"ಶಾಲೆ ಎಂಬ ದೊಡ್ಡಿ, ಓದು ಎಂಬ ಶಿಕ್ಷೆ, ಮಾರ್ಕು ಎಂಬ ವಿಧಿ, ಮೊಬೈಲೆಂಬ ಮಾಯೆ, ಫೊರೈನ್ ಎಂಬ ಫೋರ್ಸು, ಹಣ ಹಣ ಝಣ ಝಣ ದಿಂಸಾಲು -- ಇಂದಿನ ಈ ಕೊಡವಿಕೊಳ್ಳಲಾರದ ಬಿಡಲಾರದ ಬಿಕ್ಕಟ್ಟಿನ ಬದುಕಿನಲ್ಲಿ, ನಲಿದಾಡಿ ಬೆಳೆಯಬೇಕಾದ ಮಕ್ಕಳ ಪಾಡು ಹೇಳತೀರದು. ಇದರಿಂದ ಬಿಡುಗಡೆ ಇದೆಯೆ?," ಎನ್ನುತ್ತಾರೆ ವೆಂಕಟರಮಣ ಐತಾಳ್ ಬಿ.ಆರ್ ನೀನಾಸಂ. ಅವರು ವಿಜಯಶ್ರೀ ಹಾಲಾಡಿ ಅವರ ಮಕ್ಕಳ ನಾಟಕ ʻಗುಬ್ಬಚ್ಚಿ ಮನೆʼ ಕೃತಿಗೆ ಬರೆದ ಮುನ್ನುಡಿ.
ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಒಂದು ಪ್ರತ್ಯೇಕ ಸ್ಥಾನ ಸಿಕ್ಕಿ ಸುಮಾರು ಒಂದು ಶತಮಾನ ಕಳೆದಿದೆ. ಪಂಜೆಯವರು, ಕುವೆಂಪು, ಕಾರಂತರು, ಜಿ.ಪಿ.ರಾಜರತ್ನಂ ಮೊದಲಾದ ಹಿರಿಯರಿಂದ ಪ್ರಾರಂಭವಾದ ಮಕ್ಕಳ ಸಾಹಿತ್ಯದ ಬೆಳೆ ಮಕ್ಕಳ ಕತೆ ಕವಿತೆಗಳ ರೂಪದಲ್ಲಿ ಹರಿದುಬಂದಿತು. ಆದರೆ ಮಕ್ಕಳ ನಾಟಕ ಹಾಗೂ ಮಕ್ಕಳ ರಂಗಭೂಮಿಗೆ ಸಾಕಷ್ಟು ಸ್ಥಾನಮಾನ ದೊರೆಯದೆ ಹೋಯಿತು. ಕುವೆಂಪು ಅವರ ನನ್ನ ಗೋಪಾಲ, ಮೋಡಣ್ಣನ ತಮ್ಮ ಮೊದಲಾದ ನಾಟಕಗಳು ಹಾಗೂ ಶಿವರಾಮ ಕಾರಂತರ ಬಾಲವನದ ಮಕ್ಕಳ ಕೂಟದ ಆಟ ಪಾಠ ನಾಟಕಗಳು ಈ ದಿಸೆಯಲ್ಲಿ ಘನವಾದ ಹಾದಿ ಹಾಕಿಕೊಟ್ಟರೂ ಮತ್ತೆ ಅದು ಚಿಗುರಿ ಬೆಳೆಯಲು ಹಲವು ದಶಕಗಳು ಬೇಕಾದವು. ಬಿ.ವಿ. ಕಾರಂತರ ಪಂಜರಶಾಲೆ, ಕೆ.ವಿ. ಸುಬ್ಬಣ್ಣನವರ ಕಾಡಿನಲ್ಲಿ ಕತೆ, ಬೆಟ್ಟಕ್ಕೆ ಚಳಿಯಾದರೆ, ಕಂಬಾರರ ಕಿಟ್ಟೀ ಕತೆ, ಆಲೀಬಾಬ ಮತ್ತು ನಲವತ್ತು ಕಳ್ಳರು, ವೈದೇಹಿಯವರ ನಾಯಿಮರಿ ನಾಟಕ, ಢಾಣಾ ಡಂಗುರ ಮುಂತಾದ ನಾಟಕಗಳು ಹಾಗೂ ಅವುಗಳ ರಂಗದ ಆಟಗಳು ಬಂದಮೇಲೆ, ಒಂದು ಅರ್ಥದಲ್ಲಿ ಮಕ್ಕಳ ನಾಟಕ ಹಾಗೂ ಮಕ್ಕಳ ರಂಗಭೂಮಿಗೆ ಒಂದು ನೆಲೆ ಬೆಲೆ ಬಂತು ಅನ್ನಬಹುದು. ಆದರೂ, ಅದು ನಮ್ಮ ಸಮಾಜದಲ್ಲಿ ಹಾಗೂ ಶಿಕ್ಷಣ ರಂಗದಲ್ಲಿ ಇನ್ನೂ ಗಟ್ಟಿಯಾದ ನೆಲೆಯನ್ನು ಪಡೆದಿಲ್ಲ.
