ʻಬೆಳಕು ಕುಡಿದ ಸಂಜೆʼ: 2025ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆಯ ಎರಡನೇ ಬಹುಮಾನ ಪಡೆದ ಕಥೆ


2025ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನ ಪಡೆದ ಕಥೆಗಾರ ಸದಾಶಿವ ಸೊರಟೂರು ಅವರ ʻಬೆಳಕು ಕುಡಿದ ಸಂಜೆ..‌ʼ ಕಥೆ ನಿಮ್ಮ ಓದಿಗಾಗಿ..

‘ಮೆಫ್ತಾಲ್ ಪಿ ಸಿರಪ್..' ಬದಲು ಪ್ಯಾರಾಸೆಟ್ಮಾಲ್ ಹಿಡಿದು ಬಂದು ಕೀ ಬೋರ್ಡಿನ ಬಿಲ್ಲಿಂಗ್ ಕೀ ಒತ್ತತೊಡಗಿದಾಗ ‘ಹಲೋ, ಅವ್ರು ಕೇಳಿದ್ದು ಮೆಫ್ತಾಲ್.. ನೀವ್ ಯಾವುದು ಕೊಡ್ತಾ ಇದೀರಿ..' ಪಕ್ಕದ ಕುರ್ಚಿಯಲ್ಲಿ ಕೂತು ಬಿಲ್ಲಿಂಗ್ ಮಾಡುತ್ತಿದ್ದ ಹುಡುಗ ಅವಳನ್ನು ಎಚ್ಚರಿಸಿದ.

ಮಮತಾಳ ಮುಖ ಸಣ್ಣದಾಯಿತು. ‘ಪ್ಲೀಸ್ ಕಣೋ ನೀನೆ ಅದನ್ನು ಕೊಟ್ಟು ಬಿಲ್ ತಗೊ..' ಅನ್ನುತ್ತಾ ಎಲ್ಲವನ್ನೂ ಅಲ್ಲೇ ಬಿಟ್ಟು ಎದ್ದಳು. ಒಳಗೆ ಹೋಗಿ ತನ್ನ ಬ್ಯಾಗಿನಲ್ಲಿದ್ದ ನೀರಿನ ಬಾಟಲು ಎತ್ತಿಕೊಂಡು ಗಟಗಟ ಕುಡಿದಳು. ಸಮಾಧಾನವಾಗಲಿಲ್ಲ. ಸಮಯ ಆರು ತುಂಬಿ ಏಳಕ್ಕೆ ಹೊರಳುತ್ತಿತ್ತು. ಉಸಿರು ಬಿಡಲಾಗದ ರಶ್ ಈಗಷ್ಟೇ ಕಳಚಿಕೊಂಡು ಮೆಡಿಕಲ್ ಶಾಪ್ ತಣ್ಣಗಾಗತೊಡಗಿತ್ತು. ಏಳರ ಮೇಲೆ ತುಸು ಕಡಿಮೆ ಜನ. ಏಳೂ ಮೂವತ್ತಕ್ಕೆ ಮಮತ ಬ್ಯಾಗ್ ಎತ್ತಿಕೊಳ್ಳುತ್ತಾಳೆ. ಅಂಗಡಿಯ ಹುಡುಗರು ರಾತ್ರಿ ಹನ್ನೊಂದಕ್ಕೆ ಬಾಗಿಲೆಳೆದುಕೊಂಡು ಮನೆ ಸೇರುತ್ತಾರೆ.

ಅವಳ ಕಮೀಜ್ ಮೇಲೆ ಕುಡಿದ ನೀರು ಒಂದಷ್ಟು ತಪ್ಪಿಸಿಕೊಂಡು ಸುರಿದಿತ್ತು. ಅವಳು ನೋಡಿಕೊಂಡಿರಲಿಲ್ಲ. ಎಲ್ಲೊ ಒಂದು ಶೂನ್ಯದೆಡೆ ದೃಷ್ಟಿ ನೆಟ್ಟು ಒಮ್ಮೆ ಮೂಗುತಿ ಮೇಲೆ ಬೆರಳಾಡಿಸಿಕೊಂಡಳು.

ಔಷಧಿಗಾಗಿ ಬಂದವರ ದನಿಗಳು ಕೇಳಿ ಬರುತ್ತಿದ್ದವು. ಆ ಎಲ್ಲಾ ದನಿಗಳಲ್ಲಿ ಯಾವತ್ತೂ ಕೂಡ ಆರ್ತನಾದಗಳನ್ನು ಹುಡುಕುವ ಪ್ರಯತ್ನದಲ್ಲಿರುತ್ತಾಳೆ ಅವಳು. ‘ಈ ಔಷಧಿ ಕೊಡಿ.. ಇದು ಇದೆಯಾ ನೋಡಿ.. ತರಿಸಿಕೊಡ್ತೀರಾ..?' ಅನ್ನುವ ಅವರ ಕೋರಿಕೆಗಳು ಇವಳಿಗೆ ‘ಸ್ವಲ್ಪೇ ಸ್ವಲ್ಪವಾದರೂ ಪ್ರಾಣ ಕೊಡಿ ಬದುಕಿಕೊಳ್ತೀನಿ..' ಎಂಬಂತೆಯೇ ಕೇಳಿಸಿದಂತಾಗುತ್ತಿತ್ತು.

ಅಲ್ಲೇ ಕೂತು ಮೊಬೈಲ್ ತಗ್ದು ಒಮ್ಮೆ ಎಲ್ಲಾ ಜಾಲಾಡಿಸಿ ಎತ್ತಿಟ್ಟಳು.

‘ಏನಾಗಿರಬಹುದು...!??' ಮತ್ತೆ ತೂರಿಬಂತು ಅವಳೊಳಗಿಂದ ಪ್ರಶ್ನೆ.

ಸಮುದ್ರಮಥನದಿಂದ ಹುಟ್ಟುವ ವಸ್ತುಗಳಂತೆ ಅವಳೊಳಗೆ ಎರಡ್ಮೂರು ದಿನದಿಂದ ಏನೇನೊ ಪ್ರಶ್ನೆಗಳು, ಅನುಮಾನಗಳು ಹುಟ್ಟುತ್ತಿವೆ. ದಿನ ಒಂದರಲ್ಲಿ ಎಷ್ಟೊ ಜನ ಬಂದು ಔಷಧಿ ಕೊಂಡು ಹೋಗ್ತಾರೆ. ಆದರೆ ಇದೇಕೆ ಹಲವು ದಿನಗಳಿಂದ ಇಷ್ಟು ಕಾಡುತಿದೆ. ದೂರದಿಂದಲೇ ಏನೊ ತಾಕುತಿದೆ.. ಯೋಚಿಸುತ್ತಲೇ ಮತ್ತೊಂದು ಗುಟುಕು ನೀರು ಕುಡಿದಳು.

‘ಟಣ್..’ ಮೊಬೈಲ್ ಪರದೆ ಮೇಲೆ ಮೆಸೇಜ್ ಬಂದು ಕೂತು ಇವಳನ್ನು ಕರೆಯಿತು.

ಮತ್ತೆ ಬಿಲ್ಲಿಂಗ್ ಕಂಪ್ಯೂಟರ್ ಮುಂದೆ ಕೂತಳು. ಮೊಬೈಲ್ ತೆರೆದು ನೋಡಿದಳು. ಹರೀಶ ಅರ್ಧ ಪುಟದಷ್ಟು ಏನೊ ಬರೆದು ಹಾಕಿದ್ದ. ಸಿಟ್ಟು ಉಕ್ಕಿತು. ತೆಗೆದು ನೋಡಲಿಲ್ಲ. ಸ್ಕ್ರೀನ್ ಆಫ್ ಮಾಡಿ ಪಕ್ಕಕ್ಕೆ ತಳ್ಳಿದಳು.

‘ಏನಾಗಿರಬಹುದು? ಯಾಕೆ ಬಂದಿಲ್ಲ ಅವ್ರು. ಔಷಧಿಯ ಅವಶ್ಯಕತೆ ತೀರಿತಾ? ಬೇರೆ ಅಂಗಡಿ ಹುಡುಕಿಕೊಂಡು ಹೋದರಾ? ಅಥವಾ.... ಏನಾದರೂ ಹೆಚ್ಚು ಕಡಿಮೆ ಆಗಿಯೇ ಹೋಯ್ತಾ ಛೇ.. ಛೇ ಹಾಗೇನು ಆಗಿರಲಾರದು. ಹಿಂದೊಮ್ಮೆ ಹೀಗೆ ತಿಂಗಳುಗಟ್ಟಲೇ ಅವರು ಕಾಣಿಸದೆ ಹೋದಾಗ ಅವಳು ತನ್ನ ಅಂಗಡಿಯ ಬಿಲ್ಲಿಂಗ್ ಸಾಫ್‌ಟ್ವೇರ್ ನಲ್ಲಿ ನಂಬರ್ ಹಾಕಿ ಎಲ್ಲಾದರೂ ನಮ್ಮ ಔಷಧಿ ಅಂಗಡಿಯ ಬೇರೆ ಬ್ರಾಂಚ್ ನಲ್ಲಿ ಔಷಧಿ ಖರೀದಿ ಮಾಡಿರಬಹುದಾ ಎಂದು ಹುಡುಕಿದ್ದಳು. ಅದು ಬೆಂಗಳೂರಿನ ಹೆಬ್ಬಾಳು ಬ್ರಾಂಚ್ ನಲ್ಲಿ ನಿರಂತರವಾಗಿ ದುಬಾರಿ ಆಂಟಿಬಯೋಟಿಕ್ ಖರೀದಿ ಮಾಡಿದ್ದು ತೋರಿಸುತ್ತಿತ್ತು. ಕೂತಲ್ಲೇ ಮರುಗಿದ್ದಳು. ತನಗೇ ಗೊತ್ತಿಲ್ಲದೆ ಕಣ್ಮುಚ್ಚಿ ‘ಆ ಜೀವ ಆಸ್ಪತ್ರೆಗೆ ಬೆನ್ನು ಹಾಕಿ ಎದ್ದು ಬರುವಂತಾಗಲಿ ದೇವ್ರೇ' ಎಂದು ಬೇಡಿಕೊಂಡಿದ್ದಳು.

ಈಗ ಮತ್ತೊಮ್ಮೆ ಹುಡುಕಿ ಬಿಡಲೇ ಅನಿಸುತ್ತಿತ್ತು. ಹೇಗೂ ನಂಬರ್ ಇದೆ ಕರೆ ಮಾಡಿ ಕೇಳಲೇ? ಕರೆ ಮಾಡಿದರೆ ಏನಂದು ಕೊಂಡಾರೋ? ಈ ಮೆಡಿಕಲ್ ಶಾಪ್ ನವರಿಗೆ ಜನ ಆರೋಗ್ಯವಾಗಿರೋದು ಬೇಕಿಲ್ಲ. ಆರೋಗ್ಯ ತಪ್ಪಿ ಬೀಳೋದೆ ಕಾಯ್ತಾ ಇರ್ತಾರೆ. ಎಲ್ಲದೂ ದುಡ್ಡಿನ ಕಾಲ.. ಲಾಭದ ಕಾಲ.. ಛೇ.' ಅಂದು ಬಿಟ್ಟರೆ!. ಸುಮ್ಮನೆ ನುಂಗಿಕೊಂಡಳು. ಒಮ್ಮೊಮ್ಮೆ ಕಾಳಜಿಯೂ ಜಾಹಿರಾತಿನಂತೆ ಅರ್ಥವಾಗಿ ಬಿಡುವ ಈ ಹೊತ್ತಿನ ವಿಚಿತ್ರ ಕಾಲಮಾನಕ್ಕೆ ಮರುಗಿದಳು.

‘ಮಮತ ಅವರೇ ಹೋಗಲ್ವ ಮನೆಗೆ.. ಟೈಮ್ ಆಯ್ತು..' ಪಕ್ಕದ ಕೌಂಟರಿನ ಹುಡುಗ ಕೂಗಿ ಹೇಳಿದ. ಚೂರು ವಿಚಲಿತಗೊಂಡರೂ ಅದನ್ನು ತೋರಿಸಿಕೊಳ್ಳದೆ ಸಣ್ಣಗೆ ನಕ್ಕು 'ಓಹ್ ಗೊತ್ತೇ ಆಗಿಲ್ಲ ನೋಡಿ..' ಎನ್ನುತ್ತಾ ಅಲ್ಲಿಂದ ಎದ್ದಳು.

‘ನಿತಿನ್, ಇವತ್ತಿಂದು ಟ್ಯಾಲಿ ನೋಡಿ ನನಗೊಂದು ಮೆಸೇಜ್ ಹಾಕಿ.. ನೀವೇ ಅಪ್ಡೇಟ್ ಮಾಡಿ ಹೋಗಿ ಸ್ಟಿಸ್ಟಮ್ ನಲ್ಲಿ.. ಇವತ್ತು ನವೀನ್ ಕೂಡ ಇರ್ತಾರೆ. ನಾಳೆಯ ಬರಬೇಕಾದ ಐಟಮ್‌ಗೆ ಅರ್ಡರ್ ಹಾಕಿದೀನಿ. ಇನ್ನೊಮ್ಮೆ ರಿಮೈಂಡರ್ ಮೆಸೇಜ್ ಕಳ್ಸಿ ಹೊರಡುವ ಮುನ್ನ..' ಒಂದೇ ಉಸಿರಿನಲ್ಲಿ ಮಾತು ಚೆಲ್ಲಿ ತಾನು ಬಿಡುಗಡೆ ಪಡೆದಳು.

ಅಲ್ಲಿಂದ ಹೊರಡುವಾಗ ಎಂದಿಗಿಂತ ತಡವೇ ಆಗಿತ್ತು. ಹರೀಶನಿಗೆ ಕರೆ ಮಾಡುತ್ತಾ ಮೆಟ್ಟಿಲು ಇಳಿಯತೊಡಗಿದಳು..

**

ಶಾಪ್‌ಗೆ ಔಷಧಿ ಕೊಳ್ಳಲು ಬರುತ್ತಿದ್ದ ಅವರನ್ನು ಆಗೊಮ್ಮೆ ಈಗೊಮ್ಮೆ ನೋಡಿದ ಅಸ್ಪಷ್ಟ ನೆನಪು ಮಮತಳಿಗೆ. ಕೂತು ಯೋಚಿಸಿದರೂ ಸರಿಯಾಗಿ ನೆನಪಾಗುವಷ್ಟು ಸ್ಪಷ್ಟವಿಲ್ಲ. ನೂರಾರು ಜನ ಬಂದು ಹೋಗುವ ಈ ಜಾತ್ರೆಯೊಳಗೆ ಯಾರು ತಾನೇ ನೆನಪಿರಲು ಸಾಧ್ಯ. ಅಪರಿಚಿತರು ಅಪಾಯದ ಸರಕು ಎಂದೇ ಭಾವಿಸುವ ಈ ಕಾಲದಲ್ಲಿ ಯಾರ ಭಾವವನ್ನು ಯಾರು ತಾನೆ ತಾಕಿಯಾರು?

ಅದೊಮ್ಮೆ ಬಿಡದೆ ಐದಾರು ದಿನ ಒಂದಲ್ಲ ಒಂದು ಔಷಧಿಗೆ ಬಂದ ನಿಲ್ಲುತ್ತಿದ್ದ ಅವರನ್ನು ನೋಡಿ ಮಮತಾಗೆ ಕಾಳಜಿಯಾಗಿತ್ತು. ಇಷ್ಟು ಔಷಧಿ ಕೊಂಡು ಹೋದರೂ ಮತ್ತೆ ಮತ್ತೆ ಬಂದು ನಿಲ್ಲುವರಲ್ಲ. ಔಷಧಿಯೆಂಬುದು ಈಗೀಗ ಒಂದು ಅಮಲೇ ಅನಿಸಿಬಿಟ್ಟಿತ್ತು ಅವಳಿಗೆ.

ಅವರ ಗಡ್ಡ ಅಲ್ಲಲ್ಲಿ ಬಿಳಿಯಾಗಿದ್ದವು. ಆದರೆ ಬಿಳಿಯಾಗುವಷ್ಟು ವಯಸ್ಸೇನು ಆಗಿರಲಿಲ್ಲ. ಬಹುಶಃ ಮಧ್ಯೆ ವಯಸ್ಸು ತಲುಪಲು ಆ ವ್ಯಕ್ತಿ ಇನ್ನೂ ಏಳೆಂಟು ವಸಂತಗಳನ್ನು ಕಳೆದುಕೊಳ್ಳಬೇಕಾಗಿತ್ತು. ಮುಖ ಸೋತು ಹೋದ ಕುರುಹು. ಕಣ್ಣಿನಲ್ಲಿ ಇನ್ನೂ ಭರವಸೆ ಉಳಿದಿರುವ ಹೊಳಹು.. ಎಲ್ಲವೂ ಸ್ಪಷ್ಟವಿತ್ತು.

ಅಂದು ಅವಳೇ ಮುಂದೆ ಬಂದು ಅವರಿಂದ ಚೀಟಿ ಪಡೆದಿದ್ದಳು. ದುಬಾರಿ ಬೆಲೆಯ ಆಂಟಿಬಯೋಟಿಕ್ ಬರೆಯಲಾಗಿತ್ತು. ನೋಡಲು ಇವರು ಆರೋಗ್ಯವಾಗಿಯೇ ಇದ್ದಾರೆ, ಇದು ಇವರಿಗಂತೂ ಅಲ್ಲ.. ಹಾಗಾದರೆ ಯಾರಿಗಿರಬಹುದೆಂದು ಮತ್ತೊಮ್ಮೆ ಚೀಟಿ ಕಡೆ ನೋಡಿದಳು. ಮಕ್ಕಳಿಗೆ ಕೊಡುವ ಆಂಟಿಬಯೊಟಿಕ್ ಅಂತ ಗೊತ್ತಾದದ್ದೆ ಚೀಟಿಯ ಮೇಲಿನ ಹೆಸರು ಹುಡುಕಾಡಿದ್ದಳು ‘ಸಿರಿ' ಎಂದಿತ್ತು. ಒಂದು ವರ್ಷ ಏಳು ತಿಂಗಳು ಹೆಸರಿನ ಪಕ್ಕವೇ ಬರೆದ ಮಗುವಿನ ವಯಸ್ಸು. ಅವಳ ಬೆನ್ನಿನ ಯಾವುದೊ ನರವೊಂದರಿಂದ ಸಂಕಟ ಉಕ್ಕಿ ಬಂತು. ಮಗುವಿನ ಹೆಸರನ್ನು ಹುಡುಕುವ ಆ ಅರೆಕ್ಷಣದಲ್ಲಿ ತನ್ನ ಹರೀಶನ ಮುಖ ಬಂದು ಹೋಗಿತ್ತು. ಹರೀಶ ನೆನಪಾದದ್ದೆ ತನ್ನೊಳಗಿನ ಗಡಿಯಾರ ನಿಂತು ಹೋದಂತೆ ತುಸು ಹೊತ್ತು ಮೌನವಾದಳು.

ಸಾವರಿಸಿಕೊಂಡು ಚೀಟಿ ಎತ್ತಿಕೊಂಡಳು.

ಅನುಮಾನವಿಲ್ಲ, ಇವರೇ ಮಗುವಿನ ಅಪ್ಪ. ಮಗು ಉಣ್ಣುತ್ತಿರುವ ನೋವಿನ ಸಂಕಟ ಅವರ ಮುಖದಲ್ಲಿತ್ತು. ತಂದೆಯಾದವನ ಮುಖದಲ್ಲಿ ಮಾತ್ರ ಕಾಣಬರುವ ಸಂಕಟದ ಗುರುತದು. ಮುಖವನ್ನು ಹೆಚ್ಚು ನೋಡಲಾಗದೆ ಕಂಪ್ಯೂಟರ್ ಪರದೆಯ ಮೇಲೆ ದೃಷ್ಟಿ ಚೆಲ್ಲಿದ್ದಳು. ಇವನೊಬ್ಬ ತಂದೆಯೊ ಅಲ್ಲವೊ ಎಂಬುದನ್ನು ಗಂಡಸಿನ ಮುಖ ನೋಡಿ ಹೇಳಿ ಬಿಡಬಹುದು. ಮಕ್ಕಳ ಕಳೆ ತಂದೆಯಾದವನ ಮುಖದಲ್ಲಿ ಸದಾ ಹರಡಿಕೊಂಡಿರುತ್ತದೆ. ಅಂಥಹ ಕಳೆಗೆ ಮಂಕು ಬಡಿದದ್ದು ಢಾಳಾಗಿ ಕಾಣಿಸುತ್ತಿತ್ತು. ನೋವು ಮೆತ್ತಿಕೊಂಡಿತ್ತು.

‘ಮೇಡಂ ಸ್ವಲ್ಪ ಬೇಗ..' ಅವನು ಅವಸರಿಸತೊಡಗಿದ್ದ. ‘ಏನಾಗಿದೆ ಮಗುವಿಗೆ? ನಿಮ್ಮದಾ ಮಗು?' ತುಟಿ ಮೇಲೆ ಬಂದ ಮಾತನ್ನು ಹಲ್ಲು ಕಚ್ಚಿ ಒಳಗೆಳೆದುಕೊಂಡು ನುಂಗಿದ್ದಳು.

ಅವನು ಎತ್ತಲೊ ನೋಡುತ್ತಾ ನಿಂತಿದ್ದ. ಅನುಮಾನವಿಲ್ಲ ಅವನೊಳಗಿನ ನದಿ ಧುಮುಗುಟ್ಟಿ ಹರಿಯುವುದು ಅವಳಿಗೆ ಕೇಳಿಸುತ್ತಿತ್ತು. ಔಷಧಿ ತಂದುಕೊಂಡು ಬಿಲ್ ಮಾಡುವಾಗ ಅವನನ್ನು ಇನ್ನೊಮ್ಮೆ ದಿಟ್ಟಿಸಿ ನೋಡಿದ್ದಳು. ಬಳಲಿಕೆಯಿತ್ತು. ನಲವತ್ತು ದಾಟಿದ ವಯಸ್ಸು, ತೆಳು ನೀಲಿ ಬಣ್ಣದ ಟೀ ಶರ್ಟ್, ಕಪ್ಪನೆಯ ಜೀನ್ಸ್ ತೊಟ್ಟಿದ್ದ. ಟೀ ಶರ್ಟ್ ತೀರಾ ಸುಕ್ಕಾಗಿತ್ತು. ಅವನು ಮೊಬೈಲ್ ಹಿಡಿದುಕೊಂಡು ಅದರಲ್ಲೇನು ಹುಡುಕತೊಡಗಿದ್ದ.

‘ಸರ್, ಕ್ಯಾಶ್ ಆರ್ ಪೋನ್ ಪೇ..'? ಕೇಳಿದ್ದಳು. ಅವನು ಜೇಬಿನಿಂದ ಐದು ನೂರರ ನಾಲ್ಕು ನೋಟು ತಗ್ದು ಅವಳ ಮುಂದೆ ಇಟ್ಟಿದ್ದ. ಹಣ ಪಡೆದು ಚಿಲ್ಲರೆ ಜೊತೆ ಔಷಧಿ ಮುಂದಿಟ್ಟಿದ್ದಳು. ಅವನು ಮೊಬೈಲ್ ನೋಡುತ್ತಲೇ ಔಷಧಿ ತೆಗೆದುಕೊಂಡು ತಡಬಡ ನಡೆದು ಹೋಗಿದ್ದ.

ಅಂದು ಅವನ ಬೆನ್ನಿನಲ್ಲಿ ಅವಳೇನೊ ಓದಿಕೊಂಡಿದ್ದಳು..!

ಅವನು ಮೆಟ್ಟಿಲು ಇಳಿದು ಹೋಗಿದ್ದ. ಬಿಲ್ಲಿಂಗ್ ಸಾಫ್‌ಟ್ವೇರ್ ನಲ್ಲಿ ಅವನ ಹೆಸರಿನ ಬಿಲ್ ಲಾಗಿನ್ ಇನ್ನೂ ತೆರೆದೇ ಇತ್ತು. ಏನೊ ಹೊಳೆದಂತಾಗಿ ಅವನ ಇಡೀ ಬಿಲ್ಲಿಂಗ್ ಹಿಸ್ಟರಿ ಜಾಲಾಡಿದ್ದಳು. ನೋಡುತ್ತಾ ನೋಡುತ್ತಾ ಅವಕ್ಕಾಗಿದ್ದಳು. ಓ ಮೈ ಗಾಡ್. ಎಷ್ಟೊಂದು ಔಷಧಿಗಳು. ಎಷ್ಟೊಂದು ಹಣ. ನಾಲ್ಕೈದು ತಿಂಗಳಲ್ಲಿ ಲಕ್ಷಗಟ್ಟಲೇ ಖರೀದಿ ದಾಖಲಾಗಿತ್ತು.

ಮಗುವಿಗೆ ಏನಾದರೂ ಗಂಭೀರ ಖಾಯಿಲೆ ಇರಬಹುದಾ? ಅಂದು ಆ ಕ್ಷಣಕ್ಕೆ ಅವಳ ಎದೆ ಸಣ್ಣಗೆ ಹೊಡೆದುಕೊಂಡಿತ್ತು. ಖರೀದಿಯಾಗಿದ್ದ ಔಷಧಿಗಳ ಕಡೆ ಗಂಭೀರವಾಗಿ ಕಣ್ಣು ಹಾಯಿಸಿ ನೋಡಿದ್ದಳು. ಔಷಧಿಯನ್ನು ಅನುಮಾನಿಸಬೇಕೊ, ವೈದ್ಯರನ್ನು ಅನುಮಾನಿಸಬೇಕೊ? ನೂರೆಂಟು ತರಹದ ಔಷಧಿ. ನೂರಾರು ಸಲಹೆ. ಔಷಧಿಗಳು ತುಂಬಿಕೊಂಡ ಅಂಗಡಿಯಲ್ಲಿ ಕೂತು.. ಅದರ ವಿರುದ್ಧವೇ ಯೋಚನೆಗಳು ಮೂಡಿದ್ದವು. ಸಾಕಷ್ಟು ಔಷಧಿ ಕುಡಿದಿರಬಹುದಾದ ಆ ಮಗುವಿನ ಸ್ಥಿತಿಯನ್ನು ಕಲ್ಪಿಸಿಕೊಳ್ಳಲು ಯತ್ನಿಸಿದಳು.

ಆ ಕ್ಷಣಕ್ಕೆ ಮಮತಾಗೆ ಆ ಮಗುವನ್ನು ನೋಡುವ ಆಸೆಯಾಗಿಬಿಟ್ಟಿತ್ತು.

**

‘ಹೂಂ ಅಲ್ಲೇ ಇರು.. ಜಸ್ಟ್ ಟೆನ್ ಮಿನಿಟ್ಸ್.. ಹೊರಡ್ತಾ ಇದೀನಿ.. ಹೌದು ಮುಖ್ಯವಾದ ವಿಷ್ಯ.. ಹೂಂ..' ಮಾತನಾಡುತ್ತಾ ಮೆಟ್ಟಿಲು ಇಳಿಯ ತೊಡಗಿದಳು. ರಸ್ತೆಯಲ್ಲಿ ವಾಹನಗಳ ಸದ್ದಿನ ಸಂತೆ. ಬೀದಿ ದೀಪದ ಬೆಳಕಿನ ಮಳೆ. ನಡೆಯುವಾಗ ಏಳುತ್ತಿದ್ದ ಚಪ್ಪಲಿ ಸದ್ದು ಅವಳನ್ನು ಹಿಂಬಾಲಿಸತೊಡಗಿತು. ಹೊರಗೆ ಬಂದು ಸ್ಕೂಟಿಯ ಡಿಕ್ಕಿಗೆ ಬ್ಯಾಗ್ ಹಾಕಿದಳು. ತಣ್ಣನೆಯ ಗಾಳಿ ಅವಳ ಮೈ ಸವರಿ ಓಡಿ ಹೋಯಿತು. ಗಾಡಿ ಚಾಲೂ ಮಾಡಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಂಡಳು. ಅವಳ ಕಣ್ಣುಗಳಲ್ಲಿ ಅಂಜಿಕೆ ಕಾಣಿಸುತ್ತಿತ್ತು. ಗಕ್ಕನೆ ದೃಷ್ಟಿ ಬದಲಿಸಿ ಆಕ್ಸಿಲರೇಟರ್ ತಿರುವಿದಳು.

ಗಾಡಿ ಚಲಿಸಿತು. ಅವಳೊಳಗೆ ಹರೀಶನ ಮುಂದೆ ಹೇಳಬೇಕಾದ ಪದಗಳು ಒಟ್ಟಾಗಿ ಮಾತಿನ ರೂಪ ಪಡೆಯತೊಡಗಿದವು. ರಸ್ತೆ ತುಂಬಾ ವಾಹನಗಳಿಗೆ ಆತುರ. ಅವು ಜಗತ್ತಿನ ಯಾವುದೊ ಸಂಕಟದಿಂದ ತಪ್ಪಿಸಿಕೊಂಡು ಓಡುವಂತೆ ಓಡುತ್ತಿದ್ದವು. ಸಮಯ ಎಂಟು ದಾಟಿತ್ತು. ಸಂಜೆ ಕಾಫಿ ಕುಡಿಯುವುದು ಮರೆತೇ ಬಿಟ್ಟಿದ್ದಳು. ತಲೆ ದಿಮ್ಮೆನ್ನುತ್ತಿತ್ತು. ಎಲ್ಲವನ್ನೂ ಹರೀಶನ ಮುಂದಿಟ್ಟು ಮುಂದಿನ ನಿರ್ಧಾರದ ಮಾತುಗಳಾಗಬೇಕಿತ್ತು. ವಾರದಿಂದಲೂ ಆಡಿದ ಮಾತುಗಳು ಬರೀ ಗಾಳಿಯಲ್ಲಿ, ಕಣ್ಣೀರಿನಲ್ಲಿ ಕರಗಿ ಹೋಗುತ್ತಿದ್ದವು. ಬೆಳಗ್ಗೆ ಮಾಡಿದ ಮೆಸೇಜ್‌ಗೆ ಅವನು ಬರೆದು ಕಳುಹಿಸಿದ್ದ ಪುಟಗಟ್ಟಲೇ ಮಾತುಗಳಲ್ಲಿ ಎಲ್ಲೂ ಉತ್ತರವಿರಲಿಲ್ಲ. ಒಂದು ಕ್ಷಣ ಅವಳಿಗೆ ಪೆಚ್ಚೆನಿಸಿತ್ತು.

ಮುಂದೆ ರಾಯಣ್ಣ ಸರ್ಕಲ್ಲಿನಲ್ಲಿ ಎಡಕ್ಕೆ ಹೊರಳಿದಳು.

