"ಇಲ್ಲಿನ ಬಹುತೇಕ ಕವಿತೆಗಳು, ಇನ್ನೂ ಬಗೆಹರಿಯದ ಚರಿತ್ರೆಯ ಬಿಕ್ಕಟ್ಟುಗಳನ್ನು ಮತ್ತು ವರ್ತಮಾನದ ತಲ್ಲಣಗಳನ್ನು ಮುಖಾಮುಖಿಯಾಗಿಸುವ ಬಗೆಯವಾಗಿವೆ. ಎಲ್ಲೆಡೆ ಆವರಿಸಿರುವ ಒಂಟಿತನ, ಕಳವಳ, ಅಸಹಾಯಕತೆ ಮತ್ತು ಹತಾಶೆಗಳ ಒಣ ನೆಲದಲ್ಲಿ ಅಲ್ಲಲ್ಲಿ ಭರವಸೆಯ ಹಸಿರು ಟೊಂಗೆಗಳು ತಲೆಯೆತ್ತುವುದನ್ನು ಈ ಪದ್ಯಗಳಲ್ಲಿ ಕಾಣಬಹುದು," ಎನ್ನುತ್ತಾರೆ ಸಂಕೇತ ಪಾಟೀಲ. ಅವರು ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕೃತಿ ಕುರಿತು ಬರೆದ ಅನಿಸಿಕೆ.
ನಿಮ್ಮ ‘ದೊರೆ ನೆತ್ತಿ ಗರುಡ’ ಸಂಕಲನದ ಕವಿತೆಗಳನ್ನು ಓದಿದೆ. ಮೊದಲ ಓದಿಗೆ ನನ್ನನ್ನು ಸೆಳೆದದ್ದು ಕವಿತೆಗಳಲ್ಲಿನ ಲಯಗಾರಿಕೆ. ‘ದೊರೆ ನೆತ್ತಿ ಗರುಡ’, ‘ವಲಸೆ ಹಕ್ಕಿಯ ತಾಯಿ’, ‘ಹಿಮ’, ‘ಹಿಮದಗ್ನಿ’, ‘ಭೃಂಗ ನಾಗಿಣಿ’ ಮೊದಲಾದ ಕವಿತೆಗಳಲ್ಲಿ ಈ ಲಯಗಾರಿಕೆ ಚೆನ್ನಾಗಿ ಸಾಕಾರಗೊಂಡಿದೆ.
ಇಲ್ಲಿನ ಬಹುತೇಕ ಕವಿತೆಗಳು, ಇನ್ನೂ ಬಗೆಹರಿಯದ ಚರಿತ್ರೆಯ ಬಿಕ್ಕಟ್ಟುಗಳನ್ನು ಮತ್ತು ವರ್ತಮಾನದ ತಲ್ಲಣಗಳನ್ನು ಮುಖಾಮುಖಿಯಾಗಿಸುವ ಬಗೆಯವಾಗಿವೆ. ಎಲ್ಲೆಡೆ ಆವರಿಸಿರುವ ಒಂಟಿತನ, ಕಳವಳ, ಅಸಹಾಯಕತೆ ಮತ್ತು ಹತಾಶೆಗಳ ಒಣ ನೆಲದಲ್ಲಿ ಅಲ್ಲಲ್ಲಿ ಭರವಸೆಯ ಹಸಿರು ಟೊಂಗೆಗಳು ತಲೆಯೆತ್ತುವುದನ್ನು ಈ ಪದ್ಯಗಳಲ್ಲಿ ಕಾಣಬಹುದು.
