"ತಾಯಿಬೇರನ್ನು ಕಡಿದು ಮರವನ್ನು ಚಿಗುರಿಸುವುದಕ್ಕೆ ಹೇಗೆ ಆಗಲಾರದೋ, ಹಾಗೆಯೇ ನಮ್ಮ ಪೂರ್ವವನ್ನು ಅಳಿಸಿಬಿಟ್ಟು ಭವಿಷ್ಯಕ್ಕೆ ಹಾರುವುದಕ್ಕೆ ಆಗಲಾರದು"
- ಬಿ.ಎಂ. ಶ್ರೀಕಂಠಯ್ಯ
ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯಥಾ ಶರಣಂ ನಾಸ್ತಿ: ಕನ್ನಡ ಸಾಹಿತ್ಯದ ಬೆಳವಣಿಗೆ, ಅದನ್ನು ಶ್ರೀಮಂತಗೊಳಿಸುವ "ಶ್ರೀ"ಯವರ ಪ್ರಯತ್ನದ ಕಾಲ ಕನ್ನಡ ಸಾಹಿತ್ಯದ ಒಂದು ಪರ್ವಕಾಲ ಎನ್ನಬಹುದು. ಇನ್ನು ಕನ್ನಡಕ್ಕಾಗಿ ಸರ್ವಸ್ವವನ್ನು ದಾರೆ ಎಳೆದ ಶ್ರೀಯವರನ್ನು ಕನ್ನಡದ ಪರ್ವ ಎಂದು ಜನ ಕೊಂಡಾಡಿದ್ದಾರೆ. ಕನ್ನಡಕ್ಕೆ ಕನ್ನಡ ನಾಡಿನಲ್ಲೇ ಸ್ಥಾನವಿಲ್ಲದ ಕಾಲವಿತ್ತು. ಆ ಸಮಯದಲ್ಲಿ ಕನ್ನಡ ನಾಡಿಗೆ ಕನ್ನಡವೇ ಗತಿ ಎಂದು ಸಾರಿ, ಸಿರಿಗನ್ನಡಂ ಗೆಲ್ಗೆ! ಎಂಬ ಮಂತ್ರವನ್ನು ಪ್ರತೀ ಕನ್ನಡಿಗರಿಗೆ ಕೂಗಿ ಹೇಳಿ ಹೊಸ ಶಕ್ತಿಯ ಸಂಚಾರವಾಗಲು ಕಾರಣರಾದರು.
ಅತ್ಯುತ್ತಮ ಗುರು: ಇಂಗ್ಲೀಷ್ ಹಾಗೂ ಕನ್ನಡ ಸಾಹಿತ್ಯವನ್ನು ಭಾವನಾತ್ಮಕವಾಗಿ, ಹೃದಯಸ್ಪರ್ಶಿಯಾಗಿ ಬೋಧಿಸುವುದರ ಮೂಲಕ ಮೇಧಾವಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಮ್ಮ ಕಡೆ ಆಕರ್ಷಿಸಿದ ಪ್ರಾಧ್ಯಾಪಕರು. ಇನ್ನು ತನ್ನ ಅಧ್ಯಾಪನ ಶೈಲಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಳಕಿಗೆ ತಂದು ಸಾಹಿತಿಗಳ ಲೋಕವನ್ನು ಹುಟ್ಟಿಸಿದವರು. 
ಅಸಾಧಾರಣ ವಿದ್ವಾಂಸರು: ಶ್ರೀ ಒಬ್ಬ ಅಸಾಧಾರಣ ವಿದ್ವಾಂಸರು, ಅತ್ಯುತ್ತಮ ಗುರು, ಶ್ರೇಷ್ಠ ವಾಗ್ಮಿ, ಪ್ರತಿಭಾವಂತ ಕವಿ ,ನಾಟಕಕಾರ.ಅವರು ಕವಿಯಾಗಿ ಹೊಸ ರೀತಿಯ ಕವಿತೆಗಳನ್ನು ರಚಿಸಿ, ಕನ್ನಡ ಸಾಹಿತ್ಯದಲ್ಲಿ ಹೊಸಗನ್ನಡ ಕಾವ್ಯ ರಚನೆಗೆ ನಾಂದಿ ಹಾಡಿದವರು. ಹೀಗೆ ತಮ್ಮ ಜೀವಿತ ಕಾಲವನ್ನು ಕನ್ನಡ ಸಾಹಿತ್ಯಕ್ಕಾಗಿ ಮೀಸಲಿಟ್ಟ ಬಿ. ಎಂ. ಶ್ರೀ ಅವರನ್ನು `ಕನ್ನಡದ ಕಣ್ವ' ಎಂದು ಕರೆಯಲಾಗುತ್ತದೆ.
