ಇದೊಂದು ‌ಸ್ತ್ರೀ ಸಂವೇದನೆಯ ಕಾದಂಬರಿಯಾಗಿದೆ


"ಕಾದಂಬರಿ ಬರೆಯುವುದೆಂದರೆ ಕತೆಯನ್ನು ವಿಸ್ತರಿಸುವ ಸೊಗಸಾದ ಕಲೆ ಬೇಕು. ಕಥಾವಸ್ತುವಿನ ಆಯ್ಕೆ, ನವಿರಾದ ನಿರೂಪಣೆ, ಪಾತ್ರಗಳ ಸಮನ್ವಯ, ಗಟ್ಟಿಯಾದ ಕಥಾಹಂದರ, ಬರವಣಿಗೆಯ ತಂತ್ರಗಾರಿಕೆ, ಇವೆಲ್ಲವುಗಳ ಪರಿಪೂರ್ಣತೆಯಿಂದ ಕಾದಂಬರಿ ರಚಿಸಬಹುದು," ಎನ್ನುತ್ತಾರೆ ವೈ.ಜಿ. ಭಗವತಿ ಅವರು ಶಕುಂತಲಾ ಪಿ ಹಿರೇಮಠ ಅವರ ʻಚಿಗುರಿದ ಕನಸುʼ ಕೃತಿ ಕುರಿತು ಬರೆದ ಅನಿಸಿಕೆ.

ಮಕ್ಕಳ ಸಾಹಿತ್ಯದಲ್ಲಿ ಕವನ, ಕಥೆ, ನಾಟಕ, ಕಾದಂಬರಿಗಳನ್ನು ಬರೆಯುತ್ತಾ ಬಂದಿರುವ ನಿವೃತ್ತ ಉಪನ್ಯಾಸಕಿಯರಾದ ಶಕುಂತಲಾ ಹಿರೇಮಠ ಅವರು ನಾಡಿನ ಮಕ್ಕಳಿಗೆ ಹೊಸತನದ, ವೈವಿಧ್ಯಮಯ ಸಾಹಿತ್ಯ ರಚಿಸಬೇಕೆನ್ನುವ ಅವರ ಹಂಬಲ ಅದಕ್ಕಾಗಿ ಅವರು ಮಾಡುವ ಅಧ್ಯಯನಗಳು, ಹೊಸ ವಿಷಯಕ್ಕಾಗಿ ಅನ್ವೇಷಣೆ, ಅಚ್ಚುಕಟ್ಟಾಗಿ ಕೃತಿ ರೂಪದಲ್ಲಿ ಬರಲು ಅವರು ತುಂಬಾ ಆಸಕ್ತಿಯಿಂದ ಮಾಡಿಕೊಳ್ಳುವ ಸಿದ್ಧತೆಗಳು ( ಮುಖಪುಟ, ಒಳಪುಟಗಳ ಚಿತ್ರಗಳು) ಉದಯೋನ್ಮುಖ ಬರಹಗಾರರಿಗೆ ಮಾದರಿಯಾಗಿದ್ದಾರೆ. ನಿವೃತ್ತಿಯ ಜೀವನದಲ್ಲೂ ಸಾಹಿತ್ಯದ ನಿರ್ಮಿತಿಗಾಗಿ ಅವರು ಸದಾ ಬತ್ತದ ಉತ್ಸಾಹ ಕಾಪಾಡಿಕೊಂಡಿರುವುದು ತುಂಬಾ ಖುಶಿಯ ಸಂಗತಿ. ಮಕ್ಕಳಿಗಾಗಿ ತುಂಬಾ ವಿಶೇಷ ಕೃತಿಗಳನ್ನು ರಚಿಸಿದ್ದಾರೆ. ಹೊಸ ಚಿಗುರು, ಹಳೆ ಬೇರು (ಮಕ್ಕಳ ಕತೆಗಳು) ‘ಚಿನ್ನರ ಅಂಗಳ’ ಕವನ ಸಂಕಲನ ಭೀಮಜ್ಜನ ಭೂತ (ಮಕ್ಕಳ ನಾಟಕ) ಹೀಗಿವೆ. ದೊಡ್ಡವರ ಸಾಹಿತ್ಯದಲ್ಲಿ ಕಾದಂಬರಿ, ಕವನ ಸಂಕಲನ ಹನಿಗವನ ಹೀಗೆ ಸಾಹಿತ್ಯದ ಎಲ್ಲಾ ಪ್ರಾಕಾರಗಳನ್ನು ರಚಿಸುತ್ತಿದ್ದಾರೆ. ಇದೀಗ ‘ಚಿಗುರಿದ ಕನಸು’ ಎನ್ನುವ ವಿಸ್ತಾರ ರೂಪದ ಮಕ್ಕಳ ಕಾದಂಬರಿಯನ್ನು ಚಿಣ್ಣರಿಗಾಗಿ ನೀಡುತ್ತಿದ್ದಾರೆ.