ಮೊಬೈಲ್ ರಿಂಗಾಗತಡಗಿತು. ಗಾಡಿ ನಿಲ್ಲಿಸಲಿಲ್ಲ. ಕರೆ ನೋಡಿಕೊಳ್ಳಲಿಲ್ಲ. ಬಹುಶಃ ಹರೀಶನದೇ ಇರಬಹುದೆಂದು. ಅವನಲ್ಲಿ ಈ ನಡುವೆ ಏನೊ ಅಸಹಜ ಆತುರ ಕಾಣಿಸುತ್ತಿದೆ ಅವಳಿಗೆ. ಅವನ ಈ ಅವಸರದಲ್ಲಿ ಯಾವುದೊ ನಿರ್ಧಾರದ ವಾಸನೆ ಅವಳ ಮೂಗಿಗೆ ಬಡಿಯತೊಡಗಿತ್ತು. ನಿಜಕ್ಕೂ ಈಗ ಆತುರ ಇರಬೇಕಾದದ್ದು ಯಾರಿಗೆ? ನನಗೊ ಇವನಿಗೊ..? ತಲೆಯಲ್ಲಿ ಪ್ರಶ್ನೆಗಳೂ ಓಡುತ್ತಿದ್ದವು; ಈಗ ಅವಳ ಗಾಡಿಯೂ!

ದೂರದಿಂದಲೇ ಪಾರ್ಕಿನ ಹೊರಗೆ ಅವನ ಬೈಕ್ ಕಾಣಿಸಿತು. ಅದರ ಪಕ್ಕವೇ ತನ್ನ ಗಾಡಿ ಹಾಕಿ, ಪಾರ್ಕಿನ ಗೇಟು ಹಾದು ಒಳಗೆ ನಡೆದಳು.

ದೂರದ ಒಂದು ಕಲ್ಬೆಂಚಿನಲ್ಲಿ ಹರೀಶ ಮೊಬೈಲ್ ನೋಡುತ್ತಾ ಕೂತಿದ್ದ. ಪಾರ್ಕಿನಲ್ಲಿ ಹಾಕಿದ ತೆಳು ಬಿಳಿ ಬಣ್ಣದ ಬೆಳಕು ಅಲ್ಲಲ್ಲಿ ಹರಡಿತ್ತು. ಅಲ್ಲೊಂದು ಬದಿಯಲ್ಲಿದ್ದ ಕಾರಂಜಿ ಆಗಾಗ ಬಣ್ಣ ಬದಲಿಸುತ್ತಿತ್ತು, ಮನುಷ್ಯರಂತೆ. ಅಷ್ಟೇನು ಜನ ಇರಲಿಲ್ಲ. ಒಂದಿಬ್ಬರು ವಯಸ್ಕರು ತಡ ರಾತ್ರಿಯ ನಂತರ ಬರುವ ನಿದ್ದೆಗಾಗಿ ಈಗಲೇ ಚಡಪಡಿಸುತ್ತಾ ಕೂತಂತೆ ಕಾಣುತ್ತಿದ್ದರು. ಇವಳ ಹೆಜ್ಜೆಯ ಸಪ್ಪಳಕ್ಕೆ ಅವನು ತಲೆಯೆತ್ತಿದ. ಸಣ್ಣ ನಗು ಅರಳಿತು. ಇವಳು ನಗಲಿಲ್ಲ. ಪಕ್ಕದಲ್ಲಿ ಹೋಗಿ ಕೂತಳು. ಅವನು ಮೊಬೈಲ್ ತೆಗೆದು ಜೇಬಿಗಿಟ್ಟ. ಯಾವುದೊ ಗಂಭೀರವಾದ ಮಾತಿಗೆ ಅಣಿಯಾಗುವಂತೆ.

ಕತ್ತಲು ಉಸಿರು ಬಿಗಿ ಹಿಡಿದು ಅವರ ಮಾತಿಗಾಗಿ ಕಾಯತೊಡಗಿತು.

ಎಷ್ಟೊ ಹೊತ್ತು ಇಬ್ಬರೂ ಹಾಗೆ ಕೂತೆ ಇದ್ದರು. ಅವಳು ತನ್ನ ಭುಜದ ಭಾರವನ್ನು ಅವನ ಭುಜಕ್ಕೆ ಸ್ವಲ್ಪ ನೀಡಿ ಕಣ್ಮುಚ್ಚಿದಳು. ಅವನು ಕಣ್ಣು ತೆರೆದೇ ಕೂತಿದ್ದ. ಬಹುಶಃ ಕತ್ತಲಿಗೆ ತೀಡಿ ತೀಡಿ ಮಾತುಗಳನ್ನು ನುಣುಪುಗೊಳಿಸಿಕೊಳ್ಳುತ್ತಿರಬಹುದು. ಇಂತಹ ಹತ್ತಾರು ಸಂಜೆಗಳಲ್ಲಿ ಅವರ ಮಾತಿಗೆ, ನಗುವಿಗೆ.. ತೆಳುಗತ್ತಲಿನ ತುಣಕಿನಲ್ಲಿ ವಿನಿಮಯಗೊಂಡ ಮುತ್ತುಗಳಿಗೆ ಸಾಕ್ಷಿಯಾದ ಈ ಪಾರ್ಕು ಮತ್ತು ಆ ಬೆಂಚು ಇಂದು ಅವರ ಮೌನವನ್ನು ನೋಡತೊಡಗಿತ್ತು.

‘ವಾಟ್ಸಾಪ್ ಮಾಡಿದ್ದೆ.. ನೋಡ್ಲಿಲ್ವ..' ಪೀಠಿಕೆ ಶುರು ಮಾಡಿದ. ಅಲ್ಲಿದ್ದ ನೀರಿನ ಚಿಲುಮೆಯಲ್ಲಿ ಕೆಂಪು ಬಣ್ಣದ ಬೆಳಕು ದಿಗ್ಗನೆ ಬೆಳಗಿ ಹಳದಿ ಬಣ್ಣಕ್ಕೆ ಹೊರಳಿತು.

‘ನೋಡ್ಲಿಲ್ಲ.. ಓದಿದೆ. ಅವು ನೀ ಹೇಳಬೇಕಾದ ಮಾತಲ್ಲ. ನಂಗೆ ಬೇಕಾದ ಮಾತೂ ಅಲ್ಲ...' ಅವಳು ಪ್ರಸ್ತಾವನೆ ಮುಂದಿಟ್ಟಳು. ಅವಳ ಗಂಟಲು ಕಟ್ಟಿತು. ಅವರ ಸಲುಗೆಯ ಮಾತುಗಳು ಅಪರಿಚಿತ ಸಂದರ್ಶನದ ರೂಪ ಪಡೆದುಕೊಂಡಿದ್ದಕ್ಕೆ.. ಆ ತೆಳುಗತ್ತಲೆಗೂ ಅಚ್ಚರಿ.

‘ಅಲ್ಲ ಕಣೇ ಅದು..' ಮಾತು ತಡೆದ ಅವನು. ಅವಳೇನು ಕುತೂಹಲ ತಾಳಲಿಲ್ಲ. ‘ನೋಡು ಮಮು, ಇದೆಲ್ಲ ಕಷ್ಟ ಕಣೇ. ನನ್ನ ನಿನ್ನ ನಡುವೆ ಎಲ್ಲನೂ ಸರಿ ಇರಬಹುದು. ನಮ್ಮ ಮತ್ತು ಈ ಸಮಾಜದ ನಡುವೆ ಎಲ್ಲನೂ ಸರಿ ಇಲ್ಲ ಅಲ್ವ. ಎಲ್ಲಾ ಒಂದು ಹಂತಕ್ಕೆ ಬಂದ ಮೇಲೆ ಉಳಿಸಿಕೊಳ್ಳೋಣ ಕಣೇ..' ಎನ್ನುತ್ತಾ ಮತ್ತೊಂದು ಉಸಿರು ತೆಗೆದುಕೊಂಡು ‘ಆದರೆ ಈಗ ಇದೆಲ್ಲಾ ತುಂಬಾ ಕಷ್ಟ..' ಅವನ ಪ್ರತಿ ಶಬ್ದದಲ್ಲೂ ಒಂದು ನಿರ್ಧಾರ ಕಾಣಿಸುತ್ತಿತ್ತು. ಅವನ ಮಾತು ಕೇಳಿಸಿಕೊಂಡು ಕತ್ತಲು ಮತ್ತಷ್ಟು ಕಪ್ಪಾಯಿತು.

ಅವಳು ಅವನ ಕೈಯನ್ನು ಬಿಗಿಯಾಗಿ ಹಿಡಿದಳು. ಅವಳು ಹೇಳಬೇಕಾದ ಮಾತುಗಳನ್ನು ಅವಳ ಹಿಡಿದ ಬಿಗಿ ಹೇಳತೊಡಗಿತ್ತು.. ಅವಳ ಮೈ ಬಿಸಿಯಾಗತೊಡಗಿತ್ತು. ಅವಳ ಕಣ್ಣು ಕೆಂಪಾದದ್ದು ನೋಡಿ ತಿಳಿ ಬೆಳಕು ಒಮ್ಮೆ ನಡುಗಿತು. ಅವಳ ಹಿಡಿತದಲ್ಲಿ ಏನಿತ್ತು ಎಂಬುದು ಅವನಿಗೆ ಅರ್ಥವಾಗಲಿಲ್ಲ. ಅಷ್ಟಕ್ಕೂ ಆ ಹಿಡಿತದ ಕಡೆ ಅವನ ಗಮನವೇ ಹೋಗಲಿಲ್ಲ.

ಮತ್ತೆ ಮೌನ.. ಬಹುಶಃ ಅವಳೊಳಗೆ ಕುದಿ ಶುರುವಾಗಿದೆ. ಸಿಡಿಯಲು ಹವಣಿಸುತ್ತಿದೆ. ಅವಳ ಹಿಡಿತ ಮತ್ತಷ್ಟು ಬಿಗಿಯಾಯಿತು. ಒಳಗಿನ ಕುದಿಗೆ ಅವಳ ಮಾತುಗಳು ಉರಿದು ಹೋಗಿ ಬೂದಿಯಾಗತೊಡಗಿದ್ದವು.

‘ನಂದೂ ಒಂದ್ ಬದ್ಕು...' ಮುಂದಿನ ಮಾತುಗಳು ಆಚೆ ಬರಲಿಲ್ಲ. ಅವಳ ಕಣ್ಣಿಂದ ಒಂದು ಹನಿ ಜಾರಿ ಮಣ್ಣು ಸೇರಿ ಸತ್ತು ಹೋಯಿತು. ಹೇಳುವುದು ಹೇಳಿಯಾಯಿತು ಎಂಬ ಸಣ್ಣ ಬಿಡುಗಡೆ ಪಡೆದವನಂತೆ ಅವನು ತುಸು ನಿರಾಳವಾದ.

ನಾನೀಗ ಸಿಡಿದರೆ.. ಈ ಬಿಗಿ ಹಿಡಿತವನ್ನು ಬೆಳಕಿಗೆ ತಂದರೆ ಏನಾಗಬಹುದು.. ನ್ಯಾಯ ಅಂತ ಹೊರಟರೆ ಮಾತುಗಳು ಎಂಥವು ಹುಟ್ಟಬಹುದು.. ನಾಲ್ಕು ಜನ ಏನು ಆಡಿಕೊಳ್ಳಬಹುದು. ಗಂಡ ಇಲ್ಲದ್ದೆ ನೆಪಮಾಡಿಕೊಂಡು ಇಷ್ಟೊಂದು ಮೆರೆಯಬಾರದು.. ಇವ್ಳದು ಇನ್ನೂ ಏನೇನು ಇದೆಯೊ ಅಂದುಬಿಟ್ಟರೆ? ಇನ್ನೊಂದು ಕಣ್ಣೀರು ಜಾರಿತು. ಆದರೆ ಅದು ಮಣ್ಣು ಸೇರಲಿಲ್ಲ. ಮುಂಗೈ ಮೇಲೆ ಬಿದ್ದು ಅಲ್ಲೇ ಹರಿದಾಡಿತು, ಸಮಾಧಾನಿಸುವಂತೆ.

‘ಹೀಗೆ ಕತ್ತಲಲ್ಲಿ ನಾವು ಸೇರುವಾಗಲೇ ಯೋಚಿಸಬೇಕಿತ್ತು ನಾನು, ಇದಕ್ಕೆ ಬೆಳಕಲ್ಲಿ ಬೆಲೆ ಇಲ್ಲ ಅಂತ. ಅಲ್ವಾ?' ತಣ್ಣಗೆ ಬಿಕ್ಕಳಿಸಿದಳು. ಕತ್ತಲು ಬೆದರಿ, ಸಣ್ಣಗೆ ಬೆವೆತು ನಿಂತಿತು. ಅವನು ಚೂರೂ ಕದಲಿಲ್ಲ. ಅವನ ಮಾತೂ ಕದಲಿಲ್ಲ. ಮತ್ತೆ ಅವರ ನಡುವೆ ಇನ್ನಷ್ಟು ಮೌನ.

ಎರಡು ವರ್ಷದಲ್ಲಿ ನಾನು ಇವನೊಳಗೆ ಇಳಿದು ಹೋಗಿದ್ದು ಇಷ್ಟೇನಾ..? ಒಬ್ಬ ಮನುಷ್ಯ ಇನ್ನೊಬ್ಬರೊಳಗೆ ಇಳಿಯಲು, ಬೇರು ಬಿಡಲು, ಹೂವಾಗಲು ಎಷ್ಟು ದಿನಗಳು ಬೇಕು? ಎಷ್ಟು ವರ್ಷ ಬೇಕು? ಇದು ದಿನದ ಪ್ರಶ್ನೆಯೊ, ನೆಲದ ಪ್ರಶ್ನೆಯೊ? ಎಲ್ಲಾ ನೆಲದಲ್ಲೂ ಗಿಡಗಳು ಬೆಳೆಯುವುದಿಲ್ವ? ಎದ್ದವು ಅವಳೊಳಗೆ ಪ್ರಶ್ನೆಗಳು..

ಕಗಾಡುತ್ತಾಳೆ, ಅಳುತ್ತಾಳೆ, ಬೇಡುತ್ತಾಳೆ, ಅವಮಾನ ಮಾಡುತ್ತಾಳೆ, ಬೆದರಿಕೆ ಹಾಕುತ್ತಾಳೆ.. ಅಂದುಕೊಂಡಿದ್ದ ಹರೀಶ. ಅದಕ್ಕೆಲ್ಲಾ ಸರಿಯಾದ ಮಾತುಗಳನ್ನು ಸಿದ್ಧ ಮಾಡಿಕೊಂಡು ಬಂದಿದ್ದ. ಈಗ ಆ ಮಾತುಗಳೇ ಅವನನ್ನು ನೋಡಿ ನಗತೊಡಗಿದ್ದವು. ಅವಮಾನವಾದಂತಾಯ್ತು. ನಾಚಿಕೆಯಾಗತೊಡಗಿತು. ಅವಳನ್ನು ಮಾತಿನಲ್ಲಿ ಕಟ್ಟಿಹಾಕಿ ಸೋಲಿಸಿ ಬಿಡುವೆ ಅಂತ ಬಂದಿದ್ದ. ಕತ್ತಲು ಅವನನ್ನು ನೋಡಿ ನಗತೊಡಗಿತ್ತು.

‘ಹೋಗ್ತೀನಿ..' ಎನ್ನುತ್ತಾ ಹಿಡಿದ ಕೈ ಸಡಿಲಗೊಳಿಸಿದಳು. ಅವಳ ಮಾತಿಗೆ ಕನಲಿ ಹೋದ. ಏನೂ ಹೇಳದೆ, ಮಾತೇ ಆಡದೆ, ಏನೊಂದೂ ಹೇಳದೆ, ಹೊರಟೆ ಬಿಡುವಳಾ? ಅವನಿಗೆ ಭಯವಾಯಿತು. ಹೋಗುವುದನ್ನು ತಡೆಯಬೇಕು ಅನಿಸಿತು.