****
ಶ್ರೀ ಅವರ ಕೊನೆಯ ನಿಮಿಷಗಳು
ಅರ್. ವಯ್. ದಾರವಾಡಕರ್ ಬರೆದ ಶ್ರೀ ಅವರ ಕೊನೆಯ ನಿಮಿಷಗಳ ಸಂವಾದದ ತುಣುಕು ನಿಮ್ಮ ಓದಿಗಾಗಿ.
ಆ ಶನಿವಾರ (ತಾ. 5-1-1946) ಮುಕ್ಕಾಲು ಗಂಟೆಯವರೆಗೂ ಶ್ರೀಯವರು ಮಾತನಾಡಿದರೂ, ಎಲ್ಲಿಯೂ ಅವರ ಧ್ವನಿ ಕುಂದಲಿಲ್ಲ; ಉತ್ಸಾಹ ಕಡಿಮೆಯಾಗಲಿಲ್ಲ. ಎಂದಿನಂತೆ ಅವರದೇ ಮಾತಿನ ಪ್ರಮುಖ ಪಾತ್ರ. ಅದೇ ಆ ಗಾಂಭೀರ್ಯ, ಅದೇ ಅಂತಃಕರಣ, ಅದೇ ತೇಜಸ್ಸು ಹೃದಯ ಸ್ಪರ್ಶಿಯಾದ ಜೇನುನುಡಿ. ಆ ಕಂಠಶ್ರೀ ಇನ್ನೂ ಕಿವಿಯಲ್ಲಿ ಕಟ್ಟಿದಂತಿದೆ. ನಾವು ಅವರಲ್ಲಿ ಹೋದಾಗ " ಶ್ರೀ" ಅವರು ಮಂಚದ ಮೇಲೆ ಒರಗಿಕೊಂಡಿದ್ದರು. ಆ ಕಡೆಗೆ ಶ್ರೀಮನ್ಮಹಾರಾಜರವರು ಎದುರಿಗೆ ಕನ್ನಡನಾಡಿನ ಭೂಪಟ ಈಚೆ ಶುಚಿಸ್ಮಿತ ಭಗವಾನ್ ಬುದ್ಧದೇವನ ಸುಂದರ ವಿಗ್ರಹ ಎಂದಿನಂತೆ ಶೋಭಿಸುತ್ತಿದ್ದವು.
ನಾವು ಹೋದ ಕ್ಷಣ ಎಂದಿನಂತೆ ಅದೇ ಆತ್ಮೀಯತೆಯಿಂದ ಶ್ರೀ ಪ್ರಾರಂಭಿಸಿದರು.
ಶ್ರೀ: ಅದೇ ತಾವೆಲ್ಲ ಮದರಾಸಿಗೆ ಹೋಗಿರಬಹುದು ಅಂತ ತಿಳಿದಿದ್ದೆ. ದಿನಾಲು ಪೇಪರಿನಲ್ಲಿ ನೋಡ್ತಾ ಇದ್ದೆ.ಬೇಂದ್ರೆ ಅವರ ಹೆಸರು ಮಾತ್ರ ಕಂಡು ಬಂತು. ತಾವು ಹೋಗಿರಲಿಲ್ಲ ಅಂತ ಈಗ ತಿಳಿಯಿತು. ಗೋಕಾಕನೂ ಹೋಗಿರಲಿಲ್ಲವೊ?
(ಗೋಕಾಕರ ವಿಷಯ ಮಾತಾಡುವಾಗ ಶ್ರೀಯವರು ಯಾವಾಗಲೂ ಆತ್ಮೀಯ ತೆಯ ಏಕವಚನದಲ್ಲಿ ಹೇಳುತ್ತಿದ್ದರು. ಎಷ್ಟೋ ಸಲ ಅವರ ಅಂತಃಕರಣ ತುಂಬಿ ಬಂದುದೂ ಉಂಟು)
ಮುಗಳಿ: ಇಲ್ಲ.
ಶ್ರೀ: ಅದೇ ಆಗಿರಲಿಕ್ಕಿಲ್ಲ; ನನಗೂ ಹೈದರಾಬಾದಿಗೆ ಬಾ ಅಂತ ಮೂರು ನಾಲ್ಕು ಸಲ ಬರೆದಿದ್ದ... ಎಲ್ಲಿ?...ನನ್ನ ಪ್ರಕೃತಿ....ನಾನು ಎಷ್ಟು ಯತ್ನ ಮಾಡಿದರೂ ಸಾಧ್ಯವಾಗುವುದಿಲ್ಲ. ಅದಕ್ಕೆ ಕ್ಷಮಿಸಿಬಿಡು ಅಪ್ಪ ಅಂತ ಬರೆದಿದ್ದೆ ಅಷ್ಟೆಲ್ಲ ಓಡಾಡಿಕೊಂಡು ಬರುವುದು ಈಗ ಎಲ್ಲಿ ಸಾಧ್ಯ?
ಮು: ತಮಗೂ ಈ ನಾಡಹಬ್ಬದ ಓಡಾಟ ಹೆಚ್ಚಾಗಿರಬೇಕು........
ಶ್ರೀ-: ಹಾಗೇನೂ ಇಲ್ಲ; 1 stood the exertion quite one and a half Months. ಇಷ್ಟೇ, ಅದರಿಂದ ಸಾಹಿತ್ಯ ಸಮ್ಮೇಳನ ಅದು ಸಾಧ್ಯ ವಾಗಲಿಲ್ಲ.
ಮು: ಹೌದು.
ಶ್ರೀ: ಸಮ್ಮೇಲನ ಒಂದು ಈ ಸಲ ತೀರ ಒಳ್ಳೆಯದಾಯಿತು. ಮಾಸ್ತಿ ಮತ್ತೆ ಬಂದರು, ಅದು ತುಂಬಾ ಸಂತೋಷದ ವಿಷಯ....non-literary ಜನ ಅಲ್ಲಿ ಸರಿ ಅಲ್ಲ. ಅಂಥಲ್ಲಿ ಓದಿದವರು ಬೇಕು. ಮಾಸ್ತಿ ಪುನಃ ಬಂದದ್ದು ಬಹಳ ಸಂತೋಷ.
ಮು: ಹೌದು. ಅವರೂ ಒಪ್ಪಿಕೊಂಡದ್ದು ತೀರ ಒಳ್ಳೆಯದಾಯಿತು. ಅವರೂ ಬೇಜಾರುಗೊಂಡಿದ್ದರೆ ತೀರ ಕಠಿಣವಾಗುತ್ತಿತ್ತು.
ಶ್ರೀ: ಸರಿಯೇ; ರೇವಣ್ಣ ಕೋಶಾಧ್ಯಕ್ಷ ಅಂತ ಕಾಣುತ್ತೆ, .ಎಲ್ಲ ಒಳ್ಳೆಯದಾಯಿತು. ನಮ್ಮ ನಾಡು ಬೆಳೆಯಬೇಕು; ನೋಡಿ, ನಮ್ಮ ಜನ ಇನ್ನೂ ಎಷ್ಟೋ ವಿಷಯ ಕಲಿಯಬೇಕು. ನಮ್ಮಲ್ಲಿದ್ದ ಲೋಪಗಳನ್ನೇ ನೋಡ್ತಾರೆ ವಿನಾ merits ಕಾಣೋಕಿಲ್ಲ. ಅವುಗಳನ್ನೇ ದೊಡ್ಡದು ಮಾಡಿ ಹತ್ತು ಜನರೆದುರಿಗೆ ಅಂದು ಬಿಡುತಾರೆ. ಇದರಲ್ಲಿ ಯಾವ ಪುರುಷಾರ್ಥ?
ನಾನು ಇಲ್ಲಿ ಬಂದದ್ದೂ ಹೀಗೇನೇ. ನಾನಿಲ್ಲಿ ಬಂದದ್ದರಿಂದ ನಿಮಗೆಲ್ಲ ಆನಂದವಷ್ಟೇ?...
ಮು: ಅಯ್ಯೊ! ಎಂಥಮಾತು! ತಮ್ಮಂಥ ಹಿರಿಯರು ಬಂದದ್ದು ಕಡಿಮೆ ಮಾತೇ? ಇಷ್ಟೇ ತಮ್ಮ ಆಶೀರ್ವಾದ ಫಲಿಸಬೇಕು....
