"ಲೇಖಕರು ತನ್ನ ಮಾತುಗಳಲ್ಲಿ "ಸೃಜನಶೀಲ ಬಣ್ಣಗಳಲ್ಲಿ ಬರೆದಿರುವುದರಿಂದ ಮೇಲು ನೋಟಕ್ಕೆ ಇದೊಂದು ಕಾದಂಬರಿಯಂತೆ ಕಂಡರೆ ಅಚ್ಚರಿ ಇಲ್ಲ" ಎಂದು ಹೇಳಿಕೊಂಡಿದ್ದಾರೆ. ಇಡಿಯ ಪುಸ್ತಕದ ಪೂರ್ವಾರ್ಧ ನನ್ನದೇ ತಲೆಮಾರಿನ ಆದರೆ ನನಗೆ ಗೊತ್ತಿಲ್ಲದ, ಜಗತ್ತೊಂದನ್ನು ತೆರೆದಿಡುತ್ತದೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ನಾ. ಮೊಗ್ಗಳ್ಳಿ ಗಣೇಶ್ ಅವರ ʻನಾನೆಂಬುದು ಕಿಂಚಿತ್ತುʼ ಕೃತಿ ಕುರಿತು ಬರೆದ ಅನಿಸಿಕೆ.
ರಂಗಸ್ಥಳಕ್ಕೆ ಒಂದು ಸುತ್ತು ಬರುವುದರ ಒಳಗೆ ಚಪ್ಪನ್ನೈವತ್ತಾರು ದೇಶ ಸುತ್ತಿಬರುವ ಯಕ್ಷಗಾನದ ಪಾತ್ರಗಳನ್ನು ಕಂಡು ಬೆಳೆದ ನನಗೆ, ಮೊಗಳ್ಳಿ ಗಣೇಶ ಅವರ “ನಾನೆಂಬುದು ಕಿಂಚಿತ್ತು” ಕನ್ನಡದಲ್ಲಿ ಜನಪದ ಪ್ರಕಾರದ ಆತ್ಮಕಥೆಯ ಹೊಸ ಮಾದರಿ ಅನ್ನಿಸಿತು. ಇಂತಹದೊಂದು ಹೇಳಿಕೆ ಧೈರ್ಯದಿಂದ ಕೊಡಬಲ್ಲೆ ಎಂಬ ವಿಶ್ವಾಸ ಕೊಟ್ಟದ್ದು, ಈ ಪುಸ್ತಕದಲ್ಲಿ ಎಂಎಂ ಕಲಬುರ್ಗಿ ಅವರ ಕುರಿತು ದಾಖಲಿಸುವಾಗ ಮೊಗಳ್ಳಿ ಗಣೇಶ ಅವರು, ತನ್ನ ಪಿಎಚ್ಡಿ ಪ್ರಬಂಧದ ಕುರಿತು ಕಲಬುರ್ಗಿ ಅವರು ದಾಖಲಿಸಿದ ಅಭಿಪ್ರಾಯದ ಕುರಿತು ಹೇಳುತ್ತಾರೆ: “ನಿನ್ನ ವಿಚಾರಗಳು ಗಾಳಿಯಂತೆ. ಭಾವಕ್ಕೆ ಬರುತ್ತವೆ. ಕೈಗೆ, ತರ್ಕಕ್ಕೆ ಸಿಗುವುದಿಲ್ಲ... ಬಯಲು ದೇಹಿ ಅಲ್ಲಮನಂತೆ” ಎಂಬ ವಾಕ್ಯಗಳವು. ನನಗೆ ಇಡಿಯ ಆತ್ಮಕಥೆ ಕೂಡ ಇದೇ ಹಾದಿಯದು ಅನ್ನಿಸಿತು.