‘ನೀನು ಹೋಗೊವರೆಗೂ ನಾನಿಲ್ಲಿ ಕೂತೆ ಇರಬೇಕು ಅನ್ಕೊಂಡೆ. ಸಂಬAಧದಲ್ಲಿ ಎದ್ದು ಹೋದವರಿಗಿಂತ ಉಳಿದು ಹೋದವರಿಗೆ ಕಣ್ಣೀರು ಜಾಸ್ತಿ. ಈಗಾಗಲೇ ಕಣ್ಣೀರು ಹರಿದು ಹರಿದು ಖಾಲಿಯಾಗಿದೆ. ಉಳಿದು ಹೋಗಲು ಕಣ್ಣೀರಿಲ್ಲ...' ಹಿಡಿದುಕೊಂಡಿದ್ದ ಕೈ ಸಡಿಲಿಸಿ ಎದ್ದಳು.

ದಾರಿಯಲ್ಲಿ ಅವಳ ಹೆಜ್ಜೆಗೂ ಮೊದಲು ಅವಳ ಕಣ್ಣೀರಿದ್ದವು. ತನ್ನ ಕಣ್ಣೀರನ್ನು ತಾನೇ ತುಳಿದು ಕೊಂಡು ನಡೆದು ಹೋದಳು.

**

ಮರುದಿನ ಶಾಪ್ ಗೆ ಬಂದಾಗ ಅವಳ ಕಣ್ಣುಗಳು ಊದಿದ್ದವು. ‘ಯಾಕೆ ಮೇಡಂ ರಾತ್ರಿ ಮಲಗಿಲ್ವ? ಓಟಿಟಿಯಲ್ಲಿ ಯಾವುದಾದರೂ ಹೊಸ ಸಿನೆಮಾ ನೋಡಿದ್ರಾ ಹೇಗೆ?' ನಿತಿನ್ ಎಂದಿನಂತೆ ಛೇಡಿಸಿದ. ‘ಸೊಳ್ಳೆ ಕಾಟ ಮಾರಾಯಾ.. ಥೂ ರಾತ್ರಿಯಿಡೀ ನಿದ್ದೆ ಇಲ್ಲ' ಹಿತವಾದ ಸುಳ್ಳು ಸಹಜವಾಗಿಯೇ ಬಂತು. ಬೆಳಗ್ಗೆ ಕಮೀಜ್ ಧರಿಸುವಾಗ ಒಮ್ಮೆ ತನ್ನ ಹೊಟ್ಟೆ ಸವರಿಕೊಂಡಿದ್ದಳು. ಒಂಟಿ ಬದುಕಿನಲ್ಲಿ, ಒಂಟಿ ದುಃಖ, ಒಂಟಿಯಾಗಿಯೇ ಹರಿದಾಡಿತ್ತು.

ಯೋಚಿಸುತ್ತಲೇ ಮೆಟ್ಟಿಲು ಹತ್ತಿದ್ದಳು. ನಿತಿನ್ ಹಾಗೂ ಇತರರು ಈಗಾಗಲೇ ಆಂಗಡಿ ತೆರೆದು ಕೂತಿದ್ದರು. ಗಿರಾಕಿಗಳು ಅಲ್ಲೊಂದು, ಇಲ್ಲೊಂದು. ಬಂದವಳೇ ಒಳಗೆ ಹೋಗಿ ತನ್ನ ಕಮೀಜ್ ಮೇಲೆ ಉದ್ದದ್ದ ಒಂದು ಬಿಳಿ ಅಂಗಿ ತೊಟ್ಟುಕೊಂಡು ಆಚೆ ಬಂದಿದ್ದಳು. ಕೆಲವರು ಕೆಲಸದಲ್ಲಿದ್ದರೆ ಇನ್ನೂ ಕೆಲವರು ಮೊಬೈಲ್ ನೋಡುತ್ತಾ ನಿಂತಿದ್ದರು. ಆಗಲೇ ನಿತಿನ್ ಮಾತನಾಡಿಸಿದ್ದು.

ಕೆಲಸದ ಕಡೆ ಗಮನ ನಿಲ್ಲುತ್ತಿರಲಿಲ್ಲ.. ‘ಆದರೆ ಈಗ..' ಅಂದ ಹರೀಶನ ಮಾತು ಕಿವಿ ತುಂಬಾ ತುಂಬಿಕೊಂಡು ಬೇರೆ ಮಾತುಗಳಿಗೆ ಆಸ್ಪದಕೊಡುತ್ತಿರಲಿಲ್ಲ. ಅವನ ಆ ದನಿಯಲ್ಲಿ.. ಹೇಳುವ ರೀತಿಯಲ್ಲಿ ಅವನ ಇಷ್ಟು ದಿನದ ಹುನ್ನಾರ ಕಾಣಿಸಿತ್ತು.

‘ಆದರೆ ಈಗ' ಏನು? ಗಂಡ ಬಿಟ್ಟವಳು ಅಂತಾನ? ಸೆಕೆಂಡ್ ಹ್ಯಾಂಡ್ ಅಂತಾನ? ವ್ಯಕ್ತಿ ಸೆಕೆಂಡ್ ಹ್ಯಾಂಡ್ ಅಂತ ಭಾವಿಸುವಾಗ ಸುರಿದುಕೊಂಡ ಸುಖವೂ ಸೆಕೆಂಡ್ ಹ್ಯಾಂಡ್ ಅಂತ ಯಾಕೆ ಅನಿಸಲಿಲ್ಲ ಅವನಿಗೆ..? ಹೀಗೆ ಯೋಚಿಸುವಾಗಲೇ ಅವಳ ಕಣ್ಣು ತುಂಬಿತು. ಗ್ರಾಹಕರು ಹೆಚ್ಚಾದಂತೆ ತಾನು ಬಿಲ್ಲಿಂಗ್ ಗೆ ಕೂತಳು. ಔಷಧಿ ಹುಡುಕಿಕೊಡುವುದಕ್ಕೆ ಮನಸು ಸರಿಯಿರಲಿಲ್ಲ. ಯಾವುದಕ್ಕೆ ಯಾವುದೊ ಕೊಟ್ಟು ಬಿಟ್ಟರೆ ಎಂಬ ಅಳಕು. ಹುಡುಗರು ತಂದುಕೊಟ್ಟ ಔಷಧಿಗಳನ್ನು ಬಿಲ್ ಮಾಡಿ ಕೊಡತೊಡಗಿದಳು...

‘ಆದರೆ ಈಗ..?' ಹರೀಶನ ದನಿಯೇ ಮತ್ತೆ ಮತ್ತೆ ಕಾಡತೊಡಗಿತ್ತು. ಕಾಡಿದಂತೆ ಕಣ್ಣುಗಳೂ ತುಂಬುತ್ತಿದ್ದವು.

ಈ ತೊಳಲಾಟದ ಒಂದು ನೀರವ ಮೌನದಲ್ಲಿ ‘ಅವರು..' ನೆನಪಾಗಿ ಬಿಟ್ಟರು. ನಿನ್ನೆಯಷ್ಟೇ ಅವರನ್ನು ನೆನೆದು ತೊಳಲಾಡಿದ್ದಳು. ಯಾಕೆ ಬರುತ್ತಿಲ್ಲ ಈಗ ಔಷಧಿಗೆ? ಔಷಧಿ ಬೇಡವಾಗಿದ್ದರೆ ಮಗುವಿಗೆ ಬೇಕಾದ ಸೋಪು, ಶ್ಯಾಂಪು, ಡೈಪರ್‌ಗಾದರೂ ಬರಬಹುದಿತ್ತು ಅವರು. ಅಂಗಡಿ ಬದಲಿಸಿದ್ರಾ? ಹಾಸ್ಪಿಟಲ್ ಬದಲಿಸಿದರೆ ಭರವಸೆ ಮೂಡಬಹುದು, ಔಷಧಿ ಅಂಗಡಿ ಬದಲಿಸಿದರೂ ಭರವಸೆ ಮೂಡುತ್ತದಾ? ಅವರ ನಂಬರ್ ಹಾಕಿ ಹುಡುಕಲೇ? ಎಲ್ಲಾದರೂ ಔಷಧಿ ಖರೀದಿ ಮಾಡಿದ್ದಾರಾ? ಮಗುವಿನ ಸ್ಥಿತಿ ಹೇಗಿರಬಹುದು..

ಅಥವಾ ಮಗುವಿಗೆ ಏನಾದರೂ ಆಗಿಯೇ ಹೋಯ್ತಾ.. ? ಮೌಸ್ ಹಿಡಿದ ಕೈ ಒಮ್ಮೆ ನಡುಗಿತು..

ಈ ಗೊಂದಲಗಳ ನಡುವೆ ಅವಳ ಗಮನವೂ ಅವಳ ಹೊಟ್ಟೆಯೆಡೆಗೆ ಹರಿಯಿತು..

ಅವಳಿಗೆ ತಡೆಯಲಾಗಲಿಲ್ಲ. ಕರೆ ಮಾಡಿ ಯಾಕೆ ಮೆಡಿಕಲ್ ಕಡೆ ಈ ನಡುವೆ ಬಂದಿಲ್ಲ..? ಛೇ ಇದು ಕೇಳುವಂತಹ ಮಾತಾ? ಯಾಕೆ ಮನೆಗೆ ಬಂದಿಲ್ಲ.. ಯಾಕೆ ಮಾತಿಗೆ ಸಿಕ್ಕಿಲ್ಲ.. ಯಾಕೆ ಈ ನಡುವೆ ಅಪರೂಪ ಅಂತ ಕೇಳುವುದು ಸರಿ. ಔಷಧಿ ಕೊಳ್ಳಲು ಯಾಕೆ ಬಂದಿಲ್ಲ ಅಂತ ಕೇಳಬಹುದೆ? ಯಾರಾದರೂ ಹಾಗೆ ಕೇಳುತ್ತಾರೆಯೇ? ವೈದ್ಯರು ಯಾಕೆ ಈ ನಡುವೆ ನೀವು ಹಾಸ್ಟಿಟಿಲ್ ಗೆ ಬಂದಿಲ್ಲ ಅಂತ ಕೇಳುತ್ತಾರೆಯೇ? ನನ್ನ ಈ ಮಾತು ಒಂದು ಕಾಳಜಿ ಅಂತ ಅವರಿಗೆ ಅರ್ಥವಾದರೆ ಸರಿ.. ಅರ್ಥವಾಗದೆ ಹೋದರೆ ಅದೆಷ್ಟು ನೊಂದು ಕೊಳ್ಳಬಹುದು? ಕರೆ ಮಾಡುವ ಯೋಚನೆಯನ್ನೇ ಕೈ ಬಿಟ್ಟಳು.

ತನ್ನ ಒಳಗುದಿ ತಡೆಯಲಾಗದೆ ‘ಅವರ' ಮೊಬೈಲ್ ನಂಬರ್ ಹುಡುಕಿ ಅದನ್ನು ಬಿಲ್ಲಿಂಗ್ ಸಾಪ್‌ಟ್ವೇರ್ ನಲ್ಲಿ ಹಾಕಿ ಸರ್ಚ್ ಕೊಟ್ಟಳು.

ಅವಳ ಮುಂದೆ ದೊಡ್ಡ ಪಟ್ಟಿಯೇ ಬಂದು ಬಿತ್ತು. ಸುಮಾರು ಇಪ್ಪತ್ತೈದು ದಿನಗಳಿಂದ ಮಂಗಳೂರಿನ ಬ್ರಾಂಚ್ ನಲ್ಲಿ ಸತತವಾಗಿ ಔಷಧಿ ಖರೀದಿಸಿದ್ದು ತೋರಿಸುತ್ತಿತ್ತು. ಎಂಥದ್ದೊ ಒಂದು ಸಮಾಧಾನ.. ಔಷಧಿ ಕೊಂಡಿದ್ದಾರೆ ಅಂತಲ್ಲ. ಮಗು ಹೋರಾಟದಲ್ಲಿದೆ. ಅದು ಸೋತಿಲ್ಲ. ಹೌದು ಆ ಮಗು ಸೋತಿಲ್ಲ.

ಸೋಲುವುದೂ ಇಲ್ಲ.. ಸೋಲಬಾರದು ಕೂಡ. ಮೌನದಲ್ಲೇ ಒಂದು ಪ್ರಾರ್ಥನೆ ಸಲ್ಲಿಸಿಬಿಟ್ಟಳು. ಮಗುವಿನ ಜೊತೆಯಲ್ಲೇ ‘ಅವರು' ತೆಗೆಸದ ಗಡ್ಡದಲ್ಲಿ, ಒಂದು ಹಳೆಯ ಟೀ ಶರ್ಟಿನಲ್ಲಿ.. ದೈನ್ಯದ ರೀತಿ ನಿಂತು ಔಷಧಿಕೊಂಡ ಹೋಗುತ್ತಿದ್ದ ಅವರ ಮುಖವೂ ನೆನಪಾಯಿತು.

ಅವತ್ತು ಇಡೀ ದಿನ ಹರೀಶನ ಮೆಸೇಜೂ ಇರಲಿಲ್ಲ, ಕರೆಯೂ ಇರಲಿಲ್ಲ..

**

ಮೆಟ್ಟಿಲು ಇಳಿಯುವಾಗ ಹರೀಶ ನೆನಪಾದ. ಅವನೊಂದಿಗೆ ಕಳೆದ ಇಂತದ್ದೆ ತೆಳುಗತ್ತಲ್ಲ ಬದುಕು ನೆನಪಾಯ್ತು. ಹೀಗೆ ಶಾಪಿನಿಂದ ಹೊರಟು ಎಷ್ಟೊ ದಿನ ಅವನನ್ನು ಭೇಟಿ ಮಾಡಿಯೇ ಮನೆಗೆ ಹೋಗುತ್ತಿದ್ದಳು. ಕೋಪ ಮತ್ತು ದುಃಖ ಒಟ್ಟಿಗೆ ಹುಟ್ಟಿದವು. ಗಾಡಿ ಬಳಿ ಬಂದು. ಬ್ಯಾಗ್ ಡಿಕ್ಕಿಯಲ್ಲಿ ಹಾಕಿ ಚಾಲೂ ಮಾಡಿದಳು. ಕತ್ತಲು ರಾತ್ರಿಯ ಸುಖಕ್ಕೆ ಅಣಿಯಾಗುತ್ತಿತ್ತು. ರಸ್ತೆ ಮೇಲೆ ವಾಹನಗಳ ಗಿಜಿಗಿಜಿ ಸದ್ದು. ಸಂಜೆಯ ತಣ್ಣನೆಯ ಗಾಳಿ ಅವಳ ಕಣ್ಣೊಳಗೆ ನುಗ್ಗುತ್ತಿತ್ತು.

ಈಗ ಎಲ್ಲಿಗೆ ಹೋಗುವುದು? ಏಕಾಏಕಿ ಕಣ್ಣು ತುಂಬಿತು. ಮನೆಯ ದಾರಿ ಬಿಟ್ಟರೆ ಅವಳಿಗೆ ಬೇರೆ ದಾರಿಯಿರಲಿಲ್ಲ. ತನಗೆ ತಾನೇ ಬಲವಂತ ಮಾಡಿಕೊಂಡು ಪಾರ್ಕಿನ ಕಡೆಯೇ ಗಾಡಿ ಓಡಿಸತೊಡಗಿದಳು. ಗಾಡಿಯ ಮಿರರ್ ನಲ್ಲಿ ಮುಖ ನೋಡಿಕೊಳ್ಳುವ ಧೈರ್ಯ ಬರಲಿಲ್ಲ. ತುಸು ವೇಗವಾಗಿಯೇ ಆಕ್ಸಿಲರೇಟರ್ ತಿರುವಿದಳು.

