ಬದುಕು ನಮ್ಮ ಕಲ್ಪನೆಗೂ ಮೀರಿದ ಒಂದು ವಾಸ್ತವ


“ಗ್ರಾಮೀಣ ಭಾಗದ ಒಂದು ಬಡ ಕುಟುಂಬದ ಬವಣೆಯನ್ನು ಈ ಸಾಮಾಜಿಕ ಕಾದಂಬರಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ”, ಎನ್ನುತ್ತಾರೆ ನಾಗೇಂದ್ರ ಎಫ್. ಹೊನ್ನಳ್ಳಿ. ಅವರು ಕೆ. ಎನ್‌. ಸುಬ್ರಹ್ಮಣ್ಯ ಅವರ “ಪರ ಊರಿನವನು” ಕೃತಿಗೆ ಬರೆದ ಮುನ್ನುಡಿ.

ಇಂದಿನ ತಾಂತ್ರಿಕ ಮತ್ತು ಔದ್ಯೋಗಿಕ ಯುಗದಲ್ಲಿ ಉನ್ನತ ಮಟ್ಟದ ಬಹು ಕೌಶಲ್ಯಗಳ ಪದವಿಗಳಿಗೆ ಹೆಚ್ಚಿನ ಮಹತ್ವ ಮತ್ತು ಪ್ರಾಶಸ್ತ್ರವಿದ್ದು ಕೈಗಾರಿಕಾ ಕ್ಷೇತ್ರದಲ್ಲಿ ಅವುಗಳಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಉದಯೋನ್ಮುಖ ತಂತ್ರಜ್ಞಾನಗಳಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, ಡೋನ್, ಆಟೋಮೋಷನ್, ಅಂತರಿಕ್ಷಯಾನ, ಕೌಡ್ ಕಂಪ್ಯೂಟಿಂಗ್, ಸೂಪರ್ ಕಂಪ್ಯೂಟರ್, ಡಿಜಿಟಲ್ ತಂತ್ರಾಂಶಗಳು ಇತ್ಯಾದಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಬಹಳಷ್ಟು ವಿದ್ಯಾರ್ಥಿಗಳು ಇಂತಹ ವ್ಯಾಸಂಗವನ್ನು ಮಾಡಲು ಇಚ್ಚಿಸುತ್ತಿದ್ದಾರೆ... ಆದರೆ ಇಂತಹ ಮಹತ್ವದ ಕೋರ್ಸ್‌ಗಳ ಅಧ್ಯಯನ ಹೆಚ್ಚಿನ ಆರ್ಥಿಕ ಹೊರೆಯದ್ದಾಗಿದ್ದು ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ಕಲಿಯಬೇಕಾಗುತ್ತದೆ. ಉನ್ನತ ಮತ್ತು ತಾಂತ್ರಿಕ ವ್ಯಾಸಂಗವು ಕೇವಲ ಉಳ್ಳವರಿಗೆ ಮತ್ತು ಅತೀ ಬುದ್ದಿವಂತರಿಗೆ ಮಾತ್ರ ಅನ್ನುವ ಕಾಲ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಇಂದು ನಗರ ಪ್ರದೇಶಗಳಲ್ಲಿ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಲಕ್ಷಗಟ್ಟಲೆ ಶುಲ್ಕ ಕಟ್ಟಬೇಕಾದ ಪರಿಸ್ಥಿತಿ ಇರುವಾಗ ಬಡ ಕುಟುಂಬದ ಮಕ್ಕಳು ಇಂಜಿನಿಯರಿಂಗ್ ಮಟ್ಟದ ಉನ್ನತ ಮತ್ತು ತಾಂತ್ರಿಕ ವ್ಯಾಸಂಗದ ಕನಸನ್ನು ಕಾಣದೇ ತಮ್ಮ ಹಾಗೂ ತಮ್ಮ ಮನೆಯ ಜವಾಬ್ದಾರಿಗಳನ್ನು ನಿಭಾಯಿಸಲು ಆದಷ್ಟು ಬೇಗ ದುಡಿಮೆ/ಕೆಲಸ ಸಿಗುವ ಶಿಕ್ಷಣವನ್ನು ಪಡೆಯಲು ಉತ್ಸುಕರಾಗಿರುವುದನ್ನು ಕಾಣುತ್ತಿದ್ದೇವೆ. ಅಲ್ಲದೇ ಇಂದು ಉನ್ನತ ಮಟ್ಟದ ತಂತ್ರಜ್ಞಾನವನ್ನು ನಿಭಾಯಿಸಲು ದೊಡ್ಡ ದೊಡ್ಡ ತಂತ್ರಜ್ಞರುಗಳ ಸಹಾಯಕ್ಕೆ ನುರಿತ ಮತ್ತು ತರಬೇತಿ ಪಡೆದ ಸಹಾಯಕರುಗಳ ಅವಶ್ಯಕತೆ ಮತ್ತು ಬೇಡಿಕೆ ಇಂದು ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದ್ದು, ಅಂತಹ ಸ್ಕಿಲ್ಡ್ ಲೇಬರ್‌ಗಳನ್ನು ಬೇಡಿಕೆಗನುಸಾರವಾಗಿ ಪೂರೈಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿರುತ್ತದೆ.

