ಇಲ್ಲಿ ಸಲ್ಲುವವರು..


"ಈಗ ನನ್ನ ತೊಗೋರಿ. ಶಬ್ದಕೋಶದಾಗ ಹುಡುಕಿದರ ನನಗ ಮನಸು, ಅರ್ಥ, ಭಾವ, ಮದ್ಯ, ಸರಾಯಿ, ಉತ್ಸಾಹ, ಚೈತನ್ಯ, ಧೈರ್ಯ, ಉಲ್ಲಾಸ, ಪ್ರಾಣ, ಆತ್ಮ, ಭೂತ, ದೆವ್ವ, ಸ್ಫೂರ್ತಿ ಅಂತ ತಲೀಗ ಬಂಧಾಂಗ ಏನೇನೋ ಶಬ್ದಾ ಹಾಕ್ಯಾರ," ಎಂದಿದ್ದಾರೆ ಮೈತ್ರೇಯಿ. ಅವರು ತಮ್ಮ ʻಹೆತ್ತವರ ನೆರಳುʼ ಕೃತಿಗೆ ಬರೆದ ಮುನ್ನುಡಿ.

ಚೇತನಾಕ ಭಾಷಾ ಇರೂದಿಲ್ಲಾ. ಶುದ್ಧ ಚೇತನಾಕ ಭಾಷಾದ ಜರೂರೇ ಇರಂಗಿಲ್ಲಾ. ಅದಕ್ಕೆ ಜೀವದ ಗಂಟ ಬಿದ್ದಾಗೆನೇ ಭಾಷಾ ಅನಿವಾರ್ಯಾಗತದ. ಸಮಯಾ, ದಿಕ್ಕು, ಸುರು, ಕೊನೆ, ನಾನು, ನೀನು, ಇಂಥಾ ಸಾವಿರ ಸುಡಗಾಡ ಸೇರಿಕೊಂಡು ಮಾತು, ಕತಿ ಹೊಂಡಸತಾವ. ಖರೆ ಅವು ಯಾವೂ ಸಂಪೂರ್ಣ ಆಗೂದಿಲ್ಲಾ, ಅಂದೂ ಜೀವದ ತಡರಹಾಕ್ಕೊಂಡ ಚೇತನಾ ಬಾಷಾದ ಆಧೀನ ಹೊಂದಲೇಬೇಕಾಗತದ.

ಈಗ ನನ್ನ ತೊಗೋರಿ. ಶಬ್ದಕೋಶದಾಗ ಹುಡುಕಿದರ ನನಗ ಮನಸು, ಅರ್ಥ, ಭಾವ, ಮದ್ಯ, ಸರಾಯಿ, ಉತ್ಸಾಹ, ಚೈತನ್ಯ, ಧೈರ್ಯ, ಉಲ್ಲಾಸ, ಪ್ರಾಣ, ಆತ್ಮ, ಭೂತ, ದೆವ್ವ, ಸ್ಫೂರ್ತಿ ಅಂತ ತಲೀಗ ಬಂಧಾಂಗ ಏನೇನೋ ಶಬ್ದಾ ಹಾಕ್ಯಾರ. ಹಂಗಂದ್ರ ಯಾ ಶಬ್ದಕ್ಕೂ ಸ್ಥಿರವಾದ ಅರ್ಥನು ಇಲ್ಲ ಅಂತರ್ಥ. ಯಲ್ಲಾರೂ ತಾವು ತಿಳದದ್ದು ಖರೆ. ಭಾಷಾ ಅಂದ್ರ ಅರ್ಥದ ಒಮ್ಮತ, ವಪ್ಪಂದ. ಇಂಥಾ ವಪ್ಪಂದದಾಗ ಬಿಡುವ ಬಿರುಕಿನಾಗೇ ಕಥಿ ಹುಟ್ಟತಾವ. ಅದಕ್ಕು ನಾನೂ ಬಾಷಾ ಇರದ ವಲಯದಿಂದ ಬಂದಿದ್ರೂ ಈ ಕತಿ ಹುಟ್ಟು ಜಾಗಾಕ ಮಳ್ಳಾಗಿ ಇಲ್ಲಿ ಭಾಷಾದಾಗ ಮಾತಾಡ್ಲಿಕತ್ತೀನಿ.