ಅದೇ ಬೆಂಚು. ಖಾಲಿ ಇದೆ. ವಯಸ್ಸಾದವರು ಕೂತು ಕತ್ತಲಿನೊಂದಿಗೆ ಮಾತನಾಡುತ್ತಿದ್ದಾರೆ. ಕಾರಂಜಿ ಬಣ್ಣ ಕಕ್ಕುತ್ತಿತ್ತು. ತೆಳುಗತ್ತಲು ಮತ್ತೆ ಯಾರದೊ ಮನಸು ಒಡೆಯಲು ಸಿದ್ಧವಾಗಿದೆ. ನಡೆದು ಹೋಗಿ ಕೂತಳು. ದುಃಖ ಉಕ್ಕಿ ಬಂತು. ನಿನ್ನೆಯಿಂದ ತಡೆ ಹಿಡಿದಿದ್ದ ಎಲ್ಲಾ ದುಃಖವನ್ನು ಚೆಲ್ಲಿಬಿಟ್ಟಳು. ಬಿಕ್ಕಿ ಬಿಕ್ಕಿ ಅತ್ತಳು. ಬೆಂಚಿನ ಮೇಲಿನ ಸುಖದ ಎಲ್ಲಾ ಕೆಟ್ಟ ಕಲೆಯನ್ನು ಕಣ್ಣೀರಿನಿಂದ ತೊಳೆದು ಬಿಟ್ಟಳು. ಹೊಟ್ಟೆ ಮುಟ್ಟಿ ನೋಡಿಕೊಂಡಳು. ಇನ್ನಷ್ಟು ದುಃಖ ಉಮ್ಮಳಿಸಿತು.

ಸಾವರಿಸಿಕೊಂಡು ಮೊಬೈಲ್ ತೆಗೆದು ಕೂತಳು. ಹರೀಶನಿಗೊಂದು ಮೆಸೇಜ್ ಬರೆಯತೊಡಗಿದಳು.

ಹರೀಶ್,

ನಿನ್ನನ್ನು ಬಿಡುಗಡೆಗೊಳಿಸುತ್ತಿದ್ದೇನೆ. ನೀನು ನನ್ನ ಋಣದಲ್ಲಿ ಇದೀಯ. ಆ ಋಣ ಜೀವನ ಪೂರ್ತಿ ನಿನ್ನನ್ನು ಕಾಡುತ್ತದೆ. ನೈತಿಕವಾಗಿ ಕೆಡುವುತ್ತದೆ. ಅಷ್ಟು ಸಾಕು. ಕೊಲ್ಲಲು ಹತಾರಗಳೇ ಬೇಕಿಲ್ಲ.

ಒಂಟಿ ಮಹಿಳೆಗೆ ಒಂದು ಆಸೆ ಇರುತ್ತದೆ. ಆದು ಆಶ್ರಯದ ಆಸೆ. ಆಶ್ರಯ ಅಂದರೆ ಸುಖ, ದುಡ್ಡು, ಮನೆ, ಊಟದ್ದಲ್ಲ.. ಒಂದು ತೋಳಿನದು. ಇದು ಗಂಡ ಇರುವ ಹೆಣ್ಣಿಗೆ, ಹೆಂಡತಿ ಇರುವ ಗಂಡಿಗೆ ಅರ್ಥವಾಗುವುದಿಲ್ಲ.. ಅವರಿಗೆ ಅವರ ಆಚೆ ಅರ್ಥ ಆಗೋದು ಕೇವಲ ದೇಹ ಸುಖ.

ನೀನು ದೇಹ ಬೇಕು ಅಂತಲೇ ಬರಬಹುದಿತ್ತು. ಬೇರೆ ಏನೇನೊ ಹೇಳಿಕೊಂಡು ಬಂದೆ. ನಾನು ಬ್ಯಾಚುಲರ್, ಕೆಲಸ ಇದೆ, ನೀನು ಪ್ರಾಣ, ಮದುವೆಯಾಗ್ತೀನಿ.. ಹೀಗೆ. ಶಾಲೆ ಮಕ್ಕಳು ನಾಟಕದಲ್ಲೂ ಇಂತಹ ಎಳಸು ಡೈಲಾಗ್ ಹೊಡೆಯುವುದಿಲ್ಲವಲ್ಲೊ. ನೀನು ಸುಖ ಪಟ್ಟೆ, ನಾನೂ ಕೂಡ. ಆದರೆ ನೀನು ಸುಖದ ಮೇಲೆ ಕಟ್ಟಿದ ಆಶ್ರಯದ ಮಹಲು ಇತ್ತಲ್ಲ ಅದು ಮನುಷ್ಯರೆಡೆಗೆ ಇರುವ ನಂಬಿಕೆ ತಿಂದು ಹಾಕಿದೆ. ನನಗೆ ಎಷ್ಟೊ ಬಾರಿ ನೇರವಾಗಿ ದೇಹ ಆಸೆಪಡುವವರೆ ಇಷ್ಟ ಆಗ್ತಾರೆ. ಅವರಲ್ಲಿ ಮೋಸ ಇರಲ್ಲ. ನಿನ್ನದು ಮೋಸ. ಬಣ್ಣದ ಮೋಸ.

ಬರೀ ಐದು ನೂರು ರೂಪಾಯಿಯಲ್ಲಿ ಆ ತಪ್ಪು ಇಲ್ಲವಾಗುತ್ತದೆ. ಹೊಟ್ಟೆಯಲ್ಲಿನ ಜೀವ ಜಾರಿ ಹೋಗುತ್ತದೆ. ಇದು ಕೇವಲ ನನ್ನ ನಿನ್ನ ಬದುಕಿನ ಪ್ರಶ್ನೆಯಾಗಿರಲಿಲ್ಲ. ನಿನಗೆ ಜೀವದ ಮಹತ್ವ ಇದ್ದಿದ್ದರೆ ನನ್ನ ಬದುಕಿನಲ್ಲಿ ಹೀಗೆ ಆಡ್ತಾ ಇರಲಿಲ್ಲ. ಆದರೆ ಇದು ಜೀವಿಯ ಪ್ರಶ್ನೆ. ನನಗೊಂದು ಬದುಕಾಯ್ತು ಅಂತ ಸಂಭ್ರಮಿಸಿದ್ದೆ. ಒಂಟಿ ಹೆಣ್ಣು ಮಕ್ಕಳ ಬದುಕಿನಲ್ಲಿ ಸಂಭ್ರಮ ಅನ್ನೋದು ಯಾರೊ ಒಬ್ಬರು ಮೆಸೇಜ್ ಕಳುಹಿಸಿ ತಕ್ಷಣ ಡಿಲೀಟ್ ಎವೆರಿಒನ್ ಮಾಡಿದಂತೆ.. ಬಂದ ಕುರುಹು ಇರುತ್ತದೆ. ಸಂಭ್ರಮ ಇರುವುದಿಲ್ಲ..

ಮತ್ತೆಂದೂ ಕಾಣಸಿಗಬೇಡ
ಯಾವ ಒಂಟಿ ಹೆಣ್ಣಿನ ದೇಹ ಮುಟ್ಟಬೇಡ..

- ಮಮತ

ಕಳುಹಿಸುವ ಬಟನ್ ಒತ್ತಿ.. ನಂಬರ್ ಬ್ಲಾಕ್ ಮಾಡಿ ಅಲ್ಲಿಂದ ಎದ್ದಳು.

ಹಾಸಿಗೆ ಹಿಡಿದ ಅಮ್ಮನಿಗೆ ತೆಗೆದುಕೊಳ್ಳಬೇಕಾದ ಹಣ್ಣುಗಳು ನೆನಪಾಗಿ ಹೆಜ್ಜೆ ಚುರುಕುಗೊಳಿಸಿದಳು.

**

ಕೆಲಸ ಮುಗಿಸಿಕೊಂಡು ದಿನಾ ಮನೆ ಕಡೆ ಗಾಡಿ ಓಡಿಸುವಾಗ ಕಣ್ಣು ತುಂಬುತ್ತದೆ ಅವಳಿಗೆ. ಮನೆಯಲ್ಲಿ ಸತ್ತು ಹೋದ ಗಂಡನ ಪೋಟೊ ಇಲ್ಲ. ಅದನ್ನು ಹಿಡಿದ ದಿನಾ ಅಮ್ಮ ಮಲಗಿದ್ದಲ್ಲೇ ಬೈಯುತ್ತಾಳೆ. ಗಂಡನ ವಿಮೆಗೆ, ಆಸ್ತಿಗೆ ಅವಳು ಅರ್ಜಿ ಹಾಕಿಲ್ಲ.. ‘ನಾನೆಂದೂ ಹಾಕುವುದಿಲ್ಲ..' ಅಂತಾಳೆ. ಅಮ್ಮನೂ, ಬಂಧುಗಳೂ ಅದಕ್ಕೂ ಬೈಯುತ್ತಾರೆ. ಅವಳು ಯಾವ ಉತ್ತರವನ್ನೂ ಕೊಡುವುದಿಲ್ಲ.

ದೂರದ ತೀರ್ಥಹಳ್ಳಿಗೆ ಮದುವೆಯಾಗಿ ಹೋದಾಗ ಅವಳಿಗೆ ಇಪ್ಪತ್ತೆರಡು ವರ್ಷ. ತಿರುಗಿ ನೋಡುವಂತಹ ಚೆಲುವು ಇವಳದು. ಗೋಧಿ ಬಣ್ಣದಲ್ಲಿ ಲಕ್ಷಣವಾಗಿದ್ದಳು. ಮದುವೆಯಲ್ಲೂ ಹಠ ಹಿಡಿದಿದ್ದಳು ಮೂಗುತಿ ಬೇಡವೇ ಬೇಡವೆಂದು. ಅಮ್ಮನ ಬಲವಂತಕ್ಕೆ ಸಣ್ಣದೊಂದು ಮುತ್ತಿನದು ಹಾಕಿಸಿಕೊಂಡಿದ್ದಳು. ಒಬ್ಬಳೇ ಮಗಳು, ತಂದೆ ಇಲ್ಲದ ಮಗಳು ಅಂತ ಅವರಮ್ಮ ಹೆಚ್ಚು ಅಡಿಕೆ ತೋಟವಿದೆಯೆಂದು ತೀರ್ಥಹಳ್ಳಿ ಕಡೆಯ ಸುರೇಶನಿಗೆ ಮದುವೆ ಮಾಡಿಕೊಟ್ಟಿದ್ದಳು.

ಮೂರು ವರ್ಷವಾದರೂ ಆಕೆಗೆ ಮಕ್ಕಳಾಗಿರಲಿಲ್ಲ. ಒಂದು ಬೆಳಗ್ಗೆ ಗಂಡ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಾಗಲೇ ಅವನ ಅನೈತಿಕ ಸಂಬAಧ ಬಹಿರಂಗವಾದದ್ದು. ಅವನು ಇಟ್ಟುಕೊಂಡ ಹೆಂಗಸಿನ ಕಡೆಯವರೆ ಇದೆಲ್ಲಾ ಮಾಡಿದ್ದು ಎಂದು ಊರು ಮಾತನಾಡತೊಡಗಿತು. ಅವನ ದೇಹದಲ್ಲಿ ಅಲ್ಲಲ್ಲಿ ಗಾಯಗಳಾದದ್ದು ಇದಕ್ಕೆ ಪುಷ್ಟಿಕೊಟ್ಟಿತ್ತು.

ಅಲ್ಲಿಂದ ಬಂದವಳು ತೀರ್ಥಹಳ್ಳಿ ಬಂಧ ಸಂಪೂರ್ಣ ಕಡಿದುಕೊಂಡಿದ್ದಳು. ಗಂಡನ ಆಸ್ತಿ, ಅವನ ವಿಮೆ ದುಡ್ಡು ಯಾವುದೂ ಬೇಡವೆಂದು ಹೋದಂತೆಯೇ ಹೋಗಿ ಮೂರು ವರ್ಷ ಇದ್ದು ಬಂದವಳAತೆ ವಾಪಸು ಆಗಿದ್ದಳು. ತಾನು ವಿಧವೆ ಅಲ್ಲ ಅನ್ನೋದು ಅವಳ ವಾದ. ದಾಂಪತ್ಯದ ಕನಿಷ್ಟ ಸುಖವುಂಡಿದ್ದರೂ ವಿಧವೆ ಪಟ್ಟಹೊತ್ತುಕೊಳ್ಳಬಹುದು. ಏನೂ ಇಲ್ಲದೆ ಬರೀ ವಿಧವೆ ಕಿರೀಟ ಏಕೆ ಹೊತ್ತುಕೊಳ್ಳಲಿ ಎಂಬುದು ಅವಳ ಪ್ರಶ್ನೆ.

ಮಗಳ ಬದುಕು ಹೀಗಾದ ಮೇಲೆ ಅವಳ ಅಮ್ಮನ ಬಿಪಿ ಜಾಸ್ತಿಯಾಗಿತ್ತು. ಸಕ್ಕರೆ ಖಾಯಿಲೆಯೂ ಜೊತೆಯಾಗಿತ್ತು. ಒಂದು ದಿನ ಬೆಳ್ ಬೆಳಗ್ಗೆ ಲಕ್ವ ಹೊಡೆದುಬಿಟ್ಟಿತು. ಅಂದಿನಿAದ ಮಲಗಿದ ಹಾಸಿಗೆಯಲ್ಲಿಯೇ ದಿನ ಕಳೆಯ ತೊಡಗಿದರು.

ಡಿಫಾರ್ಮ್ ಓದಿಕೊಂಡಿದ್ದ ಆಕೆ ದೊಡ್ಡ ಮೆಡಿಕಲ್ ಸಮೂಹ ಹೊಂದಿರುವ ಮೆಡಿಕಲ್ ಶ್ಯಾಪಿನ ಹೊನ್ನಾಳಿ ಬ್ರಾಂಚ್‌ನಲ್ಲಿ ಆ ದಿನಗಳಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದು.

**

ಇಂದು ಬೆಳಗ್ಗೆ ಎಂದಿಗಿಂತ ಬೇಗನೇ ಶ್ಯಾಪಿಗೆ ಬಂದು ಕೂತಿದ್ದಳು. ಕನ್ನಡಿ ನೋಡಿಕೊಳ್ಳದೆ ತಲೆಬಾಚಿಕೊಂಡು, ಕುಂಕುಮ ಇಟ್ಟುಕೊಂಡು ಬಂದಿದ್ದಳು. ರಾತ್ರಿ ಅಮ್ಮನಿಗೆ ಊಟ ಮಾಡಿಸುವಾಗ ದುಃಖ ತಡೆಯಲಾರದೆ ಅತ್ತದ್ದು ನೆನಪಾಯ್ತು. ಅಮ್ಮ ಎಷ್ಟೇ ಕೇಳಿದರೂ ತನಗೆ ಹೇಳಲಾಗಲಿಲ್ಲ ಅನ್ನುವ ಕೊರಗು. ಇಡೀ ರಾತ್ರಿ ಅಮ್ಮನ ಪಕ್ಕವೇ ಮಲಗಿದ್ದಳು.