ಕಾದಂಬರಿ ಬರೆಯುವುದೆಂದರೆ ಕತೆಯನ್ನು ವಿಸ್ತರಿಸುವ ಸೊಗಸಾದ ಕಲೆ ಬೇಕು. ಕಥಾವಸ್ತುವಿನ ಆಯ್ಕೆ, ನವಿರಾದ ನಿರೂಪಣೆ, ಪಾತ್ರಗಳ ಸಮನ್ವಯ, ಗಟ್ಟಿಯಾದ ಕಥಾಹಂದರ, ಬರವಣಿಗೆಯ ತಂತ್ರಗಾರಿಕೆ, ಇವೆಲ್ಲವುಗಳ ಪರಿಪೂರ್ಣತೆಯಿಂದ ಕಾದಂಬರಿ ರಚಿಸಬಹುದು. ಅದರಲ್ಲೂ ಮಕ್ಕಳಿಗಾಗಿ ಅಂದರೆ ರಂಜನೆ, ಕಾಲ್ಪನಿಕತೆ, ಸಾಹಸ ಮನೋಭಾವ, ಪ್ರಕೃತಿಯ ಸೊಬಗು, ಮಕ್ಕಳ ಬಾಲ್ಯ, ಅವರುಗಳ ತುಂಟಾಟ, ಅಚ್ಚರಿಯ ಅಂಶಗಳು ಇವೆಲ್ಲವುಗಳ ಮಿಶ್ರಣದಿಂದ ಒಂದು ಹದವಾದ ಕಾದಂಬರಿ ಕಟ್ಟಬಹುದು. ಮಕ್ಕಳ ಕಾದಂಬರಿ ಬರೆಯುವವರ ಸಂಖ್ಯೆ ತುಂಬಾ ವಿರಳ ಎನ್ನಬಹುದು. ಆದರೂ ಕನ್ನಡ ಭಾಷೆಯಲ್ಲಿ ಹೊಸಬಗೆಯ ಕಾದಂಬರಿಗಳು ಇತ್ತಿತ್ತಲಾಗಿ ಪ್ರಕಟವಾಗುತ್ತಲಿವೆ. ಅವುಗಳನ್ನು ವಿಮರ್ಶಕರು ಗಮನಿಸಬೇಕಷ್ಟೆ.