ನಾನು ಶುದ್ಧ ಚೇತನಾ. ಹಂಗನೋಡಿದ್ರ ನಮ್ಮಲ್ಲೆ ನಾನು-ನೀನು ಅಂತಿರುದಿಲ್ಲಾ (ಖರೆ ಹೆಂಗೂ ನಿಮ್ಮ ಭಾಷಾದಾಗ ನಿಮ್ಮ ಜೋಡಿ ಮಾತಾಡ್ಲಿಕತ್ತೀನಂದ ನಿಮಗ ತಿಳಿಯುಹಂಗ ಹೇಳಲೀಕತ್ತೀನಿ). ಯಲ್ಲಿದೆ? ಹಿಂಗ ಕೌಂಸದಾಗ ಟಿಪ್ಪಣಿ ಹಾಕ್ಕೋತಕೂತ್ರ ಮಾತ ಮರೀತಾವ. ಅದಕ್ಕನ ಭಾಷಾ ಹಂತಾಪರಿ ಸಬಲ ಮಾಧ್ಯಮೇನಲ್ಲಾ ಅನ್ನೂದು. ಹಾಂ! ಶುದ್ಧ ಚೇತನಾ. ನಾವು ಯಷ್ಟು ಶುದ್ದಿದ್ರೂ ನಮಗ ಸಂಪೂರ್ಣ ಸ್ವಾತಂತ್ರ್ಯರಂಗಿಲ್ಲಾ. ನಾವು ಪ್ರಕಟಾಗೂದು, ಮಾಯಾಗೂದು, ಇವಕ್ಕೆಲ್ಲಾ ಒಂದು ತಾಳಾ ಒಂದು ತಂತ್ರಾ ಇರತದ. ಅಲ್ಲೆ ಸಮಯ ಇಲ್ಲಂದ್ರೂ ಬರೂದೂ, ಹೋಗೂದು ಇರತದ. ಬಾಷಾ ಯಷ್ಟೇ ದುರ್ಬಲ ಅಂದ್ರೂ ಚಾಲಾಕಿರತದ. ತನ್ನಕಡೆ ಏನೋ ಹೇಳಲಿಕ್ಕೆ ನೀಗವನ್ನು ಅಂದ್ರ ಉಪಮಾ-ಗಿಪಮಾ ಅನಕೋತ ಹೇಳೇ ತೀರತದ. ಹಿಂಗಾಗಿ ನನಗೂ ನಮ್ಮ ವಲಯ ವಿವರಿಸಲಿಕ್ಕೆ ಬರವಂತ ನಿಮಗ ತಿಳೂ ಉಪಮಾದಲೆ ಹೇಳಲಿಕತ್ತೀನಿ. ಅದು ವಿಮಾನಂತಿಳಕೋರಿ. ಸಾದಾ ಕೂಡೂ, ಮಲಕೋಳೂ, ಫುಕಟ ಶರೆ ಕುಡದು ಅಲ್ಲೆ-ಇಲ್ಲೆ ಮಂದಿಮ್ಯಾಲೆ ಉಚ್ಚಿ ಹೊಯೊತ ದೇಶ-ದೇಶ ಅಡ್ಯಾಡಿ ಧಿಮಾಕ ಮಾಡು ಕಮರ್ಶಿಯಲ್ ವಿಮಾನ ಅಲ್ಲಾ. ಮುಗಲನಾಗಿಂದ ನೆಲಕ್ಕ ಜಿಗಿಯೊ ಪ್ಯಾರಾಟೂಪರ್ಸ ಹತ್ತು ಏರಫೋರ್ಸ ವಿಮಾನಾ. ಅಲ್ಲೆ ನಾವೆಲ್ಲಾ ಅದರ ಬಾಗಿಲಿಗೆ ಮುಕುರಿ ನಿಂತಿರ್ತಿವಿ. ಅಲ್ಲಿ ತನಕಾ ನಾನೂ-ನೀನೂ ಅನಲಾರದೆ ಅಮೂರ್ತ ರೀತಿಲೆ ಬೆರತಾವು ಆ ಜಾಗದಾಗ ಪ್ರತ್ಯೇಕ ಸ್ಥಿತಿ ಹೊಂದತೀವಿ. ಒಬ್ಬೊಬ್ರೇ ಜೀವಕ್ಕ ಜಿಗಿತೀವಿ. ನಿರ್ಭಾವಕ ಸ್ಥಿತಿಯಿಂದ ಹುಟ್ಟಿಗೆ ಹೋಗುವಾಗ ಹೌದೋ ಇಲ್ಲೋ ಅನ್ನುಹಂಗ ದುಃಖದ ಅನುಭವ ಆಗತದ. ನಿಮ್ಮಲ್ಲೆ ಸಾವಿಗೆ ಪಟ್ಟಷ್ಟು ರಾದ್ಧಾಂತ ಮಾಡಂಗಿಲ್ಲಾ ನಾವು, ಖರೆ ಏನೋ ಒಂದ ಭಾವನಾ ಮೂಡಿಧಾಂಗಾಗತದ. ನೀವು ಹೊಳ್ಳೆ ಆ ನಿರ್ಭಾವಕ ಸ್ಥಿತಿಗೆ ಬರಲಿಕ್ಕೆ ಅದ್ಯಾಕಷ್ಟ ಅಂಜತೀರೋ ಏನೋ. ಜೀವ ಹೊಂದಿದಮ್ಯಾಲೆ ಅದರ ಗಂಟ ಬಿಡಿಸಿಕೊಳ್ಳುದು ಅಷ್ಟ ಸರಳಲ್ಲ ಕಾಣಸತದ.

ನಾ ಹ್ಯಾಂಗ ಇಷ್ಟೆಲ್ಲಾ ಮಾತಾಡಲಿಕತ್ತೀನಿ ಅಂತ ನಿಮಗನಿಸಿರಬಹುದು. ಈಗಷ್ಟೇ ಬಿಡುಗಡೆ ಆದ ಆತ್ಮ ಜೀವನದ ಅನುಭವ ಇನ್ನೂ ಮರೆತಿಲ್ಲಾ ಅದಕ್ಕೆ ವಟಾ-ವಟಾ ಹಚ್ಚದ. ಆಚಾರ್ಯರ ಕಡೆ, ಐನಾರ ಕಡೆ, ಇಲ್ಲಾ ದರ್ಗಾಕ ಹೋಗಿ ಅಂಗಾರಾ, ಮಂತ್ರಾ ಮಾಡಿಸಿ, ಲೋಬಾನ ಹೊಗಿ ಊದಿಸಿ, ನವಿಲಗೆರಿ ಪಂಖಾದಲೆ ಬಡಿಸಿಕೊಂಡು ಬರೋಣ, ಸುಸ್ವಾಗತದ ಅಂದೀರಿ ಯಲ್ಲರೆ. ನಿಂದರಿ, ಹಂತಾದೇನೂ ಆಗಿಲ್ಲಾ.