ಇಂತಹ ಉನ್ನತ ಮಟ್ಟದ ತಾಂತ್ರಿಕ ಪದವಿಗಳಿಗೆ ಪೂರಕವಾದ ವೃತ್ತಿ ಕೌಶಲ್ಯಗಳನ್ನು ಹೊಂದಿರುವ ಸ್ಕಿಲ್‌ ತರಬೇತುದಾರರಿಗೆ ಔದ್ಯೋಗಿಕ ಮಾರುಕಟ್ಟೆಯಲ್ಲಿ ವಿಫುಲವಾದ ಉದ್ಯೋಗದ ಅವಕಾಶಗಳು ಸೃಷ್ಟಿಯಾಗಿರುತ್ತವೆ. ವೃತ್ತಿ ಕೌಶಲ್ಯ, ಹೊಂದಿರುವ ವ್ಯಕ್ತಿ ಪ್ರಪಂಚದ ಯಾವ ಮೂಲೆಯಲ್ಲಾದರೂ ಬದುಕುಬಲ್ಲರು ಎಂಬುವುದು ದೃಢಪಟ್ಟಿದ್ದರಿಂದ ವೃತ್ತಿ ಕೌಶಲ್ಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲು ಬಯಸುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯಾಗಿರುತ್ತದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿ ನೀಡುವುದರಲ್ಲಿ ನಮ್ಮ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳು (ಐ.ಟಿ.ಐಗಳು), ಪಾಲಿಟೆಕ್ನಿಕ್‌ಗಳು, ಜಿ.ಟಿ.ಟಿ.ಸಿಗಳು, ಡಿಪ್ಲೋಮಾ ಕೋರ್ಸ್‌ಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಎಸ್.ಎಸ್.ಎಲ್.ಸಿ ನಂತರ ಐ.ಟಿ.ಐಗಳಲ್ಲಿ ಪ್ರವೇಶ ಪಡೆದುಕೊಂಡು ಅತ್ಯಂತ ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದಲ್ಲಿಯೇ ಇದ್ದುಕೊಂಡು ವೃತ್ತಿ ಕೌಶಲ್ಯವನ್ನು ಪಡೆಯುವ ಮಕ್ಕಳು ಇಂದು ಬಹುತೇಕವಾಗಿ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ. ಇತ್ತೀಚಿನ ಚಂದ್ರಯಾನದ ಯಶಸ್ವಿ ಉಡಾವಣೆ ಯೋಜನೆಯಲ್ಲಿ ಐ.ಟಿ.ಐ ಪಾಸಾದ ಮಕ್ಕಳೂ ಇದ್ದದ್ದು ಹೆಮ್ಮೆಯ ಸಂಗತಿ ಯಾಗಿದೆ. ಅಲ್ಲದೇ ಹಲವಾರು ವಿದ್ಯಾರ್ಥಿಗಳು ಸ್ವಂತ ಉದ್ಯೋಗ ಮಾಡಲು ಬಯಸಿ ಸರ್ಕಾರದ ಧನಸಹಾಯ ಮತ್ತು ಬ್ಯಾಂಕ್‌ಗಳು ನೀಡುವ ಸಾಲದ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯೋಗ ಸ್ಥಾಪಿಸಿ ಅವರೇ ನೂರಾರು ಮಕ್ಕಳಿಗೆ ಉದ್ಯೋಗದಾತರಾಗಿರುವುದನ್ನು ಕಾಣಬಹುದು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕನಾಗಿ 2023-24ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಐ.