಗೂ ಯಾರಿಗೂ ಕಂಡು ಹಿಡಿಯಲು ಆಗಿಲ್ಲ. ಬದುಕಿನ ವೈಚಿತ್ರ್ಯವೇ ಅದು. ಜೀವನ್ಮುಕ್ತಿ ಮಾರ್ಗ ಯಾವುದೋ ಗೊತ್ತಿಲ್ಲ. ಬದುಕು ಸಾಗಿಸಬೇಕು ಅಷ್ಟೆ. ಅಂತಹ ಬದುಕನ್ನು ಸಾಗಿಸಲುಹೆಣಗಾಡಿದ ಹೆಣ್ಣುಮಗಳೊಬ್ಬಳ ಕಥೆ-ವ್ಯಥೆ ಇಲ್ಲಿದೆ. ಬದುಕುವ ಉತ್ಸಾಹ ಹೊತ್ತು ಸಾಗುವಾಗಲೇ ಸಂಕಷ್ಟಗಳ ಕಾರ್ಮೋಡ ನಮ್ಮನ್ನಾವರಿಸಿ ಹಿಂಡಿ ಹಿಪ್ಪೆ ಮಾಡಿಸುತ್ತದೆ. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಕಥಾನಾಯಕಿಯ ಬದುಕು ಸಂಕಷ್ಟಗಳ ಸರಮಾಲೆಯಲ್ಲಿಯೇ ನರಳಾಡುವಂತಾಗುತ್ತದೆ. ಇಂತಹ ಹೋರಾಟದ ಬದುಕುಸಾಗಿಸುತ್ತಿರುವ ಮನಸ್ಸುಗಳಿಗೆ ಜೀವನ್ಮುಕ್ತಿ ಕರುಣಿಸುವವರಾದರು ಯಾರು!!!?

‘ವಿಧಿ’ ಐತಿಹಾಸಿಕ ಕತೆಯಾಗಿದ್ದರೂ ಅದರೊಳಗೂ ಮಾನವನ ಅಂತರಂಗದಲ್ಲಿ ಅಡಗಿರುವ ದ್ವೇಷಾಸೂಹೆಗಳ ಹೂರಣವನ್ನು ಕಾಣಬಹುದು. ಕೈಗೆ ಸಿಕ್ಕಾಗ ಅನುಕಂಪ, ಪ್ರೀತಿ ತೋರಿ, ಮಾಡಿದ ತಪ್ಪಿಗೆ ಕ್ಷಮಾದಾನ ನೀಡಿದರೆ, ಕ್ಷಮಿಸಿದವರ ಮೇಲೆರಗಿ ರಕ್ತ ಕುಡಿಯುವ ಜನರಮನಸ್ಥಿತಿಗೆ ಯಾವ ಹೆಸರುಂಟು! ಇದುವಾಸ್ತವ ಸಮಾಜದಲ್ಲೂ ಕಾಣಬಹುದು. ಇಂತಹ ಹೇಯ ಮನಸ್ಸಿನವರಮುಂದೆ ಕ್ಷಮಿಸಿ ಮಡಿದವರ ಹೃದಯ ವೈಶಾಲ್ಯತೆಯೇ ಹೆಚ್ಚುಕಾಡುವಂತೆ ಮಾಡುತ್ತದೆ.

ಒಟ್ಟಾರೆಯಾಗಿ, ಪ್ರತಿ ಕತೆಯೂ ಗ್ರಾಮೀಣ ಜನಜೀವನ, ಬದುಕಿನ ಸಂಕಟದ ಕತೆಗಳನ್ನು ಹೇಳುತ್ತವೆ. ಲಿಂಗತಾರತಮ್ಯ, ನಕ್ಸಲೈಟ್, ಕೌಟುಂಬಿಕ ಚೌಕಟ್ಟಿನಲ್ಲಿ ಮನುಷ್ಯರೇ ಮನುಷ್ಯರಿಗೆ ಆಗದೇ ಅವರನ್ನು ಕೊಲ್ಲುವಪರಿ, ಪತಿಯೇ ಪತ್ನಿಯನ್ನು ವೇಶ್ಯಾವಾಟಿಕೆಯ ಅಂಗಳಕ್ಕೆ ಬಿಟ್ಟು ಹಣಪಡೆದು ಬರುವ ಕ್ರೂರ ಮನಸ್ಥಿತಿ, ಮಾತುಗಳಿಗೆ ಜೋತುಬಿದ್ದು ಜೀವಕಳೆದುಕೊಳ್ಳುವ ಮುಗ್ಧಜೀವ, ಸಾಹಿತಿಗಳೆಂಬ ಹೂದೋಟದಲ್ಲೂ ಹುಲುಸಾಗಿ ಬೆಳೆದು ಸಭ್ಯತೆಯ ಮುಖವಾಡ ಹೊತ್ತ ಮನಸ್ಸುಗಳ ಚಿತ್ರಣ, ತನ್ನವರೆಂದು ನಂಬಿ ಸತ್ಯಹೇಳಿದಾಗಲೂ ಅದನ್ನುಒಪ್ಪದ ಪತಿ, ಸೋತುಶರಣಾಗಿ ಮನದೊಳಗಿನಹಗೆ ಸೇಡಾಗಿ ನರ್ತಿಸುವ ಪರಿ, ಮಣ್ಣಿಗಾಗಿಯೇ ಜೀವಗಳಬಲಿಪಡೆವ ಕ್ರೌರ್ಯದ ಕತೆ, ಸಂಕಷ್ಟಗಳನ್ನೇ ಆಹಾರಮಾಡಿಕೊಂಡು ಬದುಕುವ ಜೀವಗಳ ಜೀವನ್ಮುಕ್ತಿ, ಸಭ್ಯತೆಯ ಮುಖವಾಡ ಹೊತ್ತು ಜಯಗಳಿಸುವ ವಿಕೃತ ಮನಸ್ಸುಗಳ ವಿಧಿಯಾಟ, ಹೀಗೆ ಎಲ್ಲಾ ಕತೆಗಳುಒಂದೊಂದು ಭಾವವನ್ನು ಸ್ಫುರಿಸುತ್ತವೆ.