ಗಣೇಶ ನಾಡೋರ ಅವರ ಪೂರ್ವಿ, ಪುಟ್ಟ ಯಜಮಾನ ಕಾದಂಬರಿಗಳಲ್ಲಿ ಕರಾವಳಿ ಸಂಸ್ಕೃತಿಯನ್ನು ಕಂಡರೆ, ತಮ್ಮಣ್ಣ ಬೀಗಾರರ ‘ಬಾವಲಿ ಗುಹೆ’, ಕಾದಂಬರಿಯಲ್ಲಿ ಮಲೆನಾಡಿನ ಸೊಬಗನ್ನು ಸವಿಯಬಹುದು. ಡಾ. ಬಸು ಬೇವಿನಗಿಡದ ಅವರ ಓಡಿಹೋದ ಹುಡುಗ, ಒಳ್ಳೆಯ ದೆವ್ವ ಈ ಕಾದಂಬರಿಯಲ್ಲಿ ಗ್ರಾಮೀಣ ಸೊಗಡನ್ನು ಕಾಣಬಹುದು ಅದೇ ರೀತಿಯಲ್ಲಿ ವೈ.ಜಿ.ಭಗವತಿ ಅವರ ‘ಮತ್ತೆ ಹೊಸ ಗೆಳೆಯರು’ ಹಾಗೂ ‘ಮಕ್ಕಳ ಓದಿದ ಟೀಚರ ಡೈರಿ’ ಕಾದಂಬರಿಗಳಲ್ಲಿ ಮಕ್ಕಳ ಸ್ವಾಭಿಮಾನ, ಸಂವೇದನೆ ಹಾಗೂ ಮಕ್ಕಳ ಮಾನಸಿಕ ತೊಳಲಾಟಗಳ ವಿಶಿಷ್ಠತೆ ಇದೆ. ಸತೀಷ ಕೆ ಎನ್ ಅವರು ‘ಬೈರ’ ಕಾದಂಬರಿಯಲ್ಲಿ ಪ್ರಾಣಿಪ್ರೀತಿ ಸಂವೇದನೆಯೇ ಮುಖ್ಯವಾಗಿದೆ. ನಾಗರಾಜ ಹುಡೇದ ಅವರ ‘ಬೆರಗು’ ಕಾದಂಬರಿಯಲ್ಲಿ ಪರಿಸರದ ಚಿತ್ರಣವಿದೆ. ಹೀಗೆ ಮಕ್ಕಳಿಗಾಗಿ ಒಂದಿಷ್ಟು ವಿನೋದಮಯವಾದ ವ್ಯಕ್ತಿತ್ವದ ಬೆಳವಣಿಗೆಗಾಗಿ ಕಾದಂಬರಿಗಳನ್ನು ಬರೆಯುವ ಕೆಲಸ ಕನ್ನಡದಲ್ಲಿ ನಡೆಯುತ್ತಲಿದೆ. ಅಂತಹ ಅನೇಕ ಹೊಸ ಹೊಳುವಿನ ಅನೇಕ ಕಾದಂಬರಿಗಳ ಪಟ್ಟಿಯನ್ನು ನೀಡಬಹುದು.

ಇದೀಗ ಶಕುಂತಲಾ ಹಿರೇಮಠ ಅವರು ಬರೆದಿರು ‘ಚಿಗುರಿದ ಕನಸು’ ಬಾಲಕಿಯರ ಸಂವೇದನೆಯ ಅಭಿರುಚಿಯುಳ್ಳ ಮಕ್ಕಳ ಕಾದಂಬರಿ. ಕೂಡು ಕುಟುಂಬದ ಅಸ್ಮಿತೆ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇರುವ ಲಿಂಗ ತಾರತಮ್ಯ, ಬಾಲ್ಯವಿವಾಹ, ಗಂಡು ಮಕ್ಕಳಿಂದಲೇ ಮುಕ್ತಿ ಎನ್ನುವ ಮೂಢನಂಬಿಕೆ, ಬಾಲಕಿಯ ಉನ್ನತ ಶಿಕ್ಷಣಕ್ಕೆ ತೊಡಕಾಗಿರುವ ಅಂಶಗಳೇÀ ಈ ಕಾದಂಬರಿಯ ಹೂರಣವಾಗಿವೆ. ಇಲ್ಲಿ ಬಹತೇಕ ಸ್ತಿçà ಪಾತ್ರಗಳೇ ಪ್ರಥಮ ಪ್ರಾಮುಖ್ಯತೆ ಪಡೆದಿವೆ. ಇದು ಕೂಡಾ ಈ ಕೃತಿಯ ಒಂದು ವಿಶೇಷ ಸಂಗತಿಯಾಗಿದೆ. ಬಹುತೇಕ ಕಾದಂಬರಿಗಳಲ್ಲಿ ಪುರುಷ ಪಾತ್ರಗಳು ಪ್ರಾಬಲ್ಯ ಮೆರೆಯುತ್ತವೆ. ಆದರೆ ಇಲ್ಲಿಯ ಶಾರದಾ ಟೀಚರ್, ಮನೆ ಯಜಮಾನಿ ಸೀತಕ್ಕ, ಸಿದ್ದವ್ವ, ಗೌರಮ್ಮ, ಹೆಡ್ ಮಿಸ್ ಅನೂಪಮಾ ಮೇಡಂ, ನಳಿನಿ ಟೀಚರ್, ಸಮಾಜ ಸುಧಾರಕಿ ಸರಸಕ್ಕ, ಕಾದಂಬರಿಯ ಪ್ರಮುಖ ಪಾತ್ರ ಬಾಲಕಿ ಸುಮಾ ಹೀಗೆ ಅನೇಕ ಸ್ತಿçà ಪಾತ್ರಗಳೇ ಕಾದಂಬರಿಗೆ ಜೀವಕಳೆ ತುಂಬಿವೆ.