ಶ್ರೀ: ಅದೇ; ನಾನೂ ಇಲ್ಲಿ ಮೊದಲು ಬರೀ ಒಂದು ವರುಷ ಇರೋಣ ಅಂತ ಬಂದಿದ್ದೆ. ಆದರೆ ಈಗ ಕೆಲವು ದಿವಸ ಇಲ್ಲಿಯೇ ನಿಲ್ಲಬೇಕು ಎನಿಸುತ್ತೆ.
ಮು: ತಮಗೆ ಧಾರವಾಡದ ಹವೆ ಸ್ವಲ್ಪ ಸೆಕೆ ಎನಿಸಬಹುದು.
ಶ್ರೀ: ಹಾಗೇನೂ ಇಲ್ಲ....ಹೋದ ಸಲ ನೋಡಿ, ಇಲ್ಲೇ ಇದ್ದೆ. ಸ್ವಲ್ಪ heat ಅಷ್ಟೇ!....Oh! Dharwar climate has agreed to my health very well....ನಾನೂ ನೋಡಿ, ನಾಳೆ ಸೋಮವಾರದಿಂದ ಕ್ಲಾಸು ತೆಗೆದು ಕೊಳ್ಳೋಣ ಎಂದೆ. ಡಾಕ್ಟರರು ಬೇಡ ಅಂದರು. No; I must speak to my students on Monday... i will. ಈ ಹೊತ್ತು ಡಾ. ಕಬ್ಬೂರ ಬರ್ತೇನಿ ಅಂತ ಹೇಳಿದ್ದಾರೆ.
ಮು: ಏನು ಇಷ್ಟು ಅವಸರ? ಇನ್ನೂ ಸ್ವಲ್ಪ ಆರಾಮ ತೆಗೆದುಕೊಳ್ಳಬಹುದಲ್ಲ?
ಶ್ರೀ: N0; I am quite hale and hearty. I should not play truant. ಈಗ ಯಾವ troubles ಇಲ್ಲ ಏನೋ ಸ್ವಲ್ಪ ಅಲ್ಲಲ್ಲಿ....ಸಾಗುತ್ತೆ, ಏನಾದರೂ old rickety machine. ಸ್ವಲ್ಪ ಆಗಾಗ oiling ಆದರೆ ಸಾಕು, ಪುನಃ ಸಾಗುತ್ತೆ.
ಮು:....
ಶ್ರೀ:....ಆದರೂ ವಿದ್ಯಾರ್ಥಿಗಳು ನೋಡಿ, ಇಂಗ್ಲಿಷ್ ಪ್ರೀತಿ ಕಡಮೆ. : ನನಗೆ ಹಾಗೆ ಹೇಳಿಯೂ ಬಿಟ್ಟರು. ಅವರಿಗೆ Seminar ಬೇಕಿಲ್ಲ. Association ಮನಸ್ಸು ಹಿಡಿಯದು.... Have I come here only to act as a clerk? —to see records and see that payments are made in time?...I came here because I had love of my literature. ಅದು ಇಲ್ಲದಿದ್ದರೆ ಇಲ್ಲಿ ನನ್ನದೇನು ಕೆಲಸ? A head clerk can run the college. --you know things ಅಷ್ಟೇ...
ಮು: ಅದೇ ನನ್ನ ಪುಸ್ತಕದ ಬಗ್ಗೆ ........
ಶ್ರೀ: ಹೌದು; ಅದೇ ಮಾತು ಹೇಳೋಣ ಅಂತಿದ್ದೆ. ಮಾತು ನುಸುಳಿಕೊಂಡು ಸುತ್ತುತ್ತಾ. ಹಾಗೇ ಬುತು ನೊಡಿ... ಅವೇ ನನಗೆ ಹೇಳಿದರು. -ಈಗ ೯೬ ಪುಟ ಕಳಿಸಿ ದ್ದಾರೆ, ನೋಡಿನೇನೆ. proof mistakes ತುಂಬಾ ಉಳಿದಿವೆ, ಹಾಗೆ ಇರಬಾರದು ನೋಡಿ. (ಶ್ರೀ ಅವರ ಧ್ವನಿಯಲ್ಲಿ ಹಿರಿತನದ, ಅಧಿಕಾರದ, ಗಾಂಭೀರ್ಯ ತುಂಬಿದ್ದವು.)
ಮು: ಸಲ್ಪ ಅವಸರವಾಯಿತು. ನನ್ನಲ್ಲಿ ತರಿಸಿ proof ನೋಡುವುದೂ ಅಂದರೆ, ತಡವಾಗಬಹುದು ಅಂತ...