ಟಿ.ಐ.ಗಳಿಗೆ ಭೇಟಿ ನೀಡಿ ಅಲ್ಲಿನ ತರಬೇತಿದಾರರ ಜೊತೆ ಸಂವಾದ ಮಾಡಿ ಅವರ ಭವಿಷ್ಯದ ಕನಸುಗಳು/ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡಿದ್ದೇನೆ. ಅವರ ಮನೆತನದ ಆರ್ಥಿಕ ಹಿನ್ನೆಲೆ, ಏನನ್ನಾದರೂ ಸಾಧಿಸುವ ಛಲವುಳ್ಳ ಮಕ್ಕಳಿಗೆ ಐ.ಟಿ.ಐ.ಗಳು ಇಂದು ಶಕ್ತಿ ಕೇಂದ್ರಗಳಾಗಿವೆ. ಇಂದಿನ ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯವನ್ನು ಮಕ್ಕಳಿಗೆ ನೀಡಲು ಐ.ಟಿ.ಐಗಳು ಸನ್ನದ್ಧವಾಗಿದ್ದು ಅಲ್ಲಿ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬೋಧಿಸಲಾಗುತ್ತಿದೆ ಮತ್ತು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ. ಅಲ್ಲಿನ ಪ್ರಾಚಾರ್ಯರುಗಳು, ತರಬೇತಿ ಅಧಿಕಾರಿಗಳು, ಕಿರಿಯ ತರಬೇತಿ ಅಧಿಕಾರಿಗಳ ಅವಿರತ ಶ್ರಮದಿಂದ ಗುಣಮಟ್ಟದ ವೃತ್ತಿ ಕೌಶಲ್ಯವನ್ನು ನಿರಂತರವಾಗಿ ನೀಡಲಾಗುತ್ತಿದೆ. ಮುಂದುವರೆದು, ಕಾಲ ಕಾಲಕ್ಕೆ ಅಪ್ರೆಂಟಿಸ್‌ ತರಬೇತಿ ಮತ್ತು ಉದ್ಯೋಗ ಮೇಳಗಳನ್ನು ಆಯೋಜಿಸಿ, ದೊಡ್ಡ ದೊಡ್ಡ ಕಂಪನಿಗಳ ಉದ್ಯೋಗದಾತರುಗಳನ್ನು ಕರೆಯಿಸಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಲ್ಲಿ ಐ.ಟಿ.ಐ.ಗಳು ಯಶಸ್ವಿಯಾಗಿವೆ.

ಇಂತಹ ವೃತ್ತಿ ಕೌಶಲ್ಯ ತರಬೇತಿಯನ್ನು ನೀಡುತ್ತಿರುವ ಐ.ಟಿ.ಐ.ಗಳಲ್ಲಿ ಶ್ರೀ.ಕೆ. ಎನ್. ಸುಬ್ರಮಣ್ಯ ಇವರು ಕಿರಿಯ ತರಬೇತಿ ಅಧಿಕಾರಿಯಾಗಿದ್ದು ಮಕ್ಕಳಿಗೆ ಇದೇ ವೃತ್ತಿ ಕೌಶಲ್ಯವನ್ನು ನೀಡುವ ಗುರುವಾಗಿದ್ದಾರೆ. ಇವರು ಹುಟ್ಟಿದ್ದು ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಕೊಣನೂರಿನಲ್ಲಿ. ಡಿಪ್ಲೋಮೊದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದು ಇವರು ಕಳೆದ ಇಪ್ಪತ್ತು ವರ್ಷಗಳಿಂದ ವಿವಿಧ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಸೇವೆಗೆ ಸೇರುವ ಮುನ್ನ ಹನ್ನೊಂದು ವರ್ಷಗಳ ಕಾಲ ಸುಮಾರು ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರುತ್ತಾರೆ. ಇವರ ತಂದೆ ಶ್ರೀ ಕೆ. ಸಿ. ನಂಜುಂಡ ಶೆಟ್ಟಿಯವರು ವೃತ್ತಿಯಲ್ಲಿ ನೇಕಾರರಾಗಿದ್ದು, ನೇಕಾರಿಕೆಯ ಬದುಕು ಕಷ್ಟ ಎನಿಸಿದಾಗ ಸಂತೆಗಳಲ್ಲಿ ಬಟ್ಟೆ ವ್ಯಾಪಾರ ಮಾಡಿ ಮಕ್ಕಳನ್ನು ಸಾಕಿ ಮಕ್ಕಳ ಭವಿಷ್ಯ ರೂಪಿಸಿದವರು. ತಾಯಿ ಗೃಹಿಣಿಯಾಗಿ ಮನೆತನದ ಬಡತನಕ್ಕೆ ಬೆನ್ನೆಲುಬಾಗಿ ನಿಂತು ಸಹಕರಿಸಿ ಮಕ್ಕಳ ಭವಿಷ್ಯ ರೂಪಿಸಿದ ತ್ಯಾಗಮಯಿ. ಇವರುಗಳ ಪುಣ್ಯ ಉದರದಲ್ಲಿ ಜನಿಸಿದ ಶ್ರೀ ಕೆ.ಎನ್. ಸುಬ್ರಮಣ್ಯ ಇವರು ವೃತ್ತಿ ಕೌಶಲ್ಯದ ಬೋಧನೆ ದೊಂದಿಗೆ ಈಗಾಗಲೇ ಕವನ ಸಂಕಲನ ಹೊರತಂದಿದ್ದು, ಸಾಹಿತ್ಯ ಕ್ಷೇತ್ರದಲ್ಲೂ ಇವರು ಮಾಡುತ್ತಿರುವ ಈ ಅಮೋಘ ಅಕ್ಷರ ಸೇವೆ ಅವರ ವ್ಯಕ್ತಿತ್ವಕ್ಕೊಂದು ಭವ್ಯ ಭೂಷಣವೇ ಸರಿ.

ಶ್ರೀ ಕೆ. ಎನ್. ಸುಬ್ರಮಣ್ಯ, ಕಿರಿಯ ತರಬೇತಿ ಅಧಿಕಾರಿ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಹಾರೋಹಳ್ಳಿ ಇವರು ಬರೆದ ಸಾಮಾಜಿಕ ಕಾದಂಬರಿ 'ಪರ ಊರಿನವನು; ಇಂದಿನ ಯುವ ಜನಾಂಗದ ವೃತ್ತಿ ಬದುಕಿನ ಹಲವಾರು ಬವಣೆ ಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿನ ಪ್ರಸ್ತುತಪಡಿಸಿರುವ ವಾಸ್ತವ ಬದುಕಿನ ಪರಿಕಲ್ಪನೆಗಳ ಒಂದು ಸುಂದರ ಪಕ್ಷಿನೋಟ. ಇಂದು ಬಹಳಷ್ಟು ಗ್ರಾಮೀಣ ಭಾಗದ ಯುವಕರು ಉದ್ಯೋಗ ಬಯಸಿ ನಗರ ಪ್ರದೇಶಗಳಿಗೆ ಬರುವುದನ್ನು ಕಾಣಲಾಗುತ್ತಿದೆ. ಬದುಕಿನ ಸವಾಲುಗಳಿಗೆ ನಗರ ಪ್ರದೇಶಗಳಲ್ಲಿ ದೊರಕುವ ವಿಪುಲ ಉದ್ಯೋಗ ಅವಕಾಶಗಳೇ ಅಂತಿಮ ಅನ್ನುವ ಮನೋಭಾವನೆ ಬಹಳಷ್ಟು ಗಟ್ಟಿಯಾಗಿ ಬೇರೂರಿರುವ ಇಂದಿನ ದಿನಮಾನಗಳಲ್ಲಿ ಎಲ್ಲಿಯೂ ಬದುಕು ಸುಲಭ ಅಲ್ಲಾ ಅನ್ನುವ ವಾಸ್ತವ ಅರಿವಾಗುವಷ್ಟರಲ್ಲಿ ಬದುಕಿನ ಬಹುಭಾಗ ಮುಗಿಯುವುದೇ ವಿಪರ್ಯಾಸದ ಸಂಗತಿಯೆಂಬುದನ್ನು ಇಲ್ಲಿ ಕಾಣಬಹುದಾಗಿದೆ. ಈ ಕಥಾವಸ್ತುವನ್ನು ಆಧಾರವಾಗಿಟ್ಟುಕೊಂಡು ಹೆಣೆದಿರುವ ಈ ಅಕ್ಷರಮಾಲೆಯೇ 'ಪರ ಊರಿನವನು' ಕಾದಂಬರಿ.