ನಮ್ಮ ಸಮಕಾಲೀನರಾಗಿದ್ದು ಬದುಕಿ ಹೋದ ಕಥೆಗಾರರೊಬ್ಬರು ಈ 350 ಪುಟಗಳಲ್ಲಿ ಮೊದಲ ಅರ್ಧದಲ್ಲಿ, “ಇದು ನಮ್ಮದೇ ಲೋಕದ ಕಥೆಯೇ?” ಎಂದು ಚಿವುಟಿ ನೋಡಿಕೊಳ್ಳಬೇಕಾದ ಘಟನೆಗಳನ್ನು, ಎರಡನೇ ಅರ್ಧದಲ್ಲಿ ಮೈಸೂರಿನ ವಿವಿ ಕ್ಯಾಂಪಸ್ಸಿನ ನವ್ಯ-ಬಂಡಾಯ ಕಾಲದ ರಾಜಕೀಯ, ಹಂಪಿ ಕ್ಯಾಂಪಸ್ಸಿನ ನವ್ಯೋತ್ತರ ರಾಜಕೀಯಗಳನ್ನೆಲ್ಲ ದಾಖಲಿಸಿದ್ದಾರೆ. ಪುಸ್ತಕದ ಉತ್ತರಾರ್ಧದಲ್ಲಿ ಬರುವ ಬಹುತೇಕ ಎಲ್ಲ ಪಾತ್ರಗಳೂ ಇಂದು ನಮ್ಮಸುತ್ತ ಇರುವಂತಹವೇ. ಪತ್ತೇದಾರಿಗೆ ಇಳಿದರೆ ಪ್ರತಿಯೊಂದು ಪಾತ್ರವೂ ಇದು ಇಂತಹವರು ಎಂದು ಗುರುತಿಸಲು ಬೇಕಾದಷ್ಟು ಸೂಚನೆಗಳು ಪುಸ್ತಕದಲ್ಲಿವೆ. ಕೆಲವು ಪಾತ್ರಗಳು ಮಾತ್ರ ಹೆಸರು ಸಹಿತ ಕಾಣಿಸಿಕೊಳ್ಳುತ್ತವೆ.
ಇಡಿಯ ಪುಸ್ತಕದಲ್ಲಿ ನನಗೆ ವೈಯಕ್ತಿಕವಾಗಿ ಇಷ್ಟವಾದದ್ದು (ಇಷ್ಟವಾಯಿತು ಏಕೆಂದರೆ, ಲೇಖಕ ತನ್ನ ಬದುಕಿನ ಪ್ರಯಾಣದಲ್ಲಿ ಬುದ್ಧಿ-ಭಾವ ಎರಡನ್ನೂ ಸಂತುಲನದಲ್ಲಿ ಬಳಸಿಕೊಂಡು ಜೀವಿಸಿದ ಪುಟ್ಟ ಅವಧಿ ಅದು ಎಂದು ಈ ಪುಸ್ತಕದ ಓದಿನ ಮಿತಿಯಲ್ಲಿ ನನಗೆ ಅನ್ನಿಸಿತು.) “ಅನಾದಿಗೆ ಅನಾದಿಯೇ ಆಧಾರ” ಅಧ್ಯಾಯದಲ್ಲಿ ಬರುವ ಒಂದು ಘಟನೆ. ಎಂಎ ಮುಗಿಸಿ, ಆದಾಯ ಇಲ್ಲದೇ, ಹಾಸ್ಟೆಲ್ ವಸತಿಯೂ ಇಲ್ಲದೇ ಬೀದಿಗೆ ಬಿದ್ದಿದ್ದ ಲೇಖಕ ಮೈಸೂರಿನ ಪ್ರಮುಖ ಸರ್ಕಲ್ ಒಂದರಲ್ಲಿ ಠಳಾಯಿಸುತ್ತಿದ್ದಾಗ, “ಬಾಳಾ ಹೊತ್ತಿಂದ ಇಲ್ಲೆಲ್ಲ ಸುತ್ತಾಡ್ತಿದ್ದೀಯಲ್ಲ... ಏನ್ ಸ್ಕೆಚ್ಚು... ನಾನೂ ಇದ್ದೀನಪ್ಪಾ” ಎಂದು ಮತ್ತೊಬ್ಬ ವ್ಯಕ್ತಿ ಪ್ರಶ್ನಿಸುತ್ತಾರೆ; ಲೇಖಕ ಕಳ್ಳ ಇರಬಹುದೆಂಬ ಸಂಶಯದಲ್ಲಿ. ಮುಂದೆ ಅವರಿಬ್ಬರೂ ಸಹಜೀವಿಗಳಾಗಿ ಕೆಲ ದಿನಗಳ ಕಾಲ ಬದುಕುವ ದಾರಿ ಕಂಡುಕೊಳ್ಳುತ್ತಾರೆ. ಈ ಭಾಗ ಮನುಷ್ಯ ಸಂಬಂಧಗಳ ಬಗ್ಗೆ ನೀಡುವ ಒಳನೋಟಗಳು ಅಪೂರ್ವ.