ಶ್ರೀ: ಆದು ಹಾಗೆ ಆಗಬಾರದು ನೋಡಿ. ಪುಸ್ತಕದಲ್ಲಿ ಹಾಗೆ mistakes ಉಳಿಯಕೂಡದು. ಅದರಲ್ಲಿಯೂ ಈ ಕ್ಲಾಸಿಕಲ್ works ನಲ್ಲಿ ಒಂದು ಕೂಡ ಉಳಿಯಬಾರದು. ಗಂಭೀರ ಪುಸ್ತಕಗಳನ್ನು ಹಾಗೆ ಮುದ್ರಿಸಿದರೆ ಹೇಗೆ? ಅದರಲ್ಲಿಯೂ ನಾವು ಅವನ್ನ ನೋಡಬೇಕು.
(ತಪ್ಪಿತಸ್ಥರನ್ನು ದಾರಿಗೆ ತರುವ ರೀತಿ ಇದ್ದಿತು ಆವಾಣಿಯಲ್ಲಿ).
ಮು: ತಾವು ಮೊದಲಿನಿಂದಲೂ ಗದಾಯುದ್ಧದ close student. ತಮ್ಮಆಶೀರ್ವಾದ ಈ ಪುಸ್ತಕಕ್ಕಿರಬೇಕು ಅಂತ.
ಶ್ರೀ! ನಾನೇನು ವಿಶೇಷ ಬರೆಯುವುದಿದೆ? ತಾವು ಈಗ closer student. ನನ್ನ ಕಾಲ ಬೇರೆ. ತಾವೆಲ್ಲ ಕನ್ನಡ ಕಲಿಸುವ ಸೌಭಾಗ್ಯ ಉಳ್ಳವರು. ತಮ್ಮ ಹಾಗೆ ನನಗೆ ಹೇಗೆ ಬಂದೀತು? ಒಂದು ವಿಷಯ ನೋಡಿ ಮುಗಳಿ. ಈ ರೀತಿ ನೋಡಿದರೆ, I must frankly state it now, ನಾವೆಲ್ಲ ಮಾಡಿದ ಕನ್ನಡದ ಕೆಲಸ ಒಂದು ರೀತಿ ಎಡಗೆಯಿನದು lefthanded work. ಯಾಕೆಂದರೆ, I had to keep up my prestige with other English professors ಆದ್ದರಿಂದ as an Indian against Englishmen ಪ್ರತಿ ಹೊಸ ಪುಸ್ತಕ 'ದಿನಾಲು ಓದಬೇಕಿತ್ತು.ಎಲ್ಲಾ ವಿಷಯ ಅಷ್ಟೇ ಅನ್ನಿ. ಹೀಗಾಗಿ I’ could not devote my all to kannada studies “ಶಾರದಾ, ಮುಗಳಿ ಬಂದಿದಾರೆ ಏನು ಕೊಡತೀಯಮ್ಮ (ಎಂದು ಬಾಗಿಲಲ್ಲಿ ನಿಂತಿದ್ದ ಶಾರದಮ್ಮನವರನ್ನು ಕೇಳಿದರು.
ಶ್ರೀ : ಏನು ಇನ್ನೂ ಇಟ್ಟಿದೀಯಾ? ಹಾಗಾದರೆ ಎಂದು ಬರುವದು ನಾಡದು ತಾನೆ? ತಾವು ನಕ್ಕರು. ವೇಳೆ 2-35 ಆದ್ದರಿಂದ ನಾವು ಹೊರಡಬಹುದೆಂದು ಪ್ರೊ॥ ಮುಗಳಿ ಅವರ ಕಡೆಗೆ ನಾನು ನೋಡಿದೆ. ಅಷ್ಟೆ ರಲ್ಲಿ ಚಹ ತಿನಿಸು ಮೇಜಿನ ಮೇಲೆ ಸಿದ್ಧ ವಾಗಿದ್ದವು. ನಾವು ತೆಗೆದುಕೊಳ್ಳುತ್ತಿರುವಾಗಲೇ ಶ್ರೀ ಅವರು ಪಾ ಬರಹದತ್ತ. ಮಾತು ಕಾಂಗ್ರೆಸಿನ ಕಡೆಗೆ ಹೊರಟಿತ್ತು. )
****
"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...
ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...
"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...
©2025 Book Brahma Private Limited.