ಶಾರದಾ ಟೀಚರ ಮನೆಗಣಿತಿಗೆ ಸುಮಾಳ ಮನೆಗೆ ಬಂದಾಗ ಮನೆ ಮಂದಿಯ ಸಂಖ್ಯೆ ತೆಗೆದುಕೊಳ್ಳಬೇಕಾಗುತ್ತದೆ. ಎಷ್ಟು ಮಂದಿ ಇದ್ದೀರಿ ? ಎನ್ನುವ ಪ್ರಶ್ನೆಗೆ ಈ ಮನೆಯಲ್ಲಿ ಮೂರು ತೆಲಿ ಇವೆ ಎನ್ನುವ ಶಾಮಣ್ಣ ಅವರ ವಿನೋದ ಹಾಗೂ ತಾರ್ಕಿಕ ಉತ್ತರದಿಂದ ಈ ಕಾದಂಬರಿ ಪ್ರಾರಂಭವಾಗುತ್ತದೆ. ಮೂರು ತೆಲಿ ಎಂದರೆ ಮೂರು ತಲೆಮಾರು ಎಂದರ್ಥ. ಅಜ್ಜ- ಅಪ್ಪ- ಮಕ್ಕಳು ಹೀಗೆ ಒಂದೇ ಮನೆಯಲ್ಲಿ ವಾಸ. ಇಲ್ಲಿ ಲೇಖಕಿಯರು ಅವರ ವಂಶಾವಳಿಯನ್ನೆ ನಮೂದಿಸಿದ್ದಾರೆ. ಅದು ಓದುಗರಿಗೆ ವಿಶಿಷ್ಠ ಅನುಭವ ನೀಡುತ್ತದೆ. ಅಜ್ಜ-ಅಜ್ಜಿ ಮಲ್ಲಪ್ಪ ಪಾರ್ವತಿ, ಅಪ್ಪ-ಅವ್ವ ಶಂಕ್ರಪ್ಪ ಕಮಲವ್ವ. ಮಗ-ಸೊಸೆ ಅಂದರೆ ಶಾಮಣ್ಣ ಹಾಗೂ ಅವನ ಹೆಂಡತಿ ಸೀತಾ. ಅವರಿಗೆ ಎಂಟು ಜನ ಹುಡುಗಿಯರು.