ಲೇಖಕರು ತನ್ನ ಮಾತುಗಳಲ್ಲಿ "ಸೃಜನಶೀಲ ಬಣ್ಣಗಳಲ್ಲಿ ಬರೆದಿರುವುದರಿಂದ ಮೇಲು ನೋಟಕ್ಕೆ ಇದೊಂದು ಕಾದಂಬರಿಯಂತೆ ಕಂಡರೆ ಅಚ್ಚರಿ ಇಲ್ಲ" ಎಂದು ಹೇಳಿಕೊಂಡಿದ್ದಾರೆ. ಇಡಿಯ ಪುಸ್ತಕದ ಪೂರ್ವಾರ್ಧ ನನ್ನದೇ ತಲೆಮಾರಿನ ಆದರೆ ನನಗೆ ಗೊತ್ತಿಲ್ಲದ, ಜಗತ್ತೊಂದನ್ನು ತೆರೆದಿಡುತ್ತದೆ. ತೀರಾ ಸರ್ರಿಯಲಿಸ್ಟಿಕ್ ಅನ್ನಿಸುವ, ಹಸಿ ಹಸಿಯಾದ ಆ ಜಗತ್ತು ಬಿಚ್ಚಿಡುವ ಹಿಂಸೆ, ಹಸಿವು, ಕ್ರೌರ್ಯಗಳೆಲ್ಲ ಭಾವಕ್ಕೆ ಬರುವ, ತರ್ಕಕ್ಕೆ ಸಿಗದ ಘಟನೆಗಳೇ.
ಪುಸ್ತಕದ ಉದ್ದಕ್ಕೂ ಕುತೂಹಲಕರ ಎಂಬಂತೆ ನಾಲ್ಕೈದು ಬಾರಿ “ಐನ್‌ಸ್ಟೀನ್” ಪ್ರಸ್ತಾಪ ಬರುತ್ತದೆ. ಪುಸ್ತಕದ ಉತ್ತರಭಾಗದಲ್ಲಿ ಮೈಸೂರಿನ ಕಾಲೇಜು ಹಾಸ್ಟೆಲ್ ಬದುಕು, ಕ್ರಾಂತಿಯ ಹಲುಬು, ಪ್ರಜಾವಾಣಿ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಬಂದದ್ದು, ಲಂಕೇಶರ ಬಳಗಕ್ಕೆ ಸೇರಿದ್ದು, ಅನಂತಮೂರ್ತಿ, ಎ.ಕೆ. ರಾಮಾನುಜನ್, ಕಥೆಗಾರ ಅನ್ನಿಸಿಕೊಂಡದ್ದು, ಫುಲ್‌ಬ್ರೈಟ್ ಸ್ಕಾಲರ್‌ಷಿಪ್ ತಪ್ಪಿಹೋದದ್ದು, ಹಂಪಿ ಸೇರಿಕೊಂಡದ್ದು, ಅವರ ಕುಡಿತ... ಹೀಗೆ ಉದ್ದಕ್ಕೂ ಲೇಖಕರು ತನ್ನ ವಿಕ್ಷಿಪ್ತತೆಯ ಕಾರಣಕ್ಕೆ ಸಿಕ್ಕ ಅವಕಾಶಗಳನ್ನು ಸಕಾರಣವಾಗಿ ಕೈಬಿಡುತ್ತಲೂ, ಅವಕಾಶ ಸಿಗದ್ದಕ್ಕೆ ಸಕಾರಣವಾಗಿ ವ್ಯಗ್ರಗೊಳ್ಳುತ್ತಲೂ ಹೋಗುವುದು ಮತ್ತು ಆ ವಿಕ್ಷಿಪ್ತತೆ-ವ್ಯಗ್ರತೆಗಳೇ ಅವರ ವ್ಯಕ್ತಿತ್ವವನ್ನು ರೂಪಿಸುವ ಪರಿ – ಸ್ವತಃ ಲೇಖಕರೇ ಹೊರನಿಂತು ವಿಶ್ಲೇಷಿಸಿಕೊಳ್ಳುವುದು, ಈ ಪುಸ್ತಕದ ಹೆಚ್ಚುಗಾರಿಕೆ.
ಪುಸ್ತಕದ ಉದ್ದಕ್ಕೂ ನಿರ್ಧಾರಕ, ಆಘಾತಕ ಸನ್ನಿವೇಶಗಳು ಎದುರಾದಾಗಲೆಲ್ಲ ಸುದೀರ್ಘ ಸ್ವಗತಗಳ ಮೂಲಕ, ಕಾವ್ಯಾತ್ಮಕ ಭಾಷೆಯ ಮೂಲಕ, ಒಗಟಿನಂತೆ ಮನಸ್ಸನ್ನು ತೆರೆದಿಡುವ ಮೊಗಳ್ಳಿ ಗಣೇಶ್ ತನ್ನ ಕೊನೆಗಾಲದಲ್ಲಿ ಬರೆದ ಈ ಆತ್ಮಕಥನ, ಅವರಿಗೆ “ಹೇಳಿ ಹೋಗುವ ತುರ್ತು” ಇತ್ತು ಎಂದು ಸೂಚಿಸಿತು. ಇಡಿಯ ಪುಸ್ತಕ ಅದನ್ನೇ ಅನುರಣಿಸಿದ್ದು, ಆ ಗುಂಗಿನಲ್ಲಿಯೇ ಓದು ಮುಗಿಸಿದೆ.