ಹುಡುಗರು ಇನ್ನೂ ಬಂದಿರಲಿಲ್ಲ. ಜೊತೆಗೆ ಕೆಲಸ ಮಾಡುವ ಪಲ್ಲು ಕೂಡ ಬಂದಿರಲಿಲ್ಲ. ಆಚೆ ಈಚೆ ನೋಡಿ ಎದ್ದು ಅಬಾರ್ಷನ್ ಕಿಟ್ ತೆಗೆದುಕೊಂಡು ಬಂದು ತನ್ನ ಮೊಬೈಲ್ ನಂಬರ್ ಹಾಕಿ ಬಿಲ್ ತೆಗೆಯತೊಡಗಿದಳು. ಎದುರಿಗಿಟ್ಟುಕೊಂಡಿದ್ದ ಕಿಟ್ ಅವಳನ್ನೇ ನೋಡುತ್ತಿತ್ತು. ಈ ಒಂದು ಖಾಸಗಿ ಮೌನದಲ್ಲಿ ಕಿಟ್ ಬ್ಯಾಗಿಗೆ ಹಾಕಿಕೊಳ್ಳುವಾಗ ಏಕಾಏಕಿ ದೂರದ ಆಸ್ಪತ್ರೆಯಲ್ಲಿರುವ ಆ ಮಗು ಮತ್ತು ಅವರ ತಂದೆ ನೆನಪಾದರು. ಮನಸಿನೊಳಗೆ ಮುಳ್ಳು ಚುಚ್ಚಿದ ಅನುಭವ. ಯಾತನೆ ಅನುಭವಿಸಿದಂತೆ ಒಂದು ಕ್ಷಣ ನರಳಿದಳು. ಏನಾಗಿರಬಹುದು ಮಗುವಿಗೆ? ಯಾಕಿಷ್ಟು ನರಳಾಟ? ಅದೆಷ್ಟು ದುಡ್ಡು, ಅದೆಷ್ಟು ಸಮಯ..ಹಾಗೆಂದು ಅವಳು ಯೋಚಿಸಿಕೊಳ್ಳುತ್ತಿರುವಾಗಲೆ ಟೇಬಲ್ ಮೇಲಿದ್ದ ಅಬಾರ್ಷನ್ ಕಿಟ್ಟು ಮತ್ತು ಐದು ನೂರು ರೂಪಾಯಿ ಬಿಲ್ ಅವಳನ್ನು ನೋಡಿ ನಕ್ಕವು.

ಸಡನ್ನಾಗಿ ಏನೊ ನೆನಪಾದವಳಂತೆ ಮೊಬೈಲ್ ತಗ್ದು ನಂಬರ್ ಹುಡುಕಿ, ಬಿಲ್ಲಿಂಗ್ ಸಾಪ್‌ಟ್ವೇರ್ ನಲ್ಲಿ ಹಾಕಿ ಸರ್ಚ್ ಕೊಟ್ಟಳು. ನಿನ್ನೆ ರಾತ್ರಿಯೂ ಔಷಧಿ ಖರೀದಿಯಾದದ್ದು ತೋರಿಸುತ್ತಿತ್ತು.

ಉಳಿಸುವುದಕ್ಕೂ ಔಷಧಿ, ಕೊಲ್ಲುವುದಕ್ಕೂ ಔಷಧಿ..

ಲಕ್ಷಲಕ್ಷ ಸುರಿಯುತ್ತಾ ಇದಾರೆ ಅಲ್ಲಿ ಒಂದು ಪುಟ್ಟ ಜೀವ ಉಳಿಸಲು.. ನಾನಿಲ್ಲಿ ಪುಟ್ಟ ಜೀವ ಕೊಲ್ಲಲು ಐದು ನೂರು ರೂಪಾಯಿ ಖರ್ಚು ಮಾಡ್ತಾ ಇದೀನಿ. ಸಾವಿನ ಬೆಲೆಯೇ ಅಷ್ಟು.. ಇಲ್ಲಿ ಬದುಕೇ ತುಟ್ಟಿ, ಸಾವು ಸೋವಿ.. ಯೋಚನೆ ಜೊತೆ ದುಃಖ ಜೊತೆಯಾಯಿತು. ಕಣ್ಣಲ್ಲಿ ಬಳಬಳ ನೀರು. ಎರಡು ದುಃಖಕ್ಕೂ ಒಂದೇ ಕಣ್ಣೀರು..

ಕಿಟ್ ಮತ್ತು ಬಿಲ್ ಬ್ಯಾಗಿಗೆ ಹಾಕಿ, ಎದ್ದು ಒಳಗೆ ಹೋಗಿ ಬ್ಯಾಗ್ ಇಟ್ಟು, ಉದ್ದದ ಬಿಳಿ ಅಂಗಿ ಹಾಕಿಕೊಂಡು ಕೂದಲು ಸರಿ ಮಾಡಿಕೊಳ್ಳಲು ಕನ್ನಡಿ ಮುಂದೆ ನಿಂತಳು. ಕನ್ನಡಿಯೊಳಗಿನಿಂದ ಪುಟ್ಟ ಮಗುವೊಂದು ಕಿಟಾರನೆ ಕಿರುಚಿ ನಗತೊಡಗಿತು. ಸಣ್ಣದಾಗಿ ಕೂಗಿಕೊಂಡು ಬೆಚ್ಚಿ ಬಿದ್ದಳು. ಹೆದರಿ ಹೋದಳು. ಮೈ ಬೆವೆಯತೊಡಗಿತ್ತು. ಕನ್ನಡಿಯಿಂದ ದೂರ ಸರಿದು ನಿಂತಳು.

ರೂಮಿನ ಹೊರಗಡೆ ಔಷಧಿ ಕೊಳ್ಳುವವರ ಸದ್ದು. ಮುಖ ಒರೆಸಿಕೊಳ್ಳುತ್ತಾ ಎದ್ದಳು. ಎದೆ ಹೊಡೆದುಕೊಳ್ಳುತ್ತಿತ್ತು.

**

ಮೂರು ಹಗಲು, ಮೂರು ರಾತ್ರಿಗಳು ಕಳೆದು ಹೋದವು. ಕನ್ನಡಿ ನೋಡಿಕೊಂಡರೆ ಸಾಕು ಮಗು ಕಿಟಾರೆ ಕಿರುಚಿ ಅಳಲು ಶುರು ಮಾಡುತ್ತದೆ. ಮೊನ್ನೆಯಿಂದ ಕನ್ನಡಿ ನೋಡುವುದನ್ನೇ ಬಿಟ್ಟಿದ್ದಾಳೆ. ಭ್ರಮೆ ಇರಬಹುದೆಂದು ತನಗೆ ತಾನೇ ಸಮಾಧಾನಿಸಿಕೊಳ್ಳತೊಡಗಿದ್ದಾಳೆ. ಮೂರು ದಿನವೂ ಅಬಾರ್ಷನ್ ಮಾತ್ರೆಗಳನ್ನು ಕೈಯಲ್ಲಿಡಿದುಕೊಂಡು ಯೋಚಿಸುವುದೇ ಆಗಿದೆ. ಏಕಾಏಕಿ ಮಾತ್ರೆ ತೆಗೆದುಕೊಳ್ಳುವುದು ಅಪಾಯಕಾರಿ ಎನ್ನುವುದು ಆಕೆಗೆ ತಿಳಿಯದ ವಿಷಯವೇನಲ್ಲ. ಡಾಕ್ಟರ್‌ಗೆ ತೋರಿಸಬೇಕು. ಸ್ಕ್ಯಾನ್ ಮಾಡಿಸಬೇಕು. ಜೀವ ಎಲ್ಲಿದೆ ಅಂತ ತಿಳಿಯಬೇಕು.. ಇವೆಲ್ಲವೂ ಸರಿಯಾದ ಕ್ರಮ. ಆಕೆಗೆ ಅವಳ ಜೀವದ ಕಾಳಜಿ ಇರಲಿಲ್ಲ. ಈ ಮಾತ್ರೆಯೊಂದಿಗೆ ಮತ್ತು ಒಳಗಿರುವ ಜೀವದೊಂದಿಗೆ ತನ್ನ ಜೀವವೂ ಹೋಗುವ ಸಂದರ್ಭ ಬಂದರೆ ಹೋಗಿ ಬಿಡಲಿ.. ಅನ್ನುವಂತೆಯೇ ಅವಳು ಯೋಚಿಸಿಕೊಂಡಿದ್ದಳು. ಆದರೆ ಯೋಚನೆ ಇದ್ದದ್ದು ಆ ಜೀವದ ಕಡೆ.. ಅದು ಈ ನೆಲಕ್ಕೆ ಬರಬೇಕೊ, ಬೇಡವೊ ಎಂಬುದರ ಕುರಿತಾಗಿ.

ಒಂದು ಸಂಜೆ ಇಂತಹ ತಾಕಲಾಟದಲ್ಲೇ ಶ್ಯಾಪಿನಲ್ಲಿ ಕೂತು ಬಿಲ್ಲಿಂಗ್ ನೋಡಿಕೊಳ್ಳುತ್ತಿರುವಾಗ..

‘ಮೇಡಂ..' ಅನ್ನುತ್ತಾ ಆತ ಚೀಟಿ ಹಿಡಿದ ಕೈ ಚಾಚಿದ. ಗಕ್ಕನೇ ಆ ಕಡೆ ತಿರುಗಿ ನೋಡಿದಳು. ಬೆಳೆದ ಗಡ್ಡದ ಮಾಸಿದ ಟೀ ಶರ್ಟಿನ, ಕೆದರಿದ ಕೂದಲಿನ ಆ ವ್ಯಕ್ತಿ ನಿಂತಿದ್ದ. ಅವನನ್ನು ನೋಡಿದ್ದೆ ಕಳೆದುಕೊಂಡಿದ್ದೆಲ್ಲ ಸಿಕ್ಕಂತಾಯ್ತು. ಮುಖ ಗೆಲುವಾಯ್ತು.. ‘ಹೇಗಿದೆ ಮಗು..?' ಎಂದು ಕೇಳಬೇಕು ಅನಿಸಿತು. ಔಷಧಿ ಬಗ್ಗೆ ಅಷ್ಟೇ ಇದುವರೆಗೂ ಒಮ್ಮೆ ಮಾತನಾಡಿದ್ದು ಈಗ ಏಕಾಏಕಿ ಕುಶಲ ವಿಚಾರಣೆ ಸರಿಯಾ? ಪ್ರಶ್ನೆ ಅವಳನ್ನು ತಡೆಯಿತು.

ಶ್ಯಾಪಿನಲ್ಲಿ ಜನ ಕಡಿಮೆ ಇತ್ತು. ಇನ್ನೂ ಆಚೆ ನಿಚ್ಚಳ ಬೆಳಕಿತ್ತು. ಕತ್ತಲು ಇವರಿಬ್ಬರು ಮಾತನಾಡಲಿ ಎಂದು ತಡೆದು ಕಾದಿತ್ತೊ ಏನೊ.. ಒಮ್ಮೆ ಅವರನ್ನೇ ದಿಟ್ಟಿಸಿ ನೋಡಿದಳು. ಕುಗ್ಗಿ ಹೋಗಿದ್ದಾರೆ.. ಈ ಸಮಯದಲ್ಲೂ ಒಂದು ಮಾತೂ ಆಡದೆ ಹೋದರೆ ಸರಿಯಿರುವುದಿಲ್ಲ ಎನ್ನುವಂತೆ ಏನಾದರೂ ಆಗಲಿ ಅಂದುಕೊಂಡು.. ‘ಏನಾಗಿದೆ ಮಗುವಿಗೆ? ಈಗ ಹೇಗಿದೆ?' ಕೇಳಿಯೇ ಬಿಟ್ಟಳು.

ಅವನಿಗೊಂದು ಮಗುವಿದೆ. ಅದಕ್ಕೆ ಹುಷಾರಿಲ್ಲ.. ಎಂಬುದು ಇವರಿಗೆ ಹೇಗೆ ತಿಳಿಯಿತು ಎಂದು ಯೋಚಿಸಿಕೊಂಡಾರು ಎಂಬುದರ ಬಗ್ಗೆ ಕಿಂಚಿತ್ತೂ ಅಳುಕಿಲ್ಲದೆ ಕೇಳಿಬಿಟ್ಟಿದ್ದಳು.

ಶ್ಯಾಪಿನ ಹುಡುಗರು ಅವರವರ ಕೆಲಸದಲ್ಲಿ ತೊಡಗಿಕೊಂಡಿದ್ದರು. ಅಲ್ಲೊಂದು ಇಲ್ಲೊಂದು ಗಿರಾಕಿ..

ಅವನಿಗೆ ಇದು ತುಸು ಆಶ್ವರ್ಯವೆನಿಸಿದರೂ.. ತೋರಿಸಿಕೊಳ್ಳದೆ ಯಾರಾದರೂ ತನ್ನ ನೋವು ಕೇಳಲಿ ಎಂದು ಕಾದವನಂತೆ ಮಾತು ಶುರು ಮಾಡಿದ.

‘ನಿನ್ನೆ ಬಂದ್ವಿ ಮೇಡಂ ಮಂಗಳೂರಿಂದ. ಈಗ ಪರವಾಗಿಲ್ಲ. ಒಂದು ವರ್ಷ ಆಯ್ತು. ಹಾಸ್ಪಿಟಲ್ ತಿರುಗಾಡೋದೆ ಆಗಿದೆ. ಒಬ್ಬೊಬ್ರು ಒಂದೊAದು ಹೇಳ್ತಾರೆ. ಅದೇನೊ ಜನೆಟಿಕ್ ಸಮಸ್ಯೆ ಇರಬಹುದು ಅಂತಾರೆ. ಇನ್ನೂ ಗೊತ್ತಾಗಿಲ್ಲ. ತಾಯಿ ಇಲ್ಲದ ಮಗು ಮೇಡಂ.. ಒಂದು ವರ್ಷ ಅರಾಮು ಇದ್ಲು.. ಕಷ್ಟಪಟ್ಟು ಸಾಕಿದ್ವಿ. ಈಗ ಒಂದು ವರ್ಷದಿಂದ ಹಾಸ್ಪಿಟಲ್ ಬದುಕೇ ಆಗಿದೆ.. ಮಗು ಹುಟ್ಟಿದಾಗಲೇ ಅವರಮ್ಮ ತೀರಿಕೊಂಡರು. ಅದೋನೊ ಬ್ಲಡ್ ಬ್ಲೀಡಿಂಗ್ ಆಯ್ತು ನಿಲ್ಲಲಿಲ್ಲ.. ಅದಕ್ಕೆ ಸತ್ಲು ಅಂದ್ರು ಡಾಕ್ಟ್ರು. ನಾನು ನಮ್ಮಮ್ಮ ಮಗೂನ ನೋಡಿಕೊಳ್ತಾ ಇದೀವಿ..' ಮಧ್ಯಾಹ್ನದ ಜೋರು ಮಳೆಯಂತೆ ನುಡಿದು ಬಿಟ್ಟ.

ಮಮತಾಳ ಹಣೆ ಬೆವರ ಹನಿಗಳಿಂದ ತುಂಬಿ ಹೋಯಿತು. 'ತಾಯಿ ಇಲ್ಲದ ಮಗು.. ಅಯ್ಯೋ' ಅವಳಿಗೆ ಆ ಪದ ನುಂಗಲೇ ಆಗಲಿಲ್ಲ.. ಅವನು ಮಾತು ನಿಲ್ಲಿಸಿದ್ದ. ಅವನ ಮೇಲೆ ಅವನಿಗೇ ಆಶ್ಚರ್ಯ. ನಾನೇಕೆ ಹೀಗೆ ಎಲ್ಲವನ್ನೂ ಹೇಳಿಕೊಂಡೆ? ದಿಗಿಲ ಮೇಲೆ ದಿಗಿಲು..