ಗಂಡು ಮಗುವೇ ವಂಶೋಧಾರಕ ಎನ್ನುವ ಮೂಢನಂಬಿಕೆಯೊAದಿಗೆ ಬದುಕು ನಡೆಸುವ ಶಾಮಣ್ನ ಆತನಿಗೆ ತನ್ನ ಹೆಣ್ಣುಮಕ್ಕಳ ಮೇಲಿರುವ ಅಸಡ್ಡೆತನ, ಅವರನ್ನು ಬಹಬೇಗ ಮದುವೆ ಮಾಡಿ ಜವಾಬ್ದಾರಿಂದ ಮುಕ್ತನಾಗಬೇಕೆನ್ನುವ ಉದಾಸೀನತೆ ಇಲ್ಲಿ ಅನಾವರಣಗೊಂಡಿದೆ. ಅಪರೂಪಕ್ಕೆ ಒಂಬತ್ತನೆಯ ಮಗುವಾಗಿ ಹುಟ್ಟುವ ರಾಜಶೇಖರ ಅವನನ್ನು ಯುವರಾಜನಂತೆ ಬೆಳೆಸುತ್ತಾರೆ. ಬೆಳೆದಂತೆ ಅವನಿಗೆ ನೀಡುವ ಸಕಲ ಸೌಕರ್ಯಗಳು, ಗಂಡು ಮಗು ಮೇಲು ಎನ್ನುವ ಮನೋಭಾವಗಳು, ಬಾಲಕಿಯರ ಬಗ್ಗೆ ನಿಷ್ಕಾಳಜಿ, ತಾರತಮ್ಯ ಸ್ವಭಾವಗಳು ಇಂದಿಗೂ ಅಲ್ಲಲ್ಲಿ ಗ್ರಾಮೀಣ ಭಾಗದಲ್ಲಿ ಉದಾಹರಣೆಯಾಗಿ ನಮಗೆ ಸಿಗುತ್ತವೆ.

ಬಾಲಕಿ ಸುಮಾಳ ಶಾಲಾ ಬೆಳವಣಿಗೆಯಲ್ಲಿ ಶಾರದಾ ಹಾಗು ಅನೂಪಮಾ ಮೇಡಂ ಅವರುಗಳ ಪ್ರೋತ್ಸಾಹ. ಕಕ್ಕುಲಾತಿಗಳು ಓದುಗರಿಗೆ ತಮ್ಮ ಬಾಲ್ಯ ಜೀವನ ಓದಿನಲ್ಲಿ ಸಿಕ್ಕ ಅನೇಕ ಟೀಚರುಗಳು ಖಂಡಿತಾ ನೆನಪಿಗೆ ಬರುತ್ತಾರೆ. ಕಾದಂಬರಿ ಓದುಗರನ್ನು ತಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತದೆ. ಹಾಗೆಯೇ ಅವರ ಕಾಲಘಟ್ಟದಲ್ಲಿ ನಡೆದಿರುವ ಇಂಥಹ ಅನೇಕ ಕಥೆಗಳನ್ನು ನೆನಪು ಮಾಡುತ್ತವೆ.

ಇಡೀ ಕಾದಂಬರಿ ಆರು ಆಧ್ಯಾಯಗಳಲ್ಲಿ ಮೂಡಿಬಂದಿದೆ. ಸುಮಾ ಈ ಕಾದಂಬರಿಯ ಕಥಾ ನಾಯಕಿ. ಅವಳ ನೋವು ನಲಿವಿನ ಸುತ್ತ ಕಥಾ ಹಂದರವಿದು. ಹೆಣ್ಣು ಕೇವಲ ಮಕ್ಕಳನ್ನು ಹೆರೆಯುವ ಯಂತ್ರ. ಹೆಣ್ಣಿಗೇಕೆ ಶಿಕ್ಷಣ?, ಗಂಡು ವಂಶೋಧಾರಕ ಎನ್ನುವ ಹಲವು ದಶಕಗಳ ಹಿಂದಿನ ಬಹುತೇಕ ಗ್ರಾಮೀಣ ಭಾಗದ ಮನಸ್ಥಿತಿಗಳ ಅನಾವರಣ ಇಲ್ಲಿದೆ. ಎಂಟು ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿ ಕೈ ತೊಳೆದುಕೊಂಡರಾಯಿತು ಎನ್ನುವ ಶಾಮಣ್ಣನ ಪಾತ್ರ ಹಳ್ಳಿಯಲ್ಲಿ ಇಂದಿಗೂ ಅಲ್ಲಲ್ಲಿ ಕಾಣ ಸಿಗುವ ಪರಿಸ್ಥಿತಿಗಳನ್ನು ತಾತ್ಸಾರ ಭಾವನೆಗಳನ್ನು ಲೇಖಕಿಯರು ಸಹಜವಾಗಿ ಚಿತ್ರಿಸಿದ್ದಾರೆ.