ಗ್ರಾಮೀಣ ಭಾಗದ ಒಂದು ಬಡ ಕುಟುಂಬದ ಬವಣೆಯನ್ನು ಈ ಸಾಮಾಜಿಕ ಕಾದಂಬರಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ. ಜೀವನದಲ್ಲಿ ಪಡುವ ಆಸೆ ಮತ್ತು ಮಾಡುವ ಆಯ್ಕೆಗಳು ಹೇಗೆ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸಬಲ್ಲದು ಎಂಬುದನ್ನು ಮನವರಿಕೆ ಮಾಡಿಕೊಡುವುದರ ಮುಖಾಂತರ ಇಂದಿನ ದಿನಮಾನದಲ್ಲಿ ವೃತ್ತಿ ಕೌಶಲ್ಯ ಮತ್ತು ವೃತ್ತಿ ಕೌಶಲ್ಯವನ್ನು ನೀಡುತ್ತಿರುವ ಐ.ಟಿ.ಐ.ಗಳ ಮಹತ್ವವನ್ನು ಸಮಾಜಕ್ಕೆ ಪರಿಚಯಿಸುವ ಮೊಟ್ಟ ಮೊದಲ ಪ್ರಯೋಗ ಇದಾಗಿದೆ ಎಂದರೆ ಅತಿಶಯೋಕ್ತಿ ಯಾಗಲಾರದು. ಬಡ ಕುಟುಂಬದ ಶ್ರೀ ರಂಗಪ ಎಂಬ ಒಬ್ಬ ಗಾರೆ ಕೆಲಸದವನ ಇಬ್ಬರು ಗಂಡು ಮಕ್ಕಳಾದ 'ಯದು' ಮತ್ತು 'ಮಧು' ಇವರುಗಳ ಜೀವನ ಸಾಗಿ ಬಂದ ರೀತಿ, ಅವರ ಬದುಕಿನ ಆಯ್ಕೆಗಳು, ಮಾಡಿದ ಹೋರಾಟಗಳು, ಸಮಾಜದಲ್ಲಿ ಕೆಲವರು ನೀಡಿದ ಬೆಂಬಲ ಮತ್ತು ಇನ್ನು ಕೆಲವರು ಮಾಡಿದ ಹೊಟ್ಟೆಕಿಚ್ಚಿನ/ಕುತಂತ್ರದ ಯೋಜನೆಗಳು, ಕೌಟುಂಬಿಕ ಬಾಂಧವ್ಯಗಳ ಮಹತ್ವ ಮತ್ತು ಅಂತಿಮವಾಗಿ ಬದುಕಿನಲ್ಲಾಗುವ ಸೋಲಿನ ಕಹಿ ಅನುಭವಗಳು ಎಲ್ಲರನ್ನೂ ಒಂದು ಕ್ಷಣ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ಈ ಕಾದಂಬರಿಯಲ್ಲಿನ ಸನ್ನಿವೇಶಗಳು ಮತ್ತು ಪಾತ್ರಗಳು ಸಾಮಾಜಿಕ ಬದುಕಿನ ಎಲ್ಲ ದೃಷ್ಟಿಕೋನಗಳನ್ನು ಸಂದರ್ಭಕ್ಕೆ ತಕ್ಕಂತೆ ವ್ಯಕ್ತಪಡಿಸಿವೆ. 'ಯದು' ಪರ ಊರಿನವನಾಗದೇ ತನ್ನ ಸ್ವಂತ ಊರಲ್ಲೇ ಉಳಿದು ವರ್ಕ್‌ ಶಾಪ್ ಕೆಲಸಗಾರನಾಗಿ ಪ್ರಿಯಸುತನ ಮಾರ್ಗದರ್ಶನದಲ್ಲಿ ವೃತ್ತಿ ಆರಂಭಿಸಿ, ನಂತರ ತಾನೇ ಸ್ವಂತ ವರ್ಕ್‌ ಶಾಪ್ ಸ್ಥಾಪಿಸಿ ಸಾಕಷ್ಟು ನೋವು/ಸೋಲು ಕಾಣುವ ಪ್ರಸಂಗಗಳು ಮತ್ತು ಐ.