ಈಗ ತಾನೇನು ಹೇಳಬೇಕೆಂದು ಆಕೆಗೆ ಗೊತ್ತಾಗಲಿಲ್ಲ.

‘ಬೇಜಾರು ಮಾಡ್ಕೊಬ್ಯಾಡ್ರಿ.. ಹುಷಾರಾಗ್ತಾಳೆ. ದೇವ್ರು ಅದಾನೆ..' ಅಂದಳು. ಈ ನಾಟಕೀಯ ಮಾತಿಗೆ ಅವಳಿಗೆ ಒಂಥರಾ ಅನಿಸಿತು. ನಾಚಿಕೆಯಾಯಿತು. ಇದು ಸರಿಯಾದ ಸಮಾಧಾನದ ಮಾತಲ್ಲ.. ಎಂಬುದು ಆಕೆಗೆ ಗೊತ್ತಾಯ್ತು. ಯಾರಿಗೆ ಹೆಚ್ಚು ಭಾವನೆಗಳಿರುತ್ತವೊ ಅವರೇ ಸಮಾಧಾನ ಮಾಡುವಲ್ಲಿ ಹೆಚ್ಚು ಸೋಲುತ್ತಾರೆ.

ಅವಳ ಮಾತಿಗೆ ಅವನ ಮುಖದಲ್ಲಿ ಚೂರು ಗೆಲುವು ಕಾಣಿಸಿತು. ಮಗಳು ಹುಷಾರಾಗ್ತಾಳೆ ಅನ್ನುವ ಜನರ ಮಾತನ್ನು ಪದೇಪದೇ ನೆನಪಿಸಿಕೊಂಡು ಆತ ಸದಾ ಸಮಾಧಾನಗೊಳ್ಳುತ್ತಿದ್ದ. ಹೌದು ಮಗಳು ಹುಷಾರು ಆಗ್ತಾಳೆ.. ಹೌದು ಹುಷಾರು ಆಗ್ತಾಳೆ.. ತನಗೆ ತಾನೇ ಒಂದು ಪ್ರಾರ್ಥನೆಯಂತೆ ಹೇಳಿಕೊಳ್ಳುತ್ತಾ ಔಷಧಿ ತೆಗೆದುಕೊಂಡು ಅಲ್ಲಿಂದ ಹೊರಟು ಬಂದ..

***

ಅಬಾರ್ಷನ್ ಕಿಟ್ ತಂದು ವಾರವೇ ಕಳೆದು ಹೋಗಿದೆ. ಪ್ರತಿ ದಿನ ಅದನ್ನು ತೆಗೆದುಕೊಳ್ಳಬೇಕು ಅಂದುಕೊಂಡಾಗಲೆಲ್ಲಾ ಕಡಲಿನಿಂದ ಎದ್ದ ಅಲೆಗಳು ದಡಕ್ಕೆ ಬಂದು ಒದೆಯುವಂತೆ ಅವಳೊಳಗಿನ ದುಃಖ ಅವಳನ್ನು ಒದೆಯುತ್ತದೆ. ‘ಮಗು ನೀನು ನಮ್ಮಂಥವರ ಮನೆಯಲ್ಲಿ ಹುಟ್ಟಬಾರದು.. ನೋಡು ಸೋತು ಹೋದ ಆ ಮನುಷ್ಯ ಮಗಳನ್ನು ಹಾಸಿಗೆಯಿಂದ ಗೆಲ್ಲಿಸಲು ಹೇಗೆ ಹೋರಾಡುತ್ತಾನೆ. ನಾಲ್ಕು ದಿನ ಬದುಕಿದರೂ ನೀನು ಅಂಥವರ ಮನೆಯಲ್ಲಿ ಬದುಕಬೇಕು..’ ಕಣ್ಣು ತುಂಬಿಕೊಂಡು ನಿತ್ಯ ರಾತ್ರಿ ಇನ್ನೂ ಹುಟ್ಟದ ಮಗುವಿನೊಂದಿಗೆ ಇವೇ ಮಾತುಗಳು.

ಆದರೆ ಇನ್ನೇನು ಮಾತ್ರೆ ನುಂಗಬೇಕು ಅಂದಾಗ ಕೈ ತಡೆಯುತ್ತದೆ. ಕನ್ನಡಿಯಲ್ಲಿ ಕಿಟಾರನೆ ಕಿರುಚಿ ಮಗು ಅಳುತ್ತದೆ.

***

ಎರಡ್ಮೂರು ದಿನದ ನಂತರವೂ ಶ್ಯಾಪಿನಲ್ಲಿ ಕೂತಾಗ ಅವಳಿಗೆ ಮಾತ್ರೆಯದೇ ಯೋಚನೆ. ತೆಗೆದುಕೊಳ್ಳಲೊ ಬೇಡವೊ.. ದ್ವಂದ್ವದಲ್ಲಿ ಇಷ್ಟೆಷ್ಟೇ ನವೆದು ಹೋಗುತ್ತಿದ್ದಾಳೆ.

ಅಂದು ಅವನು ಮತ್ತೆ ಬಂದ. ಕೈಯಲ್ಲಿ ಔಷಧಿಯ ಚೀಟಿ ಇತ್ತು ಬೆಳೆದ ಗಡ್ಡ ಹಾಗೆಯೇ ಇತ್ತು. ಟೀ ಶರ್ಟ್ ಬೇರೆಯದಿತ್ತು. ಮುಖದ ಸಂಕಟ ಮಾತ್ರ ಹಾಗೆಯೇ ಉಳಿದಿತ್ತು. ಅವತ್ತೂ ಕೂಡ ಸಂಜೆ. ಅವನನ್ನು ನೋಡಿದ್ದೆ ಇವಳ ಮುಖದಲ್ಲಿ ಮೊಗ್ಗು ತೊನೆದ ಗೆಲುವು.

‘ಈಗ ಹೇಗಿದಾಳೆ ಮಗಳು..?' ಅವಳ ಮಾತಿನಲ್ಲಿ ಆಸಕ್ತಿ ತುಳುಕುತ್ತಿತ್ತು. 'ಈಗ ಪರವಾಗಿಲ್ಲ. ಮೊದಲಿಗಿಂತ ಎಷ್ಟೊ ವಾಸಿ..' ಅನ್ನುತ್ತಾ ಅವರ ಕೈಗೆ ಔಷಧಿ ಚೀಟಿಕೊಟ್ಟ. 'ಸರಿ ಹೋಗ್ತಾಳೆ.. ನೀವು ಗೆಲುವಿರಿ. ಅದು ಮಗಳನ್ನು ಗೆಲುವು ಮಾಡ್ತದೆ..' ಅವರನ್ನು ನೋಡುತ್ತಾ ಮಾತನಾಡಿ ಚೀಟಿ ತೆಗೆದುಕೊಂಡು ಒಳಗೆ ಹೋದಳು. ಈ ಬಾರಿ ಆಡಿದ ಮಾತು ಅವಳಿಗೆ ಸಮಾಧಾನ ಕೊಟ್ಟಿತ್ತು.

ಬಿಲ್ ಮತ್ತು ಔಷಧಿ ತಂದು ಅವನ ಮುಂದಿಟ್ಟಳು. ಅವನು ಜೇಬಿನಿಂದ ಮುದುಡಿದ್ದ ನೋಟುಗಳನ್ನು ತೆಗೆದು ನೋಡಿದ. ಐದು ನೂರು ಕಡಿಮೆ ಇತ್ತು. 'ಮೇಡಂ ಹಣ ಕಡಿಮೆ ಇದೆ.. ಔಷಧಿ ಕಡಿಮೆಯೇ ಕೊಡಿ. ಮತ್ತೆ ತಗೊತ್ತೀನಿ' ಅಂದ. ಮಾತು ಅವಳನ್ನು ತಾಕಿತು. ಆಕೆ ಹೆಚ್ಚೇನು ಯೋಚಿಸದೆ ‘ತಗೊಂಡು ಹೋಗಿ.. ಎಷ್ಟಿದೆಯೊ ಅಷ್ಟು ಕೊಡಿ. ಪರವಾಗಿಲ್ಲ. ಈ ದುಡ್ಡು ನಾನು ಹಾಕಿಕೊಳ್ಳುವೆ. ಮಗುವಿಗೆ ತೊಂದರೆಯಾಗೋದು ಬೇಡ. ನಿಮಗೆ ಆದಾಗ ಬೇಕಾದರೆ ಕೊಡಬಹುದು ಈಗ ತಗೊಂಡು ಹೋಗಿ..' ಎನ್ನುತ್ತಾ ಔಷಧಿಯನ್ನು ಅವನ ಕೈಗಿಟ್ಟಳು.

ಅರೆಕ್ಷಣ ನಿಂತಂತೆ ನಿಂತೇ ಇದ್ದ. ಒಂದು ವರ್ಷ ಆಯ್ತು. ಇಂಥಹ ಮಾತು ಯಾರೂ ಹೇಳಿರಲಿಲ್ಲ. ಕನಿಷ್ಟ ಮಗು ಹೇಗಿದೆ ಅನ್ನುವ ಮಾತು ಕೇಳಿರಲಿಲ್ಲ. ಅವನ ಗಂಟಲು ಕಟ್ಟಿತು. ಔಷಧಿಯ ಕವರ್ ಹಿಡಿದು ಭಾರದ ಹೆಜ್ಜೆಗಳನ್ನು ಕಿತ್ತಿಟ್ಟ. ಮೆಟ್ಟಿಲು ಇಳಿಯತೊಡಗಿದ.

ಮೆಟ್ಟಿಲು ಇಳಿಯುತ್ತಿರುವ ಅವನ ಬೆನ್ನನ್ನೇ ನೋಡತೊಡಗಿದಳು. ಇನ್ನೇನು ಕೊನೆಯ ಮೆಟ್ಟಿಲು ಬಾಕಿ ಇರುವಾಗ ಒಮ್ಮೆ ಅವಳ ಕಡೆ ತಿರುಗಿ ನೋಡಿದ. ಇವಳು ಅವನನ್ನೇ ನೋಡುತ್ತಿದ್ದಳು. ಯಾರು ಮೊದಲು ನಗಬೇಕು ಎಂಬ ಗೊಂದಲ ಮುಗಿಯುವುದರೊಳಗೆ ಅವನು ಕೊನೆಯ ಮೆಟ್ಟಿಲು ದಾಟಿದ್ದ.

ಅವತ್ತು ಇಡೀ ದಿನ ಆಕೆ ಕಣ್ಮುಚ್ಚಿದಾಗಲೆಲ್ಲಾ ದಣಿದಿದ್ದ ಅವನ ಮಬ್ಬು ಕಣ್ಣುಗಳೇ ಕಾಣತೊಡಗಿದ್ದವು.

***

ವಾರ ಕಳೆದರೂ ಬ್ಯಾಗಿನೊಳಗೆ ಕೂತು ಆ ಅಬಾರ್ಷನ್ ಮಾತ್ರೆ ಶ್ಯಾಪಿನಿಂದ ಮನೆಗೆ, ಮನೆಯಿಂದ ಶ್ಯಾಪಿಗೆ ಓಡಾಡುತ್ತಿದೆ. ಅದಕ್ಕೂ ಮುಕ್ತಿ ಸಿಕ್ಕಿಲ್ಲ, ಅವಳಿಗೂ ಮುಕ್ತಿ ಸಿಕ್ಕಿಲ್ಲ. ಹೊಟ್ಟೆಯಲ್ಲಿರುವ ಮಗು ಉಳಿಸಿಕೊಳ್ಳಲು ಕಾರಣ ಇಲ್ಲ, ಅದು ಬದುಕಬಾರದೂ ಅನ್ನುವುದಕ್ಕೂ ಕಾರಣ ಇಲ್ಲ. ಬಿಡು ಸಮಾಜ ಹೇಗಿದ್ದರೂ ಮಾತನಾಡುತ್ತದೆ. ಸುಮ್ಮನೆ ಒಂದು ತಾಳಿ ತಾನೇ ನೇತು ಹಾಕಿಕೊಂಡು ಊರು ಬದಲಿಸಿದರೆ ಸಾಕು ತನಗೊಂದು ಚೆಂದದ ಸಂಸಾರದ ಕಥೆ ಕಟ್ಟಿಕೊಳ್ಳಬಹುದು.. ಹೀಗೆ ತನಗೆ ತಾನೇ ಏನೇನೊ ಹೇಳಿಕೊಂಡರು ಮರುಕ್ಷಣವೇ ಮತ್ತಷ್ಟು ದ್ವಂದ್ವದಲ್ಲಿ ಬೀಳುತ್ತಿದ್ದಳು.

ಹೊಟ್ಟೆಯೊಳಗಿನ ಮಗುವನ್ನು ಕೊಂದರೆ ಕೇವಲ ಹರೀಶನ ಪಾಲನ್ನು ಕೊಂದಂತೆ ಆಗುವುದಿಲ್ಲ. ತನ್ನ ಪಾಲನ್ನೂ ಕೊಂದುಕೊAಡAತೆ ಆಗುತ್ತದೆ ಅಲ್ಲವೇ? ದತ್ತು ಮಗು ಸಾಕುವವರಿಗೆ ಆ ಮಗುವಿನಲ್ಲಿ ತಮ್ಮದು ಅಂತ ಯಾವ ಪಾಲು ಇರುತ್ತದೆ? ಅವರನ್ನು ನಾವು ಸಾಕುವುದಿಲ್ಲವಾ? ಹಾಗಂತ ಎಲ್ಲರೂ ಅವರಿಷ್ಟದಂತೆ ಮಗು ಹುಟ್ಟಿಸಿಕೊಂಡು, ಸಾಕಿಕೊಂಡು ಬದುಕಲು ಸಾಧ್ಯವಾ? ಆಷಾಢದ ಮಳೆಯಂತೆ ಸದಾ ಜಿನುಗುವ ಯೋಚನೆಗಳ ಸೋನೆ ಅವಳೊಳಗೆ.

ಇಂದು ಇಡೀ ಶ್ಯಾಪಿನಲ್ಲಿ ಬರೀ ಅದರ ಬಗ್ಗೆಯೇ ಯೋಚನೆ. ದಿನಗಳು ಓಡುತ್ತಿವೆ. ಇನ್ನೂ ತಡಮಾಡಿದರೆ ಮಗು ತೆಗೆಯಲು ಸಾಧ್ಯವಾಗುವುದಿಲ್ಲ. ಇಂದು ರಾತ್ರಿಯೊಳಗೆ ಒಂದು ನಿರ್ಧಾರವಾಗಬೇಕು. ಹೌದು ಆಗಲೇಬೇಕು. ಏನು ಮಾಡಬೇಕು ಅಂತ ಇರುತ್ತೇವೆಯೊ ಅದನ್ನು ಆದಷ್ಟು ಬೇಗ ಮಾಡುವುದು ಒಳ್ಳೆಯದು.. ತನ್ನಷ್ಟಕ್ಕೆ ತಾನೇ ಹೇಳಿಕೊಂಡಳು. ಅಲ್ಲಿಂದ ಹೊರಡುವ ಮುನ್ನ ತನ್ನ ಬ್ಯಾಗಿನಲ್ಲಿ ಆ ಮಾತ್ರೆಯೇ ಇದೆಯಾ ಅಂತ ಇನ್ನೊಮ್ಮೆ ನೋಡಿಕೊಂಡಳು.