ಶಾಲೆಯಲ್ಲಿ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲಿ ್ಲಸುಮಾ ಸದಾ ಮುಂದಿರುತ್ತಾಳೆ. ಅದೇ ಸಂದರ್ಭದಲ್ಲಿ ಶಾಲೆಯ ಹೊಸ ಕಟ್ಟಡದ ಸಮಾರಂಭಕ್ಕೆ ಬಂದ ಆಯ್ ಎ ಎಸ್ ಅಧಿಕಾರಿ ಶಾಲಿನಿ ರಜನೀಶ ಅವರ ಸಂವಾದ ಸುಮಾಳ ಮಹತ್ವಾಕಾಂಕ್ಷೆಯ ಗುರಿಗೆ ದಾರಿ ಮಾಡುತ್ತದೆ. ಹತ್ತನೆಯ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ್ದರೂ ಶಿಕ್ಷಕರು ಪಡುವಷ್ಟು ಸಂಭ್ರಮ ಪಾಲಕರು ಸಂಭ್ರಮಿಸುವುದಿಲ್ಲ. ಮನೆಯಲ್ಲಿ ಒಂಬತ್ತನೆಯ ಮಗುವಾಗಿ ರಾಜಶೇಖರ ಜನಿಸಿದಾಗ ಮನೆ ಅರಮನೆಯಂತೆ ಹರುಷದ ಹೊನಲು ಹರಿಯುತ್ತದೆ. ಆತ ಮುದ್ದಿನಿಂದ ಬೆಳೆಯುತ್ತಾನೆ.

ಅಕ್ಕಂದಿರಂತೆ ಸುಮಾಳಿಗೂ ಮದುವೆಗೆ ಒತ್ತಾಯಿಸಿದಾಗ ಕಲಿಯ ಬೇಕೆನ್ನುವ ಪ್ರಬಲ ಆಸಕ್ತಿಗೆ ಯಾರೂ ಆಸರೆಯಾಗದಿದ್ದಾಗ ಮಾನಸಿಕ ಅಸ್ವಸ್ಥತೆಯಾಗುತ್ತಾಳೆ. ಸುಮಾಳಿಗೆ ದೆವ್ವ ಬಡಿದಿದೆ ಎನ್ನುವ ಪಾಲಕರು ಅದಕ್ಕೆ ಮಾಡುವ ಉಪಚಾರದ ತಂತ್ರಗಳನ್ನು ಇಲ್ಲಿಯೂ ಲೇಖಕಿ ಶಕುಂತಲಾ ಅವರು ಗ್ರಾಮ್ಯ ಜೀವನದ ಮೂಢನಂಬಿಕೆಗಳನ್ನು ಮುನ್ನಲೆಗೆ ತರುತ್ತಾರೆ. ಸುಮಾಳ ತಾಯಿಯ ಸಂಕಟ, ಅವಳು ಮಗಳ ಬದುಕಿಗಾಗಿ ಮಾಡುವ ಚಿಂತೆ ಓದುಗರ ಮನ ಕಲಕುತ್ತದೆ. ಸಮಾಜ ಸೇವಕಿ ಸರಸಕ್ಕಳ ಸಹಾಯ ಸಮಾಳ ಬದುಕಿಗೆ ಬೆಳಕಾಗುತ್ತದೆ.

