ಕತ್ತಲ ಲೋಕದ ಕರಾಳ ಸತ್ಯದ ಅನಾವರಣ ʻಬೇವಾಚ್‌ʼ


"ನೌಶಾದ್ ಅವರ ಬರವಣಿಗೆ , ಕತ್ತಲ ಬದುಕಿನ ಸತ್ಯ ಹೇಳುವ ಕಥೆ ಕೊಂಚ ಹಸಿ ಎನಿಸಿದರೂ ಅದರ ಕಥಾ ಹಂದರಕ್ಕೆ ಜೊತೆಯಾಗಿದೆ. ಅವರ ಬರವಣಿಗೆಯಲ್ಲಿ ಇನ್ನೂ ಹಲವು ಹತ್ತು ಕಥೆಗಳು ಮೂಡಿ ಬರಲಿ," ಎನ್ನುತ್ತಾರೆ ಚೇತನ ಭಾರ್ಗವ. ಅವರು ನೌಶಾದ್ ಜನ್ನತ್ ಅವರ ʻಬೇವಾಚ್ʼ ಕೃತಿ ಕುರಿತು ಬರೆದ ಅನಿಸಿಕೆ.

ನೌಶಾದ್ ಜನ್ನತ್ ಅವರ ಬೆ ವಾಚ್ ಪುಸ್ತಕ ಕತ್ತಲ ಲೋಕದ ಕರಾಳ ಸತ್ಯವನ್ನು ಬಯಲಿಗಿಡುವ ಕಥೆ. ಇದರ ಕಥಾನಾಯಕ ಸೋಮಣ್ಣ ತನ್ನ ಗೆಳೆಯನೊಡನೆ ವಾರಾಂತ್ಯ ಕಳೆಯಲು ಬಂದಾಗ ತನ್ನ ಗೆಳೆಯನ ಮನಸ್ಸು ಕಾಲ್ ಗರ್ಲ್ ಕಡೆಗೆ ವಾಲುತ್ತಿದ್ದುದನ್ನು ಗಮನಿಸಿ ತನ್ನ ಕಥೆಯನ್ನು ಎಳೆ ಎಳೆಯಾಗಿ ಫ್ಲಾಶ್ ಬ್ಯಾಕ್ ರೀತಿ ಹೇಳುತ್ತಾ ಹೋಗುತ್ತಾನೆ.

ಐ‌ಟಿ ಕಂಪನಿಯ ಕೆಲಸ ಕೈತುಂಬ ಸಂಬಳ , ಜವಾಬ್ದಾರಿ ಇಲ್ಲದ ಸ್ವೇಚ್ಚೆ ಸೋಮಣ್ಣ ಬಾರಿನಲ್ಲಿ ನರ್ತಿಸುವ ಡಿಂಪಲ್ ಎಂಬ ಸುಂದರಿಯ ಸಖ್ಯಕ್ಕೆ ಬೀಳಿಸುತ್ತದೆ. ಬರಬರುತ್ತಾ ಆಕೆಯನ್ನು ವಿಪರೀತವಾಗಿ ಹಚ್ಚಿಕೊಳ್ಳುವ ಸೋಮಣ್ಣ ಆಕೆಯ ಹೆಸರಿಗೆ ಬಾಡಿಗೆ ಮನೆಯನ್ನೂ ಮಾಡಿಬಿಡುತ್ತಾನೆ. ಆಕೆಯೋ ಪಾತರಗಿತ್ತಿಯಂತೆ ದುಡ್ಡಿನ ಹೂವು ಕಂಡರೆ ಹಾರಿಹೋಗುವವಳು , ಹಣದಾಸೆಗೆ ರಿಕ್ಕಿ ಎಂಬ ರೌಡಿಯ ಸಹವಾಸ ಮಾಡಿ ಆತ ಹೇಳಿದಂತೆ ವಜ್ರದ ವ್ಯಾಪಾರಿಯೋರ್ವನ ಸಖ್ಯ ಬೆಳೆಸಿ ಆತನ ಜೊತೆ ಸಲಿಗೆಯಲ್ಲಿ ವರ್ತಿಸಿ ಏಕಾಂತದ ವೀಡಿಯೋ ರೆಕಾರ್ಡ್ ಮಾಡಿ ಆತನನ್ನು ದುಡ್ಡಿಗಾಗಿ ವಂಚಿಸುವ ಜಾಲದಲ್ಲಿ ರಿಕ್ಕಿಯೊಂದಿಗೆ ಭಾಗಿಯಾಗುತ್ತಾಳೆ. ಕೊನೆಗೆ ಪೊಲೀಸ್ ನ ಮೊರೆ ಹೋಗುವ ಆ ವ್ಯಾಪಾರಿ ತನಿಖೆಯ ಉರುಳು ಸೋಮಣ್ಣ ಡಿಂಪಲ್ ಗೆ ಕೊಡಮಾಡಿದ ಸಿಮ್ ನಿಂದ ಆತನಿಗೆ ಸುತ್ತುಕೊಳ್ಳುತ್ತದೆ. ಪೊಲೀಸರ ಚಿತ್ರಹಿಂಸೆ ತಾಳಲಾರದೇ ಸೋಮಣ್ಣ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡರೂ ಇನ್ನೊಂದು ಮಜಲು ಕಥೆ ಹಳ್ಳಿಯ ಮುಗ್ಧ ಜಾಹ್ನವಿ ಮೋಸಗಾರ ದೀಪು ಹಾಗೂ ಕಣ್ಣನ್ ಅವರ ಮಾಯಾಜಾಲಕ್ಕೆ ಬಿದ್ದು ಮುಂಬೈ ನಗರದಲ್ಲಿ ವೇಶ್ಯೆಯಾಗಿ ಬದಲಾಗುವ ಕಥಾನಕ ಅದೆಷ್ಟೋ ಅಮಾಯಕ ಹೆಣ್ಣು ಮಕ್ಕಳ ಕರುಳು ಮಿಡಿಯುವ ಕರಾಳ ಕಥೆಯನ್ನು ನಿಧಾನವಾಗಿ ಬಯಲಿಗಿಡುತ್ತಾ ಹೋಗುತ್ತಾರೆ ನೌಶಾದ್.