ಈ ಕವಿತೆಗಳನ್ನು ಓದುವಾಗ ಉದ್ದಕ್ಕೂ ನನ್ನನ್ನು ಕಾಡಿದ ಪ್ರಮುಖ ಪ್ರಶ್ನೆ ಇದು. ಇಂದಿನ public discourse ತೀರ ಶಿಥಿಲವಾಗಿದೆ. ಸೂಕ್ಷ್ಮತೆಗಳು ಕಳೆದುಹೋಗಿ, ಮಾತು ಬರೀ ಘೋಷಣೆಯಾಗಿ, ಢಾಳಾಗಿ, ರೂಕ್ಷವಾಗಿ ಬದಲಾಗಿದೆ. ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಾತು ಸೋವಿಯಾಗಿ ಸೋತುಹೋಗಿದೆ; ಪದಗಳು ತಮ್ಮ ಅರ್ಥವಂತಿಕೆಯನ್ನು ಕಳೆದುಕೊಂಡು ಜೊಳ್ಳಾಗಿವೆ. ಇಂತಹ ಸಂದರ್ಭದಲ್ಲಿ, ಕವಿತೆಯು ಅದೇ ನುಡಿಯನ್ನೇ ಬಳಸಿಕೊಂಡು ಆ ಸವಕಲುತನವನ್ನು ಮೀರುವುದಾದರೂ ಹೇಗೆ? ಆಳ್ವಿಕೆಯು ತನ್ನ ಅನುಕೂಲಕ್ಕೆ ಪಳಗಿಸಿಕೊಂಡ ನುಡಿಯನ್ನೇ ಕವಿತೆಯೂ ಬಳಸಿದರೆ ಅದು ಪ್ರತಿರೋಧದ ದನಿಯಾಗಲು ಸಾಧ್ಯವೇ? ಅಥವಾ ಕವಿತೆ ತನ್ನದೇ ಆದ ಹೊಸ ಪರಿಕರಗಳನ್ನು ಕಂಡುಕೊಳ್ಳಬೇಕೇ? ಇದು ಪ್ರಾಯಶಃ ಎಲ್ಲ ಕಾಲದ ಕವಿಗಳು ಎದುರಿಸುವ ಸವಾಲು. ಪ್ರಸ್ತುತ ಕಾಲಘಟ್ಟದಲ್ಲಿ ಈ ಬಿಕ್ಕಟ್ಟು ಉಲ್ಬಣಗೊಂಡಿದೆ.
ಹಾಗಾಗಿಯೇ,
ನೆತ್ತರ ಉಂಡವನ ಗಂಗಾಳದಲ್ಲಿ
ಅಂಬಲಿ ಎಂಜಲು ಹುಡುಕುವಿಯಲ್ಲೊ ಮರುಳಾ
ಗಡ್ಡದ ದಡ್ಡು
ಕ್ಯಾವಿ ಕಬ್ಬಿನ ಬೆಂಡು
ನಿನ್ನದೆ ಕಿಚ್ಚಿಗೆ ಬೇಯಿಸಿದ ಗೆಣಸು
ಎಂಬಂಥ ಸಾಲುಗಳಿರುವ ಪದ್ಯವೇ,
ಚಕ್ರವರ್ತಿ ಕಾಲಾಧಿಪತಿ
ಕುಡಿ ಮೀಸೆಯಲಿ ಕಿರುನಗೆ ಬೀರಿ
ಹೊರಡುತ್ತಾನೆ ಲೋಕ ಸಂಚಾರಕ್ಕೆ
ಉದಯಿಸುವ ಸೂರ್ಯನೊಂದಿಗೆ
ರತ್ನಖಚಿತ ರಥದಲ್ಲಿ
ನಮೋ ನಮೋ ಓಂ ನಮ:
ರಾಜಾಧಿರಾಜ ರಾಜಮಾರ್ತಾಂಡ ಮಹಾರಾಜ ಕಾಲಾಧಿಪತಿ
ಹೀಗೆ ಕೊನೆಗೊಂಡಾಗ ಎದುರಾಗುವ ಪ್ರಶ್ನೆಯೂ ಅದೇ: ಕವಿತೆಯು ಓದುಗನ ಮನದಲ್ಲಿ ನೆಲೆಗೊಳ್ಳಿಸಬೇಕಾದ್ದು ‘ನೆತ್ತರುಂಡವನ ಗಂಗಾಳದಲ್ಲಿ ಅಂಬಲಿ ಎಂಜಲು ಹುಡುಕುವ’ ಪ್ರತಿಮೆಯನ್ನೋ? ಅಥವಾ ಸಮೂಹ ಮಾಧ್ಯಮಗಳು ಎಡೆಬಿಡದೇ ಬಿತ್ತರಿಸಿ ಪ್ರಚುರಗೊಳಿಸುವ ‘ರತ್ನಖಚಿತ ರಥದಲ್ಲಿ ಲೋಕಸಂಚಾರಕ್ಕೆ ಹೊರಡುವ ಚಕ್ರಾಧಿಪತಿ’ಯ ವೈಭವವನ್ನೋ? ಎರಡನೆಯ ಚಿತ್ರಣವು ಮೊದಲನೆಯದರ ತೀವ್ರತೆಯನ್ನು ಸತ್ವವನ್ನು dilute ಮಾಡುತ್ತಿದೆಯೇ? ನಮ್ಮ ಸುತ್ತಲೂ ಪದಗಳ ಗೌಜಿ ಇರುವಾಗ, ಕವಿತೆ ಮಾತ್ರ ದಕ್ಕಿಸಿಕೊಡಬಲ್ಲ ಮೌನ ಯಾವುದು? ಅದು ಮಾತ್ರ ನಮ್ಮ ಎದೆಗೆ ದಾಟಿಸಬಲ್ಲಂಥದ್ದು ಏನು? ಕವಿಯ ಅಂತಿಮ ಹುಡುಕಾಟ ಆ ದಿಕ್ಕಿನಲ್ಲಿ ಇರಬೇಕೇನೋ.
