"ಕಥೆಯ ಸಂಯೋಜನೆಯಲ್ಲಿ ಕಲ್ಪನೆ ಸಾಕಷ್ಟು ಕೆಲಸ ಮಾಡಿದೆಯಾದರೂ ಅದಕ್ಕೆ ವಾಸ್ತವದ ಸ್ಪರ್ಶ ನೀಡುವ ಉದ್ದೇಶದಿಂದ ಲೇಖಕರು ಜಾಲತಾಣಕ್ಕೆ ಹೋಗಿ ಕಡತಗಳನ್ನು ಪರಾಮರ್ಶಿಸಿ ಸಂಶೋಧನೆ ನಡೆಸಿರುವುದರಿಂದ ಕಾದಂಬರಿಗೆ ಒಂದು ಅಧಿಕೃತತೆ ಸಿದ್ಧಿಸಿದೆ," ಎನ್ನುತ್ತಾರೆ ಪಾರ್ವತಿ ಜಿ.ಐತಾಳ್. ಅವರು ವಿಠಲ್ ಶೆಣೈಯವರ ʻಹನುಕಿಯಾʼ ಕಾದಂಬರಿ ಕುರಿತು ಬರೆದ ಅನಿಸಿಕೆ.
ಹನುಕಿಯಾ' ಲೇಖಕ ವಿಠಲ ಶೆಣೈಯವರ ೩೯೧ ಪುಟಗಳ ಚಿಂತನೆಗೆ ಹಚ್ಚುವ ಒಂದು ಕಾದಂಬರಿ. ಎರಡನೇ ಲೋಕ ಮಹಾಯುದ್ಧವು ಇಡೀ ಜಗತ್ತಿನಲ್ಲಿ ಉಂಟುಮಾಡಿದ ಅಲ್ಲೋಲ ಕಲ್ಲೋಲ, ಘೋರ ಪರಿಸ್ಥಿತಿ, ಹಿಂಸೆ- ರಕ್ತಪಾತ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನರ ರಾಕ್ಷಸ ಹಿಟ್ಲರನ ಕುರುಡು ಗ್ರಹಿಕೆಯಿಂದಾಗಿ ಧಗಧಗನೆ ಜ್ವಲಿಸಿದ ಜನಾಂಗ ದ್ವೇಷದ ಬೆಂಕಿ ಮತ್ತು ಹತ್ಯಾಕಾಂಡಗಳ ಕಣ್ಣಿಗೆ ಕಟ್ಟುವಂಥ ಚಿತ್ರಣವೇ ಕಾದಂಬರಿಯ ವಸ್ತು. ಇದೇ ವಸ್ತುವಿನ ಮೇಲೆ ಇಂಗ್ಲಿಷ್ ನಲ್ಲಿ ಅನೇಕ ಕಾದಂಬರಿಗಳು ಬಂದಿವೆಯಾದರೂ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು. ಕಥೆಯ ಸಂಯೋಜನೆಯಲ್ಲಿ ಕಲ್ಪನೆ ಸಾಕಷ್ಟು ಕೆಲಸ ಮಾಡಿದೆಯಾದರೂ ಅದಕ್ಕೆ ವಾಸ್ತವದ ಸ್ಪರ್ಶ ನೀಡುವ ಉದ್ದೇಶದಿಂದ ಲೇಖಕರು ಜಾಲತಾಣಕ್ಕೆ ಹೋಗಿ ಕಡತಗಳನ್ನು ಪರಾಮರ್ಶಿಸಿ ಸಂಶೋಧನೆ ನಡೆಸಿರುವುದರಿಂದ ಕಾದಂಬರಿಗೆ ಒಂದು ಅಧಿಕೃತತೆ ಸಿದ್ಧಿಸಿದೆ.