ಟಿ.ಐ ಮಾಡಿದ್ದರೆ ತನ್ನ ಬದುಕು ಚೆನ್ನಾಗಿ ಇರುತ್ತಿತ್ತೇನೋ ಅನ್ನುವ ಹತಾಶೆಯ ದುಃಸ್ಥಿತಿಯಾದರೆ, ಇನ್ನೊಂದು ಕಡೆ ಆತನ ತಮ್ಮ 'ಮಧು' ಐ.ಟಿ.ಐಗಳಲ್ಲಿ ವೃತ್ತಿ ಕೌಶಲ್ಯ ಶಿಕ್ಷಣವನ್ನು ಪಡೆದುಕೊಂಡು ನಗರ ಪ್ರದೇಶದಲ್ಲಿ ಒಂದು ಸುಂದರವಾದ ಮತ್ತು ಉತ್ತಮವಾದ ಜೀವನವನ್ನು ರೂಪಿಸಿಕೊಂಡು ಸಂತೃಪ್ತಿಯೊಂದಿಗೆ ಬಾಳುವ ಪರಿಯನ್ನು ಅತ್ಯಂತ ಸುಂದರವಾಗಿ ವಿವರಿಸಲಾಗಿದೆ. ಈ ಮಧ್ಯೆ. ಸಮಾಜದಲ್ಲಿ ಕಾಣಸಿಗುವ ಸ್ವಾರ್ಥಿಗಳ ಕುತಂತ್ರಗಳು ಯದುವನ್ನು ಏಳಿಗೆ ಆಗಲು ಬಿಡದೇ ಇರುವುದು ಇಂದಿನ ಸಮಾಜದ ದುಃಸ್ಥಿತಿಯನ್ನು/ಪ್ರಸ್ತುತಿಯನ್ನು ಮಾರ್ಮಿಕವಾಗಿ ಪರಿಚಯಿಸಿದೆ.

ಈ ಸಾಮಾಜಿಕ ಕಾದಂಬರಿಯ ಶೀರ್ಷಿಕೆಯಾದ 'ಪರ ಊರಿನವನು' ಎಂಬುವುದೇ ಅತ್ಯಂತ ವಾಸ್ತವದಲ್ಲಿ ಬದುಕನ್ನು ಅವಲೋಕಿಸಿದಾಗ ಎಲ್ಲರೂ ಪರ ಊರಿನವರೇವಿನೂತನವಾದ ಶೀರ್ಷಿಕೆಯಾಗಿದ್ದು ಓದುಗರ ವಿವೇಚನೆಗೆ ವಿವಿಧತೆಯನ್ನು ಹುಟ್ಟು ಹಾಕುತ್ತದೆ. ಎನ್ನುವ ಭಾವನೆ ಬರಲು ಪ್ರಾರಂಭವಾಗುವುದೇ ಈ ಕಾದಂಬರಿ ಓದಿದ ನಂತರ. ಬದುಕು ನಮ್ಮ ಕಲ್ಪನೆಗೂ ಮೀರಿದ ಒಂದು ವಾಸ್ತವವಾಗಿದ್ದು, ಒಬ್ಬ ವ್ಯಕ್ತಿಯ ಪರಿಶ್ರಮ, ಹೋರಾಟ, ಉತ್ತಮ ಬದುಕು ಕಟ್ಟಿಕೊಳ್ಳಲು ಸಹಾಯಕಾರಿಯಾದರೆ ಇನ್ನೂ ಕೆಲವರು ಎಷ್ಟೇ ಕಷ್ಟಪಟ್ಟರೂ ಒಳ್ಳೆಯ ತೀರ್ಮಾನದ ಕೊರತೆಯೋ ಅಥವಾ ಅದೃಷ್ಟದ ಕೊರತೆ ಯಿಂದಾಗಿ ಏನನ್ನೂ ಸಾಧಿಸಲು ಸಾಧ್ಯವಾಗದೇ ಇರುವುದರ ಕುರಿತು ವಿಶ್ಲೇಷಣೆ ಮಾಡಲಾಗಿದೆ. 'ಯದು' ಎಷ್ಟೇ ಕಷ್ಟಪಟ್ಟರೂ, ಪ್ರಾಮಾಣಿಕವಾಗಿದ್ದರೂ, ಹಿತೈಷಿ ಗಳಿಂದ ಸಾಕಷ್ಟು ಬೆಂಬಲ ಸಿಕ್ಕರೂ, ಅಂತಿಮವಾಗಿ ಪರವೂರಿಗೆ ಹೋದರೂ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಐ.ಟಿ.ಐ ಮಾಡಿದ್ದರೆ ಅವನ ತಮ್ಮ ಮಧುನ ಹಾಗೆ ತಾನೂ ಒಂದು ಸುಂದರವಾದ ಬದುಕು ಕಟ್ಟಿಕೊಳ್ಳಬಹು ದಿತ್ತೇನೋ ಎಂಬ ಆಶಾವಾದ ಮಾತ್ರ ಯದುವಿನಲ್ಲಿ ಕೊನೆಯವರೆಗೂ ಜೀವಂತ ವಾಗಿಯೇ ಉಳಿದುಬಿಡುತ್ತದೆ. ಈ ಹಿನ್ನೆಲೆಯಲ್ಲಿ ಐ.ಟಿ.ಐ.ಗಳ ಪ್ರಾಮುಖ್ಯತೆಯನ್ನು ಈ ಸಾಮಾಜಿಕ ಕಾದಂಬರಿ ಅತ್ಯಂತ ಮಾರ್ಮಿಕವಾಗಿ ಬಿತ್ತರಿಸಿದೆ. ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳಷ್ಟೇ ಅಲ್ಲ, ನಗರ ಪ್ರದೇಶದ ಮಕ್ಕಳೂ ಕೂಡಾ ವೃತ್ತಿ ಕೌಶಲ್ಯ ಹೊಂದಿದ್ದಲ್ಲಿ ಸುಂದರವಾದ ಬದುಕು ಕಟ್ಟಿ ಕೊಳ್ಳುವುದು ಕಷ್ಟವೇನೂ ಅಲ್ಲ ಅನ್ನುವುದನ್ನು ಈ ಕಾದಂಬರಿ ಸಾಬೀತು ಪಡಿಸಿದೆ. ಇಂತಹ ಒಂದು ಸುಂದರ ಸಾಮಾಜಿಕ ಕಾದಂಬರಿಯ ಮೂಲಕ ತಮ್ಮ ವೃತ್ತಿಯ ಪ್ರಾಮುಖ್ಯತೆಯನ್ನೇ ಆಧಾರವಾಗಿಟ್ಟುಕೊಂಡು ವೃತ್ತಿ ಕೌಶಲ್ಯದ ಕೇಂದ್ರಗಳಾದ ಐ.ಟಿ.ಐ.ಗಳ ಮಹತ್ವದ ಕುರಿತು ಜನಸಾಮಾನ್ಯರಿಗೆ ಪರಿಚಯಿಸಿ ತಮ್ಮ ಇಲಾಖೆಯ ಮತ್ತು ತಮ್ಮ ವೃತ್ತಿಯ ಘನತೆಯನ್ನು ಇನ್ನೂ ಹೆಚ್ಚಿಸಿದ ಕೀರ್ತಿ ಸುಬ್ರಮಣ್ಯರವರದು. ಅವರಿಂದ ಇನ್ನೂ ಹೆಚ್ಚು ಸಾಹಿತ್ಯದ ಕೃಷಿಯಾಗಲಿ, ಹೊಸ ಹೊಸ ರಚನೆಗಳು ಮೂಡಿಬರಲಿ ಮತ್ತು ಅವರ ಪ್ರಯತ್ನಗಳಿಗೆ ಸದಾ ಕಾಲ ಯಶಸ್ಸು ಸಿಗಲಿ ಎಂದು ಹಾರೈಸುತ್ತಾ ಈ ಸಾಮಾಜಿಕ ಕಾದಂಬರಿ ವೃತ್ತಿ ಕೌಶಲ್ಯ ಬಯಸುವ ಸಹಸ್ರಾರು ವಿದ್ಯಾರ್ಥಿಗಳ ಬದುಕಿಗೆ ಒಂದು ದೊಡ್ಡ ಸ್ಫೂರ್ತಿಯಾಗಲಿ ಎಂಬ ಆಶಾಭಾವನೆಯ ಜೊತೆಗೆ ನನಗೆ ನೀಡಿದ ಅವಕಾಶಕ್ಕಾಗಿ ನನ್ನ ಆತ್ಮೀಯ ಕೃತಜ್ಞತೆಗಳು.


MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...