ಹಾಗೆಯೇ, ಬೇರೆ ಕೆಲವು ಕವಿತೆಗಳಲ್ಲಿ,
ಸೋಲು ಗೆಲುವೆಂದು
ಹೊರಟ ಜೀವಿ ಇದೊಂದೇ ಇರಬೇಕು
ಎಂಬ ಧ್ಯಾನಸ್ಥ ಸಾಲುಗಳು, ಅಥವಾ,
ನೂರು ಕನಸಿನ ಕೌದಿ ಹೊದ್ದು
ನೋಡುತ್ತೇವೆ
ತೀರದ ಆಸೆ ಹೊತ್ತು ಕಣ್ನ ಪಿಳುಕಿಸುತ್ತ
ಹೆಪ್ಪುಗಟ್ಟುವ ಕಾಲ ಇದಲ್ಲವೆ?
ಇಂಥ ಆಪ್ತ ಸಾಲುಗಳು, ಅಥವಾ
ಮುದುಡಿದ ಹಸಿ ಹಾಸಿಗೆ
ಗಲ್ಲ ಒರೆಸಿದಷ್ಟು ಯಾರೂ ಸಂತೈಸಲಿಲ್ಲ
ಎಂಬಂಥ ಒಬ್ಬೊಂಟಿತನದ ಪ್ರತಿಮೆಯ ಪರಿಣಾಮವನ್ನು ಅವುಗಳ ಹಿಂದೆ ಮುಂದೆ ಇರುವ ಹಲವಾರು ವಿವರಣಾತ್ಮಕ ಸಾಲುಗಳು ಕೊಡುವುದಿಲ್ಲ.
ಮದರಂಗಿ ಬಿಡಿಸುವ
ಅವಳ ಕಿರು ಆಸೆ ಈಡೇರಲಿ
ಎಂದಷ್ಟೇ ಹೇಳಬಲ್ಲೆ
ಎಂದಲ್ಲಿ, ಅಥವಾ,
ನಾನೊಬ್ಬ ಕವಿ
ತಿಳಿ ನೀರು ಅರಸಿ ಬಂದವನು
ಇರುವ ಕಲುಷಿತವೇ
ಶುದ್ದೀಕರಿಸಿ
ಜಗದ ಬೊಗಸೆಗೆ ಎರೆಯಲು ಪಣತೊಟ್ಟವನು
ನಾನೊಬ್ಬ ಕವಿ ಅಷ್ಟೇ
ಹೀಗೆ ಅಷ್ಟಷ್ಟೇ ಹೇಳಿದರೆ ಸಾಕಾಗುತ್ತದೆ ('ಕಲುಷಿತ', ‘ಶುದ್ಧೀಕರಣ’ಗಳ ಭಾರವನ್ನು ಇಳಿಸಿದರೆ ಕವಿತೆ ಹಗುರಗೊಂಡು ಇನ್ನೂ ಎತ್ತರಕ್ಕೂ ಏರಬಹುದು!). ಏಕೆಂದರೆ, (ಗಂಗಾಳದ ಪ್ರತಿಮೆಯಂತೆಯೇ ಇವು ಕೂಡ) ಓದುಗರನ್ನು ಅರೆಗಳಿಗೆಯಾದರೂ ತಡೆದು ನಿಲ್ಲಿಸುತ್ತವೆ, ಯೋಚಿಸುವಂತೆ ಮಾಡುತ್ತವೆ. ಕವಿತೆಯಲ್ಲಿ ಅಂಥ pauseಗಳನ್ನು ಹೆಚ್ಚು ಹೆಚ್ಚು ಸೃಷ್ಟಿಸಲಾದರೆ ಕವಿತ್ವವು ಹೆಚ್ಚು ಫಲಿಸುತ್ತದೆ ಎಂದು ನನ್ನ ನಂಬಿಕೆ.