ಹತ್ತು ನಿಮಿಷ ಬೇಗನೇ ಶ್ಯಾಪಿನಿಂದ ಎದ್ದಳು ಮಮತ. ಅಮ್ಮನಿಗೆ ತೆಗೆದುಕೊಂಡು ಹೋಗಬೇಕಾದ ಮಾತ್ರಗಳನ್ನು ಮಧ್ಯಾಹ್ನವೇ ಬ್ಯಾಗಿನಲ್ಲಿ ಇಟ್ಟುಕೊಳ್ಳಲಾಗಿತ್ತು. ನೀರಿನ ಬಾಟಲು ಖಾಲಿಯಾಗಿತ್ತು, ತುಂಬಿಸಿಕೊAಡಳು. ಹೊರಡುವ ಮುಂಚೆ ನಿತಿನ್ ಗೆ ತುಸು ರೇಗಿಸಿ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ರಸ್ತೆ ತಲುಪಿದಳು.

ಹರೀಶ ನೆನಪಾದ. ಹೀಗೆ ಮನೆಗೆ ಹೊರಡುವ ಹೊತ್ತಿನಲ್ಲಿ ಹರೀಶನನ್ನು ಪಾರ್ಕಿನಲ್ಲಿ ಯಾವಾಗಲೂ ಭೇಟಿಯಾಗುತ್ತಿದ್ದಳು. ಈಗ ಪಾರ್ಕ್ ನೆನಪಾಯಿತು. ಹೋಗಿ ಬಿಡಲೇ? ಅದೇ ಜಾಗದಲ್ಲಿ ಕೂತು ಈ ಮಾತ್ರೆ ತೆಗೆದುಕೊಂಡು ಎಲ್ಲದಕ್ಕೂ ಪೂರ್ಣ ವಿರಾಮ ಇಟ್ಟು ಬಿಡಲೇ?

ಬೈಕ್ ಪಾರ್ಕಿನ ಕಡೆ ಓಡತೊಡಗಿತು. ಎಳೆಸಂಜೆಯ ಎದೆಯ ಮೇಲೆ ಗಾಡಿ ಓಡಿಸತೊಡಗಿದಳು.

ಪಾರ್ಕ್ ಸಂಜೆಯ ದೀಪದ ಬೆಳಕಿನಲ್ಲಿ ಹೊಸತಾಗಿತ್ತು. ಅದರ ಮೇಲೆ ಇಡೀ ದಿನ ಸುರಿದ ಹಗಲಿನ ಯಾವ ಕುರುಹೂ ಇರಲಿಲ್ಲ. ಎಂದೂ ಕೂಡ ನಿಲ್ಲಿಸುವ ಜಾಗದಲ್ಲಿ ಗಾಡಿ ಪಾರ್ಕ್ ಮಾಡಿ ಬ್ಯಾಗ್ ಎತ್ತಿಕೊಂಡು ಪಾರ್ಕಿನೊಳಗೆ ನಡೆಯತೊಡಗಿದಳು. ತಾನು ಮತ್ತು ಹರೀಶ ಯಾವಾಗಲೂ ಕೂರುತ್ತಿದ್ದ ಜಾಗವನ್ನು ದೂರದಿಂದಲೇ ನಿರೂಕಿಸಿದಳು. ಖಾಲಿ ಇತ್ತು.

ಅಲ್ಲಿಗೆ ತಲುಪಲು ಕನಿಷ್ಟ ಮುನ್ನೂರು ಹೆಜ್ಜೆಗಳನ್ನಾದರೂ ಹಾಕಬೇಕಿತ್ತು. ಪಾರ್ಕಿನೊಳಗಿನ ಎರಡು ತಿರುವು ದಾಟಬೇಕಿತ್ತು. ಹರೀಶನ ನೆನಪಿನಿಂದ ಒಮ್ಮೆ ಕಣ್ಣು ತುಂಬಿದರೂ ಅದನ್ನು ಹೆಚ್ಚಾಗಲು ಬಿಡದೆ ತಡೆದಳು. ಕಾರಂಜಿ ಬಣ್ಣ ಬದಲಿಸುತ್ತಿತ್ತು. ಅದನ್ನು ನೋಡಿ ನಗು ಬಂತು. ಅದನ್ನೂ ತಡೆದಳು. ಅವಳ ಹೆಜ್ಜೆಗೆ ಅವಸರವಿರಲಿಲ್ಲ. ಕಣ್ಣುಗಳಿಗೂ ಏನ್ನನ್ನೊ ಹುಡುಕುವ ಧಾವಂತ ಇರಲಿಲ್ಲ. ಪಾರ್ಕ್ ಮೌನದಲ್ಲಿತ್ತು. ಎಲ್ಲ ಮುಗಿದ ಮೇಲೆ ಉಳಿಯುವ ನಿಕೃಷ್ಟ ಮೌನ ಅದು. ನಡೆಯುವ ಹಾದಿ ಬದಿಯಲ್ಲಿ ಬೆಂಚ್ ಮೇಲೆ ಕೂತಿದ್ದ ಆಕೃತಿಯೊಂದು ತುಸು ದೂರದಿಂದಲೇ ಕಣ್ಣಿಗೆ ಬಿತ್ತು. ಅರೆ ಬೆಳಕಿನಲ್ಲಿ, ಅರೆ ಸ್ಪಷ್ಟವಾದ ರೂಪ. ಯಾರೊ ಪರಿಚಿತರೇ ಅನಿಸುತಿದೆ.. ಮನಸಿನಲ್ಲೇ ಪಿಸುಗುಟ್ಟಿದಳು. ಹರೀಶನಂತೂ ಖಂಡಿಲ್ಲ. ಅವನ ಅರೆ ಬೆಳಕಿನ ರೂಪಕ್ಕೂ ಒಂದು ಕ್ರೂರತೆ ಇದೆ ಎನ್ನುತ್ತಾ ಇನ್ನಷ್ಟು ಹೆಜ್ಜೆ ಹಾಕಿದಳು. ಬಳಿ ಸಾರಿದಂತೆ ಯಾರೆಂದು ಗುರುತು ಸಿಗುತ್ತಲೇ ಹಾಗೆ ಗಕ್ಕನೆ ನಿಂತಳು.

ಪದೇ ಪದೇ ಮೆಡಿಕಲ್‌ಗೆ ಬರುತ್ತಿದ್ದ ಆ ಮಗುವಿನ ತಂದೆ!

ಗಡ್ಡ ಇನ್ನಷ್ಟು ಬೆಳೆದಿತ್ತು. ಕೂದಲು ಕೆದರಿತ್ತು. ಕಳೆದವಾರ ಮೆಡಿಕಲ್ ಗೆ ಬಂದಾಗ ಹಾಕಿಕೊಂಡಿದ್ದ ಅದೇ ಟೀ ಶರ್ಟ್. ಅದು ಇನ್ನಷ್ಟು ಮಾಸಿತ್ತು. ಶೂನ್ಯವನ್ನು ದಿಟ್ಟಿಸಿ ನೋಡುತ್ತಾ ಕೂತ ಮುಖ. ಕಣ್ಣು ತುಸು ಊದಿಕೊಂಡAತೆ ಕಾಣುತ್ತಿದ್ದವು. ಗಲ್ಲದ ಮೇಲೆ ಕಣ್ಣೀರನ ಕರೆ. ಈಕೆಗೆ ಆಶ್ಚರ್ಯ. ಇವರೇನು ಇಲ್ಲಿ? ಇಲ್ಲಿ ಯಾರ ಜಾಗ ಯಾರದ್ದೂ ಅಂತಾನೂ ಇಲ್ಲ. ಯಾರು ಯಾವ ಜಾಗದಲ್ಲೂ ಬೇಕಾದರೂ ಒಂದು ದಿನ ಬಂದು ನಿಲ್ಲಬಹುದು. ಎಲ್ಲವೂ ಕಾಲದ ಕರುಣೆ ಅಷ್ಟೇ... ಎಂದೊ ಒಮ್ಮೆ ಅಮ್ಮ ಹೇಳಿದ್ದು ನೆನಪಾಯ್ತು.

ತಾನು ಮಾತನಾಡಿಸಬೇಕೊ? ಬೇಡವೊ ಎಂಬುದರ ಬಗ್ಗೆ ದ್ವಂದ್ವ. ಅದಕ್ಕೆ ಉತ್ತರ ಕಂಡುಕೊಳ್ಳುವ ಮೊದಲೇ ಅವರ ಕಡೆ ನೋಡಿ ಪರಿಚಿತ ನಗೆ ಬೀರಿದಳು. ಅವನು ನಗಲಿಲ್ಲ. ಕಣ್ಣುಗಳಲ್ಲಿ ನೋವು ಸುರಿಯುತ್ತಿತ್ತು.

‘ಮಗಳು? ಹೇಗಿದಾಳೆ?' ಎರಡು ಪದ, ಎರಡು ಪ್ರಶ್ನೆ.

ಸುಮ್ಮನೆ ತಿರುಗಿ ಅವನು ಇವಳ ಕಡೆ ನೋಡಿದ. ಅವನ ಕಣ್ಣುಗಳು ತುಂಬಿದ್ದವು. ಎಲ್ಲವೂ ಸರಿ ಇಲ್ಲ ಎಂಬುದು ಅವಳಿಗೆ ಬಹುಬೇಗ ಅರ್ಥವಾಯಿತು.

‘ಏನಾಯಿತು ಹೇಳಿ? ರ್ರೀ.. ಹೇಳಿ?' ಅವಳ ದನಿಯಲ್ಲಿ ಅವಳನ್ನೂ ಮೀರಿದ ಆತಂಕವಿತ್ತು. ಅವನ ಕಣ್ಣೀರಿನ ಹರವು ಹೆಚ್ಚಾಯಿತು. ಸರಿಯಾಗಿ ಅವನ ಎದುರಿಗೆ ಬಂದು ನಿಂತಳು.

‘ಏನೂ ಆಗಲ್ಲ. ನೊಂದುಕೊಳ್ಳಬೇಡಿ. ಅವಳು ಹುಷಾರಾಗ್ತಾಳೆ..' ಎಲ್ಲರೂ ಹೇಳುವ ಮಾತನ್ನು ಅವಳೂ ಹೇಳಿದಳು.

‘ಮೊನ್ನೆ ಮಗಳು.. ತೀ..ರಿ.. ಹೋದ...' ಅವನಿಗೆ ಮುಂದೆ ಮಾತು ಹೊರಡಲಿಲ್ಲ. ಗಂಟಲಿನಲ್ಲಿ ಬಿಕ್ಕು ಹೆಚ್ಚಾಯಿತು. ಅವಳು ಶಾಕಿನಿಂದ ಗರಬಡದಂತೆ ನಿಂತಳು. ಆ ಕ್ಷಣಕ್ಕೆ ಏನೂ ಪ್ರತಿಕ್ರಿಯಿಸಬೇಕೆಂದು ಆಕೆಗೆ ತಿಳಿಯಲಿಲ್ಲ. ಅದು ಮಾತು ಸೋಲುವ ಸಮಯ. ಅವನು ಬಿಕ್ಕಳಿಗೆ ನುಂಗಿಕೊAಡು ಕಣ್ಣೀರಷ್ಟೇ ಸುರಿಸುತ್ತಿದ್ದ. ಇವಳು ಏನಾದರೂ ಹೇಳಬೇಕೆಂದು ಪದಗಳನ್ನು ಹುಡುಕಾಡಿದಳು. ಯಾವ ಪದಗಳೂ ಸಿಗಲಿಲ್ಲ. ಅವಳಿಗೆ ಅರಿವಿಲ್ಲದೆ ಅವಳ ಕೈಗಳು ಅವನ ತಲೆ ಸವರಿದವು. ಅವನು ಒಮ್ಮೆ ನಡುಗಿದ. 'ನೀರಿಗೆ ನೀರು ಜೊತೆ. ನೋವು ನೋವಿಗೆ ಜೊತೆ' ನೋಡುವವರಿಗೆ ಅವರಿಬ್ಬರೂ ಜಗತ್ತಿನ ಕಟ್ಟುಪಾಡುಗಳಿಂದ ಜಿಗಿದು ಬಂದ ತೀರಾ ಖಾಸಗಿ ಜೀವಿಗಳಂತೆ ಕಾಣುತ್ತಿದ್ದರು.

ಮತ್ತೊಮ್ಮೆ ತಲೆ ಸವರಿದಳು. ಮಾತು ಬೇಡ ಅನಿಸಿತು. ‘ಮತ್ತೆ ಸಿಕ್ತೀನಿ. ಧೈರ್ಯ ತಂದುಕೊಳ್ಳಿ' ಎಂದು ಹೇಳಿ ಅಲ್ಲಿಂದ ಹೊರಟಳು. ಮುಂದೆ ಹೋಗುವುದು ಬೇಡ ಎನಿಸಿತು. ಆ ಕಡೆ ಕತ್ತೂ ಹೊರಳಿಲಿಲ್ಲ. ಹೋದ ದಾರಿಯಲ್ಲಿಯೇ ವಾಪಸು ನಡೆದಳು. ಗಾಡಿ ಮನೆಯ ಹಾದಿ ಹಿಡಿಯಿತು.

ಮನೆಯ ಹತ್ತಿರದ ಒಂದು ತಿರುವಿನಲ್ಲಿ ಗಾಡಿ ನಿಲ್ಲಿಸಿ ಬ್ಯಾಗ್ ತೆಗೆದಳು. ಅದರಲ್ಲಿದ್ದ ಅಬಾರಷನ್ ಮಾತ್ರೆ ತೆಗೆದು ದೂಸ್ರಾ ಯೋಚಿಸದೆ ಬಿಲ್ ಸಮೇತ ಕಸದ ರಾಶಿಗೆ ಎಸೆದಳು. ಅವಳೊಳಗಿನ ಮಗು ಒಮ್ಮೆ ಮಗ್ಗಲು ಬದಲಿಸಿ ಮಲಗಿತು. ನೀರಿನ ಬಾಟಲು ತೆಗೆದುಕೊಂಡು ಕಣ್ಮುಚ್ಚಿ ಬಾಯಿಗೆ ಬಳಬಳ ನೀರು ಸುರಿದುಕೊಂಡಳು. ಗಾಡಿಯ ಅಕ್ಸಿಲೆಟರ್ ತಿರುವಿದಳು. ಗಾಡಿಯ ಮಿರರಿನತ್ತಾ ಕಣ್ಣು ಹಾಯಿಸಲಿಲ್ಲ. ಮನೆಗೆ ಬಂದವಳೇ ಕನ್ನಡ ಮುಂದೆ ನಿಂತಳು. ಕನ್ನಡಿಯಲ್ಲಿ ಮಗುವೂ ಇಲ್ಲ. ಅದರ ಅಳುವೂ ಇಲ್ಲ.

ಅಲ್ಲೇ ನಿಂತು ತುಸು ಹೊತ್ತು ಕಣ್ಮುಚಿದಳು. ಕಣ್ಣೀರು ತುಂಬಿದ ಆ ಮಗುವಿನ ತಂದೆಯ ಮುಖವೇ ನೆನಪಾಗತೊಡಗಿತು. ಮತ್ತು ಕಲ್ಪನೆಯಲ್ಲಿಷ್ಟೆ ಕಟ್ಟಿಕೊಂಡಿದ್ದ ಆ ಮಗುವಿನ ಮುಖವೂ!

ಅವಳಿಗರಿವಿಲ್ಲದೆ ಅವಳ ಅಂಗೈ ಹೊಟ್ಟೆ ಮೇಲೆ ಬಂದಿತ್ತು.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...