ಗುಜರಾತದ ಬಾಲಚಡಿ ಎಂಬಲ್ಲಿ ಮೀರಾ ಎಂಬ ವೃದ್ಧ ಹೆಂಗಸು ಮತ್ತು ಅಕೆಯ ಮೊಮ್ಮಗ ಆನಂದರ ನಡುವೆ ನಡೆಯುವ ಸಂಭಾಷಣೆಯ ಮೂಲಕ ಮೀರಾ (ಮಿರಿಯಂ)ಮೂಲತಃ ಪೋಲೆಂಡ್ ದೇಶದಲ್ಲಿ ಹುಟ್ಟಿ ಬೆಳೆದ ಯಹೂದಿ ಜನಾಂಗದವಳೆಂದೂ, ಬಹಳ ಒಳ್ಳೆಯ ಚಿತ್ರಕಲಾವಿದೆಯೆಂದೂ, ಎರಡನೇ ಮಹಾಯುದ್ಧದ ಆರಂಭಕ್ಕೆ ಮೊದಲು ಅಲ್ಲಿ ಹಿಟ್ಲರ್ ಸ್ಥಾಪಿಸಿದ ನಾಝಿ ಪಕ್ಷವು ಯಹೂದಿಗಳ ಮೇಲೆ ತನ್ನ ಕ್ರೌರ್ಯ ತೋರಿಸಲು ಆರಂಭಿಸಿತ್ತೆಂದೂ ತಿಳಿದು ಬರುತ್ತದೆ. ೨೦೧೫ ನೇ ಇಸವಿಯಲ್ಲಿ ತಾನು ಯುದ್ಧಕಾಲದಲ್ಲಿ ಕಳೆದುಕೊಂಡ ಪೈಂಟಿಂಗ್ಸ್ ಮತ್ತು ತನ್ನ ಮನೆತನಕ್ಕೆ ಸೇರಿದ 'ಹನುಕಿಯಾ'(ಒಂಬತ್ತು ಸ್ತಂಭಗಳಿರುವ ಯಹೂದಿಯರ ಪವಿತ್ರ ಚಿಹ್ನೆ)ಯನ್ನು ಇಷ್ಟು ವರ್ಷಗಳಾದ ನಂತರ ಮರಳಿ ಪಡೆಯಬಹುದಾದ ಸಾಧ್ಯತೆಗಳ ಬಗ್ಗೆ ನಡೆಯುವ ಮಾತುಕತೆಯ ಮಧ್ಯೆ ಮೀರಾ ತನ್ನ ಕರುಳು ಮಿಡಿಯುವ ಕಥೆ ಹೇಳುತ್ತಾಳೆ.
ಮೀರಾಳ ತಾಯಿ ಇಸಬೆಲ್ ಬೆಂಜಮಿನ್ ಎಂಬ ಯಹೂದಿಯನ್ನು ಮದುವೆಯಾಗಿರುತ್ತಾಳೆ. ಮಿರಿಯಂ ಮತ್ತು ನೇಥನ್ ಅವರ ಅವಳಿ ಜವಳಿ ಮಕ್ಕಳು. ಮಕ್ಕಳು ಚಿಕ್ಕವರಿದ್ದಾಗ ನಾಝಿಗಳ ಜನಾಂಗದ್ವೇಷ ಉಲ್ಬಣಿಸಿ ಯಹೂದಿಗಳ ಬಗ್ಗೆ ಇಲ್ಲಸಲ್ಲದ ಅಪಪ್ರಚಾರಗಳು ಆರಂಭವಾಗುತ್ತವೆ. ಅವರನ್ನು ಏನೂ ಕಾರಣವಿಲ್ಲದೆ ಅವರ ಮನೆಗಳಿಂದ ಹೊರಗೆ ಹಾಕಿ ಅವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಯಾತನಾ ಶಿಬಿರಗಳೆಂಬ ನರಕದಲ್ಲಿಟ್ಟು ಅವರಿಗೆ ಚಿತ್ರಹಿಂಸೆ ಕೊಡಲಾಗುತ್ತದೆ. ಲಕ್ಷ ಲಕ್ಷ ಮಂದಿಯನ್ನು ಅವರು ಬದುಕಿರಲೇ ಬಾರದೆಂದು ನಿರ್ದಾಕ್ಷಿಣ್ಯವಾಗಿ ಗುಂಡಿಕ್ಕಿ ಕೊಲ್ಲುತ್ತಾರೆ. ಈ ಗಲಭೆ ನಡೆಯುತ್ತಿರುವಾಗ ನೇಥನ್ ಮತ್ತು ಮಿರಿಯಂ ಯಾರ್ಯಾರದ್ದೋ ಸಹಾಯದಿಂದ ತಪ್ಪಿಸಿಕೊಂಡು ಹೋಗುತ್ತಾರೆ. ನೇಥನ್ ಅಮೆರಿಕಾಕ್ಕೂ ಮಿರಿಯಂ ಭಾರತಕ್ಕೂ ಬರುತ್ತಾರೆ. ಮಿರಿಯಂ ಗುಜರಾತದ ಮಹಾರಾಜರ ಆಶ್ರಯ ಪಡೆದು ಅಲ್ಲಿ ನೆಲೆಸುತ್ತಾಳೆ ಚಂದ್ರಕಾಂತ ಎಂಬವನನ್ನು ಪ್ರೀತಿಸುತ್ತಾಳೆ. ನೇಥನ್ ಅಮೆರಿಕಾದಲ್ಲಿ ಸೈನ್ಯ ಸೇರಿ ಮಿತ್ರರಾಷ್ಟ್ರಗಳ ಪರವಾಗಿ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ ಜರ್ಮನಿಗೆ ಸೋಲಾಗುತ್ತದೆ. ಹಿಟ್ಲರ್ ಓಡಿಹೋಗುತ್ತಾರೆ. ಸಾವಿರಾರು ನಾಝಿಗಳಿಗೆ ಶಿಕ್ಷೆಯಾಗುತ್ತದೆ. ನೇಥನ್ ಭಾರತಕ್ಕೆ ತಂಗಿಯನ್ನು ಹುಡುಕುತ್ತ ಬಂದು ಅವಳನ್ನು ಪೋಲೆಂಡಿಗೆ ಕರೆದೊಯ್ಯುತ್ತಾನೆ. ಆದರೆ ಅಲ್ಲಿ ಯಹೂದಿಗಳ ಬಗೆಗಿನ ದ್ವೇಷದ ಬೆಂಕಿ ಇನ್ನೂ ಉರಿಯುತ್ತಿರುವುದನ್ನು ಗಮನಿಸುತ್ತಾನೆ. ನೇಥನನನ್ನು ದೇಶದ್ರೋಹಿಯೆಂದು ಜರ್ಮನರು ಗುಂಡಿಟ್ಟು ಕೊಲೆಗೈಯುತ್ತಾರೆ. ಅನಾಥಳಾದ ಮಿರಿಯಂ ಚಂದ್ರಕಾಂತನನ್ನು ಮದುವೆಯಾಗಿ ಭಾರತದಲ್ಲಿ ನೆಲೆಸುತ್ತಾಳೆ.
ಇದು ಮಿರಿಯಂ ತನ್ನ ಬಗ್ಗೆ ಹೇಳಿಕೊಳ್ಳುವ ಕಥೆ. ಪೋಲೆಂಡಿನಲ್ಲಿ ನಾಝಿಗಳು ಅಡಗಿಸಿಟ್ಟ ತಮ್ಮ ವಸ್ತುಗಳ ಬಗ್ಗೆ ಮಿರಿಯಂ ಇನ್ನೂ ಚಿಂತೆ ಮಾಡುತ್ತಿದ್ದಾಳೆ. ಮನೆತನದ ಪವಿತ್ರ ಹನುಕಿಯಾ ಮತ್ತು ಅಪ್ಪನ ಪೈಂಟಿಂಗ್ಸ್ ನ್ನು ಹೇಗಾದರೂ ಮಾಡಿ ಪಡೆಯಲೇ ಬೇಕೆಂಬ ಛಲದಿಂದ ಮೊಮ್ಮಗನೊಂದಿಗೆ ಪುನಃ ಪೋಲೆಂಡಿಗೆ ಹೋಗಿ ಅಲ್ಲಿ ಅದೇ ಕೆಲಸ ಸಾಧಿಸುತ್ತೇವೆಂದು ಸ್ವಂತ ಆಸಕ್ತಿಯಿಂದ ಪ್ರಾಜೆಕ್ಟ್ ಕೈಗೊಂಡಿರುವ ಮ್ಯಾಟ್ ಮತ್ತು ಹಿಲರಿ ಎಂಬ ಇಬ್ಬರ ಜತೆ ಸೇರಿ ತಮ್ಮ ಪ್ರಯತ್ನವನ್ನು ಮುಂದುವರಿಸುತ್ತಾರೆ. ಯಹೂದಿಯರ ವಸ್ತುಗಳನ್ನೂ ಚಿನ್ನ ಬೆಳ್ಳಿ ಆಭರಣಗಳನ್ನೂ ನಾಝಿಗಳು ಒಂದು ರೈಲಿನಲ್ಲಿ ಕೊಂಡುಹೋಗಿ ಒಂದು ಪರ್ವತದೊಳಗೆ ಸುರಂಗ ತೋಡಿ ಇಟ್ಟು ಎಲ್ಲವನ್ನೂ ಮುಚ್ಚಿಬಿಟ್ಟಿದ್ದಾರೆಂಬ ವಿಷಯವು ಮಿರಿಯಂಗೆ ಗೊತ್ತಾಗುತ್ತದೆ. ಸಂಶೋಧನೆ ಮಾಡುವ ವಿದ್ಯಾರ್ಥಿಗಳು ಮಿರಿಯಂ ಮಾತುಗಳನ್ನು ಯೂ ಟ್ಯೂಬ್ ನಲ್ಲಿ ಹಾಕಿದ್ದರಿಂದ ಅವಳು ಮಾಡುತ್ತಿರುವ ಪ್ರಯತ್ನದ ಕುರಿತು ಸಾರ್ವಜನಿಕರಿಗೆ ತಿಳಿಯುತ್ತದೆ. ಸುರಂಗವನ್ನು ಉತ್ಖನನ ಮಾಡಿದಾಗ ರಯಲು ಸಿಕ್ಕಿದರೂ ಅದರೊಳಗಿನ ಎಲ್ಲ ವಸ್ತುಗಳನ್ನೂ ಯಾರ್ಯಾರೋ ದೋಚಿಕೊಂಡು ಹೋಗಿರುತ್ತಾರೆ. ಆದರೆ ಬೇರೆ ಯಾರದ್ದೋ ಸಹಕಾರದಿಂದ ಮೀರಾಳಿಗೆ ಅವಳಿಗೆ ಬೇಕಾದ ಹನುಕಿಯಾ ಮತ್ತು ಪೈಂಟಿಂಗ್ಸ್ ಸಿಗುತ್ತವೆ. ಹೀಗೆ ಇಡೀ ಕಾದಂಬರಿಯುದ್ದಕ್ಕೂ ನಾವು ಹುಡುಕಾಟ-ಹೋರಾಟಗಳನ್ನು ಕಾಣುತ್ತೇವೆ. ನಡುನಡುವೆ ಕಾಣಿಸುವ ಜನಾಂಗದ್ವೇಷ, ಅಮಾನುಷ ಕ್ರೌರ್ಯ, ಹಿಂಸೆ, ಕೊಲೆ, ರಕ್ತಪಾತಗಳು ಇತಿಹಾಸದಲ್ಲಿ ನಡೆದ ಘೋರ ದುರಂತಗಳು ಹೃದಯ ವಿದ್ರಾವಕವಾಗಿವೆ.