ಅದೇ ರೀತಿ,
ಎದೆಗೆ ತಾಕುವವರೆಗೆ
ತಲೆಗೆ ಬಡಿಯುವವರೆಗೆ
ಬಯಲ ಅರಿವಿನ ಪ್ರಜ್ಞೆ ಮೂಡೀತಾದರೂ ಹೇಗೆ …
ಎಂದಾಗ,
ಇಲ್ಲಿ ಬಾಯ್ತೆವಲಿಗೆ
ತೋಳ್ಬಲದ ತೆವಲಿಗೆ
ತೊಡೆ ತೆವಲಿಗೆ
ಏನೆಲ್ಲವೂ ಸಂಭವಿಸಲು ಸಾಧ್ಯ
ಎಂಬ ಸೂಕ್ಷ್ಮದಲ್ಲಿ ಕವಿತೆ ಗೆಲ್ಲುತ್ತದೆ. ಅದು ಘೋಷವಾಕ್ಯಗಳ ಸರಮಾಲೆಯಾದಾಗ ಸೋಲುತ್ತದೆ. ನಮ್ಮ ಕಾಲವು ವಾಚಾಳತೆಯನ್ನೇ ಎಲ್ಲರ ಬಾಯಿ ಮುಚ್ಚಿಸುವ ಆಯುಧವನ್ನಾಗಿಸಿಕೊಂಡಿದೆ. ಬೇರೊಂದು ಆಯುಧವನ್ನು ಕಂಡುಕೊಳ್ಳದೇ ಅದನ್ನು ಎದುರಿಸಲಾಗದು.
ಇರಲಿ.
ಈ ಕವನ ಸಂಕಲನದಲ್ಲಿ ಕೆಲವು ಒಳ್ಳೆಯ ಕವಿತೆಗಳಿದ್ದರೆ ಹಲವು ಒಳ್ಳೆಯ ಕವಿತೆಗಳಾಗುವ ಸಾಧ್ಯತೆಯುಳ್ಳವಾಗಿವೆ. ಹೆಗಲಿನ ಕಂಬಳಿ ಮುಗಿಲಿಗಿ ಹೊಡೆದರೆ ಅಸರಂತ ಮಳೆ
ಪೆನ್ನು ಜಾರಿಬಿದ್ದಂತೆ ಕವಿತೆ
ಋತುಮಾನಕ್ಕೆ ಉರುಳಿ
ಈ ಚಳಿಗೆ ಹಂಸದಂತೆ
ನೀರ ಅಲೆಯ ಸಾಲು
ಕವಿತೆಯಂತೆ ಪ್ರೀತಿ
ಸ್ವರ್ಗದ ದಾರಿ ತಡೆಹಿಡಿಯುವವರ ಎದುರೆ
ಎಷ್ಟೊಂದು ಬಯಲದಾರಿಗಳನ್ನು ತೋರಿದಿ
ಇತ್ತೀಚೆಗೆ ಬಿಲ ಸೇರಿದಂತೆ ಕನಸು
ರಾತ್ರಿ ಮಗ್ಗುಲ ಮುಳ್ಳಾಗಿ
ಶರಪಂಜರ ಯಾತನೆ
ಕಾಳಕತ್ತಲೆಗೆ ಜೀವ ನೀಡಿ
ಬೆಳಕು ಹಂಬಲಿಸಿದವಳೇ
ಸಾವಧಾನ ಚಲಿಸು
ಸೂರ್ಯ ಬೆಳಕಾಗಿ ನಿಂತಾನು
ಬದುಕಿನೆದುರು
ಶಬ್ದದಲಿ ಧ್ವನಿ ಅಡಗಿಸಿದ ಮಾಂತ್ರಿಕತೆಗೆ
ಏನೆನ್ನಬೇಕು
ಶರಣೆಂದು ಹೇಳಬೇಕು ಅಷ್ಟೇ.
ಇವೇ ಮೊದಲಾದ ಸಾಲುಗಳು ಇಷ್ಟವಾದುವು. ನಿಮಗೆ ಈಗಾಗಲೇ ಸಾಧಿಸಿರುವ ಲಯಗಾರಿಕೆಗೆ ಬಿಗುವಾದ ನವುರಾದ ನುಡಿಯು ಹದಬೆರೆತು ಜೊತೆಯಾದರೆ ಇನ್ನೂ ಹೆಚ್ಚು ಸಫಲ ಸಾರ್ಥಕ ಕವಿತೆಗಳನ್ನು ಬರೆಯಬಲ್ಲಿರಿ ಎಂಬ ಭರವಸೆಯಿದೆ. ಹಾರೈಕೆಯೂ ಇದೆ. ನೀವೇ ಹೇಳುವಂತೆ,
ಮುನಿಸಿಗೂ ಮುಲಾಮು ಇರಲಿ
ಈ ದುರಿತ ಕಾಲದಲಿ
ವಿಶ್ವಾಸದಿಂದ ನಿಮ್ಮ ಈ ಎರಡನೆಯ ಕವನ ಸಂಕಲನವನ್ನು ನನಗೆ ಓದಲು ಕೊಟ್ಟದ್ದಕ್ಕೆ ವಂದನೆಗಳು.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.