ಶಾರದಾ ಟೀಚರ ಅವಳನ್ನು ದತ್ತು ಪಡೆದು ಓದಿಸಿದ್ದು ಅಂತಿಮವಾಗಿ ಸುಮಾ ತನ್ನ ಇಚ್ಛೆಯಂತೆ ಜಿಲ್ಲಾಧಿಕಾರಿಯಾಗಿದ್ದು. ರಾಜಶೇಖಕರ ಹಲವಾರು ದುಷ್ಟ ಗೆಳೆಯರ ಸಂಗದಿAದ ಪಾಲಕರನ್ನು ವಂಚಿಸುತ್ತಾ ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸಿ, ಮಾದಕ ವ್ಯಸನನಾಗಿ ಕೊನೆಗೂ ಸರೆಮನೆ ವಾಸಕ್ಕೆ ಗುರಿಯಾಗುತ್ತಾನೆ. ಅತಿಯಾದ ಮುದ್ದು ಮಕ್ಕಳ ಬಾಳಲ್ಲಿ ಸಿಹಿಯಾಗದೆ ಕಹಿಯಾಗುತ್ತದೆ. ಮಕ್ಕಳ ಬೆಳೆವಣಿಗೆಯಲ್ಲಿ ಪಾಲಕರ ಜವಾಬ್ದಾರಿ ಎಷ್ಟಿದೆ ಎಂಬುದರ ಗಂಭೀರತೆಯನ್ನು ಈ ಕಾದಂಬರಿ ಸಮಾಜಕ್ಕೊಂದು ಸಂದೇಶ ನೀಡುತ್ತದೆ. ಹೆಣ್ಣು ಹೊನ್ನು, ಮನೆ ಬೆಳಗುವ ನಂದಾ ದೀಪ ಎನ್ನುವ ಅಂಶವನ್ನು ಈ ಕಾದಂಬರಿಯ ಉದ್ದಕ್ಕೂ ಹಲವಾರು ಪಾತ್ರಗಳ ಮೂಲಕ ಲೇಖಕಿಯರು ಸಾಕ್ಷಿಗೊಳಿಸುತ್ತಾ ಹೋಗುತ್ತಾರೆ.

ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಶಿಕ್ಷಣಕ್ಕೆ ಸರಕಾರ, ಸಮಾಜ ಸ್ಪಂದಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಸ್ತ್ರೀ ತನ್ನ ಪ್ರಾಬಲ್ಯ ಸಾಧಿಸುತ್ತಿದ್ದಾಳೆ. ಆರ್ಥಿಕ ಸಬಲತೆ ಹೊಂದುತ್ತಿದ್ದಾಳೆ. ಆದಾಗ್ಯೂ ಗ್ರಾಮೀಣ ಪ್ರದೇಶದಲ್ಲಿ ಹೆಣ್ಣುಮಕ್ಕಳು ಇಂದಿಗೂ ಅನೇಕ ಸಾಮಾಜಿಕ ಸಮಸ್ಯೆಗಳಿಂದ ಬಳಲುತ್ತಿದ್ದಾಳೆ, ಬದಕು ಕಟ್ಟಿಕೊಳ್ಳಲು ಹೆಣಗುತ್ತಿದ್ದಾಳೆ. ಗ್ರಾಮ್ಯಭಾಷೆಯ ಸೊಗಡು ಈ ಕಾದಂಬರಿಯ ಹಿರಿಮೆ ಗರಿಮೆ ಎನ್ನಬಹುದು. ಅಲ್ಲಲ್ಲಿ ಹೆಣ್ಣೆಂದರೆ ಪ್ರಕೃತಿ ಹೆಣ್ಣೆಂದರೆ ಸಂಸ್ಕೃತಿ ಪ್ರಕೃತಿ ಉಳಿಸೋಣ, ಸಂಸ್ಕೃತಿ ಬೆಳೆಸೋಣ ಹೀಗೆ ಹೆಣ್ಣಿನ ಮಹಿಮೆ ಸಾರುವ ಅನೇಕ ಚಿಕ್ಕ ಚಿಕ್ಕ ಕವಿತಾ ಗುಚ್ಛಗಳು ಓದುಗರಿಗೆ ಹೆಣ್ಣು ಮಕ್ಕಳ ಬಗ್ಗೆ ಅಭಿಮಾನ, ಗೌರವ ಹೆಚ್ಚಿಸುತ್ತವೆ.

ಇದೊಂದು ‌ಸ್ತ್ರೀ ಸಂವೇದನೆಯ ಕಾದಂಬರಿಯಾಗಿದೆ. ಒಂದೊಳ್ಳೆಯ ಬರಹದ ಪ್ರಯತ್ನ ಇಲ್ಲಿ ಕಾಣಿಸುತ್ತದೆ. ಅದಕ್ಕಾಗಿ ಲೇಖಕಿ ಶಕುಂತಲಾ ಹಿರೇಮಠ ಅವರನ್ನು ಅಭಿನಂದಿಸುವೆ.

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...