ನಾ ಏನ ಸತ್ತಿಲ್ಲಾ. ಯಾಕಂದ್ರ ನಾ ಹುಟ್ಟೇ ಇಲ್ಲಾ. ಹಂಗಂತ ನಾ ಇನ್ನೂ ವಿಮಾನದಾಗೇ ಉಳದ ಮಾತಾಡ್ಲಿಕತ್ತಿಲ್ಲಾ. ನನ್ನ ಪಾಳಿ ಬಂದಾಗ ನಾನೂ ಜಿಗದೀನಿ. ಖರೆ ನಾ ನೆಲಾ ಮುಟ್ಟಲಿಲ್ಲಾ. ನಾ ಯಾರಿಗೆ ಹುಟ್ಟಾಕಿದ್ದೆ ಅಕೀಗೆ ನನ್ನ ತಡಕೋಳು ಶಕ್ತಿ ಇರಲಿಲ್ಲ. ಇನ್ನೂ ಸಣ್ಣಾಕಿದ್ದ ಕಾಣಸ್ತದ. ವಿಮಾನದಾಗಿದ್ದಾಗ ದಿನಾ-ರಾತ್ರಿ ಲೆಕ್ಕಿರೂದಿಲ್ಲ. ಜಿಗದ ಮ್ಯಾಲೆ ಚಾಲೂ ಆಗತದ. ಖರೆ ನಾ ಲೆಕ್ಕಾ ಇಟ್ಟಿಲ್ಲಾ. ನಾ ಹುಟ್ಟಲಿಲ್ಲಾ ಅನ್ನೂದೊಂದೇ ನೆನಪದ. ಹಂಗಾದ್ರ ನಾ ವಾಪಸ ವಿಮಾನಕ್ಕ ಬರಬೇಕಿತ್ತಲ್ಲಾ? ಅದು ಅಷ್ಟೇ ಸರಳಿಲ್ಲಾ. ಹುಟ್ಟಿಗೆ ಹೆಂಗ ಲಾಟರೀ ಇರತದ ಹಂಗೇ ಸಾವಿಗೂ ಇರತದ. ನೀವು ಸುಳ್ಳೇ ಪಾಪಾ-ಪುಣ್ಯಾ ಅಂತ ಕಿರಾಣಿ ಅಂಗಡಿ ಉದ್ರಿ ಚೀಟಿ ಗತೆ ಲೆಕ್ಕಾ ಇಡತೀರಿ. ಅಂಥಾದೇನೂ ಇರೂದಿಲಿ, ಸತ್ತಮ್ಯಾಲೆ ಆತ್ಮಗೋಳು ಹೊಳ್ಳೆ ಹೊಂಡತಾವ ಖರೆ ವಿಮಾನ ನಿಲ್ದಾಣ ಯಲ್ಲಾ ಕಡೆ ಇರೂದಿಲ್ಲಾ. ಇದ್ರ ವಿಮಾನ ತಿರಗಿ-ಮುರಗಿ ಹತ್ತಿಶಿಕೊಳ್ಳಲಿಕ್ಕೆ ಬರೂದಿಲ್ಲಾ. ಬಂದ ಸೀಟಿರೂದಿಲ್ಲಾ, ಒಮ್ಮೊಮ್ಮೆ ಯುದ್ಧ, ಅಪಘಾತಾ, ಪ್ಲೇಗು, ಕೊರೊನಾ, ಜಿನೋಸೈಡ್, ಹಿಂಸಾಚಾರ, ಮಾಸ್-ಶೂಟಿಂಗ ಇಂಥಾವಾದಾಗ ಬೋರ್ಡಿಂಗನಾಗ ಗದ್ದಾಗತದ. ಯಲ್ಲರಿಗೂ ಸೀಟರಂಗಿಲ್ಲ. ಮತ್ತ ಮನ್ನೆಮನ್ನೀತನಕಾ ಮಾತಾಡಿದ ಭಾಷಾದ ಘಾಳಿ ಅವನ್ನ ಕಂಗೆಡಿಸಿರತಾವ. ಅವು ತಾನ್ಯಾರು, ತಾವೆಲ್ಲೆ ಹೊಂಟೀವಿ ಅಂತ ಬಾಷಾದ ಬಲಿ ಬಿಟ್ಟು ತಿಳಕೋಳ್ಳೋದ್ರಾಗ ಭಾಳ ಸಮಯ ಹಿಡೀತದ.