೬೦ ಲಕ್ಷಕ್ಕೂ ಹೆಚ್ಚು ಮಂದಿ ಮುಗ್ಧ ಯಹೂದಿಯರನ್ನು ನಾಝಿಗಳೆಂಬ ನರರಾಕ್ಷಸರು ಅಮಾನುಷವಾಗಿ ಹಿಂಸಿಸಿ ಕೊಂದು ಹಾಕಿದರು ಎಂಬ ಅಂಕಿ ಸಂಖ್ಯೆಗಳನ್ನು ಕಾದಂಬರಿ ಹೇಳುತ್ತದೆ. ಅದನ್ನು ಕೇಳುವಾಗ ಎದೆ ಝಲ್ಲೆನ್ನುತ್ತದೆ. ಆದರೆ 'ಕೊಲ್ಲುವವರು ಇದ್ದ ಹಾಗೆ ಕಾಯುವವರೂ ಇರುತ್ತಾರೆ' ಎಂಬ ಗಾದೆಯ ಮಾತಿನಂತೆ ಕಾದಂಬರಿಯಲ್ಲಿ ಲೇಖಕರು ಅಲ್ಲಲ್ಲಿ ಮನಸ್ಸಿಗೆ ತಂಪನ್ನೀಯುವ ಮನುಷ್ಯರ ನಡುವಣ ಪ್ರೀತಿಯ ಸಂಬಂಧಗಳನ್ನೂ ಚಿತ್ರಿಸಿದ್ದಾರೆ. ಪೋಲೆಂಡಿನಿಂದ ಸಂತ್ರಸ್ತರ ಹಡಗು ಭಾರತಕ್ಕೆ ಬಂದಾಗ ಗುಜರಾತದ ಬಾಲಚಡಿಯಲ್ಲಿ ಅವರಿಗೆ ಆಶ್ರಯ ನೀಡಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳುವ ಮಹಾರಾಜರು ಮತ್ತು ಅಲ್ಲಿನ ಇತರ ಜನರ ಹೃದಯವಂತಿಕೆ, ಜಾತಿ-ಧರ್ಮ, ಜನಾಂಗ-ವರ್ಣ, ದೇಶ-ಭಾಷೆಗಳನ್ನು ದಾಟಿ ಚಂದ್ರಕಾಂತ ಮತ್ತು ಮಿರಿಯಂ ನಡುವೆ ಹುಟ್ಟಿಕೊಳ್ಳುವ ಪ್ರೀತಿ, ವೃದ್ಧೆ ಮಿರಿಯಂಗೆ ತಮ್ಮ ಶ್ರಮ ಹಾಗೂ ಸಮಯವನ್ನು ವ್ಯಯಿಸಿ ಅವಳಿಗೆ ಬೇಕು ಬೇಕಾದ ಸಹಾಯ ಮಾಡುವ ಮ್ಯಾಟ್ ಮತ್ತು ಹಿಲರಿ- ಹೀಗೆ ಪೃಥ್ವಿಯಲ್ಲಿ ಮಾನವೀಯತೆಯ ಮೌಲ್ಯಗಳನ್ನು ಅಪ್ಪಿಕೊಂಡವರ ಸಂಖ್ಯೆ ಕಡಿಮೆಯಿಲ್ಲ ಅನ್ನುವುದನ್ನು ಸಾಬೀತು ಪಡಿಸುವ ಪ್ರಸಂಗಗಳೂ ಕಾದಂಬರಿಯಲ್ಲಿ ಬೇಕಾದಷ್ಟಿವೆ. ಆದ್ದರಿಂದಲೇ ಕಾದಂಬರಿಯ ಓದು ಒಂದು ಹೃದ್ಯ ಅನುಭವವನ್ನು ನೀಡುತ್ತದೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.