ಈ ಹಿನ್ನೆಲೆಯಲ್ಲಿ ವಿಜಯಶ್ರೀ ಹಾಲಾಡಿ ಅವರ ಹೊಸ ಮಕ್ಕಳ ನಾಟಕ 'ಗುಬ್ಬಚ್ಚಿ ಮನೆ ಎಂಬ ಕನ್ನಡ ಶಾಲೆ ' ಗಮನ ಸೆಳೆಯುತ್ತದೆ. ಈಗಾಗಲೇ ಮಕ್ಕಳಿಗಾಗಿಯೆ ಕತೆ, ಕವಿತೆ, ಕಾದಂಬರಿಗಳನ್ನು ಬರೆದು ಪ್ರಸಿದ್ಧರಾಗಿರುವ, ಇತರ ಕತೆ ಕವಿತೆ ಪ್ರಬಂಧ ಸಾಹಿತ್ಯಗಳಲ್ಲೂ ಹೆಸರುಮಾಡಿರುವ ಇವರ ಬರವಣಿಗೆಯ ಮೂಲಸೆಲೆ ನಿಸರ್ಗ, ಮಕ್ಕಳು ಮತ್ತು ಕವಿತೆ. 'ಸಾಕು ಬೆಳಕಿನ ಮಾತು' ಕವಿತಾ ಸಂಕಲನ ಸಾಹಿತ್ಯದ ಹಾದಿಯಲ್ಲಿ ಒಂದು ಅಪರೂಪದ ಭಿನ್ನ ದನಿಯನ್ನು ದಾಖಲಿಸಿದೆ. 'ಕಣ್ಣ ಕಾಡಿನ ಹಾಡು ' ನಿಸರ್ಗದ ನಡುವಿನ ಒಡನಾಟದ ವಿಶಿಷ್ಟ ಚಿತ್ರಣಗಳನ್ನು ಕಾಣಿಸಿದೆ. 'ಉಮ್ಮಲ್ತಿ ಗುಡಿಯ ಸಾಕ್ಷಿ 'ಯ ಕತೆಗಳು ಕುಂದಾಪ್ರ ಕನ್ನಡದ ನುಡಿಯ ಸೊಗಡನ್ನು ಹೀರಿ ಪ್ರಕಟಗೊಂಡ ಸೂಕ್ಷ್ಮ ಕಥನಗಳು. 'ಓತಿಕ್ಯಾತ ತಲೆಕುಣ್ಸಿ ', 'ಪಪ್ಪು ನಾಯಿಯ ಪೀಪಿ ', 'ಪಟ್ಪಟೆ ಕಾಯಿ ಚಟ್ಪಟ' ಮಕ್ಕಳಿಗಾಗಿ ಬರೆದ ಕವನಸಂಕಲನಗಳು. 'ಸೂರಕ್ಕಿ ಗೇಟ್ ' ಮಕ್ಕಳ ಕಾದಂಬರಿ. ಈ ಎಲ್ಲ ಕೃತಿಗಳನ್ನು ಇಲ್ಲಿ ಹೆಸರಿಸಲು ಕಾರಣ, ಇವುಗಳ ಅನನ್ಯತೆಯನ್ನು ಗುರುತಿಸಿ ಹೇಳಲು ಮಾತ್ರವಲ್ಲ, ಇವೆಲ್ಲ - ಅಂದರೆ, ಇಲ್ಲಿನ ಪಾತ್ರ ಪರಿಸರ ಎಲ್ಲ - ಈ ಹೊಸ ಚಿಕ್ಕ ನಾಟಕದಲ್ಲಿ ಜೀವ ತಳೆದು ಆಟವಾಡಲು ಬಂದಿವೆ ಎಂದು ಸೂಚಿಸಲು.