ಒಂದೊಂದು ಚೇತನಾ ಜೀವಂತಿದ್ದಾಗ ತಂದು ತಾ ಸುಳಿ ನುಸುಳಲಾರದ ವಿಚಾರಾ, ಧ್ಯಾನ ಮಾಡಿದ್ದು ದೇಹ ಬಿಟ್ಟು ಮ್ಯಾಲಿನ ಅಸ್ಥಿತ್ವಕ್ಕ ಸೊಲ್ಪ ಮಟ್ಟಿಗೆ ಸಿದ್ದ ಇರತಾವ. ಅದಕ್ಕೆ ಅವರಿಗೆ ಸಿದ್ಧಿ ಪುರುಷ ಅಂತಾರ ಕಾಣಸ್ತದ. ಅವು ಲಗೂ-ಲಗೂ ಹೋಗಿ ವಿಮಾನ ಹತ್ತಿ ಬಿಡತಾವ. ಶುದ್ಧ ಚೇತನಾ ಆಗೂ ಅವಸ್ತಿರತದ ಅವಕ್ಕ. ಅಂದ್ರ ಜೀವನದಾಗ ಅಲ್ಲಿ ಹಿಡತಕ್ಕ ಭಾಳ ಲಕ್ಷಕೊಡದೇ ಅವು ತಮ್ಮ ಅರಿವೆಲ್ಲಾ ಬೋರ್ಡಿಂಗ್ ಟೈಮ್ ಬರೂದರೊಳಗೇ ವಿಮಾನ ನಿಲ್ದಾಣದ ವಿಳಾಸ ಹುಡಕೂದ್ರಾಗೇ ತಗದಿರತಾವ. ಉಳಕೀದು ತಾವೆಲ್ಲೆ ಹೊಂಟೀವಿ, ಏನ ಹುಡಕಲಿಕತ್ತೀವಿ ಅಂತ ಗೊತ್ತಿಲ್ಲದೇ ಹುಡಕಲಿಕತ್ತಿರತಾವ. ಮನ್ನೆಮನ್ನೀತನಕಾ ಹಸ್ಸಂಡ್, ಫಾದರ್, ಸೀ.ಈ.ಒ, ನೇಚರ್ ಲವ‌ರ್' ಅಂತೆಲ್ಲಾ ವ್ಯಕ್ತಿತ್ವಕ್ಕೆ ಜೋತಬಿದ್ದದ್ದು ವಮ್ಮಿಗೆ 'ಐಡೆಂಟಿಟಿಲೆಸ್ಟ್' ಆದಕೂಡಲೆ ಡಿಸೊರಿಯೆಂಟೆಡ್ ಆಗಿರತಾನ (ನಾ ಬ್ಯಾರೆ ಭಾಷಾದ ಶಬ್ದಾ ಯಾಕ ಬಳಸಲಿಕನಂದ್ರ 1) ನನಗ ಯಲ್ಲಾ ಭಾಷಾನೂ ಒಂದೇ ಹಿಂಗಾಗಿ ಬಾಷಾ ಮಿಕ್ಸ್ ಮಾಡೂದರಿಂದ ನನ್ನ ಮಾತು ನಿಮಗ ಸರಳ ತಲುಪತಾವಂದ್ರ ನನಗ ಆ ತಂತ್ರಾ ಸರಿ ಅನಸತದ ಭಾಷಾದ ಕೆಲಸನೇ ಅದು 2) ನನಗ ಕಿರಿಕಿರಿ ಲಿಂಗ್ವಿಸ್ಟಿಕ್ ಪ್ಯೂರಿಸ್ಟ್‌ಗಳ ಅಂಜಿಕಿಲ್ಲಾ).