ಒಟ್ಟಿನಲ್ಲಿ ನನಗನ್ನಿಸಿದ್ದು ಇಷ್ಟು: ಅಸಂಗತ ಅನ್ನಿಸಿಬಿಡುವ ಕೌಟುಂಬಿಕ ಒತ್ತಡಗಳು, ಅಕಾಡೆಮಿಕ್ ವಲಯದ ಕಾಲೆಳೆಯುವ ರಾಜಕಾರಣಗಳು ಹೊಸದೇನಲ್ಲ. ಇವುಗಳನ್ನೆಲ್ಲ ಅಂಟಿಸಿಕೊಳ್ಳದೇ ಇಲ್ಲಿ ಬದುಕುವುದು ಸಾಧ್ಯವೂ ಇಲ್ಲ. 70ರ ದಶಕಕ್ಕೆ ಪೂರ್ವದ ಕೂಡುಕುಟುಂಬದ ಬದುಕು ಮತ್ತು ಅಕಾಡೆಮಿಕ್ ಜಗತ್ತಿನಲ್ಲಿ 70-90ರ ದಶಕದ ಈ ಇಂಟರ್ನೆಟ್ ಪೂರ್ವ ಸಾಂಸ್ಕೃತಿಕ ರಾಜಕಾರಣ ಹೊಸಕಿ ಹಾಕಿರುವುದು ಏನೇನೆಲ್ಲ ಎಂದು ಮ್ಯಾಪಿಂಗ್ ಮಾಡಿದರೆ ದಿಗಿಲು ಹುಟ್ಟೀತು. ನೀರಿಗೆ ಇಳಿದ ಬಳಿಕ ಈಜದಿದ್ದರೆ ಮುಳುಗುವುದು ಖಚಿತ. ನೀರಿಗಿಳಿಯುವುದಕ್ಕೂ ದೊಣ್ಣೆನಾಯಕರ ಅಪ್ಪಣೆ ಬೇಕಾಗಿದ್ದ ಕಾಲದಲ್ಲಿ ಮೊಗಳ್ಳಿಯ ಕಾರ್ಗತ್ತಲೆಯಿಂದ ಬಂದ ಗಣೇಶ್ ನೀರಿಗೆ ಇಳಿದರು, ಈಜಲು ಪ್ರಯತ್ನಿಸಿದರು ಮತ್ತು ತಮ್ಮ ವಿಕ್ಷಿಪ್ತತೆಗಳ ನಡುವೆಯೇ ತನ್ನ ಇರುವನ್ನು ದಾಖಲಿಸಿ ಮಾಯವಾದರು. ಅವರಿಗೆ “ನಾನೆಂಬುದು ಕಿಂಚಿತ್ತು” ಎಂಬ ಕಟು ವಾಸ್ತವ ಅರಿವಾಗುವ ಹೊತ್ತಿಗೆ ಹೊರಡುವ ಸಮಯ ಬಂದಿತ್ತು. ಈ ಆತ್ಮಕಥನ ನನ್ನ ಸುಪ್ತ ಪ್ರಜ್ಞೆಯ ಸತ್ಯಕಥನ ಎಂದು ಅವರೇ ತನ್ನ ಒಳನುಡಿಯಲ್ಲಿ ಹೇಳಿಕೊಂಡಿದ್ದಾರೆ.
ದೇಸಿ ಪುಸ್ತಕ ಪ್ರಕಟಿಸಿರುವ 2023ರಲ್ಲಿ ಹೊರಬಂದ ಈ ಆತ್ಮಕಥನ ಎರಡು ವರ್ಷಗಳಲ್ಲಿ ಚರ್ಚೆ ಆಗಿಲ್ಲ (ನನ್ನ ಗಮನಕ್ಕೆ ಬಂದಿಲ್ಲ), ಈಗ ಅವರು ತೀರಿಕೊಂಡ ಬಳಿಕ ಅಲ್ಲಿ-ಇಲ್ಲಿ ಹಣಕಿಕ್ಕುತ್ತಿದೆ ಎಂಬುದೇ ಹಲವು ವಾಸ್ತವಗಳನ್ನು ಬಿಚ್ಚಿಡುತ್ತದೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.