ಶಾಲೆ ಎಂಬ ದೊಡ್ಡಿ, ಓದು ಎಂಬ ಶಿಕ್ಷೆ, ಮಾರ್ಕು ಎಂಬ ವಿಧಿ, ಮೊಬೈಲೆಂಬ ಮಾಯೆ, ಫೊರೈನ್ ಎಂಬ ಫೋರ್ಸು, ಹಣ ಹಣ ಝಣ ಝಣ ದಿಂಸಾಲು -- ಇಂದಿನ ಈ ಕೊಡವಿಕೊಳ್ಳಲಾರದ ಬಿಡಲಾರದ ಬಿಕ್ಕಟ್ಟಿನ ಬದುಕಿನಲ್ಲಿ, ನಲಿದಾಡಿ ಬೆಳೆಯಬೇಕಾದ ಮಕ್ಕಳ ಪಾಡು ಹೇಳತೀರದು. ಇದರಿಂದ ಬಿಡುಗಡೆ ಇದೆಯೆ? ಇದಕ್ಕೆ ಮದ್ದು ಕೊಡುವವರಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಇಂತಹ ಬಗೆಹರಿಯದ ಪ್ರಶ್ನೆಗಳಿಗೆ ಮಕ್ಕಳ ನೆಲೆಯ ಉತ್ತರವಾಗಿ ವಿಜಯಶ್ರೀ ಅವರ ಈ ನಾಟಕ ಹುಟ್ಟುಪಡೆದಿದೆ. ನಿಸರ್ಗದ ಮಡಿಲಲ್ಲಿ ಬಕುಲ ಮರದ ಆಸರೆಯಲ್ಲಿ ನೆಲೆಸಿರುವ ಹಕ್ಕಿಪಕ್ಷಿಗಳ, ಬೆಕ್ಕು ನಾಯಿ ಡಾಂಕಿ ಮಂಕಿಗಳ ಪುಟ್ಟ ಕನ್ನಡ ಶಾಲೆ 'ಗುಬ್ಬಚ್ಚಿ ಮನೆ'. ಇವೆಲ್ಲ ಕಮಲ ಟೀಚರ್ ಅವರ ಮುದ್ದು ಮಕ್ಕಳು. ಮಕ್ಕಳಿಗೆಲ್ಲ ಮನೆಗಿಂತ ಶಾಲೆಯೆ ಅಚ್ಚುಮೆಚ್ಚು. ಕಾರಣ, ಅಲ್ಲಿನ ಆಟ ಪಾಠ ಎಲ್ಲ ಬೇರೆಯೆ ಬಗೆಯದು. ಆಟವೆ ಪಾಠ, ಪಾಠವೆ ಆಟ ಎಂಬಂತೆ. ಮೊದಲ ಹಾಡು ಹೇಳುವಂತೆ, "ಚಿತ್ರವ ಬರೆಯುತ/ ಹಾಡನು ಹೇಳುತ / ನಲಿಯುತ ಕಲಿಯುವೆವು." "ಅಪ್ಸರೆ ಅಳಿಲು/ ಕಿನ್ನರಿ ಮಿಂಚುಳ್ಳಿ/ ಲೋಕಕೆ ಹೋಗುವೆವು."
ಕಮಲಾ ಟೀಚರ್ ಕ್ಲಾಸಿನಲ್ಲಿ ಖುಶಿಯಿಂದ ತೆರೆದುಕೊಳ್ಳುವ ನಾಟಕ ತಟ್ಟೀರಾಯನ ಪ್ರವೇಶದಿಂದ ಮಕ್ಕಳ ಫ್ಯಾಂಟಸಿಯ ರಮ್ಯಲೋಕದ ಕಡೆಗೆ ಜಿಗಿಯುತ್ತದೆ. ಇವರಿಗೆಲ್ಲ ಆಸರೆಯಾಗಿರುವ ಬಕುಲಮ್ಮನನ್ನೆ ಕಿತ್ತೊಯ್ಯುವ ಆತ ಗುಬ್ಬಕ್ಕನ ಮುದ್ದಿನ ಮಕ್ಕಳಾದ ಚಿನ್ನು ಮುನ್ನು ಇಬ್ಬರನ್ನೂ ಹೊತ್ತುಕೊಂಡು ಹೋಗುತ್ತಾನೆ. ಅವರನ್ನು ಹುಡುಕಿ ಬಿಡಿಸಿಕೊಂಡು ಬರುವ ಸಾಹಸಗಾಥೆಯೆ ನಾಟಕದ ಮುಖ್ಯ ಕ್ರಿಯಾಸರಣಿ. ಪರಾಕ್ರಮ ಕೊಚ್ಚಿಕೊಂಡು ಮುಂದಾಗಿ ಹೋಗುವ ಡಾಂಕಿ ಮಂಕಿ ಇಬ್ಬರೂ ಕರ್ರ ಮುರ್ರ ದೆವ್ವಗಳೆದುರು ಮಂಕರಾದರೂ ಅವರಿಂದ ತಟ್ಟೀರಾಯನ ತಾಣ ತಿಳಿದು ಬರುತ್ತಾರೆ. ಆನಂತರ ಕಾಳಜ್ಜನ ಮತ್ತು ಮುಸುವಮ್ಮನ ಮುಂದಾಳ್ತನದಲ್ಲಿ ಕನ್ನಡ ಶಾಲೆಯ ಚಿಲಿಪಿಲಿ ಮಕ್ಕಳೆಲ್ಲರೂ ಗುಬ್ಬಮ್ಮನ ಮರಿಗಳ ಬಿಡುಗಡೆಗಾಗಿ ಪಯಣಬೆಳೆಸುತ್ತಾರೆ. ಮಾರ್ಗ ಮಧ್ಯದಲ್ಲಿ ಎದುರಾಗುವ ಮೂಷಿಕರಾಜ, ಬುಂಡೆಸುಂದರಿ, ಸಮುದ್ರರಾಣಿ ಇವರೆಲ್ಲರ ಅಡೆತಡೆಗಳನ್ನು ನಿಭಾಯಿಸಿ ತಟ್ಟೀರಾಯನಿಗೆ ಪಾಠ ಕಲಿಸಿ, ಬಕುಲಮ್ಮ ಮತ್ತು ಚಿನ್ನುಮುನ್ನೂರನ್ನು ಮರಳಿ ಕರೆತಂದು ಗುಬ್ಬಮ್ಮನ ಕಣ್ಣೀರು ತೊಡೆಯುತ್ತ 'ಶಾಲೆಮನೆ'ಯಲ್ಲಿ ನಲಿಯುತ್ತಾರೆ. ಹೀಗೆ ಕತೆಯ ಓಟ.
ನಡುನಡುವೆ ಗಮನಿಸಬೇಕಾದ ಕೆಲವು ವಿಶೇಷ ಸಂಗತಿಗಳಿವೆ. ಎರಡು ತಾಸು ತಪಸ್ಸು ಮಾಡಿ ಕಪ್ಪೆ ಹಿಡಿದ ಮುಸುವ ಬೆಕ್ಕು ಪೆಟ್ಟುತಿಂದು ಮಲಗಿ ಕಪ್ಪೆಯ ಕನಸು ಕಾಣುವುದು, 'ಕಚಕ್ಕ ಪಚಕ್ಕ/ ಹಣ್ಣನು ಕಚ್ಚಿ / ಎಸೆಯುತ ರೋಡಲ್ಲಿ ' ಹೋಗುವ ಡಾಂಕಿ ಮಂಕಿಗಳು ಕರ್ರ ಮುರ್ರ ದೆವ್ವಗಳಿಗೆ ಹೆದರಿ ಓಡಿ ಬೆಟ್ಟದ ಬುಡದಲ್ಲಿ ಜಾರಿ ಉರುಳುವುದು, ಬುಂಡೆಸುಂದರಿ ಮೀನಿನ ಯಕ್ಷ ಪ್ರಶ್ನೆಗಳಿಗೆ ಜಾಣ ಮಕ್ಕಳು ಉತ್ತರಿಸುವುದು, ನಾಗರಿಕರೆನಿಸಿಕೊಂಡ ಮನುಷ್ಯರು ಮೀನಿನ ಕುಲವನ್ನು ನಾಶಮಾಡಿದ ಮತ್ತು ಬೇಡದ ವೇಸ್ಟ್ ಒಗೆದು ಕಡಲಮ್ಮನನ್ನು ವಿರೂಪಗೊಳಿಸಿದ ಕತೆ ಹಾಗೂ ಈ ಚಿಣ್ಣರು ಅವಳ ಶುಚಿಗೊಳಿಸಿದ ಪರಿ -- ಮುಂತಾಗಿ ಆಟದ ರೂಪದಲ್ಲಿ ಪಾಠ ಹೇಳುವ ತುಂಬಾ ಸ್ವಾರಸ್ಯಕರವಾದ ಸನ್ನಿವೇಶಗಳು ಸರಮಾಲೆಯಾಗಿ ಬಂದು ನಾಟಕದ ರೋಚಕತೆ ಮತ್ತು ನಾಟಕೀಯತೆಯನ್ನು ಹೆಚ್ಚಿಸಿವೆ.
ನಿಸರ್ಗದ ಮಡಿಲಿನ ಇಂತಹ ಹೊಸ ನಾಟಕಕ್ಕಾಗಿ ವಿಜಯಶ್ರೀ ಅವರಿಗೆ ಅಭಿನಂದನೆಗಳು. ಈ ಬನದ ಎಲ್ಲ ಜೀವಜಂತುಗಳೂ ಇವರಿಂದ ಇನ್ನಷ್ಟು ಕತೆ ಬರೆಯಿಸಿಕೊಂಡು ನಾಟಕಕ್ಕೆ ಬರಲಿ ಎಂದು ಹಾರೈಸುತ್ತೇನೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.