ನೀವು ಪಾಪ ಆ ಬಿಡುಗಡೆಯಾದ ಚೇತನಾಗಳಿಗೆ ದೆವ್ವ-ದೆವ್ವ ಅಂತ ಅಂಜತೀರಿ. ಸುಳ್ಳಸುಳ್ಳೇ ಬಿಳಿ ಸೀರಿ ಉಟಕೊಂಡು ಸ್ಮಶಾನದಾಗ ಅಡ್ಡಾದಲಿಕ್ಕೆ ಅವಕ್ಕೇನ ತಲಿ ಕೆಟ್ಟಿರತದೇನು? ನೀವು ಚಿಟಿ ಚಿಟಿ ಚೀರಿ ಓಡಲಿಕತ್ತಕೂಡಲೆ ನೀವವಕ್ಕೆ ಯಷ್ಟ ಹೆದರತೀರೋ ಅದರಕಿಂತಾ ಹೆಚ್ಚವು ನಿಮಗೆ ಅವು ಹೆದರತಾವ. ಅವಕ್ಕೆ ತಾವು ಬ್ಯಾರೆ ಅಂತ ಗೊತ್ತಿರೂದಿಲ್ಲಾ. ನಿಮ್ಮನ್ನ ಮಾತಾಡಸಲಿಕ್ಕೆ ಪ್ರಯತ್ನ ಪಡತಾವ. ನೀವು ಪ್ರತಿಕ್ರಿಯಾ ಕೊಡಲಾರದಕ್ಕೆ ಕೆಟ್ಟನಿಸಿಗೊತಾವ. ಇದು ಪದೇಪದೇ ಆದಾಗ ತಮಗ ಧ್ವನಿ ಇಲ್ಲಾ ಅಂತ ಗೊತ್ತಾಗತದ. ಸಾವಿರಾರ ಮಂದಿ ನಡುವ ನಿಂತಾಗ ನಿಮ್ಮ ಅವಾಜು ಹೋತನಕೋರಿ – ಯಾರೂ ನಿಮ್ಮನ್ನ ನೋಡಂಗಿಲ್ಲಾ, ನಿಮ್ಮ ಸಹಾಯಕ್ಕೆ ಬರಂಗಿಲ್ಲಾ, ಯಷ್ಟ ಅಂಜಿಕಿ ಬರಂಗಿಲ್ಲಾ ಆ ವಿಚಾರದಲೆ? ಅವೂ ಹಂಗೇ ಹೆದರಿರತಾವ.

ಇಂಥಾದರಾಗ ನಾ ಅಕಡ್ಯೂ ಇಲ್ಲಾ ಇಕಡೂ ಇಲ್ಲಾ ಅಂತಾಧಾಂಗಾತು. ಜೀವದ ಧಾಟಿ ಹಿಡಿಯುದರಾಗ ತಾಳ ತಪ್ಪಿದ್ದಕ್ಕ ನಾ ನನ್ನ ಚೇತನದ ಸ್ಥಿತಿ ಮರತಿರಲಿಲ್ಲಾ. ನಮ್ಮಂಥಾವರಿಗೆ ವಿಷೇಶ 'ಎರ್ಲಿಫ್ಟ್' ವ್ಯವಸ್ಥಾ ಇರತದ. ನಾ ಪಟ್ಟನು ಹುಶ್ಯಪಾ ಅಂತ ಹೇಳ್ಳೆ ಹೋಗಬಹುದಿತ್ತು. ಖರೆ ನಾ ಹೋಗಲಿಲ್ಲಾ. ವಿಮಾನದಾಗಿಂದ ಜಿಗದ ಕೂಡಲೆ ಒಮ್ಮಿಂದೊಮ್ಮಿಗಿಲೆ ಜೀವ ಬಂದ ಬಿಡಂಗಿಲ್ಲಾ. ಅದಕ್ಕೆ 7 ರಿಂದ 9 ತಿಂಗಳ ವೇಟಿಂಗ್ ಪೀರಿಯಡ್ ಇರತದ. ಬದುಕಿಗೆ ತಯಾರಿ ಬೇಕಾಗತದ. ನೀವೆಂದರೇ ಗುಡ್ಡಾ. ಪರ್ವತಾ ಹತ್ತಿದ ನಿಮಗ ಗೊತ್ತಿರತದ- ಕಡೀಕೆ ಅದರ ಬಗ್ಗೆ ಓದಿದರ ಸಾಕು. ಹಿಮಾಲಯದಂಥಾ ದೊಡ್ಡ ಪರವತ ಹತ್ತಾವಿಗೆ ಒಮ್ಮಿಲೆ ಧಡಧಡ ಹತ್ತಿಬಿಡಲಿಕ್ಕೆ ಬರಂಗಿಲ್ಲಾ. ಸಾವಕಾಶ ಒಂದೊಂದೇ ಹಂತ ಹತಗೋತ ಅಕ್ಷೆಮೆಟೈಸ್ ಆಗಕೋತ ಹೋಗಬೇಕಾಗತದ. ಮ್ಯಾಲೆ ಹೋದಂಗ ಆಕ್ಸಿಜನ್ ಕಡಿಮಿ ಆಗತದ. ಅದಕ್ಕೆ ಹೊಂದೂಹಂಗ ಶರೀರಕ್ಕೆ ರೂಢಿ ಹಾಕಸ ಬೇಕು. ಹಂಗರ ಶುದ್ಧಚೇತನಾಕ ಉಸರ ಹೊರಲಿಕ್ಕೂ ಅಕ್ಷಮೆಟೈಸೇಶನ್ ಬೇಕಾಗತದ. ಆ ಸ್ಥಿತಿಯೊಳಗಿದ್ದಾಗ ನಮಗಿಂತಾ ಮದಲ ಜೀವಾ ತೊಗೊಂಡಾವು ಒಬ್ಬರ ಜೋಡಿ ಅಭ್ಯಾಸ ಮಾಡಬೇಕಾಗತದ. ಆವಾಗ ಅವರು ತಾವು ಹೊಂದಿದ ದೇಹದಾಗ ನಮಗ ಆಶ್ರಯ ಕೊಡತಾರ. ಅಲ್ಲೆ ನಾವೂ ದೇಹಾ ಹೊಂದತೀವಿ. ನಂದಿನ್ನಾ ಆ ಅಪೊನ್ನಿಸ್‌ಶಿಪ್ ಮುಗಿಯೂದರೊಳಗದ ಆ ಸರಕು ಬಿಟಗೊತು ಖರೆ ಆ ದೇಹದ ಚೇತನಾದ ಜೋಡಿ ನನಗೆ ಗೆಳತನಾ ಬೆಳದಿತ್ತು. ಅಕೀಗೆ ಜೀವದ ಮೋಹದ ಭಾಳ ಪ್ರಭಾವ ಇರಲಿಲ್ಲಾ ಹಂಗಾಗೆ ನನಗ ಅಕೀಗೆ ಛೋಲೋ ಹೊಂದಿತು. ಆಶ್ಚರಾಗೇ ನನಗೂ ಕತಿ ಬಗ್ಗೆ ಆಸಕ್ತಿ ಹುಟ್ಟಿತ್ತು. ಭಾಷಾದ ಪ್ರಭಾವ ಆಗಿತ್ತು. ಹಿಂಗಾಗಿ ಅನಕಾತ ಹ್ಮಳ್ಳೆ ವಿಮಾನಕ್ಕೆ ಹೋಗೂದು ಬ್ಯಾಡಂತ ಇಲ್ಲೇ ಉಳಕೊಂಡೆ. ಅಕೀಗೆ ನಾ ಇಲ್ಲೆ ಇದ್ದದ್ದು ಗೊತ್ತಿರಲಿಕ್ಕಿಲ್ಲಾ. ನನ್ನ ವಲಯ ಬ್ಯಾರೆ ಆತೀಗ. ನನಗ ಅಕಿನ್ನ ಮುಟ್ಟಲಿಕ್ಕೆ ಬರೂದಿಲ್ಲಾ. ನಾ ಮಾತಾಡಿದ್ರ ಅಕೀಗೆ ಕೇಳಸೂದಿಲ್ಲಾ. ನಾ ಇದ್ದದ್ದು ಬರೇ ಅಕಿ ಬೆಕ್ಕಿಗೆ ತಿಳೀತದ.