ಕಥಾಸಂಕಲನದಬಹುತೇಕ ಕತೆಗಳಲ್ಲಿ ಬಳಕೆಯಾದ ಉತ್ತರಕರ್ನಾಟದ ಆಡುಭಾಷೆ ನನ್ನನ್ನು ಬಹು ಆಪ್ತವಾಗಿ ಖುಷಿಪಡಿಸಿತು. ಓದುವಾಗ ತಡೆತಡೆದು ಓದಿಸಿಕೊಂಡರೂ ಪ್ರತಿ ಪದಗಳೂ ನನ್ನನ್ನು ಮರಳಿ ಬಾಲ್ಯದ ದಿನಗಳಿಗೆಕರೆದೊಯ್ದವು. ನಮ್ಮದೇ ನೆಲದ ನಮ್ಮ ಬದುಕಿನ ಭಾಷೆ, ನಮ್ಮ ಜೀವದ ಭಾಷೆ ಅದೆಷ್ಟೇಕ್ಲಿಷ್ಟಕರವಾಗಿದ್ದರೂ ಅದರೊಳಗೆ ನಮ್ಮದೇ ನೂರು ಭಾವ ಲಹರಿಯಂತೂ ಇದ್ದೇಇದೆ. ಪ್ರಸ್ತುತವಾಗಿ ಬಹುತೇಕರು ಪ್ರಾದೇಶಿಕ ಭಾಷೆಯನ್ನು ಸರಳೀಕರಣಗೊಳಿಸಿ ಸುಲಲಿತಭಾಷೆಯಲ್ಲಿಯೇ ಕತೆಗಳನ್ನು ಬರೆಯುತ್ತಿರುವಾಗ ಲೇಖಕರ ಈ ಪ್ರಯತ್ನ ಈಕೃತಿಯ ಮೆರುಗನ್ನು ಹೆಚ್ಚಿಸಿದೆ ಎನ್ನಲಡ್ಡಿಯಿಲ್ಲ.

ಭೂಮಿಕತೆ ಓದ್ತಾ ಓದ್ತಾ ನನ್ನ ಬಾಲ್ಯದ, ನಮ್ಮಹೊಲದ ಹಾದಿಯಗುಂಟ ಹೊರಟ ನೆನಪು ಇನ್ನೂಎದೆಯೊಳಗೆ ಹಸಿರಾಗಿ ಉಳಿದಿದೆ. ಹೆಂಟಿಹೊಲದಾಗ ಆಕಡೆಯೊಮ್ಮೆ ಕಾಲಿಡ್ತಾ, ಈಕಡೆಯೊಮ್ಮೆ ಕಾಲಿಡ್ತಾ ಬಿರುಬಿಸಿಲಲ್ಲಿ ನಡುಹೊಲದಾಗಿನ ಬನ್ನಿಗಿಡ ತಲುಪುದರೊಳಗ ಅಪ್ಪನ ಹೆಗಲಿನ ತತ್ರಾಣಿ ನಮ್ಮನ್ನು ನೋಡಿ ನಗುತ್ತಿತ್ತು. ಅಂಥಾಬೇಸಿಗೆ, ಬರಡುಭೂಮಿ ನಮ್ಮನ್ನು ತುಂಬಾ ಅಪ್ಯಾಯಮಾನವಾಗಿ ಸದಾ ಕಾಡುವುದುಂಟು. ನಮ್ಮದೇನೆಲದ ಆ ಭಾವದೊಡ್ಡೋಗಲಕ್ಕೆ ನಾನುಪಯಣಸಿ ಬಂದ ಅನುಭವ ನನ್ನದಾಗಿದೆ. ಹೊಸ ಓದು, ಹೊಸ ಅನುಭವನಿಮ್ಮದೂ ಆಗಲಿ ಎಂಬುದು ನನ್ನಾಸೆ. ನಾನು ಓದಿದ ಪ್ರತಿ ಕತೆಗಳಕಿರು ಭಾವಲಹರಿ ಇಲ್ಲಿದೆ. ಓದಿ ಆನಂದಿಸಿ. ನಿಮ್ಮಓದಿನ ಪಯಣ ಸುಖಕರವಾಗಿರಲಿ. ತುಂಬಾಖುಷಿಕೊಟ್ಟ ಕಥಾಸಂಕಲನವಿದು.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...