ತನಗೆ ಗಂಡು ಮಗು ಹುಟ್ಟಿಲ್ಲ ಎಂದು ಜಾಹ್ನವಿ ಸಮೇತ ಹೆಂಡತಿಯನ್ನು ಹಳ್ಳಿಯಲ್ಲಿ ಬಿಟ್ಟು ಹೋದ ಅಪ್ಪ ಒಂದು ದಿನ ಅನಾಥಾಶ್ರಮದಲ್ಲಿ ಡಿಂಪಲ್ ಗೆ ಸಿಕ್ಕಾಗ ಕಥೆಯಲ್ಲಿ ಮಾನವೀಯ ಮುಖಗಳ ಅನಾವರಣವಾಗುತ್ತದೆ. ವಾಪಸ್ ಊರಿನಲ್ಲಿ ಅಪ್ಪನೊಂದಿಗೆ ತನ್ನ ಕುಟುಂಬಕ್ಕೆ ಒಂದು ಆಧಾರ ಮಾಡುವ ಜಾಹ್ನವಿ ಬದುಕು ನಡೆಸಲು ತನ್ನ ಜಾಹ್ನವಿಯ ವೇಷ ಕಳಚಲು ಸಾಧ್ಯವಾಗುವುದೇ ಇಲ್ಲ. ಕತ್ತಲೆ ಜಗತ್ತಲ್ಲಿ ಬಹುದೂರ ಸಾಗುವ ಡಿಂಪಲ್ ಬದಲಾಗುವಳೇ? , ಡಿಂಪಲ್ ಸಹವಾಸ ಮಾಡಿ ಅಪರಾಧಿ ಸ್ಥಾನಕ್ಕೆ ಬಂದ ಸೋಮಣ್ಣ ಕೊನೆಗೆ ಹೇಗೆ ಪಾರಾದ, ಇದನ್ನು ತಿಳಿಯಲು ಬೇ ವಾಚ್ ಓದಬೇಕು.

ನೌಶಾದ್ ಅವರ ಬರವಣಿಗೆ , ಕತ್ತಲ ಬದುಕಿನ ಸತ್ಯ ಹೇಳುವ ಕಥೆ ಕೊಂಚ ಹಸಿ ಎನಿಸಿದರೂ ಅದರ ಕಥಾ ಹಂದರಕ್ಕೆ ಜೊತೆಯಾಗಿದೆ. ಅವರ ಬರವಣಿಗೆಯಲ್ಲಿ ಇನ್ನೂ ಹಲವು ಹತ್ತು ಕಥೆಗಳು ಮೂಡಿ ಬರಲಿ . ಕನ್ನಡ ಕಥಾ ಸಾಹಿತ್ಯಕ್ಕೆ ನೌಶಾದ್ ಅವರಂತಹ ಉದಯೋನ್ಮುಖ ಬರಹಗಾರರ ಸೇವೆ ಸಲ್ಲುತ್ತಿರಲಿ .

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...