ಬೆಕ್ಕಗೋಳು ಶುದ್ಧ ಚೇತನಾಕ ಭಾಳ ಹತ್ರದ ಜೀವಾ. ಅವಕ್ಕೆ ದೇಹ ಇದ್ರೂ ಅವು ಹತ್ತಾರ ಸರತೆ ಜೀವಾ ಹೊಂದಿ, ಸಾಕಷ್ಟ ಜನುಮಗಳ ಅನುಭವ ಅವತರ ಚೇತನಾ ಸಮೃದಗೊಳಿಸಿರತಾವ. ಹಿಂಗಾಗಿ ಅವಕ್ಕ ನಾವು ಕಾಣಸತೀವಿ. ಅವು ನಮ್ಮನ್ನ ನೋಡಿದಾಗ ಹೆಚ್ಚಾನಹೆಚ್ಚ ಪ್ರತಿಕ್ರಿಯಾ ತೋರಸೂದಿಲ್ಲಾ ಖರೆ ಒಮ್ಮೊಮ್ಮೆ ದಿಟ್ಟಿಸಿ ನೋಡತಾವ. ಬೆಕ್ಕಿಗೆ ಮತ್ತೆ ಸಣ್ಣ ಹುಡಗರು ಆತ್ಮಕ್ಕ ಭಾಳ ಹತ್ರದ ಸಂಬಂಧದ - ಅವು ಯರಡೂ ಶುದ್ಧ ಚೇತನಾದ ಬಿಂಬ ಹೊಂದಿರತಾವ. ಅದಕ್ಕ ತಮ್ಮ ಮರ್ಜಿ ಬಂಧಾಂಗ ಮಾಡತಾವ - ಯಾವಾಗ ಏನ ತೊಗೊಂಡ ಬಾಯಾಗ ಹಾಕೋತಾವ, ಏನರೇ ಮುರೀತಾವ, ಯಲ್ಲೆ ಜಿಗೀತಾವ, ಚಿತ್ರ ಬೀಳತಾವ, ಕಡಿತಾವ, ಚೂರಕೋತಾವ, ಪ್ರೀತಿ ಮಾಡತಾವ - ಯದಕ್ಕೂ ತಾಳೀಲ್ಲಾ ತಂತಿಲ್ಲಾ. ಯಾಕಂದ್ರ ಚೇತನಾಕ್ಕ ಅರ್ಥದ ಹಂಬಲಿರೂದಿಲ್ಲಾ, ಹುಡುಗರಿಗೂ, ಬೆಕ್ಕಿಗೂ ಹಂಗೇ.

ಮತ್ತ ವಿಷಯಾಂತರ ಮಾಡಲಿಕತ್ತಿನ ನೋಡ್ರಿ. ಭಾಷಾದ ಇದೇ ತ್ರಾಸು. ಯಲ್ಲಿಂದ ಯಲ್ಲೆರೇ ವೈತದ. ಇಷ್ಟೆಲ್ಲಾ ಸುತ್ತಿ ಬೆಳಸಿ ನಾ ಹೇಳಿದ್ದೇನಂದ ನಾ ಇಲ್ಲೆ ಹೆಂಗ ಬಂದೆ, ಇಲ್ಲಾಕಿದ್ದೀನಿ, ಇಲ್ಲೆ ಏನ ಮಾಡಲಿಕತ್ತೀನಿ ಅನ್ನದು. ನನಗ ಕಥಿ ಹೌಸ ಭಾಳದ. ಅದಕ್ಕೆ ನಿಮಗ ಆವಾಗಾವಾಗ ಸಿಗತಿರತೀನಿ, ಯಾವಾಗರೇ ಕಥಿ ಹೇಳತಿನಿ. ಉಳದಾವಾಗ ಕಥಿ ಕೇಳತಿನಿ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...